ಸಿಇಟಿ ಎಂಬುದು ಒಂದು ಮಹಾಯಜ್ಞ, ಇಲ್ಲಿ ಬಲಿ ಎಂಬುದಿಲ್ಲ. ವಿದ್ಯಾದೇವತೆಯನ್ನು ಒಲಿಸಿಕೊಳ್ಳಲು ಹವಿಸ್ಸನ್ನು ಅರ್ಪಿಸಬೇಕು. ಅದು ಉತ್ತರ ಪತ್ರಿಕೆಗಳನ್ನು ತುಂಬುವ ಮೂಲಕ.

ಒಂದು ಲಕ್ಷಕ್ಕೂ ಅಧಿಕ ಮಂದಿ ಜ್ಞಾನ ಪಿಪಾಸು ಕುಟುಂಬದವರು ಬೆಂಗಳೂರಿಗೆ ಬಂದಿಳಿಯುತ್ತಾರೆ. ಇಲ್ಲವೇ ಕರ್ನಾಟಕದ ಒಂಭತ್ತು ನಗರಗಳ (ಬೆಂಗಳೂರು ಸೇರಿ) ೩೧೭ ಕೇಂದ್ರಗಳಿಗೆ ಬಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯುತ್ತಾರೆ. ಆ ಮೂಲಕ ಬಿಇ, ವೈದ್ಯ ಮತ್ತು ದಂತ ವೈದ್ಯ ಕಾಲೇಜುಗಳ ಸೀಟುಗಳಿಗೆ ಅರ್ಜಿ ಸಲ್ಲಿಸುತ್ತಾರೆ.

೧೯೯೪ರಿಂದ ಈಚೆಗೆ ಕರ್ನಾಟಕ ಸಿಇಟಿ ಎಷ್ಟೊಂದು ಜನಪ್ರಿಯ ಆಗಿದೆ ಎಂದರೆ ದೇಶದ ಮೂಲ ಮೂಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಕ್ಯಾಪಿಟೇಷನ್ ಶುಲ್ಕದ ಆಧಾರದ ಮೇಲೆ ಕಾಲೇಜುಗಳನ್ನು ನಡೆಸುವುದು ಅನಿವಾರ್ಯವಲ್ಲ ಎನ್ನುವ ಹಾಗೆ ಕಳೆದ ೧೨ ವರ್ಷಗಳಲ್ಲಿ ತಾಂತ್ರಿ ಶಿಕ್ಷಣದ ಶುಲ್ಕ ನಮೂನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಸಿಇಟಿ ಪರೀಕ್ಷೆ ಅತ್ಯಂತ ವೈಜ್ಞಾನಿಕವಾಗಿ, ಕರಾರುವಾಕ್ಕಾಗಿ, ವಸ್ತುನಿಷ್ಠವಾಗಿ ನಡೆಯುವಂತೆ ಮಾಡಿರುವುದು ಕರ್ನಾಟಕದ ಮಹತ್ವದ ಸಾಧನೆ.

ಸಿಇಟಿ ಪರೀಕ್ಷೆಯನ್ನುಪೂರ್ತಿ ಅಭಿವೃದ್ಧಿಪಡಿಸದೇ ಇದ್ದ ವೇಳೆ, ಆಗ ತಾನೇ ಕಂಪ್ಯೂಟರ್ ಬಳಕೆ ಆರಂಭವಾಗಿದ್ದಾಗ, ೧೯೯೦ಕ್ಕೂ ಮುಂಚೆ, ಆಗಿನ ತಾಂತ್ರಿಕ ಶಿಕ್ಷಣ ಡೈರೆಕ್ಟರ್ (ಡಿ.ಕೆ. ಸತ್ಯನಾರಾಯಣ ಶೆಟ್ಟಿ) ಅವರು ಹಗಲೂ ರಾತ್ರಿ ಕೌನ್ಸಿಲಿಂಗ್ ಮಾಡುತ್ತಿದ್ದರು. ನಿರ್ದೇಶನಾಲಯದ ಅಂಗಳದಲ್ಲಿ ಮಲಗಿದ್ದ ಅಭ್ಯರ್ಥಿಗಳನ್ನು ಸರಿ ರಾತ್ರಿ ಎಬ್ಬಿಸಿ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದರು. ಆ ಕಾಲಕ್ಕೆ ಅದೇ ಅದ್ಭುತ. ಅಲ್ಲಿಂದ ಈವರೆಗೆ ಬಹಳ ದೂರ ಬಂದುದು ಆಗಿದೆ. ಸಿಇಟಿ ಎಂಬು ವಿದ್ಯಾಮಾನ ಒಂದು ಎರಡು ವರ್ಷಗಳ ಸಾಧನೆಯಲ್ಲ. ಕರ್ನಾಟಕದ ಮಾದರಿಯನ್ನು ಅಭ್ಯಸಿಸಿ ತಮ್ಮಲ್ಲೂ ಅದೇ ವಿಧಿ ವಿದಾನಗಳನ್ನು ಅಳವಡಿಸಲು ಇತರ ರಾಜ್ಯಗಳು ಶ್ರಮಿಸಿವೆ.

ಹತ್ತಾರು ವಿಶೇಷ ರೈಲುಗಳನ್ನು ಹಿಡಿದು ಲಕ್ಷಾವಧಿ ಶಿಕ್ಷಿತರು ಭಾರೀ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತು ಬಂದಿಳಿಯುವ ದೃಶ್ಯ ಚೇತೋಹಾರಿ. ತಾಂತ್ರಿಕ ಶಿಕ್ಷಣಕ್ಕೆ, ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಗೆ ಹೆಸರಾದ ಕರ್ನಾಟಕ ಹೀಗೆ ದಾಪುಗಾಲಿಡದೆ ವಿಧಿಯಿಲ್ಲ. ೧೦೧ ಬಿಇ ಕಾಲೇಜುಗಳು, ೨೩ ವೈದ್ಯ ಕಾಲೇಜುಗಳು ಮತ್ತು ೩೫ ದಂತ ವೈದ್ಯ ಕಾಲೇಜುಗಳು ಇರುವಾಗ ಅವುಗಳಲ್ಲಿ ಲಭ್ಯವಿರುವ ೨೭೮೭೮ ಬಿಇ ಸೀಟು ೨೧೨೮ ಮೆಡಿಕಲ್ ಸೀಟು ೧೫೩೩ ಡೆಂಟಲ್ ಸೀಟು ಇವನ್ನು ತುಂಬುವುದಾದರೂ ಹೇಗೆ? ಹೀಗೆ ಕನಸುಗಣ್ಣು ದೃಷ್ಟಿ ಹರಿಸಿ ಬೀರುವ ಜನರನ್ನು ಸ್ವಾಗತಿಸಲೇಬೇಕು.

ಏಕೆ? ಹತ್ತಾರು ಲಕ್ಷ ರೂಪಾಯಿ ಕ್ಯಾಪಿಟೇಷನ್ ಶುಲ್ಕ ವಸೂಲು ಮಾಡಿ ಖಾಸಗಿ ಕಾಲೇಜುಗಳವರು ಸೀಟುಗಳನ್ನು ಹಂಚಿ ಕಾಲೇಜುಗಳನ್ನು ತುಂಬಿಕೊಳ್ಳುತ್ತಿರಲಿಲ್ಲವೇ? ಅದು ಆ ಕಾಲದ ಮಾತು. ವಾಸ್ತವವಾಗಿ ಸರ್ಕಾರ ಮೆರಿಟ್ ಸೀಟು, ಅಧಿಕ ಹಣ ಪಾವತಿ ಸೀಟು ಹೀಗೆಲ್ಲ ವಿಂಗಡಿಸಿದೆ. ಸಿಇಟಿ ಕ್ರಮ ಜಾರಿಗೆ ತರದೆ ಬಿಟ್ಟಿದ್ದರೆ ಖಾಸಗಿ ಕಾಲೇಜುಗಳವರು ಹಾಹಾಕಾರ ಮಾಡುವ ಪರಿಸ್ಥಿತಿ ಮೂಡುತ್ತಿತ್ತು. ಕಾರಣವೆಂದರೆ ಬೇಡಿಕೆಯೇ ಇಲ್ಲ! ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಇಲ್ಲೆಲ್ಲ ಬಿಇ ಮತ್ತು ವೈದ್ಯ ಕಾಲೇಜುಗಳಾಗಿಬಿಟ್ಟಿವೆ. ಇವಕ್ಕೆ ಹೊರತಾದ ಅನ್ಯ ರಾಜ್ಯಗಳಿಂದ  ಅಭ್ಯರ್ಥಿಗಳನ್ನು ಹಿಡಿದು ತಲರು ಖಾಸಗಿಯವರು ಪ್ರೊಕ್ಯೂರ್‌ಮೆಂಟ್ ಏಜೆಂಟರ ತರಹ ಮಧ್ಯವರ್ತಿಗಳನ್ನು ನಾನಾ ರಾಜ್ಯಗಳಲ್ಲಿ ನೇಮಿಸಬೇಕಾಗಿತ್ತು.

ಆದರೆ ಈಗಿನ ಪರಿಸ್ಥಿತಿ ಹೇಗಿದೆ ನೋಡೋಣ. ಒಂದು ಲಕ್ಷ ಜನರು ರಾಜ್ಯಕ್ಕೆ ಬರುತ್ತಾರೆ. ತಲಾ ೩೦೦೦ ರೂಪಾಯಿ ಸಿಇಟಿ ಪರೀಕ್ಷೆಗೆ ಬರುವುದಕ್ಕೆ ಖರ್ಚು ಬೀಳುತ್ತದೆ ಎಂಬ ಸ್ಥೂಲ ಅಂದಾಜನ್ನು ಇರಿಸಿಕೊಂಡರೂ ಜನರು ೩೦ ಕೋಟಿ ರೂಪಾಯಿಯನ್ನು ಖರ್ಚು ಮಾಡುತ್ತಾರೆ. ಈ ಹಣದಲ್ಲಿ ಅರ್ಧಡಜನ್ ಬಿಇ ಕಾಲೇಜುಗಳನ್ನಾದರೂ ಸ್ಥಾಪಿಸಬಹುದು. ಆದರೆ ಈ ಜನ ಯಾವ ರಾಜ್ಯಗಳಿಂದ ಬರುತ್ತಾರೋ ಆ ರಾಜ್ಯಗಳಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ನಡೆಸುವ ಉದ್ಯಮ ಶೀಲ ಇಲ್ಲವಲ್ಲ!

ಇದೆಲ್ಲ ಏನೇ ಇರಲಿ; ಇಷ್ಟೊಂದು ಒಳ್ಳೆಯ ಸಿಇಟಿ ವ್ಯವಸ್ಥೆ ಮಾಡಿದ ಮೇಲೂ ಪ್ರಯೋಜನವಾಗಿದೆಯೆ? ಪೂರ್ತಿ ಇಲ್ಲ.

ರಾಜ್ಯದಲ್ಲಿ ಲಭ್ಯವಿರುವ ಈ ಎಲ್ಲ ತಾಂತ್ರಿಕ ಕೋರ್ಸುಗಳ ಸೀಟುಗಳ ಸಂಖ್ಯೆ ೩೨೦೦೦ ಮಾತ್ರ. ಕಳೆದ ಸಾಲಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ಅನ್ವಯ ಶೇ. ೧೫ ಸೀಟು ಖಾಸಗಿ ಕಾಲೇಜುಗಳ ಮ್ಯಾನೇಜ್‌ಮೆಂಟ್ ನವರಿಗೆ ದಕ್ಕಿತು. ಈ ಬಾರಿ ಅಷ್ಟೇ ಸೀಟು ದಕ್ಕುವುದೆಂದು ಭಾವಿಸಿದರೆ ಹಂಚಿಕೆಗೆ ಉಳಿಯುವ ಸೀಟುಗಳ ಸಂಖ್ಯೆ (೪೮೦೦ ಕಳೆದ ಮೇಲೆ) ಒಟ್ಟು ೨೭೨೦೦ ಸೀಟು. ಇದರಲ್ಲಿ ಸಾಮಾನ್ಯವಾಗಿ ಅರ್ಧ ಭಾಗ ೧೩೬೦೦ ಸೀಟು ಅರ್ಹತೆ ಆಧಾರದ ಮೇಲೆ ಕಡಿಮೆ ಬೋಧನಾ ಶುಲ್ಕದ ಸೀಟು. ಇನ್ನು ಕ್ಯಾಪಿಟೇಷನ್ ಶುಲ್ಕ ಎಂದು ಹೇಳದಿದ್ದರೂ ಅದೇ ದರದಲ್ಲಿ  ಎಂಬಂತೆ ದುಬಾರಿ ಶುಲ್ಕ ವಿಧಿಸುವ ಪೇಮೆಂಟ್ ಸೀಟು. ಉಳಿದಿದ್ದು ಇನ್ನು ಅರ್ಧವೆನಿಸಿದ  ೧೩೬೦೦ ಸೀಟು. ಈ ಪೇಮೆಂಟ್ ಸೀಟು ಕರ್ನಾಟಕೇತರರಿಗೆ ಸಿಗುವುದು ಶೇ. ೧೫ ಆಗುವ ೨೦೪೦ ಸೀಟು. ಮಿಕ್ಕಿದ್ದು ಕರ್ನಾಟಕದವರೆಗೆ ಸಿಗುವ ೧೧೫೪೦ ಸೀಟು. ಕರ್ನಾಟಕದವರು ಅಷ್ಟು ಸೀಟನ್ನು ಬಾಚಿಕೊಳ್ಳುವುದೇ ಇಲ್ಲ. ಕಳೆದ ವರ್ಷ ಇದರಲ್ಲಿ ೪೦೦೦ ಸೀಟು ಕರ್ಚಾಗಲೇ ಇಲ್ಲ! ಸಿಇಟಿ ಇಲಾಖೆಯವರು ಕರೆದು ಕರೆದು ಕೊಟ್ಟರೂ ತೆಗೆದುಕೊಳ್ಳುವವರಿಲ್ಲ.

ಶುಲ್ಕ ದುಬಾರಿ, ಕಾಲೇಜು ಚೆನ್ನಾಗಿರುವುದಿಲ್ಲ. ಇಲ್ಲವೇ ಕೆಟ್ಟ ಹವಾಮಾನ. ಅಭಾವ ಸೌಲಭ್ಯದ ಸ್ಥಳದಲ್ಲಿ ಕಾಲೇಜು ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮುಂತಾದವುಗಳಿಗೆ ಹೊರತಾದ ಶಾಖೆಗಳಿಗೆ ಸೀಟುಗಳು ಸೇರಿರುತ್ತವೆ. ಬೇಡಿಕೆ ತಪ್ಪುತ್ತದೆ.

ಪರಿಹಾರವೇನು? ಹಲವು ಶಾಖೆಗಳನ್ನು ತೆಗೆದುಹಾಕಬೇಕು. ಬೇಡಿಕೆ ಇರುವ ಶಾಖೆಗಳನ್ನು ಹೆಚ್ಚಿಸಬೇಕು. ಅದಕ್ಕೆ ಲಗತ್ತಾದ ಸೌಲಭ್ಯ ಸಿದ್ಧಪಡಿಸುವ ಕಾಲೇಜುಗಳಿಗೆ ಅಧಿಕ ಇನ್‌ಟೇಕ್‌ಗೆ ಅವಕಾಶ ಕೊಡಬೇಕು.

ಪೇಮೆಂಟ್ ಸೀಟುಗಳ ಕೋಟಾ ಕರ್ನಾಟಕದ ಹೊರಗಿನವರಿಗೆ ಏಕೆ ಕಡಿಮೆ ಇಡಬೇಕು? ಜಾಸ್ತಿ ಮಾಡಬೇಕು.

ಕಾಲೇಜುಗಳನ್ನು ತಮ್ಮ ಕ್ಯಾಪಿಟೇಷನ್ ಶುಲ್ಕ ದಾಸೆಗಾಗಿಯಾದರೂ ಆ ಕಾಲಕ್ಕೆ ಕಟ್ಟಿ ಬೆಳೆಸಿದ ಮ್ಯಾನೇಜ್‌ಮೆಂಟ್‌ಗಳಿಗೆ ಅವರ ಕೋಟಾ ಕೊಡುವಲ್ಲಿ ಸರ್ಕಾರ ಧಾರಾಳತನ ಏಕೆ ತೋರಿಸಬಾರದು? ಸೌಲಭ್ಯ ಸರಿ ಇಲ್ಲದ ಕಾಲೇಜಿಗೆ ರಿಯಾಯ್ತಿ ತೋರಿಸುವುದು ಬೇಡ. ಒಳ್ಳೆಯ-ಕೆಟ್ಟ ಎಂಬ ವ್ಯತ್ಯಾಸ ಗುರುತಿಸಲು ಸಾಧ್ಯವಾಗದ ಅಸಾಮರ್ಥ್ಯ ಸರ್ಕಾರದ್ದೇ? ಎಲ್ಲ ಕಡೆ ಖಾಸಗೀಕರಣ – ಜಾಗತೀಕರಣ ಬರುವಾಗ ಇಲ್ಲೇಕೆ ವಿರುದ್ಧ ದಿಕ್ಕಿನ ಪ್ರಯಾಣ.

ಇಷ್ಟೇ ಅಲ್ಲ; ಅರ್ಹತೆ ಆಧಾರದ ಸೀಟುಗಳಲ್ಲೂ ಕಳೆದ ಬಾರಿ ಸಾಕಷ್ಟು ಉಳಿದುಹೋಗಿವೆ. ಅವು ೫೦೦ ಅಥವಾ ೧೦೦೦ ದಷ್ಟು ಕಡಿಮೆ ಇರಬಹುದು. ಆದರೆ ಅದು ಸಹಾ ಸಾಮರ್ಥ್ಯ ಬಳಕೆಯಲ್ಲಿ (ಕೆಪಾಸಿಟಿ ಯುಟಿಲೈಸೇಷನ್‌ನಲ್ಲಿ) ಆಗಿರುವ ಕೊರತೆ ತಾನೇ.

ಬೇಡಿಕೆ ಹೀಗೆ ಕುಸಿಯುವುದರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಸರ್ಕಾರ ಮತ್ತು ಕಾಲೇಜು ಮ್ಯಾನೇಜ್‌ಮೆಂಟ್‌ನವರು ಕೂಡಿಯೇ ಪರಾಮರ್ಶಿಸಬೇಕು.  ತಪ್ಪಿದರೆ ಸಂಪನ್ಮೂಲ ಸೌಲಭ್ಯ ಪೋಲಾಗುತ್ತಲೇ ಇರುತ್ತದೆ.

ಮ್ಯಾನೇಜ್‌ಮೆಂಟ್‌ಗಳವರು ಸಹಾ ಈಗಿನ ಶೇ ೧೫ ತಮ್ಮ ಕೋಟಾ ಪಡೆಯಲು ಗಿಂಜಾಡುತ್ತಾರೆ. ಶೇ. ೫ ಮಾತ್ರ ಕೊಡುವುದು ಎಂದಾಗ, ಹೊಡೆದಾಡಿ ಆ ಶೇ ೧೫ ಗಿಟ್ಟಿಸಿಕೊಂಡು ಹೊರಡುತ್ತಾರೆ.

ಕಾಲೇಜು ಕಟ್ಟಲು ಕ್ಯಾಪಿಟೇಷನ್ ಶುಲ್ಕ ಬಳಸಿಕೊಂಡಿದ್ದಾರೆ ಎಂಬುದು ಸರಿಯೆ. ಎಷ್ಟೋ ಕಾಲೇಜುಗಳವರು ಹಣ ಸೋರಿಕೆ ಆಗುವಂತೆ ಮಾಡಿ, ದುರ್ಬಳಕೆ ಮಾಡಿ,  ಸೌಲಭ್ಯ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಅದು ಸಹಾ ನಿಜವೆ. ಅಂಥವರನ್ನು ಶಿಕ್ಷಿಸುವ ಯಾವ ಕ್ರಮವೂ ಇಲ್ಲ. ಶಿಕ್ಷೆಗೆ ಒಳಗಾಗಲು ಅರ್ಹರಾದ ಮ್ಯಾನೇಜ್‌ಮೆಂಟ್‌ಗಳ ದಿಸೆಯಿಂದ ಒಳ್ಳೆಯ ಮ್ಯಾನೇಜ್‌ಮೆಂಟ್‌ಗಳವರು ಸಹಾ; ಅಂದರೆ ಚೆನ್ನಾಗಿ ಕಾಲೇಜುಗಳನ್ನು ಕಟ್ಟಿ, ಚೆನ್ನಾಗಿ ನಡೆಸಿಕೊಂಡು ಬಂದವರು ಸಹಾ ಪರಿತಪಿಸುವಂತಾಗಿದೆ. ಅಂಥವರು ಕ್ಯಾಪಿಟೇಷನ್ ಶುಲ್ಕ ಸಂಗ್ರಹಕ್ಕೆ ಹೊರತಾಗಿ ದಶಕಗಳ ಪರ್ಯತಂ ದಾನಿಗಳು ಕೊಟ್ಟ, ಕಟ್ಟಿಸಿಕೊಟ್ಟ ಕಟ್ಟಡ ಇವುಗಳಿಂದಾಗಿ ಬದುಕಿ ಉಳಿದುಕೊಂಡಿದ್ದಾರೆ. ಒಳ್ಳೆಯ ಕೆಟ್ಟ ಎಂಬ ತಾರತಮ್ಯ ಮಾಡಲು ಸರ್ಕಾರಕ್ಕೆ ಬರದಿದ್ದರೆ ಅದರ ನಿಲುವು ನ್ಯಾಯೋಚಿತ ಎನಿಸುವುದಿಲ್ಲ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ.

ಈ ಮಾತುಗಳೆಲ್ಲ ಸರಿ. ಇದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಸರ್ಕಾರ ಇದೆಯೇ? ಇಲ್ಲ. ಏಕೆಂದರೆ ಇನ್ನಷ್ಟು ಮತ್ತಷ್ಟು ಕಾಲೇಜುಗಳ ಸ್ಥಾಪನೆಗೆ ಅನುಮತಿಯನ್ನು ಸರ್ಕಾರ ಕೊಡುತ್ತಲೇ ಇದೆ. ಇದು ಯಾವ ಸೀಮೆ ನ್ಯಾಯ ಎಂದು ಕೇಳುವವರೂ ಇಲ್ಲ.

ಸರ್ಕಾರದ ಹಾಗೂ ಮ್ಯಾನೇಜ್‌ಮೆಂಟ್‌ಗಳ ಲಾಬಿಯ ಸಂಬಂಧ ಏನಾದರೂ ಆಗಿ ಹೋಗಲಿ; ಸೀಟುಗಳಿಗೆ ಬೇಡಿಕೆ ಕಡಿಮೆ ಆಗಿರುವಾಗ ಶುಲ್ಕ ಕಡಿಮೆ ಮಾಡಿಯಾದರೂ ಅಧಿಕ ಅಭ್ಯರ್ಥಿಗಳು ಬರುವಂತೆ ಏಕೆ ಮಾಡುವುದಿಲ್ಲ? ಆರ್ಥಿಕವಾಗಿ ಸಬಲರಾಗದವರು ಸಹಾ ತಾಂತ್ರಿಕ ಸೀಟು ಪಡೆದುಕೊಳ್ಳುವಂತೆ ಮಾಡುವ ದಿಕ್ಕಿನಲ್ಲಿ ಯೋಚಿಸಿದ್ದಿದೆಯೇ? ಅದು ಸಹಾ ಇಲ್ಲ. ಅದೇ ದುರಂತ.

ಸಿಇಟಿ ಪರೀಕ್ಷೆಗೆಂದು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೊರಗಿನವರು ಧಾವಿಸಿ ಬರುವುದನ್ನು ಕಂಡು ಗಾಬರಿ ಆಗಿರುವವರೂ ಇಲ್ಲದಿಲ್ಲ. ಹೀಗೆ ಜನ ಬಂದು ಮುತ್ತಿಕೊಂಡರೆ ರಾಜ್ಯದವರಿಗೆ ಅವಕಾಶ ಕಡಿಮೆ ಆಗುತ್ತದೆ ಎಂಬುದು ಅತೃಪ್ತಿ. ಆದರೆ ಸ್ಥಳೀಕರು, ಇರುವ ಸೌಲಭ್ಯವನ್ನು ಪೂರ್ತಿ ಬಳಸಿಕೊಳ್ಳುತ್ತಿಲ್ಲ ಎಂಬುದು ವಾಸ್ತವಾಂಶ.

ಕರ್ನಾಟಕದಲ್ಲಿ ಐಟಿ ಕ್ಷೇತ್ರವೇ ಮುಂತಾದ ಅಭಿವೃದ್ಧಿ ಸಾಧ್ಯ ಆಗಿರುವುದರಿಂದ ಹೊರಗಿನವರನ್ನು ಸೆಳೆದುಕೊಳ್ಳುವುದು ಯುಕ್ತವೇ ಸರಿ. ಶಿಕ್ಷಿತರು, ಬುದ್ಧಿವಂತರು ರಾಜ್ಯಕ್ಕೆ ಬಂದಂತೆ ಆಗುತ್ತದೆ. ಅವರು ಇಲ್ಲಿ ನಾಲ್ಕು ವರ್ಷ ಕಲಿಯುವ ವೇಳೆ ಮಾಡುವ ವೆಚ್ಚ ರಾಜ್ಯಕ್ಕೆ ಅನುಕೂಲಕಾರಿಯಾಗುತ್ತದೆ. ಒಂದಿಷ್ಟು ಅಧಿಕ ಉದ್ಯೋಗ ಸೃಷ್ಟಿ ಆಗುತ್ತದೆ.

ಓದಲು ಬಂದವರಲ್ಲಿ ಕೆಲವು ಜನ ಇಲ್ಲೇ ಉದ್ಯೋಗ ಉದ್ಯಮ ಎಂದು ನೆಲೆಸಿದರೆ ಅವರ ಗಳಿಕೆ ಇಲ್ಲೇ ಖರ್ಚಾಗಲೂ ದಾರಿಯಾಗುತ್ತದೆ. ಈ ಜನರಿಂದಾಗಿ ಉದ್ಯಮಗಳು ಬೆಳೆದರೆ ಇನ್ನೂ ಒಳ್ಳೆಯದೇ.

ಇಂಥ ಹಲವು ಅಂಶಗಳು ಹೊರಗಿನವರನ್ನು ಸ್ವಾಗತಿಸಲು ಒಳ್ಳೆಯ ಕಾರಣಗಳಾಗಿ ಪರಿಣಮಿಸುತ್ತವೆ.

೧೫.೦೫.೨೦೦೨