ಉತ್ತರ ಭಾರತ ಭಾಷೆಯಲ್ಲಿ ವ್ಯಾಪಾರಿ ಎನ್ನುವುದಕ್ಕೆ ಬೇಪಾರಿ ಎಂಬ ಹೆಸರಿದೆ. ಇದೇನೇ ಇದ್ದರೂ ಇದಕ್ಕೇನೂ ಸಂಬಂಧವಿಲ್ಲದೆ ‘ಅಬ್ಬೇಪಾರಿ’ ಎನ್ನುವ ಪದವೊಂದು ಕನ್ನಡದಲ್ಲುಂಟು. ನಿಘಂಟಿನಲ್ಲಿ ಅದಕ್ಕಿರುವ ಅರ್ಥವೆಂದರೆ, ‘ಕೆಲಸವಿಲ್ಲದವನು, ದಿಕ್ಕಿಲ್ಲದವನು, ಗತಿ ಕೆಟ್ಟವನು’. ವಾಸ್ತವವಾಗಿ ಸಣ್ಣ ಉದ್ಯಮದಲ್ಲಿರುವವರು ಈಗ ಅಬ್ಬೇಪಾರಿಗಳಾಗಿದ್ದಾರೆ.

ಮುಂಚಿನಿಂದಲೂ ಸಣ್ಣ ಉದ್ಯಮದವರು ಸಹಾನುಭೂತಿಗೆ ಪಾತ್ರರು. ಒಳ್ಳೆಯ ಕೆಲಸ ಇವರದು. ಆದರೆ ಬಡಪಾಯಿಗಳು. ವಾರದ ಏಳು ದಿನ, ತಿಂಗಳ ೩೦ ದಿನ, ವರ್ಷದ ೩೬೫ ದಿನ ಇವರು ದುಡಿಯುತ್ತಾರೆ. ಇದ್ದ ಹಾಗೆಯೇ ಇರುತ್ತಾರೆ. ಉದ್ಯಮ ನಡೆಸುವ ಮಾಲೀಕ ಇರಲಿ, ಅದರೊಳಗಿನ ಕಾರ್ಮಿಕ ಇರಲಿ; ಸದಾ ಜಪಿಸುವುದು ಒಂದೇ ಮಂತ್ರ – ‘ಕೆಲಸ ಕೊಡಿ’ ಎನ್ನುವುದು. ನಮ್ಮ ದೇಶದಲ್ಲಿ ಇವರನ್ನು ಪೂರಾ ಅಂದರೆ ಪೂರಾ ದುಡಿಸಿಕೊಂಡಿದ್ದು ಆಗಿದೆ. ಇದೀಗ ಇವರ ಕೆನ್ನೆ ಮತ್ತು ಬೆನ್ನಿನ ಮೇಲೆ ಮಾತ್ರ ಏಟು ಬೀಳುತ್ತಿಲ್ಲ. ಇವರ ಹೊಟ್ಟೆಯ ಮೇಲೆ ಹೊಡೆಯುವುದಾಗಿದೆ.

ಜಾಗತೀಕರಣ ಜಾರಿಗೆ ಬರುತ್ತಿದ್ದಂತೆ ಸಣ್ಣ ಉದ್ಯಮ ನಾಮಾವಶೇಷವಾಗುತ್ತದೆ ಎಂಬ ಭೀತಿ ಹರಡಿತು. ಎಂಎನ್‌ಸಿ (ಬಹುರಾಷ್ಟ್ರೀಯ ಕಂಪನಿ)ಗಳು ಇವನ್ನು ಉಳಿಯ ಗೊಟ್ಟಾವೆ ಎಂಬುದೇ ಪ್ರಶ್ನೆ. ಅಗ್ಗಕ್ಕೆ, ಹೇಳಿದ ಹಾಗೆ ಕೇಳಿಕೊಂಡು, ಕೇಳಿದ ರೀತಿಯಲ್ಲಿ ಕೆಲಸ ಮಾಡುವವರಿದ್ದರೆ ದುಡಿಸಿಕೊಳ್ಳಲು ಎಂಎನ್‌ಸಿಗಳಾದರೂ ಏಕೆ ಮುಂದಾಗುವುದಿಲ್ಲ ಎನ್ನುವ ವಾದವೂ ನಡೆಯಿತು. ಜಾಗತೀಕರಣ ಜಾರಿಗೆ ಬರಲಿಲ್ಲ, ಪೂರ್ತಿಯಾಗಿ. ಸಣ್ಣ ಉದ್ಯಮವೂ ನಾಮಾವಶೇಷ ಆಗಲಿಲ್ಲ, ಸದ್ಯ!

ಆದರೆ ಆರ್ಥಿಕ ಹಿಂಜರಿತ ಎಂಬ ಭೂತ ದೇಶವನ್ನು ಹೊಕ್ಕಿತಲ್ಲ.ಅದರ ಬಿಸಿಗೆ ಮೇಣದಂತೆ ಕರಗಿ ಹೋಗುತ್ತಿದೆ ಸಣ್ಣ ಉದ್ಯಮ ವಲಯ.

ಯಾವುದೇ ಉದ್ಯಮಕ್ಕೆ ಬೇಕಾಗುವ ಯಂತ್ರೋಪಕರಣ, ಕಚ್ಚಾಸಾಮಗ್ರಿ, ಕೆಲಸಗಾರರು, ಬಂಡವಾಳ, ಮ್ಯಾನೇಜ್‌ಮೆಂಟ್, ಮಾರಾಟದ ಕೆಲಸ ಎಲ್ಲವನ್ನೂ ಸಣ್ಣ ಉದ್ಯಮಿ ಸ್ವತಃ ನೋಡಿಕೊಳ್ಳುತ್ತಾನೆ. ಕೆಲಸಗಾರರ ಜೊತೆ ಜೊತೆಗೆ ತಾನೂ ಕೆಲಸಗಾರನ ಹಾಗೆ ದುಡಿಯುತ್ತಾನೆ. ಸ್ವತಃ ಮಾಲೀಕ ಮತ್ತುಆಳು ಎಲ್ಲ ಆಗಿರುತ್ತಾನೆ. ಅದೇ ವಿಶೇಷ. ಕೈಗೆ ಬಂದ ಆರ್ಡರನ್ನು ಪೂರೈಸಲು ರಾತ್ರಿ ಹಗಲು ದುಡಿಯುತ್ತಾನೆ. ಕೆಲಸಗಾರರಿಗೆ ದೊಡ್ಡದಾಗಿ ಸಂಬಳ ಸಾರಿಗೆ ಏನೂ ಕೊಡುವುದಿಲ್ಲ. ಆದರೂ ಅವರ ಜೀವನೋಪಾಯಕ್ಕೆ ಸಾಕಾಗುವಷ್ಟು ನಿಭಾಯಿಸುತ್ತಾನೆ. ಇದಕ್ಕಿಂತ ಇನ್ನೇನು ಬೇಕು? ಸಣ್ಣ ಉದ್ಯಮವನ್ನು ಬಳಸಿಕೊಳ್ಳದೇ ಇರುವವರೇ ಇಲ್ಲ.

ಸರ್ಕಾರ ಕೆಲವು ಸವಲತ್ತುಗಳನ್ನು, ರಕ್ಷಣೆಯನ್ನು ಸಣ್ಣ ಉದ್ಯಮಿಗಳಿಗೆ ಒದಗಿಸಿದ್ದು ಉಂಟು. ಎಲ್ಲಕ್ಕಿಂತ ಮುಖ್ಯವಾಗಿ ಹಲವು ಉತ್ಪನ್ನಗಳನ್ನು ಸಣ್ಣ ಉದ್ಯಮಕ್ಕೇ ಮೀಸಲಾಗಿ ಇಟ್ಟಿತು. ಅಂದರೆ ದೊಡ್ಡ ಉದ್ಯಮದವರು ಇವರ ಮೇಲೆ ಬಿದ್ದು ಮುಗಿಸಲು ಅವಕಾಶವಿಲ್ಲ. ಜೊತೆಗೆ ಬಂಡವಾಳದ ಪ್ರಶ್ನೆ ಬಂದಾಗ ಸುಲಭವಾಗಿ ಸಾಲ ಸಿಗುವಂತೆ ಆಗಿತ್ತು. ಆ ಮೀಸಲಾತಿ ಹೋಗುತ್ತಿದೆ.

ಸಣ್ಣ ಉದ್ಯಮದ ಪಾಲಿಗೆ ಬಹಳ ದೊಡ್ಡ ಸವಾಲು ಎಂದರೆ ಮಾರುಕಟ್ಟೆ. ಬೇರೆ ದೊಡ್ಡ ಉದ್ಯಮ ಘಟಕಗಳಿಗೆ ಕೆಲಸ ಮಾಡಿಕೊಟ್ಟರೆ ಮಾರುಕಟ್ಟೆ ಚಿಂತೆ ಇರುವುದಿಲ್ಲ. ತಪ್ಪಿದರೆ ಉತ್ಪನ್ನವನ್ನು ತಯಾರಿಸುವುದೇ ಅಲ್ಲದೆ ಮಾರಾಟ ಸಹಾ ಮಾಡಬೇಕು ಎನ್ನುವಂತಾದರೆ ಮುಗ್ಗರಿಸಿದಂತೆ ಆಗುತ್ತದೆ. ಆ ದಿಸೆಯಲ್ಲೂ ನೆರವು ಕೊಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ಹಾಕಿದ್ದುಂಟು.  ಆದರೆ ಅದೇನೂ ಫಲಕಾರಿಯಾಗಲಿಲ್ಲ. ಸಣ್ಣ ಉದ್ಯಮದವರು ತಮ್ಮ ಹಣೆಬರಹವನ್ನು ತಾವೇ ಓದಿಕೊಳ್ಳಬೇಕು.

ವಾಸ್ತವವಾಗಿ ಸಣ್ಣ ಉದ್ಯಮ ಕೈ ಹಾಕದ ಕ್ಷೇತ್ರವಿಲ್ಲ. ಅತ್ಯಂತ ಕ್ಲಿಷ್ಠವಾದ ಹಾಗೂ ತಾಂತ್ರಿಕತೆ ಬಹಳವಾಗಿ ಪಾತ್ರ ವಹಿಸುವ ಕಾರ್ಯವನ್ನು ಸಹಾ ಸಣ್ಣ ಉದ್ಯಮ ಘಟಕಗಳು ನಿಭಾಯಿಸಿವೆ. ಸರಳವಾದ ಯಂತ್ರಗಳನ್ನು, ಸರಳವಾದ (ಹೆಚ್ಚು ತರಬೇತಿ ಇಲ್ಲದ) ಜನರನ್ನು ಕೆಲಸಕ್ಕೆ ಹಚ್ಚಿ ಅದ್ಭುತವಾಗಿ ಕಾರ್ಯ ನಿರ್ವಹಿಸಿದೆ. ರಫ್ತು ಮಾಡುವಲ್ಲಿ ದೊಡ್ಡ ಉದ್ಯಮದವರಿಗಿಂತ ಹೆಚ್ಚು ಯಶಸ್ವಿ ಆಗಿವೆ.

ಸಣ್ಣ ಉದ್ಯಮದ್ದು ಒಂದೇ ಚಿಂತೆ. ಒದಗಿಸಿದ ಸರಕಿಗೆ, ಮಾಡಿಕೊಟ್ಟ ಕೆಲಸಕ್ಕೆ ತಕ್ಷಣ ಹಣ ಪಾವತಿ ಆಗುವುದಿಲ್ಲ. ಕನಿಷ್ಠ ಮೂರು ತಿಂಗಳಾದರೂ ಕಾಯಬೇಕು. ಮಾಡಿದ್ದು ತಿರಸ್ಕೃತರಾದರೆ ಗಂಟೆಗೇ ಮೋಸ. ಇದರ ಜೊತೆಗೆ ನಾನಾ ಇಲಾಖೆಯವರ ಕಾಟ. ಒಂದು ಘಟಕ ಸ್ಥಾಪಿಸಿದರೆ ಹತ್ತಕ್ಕೂ ಹೆಚ್ಚು ಪರವಾನಗಿ, ಲೈಸನ್ಸ್ ಪಡೆಯಬೇಕು. ತಪಾಸಣೆಗೆ ಇನ್‌ಸ್ಪೆಕ್ಟರ್‌ಗಳು ಬರುತ್ತಲೇ ಇರುತ್ತಾರೆ. ಅವರನ್ನೆಲ್ಲ ‘ನೋಡಿಕೊಳ್ಳ’ ಬೇಕು. ಜೊತೆಗೆ ಕರ್ನಾಟಕದಲ್ಲಿ ವಿದ್ಯುತ್ ತೊಂದರೆ.

ಇಷ್ಟೆಲ್ಲ ಪರಿಪಾಟಲಿನ ಮಧ್ಯೆ ವ್ಯಾಪಾರ ನಡೆಸಿ, ತೂಗಿಸಿಕೊಂಡು ಹೋಗಿ, ಲಾಭ ಮಾಡುವುದಾದರೂ ಹೇಗೆ? ಅದು ಹೇಗೆ ಸಾಧ್ಯ ಎಂಬುದನ್ನು ಉದ್ಯಮಿಗಳು ಮಾಡಿ ತೋರಿಸಿದ್ದಾರೆ. ಯಾವುದೇ ಬಾಬಿನಲ್ಲೇ ಆದರೂ ಭಾರೀ ಉಳಿತಾಯದ ಕ್ರಮ ಅನುಸರಿಸುವುದೇ ಅವರ ಗುಟ್ಟು. ಮುಖ್ಯವಾಗಿ ಪೋಲಾಗುವುದು ಕನಿಷ್ಠ ಸಾಮಗ್ರಿ, ಯಂತ್ರದ ಕಾರ್ಯಾಚರಣೆ ಸಮಯ ಮಾತ್ರವಲ್ಲ; ಕೊಡುವ ಸಂಬಳ ಸಾರಿಗೆಯಲ್ಲೂ ಸವಲತ್ತುಗಳಲ್ಲೂ ಕೈತುಂಬಾ ಬಿಗಿ. ಆದ್ದರಿಂದಲೇ ಇತರರ ಪಾಲಿಗೆ ಸಣ್ಣ ಉದ್ಯಮದವರ ಜೊತೆಗಿನ ವ್ಯವಹಾರ ಯಾವುದೇ ಕಾಲಕ್ಕೂ ಗಿಟ್ಟುವಂಥದು. ಸಣ್ಣ ಉದ್ಯಮದವರಿಗೆ ಸತತವಾಗಿ ಕೆಲಸ ಸಿಗುತ್ತಿರಬೇಕು, ಮಾತ್ರ. ಅವರಕೆಲಸಗಾರರಿಗೆ ಕೆಲಸ ಕೊಡುತ್ತಿದ್ದರೇನೇ ಸಂಬಳಕ್ಕೆ ವ್ಯವಸ್ಥೆ.

ಈಗ ಆರ್ಥಿಕ ಹಿಂಜರಿತ ಕಾಣಿಸಿಕೊಂಡ ಮೇಲೆ ಕೈತುಂಬ ಕೆಲಸವೇ ಇಲ್ಲ. ಅರ್ಧಂಬರ್ಧ ಕೆಲಸವಿದ್ದರೆ ಗಿಟ್ಟುವುದಿಲ್ಲ. ಕೊಳ್ಳುವುದಕ್ಕೆ ಜನರಲ್ಲಿ ಹಣವೇ ಇಲ್ಲ ಎನ್ನುವಂತಾದಾಗ ಮೊದಲು ನಿರುದ್ಯೋಗಿಗಳಾಗುತ್ತಿರುವವರು ಸಣ್ಣ ಉದ್ಯಮಗಳ ಕಾಂರ್ಮಿಕರೇ. ಅನೇಕ ವೇಳೆ ಇವರು ತುಂಡು ಕಾಮಗಾರಿ ಮಾಡಿಕೊಡುವ ಜನ. ಕೆಲಸ ಇದ್ದಾಗ ಮಾಡಿದರೆ ಮಾತ್ರ ಸಂಬಳ. ಸಣ್ಣ ಉದ್ಯಮ ಎಷ್ಟೋ ವೇಳೆ ನಷ್ಟಕ್ಕೆ ದುಡಿಯುವ ಬದಲು ಬಾಗಿಲು ಮುಚ್ಚಿಬಿಡುವುದು ಕ್ಷೇಮ ಎಂದು ನಿರ್ಧರಿಸುತ್ತಾನೆ. ಆಗೆಲ್ಲ ಕಾರ್ಮಿಕರು ‘ಬೀದಿಗೆ ಬೀಳು’ತ್ತಾರೆ. ಒಲೆ ಉರಿಸಲು ಮನೆಗೆ ಹಣ ಒಯ್ಯುವ ಮಾತಿರಲಿ, ಮೇಲು ಖರ್ಚಿನ ಪುಡಿಗಾಸಿಗೂ ತತ್ವಾರ. ಆಗೆಲ್ಲ ಅವರು ಸಮಸ್ಯೆಯಾಗಲಿಕ್ಕೆ ಸಾಕು.

ಈಚೆಗೆ ಬೆಂಗಳೂರಿನ ಪೀಣ್ಯ ಪ್ರದೇಶದಲ್ಲಿ ಗಲಾಟೆಯಾಯಿತು. ನಿರುದ್ಯೋಗಿಗಳ ಆಕ್ರೋಶ ಭುಗಿಲ್ ಎಂದಿದ್ದೇ ಅದಕ್ಕೆ ಕಾರಣ. ಕಬ್ಬನ್‌ಪೇಟೆಯಲ್ಲಿ ಮಗ್ಗಗಳು ಭಾಗಶಃ ನಿಂತರೂ ಕಾರ್ಮಿಕರು ಹೀಗೆ ಬೀದಿಗೆ ಬೀಳುತ್ತಾರೆ. ಎಲ್ಲ ಕಡೆ ಇದೇ ರೀತಿ ಆಗುತ್ತದೆ. ಪರಿಣಾಮ, ಎಷ್ಟೋ ಸಂದರ್ಭಗಳಲ್ಲಿ ಸ್ಫೋಟಕ ಆಗಲಿಕ್ಕೆ ಸಾಕು. ಹಲವಾರು ಇಂಥ ಪ್ರಸಂಗಗಳು ಒಟ್ಟುಗೂಡಿ ಅಪಾಯಕ್ಕೆ ಎಡೆಯಾದರೆ, ಅದನ್ನೇ ಅರಾಜಕತೆ ಎನ್ನಲು ಬರುತ್ತದೆ. ಆ ಅಪಾಯ ದೂರವಿಲ್ಲ.

೦೯.೦೯.೨೦೦೧