‘ಇಂದು ನಗದು – ನಾಳೆ ಸಾಲ’, ಇದು ಹಿಂದಿನ ಕಾಲದಲ್ಲಿ ಅಂಗಡಿಗಳಲ್ಲಿ ಕಾಣಿಸುತ್ತಿದ್ದ ಬೋರ್ಡು. ಸಾಲ ಸಿಗುವುದಿಲ್ಲ; ಏನಿದ್ದರೂ ರೊಕ್ಕ ಎಣಿಸಿಯೇ ವ್ಯವಹಾರ ಮಾಡಬೇಕು ಎನ್ನುವುದರ ನೇರ ಇಂಗಿತ ಇದು.

ಈಗೆಲ್ಲ ಕ್ರೆಡಿಟ್ ಕಾರ್ಡ್ ಬಂದಿದೆ. ಸಾಲದ್ದೇ ವ್ಯಾಪಾರ. ಎಷ್ಟೋ ಬಾರಿ ಒಪ್ಪಿಕೊಂಡ ಬೆಲೆ ಡಿಸ್ಕೌಂಟನ್ನು ಕೊಡಲು ಮಾರಾಟಗಾರ ಕಾರ್ಡಿನ ಮೇಲೆ ನಿರಾಕರಿಸುತ್ತಾನೆ. ಅಮದು ಸಾಲದ ವ್ಯಾಪಾರ. ತಕ್ಷಣ ಆತನಿಗೆ ನಗದು ಸಿಗುವುದಿಲ್ಲ. ಸಾಕಷ್ಟು ದಿನ ಹಿಡಿಯುತ್ತದೆ.

ಏನೂ ಬೇಕಾದರೂ ಈಗ ಸಾಲ ಸಿಗುತ್ತದೆ. ಕಾರು, ಬಂಗಲೆ, ದಿನಸಿ, ಜವಳಿ, ಒಡವೆ, ದೊಡ್ಡ ದೊಡ್ಡ ಹೋಟೆಲುಗಳಲ್ಲಿ ಆತಿಥ್ಯ ಏನು ಬೇಕಾದರೂ ಸಾಲ ಲಭ್ಯ. ಮೊತ್ತ ದೊಡ್ಡದಾದಷ್ಟೂ ಕಂತು ಪಾವತಿ ಸೌಲಭ್ಯ. ಸರ್ಕಾರವಾಗಲಿ, ಕಂಪೆನಿಗಳಾಗಲೀ ಒದಗಿಸಿದ ಸರಕು ಮತ್ತು ಮಾಡಿಕೊಟ್ಟ ಕಾಮಗಾರಿಗೆ ಹಣ ಪಾವತಿ ಮಾಡುವುದು ತಕ್ಷಣವೇನಲ್ಲ. ಹೀಗಾಗಿ, ತನಗೆ ಸಾಲ ಸಿಕ್ಕರೂ ತಾನು ಮಾತ್ರ ನಗದು ಎಣಿಸಿಕೊಳ್ಳುವ ವ್ಯಾಪಾರ ಯಾವುದಾದರೂ ಇರಬಹುದೆ? ಭೇಷಕ್ ಇದೆ!

ಅದೇ ಹೋಟೆಲ್ (ರೆಸ್ಟುರಾ) ವ್ಯಾಪಾರ, ಸೇವಿಸಿದ ತಿನಿಸು ತೀರ್ಥಕ್ಕೆ ಗ್ರಾಹಕ ಹಣ ಎಣಿಸಿ ಹೋಗುತ್ತಾನೆ. ಈ ಬಾಬಿನಲ್ಲೂ ಲೆಕ್ಕ ಬರೆಸಿ ಸಾಲ ಹೇಳುವ ಪರಿಪಾಠ ಇತ್ತೇನೋ; ಈಗಲೂ ಸಣ್ಣ ಊರುಗಳಲ್ಲಿ ಇರಲಿಕ್ಕೆ ಸಾಕು. ಆದರೆ ಬಹುಪಾಲು, ಶೇ ೯೫ ಭಾಗ ನಗದು ವ್ಯಾಪಾರ.

ರೆಸ್ಟುರಾಗಳು ಒಂದು ರೀತಿಯಲ್ಲಿ ಕಾರ್ಖಾನೆಗಳ ಬಾಬಿಗೇ ಸೇರುವಂಥವು. ನಿತ್ಯ ತಯಾರಿಕೆ. ಆಗಿಂದಾಗ ಬಿಸಿ ಬಿಸಿ ವ್ಯಾಪಾರ. ತಣ್ಣಗೆ ಮಾಡಿದರೆ ಖದರ್ ಇರದು. ಅದರ ಸೊಗಸು ಬೇರೆ. ಅದು ಎದುರಿಸುವ ಸವಾಲುಗಳೇ ಬೇರೆ. ಪ್ರತಿ ಬಾರಿ ಗ್ರಾಹಕ ಸಂತೃಪ್ತನಾಗಿಯೇ ಹೋಗಬೇಕು. ತಪ್ಪಿದರೆ ದಿಢೀರ್ ವ್ಯಾಪಾರ ಕಡಿಮೆಯಾಗುತ್ತದೆ. ನಗದು ಎಣಿಸುವ ಸುಖಕ್ಕೆ ಒಂದೇ ವಾರದಲ್ಲಿ ಸಂಚಕಾರ ಬರಬಹುದು.

ಇನ್ನು ಶುಚಿ, ರುಚಿ ಮತ್ತು ಕ್ವಾಲಿಟಿಯ ಮಾತು. ಶುಚಿಯನ್ನೂ ಪಾಲಿಸಬಹುದು. ಕಷ್ಟಪಟ್ಟು ರುಚಿಯನ್ನೂ ಕಾಪಾಡಬಹುದು. ಆದರೆ ಕ್ವಾಲಿಟಿಯ, ಗುಣಟ್ಟದ ಮಾತು ಕಷ್ಟ. ಇದು ತಿನಿಸಿಗೆ ಮಾತ್ರ ಅನ್ವಯಿಸುವಂಥದಲ್ಲ. ತಿನಿಸನ್ನು ಕೈಗೆಟುಕಿಸುವ ಸೇವಾ ಸೌಲಭ್ಯ ಏನಿರುತ್ತದೋ ಅದಕ್ಕೂ ಅನ್ವಯಿಸುತ್ತದೆ. ‘ಇಲ್ಲಿ ಸರ್ವಿಸ್ ಚೆನ್ನಾಗಿಲ್ಲ’ ಎನ್ನುವ ಒಂದೇ ಮಾತಿನಲ್ಲಿ ಗ್ರಾಹಕರು ಹೋಟೆಲಿನವರನ್ನು ಹೊಡೆದು ಹಾಕುತ್ತಾನೆ. ಹಣ ಚೆಲ್ಲುವವನು ಅವನಾದ ಕಾರಣ, ಅವನು ದೂರಿದರೆ ಅದು ಗಂಭೀರವಾದ ಸಮಸ್ಯೆ. ಸಾಮಾನ್ಯವಾಗಿ ತಿನಿಸಿನ ಗುಣಮಟ್ಟ ಮನಸ್ಸಿಗೆ ಹಿಡಿಯದಿದ್ದರೆ ಗೊಣಗಿಕೊಂಡು ಸುಮ್ಮನಾಗುತ್ತಾರೆ. ಉಪ್ಪು ಖಾರ ಹೆಚ್ಚು ಕಡಿ ಆದಾಗಲೂ, ಚಟ್ಟಿ ಹಳಸಿದ್ದರೂ ಅದನ್ನು ಗಲ್ಲಾ ಮೇಲಿರುವ ಅಸಾಮಿಯ ಗಮನಕ್ಕೆ ಬಹುತೇಕ ಜನ ತರುವುದಿಲ್ಲ. ಆದರೆ ಸರ್ವಿಸ್ ಹದಗೆಟ್ಟರೆ ತಕ್ಷಣ ಪ್ರತಿಕ್ರಿಯೆ ಬರುತ್ತದೆ. ಅದೇ ಇಲ್ಲಿನ ಸೊಗಸು. ತಿನಿಸಿನ ಗುಣಮಟ್ಟ ಕಳಪೆ ಆದರೆ ಚುಪ್ ಚುಪ್ ನಿರ್ಗಮಿಸುತ್ತಾನೆ. ಗ್ರಾಹಕ. ಮತ್ತೆ ಆ ಕಡೆ ತಲೆ ಹಾಕಲು ಬಯಸುವುದಿಲ್ಲ. ಆಚೀಚೆ ಬೇರೆ ರೆಸ್ಟುರಾ ಇದೆಯೇ ಎಂದು ಹುಡುಕಾಡುತ್ತಾನೆ. ಅದೇ ರೀತಿ ಬೆಲೆ, ಇಟ್ಟ ಬೆಲೆಗೆ ತಕ್ಕ ತಿನಿಸಿನ ಗುಣಮಟ್ಟ ಮತ್ತು ಸರ್ವಿಸ್ ಇದೆಯೆಂದಾದರೆ ಹಣ ಎಣಿಸಲು ಮುಂದಾಗುವುದು ತಪ್ಪದು. ಇಲ್ಲದಿದ್ದರೆ ಬರೆ ಕಡೆ ಗಮನ.

ಈಗ ಎಲ್ಲ ರೆಸ್ಟುರಾಗಳಲ್ಲಿ ಒಂದಿಷ್ಟು ಒಳ್ಳೆಯ ವಾತಾವರಣ ಸೃಷ್ಟಿಸುವಲ್ಲಿ ಪೈಪೋಟಿ ಬಹಳ. ಇಂಟೀರಿಯರ್ಸ್ ಚೆನ್ನಾಗಿ ಇರಲೇಬೇಕು. ತಪ್ಪಿದರೆ ಜನ ಬರುವುದಿಲ್ಲ. ಇದಕ್ಕೆ ಹಣ ತೊಡಗಿಸುವುದೇ ಭಾರೀ ಹೊರೆ. ಈ ಬಾಬಿಗೆಂದು ಲಕ್ಷಾವಧಿ ಹಣ ವಿನಿಯೋಗಿಸಿದ ಮೇಲೆ ಒಳ್ಳೆಯ ವಹಿವಾಟು ನಡೆಸಲೇಬೇಕು. ವಹಿವಾಟು ಕಡಿಮೆಯಾದರೆ ಹಾಕಿದ ಹಣ ಗಿಟ್ಟುಪಾಡು ಆಗುವುದಿಲ್ಲ. ಹೀಗೆ ಹಣ ತೊಡಗಿಸಿದಂತೆಲ್ಲ ಗ್ರಾಹಕನಿಗೆ ಒದಗಿಸುವ ಸೇವೆ ದುಬಾರಿಯಾಗುತ್ತದೆ.

ಈ ಒಂದು ಸಮಸ್ಯೆಗೆ ಪರಿಹಾರ ಎಂಬಂತೆ ‘ದರ್ಶಿನಿ’ಗಳು ಹುಟ್ಟಿಕೊಂಡವು. ಇವು ವಾಸ್ತವವಾಗಿ ಪಶ್ಚಿಮದ ಫಾಸ್ಟ್‌ಫುಡ್ ಕೇಂದ್ರಗಳ ವಿದ್ಯಮಾನಕ್ಕೆ ಪರ್ಯಾಯವಾದುದೇ ಸರಿ. ಆದರೆ ಅದರಿಂದ ಸ್ಫೂರ್ತಿಗೊಂಡಿದ್ದೇನೂ ಅಲ್ಲ. ನಲವತ್ತು ವರ್ಷಗಳ ಹಿಂದೆ ನಿಂತುಕೊಂಡೇ ತಿಂದು ಹೋಗಲೆಂದು ಹುಟ್ಟಿಕೊಂಡ ಕಾಫಿಬಾರ್‌ಗಳ ಮುಂದುವರೆದ ಆವೃತ್ತಿ ಮಾತ್ರ.

ಯಾರು ಏನೇ ಹೇಳಿದರೂ, ದರ್ಶಿನಿಗಳನ್ನು ಎಷ್ಟೇ ಆಧುನಿಕವಾಗಿ ಸುಸಜ್ಜಿತಗೊಳಿಸಿದರೂ, ಮುಂಚಿನ ಹೋಟೆಲುಗಳಲ್ಲಿ ಕುಳಿತು ಸೇವಿಸುವುದಕ್ಕೆ ಇದ್ದ ಪ್ರಾಶಸ್ತ್ಯ ಇದಕ್ಕೆ ಬರದು. ಜನಸಂಖ್ಯೆ ಹೆಚ್ಚಾದಂತೆ ಭೂಮಿಯ ‘ಜಾಗ’ಕ್ಕೆ ಬಹಳ ಬೆಲೆ ಬಂದಿದೆ. ವ್ಯಾಪಾರ ನಡೆಯುವ ಜನದಟ್ಟಣೆ ಪ್ರದೇಶಗಳಲ್ಲಿ ಜಾಗ ಬಹಳ ದುಬಾರಿ. ಇರುವ, ಸಿಗುವ, ಸ್ವಲ್ಪ ಜಾಗದಲ್ಲೇ ಅತಿ ಹೆಚ್ಚು ವಹಿವಾಟು ನಡೆಸಬಲ್ಲವನು ಯಶಸ್ವಿ ವ್ಯಾಪಾರಿಯಾಗುತ್ತಾನೆ. ಈ ತತ್ವದ ಮೇಲೆ ಬೆಳೆದು ಬಂದಿದ್ದು ದರ್ಶಿನಿಗಳ ವಿದ್ಯಮಾನ. ಬೆಂಗಳೂರು ಮತ್ತು ಈ ನಗರವನ್ನು ಅನುಸರಿಸಿ ಇತರೆಡೆ ರ್ದನಿಗಳ ಪ್ರಭಾವ ಅದಿಕವಾಗುತ್ತಿದೆ. ಜನಕ್ಕೆ ಪುರಸೊತ್ತು ಸಹಾ ಕಡಿಮೆ ಆಗುತ್ತಿದೆ. ಆ ಕಾರಣದಿಂದ ಮುಖ್ಯವಾಗಿ ಕಚೇರಿ ಕೆಲಸದ ವೇಳೆಯನ್ನು ಪ್ರಧಾನವಾಗಿ ಇರಿಸಿಕೊಂಡು ದರ್ಶಿನಿಗಳು ಕೆಲಸ ಮಾಡುತ್ತಿವೆ.

ಈಚಿನ ದಿನಗಳಲ್ಲಿ ಇವು ಕೂಡಾ ತಮ್ಮ ಭಾರಕ್ಕೆ ತಾವೇ ಕುಸಿಯುತ್ತಿವೆ. ಇಂಟೀರಿಯರ್ಸ್‌ಗೆ ಮತ್ತಿತರ ಬಾಬಿಗೆ ಸುರಿದ ಹಣವನ್ನು ಎತ್ತಿ ಆದ ಮೇಲೆ ಉತ್ಸಾಹ ಕಡಿಮೆ ಆಗುತ್ತದೆ. ಆಸಕ್ತಿ ಕುಂದುತ್ತದೆ. ಗ್ರಾಹಕ ಕೂಡಾ ಅಂಥ ದರ್ಶಿನಿಗಳನ್ನು ಬಿಟ್ಟು ಹೊಸ ದರ್ಶಿನಿಗಳತ್ತ ಧಾವಿಸುತ್ತಾನೆ. ಹಳೆಯ ದರ್ಶಿನಿ ನೊಣ ಹೊಡೆಯತೊಡಗಿದಂತೆ ಪಕ್ಕದಲ್ಲೇ ಹೊಸ ದರ್ಶಿನಿ ಹುಟ್ಟಿಕೊಳ್ಳುತ್ತದೆ. ಚೆನ್ನಾಗಿ ನಡೆಯುತ್ತದೆ. ಇನ್ನೊಂದು ಹುಟ್ಟಿಕೊಳ್ಳುವತನಕ.

ಹೋಟೆಲು, ರೆಸ್ಟುರಾ, ದರ್ಶಿನಿ ಅಥವಾ ರಸ್ತೆಬದಿ ತಿನಸಿನ ಡಾಭಾ ಹೀಗೆ ಯಾವುದೇ ಆಗಲಿ ರುಚಿಗೆ ಪ್ರಾಶಸ್ತ್ಯ ಕೊಡದಿದ್ದರೆ ಗ್ರಾಹಕ ಉಳಿಯುವುದಿಲ್ಲ. ಯಾವುದೇ ಒಂದು ಕಡೆ ತಿನಿಸಿನ ರುಚಿ ಹೀಗೆ ಇರುತ್ತದೆ ಎಂಬುದು ಗ್ರಾಹಕನ ತಲೆಯಲ್ಲಿ ತುಂಬಿಕೊಂಡಿರುತ್ತದೆ. ರುಚಿ ಹಾಗೆ ಇಲ್ಲದಿದ್ದರೆ ಕೆಲಸ ಕೆಟ್ಟಂತೆಯೇ ಸರಿ. ಗ್ರಾಹಕ ಒಪ್ಪುವುದಿಲ್ಲ. ರುಚಿ ಬದಲಾಗಲೇಬಾರದು. ಗುಣಮಟ್ಟ ವೃದ್ಧಿಪಡಿಸಿದರೂ ರುಚಿ ಬದಲಾದಾಗ ಒಪ್ಪುವುದಿಲ್ಲ. ಭಾರೀ ಹಣ ಹೂಡುವವರು ರುಚಿಯನ್ನು ಕಾಪಾಡಿಕೊಂಡು ಬರುವಲ್ಲಿ ವಿಫಲರಾಗುತ್ತಿದ್ದಾರೆ.

ವಿಚಿತ್ರವೆಂದರೆ ಗ್ರಾಹಕರ ರುಚಿಗ್ರಾಹ್ಯತೆಯನ್ನೇ ದರ್ಶಿನಿಗಳವರು ಬದಲಾಯಿಸುತ್ತಿದ್ದಾರೆ. ಒಂದೇ ಒಂದು ಅಗಳು ಬೇಳೆಯನ್ನು ಹಾಕದೆ ಬರಿದೇ ಟೊಮ್ಯಾಟೊ ರಸ ಮತ್ತು ಅಕ್ಕಿ ಹಿಟ್ಟಿನ ಗಂಜಿ ಇವುಗಳಿಂದ ಸಾಂಬಾರ್ ತಯಾರಿಸಬಲ್ಲರು! ಯಾವುದೇ ತಿನಿಸಿಗೆ ದಂಡಿಯಾಗಿ ಜಿಡ್ಡು ಸುರಿಯುವುದೇ ಗುಣಪಾಲನೆಯ ಗುಟ್ಟು ಎಂದು ದರ್ಶಿನಿಗಳವರು ನಂಬುತ್ತಾರೆ. ಹೀಗೆ ಹಲವಾರು ವಿಪರೀತಗಳು ವಿಜೃಂಭಿಸಿವೆ. ಒಂದು ಮಾತು ಮಾತ್ರ ನಿಜ; ರುಚಿಪಾಲನೆ ಹೇಗೆ ಇದ್ದರೂ ಅಗ್ಗಕ್ಕೆ ತಿನಿಸು ಸರಬರಾಜು ಮಾಡುವವರು ತಾವೆಂದು ಬಿಂಬಿಸುತ್ತಾರೆ. ಉದಾಹರಣೆಗೆ ಎಂಟು ಅಥವಾ ಹತ್ತು ರೂಪಾಯಿಗೆ ಮಿನಿ ಪ್ಲೇಟ್ ಊಟ ಕೊಡುತ್ತಾರೆ. ಅದರಲ್ಲೂ ಅವರು ಲಾಭ ಮಾಡದೆ ಏನಿಲ್ಲ. ರುಚಿಯೂ, ಗುಣವೂ ಗ್ರಾತ್ರವೂ ಕಳಪೆಯೋ ಕಳಪೆ.

ತಿನಿಸು ಉದ್ಯಮದವರು ಹೀಗೆಲ್ಲ ಏನೇನು ಸರ್ಕಸ್ ಮಾಡಿದರೂ, ನಗದು ಹಣ ಕೈ ಸೇರುವ ಅನುಕೂಲ ಧಾರಾಳವಾಗಿದ್ದರೂ ಅವರ ಪಾಲಿಗೆ ಹೊಸ ಸವಾಲುಗಳು ಎದುರಾಗುತ್ತಿವೆ. ನಗದು ವ್ಯಾಪಾರದ ಆಮಿಷದಿಂದಾಗಿ ಹೊಸಬರ ಪ್ರವೇಶ ಅಧಿಕವಾಗುತ್ತಿದೆ. ಇರುವ ಗ್ರಾಹಕರನ್ನೇ ಎಲ್ಲರೂ ಹಂಚಿಕೊಳ್ಳಬೇಕು. ಹೀಗಾಗಿ ಪೈಪೋಟಿ ಅಧಿಕವಾಗುತ್ತದೆ. ಯಶಸ್ವಿಯಾದ ಕೆಲವರು ಮಾತ್ರ ಜೋರಾಗಿ ಹಣ ಮಾಡುತ್ತಾರೆ.

ಈಚೆಗೆ ಕೆಲಸಗಾರರ ಸಮಸ್ಯೆ ತೀವ್ರವಾಗಿದೆ. ಇಲ್ಲಿಗೆ ದುಡಿಯಲು ಬರುವ ಜನಕ್ಕೆ ಗಾಣದೆತ್ತಿನ ದುಡಿಮೆ ಅಭ್ಯಾಸ ಇರಬೇಕಾಗುತ್ತದೆ. ಈ ಗುಣಗಳನ್ನು ಹೊಂದಿರುವವರು ಚೆನ್ನಾಗಿ ವ್ಯಾಪಾರವಾಗುವ ಕಡೆ ಸೇರುತ್ತಾರೆ. ಮಾಲೀಕನಿಗೆ ಸಂಪಾದನೆ ಜೋರಾದಾಗ ಅದರಲ್ಲಿ ಅಧಿಕ ಪಾಲು ತಮಗೆ ಬೇಕೆಂದು ಅಪೇಕ್ಷಿಸುತ್ತಾರೆ. ಈ ದಿಸೆಯ ಜಗ್ಗಾಟ ಅಧಿಕವಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಮಿಕ್ಕ ಕಡೆಯಂತೆ ತಿನಿಸು ಕೊಳ್ಳುವ ಗ್ರಾಹಕನ ಖರೀದಿ ಸಾಮರ್ಥ್ಯ ಕೂಡಾ ಕಡಿಮೆ ಆಗಿದೆ. ಅಂದರೆ ತಿನ್ನಬೇಕೆನ್ನುವವರ ಜೇಬಲ್ಲ ಹಣ ಕಡಿಮೆ ಆಗಿದೆ. ಆರ್ಥಿಕ ಹಿಂಜರಿತದ ಪರಿಣಾಮವಿದು.

ನಗದು ವ್ಯಾಪಾರ ಚೆನ್ನವೇ ಸರಿ. ಆದರೆ ನಗದೇ ಕಡಿಮೆಯಾಗುತ್ತಿದೆ.

೧೯.೦೬.೨೦೦೨