‘ಹಣ ಕೈಗೆ ಕೊಡುತ್ತೇನೆ – ಖರ್ಚು ಮಾಡಿ’ – ಹೀಗೆ ಕೇಂದ್ರ ಅರ್ಥಸಚಿವರು ಹೇಳಿದರೆ ಗೌರವಾನ್ವಿತ ಪ್ರಜೆಗಳು ಏನು ಮಾಡಬೇಕು?

ಅವರು ಹೇಳಿದಂತೆ ಮಾಡಬೇಕು.

ಜಸವಂತ್ ಅವರದು ಚೊಚ್ಚಲ ಬಜೆಟ್. ಏನು ಮಾಡುತ್ತಾರೋ, ಹೇಗೆ ಮಾಡುತ್ತಾರೋ ಎನ್ನುವ ತವಕ ತಪ್ಪಿರಲಿಲ್ಲ. ವಿದೇಶಾಂಗ ಸಚಿವರಾಗಿ ಸೈ ಅನಿಸಿಕೊಂಡಿದ್ದ ಎಲ್ಲರನ್ನೂ ಮಾತಿನಲ್ಲೇ ಮಣಿಸಬಲ್ಲರು ಎಂಬ ಹೆಸರು ಮಾಡಿದ ಈ ವ್ಯಕ್ತಿ ಹಣಕಾಸು ಜವಾಬ್ದಾರಿಯನ್ನು ಕೊಟ್ಟಾಗ ಏನು ಮಾಡುತ್ತಾರೆ ಎನ್ನುವ ಕುತೂಹಲ ಇದ್ದೇ ಇತ್ತು.

ಅಧಿಕಾರ ವಹಿಸಿಕೊಂಡು ಒಂಬತ್ತು ತಿಂಗಳಾದರೂ ಕಿಮಕ್ ಕಮಕ್ ಎಂದು ಬಾಯಿ ಬಿಚ್ಚಿರಲಿಲ್ಲ. ಆದ್ದರಿಂದಲೇ ಬಜೆಟ್‌ನಲ್ಲಿ ಏನು ಮಾಡುತ್ತಾರೋ ಎಂಬ ಕುತೂಹಲವಿತ್ತು.

ರಾಜ್ಯಗಳ ಚುನಾವಣೆಗಳು ಒಂದಾದ ಮೇಲೊಂದರಂತೆ ಬರುತ್ತಿರುವಾಗ, ಮಹಾ ಚುನಾವಣೆ ಸಹಾ ಮುಂದಿನ ಬಜೆಟ್‌ತನಕ ಕಾಯದೆ ಧುತ್ತನೆ ಕಾಣಿಸಿಕೊಳ್ಳುವ ಸಂಭವವಿದೆ ಎನಿಸಿದಾಗ, ಕೇಂದ್ರ ಅರ್ಥ ಸಚಿವರು ಏನು ಮಾಡಬಹುದು? ಮಧ್ಯಮ ವರ್ಗದವರನ್ನು ನೋಡಿಕೊಳ್ಳಿರೆಂದು ಪ್ರಮುಖ ಆಡಳಿತಾರೂಢ ಪಕ್ಷವಾದ ಬಿಜೆಪಿಯ ಅಧ್ಯಕ್ಷರು ಪ್ರಧಾನಿಗಳು ಹೇಳಿದಾಗ ಅರ್ಥಸಚಿವರು ಆ ಕೆಲಸ ಮಾಡಿ ಮುಗಿಸಿದ್ದಾರೆ. ಸ್ಟಾಂಡರ್ಡ್ ಡಿಡಕ್ಷನ್ಸ್ ಹೆಚ್ಚಿಸಿ, ಸರ್ಚಾರ್ಜ್ ತೆಗೆದು ಹಾಕಿ ತಿಂಗಳು ತಿಂಗಳೂ ಆದಾಯ ತೆರಿಗೆಗೆಂದು ಮುರಿದುಕೊಳ್ಳುತ್ತಿದ್ದ ಮೊತ್ತದಲ್ಲಿ ಸ್ವಲ್ಪ ಬಿಟ್ಟುಕೊಟ್ಟಿದ್ದಾರೆ. ಆದರೆ ಮಧ್ಯಮ ವರ್ಗದವರು, ಮುಖ್ಯವಾಗಿ ಸಂಬಳಾಗರರು ಆ ಹಣವನ್ನು ಉಳಿತಾಯ ಮಾಡುವುದಕ್ಕೆ ಪ್ರೋತ್ಸಾಹವಿಲ್ಲ. ಉಳಿತಾಯ ಹಣಕ್ಕೆ ಕೊಡುವ ಬಡ್ಡಿ ದರವನ್ನು ಇನ್ನೂ ಶೇ. ೧ರಷ್ಟು ಇಳಿಸಿದ್ದಾರೆ.

ಬಳಕೆದಾರರು ಹಣ ಉಳಿಸಬಾರದು. ಖರ್ಚು ಮಾಡುತ್ತಾ ಹೋಗಬೇಕು ಎನ್ನುವುದು ಈಗಿನ ಮಾರುಕಟ್ಟೆ ಪ್ರಧಾನ ಆರ್ಥಿಕತೆಯ ವರಸೆ. ಜನರು ಹೆಚ್ಚು ಖರ್ಚು ಮಾಡಿದಷ್ಟೂ ಬಳಕೆದಾರ ವಸ್ತುಗಳ ತಯಾರಿಕೆಗೆ ಪ್ರೋತ್ಸಾಹ ಸಿಕ್ಕಿದಂತೆ ಆಗುತ್ತದೆ ಎಂಬುದೇ ಪ್ರಧಾನ. ಈಗ ಭಾರತದಲ್ಲಿ ತಯಾರಿಕಾ ವಲಯ ಸತ್ತು ಸುಣ್ಣವಾಗಿದೆ. ಏನೇ ಪುಸಲಾಯಿಸಿದರೂ ಉತ್ಸಾಹಗಳ್ಳುತ್ತಿಲ್ಲ.

ಬಡ್ಡಿ ದರಗಳು ವಿಶ್ವದಲ್ಲೆಲ್ಲ ಇರುವುದಕ್ಕೆ ಹೋಲಿಸಿದರೆ ಬಹಳ ಜಾಸ್ತಿಯಿದೆ. ಇಲ್ಲಿ ಬಡ್ಡಿ ದರಗಳನ್ನು ಎತ್ತರದಲ್ಲಿ ಇರಿಸಿಕೊಂಡು ಮುಂದುವರೆಸಿದರೆ ತಯಾರಕರಿಗೆ ಕಷ್ಟವಾಗುತ್ತದೆ. ಅಂದರೆ ಉತ್ಪಾದನಾ ವೆಚ್ಚ ಹೆಚ್ಚಾಗಿ ರಫ್ತು ಮಾಡುವುದಕ್ಕೇ ಕಷ್ಟವಾಗುತ್ತದೆ. ಏಕೆಂದರೆ ಪೈಪೋಟಿದಾರ ರಫ್ತುದಾರರು ತಂತಮ್ಮ ದೇಶದ ಅಗ್ಗದ ಸಾಲ ಪಡೆದು ಭಾರತಕ್ಕಿಂತ ಅಗ್ಗದಲ್ಲಿ ಸರಕು ಸೇವೆ ಸೃಷ್ಟಿಸಿ ಮಾರುತ್ತಾರೆ. ಹಾಗೆ ಏನನ್ನೂ ಮಾಡಲಾಗದೆ ನಾವು ಹಿಂದೆ ಬೀಳುತ್ತೇವೆ. ಈ ವಿಚಾರಧಾರೆಯಿಂದಾಗಿ ಬಡ್ಡಿ ದರಗಳನ್ನು ವಿಪರೀತ ಇಳಿಸುವುದಾಯಿತು.

ಭಾರತವು ಅತಿ ಹೆಚ್ಚಿನ ಶೇ ೨೬ರ ಉಳಿತಾಯ ದರ ಸಾಧಿಸಿದ ರಾಷ್ಟ್ರ ಎಂಬ ಹೆಸರಿತ್ತು.ಇನ್ನು ಅದು ಉಳಿಯುವುದಿಲ್ಲ. ಹಣ ಉಳಿಸಿ ಕಾರು ಕೊಂಡುಕೊಳ್ಳಿ, ದುಬಾರಿ ಆದರೂ ಪೆಟ್ರೋಲ್ ತುಂಬಿಸಿಕೊಳ್ಳಿ. ಜಂಬದ ಪೇಯ ಕುಡಿಯಿರಿ ಎಂದು ಅರ್ಥಸಚಿವರು ಮೇಲು ಮಧ್ಯಮ ವರ್ಗದವರಿಗೂ ಹೇಳುತ್ತಾರೆ. ಗಳಿಸಿ ಖರ್ಚು ಮಾಡಿ ಎಂಬುದೇ ಇಂದಿನ ತಾರಕ ಮಂತ್ರ. ತಜ್ಞರೊಬ್ಬರು ಲೆಕ್ಕ ಹಾಕಿದ್ದಾರೆ, ತೆರಿಗೆಯಲ್ಲಿ ಶೇ. ೧.೫ ಬಿಟ್ಟು ಕೊಟ್ಟಿದ್ದರೂ ಬೆಲೆ ಏರಿಕೆ ಅದನ್ನು ನುಂಗಿ ಹಾಕುತ್ತದೆ.

ಚುನಾವಣೆಗಳ ಕಾಲ ಇದಾದ್ದರಿಂದ ಹೊಸ ತೆರಿಗೆಗಳನ್ನು ಹೇರಬೇಡಿ ಎಂದು ಯಜಮಾನರು ಹೇಳಿದಾಗ ಅರ್ಥಸಚಿವರು ಒಪ್ಪಿದರು. ಹೊಸ ತೆರಿಗೆಗಳನ್ನು ಹೇರಲಿಲ್ಲ. ರೈಲ್ವೆ ಸಚಿವರೂ ಹಾಗೆಯೇ ಮಾಡಿದರು.

ಸರಿಯೇ. ಎಲ್ಲರಿಂದಲೂ ಒಳ್ಳೆಯವನು ಎಂಬ ಶಹಭಾಸ್‌ಗಿರಿ ಪಡೆಯಲು ಜಸವಂತ್‌ಸಿಂಗ್ ಮುಂದಾದರು. ಆದರೆ ಚುನಾವಣೆ ಬಂದಾಗ ತಮ್ಮ ಪಕ್ಷದವರಿಗೂ, ಇತರ ಪಕ್ಷಗಳಿಗೆ ಕೂಡಾ, ದೇಣಿಗೆ ನಿಡುವ ಕಂಪೆನಿಗಳಿಗೆ ಏನನ್ನಾದರೂ ಒಳಿತು ಮಾಡದಿದ್ದರೆ ಹೇಗೆ? ಜನರನ್ನು ಸಂಪ್ರೀತರನ್ನಾಗಿಸುವುದಷ್ಟೆ ಸಾಕಾಗುವುದಿಲ್ಲ. ಅದರಿಂದ ಅರ್ಧ ಕೆಲಸ ಮಾತ್ರ ಮಾಡಿ ಪೂರೈಸಿದಂತೆಯೇ ಸರಿ. ಇನ್ನರ್ಧ ಕೆಲಸವೆಂದರೆ ದೇಣಿಗೆ ಕೊಡಬಲ್ಲವರನ್ನೂ ಒಲಿಸಿಕೊಳ್ಳುವುದು. ಆದ್ದರಿಂದಲೇ ಎಕ್ಸೈಜ್ ಸುಂಕದ ನಾನಾ ಬಾಬುಗಳಲ್ಲಿ ರಿಯಾಯ್ತಿ ತೋರಿಸುವುದೇ ಅಲ್ಲದೇ ಕಸ್ಟಂಸ್ ಸುಂಕವನ್ನೂ ಹಲವು ಕಡೆ ಇಳಿಸಿ ಆಗಿದೆ. ಇದರ ಲಾಭ ಪೂರ್ತಿಯಾಗಿ ಉದ್ಯಮಿಗಳ ಜೇಬಿಗೆ ಹೋಗುತ್ತದೇ ಹೊರತು ಬಳಕೆದಾರರಿಗೇನೂ ವರ್ಗಾವಣೆ ಆಗುವುದಿಲ್ಲ ಎಂದು ಸಿನಿಕರು ಶಂಕಿಸಿದ್ದಾರೆ. ವಸ್ತುಗಳಿಗೆ ಬೇಡಿಕೆಯೇ ಕಡಿಮೆ ಆಗಿರುವಾಗ ಸುಂಕ ತೆರಿಗೆ ಇಳಿಸಿದ್ದರ ಲಾಭ ಪಡೆದು ಸ್ವಲ್ಪ ಹೆಚ್ಚಿನ ಮಾರಾಟ ಸಾಧಿಸಲು ಸಾಧ್ಯವಿಲ್ಲವೇ ಎಂದು ಯೋಚಿಸುವುದಿಲ್ಲವೇ? ಒಂದಿಷ್ಟು ರಿಯಾಯ್ತಿಯಾದರೂ ವರ್ಗಾವಣೆ ಆಗಲಿಕ್ಕೆ ಸಾಕು.

ಮಕ್ಕಳನ್ನು ಓದಿಸುತ್ತಿರುವವರಿಗೆ ಆಗುವ ಖರ್ಚಿನ ಲೆಕ್ಕದಲ್ಲಿ ವರಮಾನ ಕರ ರಿಯಾಯ್ತಿಯೇ ಮುಂತಾದುವನ್ನೂ ಕೊಟ್ಟಿದ್ದಾರೆ. ಹಣ ಕೈಲಿ ಇರಿಸಿಕೊಂಡಿರುವ ನಿವೃತ್ತಿದಾರರಿಗೆ ಯೋಜನೆ ರೂಪಿಸಿದ್ದಾರೆ. ರಸ್ತೆ ಯೋಜನೆ ಹಾಕಿ ಪೆಟ್ರೋಲ್ ಬೆಲೆ ಜೊತೆಗೇ ಒಂದಿಷ್ಟು ಹಣ ಹೆಚ್ಚಿಗೆ ಕಿತ್ತುಕೊಳ್ಳುತ್ತಿದ್ದಾರೆ. ಐಟಿಯವರಿಗೆ ರಿಯಾಯ್ತಿ ತೋರಿದ್ದಾರೆ. ಬೆಂಗಳೂರಿನ ಹಾಗೂ ಹೈದರಾಬಾದ್‌ನ ವಿಮಾನ ನಿಲ್ದಾಣ ಯೋಜನೆಗಳನ್ನು ಬಜೆಟ್ ವ್ಯಾಪ್ತಿಗೆ ತಂದು ಕೊಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳ ನಿರ್ಮಾಣ ಸುಗಮವಾಗಲಿ ಎಂದು ಕ್ರಮ ರೂಪಿಸಿ ಉದ್ಯಮದವರನ್ನು ಕಂಡ ಹಾಗೆ ಈ ಬಾಬಿನವರನ್ನು ಕಂಡಿದ್ದಾರೆ. ವಿದೇಶಿ ಯಂತ್ರ ಆಮದು ಮಾಡಿಕೊಳ್ಳುವ ಜವಳಿ ಉದ್ಯಮದವರಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಷೇರು ಹೊಂದಿರುವ ಜನಕ್ಕೆ ಡಿವಿಡೆಂಡ್ ತೆರಿಗೆ ತೆಗೆದು ಹಾಕಿದ್ದಾರೆ.

ಹೀಗೆ ಏನಲ್ಲ ಕಸರತ್ತು ಮಾಡಿದ್ದಾರೆ. ಒಂದು ಆನೆಯನ್ನು ತಂದು ನಿಲ್ಲಿಸಿ ಆರು ಜನ ಕುರುಡರನ್ನು ಅದರ ಬಳಿಗೆ ಬಿಟ್ಟಾಗ ಒಬ್ಬೊಬ್ಬಕುರುಡನೂ ತನ್ನ ಕೈಗೆ ಸಿಕ್ಕಿದ ಬಾಲ, ಕಾಲು ಮುಂತಾದುವನ್ನು ಮುಟ್ಟಿ ಮುಟ್ಟಿ ಆನೆ ಎಂದರೆ ಹೀಗಿರುತ್ತದೆ ಎಂದು ಬಣ್ಣಿಸಿದರಂತೆ. ಹಾಗೆ ಆಗಿದೆ, ಈ ಬಾರಿಯ ಬಜೆಟ್ ಕತೆ.

ಎಲ್ಲರಿಗೂ ಏನೋ ಒಂದು ಕೊಟ್ಟಿರುವಂತೆ ಕಾಣಿಸುತ್ತದೆ. ಆದ್ದರಿಂದಲೇ ಜಸವಂತ ಸಿಂಗ್ ಅಲ್ಲೊಂದಿಷ್ಟು ಕಿತ್ತು, ಇಲ್ಲೊಂದಿಷ್ಟು ಸವರಿ ಮಣ್ಣಿನ ಮುದ್ದೆಗೆ ಒಂದು ರೂಪ ತೋರಿಸಿದ್ದಾರೆ ಮಾತ್ರ. ಅವರ ನೆಚ್ಚಿನ ರಕ್ಷಣಾ ಬಾಬಿಗೂ ಏನೂ ಮಡಲಾಗಲಿಲ್ಲ. ಕೆಲವು ನೂರು ಕೋಟಿ ರೂಪಾಯಿ ಹೆಚ್ಚಿಗೆ ಕೊಟ್ಟಿದ್ದಾರೆ. ಆದರೆ ಸೈನ್ಯದವರ ಸಂಬಳ ಸಾರಿಗೆ ಹೆಚ್ಚುವುದು ಏನಿರುತ್ತದೋ ಅದು ಈ ಮೊತ್ತಕ್ಕಿಂತ ಜಾಸ್ತಿ ಇರುತ್ತದೆ!

ಯಾವುದೇ ಗುರುತರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆರ್ಥಿಕ ಸುಧಾರಣಾ ಕ್ರಮಗಳನ್ನು ಮುಂದಕ್ಕೆ ಜರುಗಿಸುವ ಮಾತೇ ಇಲ್ಲ. ವಿದೇಶಿ ಬಂಡವಾಳವನ್ನು ಆಕರ್ಷಿಸಲು ಆತುರವೇ ಇಲ್ಲ! ಈ ಲೆಕ್ಕದಲ್ಲಿ ನೋಡಿದಾಗ ಯಾವ ಮನಮೋಹನ ಸಿಂಗ್ ಅಥವಾ ಪಿ. ಚಿದಂಬರಂ ಈ ಬಜೆಟ್‌ನಲ್ಲಿ ಜಸವಂತ ಸಿಂಗ್ ರೂಪದಲ್ಲಿ ಕಾಣಿಸಲಿಲ್ಲ. ಎಲ್ಲರಿಗೂ ಎಲ್ಲವನ್ನೂ ಅಥವಾ ಏನನ್ನಾದರೂ ಕೊಡುವ ಆತುರದಲ್ಲಿ ಎಲ್ಲೂ ಏನನ್ನೂ ಸಾಧಿಸಲು ಸಾಧ್ಯವಾಗಲಿಲ್ಲ. ಭವಿಷ್ಯಕ್ಕೆಂದು ಒಂದು ಮುನ್ನೋಟ ಸಾಧ್ಯವಾಗಲಿಲ್ಲ. ಹೇಳಿಕೊಳ್ಳುವಂಥ ಜನ ಕಲ್ಯಾಣ ಯೋಜನೆಗಳಾವುವೂ ಹುಟ್ಟಲಿಲ್ಲ. (ಹಣವೇ ಇಲ್ಲ?!) ಇದು ಚೊಚ್ಚಲು ಬಜೆಟ್‌ನ ವರಸೆ.

ಎಲರೂ ನಿರೀಕ್ಷೆ ಮಾಡುತ್ತಿದ್ದುದು ರಸಗೊಬ್ಬರ ಸಬ್ಸಿಡಿಗಳ ಸಂಬಂಧ ರಿಯಾಯ್ತಿ ತೋರಿ ರೈತರ ಮನ ಗೆಲ್ಲುತ್ತಾರೆ ಎಂಬುದಾಗಿ. ಆ ಬಗೆಗೆ ಸರ್ಕಾರದಲ್ಲಿರುವ ದೊಡ್ಡವರೆಲ್ಲ  ಅರ್ಥಸಚಿವರ ಜೊತೆ ಮಾತನಾಡಿದರೆಂದೂ ವರದಿಗಳು ಬಂದಿದ್ದುವು. ಆದರೆ ಆದದ್ದೇನು? ಅವುಗಳ ಬೆಲೆಯನ್ನು ಅರ್ಥ ಸಚಿವರು ಹೆಚ್ಚಿಸಬೇಕಾಯಿತು. ಸಬ್ಸಿಡಿ ಕಡಿಮೆ ಮಾಡಿ ಬಳಕೆದಾರರಿಗೆ ಅಥವಾ ರೈತರಿಗೆ ಅನುಕೂಲ ಮಾಡುತ್ತೇವೆ ಎಂದು ಹೇಳಿದರೆ, ವಿಶ್ವ ಬ್ಯಾಂಕ್ ಮುಂತಾದವುಗಳ ಸಮಾಲೋಚಕರು ಯಾರಿದ್ದಾರೋ ಅವರು ಸುತರಾಂ ಒಪ್ಪುವುದಿಲ್ಲ. ಸಬ್ಸಿಡಿಗಳನ್ನು ತುಂಡರಿಸಬೇಕು ಎನ್ನುವುದೇ ವಿಶ್ವ ವಾಣಿಜ್ಯ ವ್ಯವಸ್ಥೆ (ಡಬ್ಲ್ಯುಟಿಓ) ಹೇಳುವ ಮಾತು. ಅದನ್ನು ಮೀರಿ ಹೋಗಲು ಸಾಧ್ಯವೇ ಇಲ್ಲ. ಎನ್ನುವುದು ಜಸವಂತಸಿಂಗ್ ಸಂದಿಗ್ಧ. ಬಜೆಟ್ ನಂತರ ನೀಡಿದ  ಒಂದೇ ಒಂದು ಪ್ರತಿಕ್ರಿಯಾ ಪ್ರಸಾರದಲ್ಲಿ ಅವರು ‘ನ್ಯಾಫ್ತಾ ಬೆಲೆ ಶೇ ೪೦ ಏರಿದೆ. ಆದರೂ ರಸಗೊಬ್ಬರ ಬೆಲೆಯನ್ನು ನಾಮಮಾತ್ರ ಪ್ರಮಾಣದಲ್ಲಿ ಏರಿಸಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ೧೩ ಪಕ್ಷಗಳು ಹೇಳುವುದನ್ನು ಅರ್ಥಸಚಿವರು ಕೇಳಬೇಕು, ಪಾಲಿಸಬೇಕು. ಜೊತೆಗೆ ತಮ್ಮ ಪಕ್ಷದ ಯಜಮಾನರು, ಬಳಕೆದಾರರು, ಉದ್ಯಮಿಗಳು ಇತ್ಯಾದಿ ಹಿತಗಳ ಮೇಲೆ ನಿಗಾ. ಏನನ್ನೂ ಸ್ವಂತವಾಗಿ ನಿರ್ಣಯಿಸುವಂತಿಲ್ಲ.

ಬಜೆಟ್ ಮಂಡಿಸುವಾಗ ಹೊರಗೆ ಮಳೆ ಹನಿಯಿತಂತೆ. ಆದರೆ ನೀರು ಹರಿಯಲಿಲ್ಲ, ಹನಿ ಮಾತ್ರ. ‘ಶುಭ’ ಸೂಚನೆಯೇ? ಬಜೆಟ್‌ನಲ್ಲಿ ಎಲ್ಲರಿಗೂ ಏನೋ ಒಂದು ಕಾಣಿಸಿದ್ದರಿಂದ ವಿರೋಧ ಪಕ್ಷದವರ ಪ್ರತಿಭಟನೆ ಗದ್ದಲ ಸಹಾ ಜೋರಾಗಿ ಇರಲಿಲ್ಲ.

೦೫.೦೩.೨೦೦೩