ಉಡುಪು ಈಗ ಪರಮಾಯಿಷಿ. ಅಂದ ಚೆಂದಕ್ಕೆ, ಒನಪು ವಯ್ಯಾರಕ್ಕೆ ತಕ್ಕುದಾದ ಉಡುಪು ಫ್ಯಾಷನ್ ಹೌದು.

ಮನ ಸಮೀಪದ ಸಿಂಪಿಗ ಅಳತೆ ತೆಗೆದುಕೊಂಡು ಹೊಲಿದುಕೊಡುತ್ತಿದ್ದ ಉಡುಪು ಹಳೆಯದು. ಋತುಮಾನಕ್ಕೆ ತಕ್ಕಂತೆ ನವನವೀನ ಉಡುಪು ಬದಲಾಯಿಸುವುದು, ಅದಕ್ಕೆ ತಕ್ಕಂತೆ ನವನವೀನ ಉಡುಪು ಖರೀದಿಸಿ ಧರಿಸುವುದು, ಬಲ್ಲಿದರ ಹಾಗೂ ಬಡವರ ವಾಡಿಕೆ. ಮನಸೂರೆಗೊಳ್ಳುವಂಥ ಉಡುಪು ತಯಾರಿಸುವುದು ವಿಶ್ವಾದ್ಯಂತ ಒಂದು ದೊಡ್ಡ ಉದ್ಯಮ.

ಉಡುಪಿನಲ್ಲಿ ಬಟ್ಟೆ ಮೌಲ್ಯ ಕಡಿಮೆ; ಬದಲಿಗೆ ಬಟ್ಟೆಯ ವೈವಿಧ್ಯ ಮತ್ತು ಬದಲಿಸುತ್ತಾ ಹೋಗುವ ವಿನ್ಯಾಸ ಬಹಳ ಮುಖ್ಯ. ಉಡುಪಿನ ಬೆಲೆ ಹೆಚ್ಚುತ್ತಾ ಹೋಗುವುದು ಇದರಿಂದ.

ಉಡುಪನ್ನು ತಯಾರಿಸುವಾಗ ಫ್ಯಾಷನ್ ಧಾರಣೆ ಮತ್ತು ಕೆಲಸ ಮಾಡುವಾಗಿನ ಅಗತ್ಯಾನುಸಾರ ಬೇಡಿಕೆ ಎರಡೂ ಕೆಲಸ ಮಾಡುತ್ತದೆ. ಉಡುಪು ತಯಾರಿಸುವುದು ಇದೀಗ ರಫ್ತು ಪ್ರಧಾನ ಉದ್ಯಮ.

ಆಂಧ್ರದಲ್ಲಿ ಈಗಾಗಲೇ ಒಂದು ರಫ್ತು ಉಡುಪು ತಯಾರಿಸುವ ಘಟಕಗಳ ಒಂದು ‘ಉದ್ಯಾನ’ ರಚಿಸಿದ್ದಾರೆ; ನಮ್ಮಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಐ.ಟಿ. ಕ್ಷೇತ್ರಕ್ಕೆ ಬಹುಪಾಲು ಮೀಸಲಾದ ರಪ್ತು ಉದ್ಯಾನ ನಿರ್ಮಿಸಿರುವ ಹಾಗೆ!

ಆಂಧ್ರದವರು ಅಷ್ಟಕ್ಕೆ ಸೀಮಿತವಾಗಿಲ್ಲ, ಉಡುಪು ರಫ್ತು ಸಿಟಿಯೊಂದನ್ನು ನಿರ್ಮಿಸಲು ಹೊರಟಿದ್ದಾರೆ. ಆ ಬಗೆಯ ನಗರ ನಿರ್ಮಿಸುವ ಯೋಜನೆಯ ವೆಚ್ಚ ೩೦ ಕೋಟಿ ರೂಪಾಯಿ. ಅದರಲ್ಲಿ ಶೇಕಡಾ ೭೫ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಕೆಲವು ತಿಂಗಳಲ್ಲೇ ಯೋಜನೆಯನ್ನು ಪೂರೈಸುವುದು ಆಂಧ್ರದ ಗುರಿ.

ಹೈದರಾಬಾದ್ ಸಮೀಪದ ಗುಂಡ್ಲ ಪೋಚಂಪಲ್ಲಿ ಎಂಬ ಕಡೆ ನಿರ್ಮಾಣ ಆಗುತ್ತಿರುವ ಉಡುಪು ರಫ್ತು ನಗರದಲ್ಲಿ ಇರುವ ೧೨೧ ನಿವೇಶನಗಳನ್ನು ಕೊಳ್ಳಲು ಉದ್ಯಮಿಗಳಿಂದ ನೂಕು ನುಗ್ಗಲು. ನಿವೇಶನ ಸಿಗದೆ ಇರುವವರು ಇದೇ ಉದ್ದೇಶಕ್ಕೆ ತಮಗೆ ಬೇರೆ ಕಡೆ ನಿವೇಶನ ಕೊಡಬೇಕೆಂದು ವರಾತ ಹಚ್ಚಿದ್ದಾರೆ.

ಇಲ್ಲಿ ತಳವೂರಿ ಉದ್ಯಮ ನಡೆಸಲು ಮುಂದೆ ಬಂದವರೆಂದರೆ ದುಬೈ, ದೋಹ, ಮಸ್ಕಟ್ ಮುಂತಾದ ಕೊಲ್ಲಿ ರಾಷ್ಟ್ರಗಳ ಪ್ರಮುಖ ವ್ಯಾಪಾರ ಕೇಂದ್ರಗಳಿಂದ ಬಂದವರು. ದುಬೈ ಒಂದೇ ಕಡೆಯಿಂದ ೩೦ ರಷ್ಟು ಉದ್ಯಮಿಗಳು ಇಲ್ಲಿಗೆ ಬರುತ್ತಿದ್ದಾರೆ. ಹೊರಗಿನವರಿಗೆ ಅವಕಾಶಕಲ್ಪಿಸಿಕೊಡುತ್ತಿರುವುದಕ್ಕಾಗಿ ಸ್ಥಳೀಯರಿಂದ ವಿರೋಧ ಬಂದಿಲ್ಲ. ಅವರಿಗೂ ಶೇಕಡಾ ೧೦ರಷ್ಟು ನಿವೇಶನ ಸಿಕ್ಕಿದೆ. ಈ ಗುಂಡ್ಲುಪೋಚಂಪಲ್ಲಿ ವಾಸ್ತವವಾಗಿ ಶಂಷಾಬಾದ್ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲೇ ಇರುವುದರಿಂದ ಈ ಉಡುಪು ರಫ್ತು ನಗರಕ್ಕೆ ಶಂಷಾಬಾದ್ ನಗರ ಎಂದೇ ಹೇಸರಿಡುತ್ತಾರಂತೆ.

ಇದು ಆಂಧ್ರದ ಒಂದು ಯಶೋಗಾಥೆ. ಕರ್ನಾಟಕದ ಇನ್ನೊಂದು ನೆರೆ ರಾಜ್ಯವಾದ ತಮಿಳುನಾಡಿನಲ್ಲಿರುವ ತಿರುಪೂರು ಸಹಾ ಇಚೆಗೆ ಸುದ್ದಿಯಲ್ಲಿದೆ. ಹತ್ತಿ ಬಟ್ಟೆ, ಮುಖ್ಯವಾಗಿ ಹೊಸೈರಿ, ಈ ಊರಿಗೆ ಹೆಸರು ತಂದಿದೆ. ಹಳೆಯ ಕಾಲದಲ್ಲಿ ಖಾದಿ ಬಟ್ಟೆಗೆ ಹೆಸರಾಗಿತ್ತು, ಸ್ವಾತಂತ್ರ್ಯ ಹೋರಾಟಗಾರರು ತಿರುಪೂರು ಖಾದಿಯನ್ನು ಇಷ್ಟಪಟ್ಟು ಕೊಳ್ಳುತ್ತಿದ್ದರು. ಸುಮಾರು ೪೦ ವರ್ಷದಿಂದ ಇದು ಪ್ರವರ್ಧಮಾನಕ್ಕೆ ಬಂದಿದೆ. ಮಗ್ಗಗಳ ಜೊತೆ ಜೊತೆಗೇ ಹೆಣಿಗೆ (ಹೊಸೈರಿ) ಯಂತ್ರಗಳು ಕೆಲಸ ಮಾಡತೊಡಗಿದ್ದು ಅದರ ಅಭಿವೃದ್ಧಿಗೆ ಕಾರಣ.

ತಿರುಪೂರಿನಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಜನ ಸುಲಭವಾಗಿ ಸಿಗುತ್ತಾರೆ. ತಂತ್ರಜ್ಞಾನವನ್ನು ಅರಗಿಸಿಕೊಳ್ಳುವಲ್ಲಿ ಇಲ್ಲಿನ ಜನರು ಮತ್ತು ಉದ್ಯಮಿಗಳು ಯಶಸ್ವಿಯಾಗಿದ್ದಾರೆ. ಇವತ್ತು ಹೆಣಿಗೆ ಉಡುಪು ಎಂದರೆ ಒಂದು ನೆಟ್ ಬನಿಯನ್ ಮಾತ್ರವಲ್ಲ; ಮಕ್ಕಳ ಮತ್ತು ಮಹಿಳೆಯರ ಉಡುಪು ಮಾತ್ರವಲ್ಲ; ಟಿ-ಷರ್ಟ್‌ಗಳು ಇಲ್ಲಿ ವೈವಿಧ್ಯಮಯವಾಗಿ ತಯಾರಾಗುತ್ತವೆ. ವಿದೇಶಗಳ ಉಡುಪು ತಯಾರಕರು ಹತ್ತಿ ಬಟ್ಟೆಯನ್ನು ಬೇಸಿಗೆ ಉಡುಪಿಗಾಗ್ ದೊಡ್ಡ ಪ್ರಮಾಣದಲ್ಲಿ ಕೊಳ್ಳುತ್ತಾರೆ. ತಿರುಪೂರು ಉತ್ಪನ್ನಕ್ಕೆ ಬೇಡಿಕೆ ಬಹಳ. ವಿದೇಶಿ ಉದ್ಯಮಿಗಳು ಒಳ್ಳೆಯ ನೆಲೆಗಳಿಗಾಗಿ ತಡಕಾಡಿದಾಗ ಅವರಿಗೆ ತಮಿಳುನಾಡಿನ ತಿರುಪೂರು ಸಹಾ ಗೋಚರಕ್ಕೆ ಬಂದಿದೆ.

ಹೆಣಿಗೆ ಜವಳಿ ತಯಾರಿಕೆಗೆ ಹೆಸರಾದ ಇನ್ನೊಂದು ನಗರವೆಂದರೆ ಚಂಡಿಗಢ ಸಮೀಪದ ಲೂಧಿಯಾನ. ಆ ನಗರದ ಒಳಹೊಕ್ಕು ಓಡಾಡಿದರೆ ನಮ್ಮ ಬೆಂಗಳೂರಿನ ಅವಿನ್ಯೂ ರಸ್ತೆ, ಚಿಕ್ಕಪೇಟೆ ಒಳ ರಸ್ತೆಗಳಲ್ಲಿ ಮತ್ತು ಗಲ್ಲಿಗಳಲ್ಲಿ ಓಡಾಡಿದಂತೆ ಅನಿಸುತ್ತದೆ.

ಲೂಧಿಯಾನದಲ್ಲಿ ಉಣ್ಣೆಯ ಹೆಣಿಗೆ ಜವಳಿ ಉದ್ಯಮ ನೆಲೆಗೊಂಡಿದೆ. (೧೯೮೧ರಲ್ಲಿ  ನಾನು ೨೦೦ ರೂಪಾಯಿಗೆ ಕೊಂಡ ಸ್ವೆಟರ್‌ನ್ನು ಈಗಲೂ ಬಳಸುತ್ತಿದ್ದೇನೆ.)

ತಜ್ಞರು ಎರಡೂ ನಗರಗಳ ಅಭಿವೃದ್ಧಿ ಮತ್ತು ಭವಿಷ್ಯ ಕುರಿತಂತೆ ಅಧ್ಯಯನ ನಡೆಸಿದ್ದಾರೆ. ಲೂಧಿಯಾನ ವಾಸ್ತವವಾಗಿ ತಿರುಪೂರಿನಷ್ಟೇ, ಕೆಲವೊಂದು ವಿಷಯಗಳಲ್ಲಿ ತಿರಪೂರಿಗಿಂತ, ಹಳೆಯದು. ಉಣ್ಣೆ ಮತ್ತು ಆಕ್ರಿಲಿಕ್ (ಕೃತಕ ನೂಲು) ಬಳಸಿ ತಯಾರಿಸಿದ ಲೂಧಿಯಾನದ ಉಡುಗೆ ಐಟಂಗಳು ಭಾರತದ ಎಲ್ಲ ಪ್ರದೇಶಗಳ ಚಳಿಗಾಲದ ಒಟ್ಟು ಅಗತ್ಯದ ಶೇ. ೯೦ರಷ್ಟನ್ನು ಪೂರೈಸುತ್ತದೆ. ತಿರುಪೂರಿನ ಉತ್ಪನ್ನಗಳು ರಫ್ತು ಆಧಾರಿತ. ದೇಶದಿಂದ ರಫ್ತಾಗುವ ಹತ್ತಿ ಉಡುಗೆಯ ಶೇ. ೫೦ ಭಾಗ ದಕ್ಷಿಣ ಭಾರತದ ಕೊಡುಗೆ.

ತಿರುಪೂರಿನಲ್ಲಿ ರಫ್ತುದಾರರ ಸಂಘ ಬಹಳ ಚುರುಕಾಗಿದೆ. ಉದ್ಯಮವು ಕಳೆದ ೨೦ ವರ್ಷಗಳಲ್ಲಿ ವೇಗವಾಗಿ ಬೆಳೆದು ಲೂಧಿಯಾನವನ್ನು ಹಿಂದಕ್ಕೆ ಹಾಕಿರುವುದಕ್ಕೆ ಈ ಸಂಘದ ನಾಯಕತ್ವ ಮುಖ್ಯ ಕಾರಣ. ೨೦೦೨ರಲ್ಲಿ ಲೂಧಿಯಾನ ರಫ್ತಿನ ಐದೂವರೆ ಪಟ್ಟು ಉತ್ಪನ್ನವನ್ನು ತಿರುಪೂರು ರಫ್ತು ಮಾಡಿತ್ತು. ಹತ್ತಿ ಉಡುಪು ಅಗ್ಗ. ತಿರುಪೂರಿನಿಂದ ರಫ್ತಾದ ತಲಾ ಉಡುಪು ತಂದುಕೊಟ್ಟ ಹಣ ೧.೯೫ ಡಾಲರ್ (ರೂ. ೯೨) ಮಾತ್ರ. ಉಣ್ಣೆ ಉಡುಪು ಹತ್ತಿ ಉಡುಪಿಗಿಂತ ದುಬಾರಿ. ರಫ್ತಿನಿಂದ ಸಂದ ತಲಾ ಉಡುಪು ಸಂದಾಯ ಆಗಿದ್ದು ೪.೬೩ ಡಾಲರ್ (ರೂ. ೨೨೦) ಹೀಗಿದ್ದೂ ಒಟ್ಟಾರೆ ರಫ್ತಿನ ಮೇಲುಗೈ ವಿಚಾರ ತಿರುಪೂರಿನದ್ದೇ.

ಲೂಧಿಯಾನದಲ್ಲಿ ಉಡುಪು ತಯಾರಿಸುವ ೧೦ ಸಾವಿರ ಘಟಕಗಳಿವೆ. ಪ್ರತಿ ವರ್ಷ ೫೦೦೦ ಕೋಟಿ ರೂಪಾಯಿಗಳ ಉತ್ಪನ್ನ ತಯಾರಾಗುತ್ತದೆ. ಅದೇ ವೇಳೆ ತಿರುಪೂರಿನಲ್ಲಿ ೪ ಸಾವಿರ ಘಟಕಗಳಿವೆ. ಪ್ರತಿ ವರ್ಷ ೬೫೦೦ ಕೋಟಿ ರೂಪಾಯಿಗಳ ಉತ್ಪಾದನೆ ನಡೆದಿದೆ.

ಇಷ್ಟಾದರೂ ತಿರುಪೂರು ಬಹಳವಾಗಿ ಅಭಿವೃದ್ಧಿಗೊಂಡ ನಗರವೇನಲ್ಲ. ನೀರಿನ ಕೊರತೆ ಬಹಳಷ್ಟಿದೆ. ರಸ್ತೆಗಳು ಎಂಬುವು ನಾಮಮಾತ್ರ. ವಿದ್ಯುತ್ ಅಭಾವವನ್ನು ಇಲ್ಲಿನ ಜನ ಸಹಿಸಿಕೊಂಡಿದ್ದಾರೆ.  ಇಷ್ಟಾದರೂ ತಂತ್ರಜ್ಞಾನವನ್ನು ಅರಗಿಸಿಕೊಂಡು ದಾಪುಗಾಲು ಹಾಕಿದ್ದಾರೆ. ವಿದೇಶಿ ಉದ್ಯಮಿಗಳು ಆಂಧ್ರಕ್ಕೆ ಹೇಗೆ ಲಗ್ಗೆ ಹಾಕಿದ್ದಾರೋ ಅದೇ ರೀತಿ ತಮಿಳುನಾಡಿನ ತಿರುಪೂರಿಗೂ ಲಗ್ಗೆ ಹಾಕಿದ್ದಾರೆ.

ಇವತ್ತು ಈ ಸುದ್ದಿ. ನಾಳೆ ತಮಿಳುನಾಡಿನ ಈರೋಡ್‌ನ ಕೈಮಗ್ಗ ಉತ್ಪನ್ನ ಕೇಂದ್ರಕ್ಕೂ ಇದೇ ಬಗೆಯ ದೆಸೆ ಕುದುರಲಿಕ್ಕೆ ಸಾಕು. ಇಂಥ ಕೇಂದ್ರಗಳಲ್ಲೆಲ್ಲ ಮಗ್ಗಗಳು ಮತ್ತು ಯಂತ್ರಗಳು ಏಕೀಭವಿಸುತ್ತವೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿದಷ್ಟೂ ಇಂಥ ಕೇಂದ್ರಗಳು ವಿಜೃಂಭಿಸುತ್ತವೆ.

ಕರ್ನಾಟಕದಲ್ಲೂ ಸಣ್ಣ ಮತ್ತು ಅತಿ ಸಣ್ಣ ಘಟಕಗಳು ಒಂದೇ ಕಡೆ ಗುಂಪುಗೂಡಿ ಕೆಲಸ ಮಾಡುತ್ತಿದ್ದರೆ ಅಲ್ಲೆಲ್ಲ ರಫ್ತು ಕೇಂದ್ರಗಳು ಅಭಿವೃದ್ದಿಪಡಿಸಲು ಶಕ್ಯವಿದೆ.

ಆಂಧ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವಂಥದೇ ಉಡುಪು ರಫ್ತು ಪಾರ್ಕ್ ಸ್ಥಾಪಿಸುವುದಾಗಿ ಜನರವಿಯಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿತು. ದೊಡ್ಡಬಳ್ಳಾಪುರದಲ್ಲಿ ಉಡುಪು ತಯಾರಿಕಾ ನಗರ ತಲೆಯೆತ್ತುವುದಾಗಿ ಸಹಾ ಹೇಳಿಕೆ ಬಂದಿತು. ಅಲ್ಲಿಗೆ ಮುಗಿಯಿತು. ಅದೇ ಒಂಬತ್ತು ತಿಂಗಳಲ್ಲಿ ಆಂಧ್ರಕ್ಕೆ ಸಾಧ್ಯವಾಗಿದ್ದು ಕರ್ನಾಟಕಕ್ಕೆ ಸಾಧ್ಯವಾಗುವುದಿಲ್ಲ ಏಕೆ?

ಬೆಂಗಳೂರು ನಗರದ ಒಳಗೇ ಒಟ್ಟಿಗೆ ಬೆಳೆದು ನಿಂತ ಸಣ್ಣ ಸಣ್ಣ ವಿದ್ಯುತ್ ಮಗ್ಗ ಘಟಕಗಳಿವೆ. ರಫ್ತು ಉದ್ದೇಶಕ್ಕೆಂದು ಜವಳಿಯನ್ನು ‘ಸಪ್ಪೆ’ ರೂಪದಲ್ಲಿ ನೇಯ್ದು ನೇಯ್ದು ಹಾಕುವ ವಿದ್ಯುತ್ ಮಗ್ಗಳು ಕಬ್ಬನ್ ಪೇಟೆ ಸುತ್ತಮುತ್ತ ಇವೆ. ಆದರೆ ಆ ಉತ್ಪನ್ನವೆಲ್ಲ ಮುಂಬೈ ಮತ್ತಿತರ ಕೇಂದ್ರಗಳಿಗೆ ರವಾನೆ ಆಗುತ್ತದೆ. ಥಾನು ಥಾನು ಕಚ್ಚಾ ರೂಪದಲ್ಲಿ ತಯಾರಾದ ರೇಷ್ಮೆ ಬಟ್ಟೆ ಅಲ್ಲಿ ಸಂಸ್ಕರಣೆಗೊಳ್ಳುತ್ತದೆ. ರಫ್ತುದಾರರು (ಅಲ್ಲಿನವರು) ಲಾಭ ಮಾಡಿಕೊಳ್ಳುತ್ತಾರೆ. ಇಲ್ಲಿನ ವಿದ್ಯುತ್ ಮಗ್ಗದವರು ಬರಿದೆ ಕೂಲಿಕಾರರಾಗಿ ಪರಿಣಮಿಸುತ್ತಿದ್ದಾರೆ. ನಂಬರ್ ಒನ್ ರೇಷ್ಮೆ ಬೆಳೆ ರಾಜ್ಯವಾದ ಕರ್ನಾಟಕದಲ್ಲಿ ಈ ಪರಿಸ್ಥಿತಿ.

ಕರ್ನಾಟಕದ ನೇಕಾರರು ತಮ್ಮ ರಾಜ್ಯದ ರೇಷ್ಮೆ ಬೆಲೆಗಾರರ ವಿರುದ್ಧವಾಗಿಯೇ ನಿಲ್ಲುತ್ತಾರೆ. ಬೆಳೆಗಾರರು ಚೀನಾ ರೇಷ್ಮೆಯಿಂದಾಗಿ ತಮಗೆ ಧಕ್ಕೆಯಾಗುತ್ತಿದೆ ಎಂದು ಬೊಬ್ಬೆ ಇಟ್ಟರೆ, ನೇಕಾರರು ಚೀನಾ ರೇಷ್ಮೆ ಪರವಾಗಿ ಹೋರಾಟ ಮಾಡುತ್ತಾರೆ. ರಫ್ತು ಸರಕು ತಯಾರಿಸುವುದಕ್ಕಾಗಿ ಅಲ್ಲ; ರಫ್ತುದಾರ ಮುಂಬೈ ವರ್ತಕರಿಗೆ ಕಚ್ಚಾ ಸಾಮಗ್ರಿ ತಯಾರಿಸುವ ಸಲುವಾಗಿ. ಇನ್ನು ತಿರುಪೂರಿನ ಯಶೋಗಾಥೆ ಇಲ್ಲಿ ಸಹಾ ಕಾಣಿಸಲು ಹೇಗೆ ಸಾಧ್ಯ?

ಕರ್ನಾಟಕದಲ್ಲಿ ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮವೇ ಒಂದಿದೆ. ವಿದ್ಯುತ್ ಮಗ್ಗ ಸಂಕೀರ್ಣಗಳನ್ನೇ ಸ್ಥಾಪಿಸುವುದಾಗಿ ಅದರ ಅಧ್ಯಕ್ಷರು ಫೆಬ್ರವರಿಯಲ್ಲಿ ಪ್ರಕಟಿಸಿದರು. ಈ ಮಗ್ಗಗಳ ಆಧುನೀಕರಣಕ್ಕೆ ಸಬ್ಸಿಡಿ ಕೊಡುವುದಾಗಿಯೂ, ತರಪೇತಿಗೆ ಶುಲ್ಕ, ನೆರವು ಕೊಡುವುದಾಗಿಯೂ ಹೇಳಿದರು. ಅಷ್ಟಕ್ಕೆ ಅಭಿವೃದ್ದಿ ಕಾರ್ಯ ನಿಂತಿತು.

ರೇಷ್ಮೆ ಜವಳಿ ಉತ್ಪಾದನೆಯು ನೇಕಾರರ ‘ಸಪ್ಪೆ’ ಬಟ್ಟೆಗೆ ಮಾತ್ರ ಸೀಮಿತಗೊಂಡಿಲ್ಲ. ರೇಷ್ಮೆ ಬಿಳಿ ಬಟ್ಟೆ ಮೇಲೆ ಸುಂದರ ಚಿತ್ತಾರ ಮುದ್ರಿಸಿ, ಸೀರೆ ತಯಾರು ಮಾಡುವ ಬಹಳ ಒಳ್ಳೆಯ ಘಟಕಗಳಿವೆ. ಅವನ್ನು ಸುಂದರ ರಫ್ತು ಉತ್ಪನ್ನಗಳ ತಯಾರಿಕೆಗೆ ಬಳಸಿಕೊಳ್ಳುವ ಯತ್ನಗಳು ನಡೆದಂತೆ ಕಾಣುವುದಿಲ್ಲ. ಅದಕ್ಕೂ ವಿದೇಶಿ ಉದ್ಯಮಗಳ ಕಣ್ಣು ಬೀಳಬೇಕು ಮಾತ್ರವೇನೋ!

ಇದೇ ವರ್ಷದ ಮೇ ತಿಂಗಳಲ್ಲಿ ರಾಜ್ಯದ ದೊಡ್ಡ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಖಾತೆ ಸಚಿವರಾದ ಆರ್.ವಿ. ದೇಶಪಾಂಡೆ ಅವರು ಕೇಂದ್ರದ ಧೋರಣೆ ವಿರುದ್ಧ ದೂರಿದರು.

ರಫ್ತು ಅಭಿವೃದ್ಧಿ ಪಡಿಸುವುದಕ್ಕೆ ರಾಜ್ಯಗಳಿಗೆ ಮೂಲ ಸೌಲಭ್ಯಗಳ ನೆರವು ನೀಡುವ ‘ಅಸೈಡ್’ ಕಾರ್ಯಕ್ರಮ ಲಾಭ ರಾಜ್ಯಕ್ಕೆ ಸಿಗದಂತೆ ಮಾಡುವಲ್ಲಿ ಕೇಂದ್ರದ ಅಧಿಕಾರಶಾಹಿ ಆಸಕ್ತಿ ವಹಿಸಿದೆ. ರಾಜ್ಯ ಈಗಾಗಲೇ ಐ.ಟಿ. ರಫ್ತಿನಲ್ಲಿ ಶೇ. ೩೫ ಪಾಲು ಹೊಂದಿರುವುದರಿಂದ ಇತರ ಬಗೆಯ ರಫ್ತಿನ ಲಾಭ ಅದರ ಪಾಲಿಗೆ ಅಗತ್ಯವಿಲ್ಲ ಎಂದು ಆ ಯೋಜನೆ ವ್ಯಾಪ್ತಿಯಿಂದ ಕರ್ನಾಟಕವನ್ನು ಹೊರಗಟ್ಟಿದೆ ಎಂಬುದು ಅವರ ಆಕ್ಷೇಪಣೆ. ಕೇಂದ್ರದ ‘ಬಾಬು’ಗಳ ವಿರುದ್ಧ ಕೇಂದ್ರದ ಸಚಿವರಿಗೆ ತಾವು ದೂರುವುದಾಗಿ ಅವರು ಹೇಳಿದರು. ಕೇಂದ್ರದ ಅಧಿಕಾರಶಾಹಿ ಬಾಬುಗಳನ್ನು ನಾವು ಎದುರಿಸಲಾರೆವು. ನಾವೆಲ್ಲಾ ಉತ್ಸಾಹದಲ್ಲಿ ಹಠ ಸಾಧಿಸುವಲ್ಲಿ ಚಂದ್ರಬಾಬು ನಾಯ್ಡುಗಳಾಗುವುದಿಲ್ಲ ಎಂಬುದು ದಿಟ.

೨೦೦೫ ಜನವರಿ ಒಂದರಿಂದ ವಿಶ್ವದ ಬಲಿಷ್ಟ ರಾಷ್ಟ್ರಗಳು ರೂಪಿಸಿ ಜಾರಿಯಲ್ಲಿ ಇಟ್ಟಿರುವ ಜವಳಿ ರಫ್ತು ಕೋಟಾ ನಿಗದಿ ಮಾಡುವ ಬಹುಪಕ್ಷೀಯ ಒಪ್ಪಂದ ಕೊನೆಗೊಳ್ಳಲಿದೆ. ಅದರ ಲಾಭ ಪಡೆಯಲಾದರೂ ದೊಡ್ಡಬಳ್ಳಾಪುರವು ಕರ್ನಾಟಕದ ಶಂಷಾಬಾದ್ ಆಗುವಂತಾಗಲಿ.

ಅಧಿಕಾರಿ ಬಾಬುಗಳನ್ನು ದೂರುತ್ತಾ ಕೂರುವುದರಲ್ಲಿ ಅರ್ಥವಿಲ್ಲ.

೨೯.೧೦.೨೦೦೩