ದೇಶದಲ್ಲೇ ಅತ್ಯಂತ ವ್ಯಾಪಕವಾದಿ ತೆರಿಗೆ ಯಾವುದು?  ಈ ಪ್ರಶ್ನೆಗೆ ಎಂಥ ಸಾಮಾನ್ಯ ಗ್ರಾಹಕನಾದರೂ ಥಟ್ಟನೇ ಉತ್ತರಿಸುತ್ತಾನೆ, ಮಾರಾಟ ತೆರಿಗೆ ಎಂಬುದಾಗಿ.

ಆದಾಯ ಕರದಿಂದ ಹೆಚ್ಚು ನೋವುಂಡವರು ಇರಬಹುದು. ಅದರಿಂದ ತಪ್ಪಿಸಿಕೊಳ್ಳುವವರು ಸದ್ಯ ಸಾಕಷ್ಟು  ಇರಬಹುದು. ಅದರ ಮಾರಾಟ ತೆರಿಗೆ ವಿಷಯ ಬಂದಾಗ ಈ ಎರಡೂ ಮಾತು ಸಲ್ಲುವುದಿಲ್ಲ.

ಕೇಂದ್ರ ಸರ್ಕಾರವೂ ಮಾರಾಟಕರ ವಿಧಿಸುತ್ತದೆ. ರಾಜ್ಯ ಸರ್ಕಾರಗಳೂ ಇದನ್ನು ಹೇರುತ್ತವೆ. ಬಹುತೇಕ ಉತ್ಪನ್ನಗಳು ಇದರ ವ್ಯಾಪ್ತಿಗೆ ಬರುತ್ತವೆ. ಅಷ್ಟೇ ಅಲ್ಲ; ಬೇರೆ ಬೇರೆ ಹಂತಗಳಲ್ಲಿ ಇದು ಬೀಳುತ್ತದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ದರ, ಹೇರಿಕೆ ರೀತಿ ಬೇರೆ ಬೇರೆ. ತೆರಿಗೆ ವ್ಯತ್ಯಾಸದ ಲಾಭ ಪಡೆದು ರಾಜ್ಯಗಳ ನಡುವೆ ನಡೆಯುವ ವಹಿವಾಟೇ ಬಹಳ ದೊಡ್ಡದು.

ಎಲ್ಲ ರಾಜ್ಯಗಳಲ್ಲೂ ಏಕರೂಪವಾದ ಮಾರಾಟಕರ ಬೀಳುವಂತಾಗಬೇಕು ಎಂಬ ಆಶಯ ಬಹಳ ಹಳೆಯದು. ಅತ್ಯಂತ ಬಿಸಿ ಮುಟ್ಟಿಸಬಲ್ಲ ಈ ಒಂದೇ ತೆರಿಗೆ ಬಾಬಿಗೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಒಟ್ಟಿಗೇ ಜೋತು ಬೀಳಬೇಕೆ? ಒಂದಿಷ್ಟು ಸುಧಾರಣೆಗೆ ಒಳಪಡಿಸಲು ಸಾಧ್ಯವಿಲ್ಲವೆ? ಮಾರಾಟ ತೆರಿಗೆಗೆ ಸಂಬಂಧಪಟ್ಟಂತೆ ಇಂಥ ಹಲವು ವಿಚಾರಗಳತ್ತ ಗಮನಹರಿಸಿದರೂ ಏನೂ ಸಾಧ್ಯವಾಗಿರಲಿಲ್ಲ. ಆದರೆ ವ್ಯಾಟ್ – ಅಂದರೆ ಮೌಲ್ಯವರ್ಧಿತ ತೆರಿಗೆ – ಇದನ್ನು ಜಾರಿಗೆ ತರಬೇಕೆನ್ನುವ ಬಗೆಗೆ ಒಂದೂವರೆ ದಶಕದಿಂದ ಚರ್ಚೆ ನಡೆದಿರುವುದುಂಟು ದೇಶದಲ್ಲಿ. ಇದರ ಮೂಲ ರೂಪದ ಮಾಡ್‌ವ್ಯಾಟ್ – ಅಂದರೆ ಮಾಡಿಫೈಡ್ ವ್ಯಾಟ್ – ಬಗೆಗೆ ತಜ್ಞರು ಚರ್ಚಿಸಲು ಆರಂಭಿಸಿದ್ದು ೨೫ ವರ್ಷಗಳ ಹಿಂದೆ. ಆದರೆ ವಿದೇಶಗಳಲ್ಲಿ ಪರಿಣಾಮಕಾರಿ ಆಗಿದೆ ಎನ್ನುವ ಮುಖ್ಯ ಕಾರಣದಿಂದ ನಮ್ಮ ದೇಶದಲ್ಲೂ ವ್ಯಾಟ್ ಪದ್ಧತಿಯನ್ನು ಜಾರಿಗೆ ತರಲು ಸಾಧ್ಯ ಆಗಿರುವುದು ಈಗ ಮಾತ್ರ. ಇದೇ ವರ್ಷದ ಏಪ್ರಿಲ್ ಒಂದರಿಂದ ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು ಏಕಕಾಲಕ್ಕೆ ಜಾರಿಗೆ ಬರುತ್ತಿದೆ. ವಾಸ್ತವವಾಗಿ ಎರಡು ವರ್ಷದ ಹಿಂದೆಯೇ ಜಾರಿಗೆ ಬರಬೇಕಿತ್ತು. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಏಕೀಭವಿಸುವುದು ಸುಲಭವೇ? ರಾಜ್ಯಗಳಲ್ಲೂ ಪರಸ್ಪರ ತಾಕಲಾಟ ವೈರುಧ್ಯಗಳೇನು ಕಡಿಮೆಯೇ? ಕೊನೆಗೂ ಇದೀಗ ಜಾರಿ ಆಗುತ್ತಿದೆ.

ಈ ತೆರಿಗೆಗೆ ಒಂದು ಫ್ಯಾನ್ಸಿಯಾದ ಹೆಸರು ಇಡಬೇಕೆಂಬ ಯತ್ನಗಳು ಸಹಾ ನಡೆದಿವೆ. ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯು ವ್ಯಾಪಾರಗಾರರೆಲ್ಲ ಅದನ್ನು ಒಪ್ಪಿಕೊಳ್ಳುವಂತೆ ಮಾಡಬೇಕೆಂದು ಹೆಣಗುತ್ತಿದೆ. ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಸಮಾವೇಶಗಳಲ್ಲಿ ವ್ಯಾಟ್ ಬಗೆಗೆ ಅಧಿಕಾಧಿಕ ಅರಿವು ಮೂಡಿಸುವ ಪ್ರಯತ್ನಗಳು ಮುಂದುವರೆದಿವೆ. ಅಂಥ ವ್ಯಾಟ್‌ನ ಮಹತ್ವವಾದರೂ ಸೊಬಗಾದರೂ ಏನು?

ಯಾವುದೇ ವಸ್ತು ಮಾರಾಟಕ್ಕೆ ಸಿದ್ಧವಾದ ಮೇಲೆ ಮಾತ್ರವಲ್ಲದೆ ಮಾರಾಟಕ್ಕೆ ಮುನ್ನ ತಯಾರಿಕೆಯ ವಿವಿಧ ಹಂತಗಳಲ್ಲಿ ನಾನಾ ರೂಪದಲ್ಲಿ ಮಾರಾಟ ಕರಕ್ಕೆ ಒಳಗಾಗುತ್ತದೆ. ಕಚ್ಚಾ ಸಾಮಗ್ರಿ, ಅದರ ಸಂಸ್ಕರಣೆಯ ಹಲವು ಹಂತ, ರೂಪಾಂತರ, ಪ್ಯಾಕೇಜಿಂಗ್, ಸಗಟು ಮಾರಾಟ, ಚಿಲ್ಲರೆ ಮಾರಾಟ ಹೀಗೆ ಹಲವು ಹಂತಗಳು. ಒಂದೊಂದು ಹಂತದಲ್ಲೂ ಬೇರೆ ಬೇರೆ ಸಾಮಗ್ರಿ, ಮನುಷ್ಯ ಶ್ರಮ, ಸಾಗಾಣಿಕೆ, ತಯಾರಿಕಾ ಪ್ರಕ್ರಿಯೆ ಮುಂತಾದುವೆಲ್ಲ ಕೂಡಿಕೊಳ್ಳುತ್ತಾ ಇರುತ್ತದೆ. ಅಂದರೆ ಪ್ರತಿ ಹಂತದಲ್ಲೂ ಅದರ ವೌಲ್ಯ ವೃದ್ಧಿಯಾಗುತ್ತಾ ಹೋಗುತ್ತದೆ. ಗ್ರಾಹಕನ ಕೈಗೆ ಬಳಕೆ ಉದ್ದೇಶಕ್ಕೆಂದು ತಲುಪುವ ತನಕ ಮೌಲ್ಯವರ್ಧನೆ ತಪ್ಪುವುದೇ ಇಲ್ಲ. ಒಂದು ವಿಶೇಷವೆಂದರೆ ಯಾವುದೇ ಹಂತದಲ್ಲೂ ಒಂದು ಮಟ್ಟಕ್ಕೆ ಬಿದ್ದಿದ್ದ ಮಾರಾಟ ತೆರಿಗೆ ಇರುವುದಷ್ಟೆ. ಅದು ಮೌಲ್ಯದೊಳಗೆ ಸೇರಿಕೊಂಡು ಮತ್ತೆ ಒಟ್ಟಾರೆ ಆಗಿ ಮುಂದಿನ ಹಂತದಲ್ಲಿ ತೆರಿಗೆಗೆ ಒಳಪಡುತ್ತದೆ. ಅಂತಿಮವಾಗಿ ಈ ಭಾರವು ಪೂರ್ತಿಯಾಗಿ ಬಳಕೆದಾರನ ಮೇಲೆ ವರ್ಗಾವಣೆ ಆಗುತ್ತದೆ.

ವ್ಯಾಟ್ ಇದನ್ನು ತಪ್ಪಿಸುತ್ತದೆ. ಎರಡನೇ ಹಂತದ ಅಂತ್ಯದಲ್ಲಿ ಒಟ್ಟಾರೆ ಬಿದ್ದಿದ್ದ ತೆರಿಗೆಯನ್ನು ಎರಡನೇ ಹಂತದ ಚಟುವಟಿಕೆಯ ವಾರಸುದಾರನಿಂದ ವಸೂಲಿ ಮಾಡುತ್ತಾರೆ. ಆದರೆ ಮೊದಲ ಹಂತದಲ್ಲಿ ಬಿದ್ದಿದ್ದ ತೆರಿಗೆಯನ್ನು ಕರಾರುವಕ್ಕಾಗಿ ಲೆಕ್ಕ ಹಾಕಿ ಮೊದಲನೇ ಹಂತದವನಿಗೆ ವಾಪಸು ಮಾಡಿ ಬಿಡುತ್ತಾರೆ. ಅಧಿಕೃತವಾಗಿ.

ಅಂದರೆ ಮೌಲ್ಯವರ್ಧನೆ ಆಗುತ್ತಿದ್ದಂತೆಲ್ಲ ಆಯಾ ಹಂತದವರಿಗೆ ತಮ ತಮಗೆ ಸಂಬಂಧವಿದ್ದಷ್ಟು ಮಾತ್ರ ತೆರಿಗೆ ಬೀಳುತ್ತದೆ. ಅಂತಿಮವಾಗಿ ಬಳಕೆದಾರನಿಗೆ ಭಾರ ಕಡಿಮೆ ಆಗುತ್ತದೆ.

ತೆರಿಗೆ ಅಧಿಕಾರಿಗಳು ಈ ವ್ಯಾಟ್ ಪದ್ಧತಿಯ ಬಗೆಗೆ ವ್ಯಾಪರಗಾರರಿಗೆ, ತಯಾರಕರಿಗೆ ಮನವರಿಕೆ ಮಾಡಿಕೊಡುತ್ತಿರುವುದಕ್ಕೆ ಇನ್ನೊಂದು ಕಾರಣವೂ ಉಂಟು. ಒಟ್ಟಾರೆ ತೆರಿಗೆ ಸಲ್ಲಿಸಿ, ತನ್ನದಲ್ಲದ ಹಿಂದಿನ ಹಂತಗಳ ಹೊಣೆಯ ಬಾಬಿನ ತೆರೆಗಿ ಮೊತ್ತ ಪಡೆಯುವ ಪ್ರಕ್ರಿಯೆಯಲ್ಲಿ ವ್ಯಾಪಾರಗಾರ/ ತಯಾರಿಕೆಗಾರ ಒಟ್ಟಾರೆ ಸರಪಳಿಯ ಒಂದೊಂದು ಕೊಂಡಿ ಅಥವಾ ಉಂಗುರವಾಗಿ ಪರಿಣಮಿಸುತ್ತಾ ಹೋಗುತ್ತಾನೆ. ಆಗ ತೆರಿಗೆ ಹಾರಿಸುವುದಕ್ಕೆ ಸಾಧ್ಯ ಆಗುವುದಿಲ್ಲ; ಏಕೆಂದರೆ ಹಿಂದಿನ ಹಂತದ ಹಾಗೂ ಮುಂದಿನ ಹಂತದವನು ಸರಪಳಿ ಭದ್ರಪಡಿಸುತ್ತಿರುತ್ತಾನೆ. ತಪ್ಪಿದರೆ ತೆರಿಗೆ ಕೊಟ್ಟ ಮೇಲೆ ಅದರ ಬಾಬಿನ ವಾಪಸು ಪಡೆಯುವುದು ಕೈ ಬಿಟ್ಟು ಹೋಗುತ್ತದೆ.

ರಾಜ್ಯಗಳಲ್ಲಿ ನೂರಾರು ದರಗಳಲ್ಲಿ ನಾನಾ ಬಗೆ ವಿಧಿಸುವ ತೆರಿಗೆಗಳಲ್ಲಿ ಗೊಂದಲ ಬಹಳ. ಅದನ್ನು ನಿವಾರಿಸಲು ಕಡಿಮೆ ಎಂದರೆ ಶೇ. ೧೦ ಹೆಚ್ಚೆಂದರೆ ಶೇ. ೧೨.೫ ಎನ್ನುವ ಮಟ್ಟದ ವ್ಯಾಟ್ ಮಾತ್ರ ವಿಧಿಸಲು ಈಗ ರಾಜ್ಯಗಳು ಸಮ್ಮತಿಸಿರುತ್ತವೆ. ವ್ಯಾಟ್ ಜಾರಿಗೆ ತಂದಾಗ ಕೇಂದ್ರ ಸರ್ಕಾರ ತಾನು ವಿಧಿಸುತ್ತಿರುವ ಮಾರಾಟ ಕರವನ್ನು ರದ್ದು ಮಾಡಬೇಕು. ಆದರೆ ವ್ಯಾಟ್ ಜಾರಿ ನಂತರದ ಮೂರು ವರ್ಷ ಅದನ್ನು ಮುಂದುವರೆಸಲು ಎಲ್ಲರೂ ಸಮ್ಮತಿಸಿದ್ದಾರೆ.

ಅದನ್ನು ಶೇ ೪ ರಿಂದ ೨ಕ್ಕೆ ಇಳಿಸಲಾಗುವುದು. ಮೂರನೆಯ ವರ್ಷದಲ್ಲಿ ಅದು ಶೇ ೧ ಮಾತ್ರ.

ಹೊಸ ವ್ಯವಸ್ಥೆಯಲ್ಲಿ ಒಟ್ಟಾರೆ ನಷ್ಟವಾಗುವುದು ರಾಜ್ಯಗಳಿಗೆ. ಹಿಂದಿನ ವ್ಯವಸ್ಥೆಯ ಕೇಂದ್ರ ಮಾರಾಟಕರ ಮತ್ತು ರಾಜ್ಯ ಮಾರಾಟಕರ ಒಟ್ಟು ಎಷ್ಟಾಗುತ್ತಿತ್ತೋ ಅಷ್ಟರ ಪ್ರಮಾಣದ ವ್ಯಾಟ್ ಸಂಗ್ರಹ ಇರುವುದಿಲ್ಲ. ರಾಜ್ಯಗಳಿಗೆ ಮೂರು ವರ್ಷ ನಷ್ಟ ತುಂಬಿ ಕೊಡಲು ಕೇಂದ್ರ ಒಪ್ಪಿದೆ. ಮೊದಲ ವರ್ಷ ಶೇ ೬೫ ರಿಂದ ೭೫ರಷ್ಟು, ಎರಡನೇ ವರ್ಷ ಶೇ ೪೦ ರಷ್ಟು ಹಾಗೂ ಮೂರನೇ ವರ್ಷ ಶೇ ೨೫ಷ್ಟು ತುಂಬಿಕೊಡಲಾಗುವುದು.

ಈ ವ್ಯವಸ್ಥೆಯಿಂದ ಕೈಗಾರೀಕರಣಕ್ಕೆ ಹೆಚ್ಚು ಒಳಗಾದ ರಾಜ್ಯಗಳಿಗೆ ಅಧಿಕ ನಷ್ಟ. ಹಿಂದುಳಿದ ರಾಜ್ಯಗಳಿಗೆ ಕಡಿಮೆ ನಷ್ಟ ಆಗುತ್ತದೆ ಎಂಬ ವಾದವೂ ಪ್ರಬಲವಾಗಿದೆ.

ಕೇಂದ್ರವೂ ಸೇರಿದಂತೆ ಒಟ್ಟಾರೆ ತೆರಿಗೆ ವ್ಯವಸ್ಥೆಯ ನಿಭಾವಣೆ ಹೊಣೆ ಹೊತ್ತ ರಾಜ್ಯಗಳು ವ್ಯಾಟ್ ಜಾರಿ ವೇಳೆ ತಾವು ತಮ್ಮ ಬೇಳೆ ಒಂದಿಷ್ಟು ಬೇಯಿಸಿಕೊಳ್ಳುತ್ತಲೇ ಇರಬೇಕೆಂದು ಬಯಸಿವೆ. ಮಾರಾಟ ಕರ ವ್ಯವಸ್ಥೆ ಸುಧಾರಣೆ ಜಾರಿ ಮಾಡುತ್ತಲೇ ಹೆಚ್ಚುವರಿ ಮಾರಾಟ ಕರ, ಮಾರಾಟ ಕರ ಸೆಸ್ ಮುಂತಾದ ಕೊಸರುಗಳನ್ನು ಇನ್ನು ಮುಂದೆ ಸಹಾ ಜಾರಿಯಲ್ಲಿ ಇಟ್ಟಿರಲು ಅವು ಹವಣಿಸುತ್ತಿವೆ! ವಿವಾದ ಹಾಗೆಯೇ ಇದೆ.

ಆಕ್ಟ್ರಾಯ್, ಪ್ರವೇಶ ತೆರಿಗೆ ಮುಂತಾದ ಚಿಲ್ಲರೆ ಬಾಬುಗಳನ್ನು ತಮ್ಮ ಸುಪರ್ದಿನಲ್ಲೇ ಇರಿಸಿಕೊಳ್ಳುವ ಹವಣಿಕೆ ರಾಜ್ಯಗಳದ್ದು.

ಈ ಬಗೆಯ ಇಬ್ಬಂದಿ ವಿಚಾರಗಳಿಂದ ಕೇಂದ್ರ ಸರ್ಕಾರವೂ ಹೊರತಾಗಿಲ್ಲ. ಅಡಿಷನಲ್ ಎಕ್ಸೈಜ್ ಸುಂಕದ ವ್ಯಾಪ್ತಿಯಲ್ಲುಳಿದು ಕೇಂದ್ರ ತೆರಿಗೆಗೆ ಮಾತ್ರ ಒಳಪಟ್ಟಿರುವ ಜವಳಿ, ಸಕ್ಕರೆ ಮತ್ತು ಹೊಗೆಸೊಪ್ಪು ಉತ್ಪನ್ನಗಳಲ್ಲಿ ಯಾವ ವ್ಯತ್ಯಾಸವೂ ಬೈಡ; ವ್ಯಾಟ್ ವ್ಯಾಪ್ತಿಗೆ ಅವು ಬರುವುದು ಬೇಡ ಎಂಬುದು ಕೇಂದ್ರದ ಹಟ. ಆದರೆ ಈ ವಿನಾಯಿತಿ ಪಡೆದ ಬಾಬುಗಳ ಮೇಲೆ ತಾವು ಪ್ರತ್ಯೇಕ ಮಾರಾಟಕರ ಹಾಕಲು ಅವಕಾಶ ಇರಬೇಕೆಂದು ರಾಜ್ಯಗಳು ಹಟ ಹಿಡಿದವೆ.

ವಾಣಿಜ್ಯ ಕರೆ (ಮಾರಾಟಕರ ಇತ್ಯಾದಿ) ವಸೂಲು ಸಂಬಂಧ ಕೇಂದ್ರ-ರಾಜ್ಯ ನಡುವೆ ಚೌಕಾಶಿ ವ್ಯವಹಾರ ಮತ್ತು ತಕರಾರುಗಳು ಕಳೆದ ನಾಲ್ಕು ವರ್ಷ ಚರ್ಚೆ ನಂತರವೂ ಇತ್ಯರ್ಥ ಕಾಣದೆ ಹಾಗೆಯೇ ಉಳಿದಿವೆ.

ದೇಶದಲ್ಲಿ ಹಲವಾರು ಸೇವಾ ಸೌಲಭ್ಯಗಳು ಮಾರಾಟಕರ ವ್ಯಾಪ್ತಿಗೆ ಇನ್ನೂ ಬಂದಿಲ್ಲ. ಅವುಗಳ ಮೇಲೆಲ್ಲ ರಾಜ್ಯಗಳು ತೆರಿಗೆ ವಿಧಿಸಬಹುದೆಂದು ಒಪ್ಪಿಕೊಳ್ಳಲಾಗಿದೆ. ಆ ಬಾಬುಗಳಲ್ಲಿ ಕೆಲವು ಹೀಗಿವೆ:

ಸಾರಿಗೆ, ಬಾವಿ ಕೊರೆಯುವುದು, ನಲ್ಲಿ ಕೆಲಸ, ಲೇಬರ್ ಕಾಂಟ್ರಾಕ್ಟ್, ಸ್ಫೋಟ ಗೊಳಿಸುವುದು, ಅಗೆಯುವುದು, ಜನರೇಟರ್ ಬಾಡಿಗೆಗೆ ಕೊಡುವುದು, ಕಂಪ್ಯೂಟರ್ ಅಥವಾ ಯಂತ್ರಗಳ ಸುಸ್ಥಿತಿ ನಿಭಾವಣೆ, ಫ್ಯಾಕ್ಸ್, ವಿಮೆ ಮುಂತಾದ ಸೇವೆ, ಫೋಟೊ ಕಾಪಿ ಸೇವೆ, ಕಮರ್ಷಿಯಲ್ ವಿನ್ಯಾಸ ಕಲೆ ಹಾಗೂ ವ್ಯಂಗ್ಯಚಿತ್ರ ರಚನೆ, ಮುದ್ರಣ, ಮುದ್ರಣ ಪೂರ್ವ ಸಂಸ್ಕರಣಾ ಸೇವೆ.

ಒಡವೆ ವಿನ್ಯಾಸ ಮತ್ತು ತಯಾರಿಕೆ, ವಜ್ರ ಅರೆಯುವುದು, ಪಿಠೋಪಕರಣ ಮತ್ತೆ ವಿಡಿಯೊ ಆಡಿಯೊ ಲೈಬ್ರರಿ, ಲೇವಾದೇವಿ, ಟಿವಿ ಕೇಬಲ್ ಸೇವೆ, ಸಾಹಸ ಕ್ರೀಡೆ, ನಟರು ನಾಟ್ಯಗಾರರು ಮತ್ತು ಸ್ಟಂಟ್ ಮನ್‌ಗಳ ಸೇವೆ.

ಆಸ್ಪತ್ರೆ, ನರ್ಸಿಂಗ್ ಹೋಂ, ಲ್ಯಾಬ್, ಹೆಲ್ತ್ ಕ್ಲಬ್, ಆಂಬುಲೆನ್ಸ್ ಸೇವೆ, ಅಂಗ ಮರ್ದನ ಚಿಕಿತ್ಸೆ, ವೈದ್ಯಸೇವೆ, ವಿಹಾರ ಪಾರ್ಕು.

ಬ್ಯೂಟಿಪಾರ್ಲರ್, ಹೇರ್ ಡ್ರೆಸರ್, ಬಂಜೆತನ ನಿವಾರಣೆ ಸೇವೆ, ಹೂಗಿಡ ಜೋಡಿಸಿಕೊಡುವುದು.

ಖಾಸಗಿ ಟ್ಯೂಷನ್, ಟೈಪಿಂಗ್ ಹಾಗೂ ನಾನಾ ಬಗೆಯ ತರಗತಿಗಳು ಮತ್ತು ತರಪೇತಿ, ಕರಾಟೆ, ಕುಂಗ್ಫು, ಯೋಗ, ಡಾನ್ಸ್ ತರಗತಿಗಳು ವೃತ್ತಿಪರ ಕೋರ್ಸುಗಳು.

ಲಾಂಡ್ರಿ, ಕಚೇರಿ ಮತ್ತು ಹೋಟೆಲ್‌ಗಳಲ್ಲಿ ನಾನಾ ಸೌಲಭ್ಯಗಳನ್ನು ಎಟುಕಿಸುವ ಹೌಸ್‌ಕೀಪಿಂಗ್ ಸೇವೆ.

ಅಷ್ಟು ಮಾತ್ರವಲ್ಲ; ಸರ್ಕಾರ ಮತ್ತು ಕಂಪೆನಿಗಳಿಗೆ ದಳ್ಳಾಳಿ ಕೆಲಸ ಮಾಡಿಕೊಡುವ ಏಜೆಂಟ್ ದಂಧೆ ಸಹಾ! ಇವು ಇನ್ನಿತರ ಹಲವು ಬಗೆಯ ಸೇವಾ ಬಾಬುಗಳು ಮಾರ್ಚ್ ಅಂತ್ಯದ ನಂತರದ ರಾಜ್ಯಗಳ ಬಜೆಟ್‌ಗಳಲ್ಲಿ ವಾಣಿಜ್ಯ ತೆರಿಗೆಗೆ ಒಳಗಾಗಬಹುದು.

ಏಕೆಂದರೆ ಈ ಬಾಬುಗಳನ್ನು ರಾಜ್ಯಗಳಿಗೇ ಬಿಡಲು ಕೇಂದ್ರ ಸಮ್ಮತಿಸಿದೆ.

೧೨.೦೧.೨೦೦೩