ಊರಿಗೊಂದು ಪೇಟೆ ಬೀದಿ. ಶೆಟ್ಟಿ ಇದ್ದಲ್ಲಿ ಪಟ್ಟಣ. ಹಿಂದಿಗೂ ಇಂದಿಗೂ ಸಮಾನವಾಗಿ ಸಂದ ಎರಡು ಗಾದೆಗಳಿವೆ.

‘ಊರಿಗೆ ಬಂದವಳು ನೀರಿಗೆ ಬರದೇ ಎಲ್ಲಿ ಹೋದಾಳು’ ಎಂಬ ಗಾದೆಯನ್ನಂತೂ ಇವತ್ತಿಗೆ ಸರಿಹೊಂದುವ ಹಾಗೆ ‘ಸಿಟಿಗೆ ಬಂದವಳು ಸಿನಿಮಾಕ್ಕೆ ಬರದೇ ಇರುವಳೇ’ ಎಂತಲೋ ‘ಊರಿಗೆ ಬಂದವಳು ಪೇಟೆಗೆ ಬರದೆ ಎಲ್ಲಿಗೆ ಹೋಗುತ್ತಾಳೆ’ ಎಂತಲೋ ಬದಲಾಯಿಸಲು ಬರುತ್ತದೆ. ಆದರೆ ಮೂಲ ಸ್ವರೂಪದ ಎರಡು ಗಾದೆಗಳನ್ನು ಮಾರ್ಪಡಿಸುವ ಪ್ರಶ್ನೆಯೇ ಬರುವುದಿಲ್ಲ.

ನಮ್ಮ ಸ್ನೇಹಿತರೊಬ್ಬರು ಖ್ಯಾತ ಉದ್ಯಮಿ. ತಮ್ಮ ಮಕ್ಕಳಿಗೆ ಉದ್ಯಮವನ್ನು ಹಚ್ಚಿಕೊಡುವುದರ ಬದಲು ಎರಡು ಪ್ರತಿಷ್ಠಿತ ಉತ್ಪನ್ನಗಳ ಮಾರಾಟ ಏಜೆನ್ಸಿಗಳನ್ನು ಇಡಿಸಿಕೊಟ್ಟರು. ‘ಇದೇನಿದು, ತಯಾರಕರು ಹೋಗಿ ವಿತರಕರಾದಿರಲ್ಲ!’ ಎಂದು ನಾನು ಉದ್ಗರಿಸಿದಾಗ ಬಂದ ಉತ್ತರ ನನ್ನನ್ನು ನಿಬ್ಬೆರಗಾಗಿಸಿತು. ಅವರು ಹೇಳಿದರು. ಇನ್ನು ಮುಂದೆ ತಯಾರಕರಾಗುವುದರಲ್ಲಿ ಏನೂ ಸ್ವಾರಸ್ಯ ಇರುವುದಿಲ್ಲ.

ಡಬ್ಲೂ ಟಿಓ (ವಿಶ್ವ ವ್ಯಾಪಾರ ಸಂಸ್ಥೆ) ಬಂದ ಮೇಲೆ ತಯಾರಕರಾದವರು ಹತ್ತು ಪಟ್ಟು ಅಥವಾ ನೂರು ಪಟ್ಟು ಬೆಳೆಸಿಕೊಂಡರೆ ಮಾತ್ರ ಉದ್ಯಮಿಯಾಗಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಉಳಿಗಾಲವಿಲ್ಲ. ಬದಲಿಗೆ ಮಾರಾಟಗಾರ ಅಥವಾ ವಿತರಕರಾದರೆ ಒಳ್ಳೆಯ ಭವಿಷ್ಯವುಂಟು.

ಹೀಗೆ ಬದಲಾದ ಪರಿಸ್ಥಿಗೆ ಹೊಂದಿಕೊಳ್ಳದೆ ಬರಿದೇ ಪರಿತಪಿಸುವುದರಲ್ಲಿ ಅರ್ಥವಿಲ್ಲ. ತಯಾರಿಸಿದ್ದನ್ನು ಜನರಿಗೆ ಮುಟ್ಟಿಸುವುದಕ್ಕೇ, ಆ ಚಟುವಟಿಕೆಗೇ ಪ್ರಾಮುಖ್ಯ.

ಜಾಗತೀಕರಣವು ತರುತ್ತಿರುವ ಒಂದು ಸಣ್ಣ, ಆದರೆ ಅತಿ ಮುಖ್ಯ, ಬದಲಾವಣೆಗಳಲ್ಲಿ ಇದು ಒಂದು.

ಚಿಲ್ಲರೆ ಅಂಗಡಿ, ಕಿರಾಣಿ ಅಂಗಡಿ, ಶೆಟ್ಟರ ಅಂಗಡಿ, ಶೇಠರ ಅಂಗಡಿ, ಕಾಕಾ ಅಂಗಡಿ ಎಂದೆಲ್ಲ ಪ್ರಖ್ಯಾತವಾದ ಸಣ್ಣ ವ್ಯಾಪಾರಕ್ಕೆ ಉಳಿಗಾಲವಿಲ್ಲ ಎಂಬು ಮಾತೂ ಕೇಳಿ ಬರುತ್ತಿದೆ. ಟೌನು, ನಗರಗಳಲ್ಲಿ ಡಿಪಾರ್ಟ್‌ಮೆಂಟಲ್ ಸ್ಟೋರ್ಸ್‌ಗಳಿಗೆ ಭರ್ಜರಿ ವ್ಯಾಪಾರ. ಸಣ್ಣ ಅಂಗಡಿಗಳ ಬದಲಿಗೆ ಈ ಫ್ಯಾಷನಬಲ್ ಅಂಗಡಿಗಳಿಗೆ ಧಾವಿಸಲು ಗ್ರಾಹಕರು ಬಯಸುತ್ತಾರೆ.

ಏನಿದರ ಅನುಕೂಲ? ಸರಕನ್ನು ಗ್ರಾಹಕ ಷೆಲ್ಫಿನಿಂದ ತಾನೇ ಆಯ್ದುಕೊಳ್ಳುವಾಗ ಸಂತೋಷ ಎನಿಸುತ್ತದೆ. ಒಂದೇ ಉತ್ಪನ್ನದ ವಿವಿಧ ಬ್ರಾ ಂಡ್‌ಗಳು ವಿವಿಧ ಗಾತ್ರ ತೂಕಗಳಲ್ಲಿ ಪಕ್ಕ ಪಕ್ಕ ರಾರಾಜಿಸಿದಾಗ ಹೆಕ್ಕಿಕೊಳ್ಳುವಾಗ ಗ್ರಾಹಕನಿಗೆ ಖುಷಿ ಎನಿಸುತ್ತದೆ.

ಚಿಲ್ಲರೆ ಅಂಗಡಿ ಮಾಲೀಕ ಮುಂಚಿನಿಂದಲೂ ಸರಕು ಮಾರುವಾಗ ತನ್ನ ಬುದ್ಧಿ ಖರ್ಚು ಮಾಡಿ ಯಾವುದೇ ಉತ್ಪನ್ನ ಕುರಿತಂತೆ ಹೋಲಿಕೆ ನೀಡುವುದೇ ಅಲ್ಲದೇ ತನಗೆ ಗೊತ್ತಿರುವ ಗುಣಾವಗುಣಗಳ ಬಗೆಗೆ ಬಿಡಿ ಬಿಡಿಯಾಗಿ ಹೇಳುತ್ತಿದ್ದ. ಆತನ ಕೌನ್ಸಲಿಂಗ್ ವಾಸ್ತವವಾಗಿ ಗ್ರಾಹಕನ ಪಾಲಿಗೆ ಅಪ್ಯಾಯಮಾನ ಆಗಿರುತ್ತಿತ್ತು.

ಇನ್ನೊಂದು ವಿಶೇಷವೆಂದರೆ ಬಹುರಾಷ್ಟ್ರೀಯ ಕಂಪೆನಿಗಳ ಶೈಲಿಯ ವ್ಯಾಪಾರದಲ್ಲಿ ಮಾರಾಟಗಾರನಿಗೂ ಗ್ರಾಹಕನಿಗೂ ಮೊಕಾಬಿಲೆ ಇಲ್ಲ. ಸಂಪೂರ್ಣ ಅಪರಿಚಿತರು ಇಬ್ಬರೂ. ಚಿಲ್ಲರೆ ಅಂಗಡಿಗಳಲ್ಲಿ ಇಡುವುದಕ್ಕಿಂತ ಹೆಚ್ಚು ಬೆಲೆ ನಿಗಧಿ ಆಗಿರುತ್ತದೆ. ಏಕೆಂದರೆ ದಾಸ್ತಾನು ಜೋಡಿಸುವುದು, ಪ್ರದರ್ಶನ ಮುಂತಾದುವು ದುಬಾರಿಯಾಗುತ್ತದೆ.

ಚಿಲ್ಲರೆ ಅಂಗಡಿಗಳು ಮಾಯವಾದರೆ ಸೂಪರ್ ಬಜಾರ್ ಅಥವಾ ಡಿಪಾರ್ಟ್‌ಮೆಂಟಲ್ ಸ್ಟೋರ್ಸ್ ಎಂಬಲ್ಲಿ ಎಲ್ಲವೂ ಪ್ಯಾಕೇಜ್ ಆದ ಸರಕೇ. ತೂಗಿ ಅಳೆದು ಪೂರೈಸುವ ಸಮಾಚಾರವೇ ಇಲ್ಲ.

ನಿತ್ಯ ಬಳಕೆಯ ವಸ್ತುಗಳೇ ಅಲ್ಲದೆ ಗೃಹಕೃತ್ಯ ಯಂತ್ರೋಪಕರಣ ಐಟಂಗಳೂ ಸೇರಿದಂತೆ ವಿವಿಧ ತಯಾರಿಕಾ ಉತ್ಪನ್ನಗಳು ಇದೀಗ ದೊಡ್ಡ ದೊಡ್ಡ ಷೋರೂಂಗಳಲ್ಲಿಟ್ಟಂತೆ ಗ್ರಾಮ ಪ್ರದೇಶಗಳಲ್ಲಿ ಮಾರಾಟಕ್ಕೆ ಬರುತ್ತವೆ. ಬಹುರಾಷ್ಟ್ರೀಯರೂ, ದೊಡ್ಡ ದೊಡ್ಡ ಬ್ರ್ಯಾಂಡ್ ಸರಕಿರನ ತಯಾರಕರು ಇದೀಗ ಗ್ರಾಮ ಮಾರುಕಟ್ಟೆಗಳತ್ತ ದೃಷ್ಟಿ ಹರಿಸುತ್ತಿದ್ದಾರೆ.

ಬಹುರಾಷ್ಟ್ರೀಯರ ಮಾರುಕಟ್ಟೆ  ಸಿದ್ಧಾಂತ ಸುಲಭವಾಗಿ ಮೂಡಿರುವಂಥದ್ದಲ್ಲ. ಅವರ ಪ್ರಕಾರ ವಿಶ್ವದ ಶೇ. ೮೦ ಜನಸಂಖ್ಯೆಯ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿದೆ. ಹೀಗಾಗಿ ಅಲ್ಲಿನ ಗ್ರಾಹಕರ ಸಂಖ್ಯೆ ಐನೂರು ಕೋಟಿ. ಅವರ ಜೀವನ ಮಟ್ಟ ಸುಧಾರಿಸಿದರೆ, ಅವರ ಖರೀದಿ ಸಾಮರ್ಥ್ಯ ಹೆಚ್ಚಾದರೆ ಉತ್ಪನ್ನಗಳಿಗೆ ಬೇಡಿಕೆ ಏರಿದಂತೆಯೇ ಸರಿ. ವಿಶ್ವಬ್ಯಾಂಕು, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ, ಕಡೆಗೆ ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಓ) ಇಲ್ಲೆಲ್ಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಕ್ರಿಯವಾಗಿ ಭಾಗವಹಿಸುವುದು ಹೊಸ ಹೊಸ ಮಾರುಕಟ್ಟೆಗಳು ಸೃಷ್ಟಿಯಾಗುತ್ತವೆ ಎಂಬ ಒಂದೇ ಕಾರಣಕ್ಕೆ!

ಈ ಹಿನ್ನೆಲೆಯಲ್ಲಿ ಭಾರತ ಹೇಗಿದೆ ಎಂದೂ ದೃಷ್ಟಿ ಹರಿಸಬಹುದು. ಇಲ್ಲಿನ ಜನಸಂಖ್ಯೆ ೧೦೦ ಕೋಟಿಗೂ ಹೆಚ್ಚು. ಅದರಲ್ಲಿ ಸುಮಾರು ೭೦ ಕೋಟಿ ಜನರು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜೀವಿಸಿರುವವರು. ಇಷ್ಟು ಜನ ಸೃಷ್ಟಿಸುವ ಮಾರುಕಟ್ಟೆಯು ಅಮೆರಿಕದಲ್ಲಿ ಲಭ್ಯವಿರುವ ಮಾರುಕಟ್ಟೆಯ ಎರಡು ಪಟ್ಟು ಆಗಿರುತ್ತದೆ.

ಭಾರತದ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನೆ ಕುರಿತ ರಾಷ್ಟ್ರೀಯ ಪರಿಷತ್ತಿನ ಅಂದಾಜಿನ ಪ್ರಕಾರ ೨೦೦೬-೦೭ರಲ್ಲಿ , ಈ ಪೈಕಿ ೪೦ ಕೋಟಿ ಕುಟುಂಬಗಳ ತಲಾ ವಾರ್ಷಿಕ ವರಮಾನ ರೂ. ೨೨೦೦೦ ದಿಂದ ರೂ. ೪೫೦೦೦ ವರೆಗೆ ಇರುತ್ತದೆ.

ಅದೇ ಅಧ್ಯಯನ ವರದಿಯು ಹೇಳುವಂತೆ ವ್ಯಾಪಾರದಲ್ಲಿ ಲಾಭಾಂಶ ಕಡಿಮೆ ಇರಬಹುದು. ಆದರೆ ಬೃಹತ್ ಪ್ರಮಾಣದ ಸರಕು ಮಾರಾಟ ಕಾಣುವುದರಿಂದ ಒಟ್ಟಾರೆ ಗಿಟ್ಟುಪಾಟು ಅಧಿಕ.

ಈಚೆಗೆ ನೆದರ್‌ಲೆಂಡಿನ ಒಂದು ಕಂಪೆನಿಯು ಖಾಸಗಿ ವಲಯ ಬ್ಯಾಂಕುಗಳಲ್ಲಿ ಅಚ್ಚುಕಟ್ಟಾಗಿ ರೂಪುಗೊಂಡಿದ್ದ ವೈಶ್ಯ ಬ್ಯಾಂಕನ್ನು ಷೇರು ಖರೀದಿ ಮೂಲಕ ವಶಕ್ಕೆ ತೆಗೆದುಕೊಂಡಿತು. ಅದರ ಪರಿಣಾಮವಾಗಿ ಆ ಬ್ಯಾಂಕ್ ಐಎನ್‌ಜಿ ವೈಶ್ಯ ಬ್ಯಾಂಕ್ ಆಯಿತು. ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಐಎನ್‌ಜಿ ಬ್ಯಾಂಕಿನ ವಿದೇಶಿ ವರಿಷ್ಠರು ಭಾರತಕ್ಕೆ ಭೇಟಿ ಕೊಟ್ಟಿದ್ದರು. ವೈಶ್ಯ ಬ್ಯಾಂಕಿನ ಮೂಲದ ಸಣ್ಣ ಪ್ರಮಾಣದ ಬ್ಯಾಂಕಿಂಗ್ ವ್ಯವಹಾರದ ಅನುಭವವನ್ನು ಯೂರೋಪಿನ ಕೆಲವು ರಾಷ್ಟ್ರಗಳಲ್ಲಿ ಕೆಲಸಕ್ಕೆ ಹಚ್ಚುವುದಾಗಿ ಅವರು ಹೇಳಿದರು. ಹೀಗೆ ಬಹುರಾಷ್ಟ್ರೀಯರು ವ್ಯಾಪರ ಮಾಡುವುದಕ್ಕೆ ಮಾತ್ರ ಬರುತ್ತಾರೆ ಎನ್ನುವಂತಿಲ್ಲ. ಅನುಭವಕ್ಕಾಗಿ ಸಹಾ ಬರುತ್ತಾರೆ.

ಗ್ರಾಹಕರಿಗೆ ಚಿಲ್ಲರೆ ವ್ಯಾಪಾರ ಸೇವೆ ಒದಗಿಸುವ ಬಗೆಗೆ ನಡೆದ ಅನುಭವವನ್ನು ಬಹುರಾಷ್ಟ್ರೀಯರು ಭಾರತದಲ್ಲಿ ಪಡೆಯುತ್ತಾರೆ. ಅನಂತರ ಅದರ ಲಾಭದ ಆಧಾರದ ಮೇಲೆ ದಕ್ಷಿಣ ಏಷ್ಯ, ಆಫ್ರಿಕ, ಲ್ಯಾಟಿನ್ ಅಮೆರಿಕ ಮತ್ತು ಪೂರ್ವ ಯೂರೋಪ್ ಇಲ್ಲೆಲ್ಲ ವ್ಯಾಪಾರ ಮಾಡುತ್ತಾರೆ.

ಭಾರತದ ಚಿಲ್ಲರೆ ವ್ಯಾಪಾರದ ಸಾಧ್ಯತೆಗಳ ಬಗೆಗೆ ಬಲ್ಲವರು ಮಾತನಾಡುವಾಗ, ಖರೀದಿ ಸಾಮರ್ಥ್ಯ ಮತ್ತು ಬಳಕೆ ಹೆಚ್ಚಳ ಇವು ಎಷ್ಟಾಗುತ್ತದೆಂದು ಅಳೆದರೆ ಅದರ ೯೦ ಬಾಗವು ಅತಿ ಬಡವರು ಮತ್ತು ಬಡವರಿಂದ ಬಂದ ಕೊಡುಗೆಯಾಗಿರುತ್ತದೆ ಎಂದಿದ್ದಾರೆ.

ಬಳಕೆ ವಸ್ತುಗಳ ವಿಚಾರ ಬಂದಾಗ ಗ್ರಾಮ ಮಾರುಕಟ್ಟೆಯ ರುಚಿ ಹತ್ತುತ್ತಿರುವುದು ಈಗ ಎನ್ನುವಂತಿಲ್ಲ. ಬೆಂಕಿಪೊಟ್ಟಣ, ಚಹಾಪುಡಿ, ಸಾಬೂನು, ದಂತ ಮಂಜನ ಪುಟಿ (ಈಗ ಟೂತ್‌ಪೇಸ್ಟು ಮತ್ತು ಟೂತ್ ಬ್ರಷ್), ಸಿಗರೇಟು ಮುಂತಾದ ಹತ್ತಾರು ಸರಕುಗಳನ್ನು ಅರ್ಧ ಶತಮಾನ ಕಾಲದಿಂದ ಬಹುರಾಷ್ಟ್ರೀಯ ಕಂಪೆನಿಗಳವರು ಭಾರತದ ಹಳ್ಳಿಗಳಿಗೆ ಯಶಸ್ವಿಯಾಗಿ ಮಾರಿದ್ದಾರೆ. ಅಂದರೆ ಮಾರಾಟ ಜಾಲ ಈಗಾಗಲೇ ಹರಡಿಕೊಂಡಿದೆ. ಈಗ ಅದನ್ನು ಆಧುನಿಕಗೊಳಿಸುವ ಮತ್ತು ಬಲಪಡಿಸುವ ಕಾರ್ಯ ಮಾತ್ರ ಆಗಬೇಕಾಗಿದೆ.

ಗ್ರಾಮ ಪ್ರದೇಶಗಳಲ್ಲಿ ಜನರು ವೆಚ್ಚ ಮಾಡುವ ೧೦೦ ಪೈಸೆಯಲ್ಲಿ ದಿನಸಿ ಸಾಮಗ್ರಿಗಳಿಗಾರಿ ೩೪ ಪೈಸೆ ಮತ್ತು ಕೃಷಿ ಮೂಲ ಸಾಮಗ್ರಿಗಾಗಿ ೧೪ ಪೈಸೆ ಬಿಟ್ಟರೆ ಮಿಕ್ಕ ೫೨ ಪೈಸೆ ವಾಸ್ತವವಾಗಿ ನಾನಾ ತಯಾರಿಕಾ ಉತ್ಪನ್ನಗಳಿಗಾಗಿ (ಮುಖ್ಯವಾಗಿ ಲೋಲುಪ ಉತ್ಪನ್ನಗಳಿಗಾಗಿ) ವೆಚ್ಚವಾಗುತ್ತದೆ.

ಟಿ.ವಿ. ಸೌಂಡ್ ಸಿಸ್ಟಂ, ಮೋಟಾರ್ ಬೈಕ್ ಮತ್ತು ಮೊಪೆಡ್, ಉಡುಗೆ ತೊಡುಗೆ ಮತ್ತು ಪಾದರಕ್ಷೆ, ಔಷಧ ಮತ್ತು ಶೃಂಗಾರ ಸಾಧನ ಮುಂತಾದುವು ಗ್ರಾಮಸ್ಥರ ಹಣವನ್ನೂ ಸಾಕಷ್ಟು ತಿಂದು ಹಾಕುತ್ತಿದೆ.

ಅಷ್ಟೇಕೆ ಮೊಬೈಲ್ ಫೋನ್ ಸೇವೆ ದರಗಳನ್ನು ಇಳಿಸುತ್ತಾ ಹೋದಂತೆಲ್ಲ ಮೊಬೈಲ್‌ಗಳ ಸಂಖ್ಯೆ ಗ್ರಾಮಗಳಲ್ಲಿ ಹೆಚ್ಚುತ್ತಾ ಹೋಗುತ್ತಿದೆ.

ದುಬಾರಿ ವಸ್ತುಗಳು ಮತ್ತು ವಾಹನಗಳನ್ನು ಖರೀಸಲು ಸುಲಭ ಕಂತುಗಳಲ್ಲಿ ಸಾಲ ಕೊಡುವ ಹಣಕಾಸು ಸಂಸ್ಥೆಗಳು ಗ್ರಾಮ ಮತ್ತು ಪಟ್ಟಣಗಳಲ್ಲಿ ತಮ್ಮ ವ್ಯವಹಾರವನ್ನು ಮುಂಚಿಗಿಂತ ಹೆಚ್ಚು ಮಾಡಿಕೊಂಡಿವೆ. ವಿಮಾ ಕ್ಷೇತ್ರಕ್ಕೆ ಖಾಸಗಿಯವರು ಪ್ರವೇಶ ಮಾಡಿದಂತೆ ವಿಮಾ ಯೋಜನೆಗಳನ್ನು ಪ್ರಚುರಪಡಿಸುವ ಸಿಬ್ಬಂದಿ ಗ್ರಾಮ ಪಟ್ಟಣಗಳಿಗೆ ಹೋಗುವುದು ಹೆಚ್ಚಾಗಿದೆ. ಆ ಸಿಬ್ಬಂದಿ ಹೇಳುವ ಪ್ರಕಾರ ವಿಮೆ ಪ್ರೀಮಿಯಂ ತುಂಬುವ ಬದಲು ಲೋಲುಪ ವಸ್ತುಗಳ ಖರೀದಿ ಮತ್ತು ಕಂತು ಪೂರೈಕೆಗೆ ಹಣ ನೀಡಲು ಮುಂದಾಗುತ್ತಾರೆ!.

ಜಾಹೀರಾತುದಾರರ ಸಲುವಾಗಿ ಬಳಕೆ ಶೈಲಿ ಗುರುತಿಸಿಕೊಡುವ ಭಾರತೀಯ ವಾಚಕತಾ ಸಮೀಕ್ಷೆ (ಐಆರ್‌ಎಸ್) ಮೂಲದವರು ಸ್ವಾರಸ್ಯಕರ ಅಂಶಗಳನ್ನು ಹೊರಗೆಡಹಿದ್ದಾರೆ. ೧೯೯೯ರಲ್ಲಿ ಗ್ರಾಮ ಪ್ರದೇಶಗಳ ಶೇ. ೮೩ ಮನೆಗಳಲ್ಲಿ ಖಾದ್ಯ ತೈಲವನ್ನು ಚಿಲ್ಲರೆಯಾಗಿ ಕಿಲೋಗ್ರಾಂ ಅಥವಾ ಲೀಟರ್ ಲೆಕ್ಕದಲ್ಲಿ ಅಳೆದು ತೂಗಿಕೊಳ್ಳುವ ವಾಡಿಕೆ ಇತ್ತು. ೨೦೦೨ರಲ್ಲಿ ಅಂಥ ಮನೆಗಳ ಸಂಖ್ಯೆ ಶೇ. ೭೦ ಕ್ಕೆ ಇಳಿಯಿತು. ಅದೇ ವೇಳೆ ಎಣ್ಣೆಯನ್ನು ಪ್ಯಾಕೇಜ್ ಮಾಡಿದ ಉತ್ಪನ್ನದ ರೂಪದಲ್ಲಿ ಖರೀದಿಸುವುದು ಶೇ.೬.೭ ಇದ್ದುದು ಶೇ. ೯.೩ ಆಯಿತು.

ಸಾವಿರಕ್ಕೆ ೧೬ ಮನೆಗಳಲ್ಲಿ ಟೆಲಿಫೋನ್ ಇತ್ತು. ಅದು ಸಾವಿರಕ್ಕೆ ೪೭ಕ್ಕೆ ಏರಿತು. ಟಿವಿಗಳು ಇರುವ ಮನೆಗಳು ಶೇ. ೧೯ ಇದ್ದುದು ಶೇ. ೨೫ ಆಯಿತು. ಬಿಸ್ಕತ್ತು ಖರೀದಿಸುವ ಕುಟುಂಬಗಳ ಸಂಖ್ಯೆ ೪೪ ಇದ್ದುದು ಶೇ. ೬೦ಕ್ಕೆ ಏರಿತು.

ಇದೆಲ್ಲ ಗ್ರಾಮ ಮತ್ತು ಪಟ್ಟಣ ಪ್ರದೇಶಗಳ ಜೀವನ ಶೈಲಿಯು ನಿಧಾನವಾಗಿ ಆದರೂ ಸ್ಫುಟವಾಗಿ ಬದಲಾಗುತ್ತಿರುವುದನ್ನು ಸೂಚಿಸುತ್ತದೆ.

ಮೆಟ್ರೋದಂಥ ಬೃಹತ್ ಮಳಿಗೆ ಸ್ಥಾಪನೆ ವಿರುದ್ಧ ಎಪಿಎಂಸಿಗಳ ವರ್ತಕರು ಸಿಡಿದೆದ್ದಿದ್ದಾರೆ. ಇವರ ಪ್ರತಿರೋಧವನ್ನು ಲೆಕ್ಕಿಸದೆ ರೈತರು ತಮ್ಮ ಉತ್ಪನ್ನವನ್ನು ಅದೇ ಮೆಟ್ರೊ ಬಹುರಾಷ್ಟ್ರೀಯ ವ್ಯವಸ್ಥೆಗೆ ಮಾರಲು ಮುಂದಾಗುವುದಿಲ್ಲ ಎಂಬುದಕ್ಕೆ ಏನು ಖಾತರಿ? ಪರಸ್ಪರ ಲಾಭಕಾರಿ ಎಂದು ಮನವರಿಕೆ ಆದರೆ ಧಾನ್ಯವನ್ನು ಬೆಳೆದು ಪೂರೈಸುವ ರೈತರೂ, ಅದನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸಿ ಮಾರಾಟ ಮಾಡಬಲ್ಲ ಬಹುರಾಷ್ಟ್ರೀಯರೂ ಸಹಜವಾಗಿ ಏಕೀಭವಿಸುತ್ತಾರೆ. ಆದ್ದರಿಂದ ಬೀಸುವ ಬದಲಾವಣೆ ಗಾಳಿ ರಭಸವಾದಾಗ ಅದಕ್ಕೆ ಸಿಕ್ಕಿ ತೂರಿ ಹೋಗುವುದು ಅನಿವಾರ್ಯವಾಗುತ್ತದೆ. ಚಿಲ್ಲರೆ ವ್ಯಾಪಾರದವರು ಸಹಾ ತಮ್ಮ ವ್ಯಾಪಾರ ವೈಖರಿಯನ್ನು ಬದಲಾಯಿಸಿಕೊಳ್ಳದಿದ್ದರೆ ಉಳಿಗಾಲ ಇರುವುದಿಲ್ಲ. ಅವರಿಗೆ ಇರುವುದು ಒಂದೇ ಉಪಾಯ, ತಾವು ಮಾರಾಟ ಮಾಡುವಾಗ ಗ್ರಾಹಕನಿಗೆ ವಸ್ತುವನ್ನು ಮಾತ್ರವಲ್ಲದೆ ಹೆಚ್ಚುವರಿಯಾಗಿ ಕೆಲವು ಅನುಕೂಲಗಳನ್ನು ಒದಗಿಸುವುದಾಗಿ ಚಿಲ್ಲರೆ ವ್ಯಾಪಾರದವರು ಬಿಂಬಿಸಬೇಕು. ಅದನ್ನು ಒದಗಿಸಬೇಕು. ಆ ಸೇವೆಯ ಅಂಶವು ಬಹುರಾಷ್ಟ್ರೀಯರ ವ್ಯಾಪ್ತಿಗೆ ಮೀರಿರಬೇಕು. ವಹಿವಾಟು ವೆಚ್ಚವನ್ನು ಕಡಿಮೆ ಇರಿಸಿ, ಒಳ್ಲೆಯ ಗುಣಮಟ್ಟದ ಸರಕನ್ನೇ  ಬಹುರಾಷ್ಟ್ರೀಯರಿಗಿಂತ ಅಗ್ಗದಲ್ಲಿ ಪೂರೈಸಲು ಚಿಲ್ಲರೆ ವ್ಯಾಪಾರಗಾರರಿಗೆ ಮಾತ್ರ ಸಾಧ್ಯ.

ಇನ್ನಿತರ ಅನುಕೂಲಗಳನ್ನು ರೂಪಿಸಿಕೊಳ್ಳುವುದು ಅಗತ್ಯ. ಜಾಗತೀಕರಣದ ಪರಿಣಾಮವು ತಲಸ್ತರಕ್ಕೆ ಇಳಿಯುವುದಕ್ಕೆ ಹೆಚ್ಚು ಸಮಯ ಹಿಡಿಸುವುದಿಲ್ಲ.

೨೧.೦೨.೨೦೦೪