ಬಿಜೆಪಿಯದೊಂದು ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂಬುದು ಮನದಟ್ಟಾದ ಪೂರ್ವ ಪ್ರಸಂಗದಲ್ಲಿ ಅಮೆರಿಕ ಕುತೂಹಲಗೊಂಡಿತ್ತು. ಕಾಂಗ್ರೆಸ್ ಸರ್ಕಾರವೆಂದರೆ ನೀತಿ ನಿಲುವುಗಳೇನು ಎಂಬುದೆಲ್ಲ ಗೊತ್ತಿರುವ ಸಂಗತಿ. ಆದರೆ ಗದ್ದಲ ಎಬ್ಬಿಸುವುದಕ್ಕೆ ಪ್ರಸಿದ್ಧವಾಗಿದ್ದ ಬಿಜೆಪಿಯಂಥ ಪಕ್ಷ ಸರ್ಕಾರ ರಚಿಸುವುದೆಂದರೆ?

ಇಂಥ ಕುತೂಹಲ ಸಹಜವೆ! ಏಕೆಂದರೆ ವಾಣಿಜ್ಯೋದ್ಯಮ ರಂಗದಲ್ಲಿ ಅತಿ ದೊಡ್ಡ ಪಾಲುದಾರ ರಾಷ್ಟ್ರ ಎನಿಸಿಕೊಂಡಿರುವುದು ಅಮೆರಿಕವೇ. ಆ ಸಂದರ್ಭದಲ್ಲಿ ಭಾರತದಲ್ಲಿ ಅಮೆರಿಕದ ಕಣ್ಣು ಕಿವಿ ಎನಿಸಿಕೊಂಡ ದೆಹಲಿಯ ರಾಯಭಾರ ಕಚೇರಿಯವರು ಒಬ್ಬ ದೂತನನ್ನು ವಿಷಯ ಸಂಗ್ರಹಣೆಗೆ ಅಟ್ಟಿದರು. ಆತನಿಗೆ ವಹಿಸಿದ ಕೆಲಸವೆಂದರೆ ಬಿಜೆಪಿಯ ಆರ್ಥಿಕ ನೀತಿ ಏನು ಎಂಬುದನ್ನು ಅರಿಯುವುದು. ಅಮೆರಿಕದ ರಾಜಧಾನಿಯಲ್ಲಿ ಎಲ್ಲ ದೇಶಗಳ ವಿದ್ಯಮಾನಗಳನ್ನು ವಿಶ್ಲೇಷಿಸಿ ಇಡುವ ವ್ಯವಸ್ಥೆ ಇರುತ್ತದೆ, ನಿಜ. ಆದರೂ ಆ ವ್ಯವಸ್ಥೆಗೆ ಕೂಡಾ ಸದಾ ತಾಜಾ ಮಾಹಿತಿ ಬೇಕಾಗುತ್ತಲೇ ಇರುತ್ತದೆ. ಸರ್ಕಾರ ರಚನೆ ಇನ್ನೂ ಆಗಿಲ್ಲವೆನ್ನುವ, ಕೆಲವೇ ವಾರಗಳಲ್ಲಿ ಆಗಲಿದೆಯೆನ್ನುವ ನಿರ್ದಿಷ್ಟ ಕಾಲಘಟ್ಟದಲ್ಲಿ ಆ ದೂತ ವಿಷಯ ಸಂಗ್ರಹಣೆಗೆ ಹೊರಟಿದ್ದ. ಆದರೆ ಬರಲಿರುವ ತಮ್ಮ ಪಕ್ಷದ ಸರ್ಕಾರದ ಆರ್ಥಿಕ ನೀತಿ ಏನು ಎಂಬುದನ್ನು ಹೇಳಬಲ್ಲ ಭೂಪರೇ ಸಿಗಲಿಲ್ಲ; ಏಕೆಂದರೆ ಆ ಪಕ್ಷದಲ್ಲಿ ಯಾರಿಗೂ ಸ್ಪಷ್ಟ ಕಲ್ಪನೆಯೇ ಇರಲಿಲ್ಲ! ಕೊನೆಗೆ ಆತ ಗೋವಿಂದಾಚಾರ್ಯನನ್ನು ಕಂಡ. ಏನೂ ಸಿಗಲಿಲ್ಲ.

ಬಹಳ ದೂರ ಸಾಗಿ ಬಂದ ಮೇಲೆ ಈಗಲೂ ಹೆಚ್ಚೂ ಕಡಿಮೆ ಅದೇ ಪರಿಸ್ಥಿತಿ. ಈಗಷ್ಟೇ ಬಿಜೆಪಿ ನೇತೃತ್ವದ ಸರ್ಕಾರದ ಅರ್ಥಸಚಿವ ಸ್ಥಾನದಿಂದ ನಿರ್ಗಮಿಸಿದ ಯಶವಂತ ಸಿನ್ಹಾ ತಮ್ಮ ಬಜೆಟ್ಟುಗಳ ಮೂಲಕ ಮತ್ತಿತರ ಗೊತ್ತುಗುರಿ ಇಲ್ಲದ ಕ್ರಮಗಳಿಂದ ಎಲ್ಲವನ್ನೂ ಗೊಂದಲಮಯ ಮಾಡಿಟ್ಟು ಹೋಗಿದ್ದಾರೆ. ‘ಯಶವಂತ ಸಿನ್ಹಾ ಅಲ್ಲವಾದರೆ ಜಸ್ವಂತ್ ಸಿಂಗ್ ಎಂಬ ಇನ್ನೊಬ್ಬ ಮಂತ್ರಿ, ಅಷ್ಟೆ. ವ್ಯತ್ಯಾಸವೇನಿಲ್ಲ’ ಎಂದಿ ಸಿನಿಕರು ಗೊಣಗುವಂತಾಗಿದೆ ಮಾತ್ರ.

ಏಕೆಂದರೆ ಬಿಜೆಪಿ ನೇತೃತ್ವದ ಸರ್ಕಾರ ಆರ್ಥಿಕ ವ್ಯವಹಾರಗಳನ್ನು ನಿಭಾಯಿಸಿದ ರತಿ ಬಗೆಗೆ ಜನರಿಗೆ, ಮುಖ್ಯವಾಗಿ ಮಧ್ಯಮ ವರ್ಗಗಳಿಗೆ, ತೀವ್ರವಾಗಿ ನಿರಾಸೆ ಆಗಿದೆ. ಅನುಕೂಲ ಆಗಿದ್ದರೆ ಉದ್ಯಮಿಗಳಿಗೆ, ಭಾರೀಕುಳಗಳಿಗೆ ಮಾತ್ರ. ಆರ್ಥಿಕ ಸುಧಾರಣಾ ಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು. ಆದರೆ ಬವಣೆಯ ನಿವಾರಣೆ ಜನಸಾಮಾನ್ಯರ ಮಟ್ಟಕ್ಕೆ ಇಳಿದಿರಲಿಲ್ಲ. ಉದ್ದೇಶಿತ ಕ್ರಮಗಳನ್ನು ನಾಜೂಕಾಗಿ ಜಾರಿಗೆ ತರುವ ಕಡೆ ಬಿಜೆಪಿಯವರು ನಿಗಾ ಕೊಡಲಿಲ್ಲ. ಜೊತೆಗೆ ಸುಧಾರಣಾ ಕ್ರಮಗಳ ಜಾರಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಧಾನಗೊಳಿಸಿದರು. ಮಾರುಕಟ್ಟೆ ಆರ್ಥಿಕತೆ ಏನಿದೆಯೋ ಅದು ಪೂರ್ತಿ ರೂಪುಗೊಳ್ಳಲಿಲ್ಲ. ಹೊಸದು ಪೂರ್ತಿಯಾಗಿ ಬರಲಿಲ್ಲ. ಜೊತೆಗೆ ವಿಶ್ವಾದ್ಯಂತ ಮುಸುಳಿಕೊಂಡ ಆರ್ಥಿಕ ಹಿಂಜರಿತ. ಹೆಚ್ಚಿದ್ದು ನಿರುದ್ಯೋಗ. ಕುಸಿದಿದ್ದು ಸಾಮಾನ್ಯ ಜನರ ಖರೀದಿ ಸಾಮರ್ಥ್ಯ. ಇಂಥ ದುರ್ಭರ ಸನ್ನಿವೇಶದಲ್ಲಿ ಯಶವಂತ ಸಿನ್ಹಾ ಅರ್ಥಸಚಿವರಾಗಿದ್ದರು. ಸರಿಯಾಗಿ ನಿಭಾಯಿಸಲಿಲ್ಲ. ಮನಸ್ಸಿನ ಮೇಲೆ ಅಚ್ಚೊತ್ತುವಂಥ ಪರಿಣಾಮ ಬೀರಲಿಲ್ಲ.

ಯಾವ ಗಳಿಗೆಯಲ್ಲಾದರೂ ಚುನಾವಣೆ, ಅಂದರೆ ಮಹಾ ಚುನಾವಣೆ, ಎದುರಾದರೂ ಅದಕ್ಕೆ ಸಿದ್ಧರಾಗಿರಬೇಕೆಂಬ ತರದೂದು ವಾಜಪೇಯಿ ಸರ್ಕಾರಕ್ಕೆ ಬಂದಿದೆ. ಅದರ ಅನ್ವಯ ದೂರಗಾಮಿ ಪರಿಣಾಮ ಬೀರುವ ಕ್ರಮಗಳನ್ನು ತಮ್ಮ ಪಕ್ಷದೊಳಗೆ, ಹೊರಗೆ ಕೈಗೊಳ್ಳಲು ವಾಜಪೇಯಿ ತೊಡಗಿದ್ದಾರೆ. ಅಡ್ವಾಣಿ ಅವರನ್ನು ಉಪ ಪ್ರಧಾನಿ ಮಾಡಿಕೊಂಡದ್ದು, ಯುವ ನಾಯಕ ವೆಂಕಯ್ಯನಾಯ್ಡು ಅವರನ್ನು ಸಚಿವ ಸ್ಥಾನದಿಂದ ಬದಲಾಯಿಸಿ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು ಮುಂತಾದ ಕ್ರಮಗಳೇ ಅವು. ಈ ಕಾರ್ಯಕ್ರಮದಡಿ ಯಶವಂತ್ ಮತ್ತು ಜಸ್ವಂತ್ ಅವರನ್ನು ಅದಲು ಬದಲು ಮಾಡಿದ್ದೂ ಸೇರಿರುತ್ತದೆ.

ಆರ್ಥಿಕ ರಂಗದಲ್ಲಿ ಹೇಳಿಕೊಳ್ಳುವಷ್ಟು ಸಾಧನೆ ಮಾಡಲಿಲ್ಲ ಎನ್ನುವ ಕಾರಣದಿಂದಲೇ ವಾಜಪೇಯಿ ಈ ಕ್ರಮಕ್ಕೆಳಸಿರುವುದು. ಬಿಜೆಪಿಗೆ ಹೊರತಾದ ಕೇಂದ್ರ ವಾಣಿಜ್ಯ ಸಚಿವ ಮುರಸೋಳಿ ಮಾರನ್ ಅವರು ವಿಶ್ವವಾಣಿಜ್ಯ ಸಂಸ್ಥೆ ಕಲಾಪಗಳಲ್ಲಿ ಭಾರತದ ಧ್ವನಿ ಮೂಡಿಸುವುದು, ಕೊಸರಾಟ ನಡೆಸುವುದು ಮಾತ್ರವಲ್ಲದೆ ವಾಣಿಜ್ಯ ಖಾತೆಯ ಸಕಲ ವ್ಯವಹಾರಗಳನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಯಶವಂತ ಸಿನ್ಹಾ ದಕ್ಷತೆ ಮಾತು ಬಂದಾಗ ಇವರ ಹೋಲಿಕೆಗೂ ಸಿಗುವುದಿಲ್ಲ. (ಇದೇ ಕೇಂದ್ರ ವಾಣಿಜ್ಯ ಸಚಿವ ಖಾತೆಯನ್ನು ಹಲವು ತಿಂಗಳು ನಿಭಾಯಿಸಿದ ರಾಮಕೃಷ್ಣ ಹೆಗಡೆ ಅವರ ಕಾರ್ಯವೈಖರಿ ಸಹಾ ಯಾವುದೇ ರೀತಿಯಲ್ಲಿ ಅದ್ಭುತ ಎನಿಸಲಿಲ್ಲ. ಕಾಫಿ, ಆಮದು ರೇಷ್ಮೆ ಮುಂತಾದ ವಿಷಯಗಳಲ್ಲಿ ರಾಜ್ಯಕ್ಕೆ ಹೆಗಡೆ ಕಿಂಚಿತ್ತೂ ನೆರವಾಗಲಿಲ್ಲ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲದೆ ಇಲ್ಲ) ಯಶವಂತ ಸಿನ್ಹಾ ಅವರು ಅರ್ಥ ಸಚಿವರಾಗಿದ್ದರಿಂದ ಆಡಳಿತಾರೂಢ ಕೂಟಕ್ಕೆ ಅಥವಾ ಬಿಜೆಪಿಗೆ ಸಮಾಧಾನ ಆದಂಥ ವಿಷಯಗಳಿರಬಹುದು. ಆರ್ಥಿಕತೆಗೆ ಮಾತ್ರ ಏನೂ ಪ್ರಯೋಜನವಾದಂತೆ ಕಾಣಿಸುವುದಿಲ್ಲ.

ಈ ಹಿನ್ನೆಲೆಯಲ್ಲಿ ಬದಲಾವಣೆ ತರುವುದು ವಾಜಪೇಯಿ ಅವರಿಗೆ ಅನಿವಾರ್ಯ ಎನಿಸಿತ್ತು. ತಮ್ಮಲ್ಲಿರುವ ಅತ್ಯುತ್ತಮ ಪ್ರತಿಭೆ ಎಂದೇ, ಫಲಿತಾಂಶ ಪ್ರಧಾನ ಕಾರ್ಯಶೈಲಿ ಇವರದು ಎಂಬ ಕಾರಣದಿಂದಲೇ, ಜಸ್ವಂತ್‌ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ವ್ಯಾಖ್ಯಾನವಿದೆ.

ಅರ್ಥ ಸಚಿವ ಖಾತೆಯನ್ನು ಕೈಗೆ ತೆಗೆದುಕೊಂಡ ತಕ್ಷಣ ಜಸ್ವಂತ್ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ಯಶವಂತ ಸಿನ್ಹಾ ಹೋಗಿ ಇವರು ಬಂದ ಬಗೆಗೆ ಅಲ್ಲಲ್ಲಿ ಸ್ವಲ್ಪ ಸಂಚಲನವುಂಟಾಗಿದೆ. ತಾವು ಏನನ್ನಾದರೂ ಒಂದಿಷ್ಟು ಒಳ್ಳೆಯ ಪರಿಣಾಮ ಬೀರತಕ್ಕವರು ಎಂದು ಅವರು ಬಿಂಬಿಸಿದ್ದಾರೆ. ಜಸ್ವಂತ್ ಅವರಿಗೆ ಆರ್ಥಿಕ ವಿಷಯಗಳ ಬಗೆಗೆ ಎಂಥ ಹಿಡಿತ ಇದೆ ಎನ್ನುವುದು ಸದ್ಯ ಸ್ಪಷ್ಟವಿಲ್ಲ. ಆದರೆ ಅವರು ಒಳ್ಳೆಯ ನಿಭಾವಣಾಕಾರರು. ಯಾವುದೇ ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು. ಮ್ಯಾನೇಜ್ ಮಾಡಬಲ್ಲರು. ಭಾರತ ಪಾಕ್ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯೇ ಅನ್ಯಾದೃಶ. ಅಲ್ಲೆಲ್ಲ ಭಾವನೆಗಳ ತಾಕಲಾಟ ಹಾಗೂ ಸೂಕ್ಷ್ಮ ಸಂವೇದನೆ ಮುಖ್ಯ. ಹಣಕಾಸು ವಿಷಯ ಬಂದಾಗ ಅಷ್ಟೇ ಸಾಕಾಗುವುದಿಲ್ಲ. ಕಾರ್ಯಕಾರಣ ಪರಿಣಾಮಗಳು ಬಹಳ ಜಟಿಲವಾಗಿರುತ್ತವೆ. ಆದರೆ ಹಣಕಾಸು ಖಾತೆಯನ್ನು ತಾವು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತೋರಿಸಿಕೊಂಡಿದ್ದಾರೆ.

ತಕ್ಷಣ ಮಾಡಬಹುದಾಗಿದ್ದ ಒಂದು ಕಾರ್ಯವನ್ನು ಅವರು ಕೈಗೆತ್ತಿಕೊಂಡು ಡಿವಿಡೆಂಡ್ ಮೇಲಿನ ತೆರಿಗೆಯನ್ನು ರದ್ದು ಮಾಡಿದರು. ಬೊಕ್ಕಸಕ್ಕೆ ಸೇರಬಹುದಾದ ೮೦೦ ಕೋಟಿ ರೂಪಾಯಿ ಹಣ ಇದರಿಂದ ತಪ್ಪುತ್ತದೆ. ಅಧಿಕಾರಿಗಳು ಈ ಬಗೆಗೆ ಹೇಳಿದಾಗ ಸೋರಿ ಹೋಗುವ ನಾನಾ ಬಗೆ ತೆರಿಗೆ ಹಣಕ್ಕೆ ದಿಗ್ಭಂಧನ ಹಾಕಿ ಖೋತಾ ತುಂಬಿಕೊಳ್ಳಬೇಕೆಂದು ಸೂಚಿಸಿದರಂತೆ. ಪ್ರಧಾನಿ ಅವರಿಗೆ ಲಗತ್ತಾದ ವಾಣಿಜ್ಯ ಪರಿಷತ್ ಸಭೆಯಲ್ಲಿ ಜಸ್ವಂತ್ ಅವರು ಜನಸಂಪ್ರೀತಿಯ ಕೆಲವು ಕ್ರಮಗಳನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಕಟಿಸುವುದಾಗಿ ಹೇಳಿದರು. ಆದರೆ ಸಂಸತ್ ಅಧಿವೇಶನ ಆರಂಭವಾದಾಗ ಪ್ರಶ್ನೋತ್ತರ ವೇಳೆ ನೀಡಿದ ಉತ್ತರದಲ್ಲಿ ಮಧ್ಯಮ ವರ್ಗದವರನ್ನು ತೃಪ್ತಿಪಡಿಸುವ ಕ್ರಮಗಳು ಇರುವುದಿಲ್ಲ ಎನ್ನುವ ಸೂಚನೆಯನ್ನೇ ನೀಡಿದರು. ಭವಿಷ್ಯ ನಿಧಿಯ ಬಡ್ಡಿದರವನ್ನು ಶೇಕಡಾ ಅರ್ಧದಷ್ಟು ಇಳಿಸಿ ಶೇ ೯ಕ್ಕೆ ತರಲು ಸೂಚಿಸುವುದಾಗಿ ತಿಳಿಸಿದರು.

ಅದೇ ಪ್ರಶ್ನೋತ್ತರ ವೇಳೆ ತಮಗೆ ಜನಸಾಮಾನ್ಯರ ಸಮಸ್ಯೆ ನಿವಾರಣೆಗಿಂತ ವಿದೇಶಿ ನೇರ ಬಂಡವಾಳ ಆಕರ್ಷಣೆ ಬಗೆಗೆ ಒಲವಿದೆ ಎಂದು ತೋರಿಸಿಕೊಂಡಿದ್ದಾರೆ. ವಿದೇಶಿ ನೇರ ಬಂಡವಾಳ ಆವಕವನ್ನು ವರ್ಷಕ್ಕೆ ೧೦೦೦ಕೋಟಿ ಮಟ್ಟಕ್ಕೆ ಏರಿಸುವುದೇ ಆದ್ಯತೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅಂದರೆ, ಜಸ್ವಂತ್ ಅವರ ಉದ್ದೇಶ ಏನೇ ಇದ್ದರೂ ಕಠಿಣ ಚೌಕಟ್ಟು ಹೊಂದಿರುವ ರೂಢಿ ಮೂಲ ಆರ್ಥಿಕ ಸುಧಾರಣಾ ಜಾಡಿನಿಂದ ಹೊರ ಬರಲು ಸಾಧ್ಯ ಆಗದೇ ಹೋಗಬಹುದು. ನಿರ್ವಹಣಾ ಸಾಮರ್ಥ್ಯ ಏನೇ ಇದ್ದರೂ ನೀತಿ ಚೌಕಟ್ಟು ಅವಕಾಶ ಕೊಡುವುದಿಲ್ಲ. ರಾಜಕೀಯ ಉದ್ದೇಶ ಏನೇ ಇದ್ದರೂ ಆರ್ಥಿಕ ನೀತಿ ಚೌಕಟ್ಟನ್ನು ಬೇಧಿಸಲಾಗದು.

ಇದೇನೇ ಇದ್ದರೂಜನರ ಖರೀದಿ ಸಾಮರ್ಥ್ಯವನ್ನು ವೃದ್ಧಿ ಮಾಡಬೇಕೆಂಬ ಗುರಿ ಇಟ್ಟುಕೊಳ್ಳಲು ಯಾವುದೇ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಪರಿಸ್ಥಿತಿ ಈಗಿನದು. ಸೆಪ್ಟೆಂಬರ್ ೧೧ರ ಘಟನೆ ನಂತರ ಅಮೆರಿಕದಲ್ಲಿ ಆರ್ಥಿಕ ಪರಿಸ್ಥಿತಿ ನೆಲ ಕಚ್ಚಿತ್ತು. ಅದು ಸುಧಾರಿಸುವುದು ಬಹುಕಾಲದ ನಂತರವೇ ಎನ್ನುವ ಭಾವನೆ ಇತ್ತು. ಆದರೆ ಹಲವು ವಾರಗಳ ಈಚಿನ ವಿದ್ಯಮಾನಗಳನ್ನು ನೋಡಿದರೆ ಅಮೆರಿಕದ ಆರ್ಥಿಕತೆ ಸೋಜಿಗ ಪಡುವಷ್ಟು ಚೇತರಿಸಿಕೊಳ್ಳುತ್ತಿದೆ. ಜನ ಹೆಚ್ಚು ಹೆಚ್ಚು ಖರ್ಚು ಮಾಡಲು ಆರಂಭಿಸಿದ್ದಾರೆ.

ಭಾರತದಲ್ಲಿ ಕೂಡಾ ಭವಿಷ್ಯದ ಬೆಳವಣಿಗೆಗಳಿಗಾಗಿ ರೂಪಿಸಿಕೊಂಡ ಆರ್ಥಿಕ ನೀತಿ ಹಾಗೂ ಸುಧಾರಣಾ ಕ್ರಮಗಳ ವಿಷಯ ಏನೇ ಇದ್ದರೂ ತಕ್ಷಣ ಜನರ ಖರೀದಿ ಸಾಮರ್ಥ್ಯ ಹೆಚ್ಚಬೇಕು. ಹಣದುಬ್ಬರವನ್ನು ಸಂಪೂರ್ಣವಾಗಿ ನಿಯಂತ್ರಿಸದ ಮೇಲೆ ಖರೀದಿ ಸಾಮರ್ಥ್ಯ ವೃದ್ಧಿಗೆ ಶ್ರಮಿಸದಿದ್ದರೆ ಈಗಿನ ಹತಾಶ ವಾತಾವರಣ ಮುಂದುರೆಯುತ್ತದೆ. ಜನರ ಉದ್ಯಮಶೀಲವನ್ನೂ, ಉತ್ಸಾಹವನ್ನೂ ಸಂಪೂರ್ಣವಾಗಿ ಚಿವುಟಿ ಹಾಕುತ್ತದೆ. ಯಾವುದೇ ಹಣ ಹೂಡಿಕೆಯೂ ಅದನ್ನು ದಿಢೀರ್ ಚುರುಕು ಮೂಡಿಸಲು ಸಾಧ್ಯವಾಗುವುದಿಲ್ಲ. ವಿದೇಶಿ ನೇರ ಬಂಡವಾಳಕ್ಕೆ ಮಣೆ ಹಾಕುವುದು ಇದನ್ನು ಸಾಧಿಸುವುದಕ್ಕೇ ಇರಬೇಕೆಂಬ ಆರೋಪಕ್ಕೆ ಗುರಿ ಆಗಬೇಕಾಗುತ್ತದೆ.

ವಾಜಪೇಯಿ ಅವರು ಬಹಳ ಪ್ರಶಸ್ತ ಸಮಯದಲ್ಲಿ ಜಸ್ವಂತರನ್ನು ಹಣಕಾಸು ಗಾದಿಯ ಮೇಲೆ ಕೂರಿಸಿದ್ದಾರೆ. ಏಷ್ಯ ದೇಶಗಳ ಪೈಕಿ ಚೀನಾ ಬಿಟ್ಟರೆ ಭಾರತ ಮಾತ್ರವೇ ಆರ್ಥಿಕ ಹಿಂಜರಿತ ಪರಿಣಾಮವನ್ನು ದೃಢವಾಗಿ ತಾಳಿಕೊಂಡಿರುವುದು.

ಹಿಂಜರಿತ ಅವಧಿಯ ನಂತರ ಭಾರತವನ್ನು ಕವಿದಿದ್ದ ಮಂಕು ಹರಿಯುತ್ತಿದೆ. ನಿಧಾನವಾಗಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ ಎಂಬ ಅಭಿಪ್ರಾಯವಿದೆ. ಈ ಸಮಯದಲ್ಲಿ ಜಸ್ವಂತ್ ಸಿಂಗ್ ಅವರಂಥ ನಿರ್ವಹಣಕಾರರು ಆರ್ಥಿಕ ರಂಗದ ಪಾಲಿಗೆ ಅಗತ್ಯವಾಗಿ ಬೇಕು. ಆದರೆ ಅವರ ಕೈಕಟ್ಟಿ ಹಾಕುವಂತೆ ಆಗಬಾರದು.

೨೪.೦೭.೨೦೦೨