ಬೆಣ್ಣೆ ಇಲ್ಲವಾದರೆ ಎಣ್ಣೆಯಾದರೂ ಆದೀತು. ಇದು ಬಡವರ ಅಂಬೋಣ. ಅಡಿಗೆ ಮಾಡುವಾಗ ಯಥೇಚ್ಛವಾಗಿ ಅಲ್ಲವಾದರೂ ಸೋಕಿಸುವುದಕ್ಕಾದರೂ ಸ್ವಲ್ಪ ಎಣ್ಣೆ ಬೇಕು. ಖಾದ್ಯ ತೈಲವನ್ನು ಅಡಿಗೆ ಎಣ್ಣೆಯೆಂದೇ ಕರೆಯುತ್ತಾರೆ. ಮನೆ ಖರ್ಚನ್ನು ಸರಿತೂಗಿಸುವಾಗ ಭಾರತೀಯ ಗೃಹಿಣಿ ಎಣ್ಣೆ ಖರೀದಿ ವೆಚ್ಚದತ್ತ ಸದಾ ಗಮನಹರಿಸುತ್ತಾಳೆ. ಮೂರು ನಾಲ್ಕು ವಾರಗಳಿಂದ ಈಚೆಗೆ ಜನರಿಗೆ ಮಳೆ ಬರುವ ಸಾಧ್ಯತೆ ಮನದಟ್ಟಾಯಿತು. ಅದರ ಫಲಿತವೆಂದರೆ ಅಡಿಗೆ ಎಣ್ಣೆ ಬೇಡಿಕೆ ತುಸು ಅಧಿಕವಾಯಿತು. ಒಳ್ಳೆಯ ದಿನಗಳು ಬರಲಿವೆ ಎಂದಾಗ ಬಡವರು ಎಣ್ಣೆಯನ್ನು ಸ್ವಲ್ಪ ಧಾರಾಳವಾಗಿ ಬಳಸುತ್ತಾರೆ.

ಭಾರತದಲ್ಲಿ ಅಡಿಗೆ ಎಣ್ಣೆ ತಲಾ ಬಳಕೆ ವರ್ಷಕ್ಕೆ ೧೦ ರಿಂದ ೧೧ ಕೆ.ಜಿ. ಮನೆಯಲ್ಲಿ  ಕರಿದ ಆಹಾರ ವಿಶೇಷವಾಗಿ ಬಳಸುವವರು ತಲಾ ಪ್ರಮಾಣಕ್ಕಿಂತ ಬಹಳ ಕಡಿಮೆ.

ಪ್ರತಿ ವರ್ಷ ನಾವು ೧೦೦ ಲಕ್ಷ ಟನ್ ಅಡಿಗೆ ಎಣ್ಣೆ ಬಳುಸ್ತೇತವೆ. ಅದರಲ್ಲಿ ಅರ್ಥದಷ್ಟು, ಕೆಲವು ವೇಳೆ ಅದಕ್ಕಿಂತ ಹೆಚ್ಚು, ಆಮದು ಸರಕು. ಸ್ವಲ್ಪ ಅಭಾವ ಕಂಡು ಬಂದರೂ ಬೆಲೆ ಸರ್ರನೆ ಏರುತ್ತದೆ. ಬೆಲೆ ಹೆಚ್ಚಾದರೂ ಪರವಾಗಿಲ್ಲ ಎನ್ನಬಹುದು. ಆದರೆ ಕಲಬೆರಕೆ ಇಲ್ಲದೆ ಶುದ್ಧ ಅಡಿಗೆ ಎಣ್ಣೆ ಸಿಗುವುದು ಕಷ್ಟ. ಅಗ್ಗದ ಎಣ್ಣೆಗಳನ್ನು ಬೆರಕೆ ಮಾಡುವ ಪಿಡುಗು ಬಹುಶಃ ನಮ್ಮ ದೇಶದಲ್ಲಿ ಇರುವಷ್ಟು ಇನ್ನೆಲ್ಲೂ ಇಲ್ಲ. ಉತ್ತರ ಭಾರತದಲ್ಲಿ ದ್ರವ ಎಣ್ಣೆಗಿಂತ ಅಧಿಕವಾಗಿ ಘನೀಕರಿಸಿದ ಜಿಡ್ಡು ಡಾಲ್ಡಾವನ್ನು ಬಳಸುತ್ತಾರೆ. (ಡಾಲ್ಡಾ ವಾಸ್ತವವಾಗಿ ಒಂದು ಬ್ರಾಂಡ್. ಆದರೆ ಅಡಿಗೆ ಸಾಧನ ಎನ್ನಲು ಡಾಲ್ಡಾ ಎಂದೇ ಹೇಳುತ್ತಾರೆ.)

ಅಡಿಗೆ ಸಾಧನದಲ್ಲಿ ನಾನಾ ಬಗೆಯ ಎಣ್ಣೆಗಳನ್ನು ಕಲಸಿರುತ್ತಾರೆ. ಚಿಲ್ಲರೆಯಾಗಿ ಅಳೆದು ತೂಗಿ ಮಾರುವ ಅಡಿಗೆ ಎಣ್ಣೆ ಶೇ ೧೦೦ ಕಡಲೆಕಾಯಿ ಎಣ್ಣೆ (ಶೇಂಗಾ ಎಣ್ಣೆ) ಅಥವಾ ಎಳ್ಳು ಎಣ್ಣೆ ಆಗಿ ಸಾಗುವುದೇ ಇಲ್ಲ. ಸೂರ್ಯಕಾಂತಿ ಎಣ್ಣೆ ಸಹಾ ಬೆರಕೆ ಆಗಿರುವುದುಂಟು. ಆಗ್ಗದ ಎಣ್ಣೆ ಯಾವುದಾದರೂ ಸಿಗದೆ ಇದ್ದಾಗ ಪಾಪಿಗಳು ಅಲ್ಪ ಪ್ರಮಾಣದಲ್ಲಿ ಬೇಧಿಕಾರಿಯಾದ ಹರಳೆಣ್ಣೆಯನ್ನೇ ಬೆರೆಸಲು ಮುಂದಾಗುತ್ತಾರೆ.  ಶುದ್ಧ ಎಣ್ಣೆ ಬೇಕಾದರೆ ಸ್ಯಾಚೆಗಳಲ್ಲಿ ಪ್ಯಾಕ್ ಮಾಡಿದ ಕಂಪೆನಿ ಬ್ರಾ ಂಡ್‌ನ ಎಣ್ಣೆಯನ್ನು  ಬಳಕೆದಾರ ಕೊಳ್ಳಬೇಕಾದ ಪರಿಸ್ಥಿತಿ ಈಗಿನದು. ಆದರೆ ಚಿಲ್ಲರೆ ತೂಕ ಅಳತೆ ಮಾರಾಟ ಎಣ್ಣೆಗಿಂತ ಶೇ ೩೦-೪೦ ರಷ್ಟು ದುಬಾರಿ. ಹೀಗಾಗಿ ಅಡಿಗೆ ಎಣ್ಣೆ ಹೊಂಚಿಕೊಳ್ಳುವುದು ಗೃಹಿಣಿ ಪಾಲಿಗೆ ಒಂದು ಸವಾಲು.

ಎಣ್ಣೆ ಚೆನ್ನಾಗಿಲ್ಲವಾದರೆ ಅಡಿಗೆಯಲ್ಲಿ ನಿರ್ದಿಷ್ಟ ರುಚಿ ತರಲು ಸಾಧ್ಯವಾಗುವುದಿಲ್ಲ. ಆಹಾರ ಸೇವನೆ ಎನ್ನುವುದು ರೂಢಿಯ ಪರಿಣಾಮ. ರುಚಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಮನಸ್ಸಿಗೆ ಹಿತ ಕಡಿಮೆ. ಆದ್ದರಿಂದ ಪ್ರತಿಯೊಬ್ಬ ಗೃಹಿಣಿಯೂ ತನಗೆ ಬೇಕಾದಂಥ ಎಣ್ಣೆ ಬೀಜದಿಂದ ಎಣ್ಣೆ ಪಡೆಯಲು ಹಾತೊರೆಯುತ್ತಾಳೆ. ಆದ್ದರಿಂದಲೇ ವಿವಿಧ ಬಗೆಯ ಎಣ್ಣೆ ತೆಗೆದು ಮಾರಾಟಕ್ಕೆ ಬಿಡುವ ಉದ್ಯಮವು ೬೦ ಸಾವಿರ ಕೋಟಿ ರೂಪಾಯಿ ವಾರ್ಷಿಕ ವಹಿವಾಟು ನಡೆಸುತ್ತದೆ. ಎಕ್ಸೈಜ್ ಹಾಗೂ ಕಸ್ಟಂಸ್ ಸುಂಕಗಳಿಂದ ಮಾತ್ರವೇ ಕೇಂದ್ರದ ಬೊಕ್ಕಸಕ್ಕೆ ೫,೫೦೦ ಕೋಟಿ ರೂಪಾಯಿಗೂ ಅಧಿಕ ಹಣಸಂದಾಯವಾಗುತ್ತದೆ.

ಗ್ರಾಮಗಳಲ್ಲಿ ಕೂಡಾ ಈಗ ದೇಶೀಯ ಗಾಣಗಲು ಇಲ್ಲ. ಉಷ್ಣ ಜಾಸ್ತಿಯಾಗಿದೆ ಎಂಬ ನೆಪ ಹೇಳಿ ತಲೆಗೆ ತಟ್ಟಿಕೊಳ್ಳಲು ಒಂದಿಷ್ಟು ಪುಕ್ಕಟೆ ಎಣ್ಣೆ ಕೊಡಿರೆಂದು ಕೇಳೋಣವೆಂದರೆ ಅಯ್ಯೋ ಎಂದು ಕರುಣೆ ತೋರಬಲ್ಲ ಗಾಣಿಗಿತ್ತಿಯರೇ ಇಲ್ಲ. ಏಕೆಂದರೆ ಗಾಣಗಳೇ ಇಲ್ಲ!ವಾಸ್ತವವಾಗಿ ಗಾಣದಿಂದ ಎಣ್ಣೆ ಬೀಜ ಅರೆದು ಶುದ್ಧ ಕಚ್ಚಾ ಎಣ್ಣೆಯನ್ನು ಬಳಸುವ ಪದ್ಧತಿಯೇ ಈಗ ಇಲ್ಲ. ಎಣ್ಣೆ ಉದ್ಯಮ ಘಟಕಗಳ ಮೂಲಕ ಶೇಂಗಾ, ಎಳ್ಳು, ಹತ್ತಿಬೀಜ, ತೆಂಗು, ಸಾಸುವೆ, ಹರಳು, ಕುರಾಸಾನಿ (ಕರ್ಡಿ), ಸೋಯಾ ಅವರೆ ಹಾಗೂ ಮೆಕ್ಕೆ ಜೋಳ (ಇವೆರಡೂ ವಿದೇಶದಲ್ಲಿ ಮಾತ್ರ) ಎಣ್ಣೆ ತೆಗೆಯಲು ಉಪಯೋಗಕ್ಕೆ ಬರುತ್ತಿವೆ. ಮಲೇಷ್ಯ, ಇಂಡೋನೇಷ್ಯಗಳಲ್ಲಿ ತಾಳೆ ಫಲದಿಂದ ಎಣ್ಣೆ ತೆಗೆಯುತ್ತಾರೆ.

ಕಚ್ಚಾ ಎಣ್ಣೆಯನ್ನು ಸಂಸ್ಕರಿಸದೆ ಬಳಸಲು ಸಾಧ್ಯವಿಲ್ಲ. ಶೇಂಗಾ, ಎಳ್ಳು, ಸೂರ್ಯಕಾಂತಿ ಎಣ್ಣೆ ತೆಗೆದು ಬಳಸುತ್ತಾರೆ. ಮುಖ್ಯವಾಗಿ ಅದರ ಅಸಲಿ ವಾಸನೆ ಮತ್ತು ಸ್ವಾದ ಮುಖ್ಯ. ಆದರೆ ಬಹುತೇಕ ಎಣ್ಣೆಗಳನ್ನು ಸಂಸ್ಕರಿಸಿಯೇ ಬಳಸಬೇಕು. ತೈಲ ಬೀಜವನ್ನು ಅರೆದ ಮೇಲೆ ರಾಸಾಯನಿಕವಾಗಿ ಸಂಸ್ಕರಿಸಿ ಅನುಕೂಲಕಾರಿ ಅಲ್ಲದ ಕೆಲವು ಅಂಶಗಳನ್ನು ತೆಗೆದುಹಾಕುತ್ತಾರೆ. ಬಣ್ಣ ಹೋಗುವಂತೆ ಮಾಡುತ್ತಾರೆ. ವಾಸನೆಯನ್ನು ಸಹಾ ತೆಗೆದುಹಾಕುತ್ತಾರೆ. ಆಗ ಉಳಿಯುವುದು ಶುದ್ಧ ಮೇಧಾಂಶ. ಸಂಸ್ಕರಿಸಿದ ಎಣ್ಣೆಯನ್ನೇ ರಿಪೈನ್ಡ್ ಆಯಿಲ್ ಎಂದು ಹೇಳುವುದು.

ಎಣ್ಣೆ ತೆಗೆಯುವ ಉದ್ಯಮಕ್ಕೆ ಸೇರಿದ ಇನ್ನೊಂದು ಚಟುವಟಿಕೆಯೂ ಉಂಟು. ಅದನ್ನೇ ಸಾಲ್ವೆಂಟ್ ಎಕ್ಸ್‌ಟ್ರಾಕ್ಷನ್ ಎನ್ನುವುದು. ಉದ್ಯಮದ ಈ ವಲಯದ ಭಾರತದಲ್ಲಿ ಸಾಕಷ್ಟು ಪ್ರಭಾವಶಾಲಿ. ಕಾಳನ್ನು ಜಜ್ಜಿ ಅರೆಯುವ ವಿಧಾನ ಇದರದು ಅಲ್ಲ. ಅಕ್ಕಿ ತೌಡು, ಎಣ್ಣೆ ಗಿರಣಿಯಲ್ಲಿ ಎಣ್ಣೆಯನ್ನು ತೆಗೆದು ಆದ ಮೇಲೆ ಉಳಿದಿರುವ ಹಿಂಡಿ, ಹಲವು ಬಗೆಯ ಅರಣ್ಯ ಉತ್ಪನ್ನಗಳನ್ನು ಮುಂತಾದುವುಗಳಿಂದ ಹಾಗೂ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬೆಳೆಯುವ ಒರಟು ತೈಲ ಬೀಜ ಮುಂತಾದುವನ್ನು ಭಟ್ಟಿ ಇಳಿಸುತ್ತಾರೆ. ಈ ಬಗೆಯ ತೈಲೋತ್ಪನ್ನಗಳು ಖಾದ್ಯ ತೈಲದ ರೀತಿ ಮಾತ್ರವಲ್ಲದೆ ಕೈಗಾರಿಕಾ ಉದ್ದೇಶಕ್ಕೂ ಲಭಿಸುತ್ತವೆ. ಅಡಿಗೆ ಸಾಧನ (ಡಾಲ್ಡಾ) ತಯಾರಿಸುವವರು ಅಗ್ಗ ಎನ್ನುವ ಕಾರಣಕ್ಕೆ ಇವನ್ನು ಬಳಸುತ್ತಾರೆ. ಆಮದು ತೈಲಗಳನ್ನು ಸಹಾ ಉಪಯೋಗಿಸುತ್ತಾರೆ. ಬರಿದೆ ಇಂಥ ಮೂಲಗಳಿಂದಲೇ ಅಡಿಗೆ ಸಾಧನ ತಯಾರಕರು ಕಚ್ಚಾ ಸಾಮಗ್ರಿ ಹವಣಿಸಿಕೊಂಡರೆ ಭಾರತದಲ್ಲಿ ತೈಲಬೀಜ ಬೆಳೆಯುವವರ ಹಿತಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಅಡಿಗೆ ಸಾಧನ ತಯಾರಿಸುವವರು ಶೇ. ೨೫ರಷ್ಟು ಆದರೂ ದೇಶೀಯ ತೈಲಬೀಜದಿಂದ ತೆಗೆದ ಎಣ್ಣೆಯನ್ನು ಬಳಸಲೇಬೇಕೆಂದು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.

ನಮ್ಮ ದೇಶದಲ್ಲಿ ಅಡಿಗೆ ಎಣ್ಣೆ ಸಿಗುವುದು ಕೊಂಚ ಕಡಿಮೆಯಾದರೂ ಪೇಟೆಯಲ್ಲಿ ಹಾಹಾಕಾರ ಏಳುತ್ತದೆ. ಬೆಲೆ ಸರ್ರನೇ ಏರುತ್ತದೆ. ಆದ್ದರಿಂದ ಸದಾ ಸರ್ಕಾರವು ಆಮದು ಸರಕು ಪೇಟೆಯನ್ನು ಸೇರುವಂತೆ ಮಾಡಿ ಸಮತೋಲ ಸಾಧಿಸುತ್ತದೆ. ಶೇ. ೫೦ ರಷ್ಟು ಆಮದಿನ ಮೇಲೆ ಆಧಾರ ಪಡುವಾಗ ಈ ಬಗೆಯ ಮುನ್ನೆಚ್ಚರಿಕೆ ತಪ್ಪುವಂತೆಯೇ ಇಲ್ಲ. ೧೯೮೦ರಲ್ಲಿ ಎಣ್ಣೆಬೀಜ ಉತ್ಪಾದನೆ ಹೆಚ್ಚಿಸುವ ದಿಸೆಯಲ್ಲಿ ತಂತ್ರಜ್ಞಾನ ಮಿಷನ್ ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ರೈತರಿಂದ ಸಣ್ಣ ಸಣ್ಣ ಪ್ರಮಾಣದಲ್ಲಿಯಾದರೂ ಸಂಗ್ರಹಿಸಿ ಖಾದ್ಯತೈಲ ಸ್ವಾವಲಂಬನೆ ಸಾಧಿಸಬೇಕು ಎನ್ನುವುದು ಇದರ ಉದ್ದೇಶ. ಹಾಲಿನ ಉತ್ಪಾದನೆ ಹೆಚ್ಚು ಮಾಡಿದ ರೀತಿಯಲ್ಲೇ ಈ ದಿಸೆಯಲ್ಲೂ ಶ್ರಮಿಸಬೇಕು ಎನ್ನುವ ಗುರಿ ಇತ್ತು. ಆದರೆ ಅದು ಫಲಕಾರಿ ಆಗಲಿಲ್ಲ. ೧೯೯೦ರಿಂದ ಈಚೆಗೆ ಆಮದು ರಪ್ತು ಚಟುವಟಿಕೆಯನ್ನು ಸುಧಾರಣೆಗೆ ಒಳಪಡಿಸಿದ ಮೇಲೆ ತೈಲರಂಗದ ಇಡೀ ಚಿತ್ರ ಬದಲಾಯಿತು. ಅಗ್ಗವಾಗಿ ಖಾದ್ಯತೈಲ ವಿದೇಶಿ ಮೂಲಗಳಿಂದ ಸಿಗುವಂತಾದರೆ ಸ್ವತಃ ದುಬಾರಿಯಾಗಿ ಎಣ್ಣಎಯನ್ನು ನಾವೇ ತಯಾರಿಸಿಕೊಳ್ಳಬೇಕೇಕೆ ಎಂಬ ವಿಚಾರಕ್ಕೆ ಪ್ರಾಧಾನ್ಯಸಿಕ್ಕಿತು. ವಾಸ್ತವವಾಗಿ ಭಾರತದಲ್ಲಿ ಎಣ್ಣೆ ಬೀಜ ತೆಗೆಯುವುದು ದುಬಾರಿ. ತೈಲಬೀಜ ಬೆಳೆ ಉತ್ಪಾದನಾ ವೆಚ್ಚ ಕಡಿಮೆಯಾಗುವಂತೆ ಮಾಡಲು ನಮ್ಮಲ್ಲಿ ಸಾಧ್ಯವೇ ಆಗಿಲ್ಲ. ಆದ್ದರಿಂದಲೇ ಆಮದಿಗೆ ಕುಮ್ಮಕ್ಕು.

ಪ್ರಪಂಚದಲ್ಲಿ ಅತಿ ಹೆಚ್ಚು ಖಾದ್ಯ ತೈಲ ಬಳಸುವ ರಾಷ್ಟ್ರ ಭಾರತವೇ. ಅದೇ ರೀತಿ ಹೆಚ್ಚು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರ ಕೂಡಾ ಭಾರತವೆಂಬ ಕೀರ್ತಿ ಸಂದಾಯವಾಗಿದೆ. ಆಹಾರಧಾನ್ಯ ನಂತರ ಅತಿ ಹೆಚ್ಚು ಮೌಲ್ಯದ ಕೃಷಿ ಉತ್ಪನ್ನ ತೈಲಬೀಜಗಳೇ ಸರಿ. ಆದರೂ ಅರ್ಧದಷ್ಟು ಆಮದು ನಮ್ಮದು.

ರಿಫನ್ಡ್ ಆಗದ ಕಚ್ಚಾ ತೈಲ ಆಮದೇ ಹೆಚ್ಚು. ಬಹುಪಾಲು ತಾಳೆ ಎಣ್ಣೆ ಆಮದಾಗುವುದು. ಅದು ಮುಖ್ಯವಾಗಿ ಮಲೇಷ್ಯದಿಂದ ಬರುತ್ತದೆ. ಇಂಡೋನೇಷ್ಯ ಸಹಾ ಕಚ್ಚಾ ತಾಳೆ ಎಣ್ಣೆ ಪೂರೈಸುವುದುಂಟು. ಅರ್ಜೆಂಟೈನಾ ಮತ್ತಿತರ ರಾಷ್ಟ್ರಗಳು ಸಹಾ ಭಾರತಕ್ಕೆ ತಮ್ಮ ಎಣ್ಣೆ ರಪ್ತು ಮಾಡುತ್ತವೆ. ಮಲೇಷ್ಯದಿಂದ ಬರುವುದೇ ಅತಿ ಹೆಚ್ಚು. ಭಾರತವೇನಾದರೂ ಅಲ್ಲಿಂದ ತಾಳೆ ಎಣ್ಣೆ ತರಿಸುವುದನ್ನು ನಿಲ್ಲಿಸಿದರೆ ಆ ರಾಷ್ಟ್ರದ ಆರ್ಥಿಕತೆಯೇ ಕುಸಿಯುತ್ತದೆ.

ಭಾರತ ಸರ್ಕಾರದ ಖಾದ್ಯತೈಲ ನೀತಿ ದಿನೇ ದಿನೇ ಆಮದುದಾರರ ಪರವೇ ವಾಲುತ್ತಿದೆ ಎಂಬ ಟೀಕೆ ಹೆಚ್ಚಾಗಿದೆ. ಅಡಿಗೆ ಎಣ್ಣೆ ಬೆಲೆ ಹೆಚ್ಚಾದರೆ ಕೃಷಿಕನಿಗೆ ಲಾಭ. ಅವನು ಬೆಳೆದ ತೈಲಬೀಜಕ್ಕೆ ಅಧಿಕ ಬೆಲೆ ಸಿಕ್ಕಿದರೆ ಹೆಚ್ಚು ಹೆಚ್ಚು ತೈಲಬೀಜ ಬೆಳೆಯಲು ಪ್ರೋತ್ಸಾಹ ಸಿಕ್ಕಿದಂತೆ ಆಗುತ್ತದೆ. ಆ ದಾರಿ ಹಿಡಿದರೆ ಬಳಕೆದಾರ ತೆರಬೇಕಾದ ಬೆಲೆ ಹೆಚ್ಚಾಗುತ್ತದೆ. ಆದರೆ ಆಮದು ಸುಲಭವಲ್ಲದೆ ಅಗ್ಗವೂ ಆದುದರಿಂದ ಹೊರರಾಷ್ಟ್ರಗಳಿಂದ ತರಿಸಿಕೊಳ್ಳುವುದೇ ಯುಕ್ತ ಎಂದು ಆದಾಗ ತೈಲ ಸಂಸ್ಕರಣಾ ರಂಗದ ಉದ್ಯಮಿಗಳು ಸಹಾ ಹೌದು ಹೌದು ಎಂದು ತಲೆದೂಗುತ್ತಾರೆ. ಏಕೆಂದರೆ ಕಚ್ಚಾ ತೈಲವು ದೇಶಿ ಮೂಲದ್ದು ಆಗಿದ್ದರೂ, ವಿದೇಶದಿಂದ ಬಂದಿದ್ದರೂ ಸಂಸ್ಕರಣಾ ಘಟಕಗಳು ಕೈತುಂಬಾ ಕೆಲಸ ಹೊಂದಿಯೇ ಇರುತ್ತವೆ.

ಇನ್ನು ತೈಲಬೀಜ ಬೆಳೆಯುವ ರೈತನ ವಿಚಾರ. ಅವನ ಹಿತ ಕಾಪಾಡಲು ಬಲಿಷ್ಟ ಲಾಬಿ ಭಾರತದಲ್ಲಿ ಇಲ್ಲ. ಸ್ವತಃ ರೈತನ ಪಾಲಿಗೂ ತೈಲಬೀಜ ಬೆಲೆ ತ್ರಾಸದಾಯಕ. ಬಹುತೇಕ ತೈಲ ಬೀಜ ಬೆಳೆ ಒಣ ಬೇಸಾಯದ ಫಲ. ಮಳೆ ಕೈಕೊಟ್ಟರೆ ಬೆಳೆ ಇಲ್ಲ.  ತೈಲ ಬೀಜ ಬಿತ್ತನೆ ದುಬಾರಿ. ಒಂದು ಹೆಕ್ಟೇರ್ ಬತ್ತ ಬಿತ್ತನೆಗೆ ಖರ್ಚು ಕಡಿಮೆ. ಅದೇ ಭೂಮಿಯಲ್ಲಿ ಶೇಂಗಾ ಬಿತ್ತುವುದೆಂದರೆ ಬಹಳ ದೊಡ್ಡ ಮೊತ್ತ ಹೊಂದಿಸಿಕೊಳ್ಳಬೇಕು. ಗುಜರಾತ್, ಆಂಧ್ರ ಮತ್ತು ಕರ್ನಾಟಕಗಳಲ್ಲಿ ಶೇಂಗಾ ಬೆಳೆ ತೆಗೆಯುವ ಯಾವುದೇ ರೈತನನ್ನು ಮಾತನಾಡಿಸಿದರೂ ಆತ ಸಂಕಷ್ಟದ ಸರಮಾಲೆ ವಿವರ ಬಿಚ್ಚುತ್ತಾನೆ. (ಬೇರೆ ಬೇರೆ ತೈಲ ಬೀಜಗಳ ಪ್ರಾಬಲ್ಯ ಜಾಸ್ತಿಯಾದಂತೆ ಈ ಮೂರು ರಾಜ್ಯಗಳಿಗೇ ತೊಂದರೆ ಆಗುತ್ತಿರುವುದು) ಶೇಂಗಾ ಎಂದರೆ ಸೂರ್ಯಕಾಂತಿಯ ರೀತಿ ಅಲ್ಲ. ನೆಲದಡಿ ಫಸಲು; ಹೆಗ್ಗಣ್ಣಗಳ ಕಾಟ. ಒಂದು ಕಡೆಯಿಂದ ಬಿತ್ತನೆ ಬೀಜವನ್ನು ತಿಂದು ಹಾಕುತ್ತದೆ. ಬೆಳೆದ ಬೆಳೆಗೂ ಅದರದೇ ಅಪಾಯ. ರೈತರು ಹೆUಣ್ಣ ಓಡಿಸಲು ಪಟಾಕಿ ಆಟಂಬಾಂಬ್ ಸಿಡಿಸುತ್ತಾರೆ.

ದಂಡಿಯಾಗಿ ನಾನಾ ಬಗೆ ತೈಲಬೀಜ ಸಿಗುವಾಗ, ತಾಳೆ ಎಣ್ಣೆ ಆಮದಾಗುವಾಗ, ಶೇಂಗಾ ತಾನೇ ಅನಿವಾರ್ಯವಾಗದು. ಈ ದೃಷ್ಟಿಯಿಂದ ಬೇಡಿಕೆ ಕುಸಿತ ಕಂಡ ರೈತರಲ್ಲಿ ಕರ್ನಾಟಕದವರೂ ಸೇರಿದ್ದಾರೆ.

ಮುಖ್ಯವಾಗಿ ತೈಲ ಪೂರೈಸುವ ಮಲೇಷ್ಯ ಇಂಡೋನೇಷ್ಯಗಳವರು ಮಾತ್ರವಲ್ಲದೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ತಮ್ಮ ಉತ್ಪನ್ನ ಪೂರೈಸಲು ಕಾತರಗೊಂಡಿವೆ. ಭಾರತದ ಬೃಹತ್ ಮಾರುಕಟ್ಟೆ ಮೇಲೆ ಅವರಿಗೆ ಕಣ್ಣು. ಪಾಶ್ಚಿಮಾತ್ಯರು ಸೋಯಾ ಅವರೆಯಿಂದ ತೆಗೆದ ಸೋಯಾ ಎಣ್ಣೆ ಪೂರೈಸಲು ಯತ್ನಿಸಿದ್ದಾರೆ. ಸೋಯಾ ಅವರೆ ಬೆಳೆಯನ್ನು ತೆಗೆಯುವಂತೆ ಮಧ್ಯ ಪ್ರದೇಶ ಮುಂತಾದ ಕಡೆ ಪ್ರೋತ್ಸಾಹ ಕೊಡಲಾಯಿತು. ಆದರೆ ಫಲಿಸಲಿಲ್ಲ. ಈಗ ಸೋಯಾ ಎಣ್ಣೆಯನ್ನು ಪ್ರಾಯೋಗಿಕವಾಗಿ ಮಾರಾಟ ಮಾಡುವ ಯತ್ನಗಳು ನಡೆದಿವೆ. ಸೋಯಾ ಅವರೆಯನ್ನು ಬೆಳೆಯುವುದೇನೂ ಭಾರೀ ಕಷ್ಟವಲ್ಲ. ಆದರೆ ಎಣ್ಣೆ ತೆಗೆಯುವಾಗ ಅದರ ಹಾನಿಕಾರಕ ಅಂಶಗಳನ್ನು ಬೇರ್ಪಡಿಸುವುದು ಕಷ್ಟ.

ಕಳೆದ ಮಾರ್ಚ್ ಅಂತ್ಯದ ಕೇಂದ್ರ ಬಜೆಟ್‌ನಲ್ಲಿ ರಿಫೈನ್ಡ್ ತೈಲಗಳ ಮೇಲಿನ ಕಸ್ಟಂಸ್ ಸುಂಕವನ್ನು ಶೇಕಡಾ ತೊಂಬತ್ಮೂರುವರೆಯಿಂದ (ಶೇ. ೯೩ ೧/೨) ಶೇ ೫೦ಕ್ಕೆ ಇಳಿಸಲಾಯಿತು.

ಅರ್ಥ ಸಚಿವ ಜಸವಂತ್ ಸಿಂಗ್ ಅವರೇನೋ ರಿಫೈನ್ಡ್ ತೈಲವು ಒಟ್ಟು ಆಮದಿನ ಶೇ ೩ ಮಾತ್ರ ಆಗಿರುವುದರಿಂದ ಅಪಾಯ ಹೆಚ್ಚಿಲ್ಲ ಎಂದು ಹೇಳಿದ್ದಾರೆ. ಆದರೆ ಖಾದ್ಯತೈಲವನ್ನು ಅಡಿಗೆ ಸಾಧನವನ್ನು ಚಿಲ್ಲರೆ ಪ್ರಮಾಣದಲ್ಲಿ ಪೊಟ್ಟಣಕ್ಕೆ ತುಂಬಿ ಮಾರುವ ವಿದೇಶಿ ಕಂಪನಿಗಳು ಭಾರತದಲ್ಲಿ ಒಂದಾದ ಮೇಲೊಂದರಂತೆ ಹುಟ್ಟಿಕೊಳ್ಳುತ್ತಿವೆ. ಇವು ಭಾರತದ ಸಣ್ಣ ಪುಟ್ಟ ತೈಲ ಕಂಪನಿಗಳನ್ನು ಖರೀದಿಸುತ್ತಿವೆ ಕೂಡಾ. ಈಚೆಗೆ ತೈಲ ಸಂಸ್ಕರಣಾ ಕ್ಷೇತ್ರದಲ್ಲಿ ಇವು ಬಂಡವಾಳ ಹೂಡವುದು ಹೆಚ್ಚಾಗಿದೆ. ಅಷ್ಟೇ ಅಲ್ಲ; ಚಿಲ್ಲರೆ ಎಣ್ಣೆ ಪೊಟ್ಟಣಗಳ ಮಾರಾಟದ ಮೇಲೆ ತೆರಿಗೆ ಹಾಕುವುದನ್ನು ಕೈಬಿಡಬೇಕು. ತೆರಿಗೆ ಸುಂಕ ಏನಿದ್ದರೂ ತೈಲ ಸಂಸ್ಕರಣೆ ವೇಳೆ ಹಾಕಬೇಕು ಎನ್ನುವುದು ಹೆಚ್ಚಾಗಿದೆ. ಕಚ್ಚಾ ತೈಲ ಪೂರೈಸುವ ಮಲೇಷ್ಯ ಈಚೆಗೆ ಅಡಿಗೆ ಸಾಧನ ಸರಬರಾಜು ಸಹಾ ಆರಂಭಿಸಿತು. ಇದರಿಂದ ಎಚ್ಚೆತ್ತು ಸರ್ಕಾರ ಅಡಿಗೆ ಸಾಧನದ ಮೇಲಿನ ಮೂಲ ಕಸ್ಟಂಸ್ ಸುಂಕ ಶೇ ೩೦ ಇದ್ದುದನ್ನು ಶೇ ೧೦೦ಕ್ಕೆ ಏರಿಸಿತು.

ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು, ವಿದೇಶಿ ಬ್ರ್ಯಾಂಡುಗಳು ಅಡಿಗೆ ಎಣ್ಣೆ ಚಿಲ್ಲರೆ ಮಾರುಕಟ್ಟೆ ಪ್ರವೇಶಿಸಿದರೆ ಬಳಕೆದಾರನ ಪಾಲಿಗೆ ಒಳ್ಳೆಯ ಪೊಟ್ಟಣಗಳಲ್ಲಿ ಎಣ್ಣೆ ಸಿಗುವಂತಾಗುತ್ತದೆ. ಬ್ರಾ ಂಡ್ ವೈವಿಧ್ಯ ಹೆಚ್ಚಾಗುತ್ತದೆ.

ಆದರೆ ಶೇಂಗಾ, ಸೂರ್ಯಕಾಂತಿ ಮುಂತಾದವುಗಳ ಮೂಲ ರುಚಿ ತಪ್ಪಿಹೋಗಲಿಕ್ಕೆ ಸಾಕು.

೦೯.೦೭.೨೦೦೩