‘ತೇಪೆ ಹಚ್ಚುವ ಕೆಲಸ ಬೇಡ’ – ನಿತ್ಯ ವಾಡಿಕೆಯ ಈ ನುಡಿಗಟ್ಟು ಕೇಂದ್ರ ಅರ್ಥ ಸಚಿವ ಜಸವಂತ ಸಿಂಗ್ ಅವರ ಬಾಯಿಂದ ಬಂದಿತು. ‘ವ್ಯಾಟ್’ ನ ದೆಸೆ – ದಿಕ್ಕೇ ಬದಲಾಯಿತು, ಈ ವರ್ಷದ ಮಟ್ಟಿಗೆ.

ಅರ್ಥ ಸಚಿವರಾದವರಿಗೆ ತೇಪೆ ಹಚ್ಚುವುದೇನೂ ಹೊಸದು ಎನಿಸುವುದಿಲ್ಲ. ವಾಸ್ತವವಾಗಿ ಸಂಪನ್ಮೂಲ ಸಾಕಾಗದೇ ಯಾರಿಗೆ ಎಷ್ಟನ್ನು, ಹೇಗೆ ಹಂಚುವುದೆಂದು ದಿಕ್ಕು ಕಾಣದೆ ಹೆಣಗಾಡುವಾಗ ಯಾವುದೇ ಅರ್ಥ ಸಚಿವರು ಮಾಡುವುದು ತೇಪೆ ಹಚ್ಚುವ ಕೆಲಸವನ್ನು ಮಾತ್ರವೇ ಸರಿ.

ಆದರೆ ಜಸವಂತ ಸಿಂಗ್ ವಿಚಾರ ಬೇರೆ. ಯಾವುದೇ ವಿಷಯದಲ್ಲಿ ಖಚಿತ ನಿಲುವನ್ನು ತಳೆಯುತ್ತಾರೆ. ಅವರು ಮನಸ್ಸು ಬದಲಿಸುವಂತೆ ಮಾಡುವುದು ಸುಲಭವಲ್ಲ.

‘ವ್ಯಾಟ್’ ವಾಣಿಜ್ಯ ತೆರಿಗೆ ಪದ್ಧತಿಯನ್ನು ಜಾರಿಗೆ ತರಬೇಕೆನ್ನುವಾಗ ರಾಜ್ಯಗಳು ವರ್ಷಗಳ ಪರ್ಯಂತ ನಡೆಸಿಕೊಂಡು ಬಂದ ರಗಳೆಯನ್ನು ನೋಡುತ್ತಾ ಬಂದಿದ್ದರು. ಕೆಲವು ರಾಜ್ಯಗಳು; ಅವುಗಳಲ್ಲಿ ಕರ್ನಾಟಕವೂ ಸೇರಿದೆ; ವ್ಯಾಟ್ ಜಾರಿಗೆ ಉತ್ಸಾಹ ತೋರಿಸಿದುವು. ಸಿದ್ಧತೆಗಳನ್ನೂ ಮಾಡಿಕೊಂಡವು. ಆದರೆ ಎಲ್ಲ ರಾಜ್ಯಗಳೂ ಏಕೀಭವಿಸಲಿಲ್ಲ. ವಾಸ್ತವವಾಗಿ ಎಲ್ಲ ರಾಜ್ಯಗಳೂ ಏಕರೂಪ ಹಾಗೂ ಸಮಾನ ತೆರಿಗೆಯನ್ನು ವ್ಯಾಟ್ ಪದ್ಧತಿ ಪ್ರಕಾರ ಜಾರಿಗೆ ತರಬೇಕು ಎನ್ನುವುದು ಒಪ್ಪುವಂತೆ ಮಾಡಲು ಕೇಂದ್ರ ಸರ್ಕಾರವೇ ಭಾರೀ ಹೆಣಗಿತ್ತು. ಮೇಲಿಂದ ಮೇಲೆ ರಾಜ್ಯಗಳ ಅರ್ಥ ಸಚಿವರನ್ನು ಗುಡ್ಡೆ ಹಾಕಿ ಸಭೆಗಳನ್ನು ನಡೆಸಿತ್ತು. ನಿರ್ಧಾರವನ್ನು ಹೇರುವಂತೆ ಆಗಬಾರದೆಂದೂ, ರಾಜ್ಯ ರಾಜ್ಯಗಳ ನಡುವೆಯೇ ಸಾಮರಸ್ಯ ಮೂಡಿ ವ್ಯಾಟ್ ಎಂಬುದು ಸರ್ವತ್ರ ಅಂಗೀತೃತವಾಗಬೇಕೆಂದೂ ಕೇಂದ್ರ ಅಪೇಕ್ಷಿಸಿತು. ಈ ವಿಷಯ ಕುರಿತ ಆಯ್ದ ರಾಜ್ಯಗಳ ಅರ್ಥ ಸಚಿವರಿಂದಾದ ಉನ್ನತಾಧಿಕಾರ ಸಮಿತಿಯೊಂದನ್ನು ಸಹಾ ರಚಿಸಿತು.

ರಾಜ್ಯ ಅರ್ಥ ಸಚಿವರೆಲ್ಲ ಸೇರಿ ಮತ್ತೆ ಮತ್ತೆ ಚರ್ಚೆ ಮಾಡಿದಾಗ, ಕೇಂದ್ರ ಸರ್ಕಾರ ಸ್ವತಃ ವಿಧಿಸುವ ತೆರಿಗೆಗಳನ್ನು ಹಾಕೆಯೇ ಇರಿಸಿಕೊಂಡು ರಾಷ್ಟ್ರಾದ್ಯಂತ ರಾಜ್ಯಗಳು  ಅನುಸರಿಸಬೇಕಾದ ವ್ಯಾಟ್ ಪದ್ಧತಿಯನ್ನು ಜಾರಿಗೆ ತರಬೇಕೇ? ಕೇಂದ್ರ  ಸರ್ಕಾರ ತನ್ನ ವಾಣಿಜ್ಯ ತೆರಿಗೆಗಳನ್ನು ಸಹಾ ಇದೇ ವ್ಯವಸ್ಥೆಗೆ ಬಿಟ್ಟುಕೊಳ್ಳಲೇ? ಕೇಂದ್ರ ಸರ್ಕಾರ ಕೆಲವು ಸರಕುಗಳ ಮೇಲೆ ಜಾರಿ ಇರಿಸಿರುವ ಪ್ರವೇಶ ತೆರಿಗೆ ಪಾಡೇನು? ಎಂಬ ಪ್ರಶ್ನೆಗಳೆಲ್ಲ ಎದ್ದವು.

ಆ ಪ್ರವೇಶ ತೆರಿಗೆಯನ್ನು ಸಹ ಹಿಂದಿನ ಆಕ್ಟ್ರಾಯಿ ತೆರಿಗೆ ಬದಲಿಗೆಜಾರಿ ಮಾಡಿದ್ದು, ಪ್ರವೇಶ ತೆರಿಗೆ ಬಾಬಿನಿಂದ ಆಕ್ಟ್ರಾಯಿ ಬದಲಿಗೆ ಸಂಪನ್ಮೂಲ ತುಂಬಿಕೊಡುವ ವ್ಯವಸ್ಥೆ ಜಾರಿಗೆ ಬಂತಾದರೂ ರಾಜ್ಯಗಳಿಗೆ ತೃಪ್ತಿಯಾಗಲಿಲ್ಲ. ಏಕೆಂದರೆ ಪ್ರವೇಶ ತೆರಿಗೆಯಲ್ಲಿ ರಾಜ್ಯದ ಪಾಲು ಎಂಬುದಾಗಿ  ಸಿಗುವ ಹಣವು ಆಕ್ಟ್ರಾಯಿ ಮೂಲಕ ಸಂಗ್ರಹವಾಗುತ್ತಿದ್ದ ಹಣಕ್ಕೆ ಸಮನಾಗುತ್ತಿಲ್ಲ ಎಂಬುದು ರಾಜ್ಯಗಳ ದೂರು. ರಾಜ್ಯಗಳ ಬಳಿಯೂ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಲು ಸಾಕಷ್ಟು ಹಣ ಇರುವುದಿಲ್ಲ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲ ಕೊರತೆಗೆ ಗುರಿಯಾಗಿ ಸೊರಗುತ್ತಿವೆ.

ಇದು ಪೂರ್ವಾನುಭವ. ಕೇಂದ್ರೀಕೃತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ ಎನ್ನುವಾಗಲೆಲ್ಲರಾಜ್ಯಗಳು ಹಿಂಜರಿಯುತ್ತವೆ. ಕೇಂದ್ರ ಬೊಕ್ಕಸದಿಂದ ತಮಗೆ ಸಲ್ಲಬೇಕಾದ ಪಾಲು ಪೂರ್ತಿಯಾಗಿ ಸಲ್ಲುವುದಿಲ್ಲ ಎಂಬುದೇ ರಾಜ್ಯಗಳ ದೂರು. ಆಕ್ಟ್ರಾಯಿ ಬದಲು ಪ್ರವೇಶ ತೆರಿಗೆ ಎಂದು ಮಾರ್ಪಾಡು ಮಾಡಿದಾಗ ಆಗಿದ್ದು ಇದೀಗ ಒಂದು ಪೂರ್ವ ನಿದರ್ಶನ ಮಾತ್ರ.

ವ್ಯಾಟ್ ಪದ್ಧತಿಯನ್ನು ಜಾರಿಗೆ ತಂದಾಗ ಶೇಕಡಾ ನಾಲ್ಕರಷ್ಟು ಕೇಂದ್ರ ವಾಣಿಜ್ಯ ತೆರಿಗೆ ಹೇರಿಕೆ ಕೈಬಿಡಬೇಕಾಗುತ್ತದೆ. ಆಗ ಮಾತ್ರವೇ ವಹಿವಾಟುದಾರರು ‘ಸಿ’ ಫಾರಂ ನೀಡಿಕೆ ಕೈಬಿಡಬಹುದು. ‘ಸಿ’ ಫಾರಂ ಮೂಲಕ ಅಂತರ್‌ರಾಜ್ಯ ವಹಿವಾಟೆಂದು ಘೋಷಿಸಿದರೆ ಮಾತ್ರ ಕೇಂದ್ರ ವಾಣಿಜ್ಯ ತೆರಿಗೆಯನ್ನು ಶ ೪ರ ದರದಲ್ಲಿ ಮಾತ್ರ ಪಾವತಿ ಮಾಡಿ ವ್ಯವಹಾರ ಮುಗಿಸಲು ವರ್ತಕರಿಗೆ ಅವಕಾಶ. ತಪ್ಪಿದರೆ ಇನ್ನೊಂದು ರಾಜ್ಯದಲ್ಲಿ ಶೇಕಡಾ ಎಂಟೋ, ಹತ್ತೋ, ಹನ್ನೆರಡೋ ಪ್ರಮಾಣದ ಕೇಂದ್ರ ತೆರಿಗೆ ಸಲ್ಲಿಸಬೇಕಾಗುತ್ತದೆ. ದೇಶದಲ್ಲೆಲ್ಲ ಏಕರೂಪದಲ್ಲಿ ವ್ಯಾಟ್ ತೆರಿಗೆ ಪದ್ಧತಿಯನ್ನು ಜಾರಿಗೆ ತಂದ ಮೇಲೆ ಕೇಂದ್ರ ತೆರಿಗೆಯೊಂದರ ರಗಳೆ ಇರುವುದೇ ಆದರೆ, ವ್ಯಾಟ್ ಜಾರಿ ಮಾಡಿದ್ದರ ಪ್ರಯೋಜನವಾದರೂ ಏನು? ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ಮೊದ ಮೊದಲು ಕೇಂದ್ರ ಸರ್ಕಾರ ಸಿದ್ಧವಿರಲೇ ಇಲ್ಲ. ಏಕೆಂದರೆ ಕೇಂದ್ರ ವಾಣಿಜ್ಯ ತೆರಿಗೆಯನ್ನೂ ವ್ಯಾಟ್ ಮಾದರಿಗೆ ಪರಿವರ್ತಿಸುತ್ತೇವೆ ಎನ್ನುವುದಕ್ಕೆ ಸಾಧ್ಯವಾಗದಿದ್ದರೇ ಶೇ ೪ರ ಕೇಂದ್ರ ತೆರಿಗೆಯನ್ನೇ ರದ್ದು ಮಾಡುತ್ತೇವೆ ಎನ್ನಬೇಕು. ಕಡೆಗೆ, ರಾಜ್ಯಗಳ ಜೊತೆ ಹಿಗ್ಗಾಡಿ ಮುಗ್ಗಾಡಿ ಸದ್ಯಕ್ಕೆ ಕೇಂದ್ರ ತೆರಿಗೆಯ ‘ಸಿ’ ಫಾರಂ ನೀಡಿಕೆ ವ್ಯವಸ್ಥೆಯಲ್ಲಿ ಶೇ ೪ರ ಬದಲು ಶೇ ೨ ರಂತೆ ತೆರಿಗೆ ವಿಧಿಸಲಾಗುವುದು ಎಂದು ಒಪ್ಪಿಕೊಳ್ಳಬೇಕಾಯಿತು ಕೇಂದ್ರ ಸರ್ಕಾರ.

ಇನ್ನು ವ್ಯಾಟ್ ಬಾಬಿನಿಂದ ತಮಗೆ ನಷ್ಟವಾಗುವ ಹಣ ಸಂಗ್ರಹವನ್ನು ಕೇಂದ್ರ ಸರ್ಕಾರ ತುಂಬಿಕೊಡಬೇಕೆನ್ನುವ ಮೂಲ ವಿಚಾರ. ವಹಿವಾಟಿನ ಪ್ರತಿ ಹಂತದಲ್ಲೂ ಸರಕಿನ ಅಥವಾ ಸೇವೆಯ ಮೇಲೆ ಬೀಳುವ ತೆರಿಗೆಯಿಂದಾಗಿ ಮೌಲ್ಯ ಹೆಚ್ಚಾಗುತ್ತ ಹೋಗುತ್ತದೆ. ಆಯಾ ಹಂತದಲ್ಲಿ ಎಷ್ಟು ತೆರಿಗೆ ಬಿದ್ದು ಮೌಲ್ಯ ಹೆಚ್ಚಿತೋ ಅಷ್ಟು ಮಾತ್ರ ಆ ಹಂತದ ವಹಿವಾಟುದಾರನ ಹೊಣೆ. ಹಿಂದಿನ ಹಂತದ, ಮುಂದಿನ ಹಂತದ ಹೊಣೆ ಅವನಿಗೆ ಇರುವುದಿಲ್ಲ.

ವ್ಯಾಟ್ ಜಾರಿಗೆ ಹೊರತಾದ ವ್ಯವಸ್ಥೆಯಲ್ಲಿ ಪ್ರತಿ ಹಂತದಲ್ಲೂ ತೆರಿಗೆ ಬೀಳುತ್ತಿತ್ತು. ಮುಂದಿನ ಪ್ರತಿ ಹಂತದಲ್ಲೂ ಹಿಂದೆ ಬಿದ್ದಿದ್ದ ತೆರಿಗೆ ಸೇರಿಸಿದಂಥ ಅಸಲಿನ ಮೇಲೆ ಮತ್ತೆ ತೆರಿಗೆ ಬೇಳುತ್ತಿತ್ತು. ಅದೆಲ್ಲ ಅಂತಿಮವಾಗಿ ಬಳಕೆದಾರನಿಗೇ ವರ್ಗಾವಣೆ ಆಗುವುದು. ಆ ದೃಷ್ಟಯಿಂದಲೇ ಬಳಕೆದಾರ ಸ್ವಾಗತಿಸುತ್ತಾನೆ. ವಹಿವಾಟುದಾರರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಏಕೆಂದರೆ ಒಂದು ಹಂತದ ಹೊರೆಗೆ ಮಾತ್ರ ಪ್ರತಿಯೊಬ್ಬನೂ ಬಾಧ್ಯನಿರುವುದು. ಆದರೂ ಮೊದಮೊದಲಿಗೆ ಅವರು ಒಪ್ಪಲಿಲ್ಲ. ಅದಕ್ಕೆ ಕಾರಣ, ಪ್ರತಿ ಬಿಡಿ ವಹಿವಾಟೂ ಲೆಕ್ಕಕ್ಕೆ ಬರುತ್ತದೆ ಎನ್ನುವುದು. ಕದ್ದುಮುಚ್ಚಿ ವ್ಯಾಪಾರ ಮಾಡಿ ತೆರಿಗೆ ಹಾರಿಸಲು ವ್ಯಾಟ್ ಪದ್ಧತಿಯಲ್ಲಿ ಅವಕಾಶವಾಗುವುದಿಲ್ಲ. ವರ್ತಕರು ಈ ಕಾರಣದಿಂದ ಪ್ರತಿರೋಧ ವ್ಯಕ್ತಪಡಿಸದರೂ ಪ್ರದರ್ಶನ, ಬಂದ್ ಮುಂತಾದುವನ್ನು ನಡೆಸಿದರೂ, ರಾಜ್ಯಗಳು ಬಗ್ಗಲಿಲ್ಲ. ಕರ್ನಾಟಕದಂಥ ಕೆಲವು ರಾಜ್ಯಗಳು ವ್ಯಾಟ್ ಜಾರಿಗೆ ಬಿರುಸಿನಿಂದ ಸಿದ್ಧತೆ ನಡೆಸಿದುವು. ಆದರೆ ವ್ಯಾಟ್ ಜಾರಿ ಕಾರಣ ಆರಂಭಕ್ಕೆ ರಾಜ್ಯಗಳಿಗೆ ಆಗುವ  ನಷ್ಟವನ್ನು ತುಂಬಿಕೊಡುವುದಾಗಿ ಕೇಂದ್ರವು ಚರ್ಚೆ ವೇಳೆ ಒಪ್ಪಿಕೊಳ್ಳಬೇಕಾಯಿತು. ಆ ಚರ್ಚೆ ಮುಕ್ತಾಯ ಹಂತಕ್ಕೆ ಬರಲು ಹಲವು ವರ್ಷಗಳೇ ಹಿಡಿದುವು. ಅಲ್ಲಿಯ ತನಕ ರಾಜ್ಯಗಳು ನಿಧಾನ ಮಾಡುತ್ತಿವ ಎಂದು ದೂರುತ್ತಿದ್ದ ಕೇಂದ್ರ ಸರ್ಕಾರ ಉಲ್ಟಾ ಹೊಡೆಯಿತು. ಏಕೆಂದರೆ ಮೊದಲ ವರ್ಷವೇ ೨೦ ಸಹಸ್ರ ಕೋಟಿ ರೂಪಾಯಿನಷ್ಟು ಹಣವನ್ನು ರಾಜ್ಯಗಳಿಗೆ ತುಂಬಿಕೊಡಬೇಕಾಗುತ್ತದೆ. ಅದಕ್ಕೆ ಇದೀಗ ಕೇಂದ್ರ ಸರ್ಕಾರ ಸಿದ್ಧವಿಲ್ಲ.

ರಾಜ್ಯಗಳು ವ್ಯಾಟ್ ಜಾರಿಗೆ ಶಾಸನ ಮಾಡಿವೆ. ರಾಷ್ಟ್ರಪತಿ ಅಂಕಿತ ಪಡೆದಿವೆ; ಕೆಲವು ಅಂಕಿತಕ್ಕೆ ಕಳುಹಿಸಿವೆ. ಅಸ್ಸಾಂ, ಆಂಧ್ರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ಪಶ್ಚಿಮ ಬಂಗಾಳ ಈ ರಾಜ್ಯಗಳು ವಿವಿಧ ತೆರಿಗೆ ನಿರೂಪಣೆ, ಪೆನಾಲ್ಟಿ, ಏಕೀಕೃತ ದರಗಳು ಇವನ್ನೆಲ್ಲ ಆಖೈರುಗೊಳಿಸಿವೆ. ಆದರೆ ಕೇಂದ್ರವೇ ಹಿಂಜರಿಯುತ್ತಿದೆ. ಏಪ್ರಿಲ್ ೧ ರಿಂದ ಜಾರಿ ಆಗುವುದು ತಪ್ಪಿ ವ್ಯಾಟ್ ಮತ್ತೆ ನೆನೆಗುದಿಗೆ ಬಿತ್ತು. ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಂಥವರು ಬಹಿರಂಗವಾಗಿ ಕೇಂದ್ರ ಸರ್ಕಾರವನ್ನು ಆಕ್ಷೇಪಿಸಿದ್ದು ಸಹಜವೇ ಆಗಿದೆ.

ವಾಸ್ತವವಾಗಿ ವ್ಯಾಟ್ ಜಾರಿಯನ್ನು ಮುಂದೆ ಹಾಕುವುದಕ್ಕೆ ಕೈನಿಂತ ಹಣ ಜಾರಿ ಹೋಗುತ್ತದೆ ಎಂದು ಕೇಂದ್ರ ಭಾವಿಸಿದ್ದು ಮಾತ್ರವೇ ಕಾರಣವಲ್ಲ. ಹೊಸ ಪದ್ಧತಿ ಜಾರಿಗೆ ಬರುತ್ತದೆ ಎನ್ನುವಾಗ ಪ್ರಭಾವಿ ಲಾಬಿಗಳು ಒಂದಿಷ್ಟು ರಿಯಾಯ್ತಿಗಳನ್ನು ಈಗಲೇ ಪಡೆದುಬಿಡಬೇಕು ಎಂಬುದಾಗಿ ಮುಂದಾದುವು. ಅತ್ಯುತ್ತಮ ಉದಾಹರಣೆ ಎಂದರೆ ಔಷಧ ವ್ಯಾಪಾರದ್ದು. ಆ ಸರಕಿನ ಮೇಲೆ ಶೇ ೧೨.೫ರಷ್ಟು ವಾಣಿಜ್ಯ ತೆರಿಗೆ ಬೀಳುತ್ತದೆ. ಸರಾಸರಿ ಬೀಳುವ ತೆರಿಗೆ ಶೇ ೮ ಎಂದು ಇಟ್ಟುಕೊಂಡರೂ ಒಟ್ಟು ೭೫೦೦ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಆಗುತ್ತಿರುವ ಅಂದಾಜಿದೆ. ಆದರೆ ಔಷಧ ತಯಾಕರ ಒತ್ತಾಸೆ ಮೇಲೆ ವರ್ತಕರು ಶೇ ೪ರ ತೆರಿಗೆ ಮಾತ್ರ ಹೊಸ ಪದ್ಧತಿಯಲ್ಲಿ ವಿಧಿಸಿರೆಂದು ಕೇಳತೊಡಗಿದ್ದಾರೆ. ಒಟ್ಟಾರೆಯಾಗಿ ವ್ಯಾಪಾರವಾಗಿ ಜನೋಪಯೋಗಿ ಎನ್ನುವಂಥ ರೀತಿಯಲ್ಲಿ ಸರಕು ಬಳಕೆಗೆ ಬರುತ್ತದೆ ಎನ್ನುವಂಥ ಪ್ರಕರಣದಲ್ಲಿ ರಿಯಾಯ್ತಿ ಅಥವಾ ವಿನಾಯ್ತಿ ವಾಸ್ತವವಾಗಿ ಬಾಧಕವೆನಿಸುವುದಿಲ್ಲ. ಆದರೆ ಅತಿ ಚಿಲ್ಲರೆ ಪ್ರಮಾಣದ ವಹಿವಾಟಿನಲ್ಲೂ ತೆರಿಗೆ ಲೆಕ್ಕಕ್ಕೆ ಬರುತ್ತದೆ ಎನ್ನುವಂಥ ಕಡೆ ಸಹಾ ಹೀಗೆ ತೆರಿಗೆ ರಿಯಾಯ್ತಿ ಕೊಡಬೇಕೆಂದರೆ ಎಷ್ಟು ಕಾರ್ಯಸಾಧು?

ಈ ಬಗೆಯ ಒತ್ತಡಗಳು ಹೆಚ್ಚಾದಾಗ ಜಸವುಂತ ಸಿಂಗ್ ಅಂಥವರೂ ಹಿಂತೆಗೆಯುತ್ತಾರೆ. ಎಲ್ಲ ರಾಜ್ಯಗಳೂ ಪೂರ್ತಿ ಸಿದ್ಧವಾಗಿಲ್ಲ ಎಂಬ ಪರಿಸ್ಥಿತಿ ಬೇರೆ. ಈ ಬಗೆಯ ತೇಪೆ ಕೆಲಸ ಬೇಡವೆಂದು ಹೇಳಿದರು. ಮುಂದಿನ ವರ್ಷವಾದರೂ ಇದರ ಪಕ್ಕಾ ಜಾರಿಗೆ ಈಗಿನಿಂದ ವ್ಯವಸ್ಥೆಯಾಗಬೇಕಿದೆ.

ವಿಶ್ವಾದ್ಯಂತ ವ್ಯಾಟ್ ಪದ್ದತಿ ಜನಪ್ರಿಯವಾಗಿದೆ. ತೆರಿಗೆ ಮೇಲೆ ತೆರಿಗೆ; ತೆರಿಗೆ ತೆರಿಗೆ ಮೇಲೆ ತೆರಿಗೆ; ತೆರಿಗೆ ತೆರಿಗೆ ಮೇಲೆ ತೆರಿಗೆ ಇದನ್ನು ವ್ಯಾಟ್ ತಪ್ಪಿಸುತ್ತದೆ. ಜೊತೆಗೆ ತೆರಿಗೆ ವ್ಯಾಪ್ತಿಗೆ ಹೆಚ್ಚು ಜನ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಬರುವಂತೆ ಮಾಡುತ್ತದೆ. ಇದೂ ಸರಿಯೆ.

ಇದಕ್ಕಿಂತ ಹೆಚ್ಚಾಗಿ ಯಾವುದೇ ಒಂದು ಉದ್ಯಮದಲ್ಲಿ ಮೌಲ್ಯವರ್ಧನೆ ಎಷ್ಟು ಆಗುತ್ತಿದೆ ಎಂಬುದನ್ನು ಲೆಕ್ಕ ಹಾಕಬಹುದು. ಜೊತೆಗೆ ಯಾವ ಯಾವ ಉದ್ಯಮವು ನಿಶ್ಚಿತ ಕಾಲಘಟ್ಟದಲ್ಲಿ ಎಷ್ಟೆಷ್ಟು ಹೆಚ್ಚು ಮೌಲ್ಯವರ್ಧನೆ ಸಾಧಿಸುತ್ತಿದೆ ಎಂದೂ ಲೆಕ್ಕ ಹಾಕಬಹುದು. ದುಡಿದ ಸಂಪನ್ಮೂಲ ಅಂತಿಮವಾಗಿ ಮೌಲ್ಯವರ್ಧನೆ ಮಾಡುತ್ತದೆ ಎಂಬುದನ್ನು ಲೆಕ್ಕ ಹಾಕುವ ಪರಿಣಿತಿಗಳಿಸಲೂ ಶಕ್ಯವಿದೆ. ಅದು ಲೆಕ್ಕತಜ್ಞನ ಜವಾಬ್ದಾರಿ. ಕಡಿಮೆ ಪ್ರಯತ್ನದಲ್ಲಿ ಹೆಚ್ಚು ಮೌಲ್ಯವರ್ಧನೆ ಸಾಧ್ಯವಾಗುತ್ತಿದೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾದರೆ ಹೊಸ ಮಾನದಂಡಗಳೇ ಸೃಷ್ಟಿಯಾಗುತ್ತವೆ. ಯಾರಿಗೆ ಅಧಿಕ ಪ್ರೋತ್ಸಾಹ ಕೊಡಮಾಡಿದರೆ ಆರ್ಥಿಕತೆಗೆ ಅನುಕೂಲವಾಗುತ್ತದೆ ಎಂದು ಸಾರ್ಕರ ಅಳೆಯಲು ಈ ಹೊಸ ಮಾನದಂಡಗಳು ನೆರವಾಗಬಲ್ಲವು.

ಇದಲ್ಲ ಸರಿಯೇ; ಸುಧಾರಿತ ತೆರಿಗೆ ಪದ್ಧತಿಯೊಂದು ಜಾರಿಗೆ ಬರಲು ನಮ್ಮ ದೇಶದಲ್ಲಿ ಇಷ್ಟೊಂದು ಕಷ್ಟವಾಗಬೇಕೆ? ಆರ್ಥಿಕ ಸುಧಾರಣಾ ಕ್ರಮಗಳು ಜಾರಿಯಾಗುವುದಕ್ಕೆ ತಡವೇಕೆ ಆಗುತ್ತಿದೆ ಎಂಬುದಕ್ಕೆ ವ್ಯಾಟ್ ಪ್ರಕರಣವು ಉತ್ತರ ಹುಡುಕಿಕೊಟ್ಟಿದೆ. ವಾಸ್ತವವಾಗಿ ಇದು ಒಂದು ಸಣ್ಣ ಪ್ರಕರಣ.

೦೭.೦೫.೨೦೦೩