ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕರ್ನಾಟಕದಲ್ಲಿ – ಅಂದರೆ ಆಗಿನ ಮೈಸೂರು ಸಂಸ್ಥಾನದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ‘ಎಕನಮಿಕ್ ಕಾನ್‌ಫೆರನ್ಸ್ (ಆರ್ಥಿಕ ವಿಷಯಗಳನ್ನು ಕುರಿತು ಸಮ್ಮೇಳನ) ನಡೆಸುವ ಪರಿಪಾಠವನ್ನು ಆರಂಭಿಸಿದರು. ಸಮಾವೇಶಗಳು ಕೆಲವು ವರ್ಷ ಕಾಲ ಚೆನ್ನಾಗಿಯೇ ನಡೆದುವು. ಅನಂತರ ಕೈಬಿಟ್ಟು ಹೋಯಿತು. ಚಿಂತಕರು, ಅರ್ಥಶಾಸ್ತ್ರಜ್ಞರು ರಾಜ್ಯದ ಮತ್ತು ದೇಶದ ಆರ್ಥಿಕ ಬೆಲವಣಿಗೆಗಳ ಬಗೆಗೆ ಅಧ್ಯಯನಪೂರ್ಣ ಚರ್ಚೆಯನ್ನು ಈ ಸಮಾವೇಶಗಳಲ್ಲಿ ನಡೆಸುತ್ತಿದ್ದರು. ಅಂಥ ಕಲಾಪ ಆ ಕಾಲಕ್ಕೆ ಹೊಸತು. ಅಧಿಕಾರಿಗಳಲ್ಲಿ, ನೀತಿ ನಿರೂಪಣೆ ಹೊಣೆ ಹೊತ್ತವರಲ್ಲಿ ನಾಡಿನ ಆರ್ಥಿಕತೆ ಬಗೆಗೆ ಅರಿವು ಮೂಡಿಸುವಲ್ಲಿ ಈ ಸಮ್ಮೇಳನಗಳು ಯಶಸ್ವಿಯಾದವು.

ವಿಶ್ವೇಶ್ವರಯ್ಯ ಅವರ ಮೇಲಿನ ಭಕ್ತಿಗೋ ಎಂಬಂತೆ, ಅವರ ಗೌರವಾರ್ಥ ಎಂದೇ ಹೇಳುತ್ತಾ, ನಾಮಮಾತ್ರ ಎಕನಾಮಿಕ್ ಕಾನ್‌ಫರೆನ್ಸ್‌ಗಳನ್ನು ಏರ್ಪಡಿಸುವುದು ಇತ್ತೀಚಿನವರೆಗೂ ನಡೆದಿತ್ತು. ಆ ಪೀಳಿಗೆಯ ಜನ ಕಾಣೆಯಾದ ಮೇಲೆ ಅದು ಪೂರ್ಣವಾಗಿ ನಿಂತೇಹೋಗಿದೆ. ಈಗೆಲ್ಲ ಆರ್ಥಿಕ ವಿಷಯಗಳ ಮೇಲೆ ಅರಿವು ಹೆಚ್ಚಾಗಿದೆ. ಆ ಬಗೆಗೆ ಪತ್ರಿಕೆಗಳಲ್ಲಿ ಬರೆಯುವುದು ಒಂಟಿದನಿ ಎನಿಸಿಕೊಳ್ಳುವುದಿಲ್ಲ. ಕಳೆದ ೨೦ ವರ್ಷಗಳಲ್ಲಿ ಇಂಗ್ಲಿಷಿನಲ್ಲಿ ಮಾತ್ರವಲ್ಲದೆ ಕನ್ನಡ ಹಾಗೂ ಇತರ ಭಾಷಾ ಮಾಧ್ಯಮಗಳಲ್ಲಿ ಸಹಾ ವಾಣಿಜ್ಯ, ಉದ್ಯಮ ಮತ್ತು ಹಣಕಾಸು ಕುರಿತಂತೆ ಬರೆಯುವುದು ಹೆಚ್ಚಾಗಿದೆ. ಒಂದು ಕಾಲಕ್ಕೆ ಪಠ್ಯಪುಸ್ತಕ ಸಾಮಗ್ರಿಯನ್ನೇ ಬರೆಹ ರೂಪದಲ್ಲಿ ನೀಡುವ ಪರಿಪಾಠ ಪ್ರಧಾನವಾಗಿತ್ತು. ಕ್ರಮೇಣ ಆರ್ಥಿಕ ಆಗುಹೋಗುಗಳನ್ನು ಪ್ರಸ್ತುತ ಹಾಗೂ ಭವಿಷ್ಯದ ನೆಲೆಗಟ್ಟಿನ ಮೇಲೆ ವಿಶ್ಲೇಷಿಸುವ, ಹೊಸ ಕಾಣ್ಕೆಯನ್ನು ಬಿಂಬಿಸುವ ಪ್ರವೃತ್ತಿಹೆಚ್ಚಾಗಿದೆ. ಪತ್ರಿಕೆಗಳಲ್ಲಿ ಮಾತ್ರವಲ್ಲದೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಹಾ ಆರ್ಥಿಕ ವಿಷಯಗಳಿಗೆ ಎಲ್ಲಿಲ್ಲದ ಪ್ರಾಮುಖ್ಯ ಲಭಿಸಿದೆ. ವಾಣಿಜ್ಯೋದ್ಯಮ ಬರೆಹ ಎಂದರೆ ಷೇರುಪೇಟೆ ವ್ಯವಹಾರಗಳ ಸಮೀಕ್ಷೆ ಹಾಗೂ ಹಣಕಾಸು ನಿಯಮ ಬಗೆಗೆ ಭಾಷ್ಯ ಬರೆಯುವುದು ಇಷ್ಟೇ ಅಲ್ಲವೆಂದೂ, ರೈತನ ಉತ್ಪನ್ನಗಳಿಗೆ ಒತ್ತುಕೊಟ್ಟು ಪೇಟೆ ಪ್ರಧಾನ ವಿಷಯಗಳನ್ನು ಎತ್ತಿಕೊಳ್ಳುವ ಮೂಲಕ ಜನಕ್ಕೆ ಹತ್ತಿರವಾಗುವುದು ಎಂದೂ ಪ್ರಜಾವಾಣಿಯು ೮೦ ಮತ್ತು ೯೦ರ ದಶಗಳಲ್ಲಿ ಸಮರ್ಥವಾಗಿ ನಿರೂಪಿಸಿತು.  ಇಂಗ್ಲಿಷ್ ಪತ್ರಿಕೆಗಳ ಮಾದರಿಯಲ್ಲಿ ಕನ್ನಡ ಪತ್ರಿಕೆಗಳು ಸಹಾ ವಾಣಿಜ್ಯ ಪುರವಣಿಗಳನ್ನು ಹೊರತರುತ್ತಿದ್ದರೂ ನಕಲಿಗೆ ಹೊರತಾದ, ಹೊಸತಾದ ಬರೆಹಗಳನ್ನು ಪೂರೈಸುವುದು ನಿಜವಾಗಿ ಸವಾಲು ಆಗಿಯೇ ಪರಿಣಮಿಸಿದೆ.

ಮೈಸೂರು ಸಂಸ್ಥಾನವು ಆರಂಭಿಸಿದ್ದ ಮಾದರಿಯಲ್ಲೇ ಕೇಂದ್ರ ಸರ್ಕಾರವು ಪ್ರಸ್ತುತ ಸುಮಾರು ೧೫ ವರ್ಷಗಳಿಂದೀಚೆಗೆ ಪ್ರತಿ ವರ್ಷ ಆರ್ಥಿಕ ವಿಷಯಗಳನ್ನು ಕುರಿತು ಸಮಾವೇಶಗಳನ್ನು ನಡೆಸುತ್ತಿದೆ. ಆದರೆ ಅದು ಪತ್ರಿಕೆಗಳ ಆರ್ಥಿಕ ವಿಷಯಗಳ ಸಂಪಾದಕರಿಗೆ ಸೀಮಿತವಾದುದು. ಒಂದು ರೀತಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಸರ್ಕಾರ ನಡುವಣ ಪರಸ್ಪರ ಸಂಬಂಧ ಸುಧಾರಣೆಯ ಒಂದು ಯತ್ನ ಮಾತ್ರ. ಕೇಂದ್ರ ಸರ್ಕಾರದ ವಾರ್ತಾ ಇಲಾಖೆ ಎನ್ನಬಹುದಾದ ಪ್ರೆಸ್ ಇನ್‌ಫರ್ಮೆಶನ್ ಬ್ಯುರೋ (ಪಿಐಬಿ) ವ್ಯವಸ್ಥೆಗೊಳಿಸುವ ವಾರ್ಷಿಕ ಸಮಾವೇಶಗಳಲ್ಲಿ ಆರ್ಥಿಕ ತಜ್ಞರಾರೂ ದೇಶ ವಿದೇಶ ಆರ್ಥಿಕ ನೀತಿಗಳ ಬಗೆಗೆ ಚರ್ಚಿಸಲು ಬರುವುದಿಲ್ಲ. ಮಂತ್ರಿಗಳು ಮತ್ತು ಅಧಿಕಾರಶಾಹಿಯನ್ನು ಪ್ರತಿನಿಧಿಸುವ, ಆದರೆ ನಿಜವಾದ ಅರ್ಥದಲ್ಲಿ ಸರ್ಕಾರವನ್ನು ನಡೆಸುವ, ಕಾರ್ಯದರ್ಶಿಗಳೇ ಮುಂತಾದ ಪರಿಣಿತರು, ಪತ್ರಕರ್ತರ ಮುಂದೆ ಬಂದು ಕೂರುತ್ತಾರೆ. ಪತ್ರಿಕಾ ಸಂಪಾದಕರ ಪಾಟೀಸವಾಲಿಗೆ ಮೈಮನ ಒಡ್ಡುತ್ತಾರೆ.

ಪಿಐಬಿ ನಡೆಸುವ ಈ ಸಮಾವೇಶಗಳು ಸಹಾ ವರ್ಷೇ ವರ್ಷೇ ಸ್ವಾರಸ್ಯ ಕಳೆದುಕೊಳ್ಳುತ್ತಿವೆ. ಪತ್ರಿಕೆಗಳಲ್ಲಿರುವ ನಿಜವಾದ ಅರ್ಥದ ‘ಆರ್ಥಿಕ ವಿಷಯಗಳ ಸಂಪಾದಕರು’ ಇದಕ್ಕೆ ಹೋಗುವುದು ಕಡಿಮೆಯಾಗಿದೆ. ಪತ್ರಿಕೆಗಳವರು ಅನನುಭವಿಗಳನ್ನು ಕಳುಹಿಸುವುದು ಹೆಚ್ಚಾಗಿದೆ. ಜೊತೆಗೆ ಪಿಐಬಿ ಸಹಾ ಇದರ ಸ್ವರೂಪವನ್ನು ಹಾಳು ಮಾಡುತ್ತಿದೆ. ದೇಶದ ನಾನಾ ಭಾಗಗಳಿಂದ ಬಂದ ಆರ್ಥಿಕ ವಿಷಯ ಬರೆಹಗಾರರಿಗೆ ಅವಕಾಶ ತಪ್ಪುವ ರೀತಿಯಲ್ಲಿ ಸ್ಥಳೀಯ, ಅಂದರೆ ದೆಹಲಿಯ, ಪತ್ರಿಕೆಗಳ ವರದಿಗಾರರಿಗೆ ವಿಪರೀತ ಸಂಖ್ಯೆಯಲ್ಲಿ ಆಹ್ವಾನ ನೀಡಿ ಇಡೀ ಕಾರ್ಯ ವ್ಯವಸ್ಥೆ ಒಂದು ಸಂತೆಯಾಗಿ ಪರಿಣಮಿಸಲು ಕಾರಣವಾಗಿದೆ.

ಮಂತ್ರಿ ಮಹೋದಯರು ಮತ್ತು ಕಾರ್ಯದರ್ಶಿಗಳು ದೆಹಲಿಯವರಿಗೆ ಸದಾ ಕಾಲ ಸಿಗುತ್ತಿರುತ್ತಾರೆ. ಆದರೂ ಇಲ್ಲಿ ಸಹಾ ಪ್ರಾಧಾನ್ಯ ನೀಡಿ, ದೇಶಾದ್ಯಂತ ಮಾಧ್ಯಮ ಪ್ರತಿನಿಧಿಗಳ ಸಮಾವೇಶಗೊಂಡಿರುವುದಕ್ಕೆ ಇರುವ ಮಹತ್ವ ಕಡಿಮೆ ಮಾಡಲಾಗುತ್ತಿದೆ. ಸಂಪಾದಕರ ಸಮಾವೇಶ ವರದಿಗಾರನ ಪ್ರದಾನ ಪತ್ರಿಕಾಗೋಷ್ಠಿ ರೂಪಕ್ಕೆ ಇಳಿದಿದೆ.

ಆದರೂ ಕೇಂದ್ರ ಸರ್ಕಾರದ ವಿವಿಧ ಖಾತೆಗಳ ಮಂತ್ರಿಗಳು ತುಂಬಾ ಗಂಭೀರವಾಗಿ ಸಿದ್ಧತೆ ಮಾಡಿಕೊಂಡು ಬಂದಿರುತ್ತಾರೆ. ಸ್ವತಃ ಅಂಜಿಕೊಂಡೇ ಮಾಧ್ಯಮದವರನ್ನು ಎದುರಿಸುತ್ತಾರೆ. ಎಷ್ಟೋ ಬಾರಿ ಅವರಿಂದ ಮಹತ್ತರ ವಿಷಯಗಳನ್ನು ಹೊರಡಿಸುವಲ್ಲಿ ಮಾಧ್ಯಮ ಪ್ರತಿನಿಧಿಗಳೇ ವಿಫಲರಾಗುತ್ತಾರೆ. ಅವರು ಮಹತ್ವಪೂರ್ಣವಾಗಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಸೂಕ್ತ ವಾತಾವರಣ ನಿರ್ಮಾಣವಾಗುವುದಿಲ್ಲ ಎಂಬುದು ವಾಸ್ತವಾಂಶ.

ಆರ್ಥಿಕ ವಿಷಯಗಳ ಸಂಪಾದಕರ ಸಮ್ಮೇಳನದಿಂದ ಆಗುವ ದೊಡ್ಡ ಉಪಯೋಗಿ ಎಂದರೆ ಸರ್ಕಾರದ ಸದ್ಯದ ನೀತಿ ಏನು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಎಷ್ಟೋ ವೇಳೆ ಅಧಿಕಾರಿಗಳು ಸಚಿವರು ನಿರುತ್ತರರಾಗುತ್ತಾರೆ. ಆ ವೇಳೆ ಅವರ ಪಾಲಿಗೆ ಆತ್ಮವಿಮರ್ಶೆಗೆ ಅವಕಾಶವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಚಿವರ ಸಂಸಿದ್ಧತೆ, ಕಾಳಜಿ ಮತ್ತು ಸಾಮರ್ಥ್ಯ ಎಂಬುದು ಪತ್ರಕರ್ತರಿಗೆ ಖುದ್ದಾಗಿ ಮನದಟ್ಟಾಗುತ್ತದೆ.

ಈ ಬಾರಿ ಸಮಾವೇಶ ಉದ್ಘಾಟಿಸಿದ ಅರ್ಥ ಸಚಿವ ಯಶವಂತ ಸಿನ್ಹಾ ಅವರನ್ನು ಕಂಡಾಗ ಅವರು ಯಾವುದೋ ಭ್ರಮಾಲೋಕದಲ್ಲಿ ಇದ್ದಾರೆ ಎಂದೇ ಅನಿಸಿತು. ನೆಲಮಟ್ಟದ ವಾಸ್ತವ ಸ್ಥಿತಿಗೆ ಬರುತ್ತಿಲ್ಲ ಎಂದೇ ಭಾಸವಾಯಿತು. ವಿನಮ್ರತೆ ಮತ್ತು ದಕ್ಷತೆ ಎರಡೂ ಒಟ್ಟಿಗೆ ಮೇಳವಿಸಿತ್ತು, ಸುಷ್ಮಾ ಸ್ವರಾಜ್ ಅವರಲ್ಲಿ. ಹಿಂದಿನ ವರ್ಷಗಳ ರೋಷದ ಕಿಡಿ ಆರಿದ್ದರೂ ಅನುಭವದಿಂದ ಹಣ್ಣಾಗಿದ್ದಾರೆ ಅನಿಸಿತು. ಇಂದಿಗೂ ಚಾರಿಸ್ಮಾಟಿಕೆ ಆಗಿ ಉಳಿದಿದ್ದಾರೆ ಎಂದು ಅನಿಸದಿರಲಿಲ್ಲ! ಸಚಿವ ಮುರಸೋಳಿ ಮಾರನ್ ಅವರಂತೂ ಪರಿಪೂರ್ಣ ದಕ್ಷತೆ ಮತ್ತು ಸಾಮಾಜಿಕ ಕಾಳಜಿಗಳ ಸಾಕಾರ ರೂಪ. ನಿರೂಪಣಾ ಸಾಮರ್ಥ್ಯದ ಕೊರತೆ ಅವರ ಪಾಲಿಗೆ ಅಡ್ಡಿ ಎನಿಸಲಿಲ್ಲ. ರಾಣಾ ಅವರಲ್ಲಿ ಜಾಣತನದ ಹಾಗೂ ಚುರುಕುತನದ ಕುರುಹು ಸಹಾ ಕಾಣಿಸಲಿಲ್ಲ. ಅನಂತ ಕುಮಾರ್ ಬಹಳ ಒಳ್ಳೆಯ ಪ್ರೊಫೆಸರ್ ತರಹ ಬೆರಗಾಗುವಂತೆ ಗಿಣಿ ಪಾಠ ಒಪ್ಪಿಸಿದರೇ ಹೊರತು ತಮ್ಮ ಹೊಸ ಸಚಿವ ಖಾತೆ ಮೇಲೆ ಹಿಡಿತ ಸಾಧಿಸಿದ್ದು ವ್ಯಕ್ತವಾಗಲಿಲ್ಲ. ಅಜಿತ್‌ಸಿಂಗ್ ಅವರಿಗೆ ಕೃಷಿ ವಿದ್ಯಮಾನದ ಸಮಸ್ತ ಅರಿವಿದ್ದುದು ವ್ಯಕ್ತವಾಯಿತು. ಕಾಳಜಿಯದೇ ಅಭಾವ. ಸ್ವತಃ ಮಾಜಿ ಪತ್ರಕರ್ತರಾದ ಪ್ರಮೋದ್ ಮಹಾಜನ್ ತುಂಬಾ ಪ್ರೊಫೆಷನಲ್ ಆಗಿ ಗೋಷ್ಠಿಯನ್ನು ನಿಭಾಯಿಸಿದರು. ತುಂಬಾ ನಿರೀಕ್ಷೆ ಹುಟ್ಟಿಸಿದ ಅರುಣ್ ಶೌರಿ ಬರಲೇ ಇಲ್ಲ. ಅವರ ಖಾತೆಯ ಕಾರ್ಯದರ್ಶಿ ಪ್ರದೀಪ್ ಬೈಜಾಲ್ ಸ್ವಾರಸ್ಯಕರ ಎನಿಸಿಕೊಂಡರು.

ಒಂದು ಪ್ರಶ್ನೆ: ಕರ್ನಾಟಕ ರಾಜ್ಯ ಸರ್ಕಾರವೇಕೆ ಪ್ರತಿ ವರ್ಷ ಇಂಥ ಸಮ್ಮೇಳನ ನಡೆಸಬಾರದು?

೩೧.೧೦.೨೦೦೧