ಎಂಜಿನಿಯರ್, ಡಾಕ್ಟರ್, ಸಿಎ, ಎಂಬಿಎ, ಬಯೋಟೆಕ್…. ಈ ಪಟ್ಟಿ ಇನ್ನು ಮುಂದಕ್ಕೆ ಬೆಳೆಯುವುದಿಲ್ಲ. ಈ ಶಿಕ್ಷಣ ಪಡೆದರೆ ಕೆಲಸ ಸಿಗುವುದು ಖಾಯಂ. ನಿರುದ್ಯೋಗದ ಸಮಸ್ಯೆ ಇಲ್ಲ. ಹೀಗೆ ಭಾವಿಸಿ ಈ ಕೋರ್ಸುಗಳಿಗೆ ನೂಕುನುಗ್ಗಲು.

ಸಿಇಟಿ ಆಯ್ಕೆ ವಿಧಾನ ಈತನಕ ಜನಪ್ರಿಯ ಕೌನ್ಸೆಲಿಂಗ್ ಪದ್ಧತಿಯನ್ನು ಅನುಕರಿಸುವುದೂ ನಡೆದಿದೆ. ಶಿಕ್ಷಕರ ಆಯ್ಕೆಗೂ ಇದೇ ಪದ್ಧತಿ. ಆಯ್ಕೆ ಸುಗಮವಾಗುತ್ತದೆ ಎನ್ನುವುದಾದರೆ ಯಾರು ಬೇಕಾದರೂ ಅಳವಡಿಸಿಕೊಳ್ಳಲಿ; ತಪ್ಪೇನಿಲ್ಲ. ಆದರೆ ತಾಂತ್ರಿಕ ಶಿಕ್ಷಣದವರೇ ಈ ಪದ್ಧತಿಯನ್ನು ಕೈಬಿಡುವಂತಾಗಿದೆ. ಎಂಜನಿಯರಿಂಗ್ ಶಿಕ್ಷಣಕ್ಕೇ ಒಂದು ವಿಶ್ವವಿದ್ಯಾನಿಲಯ; ವೈದ್ಯ ಶಿಕ್ಷಣಕ್ಕೇ ರೂಪಿಸಲಾದ ಇನ್ನೊಂದು ವಿಶ್ವವಿದ್ಯಾನಿಲಯ ಎಂದು ಆಗಿರುವಾಗ ತಾಂತ್ರಿಕ ಕೋರ್ಸುಗಳಿಗೆಂದೇ ಆಯ್ಕೆ ಮಾಡಲು ಪ್ರತ್ಯೇಕ ವ್ಯವಸ್ಥೆ ಏಕೆ ಬೇಕು? – ಸಹಜ ಪ್ರಶ್ನೆ ಇದು. ಸಿಇಟಿ ಎಂಬುದು ಇಲ್ಲದಿರಬಹುದು. ಆಯ್ಕೆ ಪದ್ಧತಿ ಇದೇ ಮುಂದುವರೆಯಬಹುದು. ಸ್ವಲ್ಪ ಸುಧಾರಿತ ರೂಪದಲ್ಲಿ!

ಅತ್ಯಂತ, ಪೂರ್ತಿ ತುಂಬಲಾಗದಷ್ಟು ಸೀಟುಗಳು ಇದ್ದರೂ, ರಾಜ್ಯ ಸರ್ಕಾರ ಹೊಸ ಹೊಸದಾಗಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ಕೊಡುತ್ತಲೇ ಇದೆ. ಬಹುಶಃ ಇತರ ರಾಜ್ಯಗಳಲ್ಲೂ ಇದೇ ಲಹರಿ ಇರಲಿಕ್ಕೆ ಸಾಕು. ಇಂದು ತಾತ್ಕಾಲಕ್ಕೆ ಬೇಡಿಕೆ ಕಡಿಮೆ ಆಗಿರಬಹುದು. ನಾಳೆ ದಿಢೀರನೆ ಬೇಡಿಕೆ ಕುದುರಬಹುದು. ಅದನ್ನು ಅಲ್ಲಗಳೆಯುವಂತಿಲ್ಲ. ಹಾಗೆ ಐ.ಟಿ. ಬೇಡಿಕೆ ಕುದುರಿ ಮತ್ತೆ ಹೊರ ರಾಜ್ಯ ಅಭ್ಯರ್ಥಿಗಳ ದಾಳಿ ಆರಂಬವಾದರೆ ಅವರಿಗೆಲ್ಲ ‘ಸೀಟಿಲ್ಲ’ ಎಂದು ಹೇಳುವಂತಾಗಬಾರದು. ಇದು ಸರ್ಕಾರದ್ದು ಅಥವಾ ಕಾಲೇಜುಗಳ ನಿರ್ಮಾಪಕರದ್ದು ಯಾರದೇ ವಿಚಾರ ಆಗಿರಬಹುದು. ಒಪ್ಪಬೇಕೆನಿಸುತ್ತದೆ. ತಾಂತ್ರಿಕ ಸೀಟುಗಳು ಪರಮಾಯಿಣಿ ಬೆಲೆಗೆ ಮಾರಾಟ ಆಗುವಂಥವೇ ಸರಿ.

ತಾಂತ್ರಿಕ ಶಿಕ್ಷಣ ಬೆಳೆಸಲು ರಾಜ್ಯದಲ್ಲಿ ಪ್ರಶಸ್ತ ವಾತಾವರಣವಿದೆ. ಖಾಸಗಿ ಕಾಲೇಜುಗಳನ್ನು ನಡೆಸುವವರಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯ ಜನ ರಾಜಕಾರಣಿಗಳೇ. ಕಾಲೇಜುಗಳ ಅನುಮತಿ ಕೊಡುವಾಗಲೂ ಜಾತಿ, ಮಠ, ಪ್ರದೇಶ, ಪಕ್ಷ ಹೀಗೆ ನಾನಾ ಮಾನದಂಡ, ನೂಕುನುಗ್ಗಲು. ಕಾರಣವೇನೆಂದರೆ ಇದು ಒಳ್ಳೆಯ ವ್ಯಾಪಾರ. ತೊಡಗಿಸಿದ ಹಣಕ್ಕೆ ಮೋಸವಿಲ್ಲ? ಈಚೆಗೆ ಗೊಂದಲವಾಗಿ ಒಂದು ಕಾಲೇಜಿನವರು ಹಣ ಕೊಟ್ಟಿದ್ದ ಪೋಷಕರಿಗೆ ಅದನ್ನು ವಾಪಸ್ ಮಾಡಿ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಬೇಕಾದ ಪರಿಸ್ಥಿತಿ ಒದಗಿತು. ಆದರೆ ಹಾಗೆ ವಾಪಸ್ ಮಾಡಲು ಆಡಳಿತ ವರ್ಗದ ಬಳಿ ಹಣವೇ ಇಲ್ಲ. ವಸೂಲು ಮಾಡಿದ್ದ ಹಣ ಎಲ್ಲಿ ಹೋಯಿತು? ಯಾರಿಗೂ ಗೊತ್ತಿಲ್ಲ.

ಬೇರೆ ರಾಜ್ಯಗಳಿಂದ ಬಂದಿದ್ದ ವಿದ್ಯಾರ್ಥಿಗಳ ಪಾಲಿಗೆ ಸಮಯ ಹಾಳಾಯಿತು. ಹಣವೂ ಹೋಯಿತೆಂದೇ ಹೇಳಬಹುದು. ಒಂದು ಪಕ್ಷ ವಿದೇಶಗಳಿಂದ ಬಂದ ವಿದ್ಯಾರ್ಥಿಗಳಿಗೆ ಹಾಗೆ ಆಗಿದ್ದರೆ ದೇಶದ ಹೆಸರು ಎಷ್ಟು ಹಾಳಾಗುತ್ತಿತ್ತು?

ವಿದೇಶಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಭಾರತದತ್ತ ಬರುವ ಸಾಧ್ಯತೆಗಳು ಇದ್ದೇ ಇವೆ. ಬಹಳ ಒಳ್ಳೆಯ ಶೈಕ್ಷಣಿಕ ಆಡಳಿತ ಹಾಗೂ ಎಲ್ಲ ಮೂಲ ಸೌಲಭ್ಯ ಹೊಂದಿರುವ ಕಾಲೇಜುಗಳವರಿಗೆ ಇದರ ಅರಿವಿದೆ. ಉನ್ನತ ಶಿಕ್ಷಣ ಎನ್ನುವುದು ಸೀಮಿತವಾದ ಒಂದೆರಡು ವರ್ಷದ ಅನುಭವಕ್ಕೆ ನಿಲುಕುವಂಥದಲ್ಲ. ಕಾಲೇಜುಗಳು ಸುಪುಷ್ಟಗೊಂಡರೆ ವಿದೇಶಗಳಿಂದಲೂ ಕಲಿಯಲು ಬರುತ್ತಾರೆ. ಇರಾನ್‌ನಲ್ಲಿ ಅರಸ ಷಾ ಆಡಳಿತ ಇದ್ದಾಗ ಇರಾನಿ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಇಲ್ಲಿಗೆ ಓದಲು ಬರುತ್ತಿದ್ದರು. ಅರವತ್ತರ ದಶಕದಲ್ಲಿ ಆಫ್ರಿಕದ ಯುವಕ ಯುವತಿಯರು ತಾಂತ್ರಿಕವಲ್ಲದ ಶಿಕ್ಷಣಕ್ಕೂ ಭಾರತಕ್ಕೆ ಬರುತ್ತಿದ್ದುದುಂಟು.

ಹಿರಿಯ ಆಡಳಿತಗಾರ ಡಾ. ಪಿ.ಸಿ. ಅಲೆಕ್ಸಾಂಡರ್ ಈಚೆಗೆ ಬರೆದಿರುವ ಪ್ರಕಾರ ಭಾರತದಲ್ಲಿ ವಿಶ್ವವಿದ್ಯಾನಿಲಯ ಸ್ಥಾನಮಾನದ ೩೦೦ ಶೈಕ್ಷಣಿಕ ಸಂಸ್ಥೆಗಳಿವೆ. ೧೩ ಸಾವಿರ ಕಾಲೇಜುಗಳಲ್ಲಿ ಮೂರೂವರೆ ಲಕ್ಷ ಶಿಕ್ಷಕರೂ, ೮೦ ಲಕ್ಷ ವಿದ್ಯಾರ್ಥಿಗಳೂ ಇದ್ದಾರೆ. ಅಮೆರಿಕ ಬಿಟ್ಟರೆ ಅತಿ ದೊಡ್ಡ ಶೈಕ್ಷಣಿಕ ವ್ಯವಸ್ಥೆ ಇರುವುದು ಭಾರತದಲ್ಲಿ ಮಾತ್ರವೇ ಹೌದು. ಆದರೆ ಶಿಕ್ಷಣ ನೀಡುವುದನ್ನು ದೊಡ್ಡ ವ್ಯಾಪಾರ ಮಾಡಿಕೊಂಡಿರುವುದು ಅಮೆರಿಕ ಮಾತ್ರವೇ.

ಶಿಕ್ಷಣ ಮತ್ತು ತರಬೇತಿ ನೀಡುವ ದಂಧೆಯಿಂದ ಅಮೆರಿಕವು ೨೦೦೧ರಲ್ಲಿ ೭೫೦ ಕೋಟಿ ಡಾಲರ್ ಗಳಿಸಿತು. ಆ ವರ್ಷ ಕಲಿಯಲೆಂದು ಅಮೆರಿಕದಲ್ಲಿ ತಂಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಐದೂವರೆ ಲಕ್ಷ. ಅವರಲ್ಲಿ ಭಾರತದವರು ೫೫ ಸಾವಿರ; ಚೀನಾದಿಂದ ಬಂದವರು ೬೦ ಸಾವಿರ.

ಆದರೆ ಮರು ವರ್ಷ ಭಾರತೀಯರು ೬೭ ಸಾವಿರ ಆದರು. ಚೀನೀಯರನ್ನು ಮೀರಿಸಿದರು. ಭಾರತೀಯರು ಮತ್ತು ಚೀನೀಯರಲ್ಲದೆ ಜಪಾನಿಯರು ಸಹಾ ೪೦ ಸಾವಿರದಷ್ಟು ಸಂಖ್ಯೆಯಲ್ಲಿ ಅಮೆರಿಕದಲ್ಲಿ ಓದುತ್ತಿದ್ದಾರೆ.

ಅಮೆರಿಕದಲ್ಲಿ ಶಿಕ್ಷಣ ದುಬಾರಿ. ಆದರೂ ವಿದ್ಯಾರ್ಥಿಗಳು ಅಲ್ಲಿ ಜಮಾಯಿಸುತ್ತಾರೆ. ಭಾರತದಲ್ಲಿ ಅಷ್ಟು ಖರ್ಚು ಬರುವುದಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳವರು ಸಹಾ ಭಾರತಕ್ಕೆ ಧಾವಿಸುವುದಿಲ್ಲ. ವಿವಿಧ ಅನಿವಾಸಿ ಭಾರತೀಯರು ಸಹಾ ಮಕ್ಕಳನ್ನು ಭಾರತಕ್ಕೆ ಕಳುಹಿಸುವುದಿಲ್ಲ. ೧೯೯೧ರ ಅಂಕಿ ಸಂಖ್ಯೆ ಪ್ರಕಾರ ಭಾರತದ ವಿವಿಧ ವಿಶ್ವವಿದ್ಯಾ ನಿಲಯಗಳಲ್ಲಿ ಓದುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ೧೩ ಸಾವಿರ. ೨೦೦೨ರಲ್ಲಿ ಅದು ೮ ಸಾವಿರಕ್ಕೆ ಇಳಿಯಿತು.

ಹೀಗೇಕೆ ಭಾರತದ ತುಂಬಾ ನಾನಾ ವಿಧದ ಶಿಕ್ಷಣ ಕೋರ್ಸುಗಳು ಲಭ್ಯವಿದ್ದರೂ ಗುಣಮಟ್ಟ ಕಡಿಮೆ; ಏಕರೂಪವಾಗಿಲ್ಲ. ವಿಸ್ತರಣೆ ಸೇವೆ ಬಹಳ ಕಡಿಮೆ. ಸಂಶೋಧನಾ ಅವಕಾಶ ಮತ್ತು ಸೌಲಭ್ಯಗಳು ಲೆಕ್ಕಕ್ಕೆ ಸಿಗದಷ್ಟು ಅಲ್ಲ.

ಓದಲು ಬರುವ ವಿದ್ಯಾರ್ಥಿಗಳಿಗೆ ಗ್ರಂಥ ಮತ್ತು ಮಾಹಿತಿ ಸಂಗ್ರಹಣೆ ಸೌಲಭ್ಯ ಸರಿಯಾಗಿ ಸಿಗುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಶಿಕ್ಷಣ ಸಂಸ್ಥೆಗೆ ಲಗತ್ತಾದಂತೆ ವಸತಿ ಸೌಲಭ್ಯ ಬಹಳ ಸೀಮಿತ. ಅನಿವಾಸಿ ಭಾರತೀಯರು ತಮ್ಮ ಹೆಣ್ಣು ಮಕ್ಕಳನ್ನು ಸಹಾ ಭಾರತಕ್ಕೆ ಉನ್ನತ ಶಿಕ್ಷಣಕ್ಕಾಗಿ ಕಳುಹಿಸಲು ಉತ್ಸುಕರು. ಆದರೂ ಈ ಕೊರತೆಯು ಹಿಂದೇಟು ಹೊಡೆಯುವಂತೆ ಮಾಡುತ್ತದೆ.

ಉನ್ನತ ಶಿಕ್ಷಣಕ್ಕೆ ಭಾರತದಲ್ಲಿ ಮಹತ್ವ ಕಡಿಮೆ ಆಗುವುದಕ್ಕೆ ಭಾರತವು ಈ ಬಾಬಿನ ಮೇಲೆ ಅಧಿಕ ಹಣವನ್ನು ತೊಡಗಿಸದೇ ಇರುವುದೇ ಮುಖ್ಯ ಕಾರಣ.

ಈ ಬಾಬಿಗೆ ಸರ್ಕಾರದ ಕಡೆಯಿಂದ ವೆಚ್ಚವಾಗುತ್ತಿದ್ದ ಹಣವು ೧೯೮೧ರಲ್ಲಿ ಜಿಡಿಪಿಯ ಶೇ. ೦.೯೮ ಇದ್ದುದು ಈಗ ಶೇ ೦.೫ಕ್ಕೆ ಇಳಿದಿದೆ.

ಉದಾರೀಕರಣ ಜಾರಿಯಾಗಿ ಒಂದು ದಶಕವೇ ಸಂದಿದ್ದರೂ ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವತ್ತ ಭಾರತ ಸರ್ಕಾರ ಏನೊಂದು ಕ್ರಮವನ್ನೂ ಕೈಗೊಂಡಿಲ್ಲ. ವಿದೇಶಿಯರು ಬರುವುದಕ್ಕೆ ಅಡ್ಡಿಯಾಗಿರುವ ಅಂಶಗಳನ್ನು ನಿವಾರಿಸಲು ಖಾಸಗಿ ವಲಯಕ್ಕೆ ಸೂಚಿಸಿ ಒಂದಿಷ್ಟು ಪ್ರೋತ್ಸಾಹಕ ಕ್ರಮಗಳನ್ನು ರೂಪಿಸಿದರೂ ಸಾಕಾಗುತ್ತದೆ. ಆದರೆ ಆ ಸಂಬಂಧ ಚಿಂತನೆಯೇ ನಡೆದಿಲ್ಲ. ತತ್‌ಕ್ಷಣಕ್ಕೆ ಅನಿವಾಸಿ ಭಾರತೀಯರ ಮಕ್ಕಳನ್ನು ಆಕರ್ಷಿಸಲು ಯತ್ನಿಸಿದರೂ ಸಾಕು; ಅಮೆರಿಕದ ಜೊತೆ ಪೈಪೋಟಿ ಆರಂಭಿಸಬಹುದು. ಉದಾರೀಕರಣವೇ ಮುಂತಾದ ಜಾಗತಿಕ ಪರಿಹಾರೋಪಾಯಗಳು ಸ್ಥಳೀಯ ಪರಿಸ್ಥಿತಿಯನ್ನು ದಾರುಣಗೊಳಿಸುತ್ತದೆ ಎನ್ನುವ ಆರೋಪವಿದೆ. ಅದು ಕೆಲವು ಪ್ರಸಂಗಗಳಲ್ಲಾದರೂ ನಿಜವಾಗುವುದುಂಟು.

ಭಾರತದಲ್ಲಿ ಉದಾರೀಕರಣ ಜಾರಿಗೆ ಬಂದ ೯೦ರ ದಶಕದ ಆರಂಭದ ವರ್ಷಗಳಲ್ಲಿ ವಿಶ್ವಬ್ಯಾಂಕು ತಾಕೀತು ಮಾಡಿದ್ದೇನೆಂದರೆ, ಸರ್ಕಾರವು ಶಿಕ್ಷಣಕ್ಕೆ ಹಣ ಖರ್ಚು ಮಾಡುವುದನ್ನು ಕಡಿಮೆ ಮಾಡಬೇಕು ಎಂಬುದಾಗಿ. ಕೃಷಿ ಸಬ್ಸಿಡಿ ಮುಂತಾದವನ್ನು ನಿಲ್ಲಿಸಬೇಕು ಎಂದು ಹೇಳಿದ ಹಾಗೆ ಇದು ಸಹಾ ಸುಧಾರಣಾ ಕ್ರಮ. ಅದರ ಪರಿಣಾಮವಾಗಿ ಬಾರತ ಮತ್ತಿತರ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣ ಬಹಳ ದುಬಾರಿ ಆಯಿತು. ಅದು ಏನಿದ್ದರೂ ಶ್ರೀಮಂತರಿಗೆ ಮಾತ್ರ ಎಂಬುದಾಯಿತು. ಮಧ್ಯಮ ವರ್ಗದವರ ಪಾಲಿಗೆ ಉನ್ನತ ಶಿಕ್ಷಣ ಬಹಳ ತ್ರಾಸದಾಯಕ ಆಯಿತು.

ಈಚೆಗೆ ವಿಶ್ವಬ್ಯಾಂಕು ತನ್ನ ನಿಲುವನ್ನು ಬದಲಾಯಿಸಿದೆ. ರಾಷ್ಟ್ರದ ಅಭಿವೃದ್ಧಿ ಸಾಧ್ಯ ಆಗಬೇಕಾದರೆ ಉನ್ನತ ಶಿಕ್ಷಣಕ್ಕೆ ಸರ್ಕಾರದ ವತಿಯಿಂದ ಪ್ರೋತ್ಸಾಹ ಲಭ್ಯವಿರಬೇಕು ಎಂದು ಹೇಳತೊಡಗಿದೆ. ಆದರೆ ಆ ಮಧ್ಯೆ ಅನಾಹುತ ಆಗಿಹೋಗಿದೆ.

ಅಶಕ್ತರಿಗೆ, ಹಿಂದುಳಿದವರಿಗೆ ನೆರವಾಗಲು ಬರುವ ಖರ್ಚನ್ನು ಹಣ ತೆರಬಲ್ಲ ಶಕ್ತರು ಭರಿಸಬೇಕು ಎನ್ನುವಂಥ ಕ್ರಮ ಜಾರಿಗೆ ಬಂದಿದ್ದರಿಂದ ತಾಂತ್ರಿಕ ಶಿಕ್ಷಣ ದುಬಾರಿ ಆಯಿತು. ಕ್ಯಾಪಿಟೇಷನ್ ಶುಲ್ಕದ ಬದಲಿಗೆ ವಿಪರೀತ ಏರಿಸಿದ ಬೋಧನಾ ಶುಲ್ಕ ತರಬೇಕೆನ್ನುವ ವ್ಯವಸ್ಥೆ ಜಾರಿಗೆ ಬಂದಿತು. ಇದರಿಂದ ವಿದ್ಯಾರ್ಥಿಗಳ ಮೇಲಿನ ಹೊರೆ ಜಾಸ್ತಿ ಆಯಿತು. ವಿದ್ಯಾರ್ಥಿಗಳ ಕಡೆಯವರಲ್ಲದ ದಾನಿಗಳಿಂದ ದೇಣಿಗೆ ಸಂಗ್ರಹಿಸಬಲ್ಲ ಖಾಸಗಿ ಕಾಲೇಜುಗಳು ಮಾತ್ರ ಒಳ್ಳೆಯ ಸೌಲಭ್ಯಗಳನ್ನು ಸೃಜಿಸಿದವು. ಆ ಸೌಲಭ್ಯದಿಂದ ವಂಚಿತವಾದ ಹಾಗೂ ಹಣವನ್ನು ಜೇಬಿಗಿಲಿಸುವ ಜನರಿಂದ ನಡೆಸಲ್ಪಡುವ ಕಾಲೇಜುಗಳು ಸೊರಗಿ ಹೋದವು. ಶಿಕ್ಷಣ ಮಟ್ಟ ಕುಸಿಯಲು ಪ್ರಶಸ್ತ ವಾತಾವರಣ ಸೃಷ್ಟಿಯಾಯಿತು.

ಸರ್ಕಾರ ಸರಿಯಾದ ನೀತಿ ರೂಪಿಸಲಾಗದೆ, ನಿಯಂತ್ರಣ ಸಾಧಿಸಲಾಗದೆ ಕೈಚೆಲ್ಲಿದಾಗ ವಿವಾದಗಳನ್ನು ಪರಿಹರಿಸುವ ದಿಕ್ಕಿನಲ್ಲಿರುವ ಕೋರ್ಟುಗಳು ಆದೇಶಗಳ ಮೇಲೆ ಆದೇಶಗಳನ್ನು ನೀಡುತ್ತಾ ಪರಿಸ್ಥಿತಿ ಸುಧಾರಿಸಲು ಕಾರಣೀಭೂತವಾಗಬೇಕಾಯಿತು.

ಉನ್ನತ ಶಿಕ್ಷಣಕ್ಕೆ ಎಷ್ಟೇ ವೆಚ್ಚವಾದರೂ ಸಿದ್ಧ ಎನ್ನುವವರು ವಿದೇಶಗಳಿಗೆ  ಹೋಗದೆ ಇನ್ನೇನು ಮಾಡಿಯಾರು? ತಮಗೆ ಬೇಕೆನಿಸಿದ್ದನ್ನು ಕಲಿಯುವವರು ಹೆಚ್ಚು ಹಣ ತೆರಲು ಸಿದ್ಧವಾದರೆ ವಾಣಿಜ್ಯ ಉದ್ದೇಶದಿಂದ ಅವರನ್ನು ಸೆಲ್ಫ್ ಫೈನಾನ್ಸ್ ಹೆಸರಿನ ಕಾರ್ಯಕ್ರಮದಡಿ ತೆಗೆದುಕೊಳ್ಳುವುದಕ್ಕೆ ವಿಶ್ವವಿದ್ಯಾನಿಲಯಗಳು ಅವಕಾಶ ನೀಡುವ ಪ್ರಯತ್ನ ಸಹಾ ಸಣ್ಣದಾಗಿ ಭಾರತದಲ್ಲಿ ಆರಂಭವಾಗಿದೆ. ಯಶಸ್ಸೇನೂ ಸಿಕ್ಕಿಲ್ಲ.

ಈ ನಡುವೆ ಇನ್ನೊಂದು ಆತಂಕಕಾರಿ ಬೆಳವಣಿಗೆ ವಿದ್ಯಾರಂಗದಲ್ಲಿ ನಡೆದಿದೆ. ಜನರು ಅಧ್ಯಯನ ಪ್ರಧಾನ ಶಿಕ್ಷಣ ಪಡೆಯುವುದಕ್ಕಿಂತ ಉದ್ಯೋಗ ಖಾತರಿ ನೀಡುವಂಥ ಶಿಕ್ಷಣ ಪಡೆಯಬೇಕು ಎಂಬ ವಿಚಾರಕ್ಕೆ ಆದ್ಯತೆ ಸಿಕ್ಕಿದೆ. ಹತ್ತನೇ ತರಗತಿ ನಂತರ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತುವ ಬದಲು, ಐದು ವರ್ಷ ಕಲಿತು ನಿರುದ್ಯೋಗಕ್ಕೆ ಕಾರಣವಾಗುವಂಥ ಒಣ ಪದವಿ ಪಡೆಯುವ ಬದಲು, ಕಂಪ್ಯೂಟರ್ ಶಿಕ್ಷಣ ಮುಂತಾದವನ್ನು ಮುಗಿಸಿ ಯಾವುದಾದರೂ ನೌಕರಿ ಹಿಡಿಯುವುದು ವಾಸಿ ಎಂಬುದೇ ಆ ವಿಚಾರ.

ಟೈಪಿಂಗಿಗೆ ಸಮನಾದ ಡಾಟಾ ಎಂಟ್ರಿ ಅಥವಾ ಕಣ್ಣು ಕಿವಿಗಳನ್ನು ಕೆಲವೇ ವರ್ಷಗಳಲ್ಲಿ ತಿಂದುಹಾಕುವಂಥ ಮೆಡಿಕಲ್ ಟ್ರಾನ್ಸ್‌ಕ್ರಿಪ್ಷನ್ ಹುದ್ದೆ ಹಿಡಿದರೆ ಕೈತುಂಬ ಸಂಬಳ ಬರುತ್ತದೆ. ಪದವಿ ಶಿಕ್ಷಣದಿಂದ ಏನು ಪ್ರಯೋಜನ ಎಂಬುದಾಗಿ ಯುವಜನರು ಭಾವಿಸತೊಡಗಿದ್ದಾರೆ.

ಬಿಪಿಓ (ಬಿಸಿನೆಸ್ ಪ್ರೋಸೆಸ್ ಔಟ್‌ಸೋರ್ಸಿಂಗ್) ಕಾಲ್‌ಸೆಂಟರ್, ಬ್ಯಾಕ್ ಆಫೀಸ್, ಇತರೆ ಔಟ್ ಸೋರ್ಸಿಂಗ್ ಫೆಸಿಲಿಟಿ ಮುಂತಾದ ನಾನಾ ಹೆಸರುಗಳ ಸೇವಾ ವ್ಯವಸ್ಥೆ ಮೂಲಕ ಕಂಪ್ಯೂಟರೀಕರಣವು ವಿಫುಲ ಉದ್ಯೋಗಾವಕಾಶಗಳನ್ನು ಐಟಿ ಕ್ಷೇತ್ರದಲ್ಲಿ ಸೃಷ್ಟಿಸಿಕೊಟ್ಟಿದೆ. ಒಳ್ಳೆಯ ಸಂಬಳ ಇಲ್ಲಿನ ಆಕರ್ಷಣೆ.

ಇದರ ಪರಿಣಾಮವಾಗಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ ಮುಂತಾದವನ್ನು ಕಲಿಯುವವರೇ ಇಲ್ಲ. ಕಾಲೇಜುಗಳಲ್ಲಿ ಹಲವು ನೂರು ವಿದ್ಯಾರ್ಥಿಗಳು ಇವನ್ನು ಕಲಿಯುತ್ತಿದ್ದ ಕಡೆ ಈಗ ಹತ್ತಾರು ವಿದ್ಯಾರ್ಥಿಗಳು ಮಾತ್ರ ಉಳಿದಂತಾಗಿದೆ. ಬಯೋಟೆಕ್ ಸಾಧ್ಯತೆಗಾಗಿ ಮೈಕ್ರೊ ಬಯಾಲಾಜಿಯನ್ನು ತೆಗೆದುಕೊಳ್ಳಲು ಯುವಜನರು ಸಿದ್ಧರಾಗುತ್ತಿದ್ದಾರೆಯೇ ಹೊರತು ಶುದ್ಧ ಜೀವವಿಜ್ಞಾನವನ್ನಲ್ಲ. ಗುಮಾಸ್ತರನ್ನು ಸೃಷ್ಟಿಸುವ ಬಿಕಾಂಗೆ ಅಧಿಕ ಪ್ರಾಶಸ್ತ್ಯ. ಸಾಹಿತ್ಯ ಪತ್ರಿಕೋದ್ಯಮ ಮುಂತಾದ ಕೋರ್ಸುಗಳನ್ನು ಆಯ್ದುಕೊಂಡು ಬಿಎ ಪದವಿಗಾಗಿ ಬರುವವರಲ್ಲಿ ಅತ್ಯಂತ ಕಡಿಮೆ ಅಂಕ ಪಡೆದ ಕಳಪೆಯವರೇ ಅಧಿಕ. ವಿಷಯಗಳನ್ನು ಆ ಸ್ವಂತ ಆಸಕ್ತಿಗಾಗಿ ಆಯ್ದುಕೊಳ್ಳುವವರು ಕಡಿಮೆ.

ಇಂಥ ಬೆಳವಣಿಗೆಯ ಫಲಿತವೇನು? ಸಂಬಳಕ್ಕಾಗಿ ಬಲಿಯಾಗುವ ಕೂಲಿಯಾಳುಗಳ ಸಂಖ್ಯೆ ಹೆಚ್ಚಾಗುತ್ತದೆ. ಮುಂದೆ ಉನ್ನತ ಶಿಕ್ಷಣ, ಅಂದರೆ ತಾಂತ್ರಿಕ ಶಿಕ್ಷಣದ ಹೊರತಾದ ಮಾಸ್ಟರ‍್ಸ್ ಪದವಿಯೇ ಮುಂತಾದವನ್ನು, ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇನ್ನು ವಿದೇಶಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗುವಂತೆ ಸಂಶೋಧನಾ ಸೌಲಭ್ಯಗಳನ್ನು ಸೃಷ್ಟಿಸಲು ಸಾಧ್ಯವಾಗುವುದಾದರೂ ಹೇಗೆ?

ಹೀಗೊಂದು ಕಾಲಕ್ಕೆ ಭಾರತದ ಶಿಕ್ಷಣ ರಂಗ ವಿರುದ್ಧ ಒಂದು ಆರೋಪವಿತ್ತು. ಇಲ್ಲಿ ಸಂಶೋಧನೆ ಏನಿದ್ದರೂ ಶುದ್ಧ ವಿಜ್ಞಾನ ಕುರಿತಂತೆ ನಡೆಯುತ್ತದೆ; ಲಾಭಕ್ಕೆ ಹಚ್ಚುವ ಆನ್ವಯಿಕ ವಿಜ್ಞಾನ ವಿಷಯಗಳ ಬಗೆಗೆ ಅನಾಸಕ್ತಿ ಎಂಬುದಾಗಿ. ಹತ್ತೇ ವರ್ಷದಲ್ಲಿ ಪರಿಸ್ಥಿತಿ ತಿರುವು ಮುರುವು ಆಗಿದೆ. ಉನ್ನತ ಶಿಕ್ಷಣ ಕುರಿತಂತೆ ಒಂದು ನೀತಿ ಎಂಬುದಿದೆಯೆ?

ಅಮೆರಿಕವು ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಿತು. ಅಂಥ ಸಾಧ್ಯತೆ ಇದ್ದರೂ ಭಾರತ ಇದೀಗ ನಿರ್ವಿಣ್ಣಗೊಳ್ಳುತ್ತಿದೆ. ಅದೇ ವಿಪರ್ಯಾಸ.

೧೭.೧೨.೨೦೦೩