ಬಜೆಟ್ ಜ್ವರ – ಪ್ರತಿ ಬಾರಿ ಸಾಮಾನ್ಯ. ಆದರೆ ಈ ಬಾರಿ ಮೈಬಿಸಿ ಏರಿಯೇ ಇಲ್ಲ ಯಾರಿಗೂ.

ಕೇಂದ್ರ ಅಥವಾ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಆಗುತ್ತದೆ ಎನ್ನುವ ಮುನ್ನಾ ದಿನಗಳಲ್ಲಿ ಹಣಕಾಸು ಚಟುವಟಿಕೆಗೆ ಸಂಬಂಧಿಸಿದ ಎಲ್ಲರೂ ಭಾರೀ ತಲೆ ತುರಿಸಿಕೊಳ್ಳುತ್ತಾರೆ. ಮಾಧ್ಯಮಗಳವರು ಸಹಾ ಕರ್ತವ್ಯ ಮೂಢರಾಗಿ ನಾನಾ ಸಾಧ್ಯತೆಗಳ ಬಗೆಗೆ, ಬಜೆಟ್ ವಿವರಗಳು ಹೊರಬಿದ್ದ ನಂತರ ಪರಿಣಾಮಗಳ ಬಗೆಗೆ, ಚರ್ಚೆ ನಡೆಸುತ್ತಲೇ ಇರುತ್ತಾರೆ. ದೃಶ್ಯ ಮಾಧ್ಯಮದಲ್ಲಂತೂ ಬಜೆಟ್ ನಂತರ ವಿಶ್ಲೇಷಣೆ ಚರ್ಚೆ ಬಹಳ ಜೋರ್‌ದಾರ್.

ಇವೆಲ್ಲ ಏನೇ ಇದ್ದರೂ ಕಳೆದ ಎರಡು ದಶಕಗಳ ಅವಧಿಯಲ್ಲಿ ಬಜೆಟ್ ಕುರಿತ ಸ್ವಾರಸ್ಯ ಕಡಿಮೆಯಾಗಿದೆ. ಎಷ್ಟೋ ಬಜೆಟ್ ಪ್ರಸ್ತಾವಗಳನ್ನು ಬಜೆಟ್‌ನ ಮುನ್ನಾ ವಾರಗಳ ಅವಧಿಯಲ್ಲಿ ಜಾರಿಗೆ ತರುವ ಪರಿಪಾಠವೂ ಉಂಟು. ಸರ್ಕಾರಿ ಅಂಕೆಯಲ್ಲಿರುವ ಹಾಗೂ ಆಡಳಿತಾತ್ಮಕವಾಗಿ ಬೆಲೆ ಮಾರ್ಪಾಟು ಮಾಡಬಲ್ಲ ಐಟಂಗಳ ವಿಷಯದಲ್ಲಿ ಈ ಮಾತು ಹೆಚ್ಚು ಅನ್ವಯವಾಗುತ್ತದೆ. ಉದಾಹರಣೆಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ. ಈಗ ಅಂಥ ಯಾವ ಬಜೆಟ್ ಪ್ರಸ್ತಾವವೂ ಆಗದೆ ನಿತ್ಯ ಮಾರ್ಪಾಟಿಗೆ ಒಳಗಾಗುವಂಥದು.

ಬಜೆಟ್‌ನಲ್ಲಿ ಸಹಾ ನೇರ ತೆರಿಗೆ ಬಾಬುಗಳು ಮಾತ್ರವೇ ರೋಚಕವಾಗಿ ಪರಿಣಮಿಸುವುದು. ಪರೋಕ್ಷ ತೆರಿಗೆಗಳ ಪರಿಣಾಮ ಸುಲಭ ಹಾಗೂ ನಿಖರ ಗೋಚರ ಆಗುವುದಿಲ್ಲ. ಅದರಿಂದ ಚರ್ಚೆ ಕಡಿಮೆ. ಇನ್ನು ಮುಂದಿನ ವರ್ಷಗಳ ಕೇಂದ್ರ ಮತ್ತು ರಾಜ್ಯ ವ್ಯಾಪ್ತಿಯ ವಾಣಿಜ್ಯ ತೆರಿಗೆಗಳು ಮೌಲ್ಯವರ್ಧಿತ ತೆರಿಗೆಗಳಾಗಿ ಮಾರ್ಪಾಟಾಗುತ್ತವೆ. ಆಗ ಅದು ಸಹಾ ಆಡಳಿತಾತ್ಮಕ ಸ್ವರೂಪದ ತೆರಿಗೆ ಬಾಬು ಆಗಿ ಪರಿಣಮಿಸುವುದರಿಂದ ಬಜೆಟ್ ಸ್ವಾರಸ್ಯ ಇನ್ನೂ ಕಡಿಮೆ ಆಗುತ್ತದೆ.

ವಾಸ್ತವವಾಗಿ ಅಮೆರಿಕ, ಜಪಾನ್, ಸೇರಿ ಮುಂದುವರೆದ ರಾಷ್ಟ್ರಗಳಲ್ಲಿ ಬಜೆಟ್ ಜ್ವರ ಏಳುವುದೇ ಇಲ್ಲ. ತೆರಿಗೆಯೇ ಮುಂತಾದ ಬಾಬುಗಳಲ್ಲಿ ಸರ್ಕಾರವು ಏನು ಮಾರ್ಪಾಟು ಮಾಡಬೇಕು ಎನ್ನುವ ಬಗೆಗೆ ಸರ್ಕಾರದವರು ಮತ್ತು ಜನಪ್ರತಿನಿಧಿಗಳು ತಿಂಗಳುಗಟ್ಟಲೆ ಚರ್ಚೆ ಮಾಡುತ್ತಾರೆ. ಕ್ರಮಗಳನ್ನು ಜಾರಿಗೆ ತರುವಾಗ ದಿಢೀರ್ ಪರಿಣಾಮ ಆಗುವ ಸಾಧ್ಯತೆಯೇ ಕಡಿಮೆ. ಭಾರತದಲ್ಲಿ ಮಾತ್ರ ಕೇಂದ್ರ ಅಥವಾ ರಾಜ್ಯ ಅರ್ಥಸಚಿವರಿಗೆ ಅತಿ ದೊಡ್ಡ ಪಾತ್ರ. ಇಲ್ಲಿಯೂ ತಿಂಗಳುಗಟ್ಟಲೆ ಸಮಾಲೋಚನೆ, ಚರ್ಚೆ ನಡೆದರೂ ಅರ್ಥಸಚಿವ ಖಾತೆಗೆ ಸೇರಿದ ಅಧಿಕಾರಿಗಳಿಂದಾದ ಇಲಾಖೆಗೆ ಮಾತ್ರ ಇದೆಲ್ ಸೀಮಿತ. ಪ್ರಸ್ತಾವಗಳು ಏನಿದ್ದರೂ ಅರ್ಥಸಚಿವನ ಇಚ್ಛಾನುವರ್ತಿ ಮಾತ್ರ. ಸಂಸತ್ತು ಅಥವಾ ವಿಧಾನಸಭೆಯಲ್ಲಿ ಪ್ರಸ್ತಾವ ಮಂಡಿಸಿದಾಗ ಆಡಳಿತ ಪಕ್ಷಕ್ಕೆ ಹೊರತಾದವರಿಗೆ ಹೇಗೋ ಹಾಗೆ, ಆಡಳಿತ ಪಕ್ಷ ಸದಸ್ಯರಿಗೂ ಎಲ್ಲವೂ ಹೊಸತು. ಪ್ರಸ್ತಾವಗಳು ಜನಪ್ರತಿನಿಧಿಗಳಿಗೆ ಮುಂಚೆಯೇ ತಿಳಿದಿರುವಂಥದೇನೋ ಆಗಿರುವುದಿಲ್ಲ. ಪ್ರಸ್ತಾವಗಳ ಬಗೆಗೆ ಸ್ಪಷ್ಟನೆ ಅಥವಾ ವಿಶದೀಕರಣವನ್ನು ಮಂಡನೆ ನಂತರ ಕೊಡುವವರು ಅಧಿಕಾರಿಗಳೇ ಹೌದು! ಇದೊಂದು ವಿಚಿತ್ರ ಹಾಗೂ ವಿಪರೀತ ಸ್ವರೂಪದ ಅಧಿಕಾರಶಾಹಿ ಕಸರತ್ತೇ ಸರಿ.

ಬಜೆಟ್ ಪ್ರಸ್ತಾವಗಳನ್ನು ಅರ್ಥಸಚಿವರು ಮುಂಡಿಸುವ ವ್ಯಾಪ್ತಿ ಕಡಿಮೆಯಾಗಿ, ಬಜೆಟ್‌ಗೆ ಮುಂಚೆಯೇ ನಾನಾ ರೂಪದಲ್ಲಿ ಬಹಿರಂಗಪಡಿಸುವ ಪರಿಪಾಠ ಬೆಳೆದ ಮೇಲೆ ಅಧಿಕಾರಿಗಲು ವಹಿಸುವ ಪಾತ್ರವೇ ಅಧಿಕವಾಗುತ್ತಿರುವುದು.

ಕಳೆದ ವರ್ಷದ ಜೂನ್‌ನಲ್ಲಿ ಕೇಂದ್ರ ಅರ್ಥಸಚಿವ ಖಾತೆಯ ಸಾರಥ್ಯ ಬದಲಾಯಿತು. ಅನೇಕ ಸಂದರ್ಭಗಳಲ್ಲಿ ಆಡಿದ ಮಾತುಗಳಿಂದ ವಿವಾದಕ್ಕೆ ಗುರಿ ಆಗುತ್ತಿದ್ದ ಜಸವಂತಸಿಂಗ್ ಬಂದರು. ವಿದೇಶಾಂಗ ಸಚಿವರಾಗಿ ಒಳ್ಳೆಯ ಹೆಸರು ಸಂಪಾದಿಸಿದ ಹಾಗೂ ಪ್ರಧಾನಿ ಅವರಿಗೆ ಪ್ರಿಯರೆನಿಸಿದ ಇವರು ಅರ್ಥಸಚಿವರಾದಾಗ ಮಹತ್ತಾದದ್ದನ್ನು ಸಾಧಿಸುತ್ತಾರೆ ಎಂಬ ನಿರೀಕ್ಷೆ ತಾನೇ ತಾನಾಗಿ ಗರಿಗೆದರಿತು. ಕಳೆದ ಒಂಬತ್ತು ತಿಂಗಳಲ್ಲಿ ಇವರು ತಮ್ಮದೆಂಬ ಯಾವ ಸಾಧನೆಯಿಂದ ಮರೆದಿದ್ದಾರೆ ಎಂಬುದನ್ನು ಒರೆಗೆ ಹಚ್ಚುವ ಮಾತು ಇರಲಿ; ಅರ್ಥಸಚಿವರಾಗಿ ಏನನ್ನೂ ಬಾಯಿಬಿಡಬಾರದು ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ. ಇದನ್ನೇ ಒಂದು ಸಾಧನೆ ಎನ್ನಬಹುದೇನೋ. ಆದ್ದರಿಂದಲೇ ಬಜೆಟ್ ಮಾಂತ್ರಿಕನಾಗಿ ಯಾವ ಟೊಪ್ಪಿಗೆಯಿಂದ ಯಾವ ಮೊಲವನ್ನು ಹೊರತೆಗೆದು ಜನರಿಗೆ ಮೋಡಿ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕು.

ಜಸವಂತ ಸಿಂಗ್ ಸ್ವತಃ ಜನರಿಂದ ದೂರ ಉಳಿದಿದ್ದು ಅಷ್ಟೇ ಅಲ್ಲ; ಜನರು ಸಹಾ ವೃಥಾ ತಮ್ಮ ಬಳಿಸುಳಿಯುವುದನ್ನು ಸಹ ತಪ್ಪಿಸಿದ್ದಾರೆ. ಬಜೆಟ್ ಮುನ್ನಾ ವಾರಗಳಲ್ಲಿ ಸಾಮಾನ್ಯವಾಗಿ ನಾನಾ ಛಾಯೆಯ ವಾಣಿಜ್ಯೋದ್ಯಮಿಗಳು ತಂತಮ್ಮ ವೇದಿಕೆಗಳ ಮೂಲಕ ಬಜೆಟ್ ಪೂರ್ವ ಸಮೀಕ್ಷೆಗಳನ್ನು ಹರಿಬಿಡುತ್ತಿದ್ದರು. ತಮ್ಮ ಅಹವಾಲುಗಳನ್ನು ಖುದ್ದಾಗಿ ಅರ್ಥ ಸಚಿವರಿಗೆ ಸಲ್ಲಿಸುತ್ತಿದ್ದರು. ಇದು ಒಂದು ವಾಡಿಕೆ. ಆದರೆ ಈ ಬಾರಿ ಜಸವಂತಸಿಂಗ್ ಅದಕ್ಕೆತಡೆ ಹಾಕಿದರು. ಇದರಿಂದ ಈ ಜನ ತಮ್ಮ ಮೂಗಿನ ನೇರಕ್ಕೆ ಮಾತನಾಡಿ ಒತ್ತಡ ತಂತ್ರ ಪ್ರಯೋಗಿಸುವುದು ನಿಂತು ಹೋಯಿತು. ಇದರಿಂದ ವೃಥಾ ಊಹಾಪೋಹ ಹೆಚ್ಚುವುದು ತಪ್ಪಿತು. ಜತೆ ಜತೆಗೆ ಸರ್ಕಾರ ಗೊಂದಲರಹಿತ ಮನಸ್ಸಿನಿಂದ ತನಗೆ ಬೇಕಾದಂತೆ ಅಥವಾ ದೇಶದ ಮಟ್ಟಿಗೆ ಉಪಯುಕ್ತ ಎನ್ನುವಂತೆ ಪ್ರಸ್ತಾವ ರೂಪಿಸುವುದಕ್ಕೆ ಅವಕಾಶ ಹೆಚ್ಚಿದೆ.

೨೦೦೩ರ ಬಜೆಟ್‌ನಲ್ಲಿ ಜಸವಂತ ಸಿಂಗ್ ಯಾವ ಬಗೆಯ ಪ್ರಸ್ತಾವಗಳಿಗೆ ಇಂಬುಕೊಡುತ್ತಾರೆ ಎಂಬುದರ ಸುಳಿವು ಕಡಿಮೆ ಎಂಬುದೇನೋ ಸರಿ. ಆದರೆ ಧ್ಯೇಯ ಧೋರಣೆ ಸಾಮಾನ್ಯವಾಗಿ ಹೇಗಿರುತ್ತದೆ ಎಂಬ ಕಲ್ಪನೆ ಜನರಿಗೆ ಇಲ್ಲದಿಲ್ಲ.

ವಾಸ್ತವವಾಗಿ ವ್ಯಾಪಾರೋದ್ಯಮ ಕುರಿತಂತೆ ಸರ್ಕಾರ ವಹಿಸುವ ಪಾತ್ರ ಸೀಮಿತವಾಗಿರಬೇಕು ಎಂದು ಭಾವಿಸುವವರು ಜಸವಂತ ಸಿಂಗ್. ಈ ಕಾರಣದಿಂದಾಗಿ ಉದಾರೀಕರಣಕ್ಕೆ ಅನುಕೂಲವಾಗಿ ಸ್ಪಂದಿಸಲು ಇವರಿಗೆ ಏನೇನೂ ಕಷ್ಟವಿಲ್ಲ. ಮನಮೋಹನ ಸಿಂಗ್ ಮತ್ತು ಪಿ. ಚಿದಂಬರಂ ಅವರ ಧಾಟಿಯೇ ಇವರದು ಕೂಡಾ. ಅಧಿಕಾರಿಶಾಹಿ, ಹಣ ಪೋಲು ಮಾಡುವಂಥ ಸರ್ಕಾರಿ ಖರ್ಚು, ಆಡಳಿತದಲ್ಲಿ ನಿಧಾನ ದ್ರೋಹ ಇವುಗಳಿಗೆಲ್ಲ ಸಿಂಗ್ ವಿರೋಧಿ. ದೇಶದ ಮೇಲಿನ ಸಾಲದ ಭಾರವು ಭರಿಸಲಾಗದಷ್ಟು ಬೆಳೆಯಬಾರದು ಎಂದು ನಂಬಿರುವವರು. ಹಿಂದಿನ ಸರ್ಕಾರಗಳು ಇಂಧನ ಅಭಿವೃದ್ಧಿ ಕ್ಷೇತ್ರವನ್ನು ಸತತವಾಗಿ ಕಡೆಗಣಿಸಿದ್ದನ್ನು ಕೋಪದಿಂದ ಟೀಕಿಸುವವರು ಇವರು. ಮಧ್ಯಮ ವರ್ಗದವರು ಮಹತ್ವದ ಪಾತ್ರ ವಹಿಸಬೇಕಾದವರು ಎಂದು ನಂಬಿದವರು. ಕಾಂಗ್ರೆಸ್ ಆಡಳಿತವಿದ್ದಾಗ ಆರ್ಥಿಕ ವಿಷಯಗಳನ್ನು ಕುರಿತ ಬಿ.ಜೆ.ಪಿ. ವಕ್ತಾರರಾಗಿ ಜಸವಂತ ಸಿಂಗ್ ಕಾರ್ಯ ನಿರ್ವಹಿಸಿದ ವೈಖರಿಯನ್ನು ಮೆಚ್ಚುಗೆಯಿಂದ ಸ್ಮರಿಸುವವರಿದ್ದಾರೆ.

ಈಚಗೆ ವರದಿಯಾದಂತೆ ಅರ್ಥ ಸಚಿವರು ಪ್ರಧಾನ ಆಡಳಿತ ಪಕ್ಷವಾದ ಬಿ.ಜೆ.ಪಿ.ಯ ಅಧ್ಯಕ್ಷರನ್ನು ಭೇಟಿ ಮಾಡಿ ಬಜೆಟ್‌ನ ಸಂಭಾವ್ಯ ಪ್ರಸ್ತಾವಗಳ ಬಗೆಗೆ ಚರ್ಚಿಸಿದ್ದಾರೆ. ಬಜೆಟ್ ಪೂರ್ವ ಮನವಿಗಳನ್ನು ತುಂಡರಿಸಿದ್ದರಿಂದ ಜಸವಂತ ಸಿಂಗ್ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲಾಗದೆಂಬ ಭಾವನೆ ಮೂಡಿತ್ತು. ಆದರೀಗ ಬಿ.ಜೆ.ಪಿ.ಯು ಒತ್ತಾಯಿಸಿಕೊಂಡು ಬರುತ್ತಿರುವ ಕೆಲವು ಅಂಶಗಳಿಗೆ ಚಾಲನೆ ಸಿಗಬಹುದು ಎಂಬ ಅಂದಾಜು ಮೂಡಿದೆ.

ಬಿ.ಜೆ.ಪಿ.ಯು ಮೊದಲಿನಿಂದಲೂ ಮಧ್ಯಮ ವರ್ಗಗಳ ಪರವಾಗಿ ಹಾಗೂ ನಗರವಾಸಿಗಳ ಪರವಾಗಿ ಧ್ವನಿ ಎತ್ತುತ್ತದೆ ಎಂಬುದು ಜನಜನಿತ. ಆದ್ದರಿಂದಲೇ ವರಮಾನ ಕರದ ವ್ಯಾಪ್ತಿಯನ್ನು ಅಥವಾ ಪ್ರಖರತೆಯನ್ನು ಕಡಿಮೆ ಮಾಡಿದರೆ ತಾನು ನಂಬಿರುವ ಮಧ್ಯಮ ವರ್ಗಕ್ಕೆ ಅನುಕೂಲವಾಗುತ್ತದೆ ಎಂದು ಬಿ.ಜೆ.ಪಿ.ಯೂ, ಸಂಘ ಪರಿವಾರದವರಾದ ಇತರ ಘಟಕಗಳೂ ಭಾವಿಸುತ್ತಾ ಬಂದಿವೆ. ಹಿಂದಿನಂತೆ ತಾನು ನಗರವಾಸಿಗಳ ಪರ ಎಂದು ತೋರಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದರಿಂದ ಗ್ರಾಮವಾಸಿಗಳಿಗೆ ಅಸಂತುಷ್ಟಿ. ಆದ್ದರಿಂದ ಮಧ್ಯಮ ವರ್ಗ ಪರ ಎಂದು ಮಾತ್ರ ತೋರ್ಪಡಿಸಿಕೊಳ್ಳಲು ಶಕ್ಯವಿದೆ. ಬಡವರು ಯಾರೂ ಇದರಿಂದ ಕೋಪಿಸಿಕೊಳ್ಳುವುದಿಲ್ಲ! ಅವರನ್ನು ನಿಭಾಯಿಸುವ ಮಾರ್ಗೋಪಾಯಗಳೇ ಬೇರೆ. ಅವು ಬಿ.ಜೆ.ಪಿ.ಗೂ ಕಾಂಗ್ರೆಸಿಗೂ ಸಮಾನವಾದವು.

ತಾನು ಅಂದುಕೊಂಡಂತೆ ಸಾಧಿಸಲು ಈ ಹಿಂದಿನ ಬಜೆಟ್‌ಗಳಲ್ಲಿ ಏಕೆ ಸಾಧ್ಯವಾಗಲಿಲ್ಲ? ಎನ್ನುವ ಪ್ರಶಗೆ ಉತ್ತರ ಕೊಡುವುದು ನಿಜವಾಗಿ ಜಟಿಲ. ದೆಹಲಿ ಮಾತ್ರವಲ್ಲದೆ ಇತರ ಕಡೆ ಸಹಾ ದಟ್ಟವಾಗಿರುವ ಜನಜನಿತ ಭಾವನೆ ಎಂದರೆ ಉದಾರೀಕರಣ ವ್ಯವಸ್ಥೆ ಬರತೊಡಗಿದಂತೆ ಆರ್ಥಿಕತೆ ಮೇಲೆ ವಿಶ್ವಬ್ಯಾಂಕು ಮತ್ತಿತರ ದೂರ ನಿಯಂತ್ರಣ ಹಿತಗಳ ಪ್ರಭಾವ ಅಧಿಕವಾಗಿದೆ. ವ್ಯಾಪಾರೋದ್ದೇಶದ ಈ ಹಿತಗಳೇ ಸಬ್ಸಿಡಿಯೇ ಮುಂತಾದ ವಿಚಾರಗಳಿಗೂ ಪ್ರತಿರೋಧ ಒಡ್ಡುತ್ತಿರುವುದು. ಈಗಂತೂ ಇಂಥ ಪರಿಸ್ಥಿತಿ ಏನೇ ಇದ್ದರೂ ಮುಂಬರುವ ಮಹಾ ಚುನಾವಣೆಗೆ ಸಜ್ಜಿಕೆ  ಎಂಬಂತೆ ಕೆಲವು ಕ್ರಮಗಳನ್ನು ಬಿ.ಜೆ.ಪಿ. ಸರ್ಕಾರ  ತೆಗೆದುಕೊಳ್ಳಲೇ ಬೇಕಾಗುತ್ತದೆ. ಚುನಾವಣೆಗೆ ಮುನ್ನ ನಾಳಿನದು ಬಿಟ್ಟರೆ ಇನ್ನೊಂದು ಬಜೆಟ್ ಇಲ್ಲದೆಯೂ ಇರಬಹುದು.

ಬಿ.ಜೆ.ಪಿ.ಗೆ ತಟ್ಟಿರುವ ಮಧ್ಯಮ ವರ್ಗ ಜನರ ಉಸಿರಿನ ಬಿಸಿ ಎಂದರೆ, ಬಡ್ಡಿ ದರಗಳನ್ನು ಇಳಿಸಿದ್ದರಿಂದ ಆದುದು. ಉಳಿತಾಯಕ್ಕೆ ಇದ್ದ ಒತ್ತಾಯವೇ ಇದರಿಂದ ಹೋಗಿಬಿಟ್ಟಿದೆ. ನಿವೃತ್ತರ ಉದರಂಭರಣವು ಬಡ್ಡಿದರ ಇಳಿತದಿಂದ ಕಷ್ಟವಾಗತೊಡಗಿದೆ. ವರಮಾನ ಕರ ಮೂಲದ ಕಾರ್ಪಣ್ಯವನ್ನು ನೀಗಿಸಲು ಸಾಧ್ಯವಾಗದೇ ಇದ್ದರೂ, ಉಳಿತಾಯಕ್ಕೆ ಕುಮ್ಮಕ್ಕು ಕೊಡುವ ಕ್ರಮಗಳನ್ನಾದರೂ ರೂಪಿಸುವ ಅನಿವಾರ್ಯತೆ ಜಸವಂತ ಸಿಂಗ್ ಅವರ ಪಾಲಿಗೆ ಒದಗಿಬಂದಿದೆ.

ಒಂದು ಮಾತು ನಿಜ. ಉದಾರೀಕರಣದ ಫಲವಾಗಿ, ಅಂದರೆ ಉದಾರೀಕರಣವು ನಿರೀಕ್ಷಿತ ವೇಗದಲ್ಲಿ ಯಶಸ್ವಿ ಆಗದಿರುವ ಪರಿಣಾಮವಾಗಿ, ಸಾಮಾನ್ಯ ಜನರ ಖರೀದಿ ಸಾಮರ್ಥ್ಯ ಪೂರಾ ಕಡಿಮೆಯಾಗಿದೆ. ಇದು ವೃದ್ಧಿಗೊಂಡು ಜನರು ಹೆಚ್ಚು ಖರ್ಚು ಮಾಡಲು ಶಕ್ತರಾಗುವ ಹೊರತು ಉದ್ಯಮ ವೃದ್ಧಿಗೆ ಅವಕಾಶ ಕಡಿಮೆ. ವಿದೇಶಿ ಸಂಪನ್ನರು ಬಂಡವಾಳ ತರುತ್ತಿಲ್ಲ; ಭಾರತದ ಉದ್ಯಮಗಳಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಿಲ್ಲ.

ವಿದೇಶಿ ಹೂಡಿಕೆದಾರರು ಚೀನಾ ಮತ್ತು ಇತರ ಏಷ್ಯ ರಾಷ್ಟ್ರಗಳೇ ಹಣ ಹೂಡಲು ಪೊಗದಸ್ತಾಗಿವೆ ಎಂದು ಭಾವಿಸಿ ಅತ್ತ ಗಮನ ಕೊಡುತ್ತಿದ್ದಾರೆ. ಅವರಿಗಾಗಿ ಇನ್ನೆಷ್ಟು ಕಾಯಬೇಕು?

ಕಳೆದ ಬಾರಿ ಕೃಷಿ ಉತ್ಪಾದನೆ, ಮಳೆ ಅಭಾವದ ಕಾರಣ ಕೈಕೊಟ್ಟಿತು. ಇದು ಕೃಷಿ ರಾಷ್ಟ್ರವಾದ ಭಾರತದ ಮಟ್ಟಿಗೆ ಭಾರೀ ದಡ್ಡ ಪೆಟ್ಟು.

ಜಸವಂತ ಸಿಂಗ್ ಕೈಲಿ ದೈವಾಂಶ ಸಂಭೂತ ಮಾಯಾದಂಡ ಯಾವುದೂ ಇಲ್ಲ.

ಅಥವಾ ಇದೆಯೋ?!

೨೬.೦೨.೨೦೦೩