ಗೊಂದಲ ಹೆಚ್ಚಾದಾಗ ಬದಲಾವಣೆಗಳನ್ನು ಜಾರಿಗೆ ತರಬೇಕು. ಇದೊಂದು ಮ್ಯಾನೇಜ್‌ಮೆಂಟ್ ತಂತ್ರ.

ಅನೇಕ ಸಂದರ್ಭಗಳಲ್ಲಿ ಈ ತಂತ್ರ ಫಲಿಸುತ್ತದೆ. ಬದಲಾವಣೆಯು ಗೊಂದಲದಿಂದ  ಪಾರು ಮಾಡುತ್ತದೆ. ಆದರೆ ತಿರುವು ಮುರುವು ಸಹಾ ಆಗುವುದುಂಟು. ಗೊಂದಲ ಹೆಚ್ಚಾಗಬಹುದು.

ಜುಲೈ ಮೊದಲ ವಾರದಲ್ಲಿ ಪ್ರಧಾನಿ ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದ ಜಸವಂತ್ ಸಿಂಗ್ ಅವರನ್ನು ಅರ್ಥ ಸಚಿವರನ್ನಾಗಿ ಮಾಡಿದರು. ಅರ್ಥ ಸಚಿವರಾಗಿದ್ದ ಯಶವಂತ ಸಿನ್ಹಾ ಅವರನ್ನು ವಿದೇಶಾಂಗ ಸಚಿವರನ್ನಾಗಿಸಿದರು.

ಈ ಬದಲಾವಣೆಗೆ ಕಾರಣವಿಲ್ಲದೆ ಇರಲಿಲ್ಲ. ಮೂರೇ ತಿಂಗಳ ಹಿಂದೆ ಮಂಡಿಸಿದ್ದ ಕಳೆದ ಸಾಲಿನ ಬಜೆಟ್‌ನಲ್ಲಿ ಯಶವಂತ ಸಿನ್ಹಾ ಜಾರಿಗೆ ತಂದಿದ್ದ ಕ್ರಮಗಳು ಆಡಳಿತ ಪಕ್ಷಕ್ಕೆ, ಮುಖ್ಯವಾಗಿ ಸಂಘ ಪರಿವಾರದವರಿಗೆ, ಪಥ್ಯವಾಗಲಿಲ್ಲ. ಮುಂದೆ ಕೈಗೊಳ್ಳಬೇಕಾದ ಕ್ರಮಗಳು ಸಹಾ ಅಪಥ್ಯವಾಗಬಹುದು. ಆ ದೃಷ್ಟಿಯಿಂದ ಸಿನ್ಹಾಗಿಂತ, ಸಿಂಗ್ ಅರ್ಥ ಸಚಿವರಾಗಿರುವುದು ಯುಕ್ತ.

ಪ್ರದಾನಿ ಅವರ ಈ ಅನಿಸಿಕೆ ಜೊತೆ ಏಕೀಭವಿಸುವವರು ಬಹಳ ಜನ. ಜಸವಂತ ಸಿಂಗ್ ಅವರಿಗೆ ಅಂಥ ಒಳ್ಳೆಯ ವರ್ಚಸ್ಸು ಇದೆ. ಹಾಗೆ ನೋಡಿದರೆ ಸಿಂಗ್‌ಗಿಂತ ಸಿನ್ಹಾ ಅವರೇ ಸಂಘ ಪರಿವಾರದವರಿಗೆ ಹತ್ತಿರ. ವಿಶ್ವಾಸ ಜಾಸ್ತಿ. ಆದರೆ ಎಡವಟ್ಟು ಆಗುವುದು ಸಾಧ್ಯ. ಸಿಂಗ್ ವಿಷಯ ಹಾಗಲ್ಲ. ಮಿಲಿಟರಿ ಹಿನ್ನೆಲೆ ವ್ಯಕ್ತಿ. ಖಡಾ ಖಂಡಿತ. ಆದರೆ ಉಪಾಯಗಾರ. ವಿದೇಶಾಂಗ ಸಚಿವರಾಗಿ, ವಿಶ್ವ ಬಿಕ್ಕಟ್ಟು ಹಾಗೂ ಗಡಿ ಉದ್ವಿಗ್ನತೆ ಇದ್ದರೂ, ಚೆನ್ನಾಗಿ ಕೆಲಸ ಮಾಡಿ ಸೈ ಎನಿಸಿಕೊಂಡ ವ್ಯಕ್ತಿ. ಕಷ್ಟದ ನಿರ್ಧಾರಗಳನ್ನು ಕೈಗೂಂಡರೂ ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳಬೇಕಾದರೆ ಜಸವಂತ್ ಸಿಂಗೇ ಸರಿ. ಜಸವಂತ್, ಯಶವಂತ್ ಸಿನ್ಹಾರಿಗಿಂತ ಸಮರ್ಥ ಎಂಬುದು ವಾಜಪೇಯಿ ಲೆಕ್ಕಾಚಾರ.

ಅದರಂತೆಯೇ ಜುಲೈ ತಿಂಗಳಲ್ಲಿ ಈ ಬದಲಾವಣೆ ಆದಾಗ ಸ್ವಾಗತಿಸಿದವರೇ ಹೆಚ್ಚು. ಸ್ಥೈರ್ಯಗೇಡಿ ಆರ್ಥಿಕತೆಗೆ ಸಿಂಗ್ ಆಮ್ಲಜನಕ ಊದಬಹುದು. ಹಿಂಜರಿತ, ಉದಾರೀಕರಣ ಇವನ್ನೆಲ್ಲ ನಿಭಾಯಿಸಬಹುದು. ಆ ಮೂಲಕ ಆರ್ಥಿಕ ರಂಗ ಚೇತರಿಸಿಕೊಂಡು ಲವಲವಿಕೆ ಪಡೆಯಬಹುದು ಎಂಬ ನಿರೀಕ್ಷೆಗಳೆಲ್ಲ ಗರಿಕೆದರಿದವು. ಅರ್ಥ ಸಚಿವ ಖಾತೆ ವಹಿಸಿಕೊಂಡ ಸಿಂಗ್ ಆಮೇಲೆ ವಹಿಸಿದ್ದು ಮೌನ.

ಅವರ ಜಾಯಮಾನವೇ ಹಾಗೆ. ಏನನ್ನಾದರೂ ಹಚ್ಚಿಕೊಂಡರೆ ತೀರಿತು. ಭಾರೀ ಹೋಂವರ್ಕ್ ಮಾಡಿ ಘನವಾದ್ದು ಏನಾದರೂ ಕ್ರಮ ರೂಪಿಸಿ, ಪರಿಣಾಮ ಸಾಧಿಸುವುದೇ ಸೈ. ಆದರೆ ಜುಲೈನಿಂದ ಮುಂದೆ ಅಕ್ಟೋಬರ್, ನವೆಂಬರ್ ಕಳೆಯುತ್ತ ಬಂದರೂ ಏನೂ ಸೂಲ್ಲಿಲ್ಲ. ಅನಂತರ ದಿಢೀರನೆ ಸಂಸತ್ತಿನಲ್ಲಿ ವರ್ಷದ ಮಧ್ಯಂತರ ಆರ್ಥಿಕ ಸಮೀಕ್ಷೆಯನ್ನು ಜಸವಂತ ಸಿಂಗ್ ಮಂಡಿಸಿದರು. ನಿರೀಕ್ಷೆಯೆಲ್ಲ ಠುಸ್ಸೆಂದಿತು. ಆರ್ಥಿಕ ವಿಷಯಗಳು ಬಂದಾಗ ಏನೇನು ಹೇಳುತ್ತ ಬರಲಾಗಿತ್ತೋ ಅದನ್ನೇ ಮತ್ತೆ ಹೇಳಿದರು. ಏನೂ ಹೊಸದಿಲ್ಲ. ಹೊಸ ಮಾರ್ಗೋಪಾಯವಿಲ್ಲ. ವಿಶೇಷ ವಿಶ್ಲೇಷಣೆಯೇನೂ ಇಲ್ಲ. ಏನೇನೂ ಇಲ್ಲ. ಈ ಭಾಗ್ಯಕ್ಕೆ ಜಸವಂತ್ ಸಿಂಗ್ ಬಾಯಿ ಬಿಡಬೇಕಿತ್ತೆ?

ನಿಜ. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಹೇಳುವ ಅಗತ್ಯ ಇದೆ ಎಂದು ಸರ್ಕಾರ ಅಥವಾ ಆಡಳಿತ ಪಕ್ಷ ಭಾವಿಸಿತು. ಆರ್ಥಿಕ ವಿಷಯಗಳ ಮಾತು ಬಂದಾಗ ಹೊಸ ಮಾರ್ಗ ಯಾವುದನ್ನೂ ತುಳಿಯುವುದಿಲ್ಲ. ಕಠಿಣತಮ ಕ್ರಮಗಳೇನೂ ಇಲ್ಲ ಎಂದು ಬಿಂಬಿಸುವ ಅಗತ್ಯವಿತ್ತು. ಸಿಂಗ್ ಹಾಗೆ ಮಾಡಿದರು ಎಂಬ ವ್ಯಾಖ್ಯಾನವಿದೆ. ಅದನ್ನು ತಳ್ಳಿ ಹಾಕುವಂತಿಲ್ಲ.

ಯಶವಂತ ಸಿನ್ಹಾ ವಿರುದ್ಧ ಸಂಘ ಪರಿವಾರದವರಿಗೆ ಅತೃಪ್ತಿ ಮೂಡಲು ಕಾರಣವೆಂದರೆ ಕಳೆದ ಬಜೆಟ್ಟಿನಲ್ಲಿ ಅಡಿಗೆ ಅನಿಲ ದರ ಏರಿಸಲಾಯಿತು. ಡಿವಿಡೆಂಡ್ ಮೇಲೆ ತೆರಿಗೆ ಬಿತ್ತು. ಜೊತೆಗೆ ಬಡ್ಡಿ ದರ ಇಳಿಸಿದ್ದರಿಂದ ಠೇವಣಿಗಳು ತರುವ ವರಮಾನ ಕಡಿಮೆ ಆಯಿತು. ಈ ಕ್ರಮಗಳು ಮಧ್ಯಮ ವರ್ಗದವರ ಪಾಲಿಗೆ ಅಸಹನೀಯ. ಇವರೇ ಬಿಜೆಪಿ ಪಾಲಿಗೆ ಗಟ್ಟಿಯಾಗಿ ನಿಂತಿರುವ ವೋಟುದಾರರು.

ಇವರಿಗೆ ಅಪಥ್ಯವಾದ ಇನ್ನೊಂದು ಅಂಶ ಎಂದರೆ ವರಮಾನ ತೆರಿಗೆ ದರಗಳನ್ನು ಇಳಿಸಲಿಲ್ಲ ಎಂಬುದು.

ಈ ಅತೃಪ್ತಿ ಸಂಘ ಪರಿವಾರದೊಳಗೆ ಎಷ್ಟೊಂದು ಹೊಗೆಯಾಡಿತೆಂದರೆ ಅರೆಸ್ಸೆಸ್‌ನ ಮಾಮೂಲು ಶಾಖಾ ಬೈಠಕ್‌ಗಳಲ್ಲೂ ಚರ್ಚೆಗೆ ಬಂತು. ಇದು ಪ್ರಧಾನಿಯವರೆಗೆ ಮುಟ್ಟದೆ ಇರಲಿಲ್ಲ ಎಂಬುದು ಖಚಿತಪಟ್ಟಿದೆ.

ಯಶವಂತ ಸಿನ್ಹಾ ಆಗಲಿ, ಅರ್ಥಸಚಿವರಾದ ಯಾರೇ ಆಗಲಿ, ಕೈಗೊಳ್ಳಬೇಕಾಗುವ ಅನಿವಾರ್ಯ ಕ್ರಮ ಎಂದರೆ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದು. ಎರಡನೆಯ ಹಂತದ ಸುಧಾರಣಾ ಕ್ರಮಗಳು ಇನ್ನು ಮುಂದೆ ಜಾರಿಗೆ ಬರಬೇಕಾಗಿದೆ. ಅವನ್ನು ಕೈಗೊಂಡರೆ ಸಿನ್ಹಾ ಎಸಗಿದ ಕಾರ್ಯಕ್ಕೆ ಹತ್ತುಪಟ್ಟು, ನೂರು ಪಟ್ಟು ಗಡುಸಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಬೇಕು. ಅದೇ ವೇಳೆ ಬಿಗಿಯಾಗಿ ಕಾರ್ಯ ನಿರ್ವಹಿಸಬೇಕು. ಆದ್ದರಿಂದಲೇ ಜಸವಂತ್‌ಸಿಂಗ್ ಅರ್ಥ ಸಚಿವರಾದುದು.

ಮೊದಲ ಹಂತದಲ್ಲಿ ಆಗಬೇಕಾದುದು ಹಣದುಬ್ಬರ ಹತೋಟಿ, ಸರ್ಕಾರದ ಕಡೆಯಿಂದ ವಿವಿಧ ಕ್ಷೇತ್ರಗಳಿಗೆ ನೀಡುವ ರಕ್ಷಣೆ ರಿಯಾಯ್ತಿ ತಪ್ಪಿಸುವುದು, ಹಣಕಾಸು ಕ್ಷೇತ್ರದಲ್ಲಿ ಎಲ್ಲವನ್ನೂ ಸರ್ಕಾರವೇ ನಿರ್ಧರಿಸಬೇಕೆನ್ನುವುದನ್ನು ತಪ್ಪಿಸುವುದು, ಪೈಪೋಟಿಗೆ ಹಾಗೂ ಖಾಸಗೀಕರಣಕ್ಕೆ ಒತ್ತು ಕೊಡುವುದು, ಅಂತರಿಕ ಮೂಲದ ಹಾಗೂ ವಿದೇಶಿ ಮೂಲದ ಹಣ ಹೂಡಿಕೆಗಳನ್ನು ಸುಲಭಗೊಳಿಸುವುದು.

ಎರಡನೆಯ ಹಂತದ ಸುಧಾರಣಾ ಕ್ರಮಗಳೆಂದರೆ, ದೇಶದ ಜನರ ಸ್ಥಿತಿಗತಿ ಸುಧಾರಿಸುತ್ತಲೇ ಅಂತರರಾಷ್ಟ್ರೀಯ ಪೈಪೋಟಿ ಎದುರಿಸುವುದನ್ನು ಸಾಧ್ಯಗೊಳಿಸಬೇಕು. ಆದರೆ ಆ ವೇಳೆ ಒಟ್ಟಾರೆ ಆರ್ಥಿಕ ಸ್ಥಿರತೆ ಕಾಪಾಡಬೇಕು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮುಂತಾದ ಸೇವಾ ಸೌಲಭ್ಯ ಬಾಬುಗಳಲ್ಲಿ ಸುಧಾರಣೆ ತರಬೇಕು. ಜೊತೆಗೆ ಕಷ್ಟತಮ ಕಾರ್ಮಿಕ ವ್ಯವಹಾರಗಳ ಸುಧಾರಣೆ ಸಾಧ್ಯವಾಗಬೇಕು.

ಕಾರ್ಮಿಕರ ವ್ಯವಹಾರ ಎಂದಾಗ ಮಾಲೀಕನಿಗೆ ನಷ್ಟ ಪೀಡಿತ ಉದ್ಯಮವನ್ನು ಮುಚ್ಚಲು ಅವಕಾಶವಿರಬೇಕು ಹಾಗೂ ದುಡಿಮೆಗೆ ಅನುಸಾರ ಪ್ರತಿಫಲ ಎಂಬ ಸಿದ್ಧಾಂತವನ್ನು ಕಾರ್ಮಿಕರು ಒಪ್ಪಿಕೊಳ್ಳಬೇಕಾಗುತ್ತದೆ. ಯಾವುದೇ ಉದ್ಯಮದಲ್ಲಿ ಕಾರ್ಮಿಕರು ನಿರುಪಯುಕ್ತರಾದರೆ ಅವರನ್ನು ತೆಗೆದುಹಾಕಬೇಕು ಎನ್ನುವುದನ್ನು ಒಪ್ಪಬೇಕು ಎಂಬೆಲ್ಲ ಅಂಶಗಳು ಬರುತ್ತವೆ. ಕಾರ‍್ಮಿಕರ ವಿಷಯ ಹೇಗೋ ಹಾಗೆ ಭೂಮಿ ಸಂರಕ್ಷಣೆ ವಿತರಣೆಯೂ ಕಗ್ಗಂಟಾಗಿ ಪರಿಣಮಿಸುತ್ತದೆ.

ಎರಡನೇ ಹಂತದ ಸುಧಾರಣಾ ಕ್ರಮಗಳ ವೈಶಿಷ್ಟ್ಯವೆಂದರೆ ಅವನ್ನು ಜಾರಿಗೆ ತರುವಾಗ ವ್ಯಾಪ್ತಿಯು ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳಿಗೆಲ್ಲ ಹರಡಿಕೊಳ್ಳುತ್ತದೆ. ಅಂದರೆ ಎರಡನೇ ಹಂತದ ಸುಧಾರಣಾ ಕ್ರಮಗಳ ಜಾರಿ ಸುಲಭವೆನಿಸುವುದಿಲ್ಲ.

ಒಂದೊಂದಾಗಿ ಯಾವುದೇ ಕ್ರಮವನ್ನು ಜಾರಿ ಮಾಡಲು ಹೊರಟರೂ ಸಂದಿಗ್ಧ ಮತ್ತು ತಳಮಳ ತಪ್ಪಿದ್ದಿಲ್ಲ. ಈಗ ಗುರುರಾತ್, ಇನ್ನು ಮೇಲೆ ಹಲವು ರಾಜ್ಯಗಳ ಚುನಾವಣೆ ಮುಗಿದಂತೆ ಪೂರ್ತಿ ಅವಧಿ ಮುಗಿಯಲು ಕಾಯದೆ ಮಹಾ ಚುನಾವಣೆ ನಡೆಯಬೇಕಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಈ ಹಿನ್ನೆಲೆಯಲ್ಲಿ ಜಸವಂತ್‌ಸಿಂಗ್ ಆದರೂ ಯಾವ ಸುಧಾರಣಾ ಕ್ರಮಗಳನ್ನು ಜಾರಿಗೆತ್ತಿಕೊಳ್ಳಬಲ್ಲರು? ಯಾವೊಂದು ಚರ‍್ಯೆ ತೆಗೆದುಕೊಳ್ಳದೆ ದಿನ ನೂಕಲು ಸಾಧ್ಯವೆ?

ಮಾರುಕಟ್ಟೆ ಪ್ರಧಾನ ಆರ್ಥಿಕ ವ್ಯವಸ್ಥೆಯನ್ನು ಒಪ್ಪಿಕೊಂಡ ಹಲವು ರಾಷ್ಟ್ರಗಳಲ್ಲಿ ಮೊದಲ ಹಂತದ ಆರ್ಥಿಕ ಸುಧಾರಣೆಗಳು ಫಲ ನೀಡತೊಡಗಿ ವೃದ್ಧಿದರ ಏರತೊಡಗಿದಂತೆ ಎರಡನೇ ಹಂತದ ಕ್ರಮಗಳ ಜಾರಿಗೆ ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್.) ಮೂಲಗಳು ಒತ್ತಾಯಿಸುತ್ತಿವೆ. ಚಿಲಿ, ಲ್ಯಾಟಿನ್  ಅಮೆರಿಕ ರಾಷ್ಟ್ರಗಳು, ಏಷ್ಯಾದ ಹಲವು ರಾಷ್ಟ್ರಗಳು ಮತ್ತು ಕಮ್ಯುನಿಸ್ಟ್ ವ್ಯವಸ್ಥೆಯಿಂದ ಹೊರಬಂದ ರಾಷ್ಟ್ರಗಳು ಇಲ್ಲೆಲ್ಲ ಆಗಿರುವುದು ಹೀಗೆಯೇ. ಆದರೆ ಎರಡನೇ ಹಂತದ ಸುಧಾರಣಾ ಕ್ರಮಗಳ ಜಾರಿ ಮಾತು ಬಂದಾಗ ಆಯಾ ಸರ್ಕಾರಗಳು ಎಡವಿವೆ.

ಭಾರತದಲ್ಲೂ ಹೀಗೆ ಆಗುವುದೆ?

೧೯೯೯ರಲ್ಲಿ ಐ.ಎಂ.ಎಪ್. ನ ಮ್ಯಾನೇಜಿಂಗ್ ಡೈರೈಕ್ಟರ್ ಮೈಖೇಲ್ ಕ್ಯಾಮ್ಡೆಸನ್, ಭಾರತ ಮತ್ತು ಇತರ ರಾಷ್ಟ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡುತ್ತಾ ಇಂಥ ವೈಫಲ್ಯ ಕೂಡದೆಂದು ತಾಕೀತು ಮಾಡಿದ್ದಾರೆ.

ಭಾರತದ ಮಟ್ಟಿಗೆ ಹೇಳುವುದಾದರೆ ಇತರ ಓರಗೆಯ ರಾಷ್ಟ್ರಗಳಿಗೆ ಹೋಲಿಸಿದಾಗ ಪರಿಸ್ಥಿತಿ ಹಾಗೂ ಜಾರಿ ಪ್ರಗತಿ ಚೆನ್ನಾಗಿದೆ ಎಂದೇ ಅರ್ಥತಜ್ಞರು ಹೇಳುತ್ತಾರೆ. ವಿಶೇಷತಃ ವಿದೇಶಿ  ಅರ್ಥತಜ್ಞರು ಹೇಳುತ್ತಾರೆ. ಎಚ್ಚರಿಗೆ ವಹಿಸಬೇಕಾದ ಒಂದೇ ವಿಷಯ ಎಂದರೆ ರಾಜಕೀಯ ಸ್ಥಿರತೆ ತಪ್ಪದ ನೋಡಿಕೊಳ್ಳಬೇಕು.

ವಾಸ್ತವವಾಗಿ ಆರ್ಥಿಕ ಸುಧಾರಣಾ ಕ್ರಮಗಳನ್ನು ನಂಬಿ ಪಾಲಿಸಿದ ಕಾಂಗ್ರೆಸ್ ಅರ್ಥ  ಸಚಿವರೆಂದರೆ ಮನಮೋಹನಸಿಂಗ್ ಮತ್ತು ಚಿದಂಬರಂ. ಜಸವಂತ್‌ಸಿಂಗ್ ಸಹಾ ಮನೋಭಾವದಲ್ಲಿ ಇವರಿಬ್ಬರನ್ನೂ ಹೋಲುವವರೆ. ಮತ್ತೊಂದು ಸತ್ಯಾಂಶವೆಂದರೆ ಬಿಜೆಪಿ ನೇತೃತ್ವದ ಸರ್ಕಾರವಾಗಲಿ, ಹಿಂದಿನ ಕಾಂಗ್ರೆಸ್ ಸರ್ಕಾರವಾಗಲಿ ಉದಾರೀಕರಣಕ್ಕೆ ಬದ್ಧವಾಗಿಯೇ ಆಡಳಿತ ನಡೆಸುವಂಥವು. ಆದ್ದರಿಂದ ಯಾವೊಂದು ಪಕ್ಷದ ನೇತೃತ್ವದ ಸರ್ಕಾರ ಮುಂದಿನ ವರ್ಷ ಅಧಿಕಾರದಲ್ಲಿ ಇದ್ದರೂ ಆರ್ಥಿಕ ಸುಧಾರಣೆ ಅನಿರ್ಬಾಧಿತ.

ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಜಾರಿ ಬಗೆಗೆ ತಲೆಕೆಡಿಸಿಕೊಳ್ಳುವಂಥದೇ. ಆದರೆ ಎಷ್ಟು ಬೇಗ ಅಥವಾ ಎಷ್ಟು ನಿಧಾನವಾಗಿ ಎರಡನೇ ಹಂತದ ಸುಧಾರಣಾ ಕ್ರಮಗಳನ್ನು ಜಾರಿಗೆ ಕೊಡುತ್ತವೆ ಎಂಬುದು ಆಯಾ ಕಾದ ರಾಜಕೀಯ ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ. ಎಷ್ಟರಮಟ್ಟಿಗೆ ಜನರ ಬವಣೆಯನ್ನು ಕನಿಷ್ಠ ಮಟ್ಟದಲ್ಲಿ ಇರಿಸಬಲ್ಲುದು ಎಂಬುದು ಆಯಾ ಕಾಲದ ಆಡಳಿತಾರೂಢ ಪಕ್ಷದ ಪಾಲಿಗೆ ಒರೆಗಲ್ಲು.

ಬದಲಾವಣೆ ಎಂದರೆ ಜನರ ಪಾಲಿಗೆ ಬವಣೆ ಎನ್ನುವುದು ಕಟ್ಟಿಟ್ಟದ್ದು, ಹೆರಿಗೆ ಬೇನೆ ಇದ್ದ ಹಾಗೆ. ಹೆರಿಗೆ ಸುಸೂತ್ರ ಮುಖ್ಯ ಮಾತ್ರವಲ್ಲ; ತಾಯಿ ಮಗು ಆರೋಗ್ಯವಾಗಿರಬೇಕು ಎನ್ನುವಂತೆ ಜನರೂ ಸರ್ಕಾರ ನಡೆಸುವ ಪಕ್ಷಗಳೂ ಅಂತಿಮವಾಗಿ ಸುರಕ್ಷಿತವಾಗಿರಬೇಕು.

೧೧.೧೨.೨೦೦೨