ಯಾರನ್ನಾದರೂ ಕೆಲಸದಿಂದ ತೆಗೆದು ಹಾಕಬೇಕೆ? ಅವರಿಗೆ ವಿಆರ್‌ಎಸ್ ಕೊಡಿ. ಇದೇ ಉದ್ಯಮ ರಂಗದ ಹೊಸ ಮಂತ್ರ. ಉದ್ಯೋಗಿಗಳನ್ನು, ವಿಶೇಷತಃ ಮಧ್ಯ ವಯಸ್ಸಿಗೆ ಬಂದವರನ್ನು, ನಿರುದ್ಯೋಗಿಗಳನ್ನಾಗಿ ಮಾಡಲು ಪ್ರಯೋಗಿಸುವ ಬ್ರಹ್ಮಾಸ್ತ್ರ ವಿಆರ್‌ಎಸ್ ಸ್ವಯಂ ನಿವೃತ್ತಿ ಯೋಜನೆ.

೧೯೯೦ರ ದಶಕದಲ್ಲಿ  ಹೊಸ ಆರ್ಥಿಕ ನೀತಿ ಹಂತಗಳಲ್ಲಿ ಜಾರಿಗೆ ಬಂದಂತೆ ಉದ್ಯೋಗಿಗಳು ತಮ್ಮ ಉದ್ಯೋಗದ ಹಕ್ಕನ್ನು ಕ್ರಮೇಣ ಕಳೆದುಕೊಂಡಿದ್ದು ವಿಆರ್‌ಎಸ್ ನಿಂದಾಗಿಯೇ. ಯಾವ ಕಾರ್ಮಿ ಚಳವಳಿಗೂ ಇದರ ದಾಳಿಯನ್ನು ತಡೆಯಲು ಆಗಲಿಲ್ಲ.

ಸ್ವತಂತ್ರ ಭಾರತವು ಸಮಾಜವಾದಿ ಸಿದ್ಧಾಂತವನ್ನು ಅಂಗೀಕರಿಸಿದಾಗ ಉದ್ಯೋಗ ಸೃಷ್ಟಿ ಮಾಡುವುದನ್ನು ತನ್ನ ಕರ್ತವ್ಯ ಎಂದು ಪಾಲಿಸತೊಡಗಿತು. ಯಾವುದೇ ಉದ್ಯಮವೂ ಸಾಧಿಸಬಹುದಾದ ಹೆಗ್ಗಳಿಕೆ ಎಂದರೆ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳುವುದು ಆಗಿತ್ತು. ಈಚಿನವರೆಗೂ ಉದ್ಯಮದ ಯಶಸ್ಸಿನ ಮಾನದಂಡ ಅದೇ ಆಗಿತ್ತು. ೧೯೯೦ರ ದಶಕ ಮುಗಿಯುತ್ತ ಬಂದಂತೆ ಎಲ್ಲ ತಿರುವು ಮುರುವು. ಅತಿ ಹೆಚ್ಚು ಬಂಡವಾಳ ತೊಡಗಿಸಿ ಅತಿ ಕಡಿಮೆ ಜನರನ್ನು ನೇಮಿಸಿಕೊಳ್ಳುವ ಉದ್ಯಮ ಯೋಜನೆ ಅತ್ಯುತ್ತಮ ಎನಿಸಿಕೊಂಡಿತು.

ಉದ್ಯೋಗ ಕೊಡುವುದೇ ಒಂದು ಉದ್ಯಮ ಯೋಜನೆಯ ಗುರಿಗಳಲ್ಲಿ ಸೇರಿದ್ದ ವೇಳೆ, ಕೆಲಸಕ್ಕೆ ತೆಗೆದುಕೊಂಡಾಗ ಆ ಜನ ಎಷ್ಟು ಉಪಯುಕ್ತರು ಎಂಬುದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಈಗ ಹಾಗಿಲ್ಲ, ಮಾರುಕಟ್ಟೆ ಪ್ರಧಾನ ಅರ್ಥ ವ್ಯವಸ್ಥೆಯಲ್ಲಿ ಪೈಪೋಟಿ ಎದುರಿಸುವುದೇ ಮುಖ್ಯ. ಅತಿ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಗುಣಮಟ್ಟದ ಸರಕು ಅಥವಾ ಸೇವಾ ಸೌಲಭ್ಯವನ್ನು ಕಲ್ಪಿಸುವುದೇ ಮುಖ್ಯ. ಅತಿ ಕಡಿಮೆ ವೆಚ್ಚ ಎನ್ನುವಾಗ ಪೋಲು ಎನ್ನುವುದು ಇರಲೇಬಾರದು. ಮಾನವ ಶಕ್ತಿಗೂ ಈ ಮಾತು ಅನ್ವಯಿಸುತ್ತದೆ. ಉದ್ಯೋಗದಲ್ಲಿರುವ ಯಾರೊಬ್ಬರೂ ನಿರುಪಯುಕ್ತ ಆಗಬಾರದು. ಯಾರೊಬ್ಬರೂ ಪೂರ್ತಿಯಾಗಿ ಬಳಕೆ ಆಗದೆ ಉಳಿಯಬಾರದು. ಇದೇ ಈಗಿನ ತಾರಕ ಮಂತ್ರ. ಹಾಗೆ ಆಗಿದ್ದರೆ ಅವರನ್ನು ಮನೆಗೆ ಕಳುಹಿಸಬೇಕು.

ಇದನ್ನು ಉದ್ಯಮದಲ್ಲಿ ಮಾತ್ರವಲ್ಲ. ಸರ್ಕಾರಿ ವಲಯಕ್ಕೆ ಸೇರಿದ ನಾನಾ ಸಂಸ್ಥೆಗಳು ಮತ್ತು ಸರ್ಕಾರಗಳಲ್ಲಿ ಕೂಡಾ ಪಾಲಿಸಲಾಗುತ್ತಿದೆ. ಎಷ್ಟೋ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗದಲ್ಲಿ ಇರುವವರನ್ನು ತೆಗೆದುಹಾಕಲು ಬರುವುದಿಲ್ಲ. ಅಲ್ಲಿ ಅನುಸರಿಸುವ ತಂತ್ರವೆಂದರೆ, ಖಾಲಿ ಬೀಳುವ ಹುದ್ದೆಗಳನ್ನು ತುಂಬದೇ ಇರುವುದು. ಸತತವಾಗಿ ಖಾಲಿ ಹುದ್ದೆ ತುಂಬದೇ ಉಳಿದಾಗ ಉಳಿದವರ ಉಪಯುಕ್ತತೆ ಹೆಚ್ಚುತ್ತದೆ.

ಸರಳವಾಗಿ ಹೇಳುವುದಾದರೆ ಅನಗತ್ಯವಾಗಿ, ಆರೋಗ್ಯಕ್ಕೆ ಹಾನಿಕಾರಕವಾಗಿ ಮೈಯಲ್ಲಿ ಸೇರಿಕೊಂಡ ಬೊಜ್ಜು ಇಳಿಸುವ ಪ್ರಕ್ರಿಯೆಗೆ ಸಮಾನಾದುದು ವಿಆರ್ ಎಸ್ ಜಾರಿ.

ಬೇಡದವರನ್ನು ಮನೆಗೆ ಕಳುಹಿಸುವಾಗ ‘ನ್ಯಾಯೋಚಿತವಾಗಿ’ ಪರಿಹಾರ ಕೊಡಬೇಕಾಗುತ್ತದೆ. ಇನ್ನೂ ಸಾಕಷ್ಟು ಕಾಲ ಉದ್ಯೋಗದಲ್ಲಿ ಇರುವ ಹಕ್ಕನ್ನು ಬಿಟ್ಟುಕೊಡುವುದಕ್ಕಾಗಿ ಉದ್ಯೋಗಿಗಳಿಗೆ ಇಡುಗಂಟು ಪರಿಹಾರವನ್ನು ವಿಆರ್‌ಎಸ್ ಒದಗಿಸುತ್ತದೆ. ಉದ್ಯೋಗಿಯು ಮುಂಬರುವ ವರ್ಷಗಳಲ್ಲಿ ಪಡೆಯಬಹುದಾಗಿದ್ದ ವೇತನ ಭತ್ಯೆ, ಪಿ.ಎಫ್. ಗ್ರಾಚ್ಯುಯಿಟಿ, ಪೆನ್ಷನ್ ಇವುಗಳ ಬದಲಾಗಿ ಈ ಹಿಂದೆ ಎಷ್ಟು ವರ್ಷ ಸೇವೆ ಸಲ್ಲಿಸಲಾಗಿದೆ ಎಂಬುದರ ಆಧಾರದ ಮೇಲೆ ಪರಿಹಾರವನ್ನು ನಿಗದಿಪಡಿಸುವ ನಾನಾ ಸೂತ್ರಗಳಿವೆ. ಸೂತ್ರ ಏನೇ ಆದರೂ ಕೈಗೆ ಸಿಗುವ ಇಡುಗಂಟು ಲಕ್ಷ ಲಕ್ಷಗಳ ಮೊತ್ತ ಆಗಿರುವುದರಿಂದ ವಿಆರ್‌ಎಸ್‌ಗೆ ಪ್ರತಿರೋಧ ಕಡಿಮೆ. ಈ ಇಡುಗಂಟಿನ ಕಾರಣದಿಂದಲೇ ಸ್ವಯಂ ನಿವೃತ್ತಿಗೆ ಸಿದ್ಧರಾಗುವ ಉದ್ಯೋಗಿಗಳು ಕಾರ್ಮಿಕ ಸಂಘಗಳ ಸಲಹೆ ಸೂಚನೆಗಳನ್ನೂ ಲೆಕ್ಕಿಸುವುದಿಲ್ಲ.

ಮುಖ್ಯವಾಗಿ ಕೇಂದ್ರೋದ್ಯಮ ಘಟಕಗಳು, ಬ್ಯಾಂಕು ಮುಂತಾದ ಬೃಹತ್ ಸಂಸ್ಥೆಗಳು ವಿಆರ್‌ಎಸ್ ಜಾರಿಗೆ ಸುಲಭವಾಗಿ ಒಳಪಟ್ಟಿವೆ. ವರ್ಷಗಳ ಪರ್ಯಂತ ಜನರನ್ನು ಸತತವಾಗಿ ನೇಮಿಸಿಕೊಳ್ಳುತ್ತಲೇ ಇದ್ದುದರ ಪರಿಣಾಮವಾಗಿ ಬೃಹತ್ ಸರ್ಕಾರಿ ವಲಯ ಸಂಸ್ಥೆಗಳು ಬಿಳಿಯ ಆನೆ ದರ್ಜೆಗೆ ಏರಿದ್ದವು. ಅಲ್ಲೆಲ್ಲ ಈಗ ವಿಆರ್‌ಎಸ್ ಬಿಸಿ ವ್ಯಾಪಕ.

ಪೈಪೋಟಿ ರಂಗದಲ್ಲಿ ಉಳಿಯಬೇಕಾದರೆ ಜನರನ್ನು ತೆಗೆದು ಹಾಕಲೇಬೇಕಾಗುತ್ತದೆ ಎಂಬ ಪರಿಸ್ಥಿತಿ ಸಾಮಾನ್ಯವಾಗುತ್ತಿದೆ. ತಪ್ಪಿದರೆ ಉದ್ಯಮ ಘಟಕವನ್ನು ಮುಚ್ಚುವಂತಾಗುತ್ತದೆ. ಅದು ಮುಚ್ಚಿ ಹೋಗಿ ತಾವು ನಿರುದ್ಯೋಗಿಗಳಾಗುವ ಬದಲು ವಿಆರ್‌ಎಸ್ ತೆಗೆದುಕೊಂಡು ಹಾಯಾಗಿ ಕಳೆಯೋಣ ಎಂದು ಉದ್ಯೋಗಿಗಳು ಭಾವಿಸುತ್ತಾರೆ. ಆಗ ವಿಆರ್‌ಎಸ್ ಜಾರಿ ಸಹಜವಾಗಿ ಸುಲಭವಾಗುತ್ತದೆ. ನಷ್ಟ ಪೀಡಿತ ಘಟಕಗಳ ಪುನರುದ್ಧಾರಕ್ಕಾಗಿ ಸರ್ಕಾರ ರೂಪಿಸುವ ಯೋಜನೆಗಳಲ್ಲೆಲ್ಲ ವಿಆರ್‌ಎಸ್‌ಗಾಗಿ ಕೊಡಬೇಕಾದ ಪರಿಹಾರ ಕೂಡಾ ಸೇರಿರುತ್ತದೆ. ಪುನರುಜ್ಜೀವನ ವೆಚ್ಚದ ಸಾಕಷ್ಟು ದೊಡ್ಡ ಪಾಲು ವಿಆರ್‌ಎಸ್ ಖರ್ಚೆ ಅಧಿಕವಾಗಿರುವ ಪ್ರಸಂಗಗಳೂ ಇಲ್ಲದಿಲ್ಲ.

ಹೀಗೆ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕಾರ್ಯವನ್ನು ಸರ್ಕಾರ ಬಿರುಸುಗೊಳಿಸಲು ಆರ್ಥಿಕತೆ ಮೇಲೆ ಹಿಡಿತ ಸಾಧಿಸಿರುವ ವಿಶ್ವಬ್ಯಾಂಕು, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಂತಾದವು ಹೇರುವ ಒತ್ತಡವೇ ಕಾರಣ ಎಂದು ಕಾರ್ಮಿಕ ಮುಖಂಡರು ಬಹಿರಂಗವಾಗಿ ದೂರುತ್ತಾರೆ. ಆದರೆ ಅದನ್ನು ಯಾರೂ ಲೆಕ್ಕಿಸುವುದಿಲ್ಲ. ಇದು ವಾಸ್ತವದ ಸಂಗತಿ.

ಕನಿಷ್ಠ ಹತ್ತು ವರ್ಷ ಕೆಲಸ ಮಾಡಿರಬೇಕು, ವಯಸ್ಸು ನಲವತ್ತು ದಾಟಿರಬೇಕು ಎಂಬ ಸಾಮಾನ್ಯ ಅರ್ಹತೆ ಇರಬೇಕು. ಹಾಗೆ ಆಗದಿದ್ದರೂ ವಿಆರ್‌ಎಸ್ ಫಲ ಸಿಗುತ್ತದೆ. ಬೇರೆ ಬೇರೆ ಕಡೆ ನಿಯಮಗಳು ಬೇರೆ ಬೇರೆ ಇರುತ್ತವೆ.

೨೦೦೦ ವರ್ಷದಲ್ಲಿ ಸ್ವಯಂ ನಿವೃತ್ತಿ ಪಡೆಯುವ ಪ್ರತಿ ಉದ್ಯೋಗಿಗೆ ಈ ಹಿಂದೆ ಸೇವೆಯಲ್ಲಿ ಸವೆಸಲಾದ ಪ್ರತಿ ವರ್ಷಕ್ಕೆ ೬೦ ದಿನಗಳ ವೇತನ ಎಂಬ ಸೂತ್ರವೊಂದಿತ್ತು. ಆನಂತರ ಜಾರಿಗೆ ಬಂದ ‘ಗುಜರಾತ್ ಮಾದರಿ’ ಎನಿಸಿಕೊಂಡ ಒಂದು ಸೂತ್ರದಲ್ಲಿ ಸಲ್ಲಿಸಲಾದ ಸೇವೆಯ ಪ್ರತಿ ವರ್ಷಕ್ಕೆ ತಲಾ ೩೫ ದಿನದಂತೆ ಹಾಗೂ ಮುಂದುವರಿಸಲು ಸಾಧ್ಯವಿರುವ ಸೇವೆಯಲ್ಲಿ ಉಳಿದ ವರ್ಷಗಳಿಗೆ ಲಗತ್ತಾದಂತೆ ತಲಾ ೨೫ ದಿನಗಳಂತೆ ವೇತನ ಪರಿಹಾರ ನಿಗದಿ ಆಗಿತ್ತು. ಈ ಸೂತ್ರಗಳು ನಿದರ್ಶನ ಮಾತ್ರ. ಈಗಂತೂ ಒಂದೊಂದು ಉದ್ಯಮ ಕ್ಷೇತ್ರವೂ ತನಗೆ ಬೇಕಾದರೆ ಸೂತ್ರಗಳನ್ನು ರೂಪಿಸಿಕೊಂಡಿದೆ.

ವಿಆರ್‌ಎಸ್‌ಗಾಗಿ ಈತನಕ ಎಷ್ಟು ಹಣ ವೆಚ್ಚವಾಗಿದೆ; ಎಷ್ಟು ಜನ  ಅದರ ಲಾಭ ಪಡೆದಿದ್ದಾರೆ; ಅದರಿಂದಾಗಿ ಉದ್ಯೋಗದಾತ ಸಂಸ್ಥೆಗಳ ಆರೋಗ್ಯ ಎಷ್ಟು ಸುಧಾರಿಸಿದೆ; ಸರ್ಕಾರ ಹಾಗೂ ಸಂಸ್ಥೆಗಳವರು ಎಷ್ಟೆಷ್ಟು ಹಣವನನ್ನು ಈ ಬಾಬಿಗಾಗಿ ವೆಚ್ಚ ಮಾಡಿವೆ ಎಂಬುದರ ಅಂದಾಜು ಸಮಗ್ರವಾಗಿ ಸಿಗುತ್ತಿಲ್ಲ.

ವಿಆರ್‌ಎಸ್ ಸಾಧಕ ಬಾಧಕಗಳನ್ನು ಅಂಕಿಸಂಖ್ಯೆ ಅನ್ವಯ ಅಳೆಯಲಾಗದು ಕೂಡಾ. ಪರಿಣಾಮಗಳು ಮಾತ್ರ ಭೀಕರವಾಗಿವೆ.

ಮೊದಲನೆಯದಾಗಿ ವಿಆರ್‌ಎಸ್ ಪಡೆದ ಬಹುತೇಕ ಮಂದಿ ನಿರುಪಯೋಗಿ ಆಗಿ ನಿರುದ್ಯೋಗಿಗಳ ಪಟ್ಟಿಗೆ ಸೇರುತ್ತಾರೆ. ಅವರ ಕೈಗೆ ಬಂದ ಇಡುಗಂಟು, ದಿನಗಳು ಕಳೆದಂತೆ ಪುಡಿಗಂಟು ಆಗಿ ಪರಿಣಮಿಸುತ್ತದೆ. ಆ ಮಾತು ಬೇರೆ.

ನಿರುಪಯುಕ್ತರ ಜೊತೆಗೆ ಖಾಸಗಿ ವಲಯ ಮತ್ತಿತರ ಕಡೆ ಕೆಲಸ ಹುಡುಕಿಕೊಳ್ಳುವ, ಆದರೆ ಹೊರಗೆ ಬೇಡಿಕೆ ಕುದಿರಿಸಿಕೊಳ್ಳುವ, ಛಾತಿಯುಳ್ಳವರು ಸಹಾ ವಿಆರ್‌ಎಸ್ ಪಡೆಯುತ್ತಾರೆ. ಇಡುಗಂಟಿನ ಲಾಭದ ಜೊತೆಗೆ ಹೊಸ ಹುದ್ದೆಯ ಅನುಕೂಲ ಎರಡೂ ಇವರಿಗೆ ಲಭ್ಯವಾಗುತ್ತದೆ. ಇಂಥವರ ಸಂಖ್ಯೆ ಕಡಿಮೆ.

ಆದರೆ ಇಂಥವರು ಹೊರಗೆ ಬಂದಾಗ, ಒಳಗೆ ಉಳಿದುಕೊಂಡವರು ವಾಸ್ತವವಾಗಿ ಹೊರಗೆ ಹೊಸ ಹುದ್ದೆ ಹುಡುಕಿಕೊಳ್ಳಲಾಗದವರೇ ಆಗಿರುವುದು ಸಂಭವ. ಆ ದೃಷ್ಟಿಯಿಂದ ವಿಆರ್‌ಎಸ್ ಜಾರಿ ಮಾಡಿದರೂ ಉದ್ಯಮ ಸಂಸ್ಥೆಗೆ ಅಧಿಕ ಲಾಭವೇನೂ ಆಗಿರುವುದಿಲ್ಲ.

ತಾಂತ್ರಿಕ ಪರಿಣಿತಿ ಇರುವವರು ವಿಆರ್‌ಎಸ್ ಪಡೆದರೆ ಸಂಸ್ಥೆಗೆ ನಷ್ಟವೇ ಸರಿ. ಅಲ್ಲದೆ ವಿಆರ್‌ಎಸ್ ಜಾರಿ ಮಾಡುವಾಗ ಪರಿಹಾರದ ಇಡುಗಂಟಿನ ಆಮಿಷ ಒಡ್ಡುವುದು ಮಾತ್ರವಲ್ಲದೆ ಒತ್ತಡ ತಂತ್ರಗಳನ್ನು ಅನುಸರಿಸುವುದುಂಟು. ಆದರೂ ಬೇಡವಾದವರೆಲ್ಲ ಹೊರಕ್ಕೆ ಹೋಗುತ್ತಾರೆಂಬುದು ಖಚಿತವಿಲ್ಲ. ಉಳಿದುಕೊಂಡು ನಿರುಪಯುಕ್ತರಾಗಿಯೇ ಮುಂದುವರೆದಿರುತ್ತಾರೆ. ಆಗ ಉದ್ದೇಶವು ಸಂಪೂರ್ಣ ಈಡೇರಿದಂತೆ ಆಗುವುದಿಲ್ಲ.

ಬಹಳ ದೊಡ್ಡ ದುಷ್ಪರಿಣಾಮ ಎಂದರೆ ವಿಆರ್‌ಎಸ್ ಪಡೆದವರ ಬದುಕು ದಾರುಣ ಆಗುವುದು. ಪರಿಹಾರ ಸೂತ್ರದ ಲೆಕ್ಕಾಚಾರ ನಡೆದಾಗ ಇಡುಗಂಟಿನ ದೊಡ್ಡ ಮೊತ್ತ ಕಾಣಿಸುತ್ತದೆ. ಕೈಗೆ ಹಣ ಬಂದಾಗ ಸಾಲ ಬಾಕಿ ಮುಂತಾದವನ್ನೆಲ್ಲ ಮುರಿದುಕೊಳ್ಳುತ್ತಾರೆ.

ಹಾಗೆ ಕೈಗೆ ಬಂದ ಮೊತ್ತವನ್ನು ಫಲಪ್ರದವಾಗಿ ತೊಡಗಿಸಿ ಸಂಪನ್ಮೂಲ ಸೋರಿ ಹೋಗದಂತೆ ಎಚ್ಚರ ವಹಿಸುವುದು ಕಡಿಮೆ. ಆಯಾ ವ್ಯಕ್ತಿಯ ಸಾಮಾಜಿಕ ಅಗತ್ಯಗಳೂ ಸೇರಿದಂತೆ ನಾನಾ ಬಾಬುಗಳಿಗಾಗಿ ಮೊತ್ತದ ದೊಡ್ಡ ಪಾಲು ಖರ್ಚಾಗಿ ಬಿಡುತ್ತದೆ. ಇನ್ನುಳಿದ ಹಣವನ್ನು ಎಲ್ಲಾದರೂ ತೊಡಗಿಸಿ ಬಡ್ಡಿಯೇ ಮುಂತಾದ ಹುಟ್ಟುವಳಿ ಕೈಸೇರಿವಂತೆ ನೋಡಿಕೊಳ್ಳಬೇಕು. ಆದರೆ ಅದಕ್ಕೆ ಅವಕಾಶಗಳು ಕಡಿಮೆ. ಠೇವಣಿ ಇಟ್ಟರೆ ಬರುವ ಬಡ್ಡಿಯ ದರ ಇಳಿದು ಹೋಗಿದೆ. ಬಡ್ಡಿಯ ಹುಟ್ಟುವಳಿ ಐದು ವರ್ಷ ಏನಿತ್ತೋ ಅದು ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿಬಿಟ್ಟಿದೆ.  ಮಿಕ್ಕ ಬಾಬುಗಳಲ್ಲಿ ಹಣವನ್ನು ತೊಡಗಿಸಿದರೂ ಹುಟ್ಟುವಳಿ ಕಡಿಮೆಯೇ. ಸದ್ಯದ ಪರಿಸ್ಥಿತಿಯಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಬಳಕೆದಾರನ ಪಾಲಿಗೆ ಹಣವನ್ನು ಖರ್ಚು ಮಾಡಲು ಇರುವ ಪ್ರಲೋಭನೆಗಳೇ ಅಧಿಕ. ವಿಆರ್‌ಎಸ್ ಪರಿಹಾರ ಧನ ಕೈಸೇರುವಾಗ ಅದಕ್ಕೆ ವರಮಾನ ತೆರಿಗೆ ಸಹಾ ಬೀಳುತ್ತದೆ. ಆ ಸಂಬಂಧ ಒಂದಿಷ್ಟು ರಿಯಾಯ್ತಿಯನ್ನು ಕೇಂದ್ರ ಅರ್ಥ ಸಚಿವರು ಈಚೆಗೆ ಪ್ರಕಟಿಸಿದರು. ಅದು ಸಹಾ ಭಾರೀ ಉತ್ತೇಜಕವೆನಿಸಿಲ್ಲ.

ವಿಆರ್‌ಎಸ್‌ನಿಂದಾಗಿ ವಯಸ್ಕರು ಹೊತ್ತಿಗೆ ಮುಂಚೆ ನಿವೃತ್ತರಾಗುತ್ತಾರೆ. ಜೊತೆಗೆ ದುಡಿಯುವ ವಯಸ್ಸು ಇನ್ನೂ ಸಾಕಷ್ಟು ಇರುವವರೂ ಕೆಲಸ ಕಳೆದುಕೊಳ್ಳುತ್ತಾರೆ. ಎರಡೂ ಬಗೆಯ ಜನರು ಮುಂದಿನ ವರ್ಷಗಳನ್ನು ಕಳೆಯುವಾಗ ಮಾನಸಿಕವಾಗಿ ಭಾರೀ ಹಿಂಸೆಯನ್ನು ಅನುಭವಿಸುತ್ತಾರೆ.

ವಿಆರ್‌ಎಸ್ ಫಲಾನುಭವಿಗಳನ್ನು, ಮುಖ್ಯವಾಗಿ ಗುಮಾಸ್ತೆಗಿರಿಯೇ ಮುಂತಾದ ಕಾರಕೂನಿಕೆ ಮಾಡಿದವರನ್ನು, ಮುಂದೆ ಉಪಯುಕ್ತವಾಗಿ ಬಳಸಿಕೊಳ್ಳುವ ಬಗೆಗೆ ಯಾರೂ ಯೋಚಿಸಿಯೇ ಇಲ್ಲ. ಇವರೆಲ್ಲ ಪೋಲಾಗುವ ಸಂಪನ್ಮಲೂ ಎಂಬುದಂತೂ ನಿಜ.

ಸದ್ಯದ ಆರ್ಥಿಕ ಹಿನ್ನಡೆ ದಿನಗಳು ಕಳೆದು ಹೋಗಿ ಚುರುಕಿನ ಚಟುವಟಿಕೆ ದಿನಗಳು ಪುನಃ ಬಂದಾಗ ಇವರು ಪೋಲಾಗುವುದು ತಪ್ಪಲಿಕ್ಕೆ ಸಾಕು.