‘ನಾನು ಸಚಿವನಾಗಿ ಮುಂದುವರೆಯಬೇಕಾದರೆ ಕಾರ್ಮಿಕ ಕಾನೂನು ಸುಧಾರಣೆ ದಿಕ್ಕಿನಲ್ಲಿ ಏನನ್ನಾದರೂ ಮಾಡಬೇಕು. ಇದನ್ನೊಂದು ಸವಾಲಾಗಿ ಭಾವಿಸಿದ್ದೇನೆ.’

– ಇದು ಕೇಂದ್ರ ಕಾರ್ಮಿಕ ಖಾತೆ ಸಚಿವ ಸಾಹಿಬ್ ಸಿಂಗ್ ವರ್ವಾ ಈಚೆಗೆ ಚೆನ್ನೈನಲ್ಲಿ ಉಸುರಿದ ಮಾತು.

ಈ ಸಚಿವ ಮಾತ್ರವಲ್ಲ; ಯಾರೇ ಆದರೂ ಈ ಕಾಲಘಟ್ಟದಲ್ಲಿ ಆಡಬೇಕಾದ ಮಾತಿದು. ಕಾರ್ಮಿಕ ವ್ಯವಹಾರಗಳು ಮತ್ತು ಕಾರ್ಮಿಕ ಕಾನೂನು ಜಾರಿಗೆ ತರುವುದು ಇದೀಗ ಅತಿ ಜರೂರು ಆಗಿದೆ. ಮಿಕ್ಕೆಲ್ಲ ಬಾಬುಗಳ ಸುಧಾರಣಾ ಕ್ರಮಗಳು ಒಂದಿಲ್ಲೊಂದು ಬಗೆಯಲ್ಲಿ ಜಾರಿಗೆ ಬರುತ್ತಿದ್ದರೂ ಕಾರ್ಮಿಕರ ವ್ಯವಹಾರಗಳನ್ನು ಕುರಿತ ಸುಧಾರಣೆ ಇನ್ನೂ ಉಳಿದಿದೆ. ಮಾತ್ರವಲ್ಲ; ಮಾನವ ಸಂಪನ್ಮೂಲ ಎಂದೇ ಅಮೂಲ್ಯವೆಂಬಂತೆ ಗುರುತಿಸಲಾದ ಕಾರ್ಮಿಕರ ಬದುಕಿನ ಭವಿಷ್ಯ ಕುರಿತಂತೆ ಹೊಸ ವಿಚಾರಧಾರೆ ಆರಂಭವೇ ಆಗಿಲ್ಲ. ಕಾರ್ಮಿಕ ವ್ಯವಹಾರಗಳ ಸುಧಾರಣಾ ಕ್ರಮಗಳು ರೂಪುಗೊಂಡು ಜಾರಿ ಆರಂಭವಾಗುವ ತನಕ ಒಟ್ಟಾರೆ ಆರ್ಥಿಕ ಸುಧಾರಣೆಯೇ ಅಪೂರ್ಣವಾಗಿ ಉಳಿಯುತ್ತದೆ. ಆದ್ದರಿಂದಲೇ ಜರೂರು. ಕಾರ್ಮಿಕ ಖಾತೆ ಸಚಿವರ ಪಾಲಿಗೆ ಸವಾಲು ಆಗುವಷ್ಟು ಒತ್ತಡ ಬರಲು ಅದೇ ಕಾರಣ.

ಉದ್ಯಮದ ಮೂಲ ತತ್ವಗಳು ಹೇಳುವ ಪ್ರಕಾರ ಅತಿ ಮುಖ್ಯವಾಗಿ ಬೇಕಾಗುವುದು ಹಣ. ಅಂದರೆ ಬಂಡವಾಳ. ಅದರೊಟ್ಟಿಗೆ ತಂತ್ರಜ್ಞಾನ ಮತ್ತು ಯಂತ್ರೋಪಕರಣ ಹರಿದು ಬರಬೇಕು. ವಿದ್ಯುತ್ತು, ಭೂಮಿಯೇ ಮುಂತಾದ ಮೂಲ ಸೌಲಭ್ಯಗಳು ಸಿಗುವಂತಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದುಡಿಯುವ ಕೈಗಳು ಲಭ್ಯವಿರಬೇಕು. ಲಾಭದಾಯಕ ಷರತ್ತುಗಳ ಅನ್ವಯ ಅದು ಖಚಿತವಾಗುವತನಕ ಎಂಥ ಗಟ್ಟಿ ಉದ್ಯಮಶೀಲನೂ ಉದ್ಯಮ ಆರಂಭಿಸಲು ಮುಂದೆ ಬರುವುದಿಲ್ಲ.

ಸದ್ಯ ವಿದೇಶಿ ಬಂಡವಾಳ ಹರಿದು ಬರುವುದಕ್ಕೆ ಅಡ್ಡಿ ಎನಿಸಿರುವ ಅಂಶಗಳಲ್ಲಿ, ಕಾರ್ಮಿಕ ವ್ಯವಹಾರಗಳ ಸುಧಾರಣಾ ಕ್ರಮಗಳು ಬರುವುದಕ್ಕೆ ತಡವಾಗುತ್ತಿರುವುದೂ ಮುಖ್ಯ ಕಾರಣವಾಗಿದೆ.

ವಾಸ್ತವವಾಗಿ ಸ್ವತಂತ್ರ ಭಾರತದ ನಲವತ್ತು ವರ್ಷ ಕಾಲ ದೇಶದ ಪಾಲಿಗೆ ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂಬುದೇ ತಾರಕ ಮಂತ್ರವಾಗಿತ್ತು. ಆರಂಭದಿಂದ ಈವರೆಗೆ ಕಚೇರಿಗಳಲ್ಲೂ, ಕಾರ್ಖಾನೆಗಳಲ್ಲೂ ಜನವೋ ಜನ. ಅವರಲ್ಲಿ ಎಷ್ಟು ಜನ ಎಷ್ಟೆಷ್ಟು ಉಪಯುಕ್ತರಾಗಿದ್ದಾರೆ ಎಂಬುದನ್ನು ಆಡಿಟ್ ಮಾಡುವ ಗೋಜೀಗೇ ಹೋದುದಿಲ್ಲ. ಕಾರ್ಮಿಕರಿಗೆ, ಇತರ ಬಗೆಯ ಉದ್ಯೋಗಸ್ಥರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸುತ್ತಾ ಅವರಿಗೆ ರಕ್ಷಣೆ ಒದಗಿಸುತ್ತಾ ಹೋಗುವುದೇ ಸರ್ಕಾರದ ಕಲ್ಯಾಣ ಕಾರ್ಯಕ್ರಮ ಎಂದು ನಂಬಲಾಯಿತು. ಸಮಾಜವಾದಿ ಸರ್ಕಾರವಾದ್ದರಿಂದ ಇದರಲ್ಲಿ ಯಾವ ತಪ್ಪೂ ಕಾಣಲಿಲ್ಲ.

ಜಾಗತಿಕ ಸ್ವರೂಪದ ಮಾರುಕಟ್ಟೆ ಪ್ರಧಾನ ಆರ್ಥಿಕತೆಗೆ ತೆರೆದುಕೊಂಡಾಗಲೇ ನಮ್ಮ ನಿಜ ಸ್ವರೂಪ ಏನೆಂದು ಅರ್ಥವಾಗಿದ್ದು. ನಾವು ಸರಕು ಮತ್ತು ಸೇವೆಗಳನ್ನು ಅಗ್ಗವಾಗಿ ತಯಾರಿಸುತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ಜನರನ್ನು ನೇಮಿಸಿಕೊಳ್ಳುವುದರಿಂದ ಹಾಗೂ ಕೆಲಸಗಾರರ ಉತ್ಪಾದಕತೆ ಬಹಳ ಕಡಿಮೆ ಇರುವುದರಿಂದ ಉತ್ಪಾದನೆ ದುಬಾರಿ ಎನಿಸಿಕೊಳ್ಳುತ್ತಿದೆ ಎನ್ನುವುದು ನಮ್ಮ ನಿಜ ಸ್ವರೂಪ. ಪೈಪೋಟಿ ಎದುರಿಸಿ ಬದುಕಬೇಕಾದರೆ ಇಲ್ಲೆಲ್ಲ ಸುಧಾರಣೆ ಆಗಬೇಕು.

ಮೊಟ್ಟ ಮೊದಲಿಗೆ, ಅಗತ್ಯಕ್ಕಿಂತ ಅಧಿಕ ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ತಪ್ಪು ಎಂಬ ಮನವರಿಕೆ ಆಗಿದ್ದೇ ನಿಜ ಸ್ವರೂಪ ತಿಳಿದುಕೊಂಡಿದ್ದರ ಪರಿಣಾಮ.

ಆದರೆ ಕಾನೂನು ಪ್ರಕಾರ ಹಾಗೂ ನಂಬಿಕೆ ರಿವಾಜುಗಳ ಅನ್ವಯ ಕಾರ್ಮಿಕರಿಗೆ ಸಾಕಷ್ಟು ರಕ್ಷಣೆ ಕೊಟ್ಟು ಆಗಿದೆ. ಯಾರೇ ಆದರೂ ಉದ್ಯಮವನ್ನು ಆರಂಭಿಸಬಹುದು. ಆದರೆ ಲಾಭ ಬರುತ್ತಿಲ್ಲವೆಂಬ ಕಾರಣಕ್ಕೆ ಅಥವಾ ಇನ್ನಾವುದೋ ನೆಪಕ್ಕೆ ಉದ್ಯಮಿಯು ಉದ್ಯಮವನ್ನು ಮುಚ್ಚಲು ಸಾಧ್ಯವಾಗುವುದಿಲ್ಲ. ಇದು ವಸ್ತು ಸ್ಥಿತಿ.

ಇದನ್ನು ಹೊಸ ಆರ್ಥಿಕ ವಿಚಾರಧಾರೆ ಒಪ್ಪಿಕೊಳ್ಳುವುದಿಲ್ಲ. ಅಭಿವೃದ್ಧಿಗೆ, ಲಾಭಗಳಿಕೆಗೆ ಪ್ರತಿಯೊಬ್ಬ, ಸ್ಪಷ್ಟವಾಗಿ ಹೇಳುವುದಾದರೆ ಬಿಡಿಬಿಡಿಯಾಗಿ ಪ್ರತಿಯೊಬ್ಬ, ಕಾರ್ಮಿಕ ನೆರವಾಗಬೇಕು. ಇದನ್ನು, ಇಂಥ ಹಲವಾರು ವಿಚಾರಗಳನ್ನು ಮನ್ನಿಸಲು ಸಾಧ್ಯವಾಗಬೇಕಾದರೆ ಕಾರ್ಮಿಕ ಕಾನೂನಿನ ತಿದ್ದುಪಡಿ ಆಗಬೇಕು. ಹೊಸ ಕಾನೂನು ಜಾರಿಯಾಗಬೇಕು.

ಯಾರನ್ನೇ ಆಗಲಿ; ಕೆಲಸದಿಂದ ತೆಗೆಯುತ್ತೇನೆ ಎಂದರೆ ಪ್ರತಿರೋಧ ಬರುತ್ತದೆ. ಕಾನೂನಿನ ರಕ್ಷಣೆಯು ಕಾರ್ಮಿಕರಿಗೆ ಸಾಕಷ್ಟಿದೆ. ಅದು ಸುಲಭವಲ್ಲ. ಆದರೆ ಕೆಲಸ ಬಿಡಿರೆಂದು ಇದೇ ಕಾರ್ಮಿಕರನ್ನು ಪ್ರಚೋದಿಸಬಹುದು. ಹಾಗೆ ಮಾಡಲು ಆಮಿಷ ಒಡ್ಡಬಹುದು. ಈ ಬಗೆಯ ವಿಚಾರಧಾರೆಯೇ ಸ್ವಯಂ ನಿವೃತ್ತಿ ಯೋಜನೆಗೆ ದಾರಿ ಮಾಡಿಕೊಟ್ಟಿತು.

ಸ್ವಯಂ ನಿವೃತ್ತಿ ಯೋಜನೆಯು ಉದ್ಯೋಗ ತ್ಯಜಿಸಿದವರ ಪಾಲಿಗೆ ಲಾಭಕಾರಿ ಆಗಿ ಪರಿಣಮಿಸಿತೇ ಎನ್ನುವುದು ಬೇರೆ ಮಾತು. ಅದು ಪ್ರತ್ಯೇಕವಾಗಿ ಚರ್ಚಿಸಲು ಯೋಗ್ಯ. ಆದರೆ ಕಾನೂನಿನ ತಿದ್ದುಪಡಿ ಮಾಡದೆ ಕೆಲಸದಿಂದ ಜನರನ್ನು ತೆಗೆಯಲು ಕೈಗೊಂಡ ಪ್ರಥಮ ಸುಧಾರಣಾ ಕ್ರಮ ಎಂಬುದಂತೂ ನಿಜ.

ವಾಸ್ತವವಾಗಿ ಸದ್ಯ ಕಾನೂನಿನ ರಕ್ಷಣೆ ದೂರಕಿರುವುದು ಸಂಘಟಿತ ಕಾರ್ಮಿಕರಿಗೆ ಮಾತ್ರ. ಅಂದರೆ ವ್ಯವಸ್ಥಿತವಾಗಿ ಕಾರ್ಮಿಕ ಸಂಘಗಳ ಆಸರೆ ಪಡೆಯುವವರಿಗೆ ಮಾತ್ರ. ಕಾರ್ಮಿಕ ಸಂಘಗಳಿಂದಾಗಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಹೀಗೆ ಉದ್ಯಮ ಯಾವುದೇ ಆಗಿದ್ದರೂ ಕಾರ್ಮಿಕರಿಗೆ ರಕ್ಷಣೆ ದೊರೆತಂತಾಗಿದೆ. ಆದರೆ ಅಸಂಘಟಿತರೆನಿಸಿಕೊಂಡ ಕಾರ್ಮಿಕರಿಗೆ ಯಾವುದೇ ರಕ್ಷಣೆ ಇಲ್ಲ. ದಿನಗೂಲಿ, ಇಷ್ಟು ಕೆಲಸಕ್ಕೆ ಇಷ್ಟು ಮಜೂರಿ, ಕೆಲಸ ಇದ್ದಾಗ ಮಾತ್ರ ಕೂಲಿ, ಕೂಲಿಯನ್ನು ಅಥವಾ ಶುಲ್ಕವನ್ನು ಕೊಟ್ಟು ನಂತರ ಇನ್ನಾವುದೇ ಜವಾಬ್ದಾರಿ ಉದ್ಯೋಗದಾತನಿಗೆ ಇರುವುದಿಲ್ಲ. ರಜೆ, ಆರೋಗ್ಯ ಸೌಲಭ್ಯ ಯಾವುದೂ ಇರುವುದಿಲ್ಲ ಎನ್ನುವಂಥ ದುರ್ಭರ ಪರಿಸ್ಥಿತಿಯಲ್ಲಿ ಬದುಕುತ್ತಿರುವವರು ಅಸಂಘಟಿತ ಕಾರ್ಮಿಕರು. ಇವರಿಗೆ ಕಾನೂನಿನ ಯಾವ ರಕ್ಷಣೆಯೂ ಇರುವುದಿಲ್ಲ.

ದೇಶದ ಶೇ. ೯೨ರಷ್ಟು ಅಂದರೆ ಸುಮಾರು ೩೫ ಕೋಟಿ ಮಂದಿ ಇರುವುದು ಇಂಥ ಅಭದ್ರ ಪರಿಸ್ಥಿತಿಯಲ್ಲೇ. ಹೊಸದಾಗಿ ಬರುವ ಕಾರ್ಮಿಕ ಕಾನೂನು ಅಥವಾ ಹಳೆಯ ಕಾನೂನಿನ ತಿದ್ದುಪಡಿಯು ಅಸಂಘಟಿತ ಕಾರ್ಮಿಕರಿಗೆ ಯಾವ ರೀತಿ ನೆರವಾಗುವಂತೆ ಇರುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಸಂಘಟಿತ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಬ್ಬರಿಗೂ ನೆರವಾಗುವಂಥ ಕಾನೂನು ಸುಧಾರಣೆ ಜಾರಿಗೆ ಬರುವುದೆಂದು ಸಚಿವರು ಹೇಳಿರುವುದುಂಟು. ಆದರೆ ಅಂಥ ಸುಧಾರಣಾ ಕ್ರಮದ ಸ್ವರೂಪ ಹೇಗಿರುತ್ತದೆ ಎಂಬುದು ಮಾತ್ರ ಸ್ಪಷ್ಟವಿಲ್ಲ.

ದೇಶದಲ್ಲಿ ಸದ್ಯ ಸುಮಾರು ೮೦ ಬಗೆಯ ಕಾರ್ಮಿಕ ಕಾನೂನುಗಳಿವೆ. ಅದರಲ್ಲಿ ಅನೇಕ ನಿರುಪಯುಕ್ತ. ಅಂದರೆ ಅವು ಜಾರಿ ಮಾಡಲು ಶಕ್ಯವಾಗುವ ರೂಪದಲ್ಲಿ ಇರುವುದಿಲ್ಲ. ಅಂಥದ್ದನ್ನು ಕಾನೂನು ಪುಸ್ತಕಗಳಲ್ಲಿ ಇಟ್ಟುಕೊಂಡಾದರೂ ಏನು ಉಪಯೋಗ?

ಮುಂದೆ ಕೂಡಾ ಸುಧಾರಿತ ಕಾನೂನು ಬರೆದು, ಅಂಗೀಕರಿಸಿ, ಕಾನೂನು ಕಡತ ಮತ್ತು ಗ್ರಂಥಗಳಲ್ಲಿ ಇರಿಸಿಕೊಂಡಿದ್ದರೆ ಪ್ರಯೋಜನವೇನು? ಜಾರಿಗೆ ಮಾಡಲಾಗದ ಕಾನೂನು ಹೆಚ್ಚಿಗೆ ಇದ್ದಷ್ಟೂ ವ್ಯಾಖ್ಯೆಗಳೂ ನಿರೂಪಣೆಗಳೂ ಬಗೆ ಬಗೆಯಾಗಿ ಹುಟ್ಟಿಕೊಳ್ಳುತ್ತವೆ. ಇದರಿಂದ ವ್ಯಾಜ್ಯಗಳೂ, ಕಟ್ಲೆಗಳೂ ಹೆಚ್ಚುತ್ತವೆ. ಕೋರ್ಟುಗಳಿಗೆ ಪ್ರಕರಣಗಲೂ ಹೋಗುವುದು ಹೆಚ್ಚುತ್ತದೆ. ಇತ್ಯರ್ಥ ನಿಧಾನವಾಗುತ್ತದೆ. ಪ್ರಗತಿ ಕುಂಠಿತವಾಗುತ್ತದೆ.

ಉದ್ಯಮಿಗಳು ಇದನ್ನೇ ಹೇಳುತ್ತಾರೆ, ಕಾರ್ಯಸಾಧು ಎನಿಸುವಂಥ ಕಾನೂನು ಇರಬೇಕು ಎನ್ನುತ್ತಾರೆ. ಕಾರ್ಮಿಕನಿಗೆ ಪ್ರತಿಫಲ ಚೆನ್ನಾಗಿರುವಂತಾಗಬೇಕು. ಅದನ್ನು, ಅಂದರೆ ಪ್ರತಿಫಲ ಸೂಕ್ತವಾಗಿರಬೇಕು ಎನ್ನುವುದನ್ನು, ಪ್ರಶ್ನಿಸಲು ಎಷ್ಟಾದರೂ ಅವಕಾಶ ಇರಬೇಕು ನಿಜ. ಆದರೆ ಕಾರ್ಮಿಕರು ಹಕ್ಕುಗಳ ಪ್ರತಿಪಾದನೆಯನ್ನೇ ಮುಂದಿಟ್ಟುಕೊಂಡು ಉದ್ಯಮದ ಜೀವವನ್ನೇ ಹಿಂಡಿ ಹಾಕುವುದಕ್ಕೆ ಸಾಧ್ಯವಿರಬಾರದು.

ಹೀಗೆ ವಾದಿಸುವುದರಲ್ಲೂ ನ್ಯಾಯವಿದೆ. ಉದ್ಯಮದ ಪ್ರಗತಿಗೆ ನೆರವಾಗುವ ಕಾರ್ಮಿಕ ಧೋರಣೆ ತಪ್ಪದಿದ್ದರೆ ಸಹಕರಿಸಲು ತಾವು ಸಿದ್ಧ ಎನ್ನುವ ಉದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು. ಹಾಗೆ ಆಗುವುದಕ್ಕೆ ನೆರವಾಗುವಂಥ ಕಾರ್ಮಿಕ ಕಾನೂನು ರೂಪುಗೊಳ್ಳಬೇಕು.

ಈ ಕಾರ್ಯಕ್ಕಾಗಿ ಸರ್ಕಾರ ಕೂಡಾ ಶಾಸನ ಕ್ರಮಗಳನ್ನು ರೂಪಿಸುವಾಗ ಉದ್ಯೋಗದಾತರು ಮತ್ತು ಉದ್ಯೋಗಿಗಳು ಇಬ್ಬರೂ ಪರಸ್ಪರ ಒಪ್ಪಿಕೊಳ್ಳುವಂಥ ಕ್ರಮಗಳನ್ನೇ ರೂಪಿಸಬೇಕು. ಈ ಗುರುತರ ಜವಾಬ್ದಾರಿಯೇ ಈಗ ರಾಜಕಾರಣಿಗಳ ಹೆಗಲಿಗೆ ಇರುವುದು. ಕಾರ್ಮಿಕರ ಪಾಲಿಗೆ ಹಕ್ಕುಗಳು ಮಾತ್ರವಲ್ಲದೆ ಕರ್ತವ್ಯಗಳೂ, ಜವಾಬ್ದಾರಿಗಳೂ ಸಮಾನವಾಗಿ ಇರುವಂಥ ಕಾನೂನು ಸುಧಾರಣೆ ಜಾರಿಗೆ ತರಬೇಕು. ಕಾರ್ಮಿಕರ ವ್ಯಾಜ್ಯಗಳು ಸದಾ ಕಾಲ ಇರುವಂತೆ ನೋಡಿಕೊಂಡು ತಮ್ಮ ವೋಟು ಬ್ಯಾಂಕುಗಳು ಸುವ್ಯವಸ್ಥಿತವಾಗಿ ಮುಂದುವರೆಯಬೇಕು ಎನ್ನುವ ಸ್ವಹಿತವು ರಾಜಕಾರಣಿಗಳಿಗೆ ಮುಖ್ಯವಾಗಬಾರದು.

ವಾಸ್ತವವಾಗಿ ವ್ಯಾಜ್ಯಗಳು ಕೋರ್ಟಿನ ಮೆಟ್ಟಿಲು ಹತ್ತುವಂತಾದರೆಯೇ ಪರಿಸ್ಥಿತಿ ಪ್ರಕೋಪಕ್ಕೆ ಹೋಗುವುದು. ಆ ಘಟ್ಟಕ್ಕೆ ವಿವಾದ ಹೋಗುವುದಕ್ಕೆ ಮುನ್ನವೇ ಅದು ಪರಿಹಾರಗೊಳ್ಳುವಂಥ ವ್ಯವಸ್ಥೆ ಇದೀಗ ರೂಪುಗೊಳ್ಳಬೇಕು.

ಈ ಹಿನ್ನೆಲೆಯಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳ ಉನ್ನತ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಕಾರ್ಮಿಕ ಕಮೀಷನರ್ ಅವರು ಕೊಡುವ ತೀರ್ಪು ಅಥವಾ ಸೂಚಿಸುವ ಪರಿಹಾರೋಪಾಯವೇ ಅಂತಿಮ ಆಗಬಾರದು. ಪರಸ್ಪರ ಚರ್ಚೆ ಮೂಲಕ ಅನಂತರವೂ ಪರಿಹಾರ ಸಿಗುವಂತೆ ಮಾಡಬೇಕು. ಅದಕ್ಕೆ ಕಾನೂನಿನಲ್ಲಿ ಅವಕಾಶ ಇರುವಂತೆ ನೋಡಿಕೊಳ್ಳಬೇಕು ಎಂಬುದು ಸರ್ಕಾರದ ವಿಚಾರವಾಗಿದೆ.

ಸುಧಾರಣಾ ಕ್ರಮಗಳು ಜಾರಿಗೆ ಬರುವ ವಿಚಾರ ಏನೇ ಇದ್ದರೂ, ಈಗಿನ ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳು ಇನ್ನೂ ಬಲಗೊಳ್ಳಬೇಕು ಎಂಬುದು ಸರ್ಕಾರದ ನಿಲುವಾಗಿದೆ.

ನಿಜವಾಗಿ ಸವಾಲು ಆಗಿರುವುದು ಕಾರ್ಮಿಕರ ಉತ್ಪಾದಕತೆಗೂ, ಅವರಿಗೆ ಕೊಡಲಾಗುವ ಒಟ್ಟಾರೆ ಪ್ರತಿಫಲಕ್ಕೂ ದೃಢವಾಗಿ, ಪರಿಣಾಮಕಾರಿ ಆಗಿ ತಳುಕು ಹಾಕುವುದು ಹೇಗೆ ಎಂಬುದು.

ಬಂಡವಾಳ ಪ್ರಧಾನ ಆರ್ಥಿಕತೆ ಜಾರಿಗೆ ಬರುವಾಗ ಏಳುವ ದೊಡ್ಡ ತೊಡಕೆಂದರೆ ಉದ್ಯೋಗದಾತನಿಗೆ ಬೇಡವಾದಾಗ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಲು ಮುಕ್ತ ಅವಕಾಶ ಕಲ್ಪಿಸುವುದು ಹೇಗೆ ಎಂಬುದು.

ದೊಡ್ಡ ಸಂಬಳದ, ಹಿರಿಯ ದರ್ಜೆಯ ಹುದ್ದೆಗಳಲ್ಲಿರುವ ಜನರನ್ನು ತೆಗೆದು ಹಾಕುವುದೂ ಈಗಲೂ ದೊಡ್ಡ ಸಮಸ್ಯೆ ಎನಿಸುತ್ತಿಲ್ಲ. ಈ ಮಾತು ಖಾಸಗಿ ವಲಯಕ್ಕೆ ಹೆಚ್ಚಾಗಿ ಅನ್ವಯವಾಗುತ್ತದೆ. ಕಾರ್ಮಿಕ ವೃಂದದವರನ್ನು ತೆಗೆದುಹಾಕಬೇಕೆಂಬ ವಿಷಯ ಬಂದಾಗಲೇ ಸಮಸ್ಯೆ ಏಳುವುದು.

ಇದಕ್ಕೆ ಸ್ಪಷ್ಟವಾದ ಪರಿಹಾರ ಈಗಾಗಲೇ ಲಭ್ಯವಾಗತೊಡಗಿದೆ. ಕಾರ್ಮಿಕರನ್ನು ಯಂತ್ರಗಳ ಜೊತೆ ಜೊತೆಗೇ ಅರೆಕುಶಲಿ ಕರ್ಮಚಾರಿಗಳಂತೆ ಉಳಿಸಿಕೊಳ್ಳುವುದರ ಬದಲಿಗೆ ತಂತ್ರಜ್ಞಾನವನ್ನು ಅವರಿಗೂ ಅರೆದು ಕುಡಿಸುವಂತಾಗಬೇಕು. ಕಾರ್ಮಿಕನಿಗೂ ತಂತ್ರಜ್ಞಾನ ಪ್ರಧಾನ ಕೌಶಲವನ್ನು ಮೈಗೂಡಿಸಿದರೆ ಅವನಿಗೆ ಸಿಗುವ ಪ್ರತಿಫಲ ತಾನಾಗಿ ಹೆಚ್ಚಾಗುತ್ತದೆ. ಜೊತೆಗೆ ತಾನು ತಂತ್ರಜ್ಞಾನ ರೀತ್ಯ ಹೆಚ್ಚು ಕುಶಲಿಯಾದಷ್ಟೂ ಹೆಚ್ಚು ಪ್ರತಿಫಲ ತನಗೆ ಸಿಗುತ್ತದೆ ಎಂದು ಆದಾಗ ಹೋರಾಟ ಮಾಡಿ ಪಡೆಯುವುದಕ್ಕಿಂತ ಹೆಚ್ಚು ಕೌಶಲ ಸ್ಥಾಪಿಸಿಕೊಳ್ಳುವುದು ಹೇಗೆಂಬುದರತ್ತ ಕಾರ್ಮಿಕನ ಗಮನ ಹೆಚ್ಚಾಗಿ ಹೋಗುತ್ತದೆ.

ಈ ದಿಕ್ಕಿನಲ್ಲಿ ಖಾಸಗಿ ವಲಯದ ಹಲವು ಉದ್ಯಮ ಸಂಸ್ಥೆಗಳು ಕಾರ್ಮಿಕರ ಕೌಶಲ ವೃದ್ಧಿ ಮಾಡಿ ಆ ಮೂಲಕ ಅನುಕೂಲ ಮಾಡಿಕೊಳ್ಳುವ ಮಾರ್ಗ ಅನುಸರಿಸತೊಡಗಿವೆ. ಎಷ್ಟೋ ವೇಳೆ ಎಂಜಿನಿಯರುಗಳು ನಡೆಸಬೇಕಾದ ಕಾರ್ಯಾಚರಣೆಗಳನ್ನು ಕುಶಲಿಗಳಾದ ಕಾರ್ಮಿಕರಿಂದಲೇ ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಇದೆಲ್ಲ ಉದ್ಯಮಿಯ ಒಳ್ಳೆಯತನವನ್ನು ಪ್ರಯತ್ನಶೀಲವನ್ನು ಅವಲಂಬಿಸುತ್ತದೆ.

ಇದೆಲ್ಲ ಏನೇ ಇರಲಿ; ಸರ್ಕಾರವು ಇದೀಗ ಸುಧಾರಿತ ಕಾರ್ಮಿಕ ಕಾನೂನು ಮತ್ತು ರಿವಾಜುಗಳನ್ನು ಹೊಸದಾಗಿ ಸ್ಥಾಪಿತವಾದ ಅಥವಾ ಅಭಿವೃದ್ಧಿಪಡಿಸಲಾದ ಕಾರ್ಖಾನೆಗಳಲ್ಲಿ ಮಾತ್ರ ಜಾರಿಗೊಳಿಸುವುದು; ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳಿಗೆ ಜಾರಿ ಮಾಡುವ ಕಾನೂನು ಏನೆಂಬುದನ್ನು ಅನಂತರ ನೋಡಿಕೊಳ್ಳಲಾಗುವುದು ಎನ್ನುವ ತಾತ್ಕಾಲಿಕ ನೀತಿಯನ್ನು ಅನುಸರಿಸಲು ನಿರ್ಧರಿಸಿದೆ. ಇದನ್ನು ಕಾರ್ಮಿಕ ಸಚಿವರು ಹೊರಗೆಡವಿದ್ದಾರೆ. ಇಂಥ ತಾತ್ಕಾಲಿಕ ನೀತಿ ಸರಿ ಎನಿಸುವುದಿಲ್ಲ.

ಸರ್ಕಾರದ ಇಂಥ ನೀತಿಯು ಹೊಸ ಬಗೆಯ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಈಗಲೇ ತಡವಾಗಿದ್ದರೂ, ಇನ್ನಷ್ಟು ಉಸಿರು ಬಿಗಿಹಿಡಿದು ಏಕಗ್ರೀವ ಸುಧಾರಣಾ ಕ್ರಮಗಳನ್ನು ಸಮಗ್ರವಾಗಿ ಜಾರಿಗೆ ತರುವತ್ತ ಗಮನ ಹರಿಸುವುದು ಸೂಕ್ತ.

೦೮.೧೦.೨೦೦೩