‘ಸಹಭಾಗಿತ್ವ ಸಮ್ಮೇಳನ’ವೊಂದನ್ನು ಭಾರತೀಯ ಉದ್ಯಮ ಒಕ್ಕೂಟ (ಸಿಐಐ) ಕಳೆದ ವಾರಾಂತ್ಯದವರೆಗೆ ನಡೆಸಿತು. ವಿದೇಶಗಳು ಮತ್ತು ನೆರೆಹೊರೆ ರಾಜ್ಯಗಳೂ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಸಹಾ ಉದ್ಯಮದ ಅತಿರಥ ಮಹಾರಥರ ಜೊತೆ ಹೆಗಲೆಣೆಯಾಗಿ ಆ ಸಮಾವೇಶದಲ್ಲಿ ಭಾಗವಹಿಸಿದ್ದರು.

ವಿವಿಧ ಛಾಯೆಯ ದೇಶ ವಿದೇಶ ರಾಜಕೀಯ ಮುಖಂಡತ್ವದ ಮುಂದೆ ಭಾರತದ ಉದ್ಯಮದ ವಿಹಂಗಮ ನೋಟವನ್ನು ಬಿಚ್ಚಿ ಇಡುವ ಯತ್ನವದು. ಅದರ ಜೊತೆಗೆ ಆಲುವ ವರ್ಗವೆಂಬುದು ಏನಿದೆಯೋ ಅದಕ್ಕೆ ಸೇರಿದವರು ಉದ್‌ಯಮದವರ ಮುಂದೆ ಬಂದು ನಿಂತಾಗ ತಮ್ಮ ಯಾವ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ ಎಂಬುದನ್ನು ಗಮನಿಸುವುದು ಸಹಾ ಒಂದು ಉದ್ದೇಶ.

ಸಿಐಐ ವಾಸ್ತವವಾಗಿ ಉದ್ಯಮ ರಂಗವನ್ನು ಇಡಿಯಾಗಿ ಪ್ರತಿನಿಧಿಸುವ ಪ್ರತಿಷ್ಠಿತ ಒಕ್ಕೂಟ. ಈ ಬಗೆಯ ಸಮಾವೇಶಗಳನ್ನು ಆಗಾಗ ನಡೆಸುವುದುಂಟು. ಈ ಬಾರಿ ಅದನ್ನು ಇನ್ನಾವ ಮಹಾನಗರಕ್ಕೂ ಹೋಗದೆ ಬೆಂಗಳೂರಿನಲ್ಲಿ ನಡೆಸಿದ್ದು ವಿಶೇಷ. ಬ್ರಿಟನ್ ಪ್ರಧಾನಿ ಬಂದಿದ್ದುದೇ ಅದಕ್ಕೆ. ಇಸ್ರೇಲ್ ಉಪ ಪ್ರಧಾನಿ ಇಲ್ಲಿಗೆ ಬಂದಿದ್ದ ಇನ್ನೊಬ್ಬ ಪ್ರತಿಷ್ಠಿತ ವಿದೇಶ ಮುಖಂಡ. ಮೊದಲೇ ವಿಜ್ಞಾನ ಮತ್ತು ತಂತ್ರಜ್ಞಾನ ರಾಜಧಾನಿ ಎನಿಸಿಕೊಂಡಿದ್ದ ಬೆಂಗಳೂರು ಇದೀಗ ಇನ್ನಷ್ಟು ಮಹತ್ವ ಸಾಧಿಸಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ (ಐಟಿ ಉದ್ಯಮ) ಇಲ್ಲಿ ನೆಲೆಗೊಂಡ ಮೇಲೆ ಇದೆಲ್ಲ ಸಾಧ್ಯವಾಗುತ್ತಿದೆ.

ರಾಜಕೀಯ ಧುರೀಣರು ರಾಜಕೀಯ ಉದ್ದೇಶ ಬಿಟ್ಟು ಇಲ್ಲಿನ ಉದ್ಯಮ ವಾತಾವರಣದ ರುಚಿ ಅನುಭವ ಪಡೆಯಲು ಇಲ್ಲಿಗೆ ಬರತೊಡಗಿದ್ದಾರೆ. ಮುಂಚೆ ಎಚ್‌ಎಎಲ್, ಎಚ್‌ಎಂಟಿ ಮುಂತಾದವುಗಳನ್ನು ಆ ಬಗೆಯ ಜನ ಸಂದರ್ಶಿಸುತ್ತಿದ್ದರು. ಈಗ ಇನ್‌ಫೊಸಿಸ್, ವಿಪ್ರೋಗಳಿಗೆ ಭೇಟಿ ಕೊಡಲೆಂದೇ ಬೆಂಗಳೂರಿಗೆ ಬರುತ್ತಾರೆ.

‘ಸಹಭಾಗಿತ್ವ ಸಮ್ಮೇಳನ’ದಲ್ಲಿ ಉದ್ಯಮದವರಿಗೆ ಮಾತ್ರ ಪ್ರಿಯವಾಗುವಂಥ ಅಂಶಗಳು ಮಾತ್ರವಲ್ಲದೆ ಬೇರೆ ಬೇರೆ ಮಗ್ಗುಲಲ್ಲಿ ಪರಿಶೀಲನೆ ನಡೆಸುವ ಹಲವು ವಿಚಾರಗಳು ಮತ್ತು ವಿಶ್ಲೇಷಣೆಗಳು ಹೊರಬಂದುವು. ಈಚಿನವರೆಗೆ ರಾಜಕೀಯ ದೃಷ್ಟಿಕೋನದಿಂದ ನೋಡುವ ಒಂದು ಸಣ್ಣ ಪ್ರಯತ್ನ ಕುತೂಹಲಕಾರಿ ಆಗಿತ್ತು.

ಶತ್ರು ರಾಷ್ಟ್ರ ಎಂಬ ಕೀರ್ತಿಗೆ ಭಾಜನವಾದ ಚೀನಾ ಜೊತೆಗಿನ ಯುದ್ಧ ನಡೆದು ಇಂದಿಗೆ ೪೦ ವರ್ಷಗಳಾಗಿವೆ. ಅನಂತರ ಭಾರತ ಚೀನಾಗಳ ಬಾಂಧವ್ಯ ಕುದುರಲೇ ಇಲ್ಲ. ಉಪಖಂಡ ವ್ಯವಹಾರಗಳಲ್ಲೂ ಚೀನಾ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಹಾಗೆ ಆಸಕ್ತಿ ವಹಿಸುತ್ತಿದೆ ಎನ್ನುವ ಸಣ್ಣ ಪುಟ್ಟ ಬೆಳವಣಿಗೆ ವೇಳೆ ರಾಜಕೀಯ ರಂಗದಲ್ಲೂ ಕುತೂಹಲ ದಟ್ಟೈಸುತ್ತದೆ. ಅದು ಏನಾದರಿರಲಿ; ಉದ್ಯಮ ರಾಷ್ಟ್ರವಾಗಿ ಸಹಾ ಚೀನಾ ಇದೀಗ ದೈತ್ಯ ಸ್ವರೂಪ ಪಡೆದಿದೆ.

ನಮಗೆ ಚೀನಾ ಜೊತೆಗೆ ಕೂಡಾ ಒಳ್ಳೆಯ ವ್ಯಾಪಾರ ಸಂಬಂಧವಿಲ್ಲ (ಇತರ ನೆರೆಹೊರೆ ರಾಷ್ಟ್ರಗಳ ಜೊತೆಗೂ ಈ ಮಾತು ನಿಜ). ತನ್ನಲ್ಲಿ ವಿಪರೀತ ಉತ್ಪಾದಿಸುತ್ತಿರುವ ಕಚ್ಚಾ ರೇಷ್ಮೆಯನ್ನು ಭಾರತದೊಳಕ್ಕೆ ನುಗ್ಗಿಸುತ್ತಿದೆ ಎಂಬುದನ್ನು ಬಿಟ್ಟರೆ ಮಿಕ್ಕಾವ ವ್ಯಾಪಾರ ಹಿತಾಸಕ್ತಿಯೂ ನಮಗಿಲ್ಲ. ನಾವು ಅಷ್ಟು ಒಳ್ಲೆಯ ಕಚ್ಚಾ ರೇಷ್ಮೆಯನ್ನು ಉತ್ಪಾದಿಸುತ್ತಿಲ್ಲ ಎಂಬ ಕಾರಣಕ್ಕೆ ಚೀನಾದ ಸುರಿ ನೀತಿಯನ್ನು ನಾವು ಪ್ರತಿರೋಧಿಸುತ್ತಲೇ ಸಹಿಸಿಕೊಂಡಿದ್ದೇವೆ.

ಆದರೆ ಸಮಾವೇಶದಲ್ಲಿ ಪ್ರಕಟವಾದ ಒಂದು ವಿಶ್ಲೇಷಣೆಯು ಭಾರತ ಚೀನಾಗಳು ಒಂದೇ ನೆಲೆಗೆ ಸೇರಿದ್ದೆಂಬ ಅಂಶಗಳನ್ನು ಪ್ರಸ್ತಾಪಿಸಿದೆ. ಭಾರತ ಮತ್ತು ಚೀನಾಗಳ ಪಾಲಿಗೆ ಸಮಾನವಾದ ಒಂದು ಅಂಶ ಎನಿಸಿದ ಜನಸಂಖ್ಯೆಯು ವಾಸ್ತವವಾಗಿ ಒಂದು ಆಸ್ತಿಯೇ ಹೊರತು ದೇಶದ ಕೊರಳಿಗೆ ಬಿದ್ದ ಭಾರವಲ್ಲ ಎಂಬುದೇ ಆ ಪ್ರಸ್ತಾಪ. ಈಗ ಹೆಚ್ಚು ಹೆಚ್ಚು ಜನರನ್ನು ತೊಡಗಿಸಬಲ್ಲ ಉದ್ಯಮಗಳು ಲಾಭಕಾರಿಯಾಗಿ ಪರಿಣಮಿಸಿರುವುದರಿಂದ ದೇಶದ ಜನಸಂಖ್ಯೆ ಭಾರತ ಮತ್ತು ಚೀನಾಗಳೆರಡರ ಪಾಲಿಗೆ ವರವಾಗಿ ಪರಿಣಮಿಸಿದೆಯೇ ಹೊರತು ಶಾಪವಾಗಿಲ್ಲ. ಜನಸಂಖ್ಯೆಯನ್ನು ಚಟುವಟಿಕೆಗೆ ಹಚ್ಚುವುದು ಹೇಗೆ ಎಂಬುದು ಉಭಯ ದೇಶಗಳನ್ನು ಮುಂದೆ ನಡೆಸಿದ ನಾಯಕರ ಕಾಳಜಿ ಆಗಿದ್ದುದೇ ಸರಿ. ಇದು ದಿಢೀರ್ ಎಂದು ಕಾಣಿಸಿದ ಕಾಳಜಿಯೇನಲ್ಲ. ವಾಸ್ತವವಾಗಿ ಕೃಷಿ ಮತ್ತು ಗ್ರಾಮ ಕೈಗಾರಿಕೆಗಳನ್ನು ಸತತವಾಗಿ ಪೋಷಿಸಿಕೊಂಡು ಬಂದ ರಾಷ್ಟ್ರಗಳಿವು. ಭೂಮಿಯ ಮೇಲೆ, ಅಂದರೆ ಜಮೀನಿನ ಮೇಲೆ, ಒತ್ತಡ ಅಧಿಕವಾಯಿತೆಂಬ ಕಾರಣದಿಂದ ಜಪಾನು ತನ್ನ ರೇಷ್ಮೆ ಕೃಷಿಯನ್ನು ಕೈಬಿಟ್ಟಿತು. ಆದರೆ ಭಾರತ ಚೀನಾಗಳು ಹಾಗೆ ಮಾಡಲಿಲ್ಲ.

ಎರಡೂ ಕಡೆ ನಗರೀಕರಣ ಹೆಚ್ಚಾಗಿದೆ. ಭಾರತದಲ್ಲಿ ನಗರೀಕರಣ ಹೆಚ್ಚುತ್ತಿದೆಯೆಂಬ ಆತಂಕ ಬರಿದೆ ಮಾತುಗಳಲ್ಲಿ ಉಳಿದು ಹೋಯಿತು. ಅದನ್ನು ತಡೆಯಲು ಗ್ರಾಮ ಜೀವನವನ್ನು ಹಸನು ಮಾಡುವ ದಿಸೆಯಲ್ಲಿ ವೇಗದ ಯತ್ನಗಳು ನಡೆಯಲಿಲ್ಲ. ನಗರೀಕರಣ ತಾನೇ ತಾನಾಗಿ ಮುಂದುವರೆಯುತ್ತಾ ಹೋಯಿತು. ಚೀನಾದಲ್ಲಿ ರಾಜಕೀಯ ನಾಯಕತ್ವವು ಕಳೆದ ಒಂದೂವರೆ ಎರಡು ದಶಕಗಳಲ್ಲಿ ಬೇಕೆಂದೇ ನಗರೀಕರಣಕ್ಕೆ ಪ್ರೋತ್ಸಾಹ ಕೊಟ್ಟಿತು. ಬೃಹತ್ ನಗರಗಳು ಬೆಳೆದುವು. ಜನರ ಉಡುಗೆ ತೊಡುಗೆ ವಿದ್ಯಾಭ್ಯಾಸಗಳಿಂದ ಮೊದಲ್ಗೊಂಡು ಪ್ರತಿಯೊಂದು ಜೀವನ ಶೈಲಿಯಲ್ಲಿ ಬದಲಾವಣೆಗಳಾದವು. ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ಚೀನಕ್ಕೂ ವ್ಯತ್ಯಾಸವೇ ಇಲ್ಲ ಎನ್ನುವಂತಾಯಿತು. ಕಮ್ಯುನಿಸ್ಟ್ ಆಳ್ವಿಕೆಯೇ ಇರುವುದಾದರೂ ಮಾರುಕಟ್ಟೆ ಆರ್ಥಿಕತೆಗೆ ಚೀನಾ ಬಹಳ ಬೇಗ ಮರುಳಾಯಿತು. ಕಟ್ಟಾ ವೈರಿ ಅಮೆರಿಕದ ಜೊತೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು ಕಿಂಚಿತ್ತೂ ಹಿಂಜರಿಯಲಿಲ್ಲ. ಕೊಳ್ಳುಬಾಕ ಸಂಸ್ಕೃತಿಗೆ ಹೆಸರುವಾಸಿಯಾದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆಬೇಕು ಬೇಕಾದ್ದನ್ನೆಲ್ಲ, ವಿಶೇಷತಃ ಸಣ್ಣಪುಟ್ಟ ಬಳಕೆದಾರ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಚೀನಾ ಮುಂದಾಯಿತು. ನವ ಪೀಳಿಗೆ ಜನರನ್ನು ಸಜ್ಜುಗೊಳಿಸಿ ಲಾಭದಾಯಕ ಚಟುವಟಿಕೆಯಲ್ಲಿ ತೊಡಗಿಸುವುದನ್ನು ಚೀನಾ ಸರ್ಕಾರ ತನ್ನ ನೀತಿಯಾಗಿಸಿಕೊಂಡಿತು.

ಭಾರತ ಚೀನಾಗಳು ಪೈಪೋಟಿ ಮೇಲೆ ಅಭಿವೃದ್ಧಿಪಡಿಸುತ್ತಿರುವ ಕ್ಷೇತ್ರವೆಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ. ಲಭ್ಯವಿರುವ ಶಿಕ್ಷಿತ ಯುವಜನರನ್ನು ಈ ಕ್ಷೇತ್ರದಲ್ಲಿ ತೊಡಗಿಸುವಲ್ಲಿ ಭಾರತ ಚೀನಾಗಳು ತಾ ಮುಂದು ಮತ್ತು ನೀ ಮುಂದು ಎಂದು ಮುನ್ನುಗ್ಗುತ್ತಿವೆ. ಇದು ಏನೇ ಇದ್ದರೂ ಭಾರತಕ್ಕಿರುವ ಒಂದೇ ಅನುಕೂಲ ಎಂದರೆ ಇಲ್ಲಿನ ಸುಲಭ ಲಭ್ಯ ಇಂಗ್ಲಿಷ್ ಶಿಕ್ಷಣ. ಚೀನಾಕ್ಕಾದರೋ ಸಮಸ್ತ ಮಾಹಿತಿಯನ್ನು ಕೆಳಮಟ್ಟ ಕಾರ್ಯಕ್ರಮಗಳಿಗಾಗಿ ಇಂಗ್ಲಿಷಿನಿಂದ ತರ್ಜುಮೆ ಮಾಡಿಕೊಳ್ಳಬೇಕು. ಭಾರತ ದಲ್ಲಾದರೋ ಹಲವೆಡೆ ಇಂಗ್ಲಿಷು ಸಾರ್ವತ್ರಿಕ. ಆದರೂ ಸಾಫ್ಟ್‌ವೇರ್ ಆಗಲಿ, ಹಾರ್ಡ್‌ವೇರ್ ಆಗಲಿ, ಮಾರಾಟ ಮಾಡುವಲ್ಲಿ ಭಾರತಕ್ಕಿಂತ ಚೀನಾ ಒಂದು ಕೈ ಮುಂದು ಎನ್ನುವ ಭಾವನೆಯಿದೆ.

ಭಾರತಕ್ಕೆ ಪೈಪೋಟಿ ನೀಡುವಲ್ಲಿ ಚೀನಾ ಮುಂದೆ ಎನ್ನುವುದು ಹಿಂದೆ ಕೂಡಾ ಋಜುವಾತು ಆಗಿದೆ. ಭಾರತವೇನಾದರೂ ಎಚ್ಚರ ತಪ್ಪಿದರೆ ಐ.ಎಂ.ಎಫ್. ಸಾಲ ಪೂರ್ತಿ ಚೀನಾ ಕೈವಶ ಆಗುತ್ತಿತ್ತು. ಈಗ ವಿಶ್ವ ವಾಣಿಜ್ಯ ಸಂಸ್ಥೆಯನ್ನು ಚೀನಾ ಕೂಡಾ ದೊಡ್ಡದಾಗಿ ಪ್ರವೇಶಿಸಿ ಭಾರತಕ್ಕಿಂತ ವೇಗವಾಗಿ ಬೇಕು ಬೇಕಾದ ಶಾಸನ ಮಾಡಿದೆ. ಮಾರುಕಟ್ಟೆ ಹಿಡಿಯುವ ಅದರ ತವಕವು ಭಾರತದ ಆಕಾಂಕ್ಷೆಗೆ ಮೀರಿದ್ದು.

ಎರಡೂ ರಾಷ್ಟ್ರಗಳವರು ಪೌರ್ವಾತ್ಯ ಸಂಸ್ಕೃತಿಯ ಪಾಲುದಾರರು. ಅವರಲ್ಲಿ ಚೀನಾದವರೇ ಮೇಲುಗೈಯೇನು? ಉತ್ತರ ಸುಲಭವಾಗಿ ಸಿಗುವುದಿಲ್ಲ.