‘ಚುನಾವಣಾ ಕದನಕ್ಕೆ ಕಹಳೆ’. ಇದು ಲೋಕಸಭೆ ವಿಸರ್ಜನೆಗೊಂಡ ನಂತರ ಪ್ರಧಾನಿ ಅವರು ತಮ್ಮ ಪಕ್ಷದ ಸಭೆಯಲ್ಲಿ ಮೊಳಗಿಸಿದ ಕಹಳೆ.

ಎಚ್ಚರಿಕೆ ನೀಡುವುದಕ್ಕೆ; ಉತ್ಸವದ ಉತ್ಸಾಹಕ್ಕೆ; ಗಣ್ಯರ ಆಗಮನಕ್ಕೆ (ಸ್ವಾಗತಿಸುತ್ತಾ); ಯುದ್ಧದ ಆರಂಭಕ್ಕೆ; ಹೀಗೆ ನಾನಾ ಸಂದರ್ಭಗಳಲ್ಲಿ ಕಹಳೆ ಊದುತ್ತಾರೆ. ಒಂದೊಂದು ಸಂದರ್ಭಕ್ಕೂ ಊದುವ ರೀತಿ ಬೇರೆ ಬೇರೆ.ಸೈರನ್‌ಗಳು ಈಚಿನವು. ಕಹಳೆ ಧ್ವನಿ ಹಳೆಯದು. ಕಹಳೆ ತಾನ ಕೇಳಿಯೇ ಸಂದರ್ಭ ಇಂಥದ್ದು ಎಂದು ಪ್ರಜೆಗಳು ಗುರುತು ಹಿಡಿದು ಬಿಡುತ್ತಿದ್ದರು. ಯುದ್ಧದ ಕಹಳೆ ಎಂದರೆ ‘ರಣ ಕಹಳೆ’. ಅದರ ಧ್ವನಿ ವಿಶಿಷ್ಟ. ಗೀತೋಪದೇಶದ ನಂತರ ಯುದ್ಧಾರಂಭಕ್ಕೆ ಮುನ್ನ ಕೃಷ್ಣ ಊದಿದ್ದು ಪಾಂಚಜನ್ಯವನ್ನು. ಶಂಖನಾದವಾಗಬಹುಜು; ರಣಕಹಳೆ ಆಗಿರಬಹುದು; ಅದು ಯುದ್ಧ ಸೂಚನೆ.

ವಾಜಪೇಯಿ ವಾಸ್ತವವಾಗಿ ಕಹಳೆ ಊದಲಿಲ್ಲ. ಆದರೆ ಈ ‘ಪಾಂಚಜನ್ಯ’ ಪತ್ರಿಕೆಯ ದೆಹಲಿ ಬಾತ್ಮೀದಾರನಿಗೆ ಅವರ ಮಾತು ಕಹಳೆಯಂತೆ, ಕದನಕ್ಕೆ ಕೂಗಿದ ಕಹಳೆಯಂತೆ, ಕೇಳಿಸಿತು.

ಅಂದರೆ ಚುನಾವಣೆ ಎಂದರೆ ಯುದ್ಧವೇನು? ಅದು ಹಾಗೆಯೇ ಸರಿ. ಅಧಿಕಾರ ಸ್ಥಾನಗೆಲ್ಲಲ್ಲು ಯುದ್ಧ. ಈಗೆಲ್ಲ ಚುನಾವಣೆಗೆ ನಿಂತವರನ್ನು ‘ಅಭ್ಯರ್ಥಿ’ ಎನ್ನುತ್ತಾರೆ. ಮುಂಚೆ ‘ಹುರಿಯಾಳು’ ಎಂಬ ಒಳ್ಳೆಯ ಪದ ಇತ್ತು. ಅವರು ‘ಕಣ’ದಲ್ಲಿ ಇರುವವರು. ಇಂಥವರು ಯಾವ ಬೆಲೆ ತೆತ್ತಾದರೂ ಕದನದ ಕಣಕ್ಕೆ ಇಳಿಯುತ್ತಿದ್ದರು.

ಹೀಗೆ ಬೆಲೆ ತೆರುವುದು ಕಡಿಮೆಯೇನಲ್ಲ. ಅಭ್ಯರ್ಥಿಗಳು ಮಾತ್ರವಲ್ಲ; ಸರ್ಕಾರಗಳು ಸದಾ ಖರ್ಚು ವಹಿಸಿಕೊಳ್ಳುವುದು ಕಡಿಮೆಯೇನಲ್ಲ. ಯುದ್ಧ ಅಂದರೇನೇ ಖರ್ಚಿನ ಬಾಬ್ತು. ಚುನಾವಣೆ ಸಹಾ ಅಷ್ಟೇ ಸರಿ. ಜನರೇ ಖರ್ಚು ಮಾಡಲಿ; ಸರ್ಕಾರವೇ ಖರ್ಚು ಮಾಡಲಿ; ಅಂತಿಮವಾಗಿ ಭಾರತವೆಂಬ ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಆಗುವ ಖರ್ಚು ಅದು. ಅಂತಿಮವಾಗಿ ಅದರ ಭಾರ ಬೀಳುವುದು ತೆರಿಗೆದಾರನ ಮೇಲೆ; ಪರೋಕ್ಷವಾಗಿ ತೆರಿಗೆ ಕೊಡದ ಅತಿ ಸಾಮಾನ್ಯ ನಾಗರಿಕನ ಮೇಲೇ ಬೀಳುವುದು.

ಹದಿಮೂರನೇ ಲೋಕಸಭೆಯ ವಿಸರ್ಜನೆ ಆಯಿತು. ೧೪ನೇ ಲೋಕಸಭೆಗೆ ಸಂಸದರ ಆಯ್ಕೆ ಆಗಬೇಕು. ಈ ಪ್ರಕ್ರಿಯೆಗಾಗಿ ೨೦೦೪-೦೫ರ ಬಜೆಟ್‌ನಲ್ಲಿ ೮೧೮.೩೮ ಕೋಟಿ ರೂಪಾಯಿ ನಿಗದಿ ಆಗಿದೆ. ಪ್ರಸ್ತುತ ಸಾಲಿನಲ್ಲಿ ಲೋಕಸಭಾ ಚುನಾವಣೆ ಇಲ್ಲದೇ ಇದ್ದಿದ್ದರೆ ಮಾಮೂಲು ಸಂದರ್ಭ ಎಂಬಂತೆ ಬರೀ ೩೪೩.೧೨ ಕೋಟಿ ರೂಪಾಯಿ ನಿಗದಿ ಆಗುತ್ತಿತ್ತು. ಲೋಕಸಭೆ ಚುನಾವಣೆ ನಡೆಯುವುದರಿಂದ ಈ ಜನವರಿ ೧ಕ್ಕೆ ೧೮ ವರ್ಷ ತುಂಬಿದ ಎಲ್ಲ ಯುವಕರಿಗೂ, ಇತರರಿಗೂ ಗುರುತಿನ ಚೀಟಿ ವಿತರಿಸಬೇಕು. ಈ ಬಾಬಿಗಾಗಿ ಇನ್ನು ನೂರು ಕೋಟಿ ರೂಪಾಯಿ ವೆಚ್ಚ ಆಗಲಿದೆ. ಇದರ ಜೊತೆಗೆ ಚುನಾವಣಾ ಆಯೋಗದ ಸಿಬ್ಬಂದಿ ಕಚೇರಿ ಇತ್ಯಾದಿ ಬಾಬಿಗೆ ವಾರ್ಷಿಕ ರೂ. ೧೧.೫೦ ಖರ್ಚು ಬರುತ್ತದೆ. ಚುನಾವಣಾ ಆಯೋಗದ ವೆಚ್ಚ ಮತ್ತು ಗುರುತಿನ ಚೀಟಿ ವೆಚ್ಚ ಬಿಟ್ಟರೆ ಮಾಮೂಲು ಸಂದರ್ಭಕ್ಕೆಂದು ಬೇಕಾಗಿದೆ ಎಂದು ಅಂದಾಜು ಮಾಡಿರುವುದು ರೂ. ೨೩೧.೬೨ ಕೋಟಿ. ವಾಸ್ತವವಾಗಿ ಆಂಧ್ರ ಮತ್ತು ಒರಿಸ್ಸಾ ವಿಧಾನಸಭೆ ಚುನಾವಣೆ ನಡೆಯುತ್ತದೆ ಎಂಬ ಕಾರಣಕ್ಕೆ ನಿಗಧಿ ಆಗಿರುವ ಮೊತ್ತ ಇದು. ಇದನ್ನು ಆಯಾ ರಾಜ್ಯ ಚುನಾವಣಾಧಿಕಾರಿಗಳ ವೆಚ್ಚಕ್ಕಾಗಿ ಆಯಾ ರಾಜ್ಯಗಳಿಗೇ ಇದನ್ನು ಕೊಡಲಾಗುವುದು. ಲೋಕಸಭೆ ಜೊತೆ ಜೊತೆಗೇ ಈ ವಿಧಾನಸಭೆ ಚುನಾವಣೆಗಳನ್ನೂ ನಡೆಸುತ್ತಿರುವುದರಿಂದ ಇಷ್ಟು ಖರ್ಚು, ತಪ್ಪಿದರೆ, ಪ್ರತ್ಯೇಕವಾಗಿ ವಿಧಾನಸಭೆ ಚುನಾವಣೆಗಳನ್ನು ನಡೆಸಿದ್ದರೆ ಇದಕ್ಕಿಂತ ಹೆಚ್ಚು ಖರ್ಚಾಗುತ್ತಿತ್ತು.

ಇದೆಲ್ಲ ಸರ್ಕಾರಿ ವೆಚ್ಚದ ಲೆಕ್ಕಾಚಾರ, ಮತಪತ್ರ, ಮತದಾರರ ಯಾದಿ ಇವುಗಳ ಮುದ್ರಣ, ಗುರುತಿನ ಚೀಟಿ ಮುಂತಾದವು ಈ ಖರ್ಚಿನ ಮೂಲ. ವಾಸ್ತವವಾಗಿ ಚುನಾವಣೆ ಎಂದಾಕ್ಷಣ ಆಗುವ ಒಟ್ಟು ವೆಚ್ಚಕ್ಕೆ ಹೋಲಿಸಿದರೆ ಈ ಸರ್ಕಾರಿ ವೆಚ್ಚ ಜುಜುಬಿ. ಚುನಾವಣಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ವೆಚ್ಚ ಮಾಡುವುದು ಎಷ್ಟು ಎಂಬ ಖಚಿತ ಅಂದಾಜೇ ಸಿಗುವುದಿಲ್ಲ. ಆದರೂ ಸ್ಥೂಲವಾಗಿ ಕುಳಿತಲ್ಲೇ ಲೆಕ್ಕ ಹಾಕುವವರುಂಟು.

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಒಬ್ಬ ಅಭ್ಯರ್ಥಿ ಕನಿಷ್ಠ ಮೂರು ಕೋಟಿ ರೂಪಾಯಿ ವೆಚ್ಚ ಮಾಡುತ್ತಾನೆ. ಆತನ ಸರಿಸಾಟಿ ಎನಿಸಿದ ಇನ್ನು ಇಬ್ಬರು ಅಭ್ಯರ್ಥಿಗಳು ಇರುತ್ತಾರೆ. ಇದೂ ಅಲ್ಲದೆ ಹೆಚ್ಚು ಖರ್ಚು ಮಾಡಲಾಗದ ಚಿಲ್ಲರೆಪಲ್ಲರೆ ಅಭ್ಯರ್ಥಿಗಳೂ ಇರುತ್ತಾರೆ. ಆದರೆ ಗೆಲ್ಲುವ ಪ್ರತಿ ಅಭ್ಯರ್ಥಿಯೂ ಗರಿಷ್ಠ ಖರ್ಚು ಮಾಡಿರುವನೇ ಆಗಿರುತ್ತಾನೆ ಎಂದೇನೂ ಇಲ್ಲ. ಒಬ್ಬರಿಗೊಬ್ಬರು ಹೆಗಲೆಣೆಯಾಗಿ ಸ್ಪರ್ಧಿಸುವ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳು ಇದ್ದೇ ಇರುತ್ತಾರೆ. ಎರಡು ರಾಷ್ಟ್ರೀಯ ಪಕ್ಷ ಕೂಟಗಳು ತಲಾ ಒಬ್ಬೊಬ್ಬರನ್ನು ನಿಲ್ಲಿಸಿರುತ್ತವೆ. ಈ ಎರಡು ಅಭ್ಯರ್ಥಿಗಳ ಕಾಲು ಎಳೆಯಲು ಕನಿಷ್ಠ ಇನ್ನು ಒಬ್ಬ ಅಭ್ಯರ್ಥಿಯಾದರೂ ಇರಲಿಕ್ಕೆ ಸಾಕು. ಹೀಗಾಗಿ ಸ್ಥೂಲವಾಗಿ ಪ್ರತಿ ಅಭ್ಯರ್ಥಿ ಮಾಡುವ ವೆಚ್ಚ ಸರಾಸರಿ ೩ ಕೋಟಿ ಎನ್ನಲು ಅಡ್ಡಿಯಿಲ್ಲ. ಮೂರೇ ಅಲ್ಲದೆ ಇನ್ನೂ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಇರುತ್ತಾರೆ. ಅವರು ಸಹಾ ಯಥಾ ಶಕ್ತಿ ವೆಚ್ಚ ಮಾಡುತ್ತಾರೆ. ಮೇಲೆ ಪ್ರಸ್ತಾಪಿಸಿದ ಮೂವರೂ ಅಭ್ಯರ್ಥಿಗಳು ತಲಾ ಮೂರು ಕೋಟಿ ವೆಚ್ಚ ಮಾಡುವುದಿಲ್ಲ ಎಂದು ಭಾವಿಸಿದರೂ, ಮಿಕ್ಕ ಕಡಿಮೆ ಮೊತ್ತದವರನ್ನು ಲೆಕ್ಕಕ್ಕೆ ತೆಗೆದುಕೊಂಡರೆ ತಲಾ ಚುನಾವಣಾ ಕ್ಷೇತ್ರಕ್ಕೆ ೯ ಕೋಟಿ ರೂಪಾಯಿಯಂತೆ ಖರ್ಚಾಗುತ್ತದೆ.

ಅದೇ ರೀತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಅಭ್ಯರ್ಥಿಗೆ ೫೦ ಲಕ್ಷ ರೂಪಾಯಿನಿಂದ ೨ ಕೋಟಿ ರೂಪಾಯಿಯವರೆಗೆ ಖರ್ಚು ಬರುತ್ತದೆ ಸರಾಸರಿ ಒಂದೂಕಾಲು ರೂಪಾಯಿಯನ್ನು ಪ್ರತಿ ಅಭ್ಯರ್ಥಿ ಖರ್ಚು ಮಾಡುತ್ತಾನೆ ಎಂದು ಭಾವಿಸಲು ಅಡ್ಡಿಯಿಲ್ಲ. ಈ ಪ್ರಮಾಣದಲ್ಲಿ ಖರ್ಚು ಮಾಡುವವರ ಸಂಖ್ಯೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನಾಲ್ಕು ಎಂದು ಲೆಕ್ಕ ಹಾಕಬಹುದು. ಅಂದರೆ ಒಂದು ಕ್ಷೇತ್ರಕ್ಕೆ ಐದು ಕೋಟಿ ರೂಪಾಯಿನಷ್ಟು ಖರ್ಚು ಮಾಡುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನಾಲ್ಕಕ್ಕಿಂತ ಹೆಚ್ಚು ಜನ ಸಕ್ರಿಯವಾಗಿ, ಸೀರಿಯಸ್ ಆಗಿ ಸ್ಪರ್ಧೆ ನೀಡುತ್ತಾರೆ. ಆದರೆ ಕನಿಷ್ಠ ಎಂದು ಭಾವಿಸಿ ನಾಲ್ಕರ ಲೆಕ್ಕ ಮಾತ್ರ ತೆಗೆದುಕೊಳ್ಳಬಹುದು.

ಲೋಕಸಭೆಯಲ್ಲಿ ೫೪೩ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರ ಜೊತೆಗೇ ಆಂಧ್ರಪ್ರದೇಶದ ೨೯೪ ವಿಧಾನಸಭಾ ಸ್ಥಾನಗಳಿಗೆ, ಒರಿಸ್ಸಾದ ೧೪೭ ಸ್ಥಾನಗಳಿಗೆ ಖಚಿತವಾಗಿ ಸದ್ಯ ಚುನಾವಣೆ ನಡೆಯಲಿದೆ. ಕರ್ನಾಟಕದ ವಿಧಾನಸಭೆ ವಿಸರ್ಜನೆಗೊಂಡರೆ ಇವುಗಳ ಜೊತೆಗೆ ರಾಜ್ಯದ ೨೨೫ ಸ್ಥಾನಗಳಿಗೂ ಚುನಾವಣೆ ನಡೆಯಬೇಕಾಗುತ್ತದೆ. ಆಗ ಮೂರು ರಾಜ್ಯಗಳ ಒಟ್ಟು ೬೬೬ ಸ್ಥಾನಗಳಿಗೆ ಮತದಾನ ನಡೆಯುತ್ತದೆ.

ಇಷ್ಟು ಚುನಾವಣಾ ಕ್ಷೇತ್ರಗಳ ಖರ್ಚನ್ನು ಮೇಲೆ ವಿವರಿಸಿದಂತೆ ಗುಣಿಸಿ ಕೂಡಿದಾಗ ೧೪ ಸಾವಿರ ೭೯ ಕೋಟಿ ರೂಪಾಯಿ ಖರ್ಚು ಮಾಡುತ್ತಾರೆಂಬುದು ಕನಿಷ್ಠ ಅಂದಾಜು. ವಾಸ್ತವವಾಗಿ ಇದರ ಹಲವುಪಟ್ಟು ಹಣ ಚುನಾವಣೆ ವೇಳೆ ಖರ್ಚಾಗುವುದುಂಟು. ಹೀಗಾಗಿ ಅಭ್ಯರ್ಥಿಗಳ ಕಡೆಯಿಂದ ೨೫ ಸಹಸ್ರ ಕೋಟಿ ರೂಪಾಯಿ ಆದರೂ ಖರ್ಚಾಗುತ್ತದೆ. ಇದರ ಮುಂದೆ ಸರ್ಕಾರಗಳು ಖರ್ಚು ಮಾಡುವ ಒಂದೆರಡು ಸಾವಿರ ಕೋಟಿ ರೂಪಾಯಿ ಏನೇನೂ ಅಲ್ಲ. ಸರ್ಕಾರದ ವತಿಯಿಂದ ಆಗುವ ಖರ್ಚು ಮತದಾರ ಪಟ್ಟಿ ಮತ್ತು ಮತ ಎಣಿಕೆ, ಫಲಿತಾಂಶ ಪ್ರಕಟಣೆ ಮುಂತಾದ ಪ್ರಕ್ರಿಯೆಗೆ ಮಾತ್ರ.

ಚುನಾವಣೆಯ ಮಿಕ್ಕೆಲ್ಲ ಚಟುವಟಿಕೆಗೆ ಆಗುವ ಖರ್ಚು ಎಂಥದು? ಒಂದೇ ಒಂದು ಚುನಾವಣೆಯನ್ನು ಕಂಡ ಯಾರಿಗೇ ಆದರೂ ಚುನಾವಣೆಯ ಶೈಲಿ ಎಂಥದು ಎಂಬುದು ಗೊತ್ತಿರುತ್ತದೆ. ಒಬ್ಬೊಬ್ಬ ಅಭ್ಯರ್ಥಿಗೂ ಹತ್ತಾರು, ನೂರಾರು, ಕೊಲವೊಮ್ಮೆ ಸಾವಿರಾರು ಕಾರ್ಯಕರ್ತರು ದುಡಿಯುತ್ತಾರೆ. ಪ್ರಚಾರ ಸಾಮಗ್ರಿ ಹಲವು ಬಗೆ. ಇದೀಗ ಇಲೆಕ್ಟ್ರಾನಿಕ್ ಸಾಧನಗಳೂ ಪ್ರಚಾರಕ್ಕೆ ಲಭ್ಯ. ಬಹುಶಃ ಇನ್ನಾವ ದೇಶದಲ್ಲೂ, ಅಮೆರಿಕ ಹೊರತು, ಅಭ್ಯರ್ಥಿ ಪ್ರಚಾರದ ಬಿಸಿ ಇಷ್ಟೊಂದು ತಟ್ಟುವುದಿಲ್ಲ. ನಗರಗಳಲ್ಲಿ ಈ ಬಗೆಯ ಪ್ರಚಾರ ಸುಲಭಗೋಚರ. ನಗರೇತರ ಪ್ರದೇಶಗಳಲ್ಲಿ ಮತದಾರನಿಗೆ ಒಡ್ಡುವ ಆಮಿಷ, ಪ್ರಲೋಭನೆಗಳು ಬಹಳ ಆಳಕ್ಕೆ ಹೋಗುತ್ತವೆ.

ವಾಸ್ತವವಾಗಿ ಹಣದ ಹೊಳೆ ಹರಿಸಿ ಮತಗಳನ್ನು ಬಾಚಿಕೊಳ್ಳುವ ಕೃತ್ಯವೇ ನಡೆಯುತ್ತದೆ. ಐದು ವರ್ಷಕ್ಕೊಮ್ಮೆ ಬರುವ ಅವಕಾಶ ಎನ್ನುವಂತೆ ಮತದಾನ ಹಕ್ಕನ್ನು ಮಾರಿಕೊಳ್ಳುತ್ತಾರೆ ಮತದಾರರು. ಸಾಕಷ್ಟು ದೊಡ್ಡ ಸಂಖ್ಯೆಯ ಜನರ ಗುಂಪುಗಳು ಬೇರೆ ಬೇರೆ ರೀತಿ ತಂತಮ್ಮ ಗುಂಪು ಮತ್ತು ಸಮುದಾಯಗಳನ್ನು ಗುರುತಿಸಿಕೊಂಡು ವ್ಯವಹಾರಕ್ಕೆ ಇಳಿಯುತ್ತಾರೆ.  ನಮ್ಮಲ್ಲಿ ಇಷ್ಟು ಮತದಾರರಿದ್ದಾರೆ ಎನ್ನಲಾಗುವಂತೆ ಅಲ್ಲಲ್ಲಿ ಮತದಾರರು ಸಂಘಟಿತರಾಗಿ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಕಡೆಯವರು ಎನಿಸಿಕೊಂಡವರಿಂದ ವ್ಯವಹಾರ ರೀತ್ಯ ಕುದುರಿಸಿಕೊಂಡಿದ್ದನ್ನು ವಸೂಲು ಮಾಡಿಕೊಳ್ಳುತ್ತಾರೆ. ಆಹಾರ ಧಾನ್ಯ, ಹೆಂಡ ಸರಾಯಿ, ಸೀರೆ ಪಂಚೆ, ದೇವಸ್ಥಾನ ಭಜನೆ ಮಂದಿರ, ಧಾರ್ಮಿಕ ಕೇಂದ್ರಗಳಿಗೆ ಕಾಣಿಕೆ, ಇಡುಗಂಟು ಹಣ, ಉದ್ಯೋಗ ಬಡ್ತಿ, ಭರವಸೆ, ಅಧಿಕಾರಕ್ಕೆ ಬಂದ ಮೇಲೆ ಪುಡಿ ಅಧಿಕಾರ ಕೊಡಿಸಿಕೊಡುವ ಭರವಸೆ, ಮಾಂಸದೂಟ, ದ್ವೇಷ ಸಾಧನೆ ಕೃತ್ಯಗಳು, ಭೀಷಣ ಭಾಷಣ, ಸಭೆ ಸಮಾರಂಭ, ಮನರಂಜನೆ, ಹೊಡೆದಾಟ ಬಡಿದಾಟ, ಕೊಲೆ, ಮತದಾನ ನೆರವಿಗೆ ವಾಹನ, ಅಭ್ಯರ್ಥಿಯ ಮನೆ ಮನೆ ಭೇಟಿ… ಇತ್ಯಾದಿ ಏನೆಲ್ಲ ಪಡೆಯುತ್ತಾರೆ.

ಭಾರತದ ಚುನಾವಣಾ ಪದ್ಧತಿ ಕಂಡವರಿಗೆ ಇದಾವುದೂ ಸೋಜಿಗ ಎನಿಸುವುದಿಲ್ಲ. ಮತದಾರ ಪಟ್ಟಿ ಆಕ್ರಮ, ಮತ ಹಾಕುವಲ್ಲಿನ ಅಕ್ರಮ, ಅನ್ಯ ಅಭ್ಯರ್ಥಿ ಕಡೆಯವರ ಅಪರಹರಣ, ಮತದಾನ ಸಿಬ್ಬಂದಿ ಮೇಲೆ ಹಲ್ಲೆ ಹೀಗೆ ದುಷ್ಕರ್ಮಗಳೆಲ್ಲ ಇಲ್ಲಿ ಸಲ್ಲುತ್ತವೆ. ಹಣದ ಪೈಶಾಚಿಕ ರೂಪ ಕಾಣಿಸುವುದು ಚುನಾವಣೆ ವೇಳೆಯಲ್ಲೇ. ಹತ್ತಾರು ಸಹಸ್ರ ಅಭ್ಯರ್ಥಿಗಳು ಸಹಸ್ರಾರು ಚುನಾವಣಾ ಕ್ಷೇತ್ರಗಳಲ್ಲಿ ಕೋಟ್ಯಂತರ ಜನಕ್ಕೆ ಲಗತ್ತಾದಂತೆ ಹಲವು ವಾರ ನಡೆಸುವ ದಾಂಧಲೆಗೆ ೨೫ ಸಹಸ್ರ ಕೋಟಿ ರೂಪಾಯಿ ಯಾವ ದೊಡ್ಡ ಮೊತ್ತ… ಇದು ಚುನಾವಣೆಯ ವಿಶ್ವರೂಪ ಅಗಾಧತೆ.

ಇಂಥ ಖರ್ಚಿಗೆ, ಹಣ ಯಾರದಾದರೇನು? ಮಿತಿ ಬೇಡವೇ?

ಈ ಬಗೆಯ ಪ್ರಶ್ನೆಗಳನ್ನು ಪ್ರಾಜ್ಞರು ವರ್ಷ ಪರ್ಯಂತ ಕೇಳಿದ್ದಾರೆ. ಚುನಾವಣಾ ಆಯೋಗ ಪ್ರತಿ ಅಭ್ಯರ್ಥಿ ಖರ್ಚಿಗೆ ಮಿತಿ ವಿಧಿಸಿರುವುದುಂಟು. ಇದಕ್ಕೆ ತಪ್ಪಿದರೆ ಕ್ರಮ ಸಹಾ ಕೈಗೊಳ್ಳುತ್ತಾರೆ. ಆದರೆ ಈ ಬಲೆಯಿಂದ ತಪ್ಪಿಸಿಕೊಂಡು ನೀರಿಗೆ ಜಾರಿ ಹೋಗುವ ಮೀನುಗಳೇ ಅಧಿಕ. ಈ ಬಗೆಯ ಹಣ ಎಲ್ಲಿಂದ ಬರಬೇಕು? ಭ್ರಷ್ಟಾಚಾರವೇ ಇದರ ಮೂಲ. ಕಪ್ಪು ಹಣ ಚಲಾವಣೆಯಲ್ಲಿ ಇರುವತನಕ ಇದು ಅವ್ಯಾಹತವಾಗಿ ಸಾಗುತ್ತದೆ. ರಾಜಕೀಯ ಪಕ್ಷಗಳಿಗೆ ವಾಣಿಜ್ಯೋದ್ಯಮದವರು, ಮುಖ್ಯವಾಗಿ ಕಂಪೆನಿಗಳು, ಅಧಿಕೃತವಾಗಿ ದೇಣಿಗೆ ಕೊಡುವುದನ್ನು ನಿಷೇಧಿಸಲು ಸಾಧ್ಯವೇ ಆಗಿಲ್ಲ. ಲೆಕ್ಕವಿಡದೆ ಕೊಡುವುದನ್ನು ತಡೆಯುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಹಣದುಬ್ಬರ ಜಾಸ್ತಿಯಿದ್ದಾಗ ಚುನಾವಣೆಗೆ ಹಣ ಪೂರೈಸುವಂಥ ಕೃತ್ಯಗಳು ಹೆಚ್ಚಾಗುತ್ತವೆ. ಪುಣ್ಯಕ್ಕೆ ವಿದೇಶ ಮೂಲದ ಹಣ ಚುನಾವಣೆಯ ವೇಳೆ ಅನಿರ್ಬಂಧಿತವಾಗಿ ಪೂರೈಕೆ ಆಗುವುದಿಲ್ಲ. ಏಕೆಂದರೆ ದೇಶಿ ಮೂಲಗಳು ಬತ್ತಿ ಹೋಗಿಲ್ಲ. ಬತ್ತಿ ಹೋಗುತ್ತಿಲ್ಲ.

ಪ್ರಖ್ಯಾತ ರಾಜಾ ಚೆಲ್ಲಯ್ಯ ಸಮಿತಿ ಸೇರಿದಂತೆ ಹಲವಾರು ಸಮಿತಿಗಳು, ಅರ್ಥ ಶಾಸ್ತ್ರಜ್ಞರು ಕಪ್ಪು ಹಣ ದಂಧೆ ಬಗೆಗೆ ಸಮೀಕ್ಷೆ ನಡೆಸಿ ಅಂದಾಜುಗಳನ್ನು ಮಾಡಿದ್ದಾರೆ. ಆದರೆ ಚುನಾವಣಾ ವೆಚ್ಚ ಕುರಿತ ಸ್ಥೂಲ ಅಂದಾಜು ಮಾಡಲೂ ಸಾಧ್ಯವಾಗಿಲ್ಲ. ಚುನಾವಣಾ ವೆಚ್ಚದ ಒಂದು ಪಾಲು ಸರ್ಕಾರದ ವತಿಯಿಂದ ಸಲ್ಲುವಂತೆ ಮಾಡಬೇಕೆಂಬ ವಿಚಾರವೂ ಆಗಾಗ ಪ್ರಸ್ತಾಪಕ್ಕೆ ಬರುತ್ತದೆ. ಆದರೆ ಅಲ್ಲೇ ಗಾಳಿಯಲ್ಲಿ ಲೀನ.

ರಾಜಕೀಯದಲ್ಲಿ ಇರುವವರಿಗೆ ವಾಣಿಜ್ಯೋದ್ಯಮ ಮೂಲ ಅಷ್ಟು ದೊಡ್ಡದೇನು? ಲೈಸನ್ಸ್ ಪರ್ಮಿಟ್ ಇತ್ಯಾದಿಗಳು ಇರುವ ತನಕ; ಬೃಹತ್ ವೆಚ್ಚವು (ಆಡಳಿತ, ಅಭಿವೃದ್ಧಿ ನೆಪದಲ್ಲಿ) ಸರ್ಕಾರದ ಕಡೆಯಿಂದ ಆಗುತ್ತಿರುವ ತನಕ; ರಾಜಕೀಯಸ್ಥನ ಜೋಬಿಗೆ ಹಣ ಹೋಗುವುದು ತಪ್ಪುವುದಿಲ್ಲ. ಸರ್ಕಾರದ  ಪಾತ್ರ ಕಡಿಮೆ ಆಗುವ ತನಕ ಇದು ತಪ್ಪುವುದಿಲ್ಲ. ಆದರೆ ಸರ್ಕಾರದ ಸರ್ವವ್ಯಾಪಿತನ ತಪ್ಪುವುದು ಭಾರತದಲ್ಲಂತೂ ಸದ್ಯದ ಭವಿಷ್ಯದಲ್ಲಿ ಸಾಧ್ಯವಿಲ್ಲ. ರಾಜಕೀಯ ಭ್ರಷ್ಟಾಚಾರ ಬಹುಶಃ ವಾಣಿಜ್ಯೋದ್ಯಮ ಭ್ರಷ್ಟಾಚಾರಕ್ಕಿಂತ ಬೃಹತ್ತಾದುದು.

ರಾಜಕಾರಣಿಯು ವೃತ್ತಿ ಆರಂಭಿಸುವುದೇ ಹಣಕ್ಕೆ ಕೈಹಾಕುವುದರಿಂದ. ಗಳಿಸುವುದೆಲ್ಲ ಚುನಾವಣೆಯಲ್ಲಿ ಖರ್ಚು ಮಾಡಿ ಇನ್ನೂ ದೊಡ್ಡ, ಮತ್ತೂ ದೊಡ್ಡ, ಅಧಿಕಾರ ಸ್ಥಾನ ಹಿಡಿಯುವುದಕ್ಕೋಸ್ಕರ. ಅಧಿಕಾರವು ರಾಜಕಾರಣಿಗೆ ಹಿಡಿದ ಹುಚ್ಚು. ಆ ಹುಚ್ಚಿನಲ್ಲೇ ಮೆರೆಯುತ್ತಾನೆ. ಆ ಹುಚ್ಚಿನಲ್ಲೇ ಸಾಯುತ್ತಾನೆ. ಅಧಿಕಾರವನ್ನು ಸಾಮಾನ್ಯ ಜನ ದೇವರಂತೆ ಕಾಣುತ್ತಾರೆ. ಅದೇ ಈ ಹುಚ್ಚಿನ ಮೂಲ. ಜನ ಸಾಮಾನ್ಯರು ಚುನಾವಣೆ ವೇಳೆ ಸಮೃದ್ಧಿಯ ಸವಿಯ ರುಚಿ ಕಾಣುತ್ತಾರೆ. ವ್ಯವಸ್ಥೆ ಬಗೆಗೆ ಚಿಂತಿಸುವುದಿಲ್ಲ.

‘ಹುಚ್ಚು’ಮುಂದೆ ಮದುವೆಯಲ್ಲಿ ಉಂಡೋನೇ ಜಾಣ!’

೧೧.೦೨.೨೦೦೪