ತಾತಂದಿರು ನೆನೆಯುವ ಅತಿದೊಡ್ಡ “ಮಾರಿ’’ ಎಂದರೆ ಪ್ಲೇಗು. ಅದರ ಬಾಯಿಗೆ ಬಿದ್ದು ಪ್ರಾಣ ಕಳೆದುಕೊಂಡ ಜನರ ವಿಚಾರ ಎಷ್ಟು ಭೀಕರವೋ, ಅಷ್ಟೇ ಭೀಕರ ನಂತರದ ಜನರು ಪಟ್ಟ ಬವಣೆ.

ಮಾರಿ, ಪಿಡುಗು, ಸಾಂಕ್ರಾಮಿಕ ರೋಗ ಮುಂತಾದ ಯಾವುದೇ ಹೆಸರಿನಿಂದ ಕರೆದರೂ ಹರಡುವ ಬೇನೆ ಎಂದಿಗೂ ಭಯಾನಕವೇ. ಇಂದಿನ ಸಾರ್ಸ್ ಕೂಡಾ ಹಾಗೆಯೇ. ಇದು ಎಷ್ಟು ಭಯಾನಕ ಎಂಬುದು ಇದರ ದಾಳಿಗೆ ತುತ್ತಾಗದ ಜನರಿಗೆ ಕೂಡಾ ಮನವರಿಕೆ ಆಗಬೇಕಾದರೆ ಇನ್ನಷ್ಟು ವಾರಗಳು ಕಳೆಯಬೇಕು.

೨೦೦೧ರ ಸೆಪ್ಟೆಂಬರ್ ೯ರ ಗಳಿಗೆ ಮುಹೂರ್ತವನ್ನು ಬರೆದು ಅದು ಎಂಥ ದುರಂತದ ಕಾಲ ಎಂದು ವಿಶ್ಲೇಷಿಸುವ ಅಗತ್ಯ ಏನೂ ಇಲ್ಲ. ಅಮೆರಿಕವೂ, ವಿಶ್ವವೂ ಭಯೋತ್ಪಾದನೆ ರೂಪದ ಕಿರಾತಕನನ್ನು ಅಂದು ಕಂಡಿತು. ಅಲ್ಲಿಂದ ಮುಂದೆ ಒಂದಾದ ಮೇಲೊಂದು ದುರಂತಗಳ ಸರಮಾಲೆ. ಭಯೋತ್ಪಾದಕನನ್ನು ಹುಡುಕುವ ತರದೂದಿನಲ್ಲಿ ಆಫ್ಘನ್ ಯುದ್ಧ. ತೈಲವನ್ನು ಬಾಚಿಕೊಳ್ಳಲು ಹಾಗೂ ದುರುಳನನ್ನು ಅಮೆರಿಕ ಶಿಕ್ಷಿಸಲು ಹೊರಟಿದ್ದರಿಂದ ನಡೆದ ಇರಾಕ್ ಯುದ್ಧ. ಇದೀಗ ಸಾರ್ಸ್ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್) ಹಾವಳಿ. ನ್ಯೂಮೋನಿಯಾ ಹೋಲುವ ಈ ರೋಗ ಮರಣಾಂತಕ. ಒಂದು ಲೆಕ್ಕಾಚಾರದ ಪ್ರಕಾರ ಏಡ್ಸ್ ರೋಗವು ಎಷ್ಟೊಂದು ಎಚ್‌ಐಬಿ ಸೋಕಂನ್ನು ಹರಡಿದೆಯೋ ಅದಕ್ಕಿಂತ ಹೆಚ್ಚಿನ ಅಪಾಯವನ್ನು ಸಾರ್ಸ್ ರೋಗವು ಪ್ರಪಂಚಕ್ಕೆ ತಂದಿಡುತ್ತದೆ.

ಪ್ರಪಂಚದಾದ್ಯಂತ ಸಾರ್ಸ್‌ನಿಂದ ಸತ್ತವರ ಸಂಖ್ಯೆ ಈಗಾಗಲೇ ೨೫೦ ದಾಟಿದೆ. ಈ ಸಂಖ್ಯೆ ವಾಸ್ತವವಾಗಿ ಹಲವು ಪಟ್ಟು ಏರುವ ನಿರೀಕ್ಷೆ ಇದೆ. ಮಧ್ಯ ಚೀನಾದಲ್ಲಿ ಕಾಣಿಸಿಕೊಂಡು ಸಿಂಗಪುರ, ಹಾಂಕಾಂಗ್, ಅದರ ಸುತ್ತಮುತ್ತಲ ರಾಷ್ಟ್ರಗಳನ್ನಲ್ಲದೆ ಕೆನಡಾಕ್ಕೂ ಹಬ್ಬಿದೆ. ಅದರ ಪರಿಣಾಮ ಇನ್ನುಳಿದ ಪ್ರಪಂಚದ ಮೇಲೆ ಆಗಲಿದೆ.

ಪ್ರಥಮ ವಿಶ್ವ ಸಮರದ ನಂತರ ತಾಯ್ನಾಡಿಗೆ ಮರಳಿದ ಸೈನಿಕರೆಲ್ಲ ಇನ್‌ಪ್ಲುಯೆನ್ಜಾ ಸೋಂಕನ್ನು ಹೊತ್ತು ಬಂದಿದ್ದರಿಂದ ಯುರೋಪಿನಲ್ಲಿ ೧೭೦ಲಕ್ಷ ಜನ ಸತ್ತರು. ಅದನ್ನು ಬಿಟ್ಟರೆ ಮಿಕ್ಕೆಲ್ಲ ಸಾಂಕ್ರಾಮಿಕ ರೋಗಗಳು ಹರಡುತ್ತಾ ಹೋಗಿದ್ದು ವ್ಯಾಪಾರ ಮಾರ್ಗಗಳಲ್ಲಿ ಮಾತ್ರವೇ. ಅಂದರೆ, ಸರಕು ಹೊತ್ತು ಸಾಗಿಸುವಾಗ ಸೋಂಕು ಹರಡಿ, ಅದು ಹರಡಿದ ಕಡೆಯೆಲ್ಲ ಆರ್ಥಿಕ ಕುಸಿತ ಸಂಭವಿಸಿತು.

ಮನೆಯಲ್ಲಿ ಒಬ್ಬರಾದ ನಂತರ ಇನ್ನೊಬ್ಬರು ಜ್ವರ ಬಿದ್ದರೆ, ಆರ್ಥಿಕ ಸ್ಥಿತಿ ಹೇಗೆ ಹದಗೆಡುತ್ತದೋ ಹಾಗೆಯೇ, ಸಾರ್ಸ್ ತನ್ನ ಪರಿಣಾಮ ಉದ್ದಕ್ಕೂ ಬೀರುತ್ತಲೇ ಹೋಗುತ್ತದೆ.

ಬೆಂಗಳೂರಿನ ಐ ಟಿ ಕಂಪೆನಿಗಳವರು ತಮ್ಮಲ್ಲಿಗೆ ಭೇಟಿ ಕೊಡುವ ಗ್ರಾಹಕ ವಿದೇಶೀಯರ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ ಎಂದು ಚಿಂತಾಕ್ರಾಂತರಾಗಿದ್ದಾರೆ. ಸಿಂಗಪುರ ಹಾಂಕಾಂಗ್‌ಗಳಿಗೆ ಭೇಟಿ ಕೊಡುವವರೇ ಇಲ್ಲವಾಗಿದೆ. ಚೀನಕ್ಕಂತೂ ಒಂದು ರೀತಿಯಲ್ಲಿ ವಿಶ್ವ ಸಮುದಾಯದಿಂದ ಬಹಿಷ್ಕಾರವೇ ಸರಿ.

ಇಲ್ಲಿಗೆಲ್ಲ ಹೋಗಬೇಡಿರೆಂದು ಸ್ವತಃ ವಿಶ್ವಸಂಸ್ಥೆಯೇ ತಾಕೀತು ಮಾಡಿದೆ. ರೋಗ ಪ್ರತಿಬಂಧಕ್ಕೆ ಜಬರ್‌ದಸ್ತ್ ಕ್ರಮ ಕೈಗೊಂಡಿಲ್ಲ ಎಂಬುದು ಚೀನಾ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಆಕ್ಷೇಪ. ಆದರೆ ಚೀನಾ ಅದನ್ನು ಲೆಕ್ಕಿಸದೆ, ಯಥಾಪ್ರಕಾರ ಬಾಯಿಬಿಚ್ಚದೆ ತನಗೆ ಬೇಕಾದ್ದನ್ನು ಮಾಡಿಕೊಂಡು ಹೋಗುವ ಧೋರಣೆಯಲ್ಲಿ ಮುಂದೆ ಸಾಗಿದೆ. ನುಸುಳಿ ಬರುವ ತುಣುಕು ಸುದ್ಧಿಗಳ ಆಧಾರದಲ್ಲಿ ಹೇಳುವುದಾದರೆ ಜಬರ್‌ದಸ್ತ್ ಕ್ರಮಗಳನ್ನೇ ಕೈಗೊಂಡಿವೆ.

ಈಚೆಗೆ ಸೂರತ್‌ನಲ್ಲೊಂದು ಸಾಂಕ್ರಾಮಿಕ ರೋಗದ ಮೂಲ ಪತ್ತೆಯಾದಾಗ ಸಮರೋಪಾದಿ ಕ್ರಮ ತಕ್ಷಣ ಆರಂಭವಾಯಿತು. ಜೀವಮಾನ ಕಾಲದ ಒಂದು ಅವಕಾಶವೋ ಎಂಬಂತೆ ಜನ ನಿರ್ಮಲೀಕರಣದಲ್ಲಿ ತೊಡಗಿದರು. ಮೂಲೋತ್ಪಾಟನೆ ಸಾಧ್ಯವಾಯಿತು. ಸೂರತ್ ವಿದ್ಯಮಾನವನ್ನು ಜನ ಆಮೇಲೆ ಮರೆತುಹೋದರು; ಆ ಮಾತು ಬೇರೆ. ಆದರೆ ನಗರ ಶುಚಿಗೊಂಡಿತು. ಸೋಂಕು ನಿಂತು ಹೋಯಿತು.

ಸಾರ್ಸ್ ವಿಚಾರ ಬೇರೆ. ಸೋಂಕು ಗಾಳಿಯಲ್ಲೇ ಹರಡಿಕೊಳ್ಳುತ್ತದೆ. ಸೋಂಕು ತಗುಲಿದವರನ್ನು, ಅವರ ಬಟ್ಟೆ ಪರಿಕರ ಮುಂತಾದವನ್ನು ಬೇರ್ಪಡಿಸಿ ಇಡುತ್ತಾ ಹೋಗುವುದು ವಾಸ್ತವವಾಗಿ ವೈದ್ಯ ಚಿಕಿತ್ಸೆ ಮತ್ತು ಶುಶ್ರೂಷೆಗಿಂತ ಹೆಚ್ಚು ಅಗತ್ಯ ಎನಿಸುವ ಕ್ರಮವಾಗುತ್ತದೆ.

ರೋಗದ ಸಾವು, ಸೋಂಕಿನ ಮೈಲಿಗೆಗಿಂತ ಸಾರ್ಸ್ ತರುವ ಆರ್ಥಿಕ ನಷ್ಟದ ಬಗೆಗೆ ಚಿಂತಿಸುವುದು ಆರಂಭವಾಗಿದೆ. ಈ ನಷ್ಟದ ಪರಿಮಾಣ ಎಷ್ಟು ದೊಡ್ಡದೆಂದರೆ ಇದು ಯುದ್ಧಕ್ಕಿಂತ ಭೀಕರ.

ಸಾರ್ಸ್ ಭೀತಿಯಿಂದ ಸಂಚಾರ ಮತ್ತು ಸಾಗಾಣಿಕೆ ನಿಂತು ಹೋಗುತ್ತದೆ; ಜನರು ಖರ್ಚು ಮಾಡುವ ಹಣದ ಆಧಾರದ ಮೇಲೆ ನಡೆಯುವ ಪ್ರವಾಸೋದ್ಯಮ ಸ್ಥಗಿತ, ರಫ್ತಿಗೆ ಧಕ್ಕೆ. ಏಷ್ಯಾ ರಾಷ್ಟ್ರಗಳಲ್ಲಿ ವಾರ್ಷಿಕ ಆರ್ಥಿಕ ಸ್ವರೂಪವೇ ವಿಕೃತ ಎನಿಸಿಕೊಳ್ಳುತ್ತದೆ. ಇದರ ಪರಿಣಾಮ ಇಡೀ ವಿಶ್ವದ ಮೇಲೆ ಆಗುತ್ತದೆ. ಒಟ್ಟರೆ ವಿಶ್ವ ಆರ್ಥಿಕತೆಯೇ ಶೇಕಡಾ ಎರಡು ಎರಡೂವರೆಯಷ್ಟು ಕುಂಠಿತಗೊಳ್ಳುತ್ತದೆ ಎಂಬುದು ತಜ್ಞರ ಅಂದಾಜು. ಏಷ್ಯಾ ರಾಷ್ಟ್ರಗಳಲ್ಲಿ ಹಾನಿ ಎಷ್ಟರಮಟ್ಟಿಗೆ ಇರುತ್ತದೆ ಎನ್ನುವುದು ಮನದಟ್ಟಾಗಲು ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು.

ಚೀನಾ ದೊಡ್ಡ ದೇಶ. ಜನಸಂಖ್ಯೆಯಲ್ಲಿ ಅದು ವಿಶ್ವದಲ್ಲೇ ಪ್ರಥಮ. ಆದ್ದರಿಂದ ಆಗುವ ಹಾನಿಯ ಪ್ರಮಾಣ ಮಿಕ್ಕ ರಾಷ್ಟ್ರಗಳಿಗಿಂತ ಕಡಿಮೆ ಕಾಣುತ್ತದೆ. ಅದರ ವೃದ್ಧಿ ದರ ಶೇ. ೭.೬ರಿಂದ ಶೇ. ೭.೩ಕ್ಕೆ ಇಳಿಯುತ್ತದೆ ಎನ್ನುವ ಅಂದಾಜಿದೆ.  ಆದರೆ ಹಾಂಕಾಂಗ್ ವೃದ್ಧಿ ದರ ಶೇ ೪ ರಿಂದ ೩.೫ಕ್ಕೆ ಇಳಿಯುತ್ತದೆ. ತೈವಾನ್ ಸರ್ಕಾರ ತನ್ನ ಪ್ರವಾಸೋದ್ಯಮ ನಷ್ಟ ೨೪.೪ ಕೋಟಿ ಡಾಲರ್ ಎಂದು ಹೇಳಿತ್ತಿದೆ.

ಹಾಂಕಾಂಗ್‌ನ ಅತಿ ಪ್ರತಿಷ್ಠಿತ ಹೋಟೆಲುಗಳಲ್ಲಿ ತಲಾ ೧೦ಕ್ಕಿಂತ ಹೆಚ್ಚು ಜನ ತಂಗಿಲ್ಲ. ಆ ದೇಶ ನಡೆಸುವ ಕ್ಯಾಥೇ ಪೆಸಿಫಿಕ್ ಏರ್‌ಲೈನ್ಸ್ ವಾಸ್ತವವಾಗಿ ವಿಶ್ವದ ನಾಲ್ಕನೇ  ಅತಿ ದೊಡ್ಡ ವಿಮಾನಯಾನ ಸಂಸ್ಥೆ. ಈಗ ಅದರ ಒಂದು ವಿಮಾನವೂ ಹಾರುತ್ತಿಲ್ಲ; ನೆಲ ಕಚ್ಚಿವೆ. ಅದನ್ನು ನಡೆಸುವ ಎಲ್ಲ  ಜನರೂ ಈಗ ನಿರುದ್ಯೋಗಿಗಳು. ಇದು ವಿಮಾನಯಾನ ಸಂಸ್ಥೆ ವಿದ್ಯಮಾನ ಮಾತ್ರವಲ್ಲ. ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವ ವಿದ್ಯಮಾನ, ಅವಸ್ಥೆ ಪಡುತ್ತಿರುವ ಎಲ್ಲ ಏಷ್ಯಾ ರಾಷ್ಟ್ರಗಳ ದುಸ್ಥಿತಿ.

ಹಾಂಕಾಂಗ್‌ನ ಅತಿದೊಡ್ಡ ವ್ಯಾಪಾರ ಅಂದರೆ ರಪ್ತು, ವಾಸ್ತವವಾಗಿ ಉಡುಪಿನದು. ೨೦೦೨ರಲ್ಲಿ ಅದು ೬.೫ ಕೋಟಿ ಹಾಂಕಾಂಗ್ ಡಾಲರ್‌ನಷ್ಟಿತ್ತು. ಈಗ ಸರಕು ಹೊರಕ್ಕೇ ಜರುಗುತ್ತಿಲ್ಲ; ಆ ಪುಟ್ಟ ಜಗತ್ತಿನಲ್ಲಿ ನಿರುದ್ಯೋಗ ಯಾವ ಪ್ರಮಾಣದಲ್ಲಿ ಮುಸುಳಿಕೊಳ್ಳುತ್ತದೆ ಎಂದು ಊಹಿಸಬಹುದು.

ಏಷ್ಯಾ ರಾಷ್ಟ್ರಗಳಿಂದ ಉಡುಪು ಕೊಳ್ಳುವ ಅತಿ ದೊಡ್ಡ ಗ್ರಾಹಕ ರಾಷ್ಟ್ರವೆಂದರೆ ಅಮೆರಿಕ. ಯಾವ ಕಂಪೆನಿಯವರೂ ತಮ್ಮ ಜನರನ್ನು ಅಮೆರಿಕದಿಂದ ಹಾಂಕಾಂಗ್, ಚೀನಾ, ಸಿಂಗಪುರ ಮತ್ತು ವಿಯೆಟ್ನಾಂಗಳಿಗೆ ಹೋಗಲು ಬಿಡುತ್ತಿಲ್ಲ.

೧೯೯೭-೯೮ರಲ್ಲಿ ಏಷ್ಯಾ ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ಜರ್ಝರಿತವಾಗಿದ್ದವು. ಅದರಿಂದ ಸ್ವಲ್ಪ ಚೇತರಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುವಾಗಲೇ ಸಾರ್ಸ್ ರೋಗ ಅವನ್ನು ಬಡಿದು ಹಾಕುತ್ತಿದೆ.

ಸಾರ್ಸ್ ವೈರಸ್ ಅನ್ನು ತೊಡೆದುಹಾಕಿ ಸಾವು ನೋವನ್ನು ನಿಲ್ಲಿಸುವುದಕ್ಕೆ ಎಷ್ಟು ದಿನ ಹಿಡಿಯಬಹುದು? ಯಾರೂ ಊಹಿಸಲಾರರು. ಕೆಲವು ತಿಂಗಳುಗಳೇ ಹಿಡಿಯಬಹುದು. ಅಷ್ಟಾದರೂ ಸಾರ್ಸ್ ವೈರಸ್ ನಾಮಾವಶೇಷ ಆಗುವುದಿಲ್ಲ. ಹತೋಟಿ ಸಾಧಿಸಿ, ವರ್ಷಗಳ ಪರ್ಯಂತ ಶ್ರಮಿಸಿ ತೊಡೆದು ಹಾಕಬೇಕು.

ವಿಶ್ವ ಆರೋಗ್ಯ ಸಂಸ್ಥೆ ತನ್ನ ಒಂದು ಹೇಳಿಕೆಯಲ್ಲಿ ಬಳಸಿರುವ ಮಾತುಗಳು ಇವು: “ಸಾರ್ಸ್ ಹರಡುತ್ತಲೇ ಹೋದರೆ ವಿಶ್ವಾದ್ಯಂತ ಆಗುವ ನಷ್ಟ ೩೦ ಬಿಲಿಯನ್ ಡಾಲರ್. ರಾಷ್ಟ್ರಗಳು ಪರಸ್ಪರ ಅವಲಂಬಿ ಆಗಿರುವ ಕಾರಣ ಈ ನಷ್ಟ ಇನ್ನೂ ಹೆಚ್ಚಿಗೆ ಆಗಬಹುದು’’

ಈ ಹೇಳಿಕೆ ಬಿಡುಗಡೆ ಆದ ಕಾಲಘಟ್ಟದ ನಂತರ ಪರಿಸ್ಥಿತಿ ಸತತವಾಗಿ ಹದಗೆಡುತ್ತಾ ಮುಂದೆ ಸಾಗಿದೆ ಎಂಬುದು ನಿಜ.

ಸಾರ್ಸ್‌ನಿಂದ ಏಷ್ಯಾ ರಾಷ್ಟ್ರಗಳಿಗೆ ಆಗುತ್ತಿರುವ ನಷ್ಟವನ್ನು ನಿಂತ ವಿಮಾನಯಾನ, ಸ್ಥಗಿತಗೊಂಡ ಪ್ರವಾಸೋದ್ಯಮ, ರದ್ದಾದ ರಫ್ತು ಪ್ರಕರಣಗಲು ಮುಂತಾದವುಗಳಿಂದ ಆಗಲಿ; ಸಾವಿನ ಸಂಖ್ಯೆ ಹಾಗೂ ಸೋಂಕು ತಗುಲಿಸಿಕೊಂಡವರ ಸಂಖ್ಯೆ ಇವುಗಳಿಂದಾಗಲಿ; ಅಳೆಯಲಾಗದು. ಏಷ್ಯನ್ನರ ಜನಜೀವನದಲ್ಲಿ ಆಗುವ ವ್ಯತ್ಯಾಸದಿಂದ ಅಳೆಯಬೇಕು.

ಅಮೆರಿಕದ ವಿಶ್ವವಾಣಿಜ್ಯ ಕೇಂದ್ರದ ಗೋಪುರಗಳು ಭಯೋತ್ಪಾದನೆಯಿಂದಾಗಿ ಕುಸಿದು ನೆಲಕಚ್ಚಿದಾಗ ನಷ್ಟಕ್ಕಿಂತ ಹೆಚ್ಚಾಗಿ ಅಮೆರಿಕದ ಗರ್ವಭಂಗ ಎಂಬ ಕಾರಣದಿಂದ ದೊಡ್ಡ ಸುದ್ದಿಯಾಯಿತು.

ಸಾರ್ಸ್ ಒಮ್ಮೆಲೇ ಕುಸಿಯುವಂತೆ ಮಾಡುವುದಿಲ್ಲ. ನಿಧಾನವಾಗಿ ಕೊಲ್ಲುತ್ತದೆ.

೩೦.೦೪.೨೦೦೩