ವಿಶ್ವ ವಾಣಿಜ್ಯ ಸಂಸ್ತೆ (ಡಬ್ಲ್ಯು.ಟಿ.ಓ.) ರಾಜ್ಯಭಾರ ಭಾರತದಲ್ಲೂ ಜಾರಿಗೆ ಬಂದ ಪರಿಣಾಮವಾಗಿ ಏನೆಲ್ಲ ಸ್ಥಿತ್ಯಂತರ ಆಗುತ್ತದೆ ಎನ್ನುವ ಬಗೆಗೆ ಆತಂಕ, ಎಡೆಬಿಡದ ಚರ್ಚೆ ನಡೆಯಿತು. ಆಮದು ಕುರಿತು ಎಲ್ಲ ಗೋಡೆಗಳನ್ನು ಕೆಡವಿ ಹಾಕಿದ ನಾನಾ ನಮೂನೆಯ ಸರಕಿನ ಹೊಳೆಯೇ ಹರಿದು ಬರುತ್ತದೆ ಎಂದು ಭಯಪಟ್ಟಿದ್ದು ಹುಸಿಯಾಯಿತು. ಆಮದು ಪ್ರಮಾಣ ಕುರಿತ ನಿರ್ಬಂಧಗಳನ್ನೆಲ್ಲ ತೆಗೆದು ಹಾಕಿದರೂ ಕೇಂದ್ರ ಸರ್ಕಾರ, ಸ್ನೇಹಿತಾಸಕ್ತಿಯಿಂದ ಭಾರಿ ಎನಿಸುವಂಥ ಆಮದು ಸುಂಕವನ್ನು ಜಾರಿಗೊಳಿಸಲು ಆರಂಭಕ್ಕೆ ಅವಕಾಶ ಕೊಡುವ ಡಬ್ಲ್ಯು.ಟಿ.ಓ. ನಿಯಮಗಳನ್ನು ಬಳಸಿಕೊಂಡಿತು. ಆಮದು ಸರಕಿನ ಮಹಾಪೂರ ಹರಿದು ಬರಲಿಲ್ಲ. ಅಲ್ಲಲ್ಲಿ ಹಲಕೆಲವು ವಿದೇಶಿ ಸರಕುಗಳು ಸಿಗತೊಡಗಿವೆ. ಅದರಲ್ಲೆಲ್ಲ ಭಾರೀ ಸವಾಲು ಒಡ್ಡಿರುವುದೆಂದರೆ ಚೀನಾ ಸರಕು. ಮುಖ್ಯವಾಗಿ ಆಟಿಕೆಗಳು. ಚೀನಾದ ಬೈಸಿಕಲ್‌ಗಳು ಬರಲಿರುವುದಾಗಿ ಬರಿದೇ ಸುದ್ದಿ ಮಾಡಿದವು. ಬರಲಿಲ್ಲ.

ವಾಸ್ತವವಾಗಿ ಚೀನಾ ಸರಕು ಜಗತ್ತಿನಾದ್ಯಂತ ಸವಾಲೆಸೆಯುತ್ತದೆ. ಅಮೆರಿಕದಲ್ಲೆಲ್ಲ ಸಣ್ಣಪುಟ್ಟ ವಸ್ತು ಸಲಕರಣೆಗಳೆಲ್ಲ ‘ಮೇಡ್ ಇನ್ ಚೈನಾ’ ಆಗಿರುತ್ತದೆ. ಅವರಷ್ಟು ಅಗ್ಗಕ್ಕೆ ಸರಕನ್ನು ಯಾರೂ ತಯಾರಿಸಲಾಗದು. ಭಾರತದಲ್ಲಿ ಮಾರಾಟ ಆಗುತ್ತಿರುವ ಆಟಿಕೆಗಳನ್ನೇ ತೆಗೆದುಕೊಂಡರೂ ಈ ಮಾತು ಮನವರಿಕೆ ಆಗುತ್ತದೆ. ಇನ್ನೂ ಒಂದು ನಿದರ್ಶನ: ಭಾರತ ಮಾರುಕಟ್ಟೆಗಳಲ್ಲಿ ಸೊಳ್ಳೆ ಪರದೆಯಂತೆ ಕಿಟಕಿ ಬಾಗಿಲುಗಳಿಗೆ ಹಚ್ಚಬಹುದಾದ ಜಾಲರಿ ಸಿಗುತ್ತದೆ. ವಿದೇಶಿ ಸರಕಿಗೆ ಹೋಲಿಸಿದರೆ ಭಾರತದ ಜಾಲರಿ ಪರದೆ ಗುಣ ಕಳಪೆ. ವಿದೇಶಿ ಸರಕಿನ ಪೈಕಿ ಅತ್ಯುತ್ತಮವಾದದ್ದು ಅಮೆರಿಕದ್ದು. ಅದರ ಬೆಲೆ ಮೀಟರ್‌ಗೆ ರೂ. ೨೪೦. ಭಾರತದ ಸರಕಿಗಿಂತ ಉತ್ತಮವಾದ, ಆದರೆ ಅಮೆರಿಕ ಗುಣಮಟ್ಟಕ್ಕೆ ಸರಿತೂಗದ ಚೀನಾ ಸಕರು ಮೀಟರ್‌ಗೆ ರೂ. ೧೮೦. ಭಾರತದಲ್ಲಿ ಅಮೆರಿಕ ಸರಕಿಗೆ ಚೀನಾ ಸರಕಿನಿಂದ ಪೈಪೋಟಿ.

ಇದೆಲ್ಲ ಬಳಕೆ ವಸ್ತುಗಳ ಮಾತಾಯಿತು. ಐಟಂಗಳು ಕ್ರಮೇಣ ಒಂದೊಂದಾಗಿ ಭಾರತದೊಳಕ್ಕೆ ಪ್ರವೇಶ ಮಾಡುತ್ತವೆ. ಡಬ್ಲು ಟಿಓ ಪರಿಣಾಮದ ನಿಜವಾದ ಭಯ ಇರುವುದು ಸಣ್ಣ ಉದ್ಯಮ ಕ್ಷೇತ್ರಕ್ಕೆ ಹಾಗೂ ಕೃಷಿ ರಂಗಕ್ಕೆ. ಅಳಿವು ಉಳಿವಿನ ಪ್ರಶ್ನೆಯಾಗಬಹುದು ಎಂಬ ಭಯದಿಂದ ಕಗೇಂದ್ರ ಸಕಾ೪ರ, ಯಾವುದೇ ಪಕ್ಷದ್ದು ಆಗಿದ್ದರೂ, ರೈತರ ಹಿತವನ್ನು ಆದಷ್ಟೂ ದೀರ್ಘಕಾಲ ಕಾಪಾಡಲು ಮುಂದಾಗುತ್ತದೆ. ನಿಜವಾದ ಬಾಧೆ ಇರುವುದು ಸಣ್ಣ ಉದ್ಯಮ ಕ್ಷೇತ್ರಕ್ಕೆ. ಬಹುರಾಷ್ಟ್ರೀಯ ಸಂಸ್ಥೆಗಳ ಕಾರ್ಯವೈಖರಿ ಆಗಲೀ, ಆಮದು ಸರಕಾಗಲೀ ಭಾರತದೊಳಗೆ ಪರಿಣಾಮ ಬೀರತೊಡಗಿದರೆ ಬಿಸಿ ತಟ್ಟುವುದು ಸಣ್ಣ ಉದ್ಯಮ ಕ್ಷೇತ್ರಕ್ಕೇ ಸರಿ. ಇದೇನೇ ಇದ್ದರೂ ನಿಶ್ಚಿತ ಅಭಿಪ್ರಾಯವೊಂದಿದೆ; ಸಣ್ಣ ಉದ್ಯಮ ಕ್ಷೇತ್ರವೇನಿದ್ದರೂ ದುಡಿಯುವುದೆಲ್ಲ ದೊಡ್ಡ ಉದ್ಯಮಗಳಿಗಾಗಿಯೇ. ಬಹುರಾಷ್ಟ್ರೀಯ ಕಂಪೆನಿಗಳು ಬಂದರೂ ಇಲ್ಲಿರುವ ದೊಡ್ಡ ಉದ್ಯಮಗಳಂತೆ ತಾವು ಸಹಾ ದುಡಿಸಿಕೊಳ್ಳಬೇಕಾದ್ದು ಸಣ್ಣ ಉದ್ಯಮವನ್ನೇ. ಅಲ್ಲಿಗೆ ಡಬ್ಲ್ಯುಟಿಓ ಕಾರಣದಿಂದ ಸಣ್ಣ ಉದ್ಯಮ ಕ್ಷೇತ್ರ ನಾಮಾವಶೇಷ ಆಗುತ್ತದೆ ಎನ್ನುವುದು ನಿಲ್ಲುವಂಥ ಮಾತಲ್ಲ. ವಾಸ್ತವವಗಿ ಗುಣಪಾಲನೆ, ತಂತ್ರಜ್ಞಾನ ಅಭಿವೃದ್ಧಿ ಇದೆಲ್ಲ ಸಣ್ಣ ಉದ್ಯಮ ಕ್ಷೇತ್ರದ ಕೈಗೆ ಎಟಕುತ್ತದೆ. ಕೈತುಂಬಾ ಕೆಲಸ ಮತ್ತು ಗಳಿಕೆ ಸುಲಭವಾಗುತ್ತದೆ. ಷರಟುಗಳನ್ನು ತಯಾರಿಸಿ ಮಾರುವ ದಂಧೆಗೆ ಬಹುರಾಷ್ಟ್ರೀಯ ಕಂಪೆನಿಗಳು ಪ್ರವೇಶ ಮಾಡಿದ ಮೇಲೆ ಷರಟು ತಯಾರಿಸುವ ದೇಶೀಯ ಸಣ್ಣ ಉದ್ಯಮ ಘಟಕಗಳಿಗೆ ವಹಿವಾಟು ಕುದುರಿದೆ. ಇವು ತಯಾರಿಸುವ ಒಂದೇ ಗುಣಮಟ್ಟದ ಷರಟುಗಳು ನಾನಾ ಷರಟು ಮಾರಾಟ ಕಂಪೆನಿಗಳ ಕೈಸೇರಿ ಆಯಾ ಬ್ರಾಂಡ್‌ಗಳ ಅನ್ವಯ ನಾನಾ ದರಗಳಲ್ಲಿ ಮಾರಾಟವಾಗುತ್ತಿವೆ!

ಕಳೆದ ವರ್ಷ ಭಾರತದ ಸಣ್ಣ ಉದ್ಯಮ ಕ್ಷೇತ್ರ ೧೪.೩೫ ಶತಕೋಟಿ ಡಾಲರ್‌ನಷ್ಟು ರಫ್ತು ವಹಿವಾಟು ನಡೆಸಿತ್ತು. ಅದರ ಹಿಂದಿನ ವರ್ಷ ಕೇವಲ ೧೩.೧೭ ಶತಕೋಟಿ ಡಾಲರ್‌ನಷ್ಟು. ಈ ಎರಡು ವರ್ಷದಲ್ಲಿ ಸಣ್ಣ ಉದ್ಯಮ ಕ್ಷೇತ್ರದ ವೃದ್ಧಿದರ ಶೇ ೮.೫ ರಿಂದ ಶೇ ೯.೫ಕ್ಕೆ ಏರಿದೆ. ಡಬ್ಲು ಟಿಓ ಪರಿಣಾಮ ದಟ್ಟವಾಗುತ್ತಾ ಹೋದಂತೆ ಸಣ್ಣ ಉದ್ಯಮ ಪ್ರಗತಿ ಹೀಗೆಯೇ ಮುಂದುವರೆಯುತ್ತದೆಯೇ? ಇದೇ ನಮಗೆ ಎದುರಾಗಿರುವ ಅತಿ ಮುಖ್ಯ ಪ್ರಶ್ನೆ.

ಮುಂದಿನ ಒಂದು ವರ್ಷದಲ್ಲಿ ಈ ವೃದ್ಧಿ ದರ ಇನ್ನೂ ಶೇಕಡಾ ಒಂದು ಒಂದೂವರೆಯಷ್ಟು ಏರಬಹುದೆಂಬ ಅಂದಾಜಿತ್ತು. ಆದರೆ ಕಳೆದ ವಾರ ಕೇಂದ್ರ ಸಣ್ಣ ಉದ್ಯಮ ಖಾತೆ ರಾಜ್ಯ ಸಚಿವೆ ವಸುಂಧರಾ ರಾಜೆ ಅವರು ಹೇಳಿದ ಪ್ರಕಾರ ಹತ್ತನೇ ಯೋಜನೆ ಅವಧಿಯಲ್ಲಿ ವೃದ್ಧಿ ದರ ೧೨ಕ್ಕೆ ಮುಟ್ಟುವಂತೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಸಣ್ಣ ಉದ್ಯಮ ಕ್ಷೇತ್ರವು ಆರ್ಥಿಕತೆಯ ಇತರ ಕ್ಷೇತ್ರಗಳಿಗಿಂತ ಹೆಚ್ಚು ಭರವಸೆ ಮೂಡುವಂತೆ ಬೆಳೆಯುತ್ತದೆ. ಆದ್ದರಿಂದಲೇ ಎತ್ತರದ ಗುರಿ ಒಂಬತ್ತನೇ ಯೋಜನೆ ಅವಧಿಯಲ್ಲಿ ಸಣ್ಣ ಉದ್ಯಮ ಕ್ಷೇತ್ರದ ಮೂಲಕ ೧೮೫ ಲಕ್ಷ ಜನರಿಗೆ ಹೊಸದಾಗಿ ಉದ್ಯೋಗಾವಕಾಶ ಸೃಷ್ಟಿ ಮಾಡಿಕೊಡಬೇಕೆಂಬ ಗುರಿ ಇರಿಸಿಕೊಳ್ಳಲಾಗಿತ್ತು. ವಸುಂಧರಾ ರಾಜೆ ಹೇಳುವ ಪ್ರಕಾರ ಆ ಗುರಿಯನ್ನು ಈಗಾಗಲೇ ಸಾಧಿಸಿ ಆಗಿದೆ.

ಅಂದೆರ ಡಬ್ಲ್ಯುಟಿಓ ಪರಿಣಾಮದ ನಡುವೆಯೂ ಆಶಾಬಾವನೆಗೆ ಅಡ್ಡಿ ಇಲ್ಲ. ನಿರ್ಭಯ ನಿರಾತಂಕವೇ ಸಂಭವ. ಸಣ್ಣ ಉದ್ಯಮದವರು ಸತ್ತು ಸುಣ್ಣವಾಗಿರುವಾಗ ಇದೆಲ್ಲ ಚೆನ್ನಾಗಿ ಕಾಣುತ್ತದೆ. ಮುಂದಿನ ದಿನಗಳು ಎಷ್ಟೇ ಆಶಾದಾಯಕ ಆಗಿದ್ದರೂ ಎಲ್ಲ ಓರೆಕೋರೆಗಳನ್ನು ತಿದ್ದಲು ಸರ್ಕಾರದ ಕಡೆಯಿಂದ ಆಗಬೇಕಾದ್ದು ಬಹಳವಿದೆ. ಸಣ್ಣ ಉದ್ಯಮ ಕ್ಷೇತ್ರವನ್ನು ಸಣ್ಣ ಉದ್ಯಮ, ಅತಿ ಸಣ್ಣ ವಹಿವಾಟು ಮತ್ತು ಸೇವಾಸೌಲಭ್ಯ ವಿಭಾಗ ಹೀಗೆ ಮೂರು ರೀತಿ ವಿಂಗಡಿಸಿ ಸುಧಾರಣಾ ಕ್ರಮಗಳನ್ನು ಜಾರಿ ಮಾಡಬೇಕೆಂಬ ಉದ್ದೇಶ ಸರ್ಕಾರಕ್ಕಿದೆ. ಪೈಪೋಟಿ ಎದುರಿಸುವ ಮಾರ್ಗೋಪಾಯವಾಗಿ ಚೀನಾದಲ್ಲಿ ಅದು ಹೇಗೆ ಬೃಹತ್ ಪ್ರಮಾಣದಲ್ಲಿ ಅತಿ ಅಗ್ಗವಾಗಿ ನಾನಾ ಸರಕನ್ನು ತಯಾರಿಸುತ್ತಾರೆ ಎಂದು ಅಧ್ಯಯನ ಮಾಡಲು ಇಲ್ಲಿಂದ ಜನರನ್ನು ಕಳುಹಿಸುವ ವಿಚಾರವಿದೆ. ಸಣ್ಣ ಉದ್ಯಮ ಕ್ಷೇತ್ರಕ್ಕೆ ಹಲಕೆಲವು ರಿಯಾಯ್ತಿಗಳನ್ನೂ ಸೌಲಭ್ಯಗಳನ್ನೂ ಮುಂದುವರೆಸಬಹುದು ಕೂಡಾ. ಆದರೆ ಸಣ್ಣ ಉದ್ಯಮ ಕ್ಷೇತ್ರಕ್ಕೆ ನೀಡಿದ್ದ ಸರಕು ಐಟಂಗಳ ಮೀಸಲಾತಿಯನ್ನು ತೆಗೆದುಹಾಕಿದ್ದರಿಂದ ಆಗುವ ನಷ್ಟವನ್ನು ತುಂಬಿಕೊಡಲಾಗದು. ಈಗ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮನ್ನು ಬಳಸಿಕೊಳ್ಳುವುದನ್ನು ಸಣ್ಣ ಘಟಕಗಳು ಕಾಯುತ್ತಾ ಕೂರಬೇಕು. ಇವು ಅಗ್ಗವಾಗಿ ಉತ್ತಮ ಗುಣಮಟ್ಟ ಸರಕನ್ನು ವಿದೇಶಿ ಸರಕಿಗೆ ಪೈಪೋಟಿ ನೀಡಲಾಗುವಂತೆ ತಯಾರಿಸಲು ಬಹಳ ದೂರ ಸಾಗಬೇಕಿದೆ. ಈ ನಡುವೆ ನಾನಾ ಇನ್‌ಸ್ಪೆಕ್ಟರ್‌ಗಳ ಕಾಟ ನಿವಾರಣೆ, ವಿದ್ಯುತ್ ಪೂರೈಕೆ ಅನಿಶ್ಚಿತತೆಯನ್ನು ಅಂತ್ಯಗೊಳಿಸುವುದು, ರಫ್ತು ಸರಕು ತಯಾರಿಸುವ ವೇಳೆ ಒತ್ತಾಸೆ ಇವೆಲ್ಲ ಸರ್ಕಾೞದ ಕಡೆಯಿಂದ ಆಗಬೇಕಿದೆ.

೦೬.೦೬.೨೦೧೧