ಇಂದಿರಾಗಾಂಧಿ ಕಾಲದಲ್ಲಿ ‘ಸಾಲಮೇಳ’ ಎಂಬೊಂದು ಉತ್ಸವ ನಡೆಯುತ್ತಿತ್ತು. ಬ್ಯಾಂಕುಗಳವರು ಸಾಲ ಎಂಬುದಾಗಿ ಬಡವರಿಗೆ ಒಂದಿಷ್ಟು ನೆರವು ದಾಟಿಸುತ್ತಿದ್ದರು. ‘ಕೊಟ್ಟವನು ಕೋಡಂಗಿ ಇಸಕೊಂಡವನು ಈರಭದ್ರ’.

ಕೊಡುವವರಿಗೂ ಗೊತ್ತು; ಪಡೆಯುವವರಿಗೂ ಗೊತ್ತು; ಸಾಲ ಎಂಬುದೇನೂ ಮರು ಪಾವತಿ ಆಗುವಂಥದು ಅಲ್ಲವೆಂದು. ಆದರೂ ಮೇಳಗಳೇನೂ ಸ್ಪಲ್ಪದರಲ್ಲಿ ನಿಲ್ಲಲಿಲ್ಲ. ನಿಂತ ಮೇಲೂ ಎಷ್ಟೆಷ್ಟು ವಾಪಸು ಬಂದಿತು ಎಂಬ ವಿವರಗಳೇನೂ ಹೊರಬೀಳಲಿಲ್ಲ. ಅವು ನಿಂತ ಮೇಲೆ ಆದ್ಯತೆ ಕ್ಷೇತ್ರಗಳಾದ ಕೃಷಿ, ಸಣ್ಣ ಉದ್ಯಮ ಮುಂತಾದ ಕ್ಷೇತ್ರಗಳಿಗೆ ತಮ್ಮ ಸಾಲ ನೀಡಿಕೆಯ ಶೇಕಡಾವಾರು ಇಂತಿಷ್ಟೆಂಬ ರೀತಿ ಕಡ್ಡಾಯವಾಗಿ ಹಣ ನೀಡಬೇಕೆಂಬ ರಿವಾಜು ಜಾರಿಗೆ ಬಂದಿತು. ಆ ಆದ್ಯತೆ ಕ್ಷೇತ್ರಗಳೇ ಈಗ ಸತ್ತು ಸುಣ್ಣವಾಗಿವೆ. ಆ ಮಾತು ಬೇರೆ.

ಸಾಲ ಮೇಳಗಳೆಂಬ ರಾಜಕೀಯ ಕಾರ್ಯಕ್ರಮದ ಅಧ್ವರ್ಯುಗಳಾಗಿದ್ದ ಜನಾರ್ದನ ಪೂಜಾರಿಯವರು ಬ್ಯಾಂಕುಗಳನ್ನು ನಡೆಸುವವರ ಕಾರ್ಯವೈಖರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ಸಾಲಮೇಳ ನಡೆಸಬೇಕೆಂದರೆ ಬ್ಯಾಂಕುಗಳು ತುಟಿಪಿಟಕ್ಕೆನ್ನುತ್ತಿರಲಿಲ್ಲ. ಅಂಥ ರಾಮಬಾಣವನ್ನು ಪೂಜಾರಿ ಅವರು ಪ್ರಯೋಗಿಸಿದ್ದರು. ಅದೇನೆಂದರೆ ‘ಬ್ಯಾಂಕುಗಳವರು ತಮಗೆ ಬೇಕೆಂದವರಿಗೆ ಸಾಲ ಕೊಡುವುದಿಲ್ಲವೆ? ಅನಂತರ ವಸೂಲಾಗದಿದ್ದಾಗ, ಬಾಕಿಯನ್ನು ವಜಾ ಮಾಡುವ ಔದಾರ್ಯ ತೋರುವುದಿಲ್ಲವೆ? ಅದೇ ಲೆಕ್ಕದಲ್ಲಿ ಬಡವರಿಗೆ ಒಂದಿಷ್ಟು ಸಾಲ ನೆರವು ಕೊಡಲಿ’ ಎಂದು ವಾದಿಸುವುದು ಈ ರಾಮಬಾಣ.

ಬ್ಕಾಂಕುಗಳವರು ಬಾಯಿ ಮುಚ್ಚಿಕೊಂಡಿದ್ದರು. ಏಕೆಂದರೆ ಬಾಕಿ ವಜಾ ಗುಟ್ಟಾಗಿ ನಡೆಯುತ್ತಿತ್ತು. ಸಾಲಮೇಳಕ್ಕೆ ತಪ್ಪಿದರೆ ಆ ಹುಳುಕೆಲ್ಲ ಈಚಗೆ ಬರುತ್ತದೆ. ಬ್ಯಾಲೆನ್ಸ್ ಷೀಟುಗಳಲ್ಲಿ ಮಾತ್ರ ವಿವರಗಳು ಕೊಚ್ಚಿಕೊಂಡು ಹೋಗಬೇಕೆಂದರೆ ಸಾಲ ಮೇಳದ ನೆಪದಲ್ಲೂ ಒಂದಿಷ್ಟು ದುರ್ದಾನ ನಡೆಯಲಿ ಎಂಬುದು ಅವರ ಹುನ್ನಾರ.

ಆದರೆ ಈಗ, ದೊಡ್ಡ ದೊಡ್ಡ ಸಾಲಗಳು ಬಾಕಿ ವಸೂಲಾಗದೆ ಎಷ್ಟೆಷ್ಟು ಉಳಿದುಕೊಂಡಿವೆ ಎಂಬುವುದು ಗೊತ್ತಾಗುತ್ತಿದ್ದಂತೆ ಹೌಹಾರುವಂತಾಗಿದೆ.

ಬ್ಯಾಂಕುಗಳು ಮತ್ತಿತರ ಹಣ ನೀಡಿಕೆ ಸಂಸ್ಥೆಗಳ ಪಾಲಿಗೆ ಸಾಲಗಾರ ಉದ್ಯಮಿಗಳಿಂದ ವಸೂಲಾಗದೆ ಬಾಕಿ ಉಳಿದು ಹೋಗಿರುವ ಹಣ ೧,೧೦,೦೦೦ ಕೋಟಿ ರೂಪಾಯಿ. ಇನ್ನು ಈ ಹಣ ವಸೂಲಾಗುವುದಿಲ್ಲ ಎಂದಾದರೆ, ಬಾಕಿ ಎಷ್ಟೊಂದು ವೇಗದಲ್ಲಿ ಬೆಳೆಯುತ್ತಾ ಹೋಗುತ್ತದೆಂದರೆ ಲೆಕ್ಕ ಹಾಕುವುದನ್ನೇ ಬಿಟ್ಟುಬಿಡುತ್ತಾರೆ. ಹೀಗಾಗಿ ಉಳಿದುಹೋಗಿರುವ ಬಾಕಿ ಈ ಅಂಕಿಸಂಖ್ಯೆಯ ಎರಡುಪಟ್ಟು ಆಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹಣ ಕೊಟ್ಟವರು ಏನು ಖಾತರಿ ಅಥವಾ ಭದ್ರತೆ ಕೊಟ್ಟಿರುತ್ತಾರೆ ಎಂದು ಬೆದಕಿದರೆ ಅಲ್ಲೂ ನಿರಾಶೆಯೇ. ಭದ್ರತೆ ಎಂಬುದು ನಾಮಮಾತ್ರ. ಭದ್ರತೆ ಕೊಟ್ಟ ಆಸ್ತಿಪಾಸ್ತಿ ಮಾರಿದರೆ ಅಬ್ಬಬ್ಬಾ ಎಂದರೆ ೨೫೦೦೦ ದಿಂದ ೪೦೦೦೦ ಕೋಟಿ ಹಣ ಮಾತ್ರ ಬರಬಹುದು.

ಪ್ರತಿಷ್ಠಿತ ಈರಭದ್ರನಿಂದ ಕೋಡಂಗಿಯು ಇಷ್ಟು ಹಣ ವಸೂಲು ಮಾಡಿಕೊಂಡರೂ ಉಳಿದಿದ್ದು ಕೈಬಿಟ್ಟಂತೆಯೇ. ಅದು ತೆರಿಗೆದಾರನ ಹಣ.

ತಗಾದೆ ಫಲಿಸದ ಎಷ್ಟೋ ಸಾಲುಗಳನ್ನು ಬ್ಯಾಂಕುಗಳವರು ವಜಾ ಮಾಡಿಬಿಡುತ್ತಾರೆ. ಲಾಭದ ಇಂತಿಷ್ಟು ಭಾಗ ವಜಾ ಮಾಡಬಹುದೆಂಬ ಅವಕಾಶ ಇದೆ, ಹಾಗೆ. ವಜಾ ಮಾಡುವುದು ಸಹಾ ತೆರಿಗೆದಾರನ ಹಣವೇ ಸರಿ.

ವಿಶ್ವ ಬ್ಯಾಂಕಿನ ಅಂಗಸಂಸ್ಥೆಯಾದ ಹಾಗೂ ಭಾರತಕ್ಕೆ ಸಾಲದ ಹೊಳೆಯನ್ನೇ ಹರಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಬಾಕಿ ಹಣ ಬಿಡಬಾರದು; ಆಸ್ತಿ ಪಾಸ್ತಿ ವಶಪಡಿಸಿಕೊಂಡು ಹರಾಜು ಹಾಕಿಯಾದರೂ ವಸೂಲು ಮಾಡಬೇಕೆಂದು ಹೇಳುತ್ತದೆ.

ರಾಜಕಾರಣಿಗಳನ್ನು ಜೇಬಿನಲ್ಲಿರಿಸಿಕೊಂಡು ರಾಜಕೀಯವನ್ನು ನಿಯಂತ್ರಿಸಲು ಉದ್ಯಮಿಗಳು ಹೊರಡುವಾಗ ಅವರ ಆಸ್ತಿಪಾಸ್ತಿ ವಶಕ್ಕೆ ಪ್ರಯತ್ನಿಸುವುದು ಸಾಧ್ಯವೇ? ಆದರೆ ಆ ದಿಕ್ಕಿನಲ್ಲಿ ಉಪಕ್ರಮಿಸುವುದು ಸಾಧ್ಯ ಎಂದಾಗಿದೆ. ಸದ್ಯ ಜಸವಂತ ಸಿಂಗ್‌ರಂಥ ಗಟ್ಟಿ ಆಸಾಮಿ ಅರ್ಥ ಸಚಿವರಾಗಿರುವುದರಿಂದ ಆಸ್ತಿ ವಶಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ.

ಪ್ರತಿರೋಧವನ್ನು ಲೆಕ್ಕಿಸದ ಜಸವಂತ ಸಿಂಗ್ ಮೊದಲು, ೨೦೦೨ ಜುಲೈ ೨೫ ರಂದು ಒಂದು ಸುಗ್ರೀವಾಜ್ಞೆ ತಂದರು. ಉದ್ಯಮಿಗಳು, ಅವರ ನೆರವಿಗೆ ಸದಾ ಸಿದ್ಧರಾಗಿರುವ ಮಂತ್ರಿ ಮಹೋದಯರು ಮತ್ತು ಮಧ್ಯವರ್ತಿಗಳು ಹಾಗೂ ಹಣ ವಸೂಲಿ ಗೊಡವೆ ಬೇಡವೆನ್ನುವ ಹಣಕಾಸು ಸಂಸ್ಥೆಗಳವರು ಎಲ್ಲ ಸೇರಿ ಭಾರೀ ಒತ್ತಡ ತಂದರು. ಆದರೂ ಪ್ರಯೋಜನ ಆಗಲಿಲ್ಲ. ೨೦೦೨ ನವೆಂಬರ್ ೨೬ರಂದು ಭದ್ರೀಕರಣ ಮಸೂದೆ ಅಂಗೀಕಾರವಾಯಿತು.

ಭದ್ರತೆ ಇರಿಸಿದ ಆಸ್ತಿಪಾಸ್ತಿ ಭದ್ರೀಕರಣ ಮತ್ತು ಪುನರುಜ್ಜೀವ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕುರಿತ ಮಸೂದೆ (ಭದ್ರೀಕರಣ ಮಸೂದೆ)ಯು ಶಾಸನವಾದರೂ ಅದರ ಫಲಿತ ತಕ್ಷಣ ಗೋಚರಿಸುವುದಿಲ್ಲ. ಈ ಶಾಸನದ ಕ್ರಮಕ್ಕೆ ಒಳಗಾಗಬೇಕಾಗುವುದೆಂಬ ತಕ್ಷಣ ಮತ್ತು ಗಾಬರಿಯು ತಪ್ಪಿತಸ್ಥರಲ್ಲಿ ಕಾಣಿಸಿಕೊಂಡಿದ್ದರೂ ಈಗಿಂದೀಗ ಅದ್ಭುತವಾದ ಏನನ್ನೂ ಸಾಧಿಸಲಾಗುವುದಿಲ್ಲ.

ಸಾಲ ತೆಗೆದುಕೊಳ್ಳುವಾಗ ಭದ್ರತೆಯಾಗಿ ನೀಡಿರುವ ಕಾರ್ಖಾನೆ, ಭೂಮಿ, ಯಂತ್ರೋಪಕರಣ ಮುಂತಾದವನ್ನು ಬ್ಯಾಂಕುಗಳು ವಶಕ್ಕೆ ತೆಗೆದುಕೊಳ್ಳಬಹುದು. ಆದರೆ ಅವನ್ನು ಕೈಲಿಟ್ಟುಕೊಂಡು ಮುಂದೇನು ಮಾಡಬೇಕು?

ಎಷ್ಟೋ ವೇಳೆ ವಶಪಡಿಸಿಕೊಂಡ ಆಸ್ತಿಯು ಎಷ್ಟೊಂದು ನಿರುಪಯುಕ್ತ ಆಗಿರುತ್ತದೆಂದರೆ, ಮಾರಲು ಹೊರಟರೆ ರೂಪಾಯಿ ಸರಕಿಗೆ ಹತ್ತು ಪೈಸೆಯೂ ಬರುವುದಿಲ್ಲ. ಎಷ್ಟೋ ಬಾರಿ ಹರಾಜಿಗಿಟ್ಟರೆ ಕೊಳ್ಳುವವರೇ ಇರುವುದಿಲ್ಲ. ಕಟ್ಟಡ, ಯಂತ್ರ, ಭೂಮಿ ಇವನ್ನು ಬಿಡಿಬಿಡಿಯಾಗಿ ಮಾರಲು ಹೊರಟಾಗ ಎದುರಾಗುವ ಸಮಸ್ಯೆಗಳನ್ನು ಬಿಡಿಸಿಕೊಳ್ಲಲು ಬ್ಯಾಂಕುಗಳು ಹೆಣಗಾಡಬೇಕಾಗುತ್ತದೆ. ರಾಜ್ಯಗಳ ಹಣಕಾಸು ನಿಗಮ ಎಸ್‌ಎಫ್‌ಸಿಗಳು ಈ ದಿಸೆಯಲ್ಲಿ ತಮಗಾಗಿರುವ ಅನುಭವವನ್ನು ಬ್ಯಾಂಕ್‌ಗಳಿಗೆ ಹೇಳಬಲ್ಲವು. ಅವು ಸಹಾ ಉದ್ಯಮಾಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಬಂಡವಾಳ ಕರಗಿಹೋಗುವಂತೆ ಮಾಡಿರುವುದೇ ಆಗಿರುತ್ತದೆ. ನಡೆಯುತ್ತಿರುವ ಕಾರ್ಖಾನೆಗಳನ್ನೇ ಉದ್ಯಮಿಗಳು ಭದ್ರತೆಯಾಗಿ ನೀಡಿರುತ್ತಾರೆ.

ಬಾಕಿ ವಸೂಲಿಗೆಂದು ಅವನ್ನು ವಶಕ್ಕೆ ತೆಗೆದುಕೊಂಡು ಬ್ಯಾಂಕುಗಳವರು ಏನು ಮಾಡಬೇಕು? ಸ್ವತಃ ನಡೆಸಿಕೊಂಡು ಹೋಗಲು ಶಕ್ಯವೇ? ಎಲ್ಲಕ್ಕಿಂತ ಮುಖ್ಯವಾಗಿ, ನಡೆದುಕೊಂಡು ಬಂದಿರುವ ಉದ್ಯಮ ಘಟಕದ ಕಾರ್ಮಿಕ ವೃಂದವನ್ನು ನಿಭಾಯಿಸುವುದು ಹೇಗೆ? ವಶಪಡಿಸಿಕೊಂಡುಬಿಟ್ಟರೆ ಸಮಸ್ಯೆ ಅಲ್ಲಿಗೇ ನಿಲ್ಲುವುದಿಲ್ಲ. ಹಣ ರೂಪದಲ್ಲಿ ತಮಗೆ ಬಾಕಿ ಚುಕ್ತಾ ಆಗುವಂತೆ ಮಾಡಿಕೊಳ್ಳುವುದು ನಿಜವಾಗಿ ಬ್ಯಾಂಕುಗಳ ಪಾಲಿಗೆ ಇರುವ ಸವಾಲು. ಒಂದೊಂದು ಸಾಲದ ಲೆಕ್ಕವೂ ನೂರಾರು ಹಾಗೂ ಸಹಸ್ರ ಕೋಟಿ ರೂಪಾಯಿ ಇರಲಿಕ್ಕೆ ಸಾಕು. ದುಡ್ಡು ಇರುವುದೇ ಸಾಲ ಕೊಡಲಿಕ್ಕೆ. ದೊಡ್ಡ ಮೊತ್ತದಲ್ಲಿ ಸಾಲ ಪಡೆಯುವವರು ಸರಿಯಾಗಿ ಸಿಗುತ್ತಾರೆಯೇ ಎಂದು ಬ್ಯಾಂಕುಗಳವರು ಕಾಯುತ್ತಿದ್ದುದು ಉಂಟು. ಕೊಟ್ಟಿದ್ದಾರೆ; ಕೊಡುತ್ತಲೇ ಬಂದಿದ್ದಾರೆ. ಸಾಲ ಪಡೆದವರು ಹಳೆಯ ಸಾಲದ ಬಾಕಿ ತೀರಿಸಲೆಂದು ಇವರಿಂದಲೇ ಹೊಸ ಸಾಲ ಪಡೆದು ಹೆಚ್ಚು ಹೆಚ್ಚು ಸಾಲಗಾರರಾಗಿದ್ದಾರೆ. ಹೀಗಾಗಿ ಅಗತ್ಯಕ್ಕಿಂತ ಹತ್ತಾರು ಪಟ್ಟು ಸಾಲ ನೀಡಲಾಗಿದೆ.

ಬ್ಯಾಂಕುಗಳ ಬಗೆಗೆ ಮತ್ತು ಹಣಕಾಸು ಸಂಸ್ಥೆಗಳ ಬಗೆಗೆ ನಾನಾ ಸ್ತರಗಳ ಜನರ ಅಭಿಪ್ರಾಯ ಕೇಳಿದರೆ ಸಾಕು. ಆಕ್ಷೇಪಣೆ, ಟೀಕೆಗಳ ಸುರಿಮಳೆಯೇ ಆಗುತ್ತದೆ. ಸಣ್ಣ ಮೊತ್ತದ ಸಾಲಗಾರನನ್ನು ಕಾಡಿಸಿ ಪೀಡಿಸುವ ಭ್ರಷ್ಟ ಅಧಿಕಾರಿಗಳು ಸಹಸ್ರಾರು ಕೋಟಿ ರೂಪಾಯಿ ಹಣವನ್ನು ಚರಂಡಿಗೆ ಸುರಿದರೆಂಬಂತೆ ಉದ್ಯಮಿಗಳೆಂಬ ಹೊಂಡಕ್ಕೆ ಸುರಿದಿದ್ದರಾ. ವರ್ಷಗಟ್ಟಲೇ ಈ ಪಾಪರಾಶಿ ಬೆಳೆದು ಕರಗಿಸಲು ಸಾಧ್ಯವಾಗದ ಬೆಟ್ಟವಾಗಿ ಕುಳಿತಿದೆ. ಜೇನನ್ನು ಇಳಿಸಲು ಹೋದವನು. ನೆಲಕ್ಕೆ ಸೋರಿಹೋಗುವ ಮೊಳಕೈವರೆಗೆ ಅಂಟಿದ ಜೇನನ್ನು ನೆಕ್ಕದೆ ಇರುವುದಿಲ್ಲ. ಆದರೆ ಇಲ್ಲಿನ ಜನ ಜೇನುಗೂಡುಗಳನ್ನೇ ಇಡಿಯಾಗಿ ಗುಳುಂ ಎಂದು ನುಂಗಿರುವವರು.

ಇಂಥ ಜನರನ್ನು ಹಿಡಿದುಹಾಕಲು ಈಗ ಸಾಧ್ಯವಿಲ್ಲ. ಸಾಲ ಪಡೆದುಕೊಂಡವರಾದರೋ ಒಂದು ಬ್ಯಾಂಕಿನಲ್ಲಿ ಅಥವಾ ಹಣಕಾಸು ಸಂಸ್ಥೆಯಲ್ಲಿ ಮಾತ್ರ ಸಾಲ ಪಡೆದಿರುವುದಿಲ್ಲ. ಹಲವರು ಸೇರಿ ಸಾಲಗಾರ ಉದ್ಯಮಕ್ಕೆ ಹಣ ಪೂರೈಸಿರುತ್ತಾರೆ. ಆಸ್ತಿಪಾಸ್ತಿ ವಶಪಡಿಸಿಕೊಳ್ಳುವುದೆಂದರೆ ಎಲ್ಲರೂ ಒಟ್ಟುಗೂಡಿ ಆ ಕೆಲಸ ಮಾಡಬೇಕು. ಅನಂತರ ಆಸ್ತಿ ವಿಲೇ ಮಾಡಿ ಆ ಹಣವನ್ನು ಹಂಚಿಕೊಳ್ಳಬೇಕು. ಆ ಕಾರ್ಯ ನಿಧಾನವಾದಷ್ಟೂ ಕೈಗೆ ಹತ್ತಬಹುದಾದ ಮೊತ್ತ ಕಡಿಮೆ ಆಗುತ್ತದೆ. ಆದರೆ ಆಸ್ತಿ ವಶಮಾಡಿಕೊಂಡು ಅದನ್ನು ವಿಲೇ ಮಾಡುವ ಮುಂಚೆ ನಿಭಾಯಿಸುವುದು ಹೇಗೆಂಬುದೇ ಇವುಗಳಿಗೆ ಗೊತ್ತಿಲ್ಲ! ಆ ಪರಿಣಿತ ಅವರ ಬಳಿ ಇಲ್ಲ. ಇನ್ನಷ್ಟು ಮತ್ತಷ್ಟು ಗೋಜಲಾಗುವ ಕೋರ್ಟು ಕ್ರಮಗಳನ್ನು ನಿಭಾಯಿಸುವುದೇ ತಲೆನೋವು. ಅದಕ್ಕೆಂದೇ ಬ್ಯಾಂಕುಗಳಿಗೆ ವಶಪಡಿಸಿಕೊಂಡು ಆಸ್ತಿಯ ನಿಭಾವಣೆ ಮತ್ತು ವಿಲೇವಾರಿಗೆ ನೆರವಾಗುವ ಪರಿಣಿತರು ಇರುವ ಪ್ರತ್ಯೇಕ ಸಂಸ್ಥೆಗಳನ್ನು ರಚಿಸುವ ವಿಚಾರವಿದೆ. ಅಷ್ಟೇ ಅಲ್ಲ; ಬಾಕಿ ಬಿದ್ದ ಸಾಲ ಲೆಕ್ಕಗಳನ್ನು ಬ್ಯಾಂಕುಗಳನ್ನು ಇತರರಿಗೆ ಮಾರಿ ಕೈತೊಳೆದುಕೊಳ್ಳುವ ವ್ಯವಸ್ಥೆಯೂ ಬರಲಿದೆ. ಸಾಲದ ಲೆಕ್ಕಗಳನ್ನು ಕೊಳ್ಳುವವರು ವಶಕ್ಕೆ ತೆಗೆದುಕೊಂಡ ಆಸ್ತಿಪಾಸ್ತಿ ವಿಲೇ ಮಾಡಿ ಲಾಭ ಮಾಡಿಕೊಳ್ಳುತ್ತಾರೆ. ಆದರೆ ಇಂಥವರಿಗೆ ಬಂಡವಾಳ ಹಣ ಎಲ್ಲಿಂದ ಪೂರೈಕೆ ಆಗಬೇಕು? ಆ ವ್ಯವಸ್ಥೆ ರೋಗಗ್ರಸ್ಥವಾದರೆ ಹೇಗೆ? ಇಂಥವರಿಗೆ ವಿದೇಶಿ ಮೂಲದಿಂದ ಬಂಡವಾಳ ಪೂರೈಕೆ ಆದರೆ ಹಾವನ್ನು ಹೊಡೆದು ಹದ್ದಿಗೆ ಹಾಕಿದಂತೆ ಆಗುವುದಿಲ್ಲವೆ? ಹಾಗೆಯೇ ಆಗುವುದು.

ವಿದೇಶಿಗಳಲ್ಲೂ, ಚೀನಾ ಕೊರಿಯಾಗಳಂಥ ಕಡೆ ಸಹಾ, ಈ ಸಮಸ್ಯೆ ಉಂಟು. ಅಲ್ಲೆಲ್ಲ ‘ರಣಹದ್ದು ನಿಧಿ’ ಎಂಬ ಹೆಸರಿನ (ವಲ್ಚರ್ ಫಂಡ್) ವ್ಯವಸ್ಥೆಯೊಂದುಂಟು. ಇದನ್ನು ನಡೆಸುವವರು ನಿರ್ದಯ ಕಾರ್ಯಾಚರಣೆಗೆ ಹೆಸರಾದವರು. ವಲ್ಚರ್ ಫಂಡ್‌ಗಳು (ಉದ್ಯಮ ಬಂಡವಾಳ ಒದಗಿಸುವ ವೆಂಚರ್ ಫಂಡ್‌ಗಳಿಗೆ ವಿಲೋಮ ಎನಿಸಿದಂಥವು) ಅಲ್ಲೆಲ್ಲ ಭಾರೀ ಲಾಭ ಮಾಡಿವೆಯಂತೆ.

ಸಾಲ ವಸೂಲಾತಿ ವ್ಯವಸ್ಥೆಯ ಸುಧಾರಣೆ ಸುಲಭವಲ್ಲ. ಆದರೆ ಇದು ಅನಿವಾರ್ಯ. ಕೊಳೆ ತೊಳೆಯುವ ಕಾರ್ಯ ಸಾಕಷ್ಟು ನೋವಿಗೆ, ದಣಿವಿಗೆ ಕಾರಣವಾಗುತ್ತದೆ.

ಭದ್ರೀಕರಣ ಶಾಸನದ ಫಲಸ್ವರೂಪದ ವಿಶ್ಲೇಷಣೆಗಾಗಿ ಕರ್ನಾಟಕ ವಾಣಿಜ್ಯೋದ್ಯಮ ಚೇಂಬರ್‌ಗಳ ಮಹಾಸಂಘ ಒಂದು ಸಬೆ ಕರೆದಾಗ ಭಾರೀ ಜನ ಸೇರಿದ್ದರು. ಬಹುತೇಕ ಮಂದಿ ಸಾಲಗಾರ ಬಾಕೀದಾರರೇ ಆಗಿದ್ದರಂತೆ. ಅವರಿಗೆಲ್ಲ ದಿಗಿಲು ಸಹಜ.