ಮಕ್ಕಳನ್ನು, ವೃದ್ಧರನ್ನು ಟಾನಿಕ್‌ಗಳಿಂದ ದೂರ ಇಡಲು ಏನು ಮಾಡಬೇಕು? ಹಣ್ಣು, ತರಕಾರಿ ಹೆಚ್ಚು ಸೇವಿಸುಂತೆ ಮಾಡಬೇಕು.

ನಾನಾ ಹೊಸ ರುಚಿಗಳು, ಅಡಿಗೆ ವಿಧಾನಗಳು ಜನಪ್ರಿಯವಾಗುತ್ತಿರುವ ಈ ದಿನಗಳಲ್ಲಿ ತರಕಾರಿ (ಕಾಯಿಪಲ್ಲೆ) ಬಳಕೆ ಹೆಚ್ಚುತಿತದೆ. ಇಪ್ಪತ್ತು ವರ್ಷಗಳ ಹಿಂದಿನವರೆಗೂ ಹಳ್ಳಿಗಳಿಗೆ ಹೊರವೂರಿನ ತರಕಾರಿ ತಲುಪುತ್ತಿರಲಿಲ್ಲ. ತಮ್ಮಲ್ಲಿ ಬೆಳೆದಿದ್ದಷ್ಟು ಬಗೆಯ ತರಕಾರಿ ಮಾತ್ರವೇ ಹಳ್ಳಿಗರಿಗೆ ತಲುಪುತ್ತಿರಲಿಲ್ಲ. ತಮ್ಮಲ್ಲಿ ಬೆಳೆದಿದ್ದಷ್ಟು ಬಗೆಯ ತರಕಾರಿ ಮಾತ್ರವೇ ಹಳ್ಳಿಗರಿಗೆ ತಲುಪುತ್ತಿದ್ದುದು. ಈಗ ವಿದೇಶಿ ಮೂಲದ, ಆದರೆ ಸಂಕರಗೊಂಡ ತಳಿಯ, ತರಕಾರಿಗಳು ಬಳಕೆದಾರರ ಕೈಗೆ ಸುಲಭವಾಗಿ ಸೇರುತ್ತಿವೆ.

ಹಾಗೆ ನೋಡಿದರೆ ೭೫ ವರ್ಷದ ಹಿಂದೆ ಟೊಮೆಟೋ ಎನ್ನುವುದನ್ನು ಭಾರತೀಯರು ಸಹಜವಾಗಿ ಬಳಸುತ್ತಿರಲಿಲ್ಲ. ವಿದೇಶೀಯರ, ಮಾಂಸಾಹಾರಿಗಳ ಖರೀದಿ ಪಟ್ಟಿಯಲ್ಲಿ  ಮಾತ್ರ ಇರುತ್ತಿತ್ತು. ೫೦ ವರ್ಷದ ಹಿಂದೆ ಶುಭ ಸಮಾರಂಭಗಳಲ್ಲಿ ಇದನ್ನು ಬಳಸುತ್ತಿರಲಿಲ್ಲ. ಮಡಿ ಅಡಿಗೆ ಬೇಕೆಂದಾಗ ಸುತರಾಂ ಟೊಮೆಟೋವನ್ನು ಮುಟ್ಟುತ್ತಿರಲಿಲ್ಲ. ೨೫ ವರ್ಷದ ಹಿಂದೆ ಇದು ಆಗಷ್ಟೇ ಸರ್ವವ್ಯಾಪಿ ಆಗತೊಡಗಿತ್ತು. ಇದನ್ನು ಬೆಳೆಯುವುದು ಲಾಭಕಾರಿ ಎನ್ನುವ ಭಾವನೆ ಬರತೊಡಗಿತ್ತು. ಯಾವುದೇ ಅಡಿಗೆಗೆ ಇದು ಅನಿವಾರ್ಯ ಎನ್ನುವಂತಾಗಿತ್ತು. ಬಳಕೆದಾರರು ಕೆಜಿಗೆ ೨೫ ರಿಂದ ೩೦ ರೂಪಾಯಿ ತೆತ್ತು ಅಬಾವದ ವೇಳೆ ಖರೀದಿಸುತ್ತಿದ್ದರು. ಸಮೃದ್ಧಿ ಆದಾಗ ೨-೩ ರೂಪಾಯಿಗೆ ಟೊಮೆಟೊ ಖರೀದಿಸಿದ್ದು ಉಂಟು.

ಹುಣಿಸೆಹಣ್ಣು ಬಳಕೆ ತಪ್ಪಿಸಲು, ಬೇೞಬಳಕೆ ಕಡಿಮೆ ಮಾಡಲು ಈಗ ಟೊಮೆಟೊ ಬಳಸುವಂತಾಗಿದೆ. ಟೊಮೆಟೊ ‘ಪೂರಿ’ ಎಂದರೆ ಅದರ ರಸವನ್ನು ಟೆಟ್ರಾಪ್ಯಾಕ್ ಮಾಡಿಸೂಪರ್ ಮಾರ್ಕೆಟ್‌ಗಳಲ್ಲಿ ಮಾರುತ್ತಾರೆ. ಎಲೆಕೋಸು, ಹೂಕೋಸು, ಕ್ಯಾರೆಟ್ ಮುಂತಾದುವು ಕೂಡಾ ಒಂದು ಕಾಲಕ್ಕೆ ಟೊಮೆಟೊ ರೀತಿ ‘ನಿಷಿದ್ದ’ವೇ ಆಗಿದ್ದುವು. ಇಂಥ ತರಕಾರಿ ಸಾಲಿಗೆ ಕಳೆದ ಒಂದು ವರ್ಷದಿಂದ ಸೇರಿದ್ದು ‘ಸ್ಪಿನಾಷ್’ ಸೊಪ್ಪ! ಇವತ್ತು ಗೋಬಿ ಮಂಚೂರಿ ಇಲ್ಲದ ರೆಸ್ಟುರಾ ಇಲ್ಲ.

ಕಳೆದ ವಾರ ಬೆಂಗಳೂರಿನಲ್ಲಿ ತರಕಾರಿ ಕುರಿತ ವಿಶ್ವ ಸಮಾವೇಶವೊಂದು ನಡೆಯಿತು. ರಾಜ್ಯದ ರಾಜಧಾನಿಯು ದೇಶದ ಪ್ರಮುಖ ತರಕಾರಿ ಕೇಂದ್ರ ಎಂಬುದೇನೂ ಇದಕ್ಕೆ ಕಾರಣವಾಗಿರಲಿಲ್ಲ. ನವೆಂಬರ್, ಡಿಸೆಂಬರ್ ತಿಂಗಳುಗಳ ವಿದೇಶಿ ಅತಿಥಿಗಳ ಪಾಲಿಗೆ ಅತ್ಯುತ್ತಮ ಎನಿಸುವ ಹವೆ ಬೆಂಗಳೂರಿನಲ್ಲಿ ಇರುತ್ತದೆ ಎಂಬುದೇ ಈ ಬಗೆಯ ಬೃಹತ್ ಸ್ವರೂಪದ ಸಮಾವೇಶಗಳು ನಡೆಯಲು ಕಾರಣ. ತರಕಾರಿ ಸಮಾವೇಶಕ್ಕೆ ಮುನ್ನ ವಿಶ್ವ ಬಾಳೆ ಸಮಾವೇಶ ಸಹಾ ನಡೆಯಿತು. ಇಂಥ ಸಮಾವೇಶಗಳಲ್ಲಿ ಭಾಗವಹಿಸುವ ತಜ್ಞರು ತಾಂತ್ರಿಕ ವಿಷಯಗಳ ಬಗೆಗೆ ಚರ್ಚಿಸುವುದೇ ಮುಖ್ಯ. ಇಲ್ಲಿನ ತಜ್ಞರು ಅವರ ಲಾಭ ಪಡೆಯಲು ಶಕ್ಯವಿದೆ. ಸಾಮಾನ್ಯವಾಗಿ ವಿಶ್ವ ಸಮಾವೇಶಗಳಲ್ಲಿ ದೀರ್ಘಾವದಿ ಪರಿಣಾಮಗಳು, ಮುಂದೆ ಕೈಗೊಳ್ಳಬಹುದಾದ ಯೋಜನೆಗಳು ಕುರಿತಂತೆ ಒಳನೋಟವೊಂದು ಸಿಗುವುದೇನೋ ಎಂಬ ಹುಡುಕಾಟ ನಡೆಯುತ್ತದೆ. ಆದ್ದರಿಂದ ಸ್ಥಳೀಯ ಪರಿಸರವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತತ್‌ಕ್ಷಣ ಜಾರಿ ಮಾಡಲು ಸಾಧ್ಯವಾಗುವಂಥ ಕ್ರಮಗಳೇನೆಂದು ಚಿಂತಿಸಲು ಅವಕಾಶ ಕಡಿಮೆ. ಇಂಥ ಸಮಾವೇಶಗಳಲ್ಲಿ ಭಾಗವಹಿಸಲು ಬರುವ ಪ್ರತಿಯೊಂದು ದೇಶದವರೂ ತಾವು ಕಲಿತದ್ದನ್ನು ಹೇಳುವುದಕ್ಕಿಂತ, ತಾವು ಕಲಿತುಕೊಂಡು ಹೋಗಿ ಲಾಭ ಮಾಡಿಕೊಳ್ಳುವಂಥದೇನಾದರೂ ಸಿಗುವುದೇ ಎಂದು ಹುಡುಕಾಟ ನಡೆಸುವುದೇ ಹೆಚ್ಚು.

ಇದೆಲ್ಲ ಏನೇ ಇದ್ದರೂ ತರಕಾರಿ ಬೆಳೆ ಮತ್ತು ವಿತರಣೆ ಮಾರಾಟ ಕುರಿತಂತೆ ನಮ್ಮ ಮಟ್ಟದಲ್ಲಿ ನಾವು ತಲೆಕೆಡಿಸಿಕೊಳ್ಳಬೇಕಾದ್ದೇ ಬಹಳವಿದೆ. ಈಚಿನ ದಿನಗಳಲ್ಲಿ ಜಾಗತೀಕರಣದ ಹುರುಪಿನ ಕಾರಣ ಯಾವುದೇ ಮಾತೆತ್ತಿದರೂ ರಫ್ತು ಸಾಧ್ಯತೆ, ರಫ್ತು ಸಾಮರ್ಥ್ಯ ಕುರಿತ ದೊಡ್ಡ ದೊಡ್ಡ ಮಾತುಗಳೇ ಕೇಳಿಸುತ್ತವೆ. ತರಕಾರಿ ವಿಷಯದಲೂಲ ಹಾಗೆಯೇ, ತರಕಾರಿ ರಫ್ತು ಮಾಡುವಂತೆ ಆಗಬೇಕು. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕೃಷಿ ಪ್ರಧಾನ ಉದ್ಯಮ ಬೆಳಸಬೇಕೆನ್ನುವ ಕಾರ್ಯಕ್ರಮದಡಿ ತರಕಾರಿಯನ್ನೂ ಸೇರಿಸಿಕೊಳ್ಳುವುದು ಅಗತ್ಯ ಎಂದೆಲ್ಲ ಹೇಳುವುದುಂಟು.

ತರಕಾರಿಯಾಗಲಿ, ಹಣ್ಣಾಗಲಿ, ಹೂವಾಗಲಿ ಬೇಗ ಹಾಳಾಗುವಂಥವು. ಈ ಪೆರಿಷಬಲ್ ಸರಕನ್ನು ಬಳಕೆದಾರನ ಕೈಗೆ ಸೇರಿಸುವುದಕ್ಕೆ ತಡವಾದರೆ ಕೆಟ್ಟು ಹಾಳಾಗುತ್ತವೆ. ಸಂರಕ್ಷಣೆ ಮತ್ತು ಸಾಗಾಣಿಕೆ ಇವೆರಡೂ ತಡವಾಗದೆ ಬೇಗ ನಡೆಯಬೇಕು. ತಪ್ಪಿದರೆ ಬೆಲೆ ಬಾಳುವ ಉತ್ಪನ್ನವು ಕೊಳೆತು ಗೊಬ್ಬರವಾಗಿ ನೆಲ ಸೇರುತ್ತದೆ. ಹಣ್ಣು ಹೂವುಗಳ ವಿಚಾರ ಪರವಾಗಿಲ್ಲ. ಹೇಗೋ ಬಳಕೆದಾರರನ್ನು ತಲುಪಿಬಿಡುತ್ತದೆ. ಆದರೆ ತರಕಾರಿ ಬಗೆಗೆ ಆ ಮಾತು ಹೇಳುವಂತಿಲ್ಲ. ಬಹಳ ದೂರ ಕ್ರಮಿಸುವುದಿಲ್ಲ. ಸ್ಥಳೀಯ ಬಳಕೆಯೇ ಹೆಚ್ಚು. ಬೆಂಗಳೂರಿನ ಹೂವು ವಿದೇಶಗಳನ್ನು ಸೇರುತ್ತದೆ. ಕಾಶ್ಮೀರ ಹಿಮಾಚಲಗಳ ಸೇಬು ಬೆಂಗಳೂರಿಗೆ ಬಂದಿಳಿಯುತ್ತದೆ. ಆದರೆ ಬೆಂಗಳೂರಿನ ತರಕಾರಿ ಹೆಚ್ಚೆಂದರೆ ಮದ್ರಾಸ್, ಮುಂಬೈಗಳಂಥ ನಗರಗಳನ್ನು ಸೇರಬಹುದು ಮಾತ್ರ. ಅದೇ ತೊಡಕು.

ಹಾಳಾಗುವಂಥ ಉತ್ಪನ್ನದ ವಿಷಯ ಬಂದಾಗ ರೈತನಿಗೆ ನೆರವಾಗುವಂತೆ ಶೀತಾಗಾರಗಳನ್ನು ನಿರ್ಮಿಸಬೇಕೆಂದು ಹೇಳುತ್ತಾರೆ. ಆದರೆ ರೈತರಿಗೆ ನೆರವಾಗಲು ಉಗ್ರಾಣಗಳನ್ನು ಸೃಷ್ಟಿಸಬೇಕೆಂಬ ಕಾರ್ಯಕ್ರಮ ಇರುವಷ್ಟೇ ಪರಿಣಾಮಕಾರಿ ಶೀತಾಗಾರದ ಮಾತು. ಅಲ್ಲಿಂದ ಮುಂದಕ್ಕೆ ಹೋಗುವುದಿಲ್ಲ. ಉಗ್ರಾಣಗಳಲ್ಲಿ ತಿಂಗಳುಗಟ್ಟಲೆ ಸರಕು ಇಡಬಹುದು. ತರಕಾರಿಯನ್ನಾದರೋ ಶೀತಾಗಾರದಲ್ಲಿ ವಾರಗಟ್ಟಲೆ ಸಹಾ ಇಡುವಂತಿಲ್ಲ.

ಒಂದೇ ಉಪಾಯವೆಂದರೆ ತರಕಾರಿಯನ್ನು ಬೆಳೆಗಾರರು ಬೇಗ ಸಾಗಿಸಿ ಬಳಕೆದಾರ ಕೇಂದ್ರಗಳಾದ ನಗರಗಳಲ್ಲಿ ಮಾರಾಟ ಮಾಡಲು ಮೂಲಸೌಲಭ್ಯಗಳಾದ ರಸ್ತೆ, ವಾಹನ ಮುಂತಾದುವನ್ನು ಒದಗಿಸಬೇಕು. ಅಲ್ಲಿಯೇ ಹೆಚ್ಚು ಅನುಕೂಲ ಆಗದೇ ಇರುವುದು.

ಸದ್ಯ ರೈತರು ತರಕಾರಿಯನ್ನು ಸಾಗಿಸಲು ತಮ್ಮದೇ ಸೌಲಭ್ಯಗಳನ್ನು ಸೃಷ್ಟಿಸಿಕೊಂಡಿದ್ದಾರೆ. ತರಕಾರಿ ಪ್ರಮಾಣ ಕಡಿಮೆ ಇದ್ದಾಗ ಬಸ್ಸುಗಳಲ್ಲಿ ಸಹಾ ಸಾಗಿಸುತ್ತಾರೆ. ಸ್ವಪ್ರಯತ್ನದ ಸಾಗಾಣಿಕೆ ವೇಳೆ ತರಕಾರಿ ಸಾಕಷ್ಟು ಪ್ರಮಾಣದಲ್ಲಿ ಹಾಳಾಗುತ್ತದೆ. ಇದು ತಪ್ಪಿದರೆ ರೈತನ ಕೈ ಸೇರುವ ಕಾಸು ಜಾಸ್ತಿಯಾಗುತ್ತದೆ. ಹಾಲಿನ ಉತ್ಪಾದನೆ ಮತ್ತು ವಿತರಣೆಗೆಂದು ನಿರ್ಮಾಣಗೊಂಡ ಸಾಗಾಣಿಕೆ ಜಾಲವು ತರಕಾರಿ ಸಾಗಾಣಿಕೆಗೂ ನೆರವಾಗುವುದುಂಟು. ಆದರೆ ಅದು ಸಹಾ ಬಹಳ ಸೀಮಿತ.

ತರಕಾರಿ ಬೆಳೆ ಇಡುವವರಲ್ಲಿ ಸಾಕಷ್ಟು ಮಂದಿ ಮುಖ್ಯವಾಗಿ ಬೆಂಗಳೂರು ಸುತ್ತಮುತ್ತ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ವಿಸ್ತಾರ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಕೃಷಿ ನಡೆಸುತ್ತಿದ್ದಾರೆ. ಲಾರಿಗಟ್ಟಲೆ ತರಕಾರಿಯನ್ನು ಲಾರಿಗಳಲ್ಲಿ ತುಂಬಿ ಸಾಗಿಸುತ್ತಾರೆ. ಆದರೆ ಸಣ್ಣ ಹಿಡುವಳಿಗಳಲ್ಲಿ ತರಕಾರಿ ಬೆಳೆದು ನಗರಕ್ಕೆ ಸಾಗಿಸುವವರ ಸಂಖ್ಯೆ ಕಡಿಮೆಯೇನಲ್ಲ. ಇವರು ಹೈನುಗಾರಿಕೆ, ಪಶು ಸಂಗೋಪನೆ, ರೇಷ್ಮೆ ಕೃಷಿ ಇವುಗಳ ಜೊತೆ ಜೊತೆಗೇ ಸಣ್ಣ ತಾಕುಗಳಲ್ಲಿ ತರಕಾರಿ ಬೆಳೆಯುವರು. ಸಣ್ಣ ವಾಹನಗಳಲ್ಲಿ ಮತ್ತು ಬಸ್ಸುಗಳಲ್ಲಿ, ಸ್ವಂತ ಬಂಡಿಗಳಲ್ಲಿ ಸಾಗಾಣಿಕೆ ಮಾಡುತ್ತಾರೆ. ನಗರ ಜೀವಿಗಳಿಗೆ ಒಂದೆರಡರ ಬದಲು ಹಲವು ವಿಧದ ತರಕಾರಿ ವರ್ಷವಿಡೀ ಸಿಗುವಂತೆ ಮಾಡಿರುವವರು ಇವರೇ. ಹೇನುಗಾರಿಕೆ ಸಂಬಂಧ ಮಾಡಿರುವಂತೆ ಸಣ್ಣ ಸಣ್ಣ ಕೃಷಿಕರಿಂದ ತರಕಾರಿಯನ್ನು ಸಂಗ್ರಹಿಸುವ ಏಕೀಕೃತ ವ್ಯವಸ್ಥೆ ಇನ್ನೂ ಮೂಡಿಯೇ ಇಲ್ಲ.

ಇದಕ್ಕಿಂತ ಹೆಚ್ಚಾಗಿ ತರಕಾರಿ ಬೆಳೆಯುವಾಗ ಒಂದು ಫಸಲು ಯೋಜನೆ ಇರುವುದೇ ಇಲ್ಲ. ಬೆಳೆ ಬಂತೆಂದು ಎಲ್ಲರೂ ಟೊಮೆಟೊ ಬೆಳೆಯುತ್ತಾರೆ. ಬೆಲೆ ಸಿಗದಾಗ ಸಾಗಾಣಿಕೆ ಖರ್ಚು ಕೂಡಾ ಗಿಟ್ಟದೆ ಬೆಳೆಗಾರ ಕೈಮೇಲೆ ತಲೆ ಹೊತ್ತು ಕೂರುತ್ತಾನೆ. ಯಾವ ಪ್ರದೇಶದಲ್ಲಿ ಯಾವ ಯಾವ ತರಕಾರಿ ಬೆಳೆಯುತ್ತಿದ್ದಾರೆಂದು ಸಮೀಕ್ಷಿಸುವ ಹಾಗೂ ಎಲ್ಲ ಬೆಳೆಗಾರರೂ ಒಂದೇ ಬಗೆಯ ತರಕಾರಿ ಬೆಳೆಯುತ್ತಿದ್ದಾರೆಂದು ಸಮೀಕ್ಷಿಸುವ ಹಾಗೂ ಎಲ್ಲ ಬೆಳೆಗಾರರೂ ಒಂದೇ ಬಗೆಯ ತರಕಾರಿ ಬೆಳೆಯಲು ತೊಡಗಿದಾಗ ಅವರನ್ನು ಎಚ್ಚರಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಬೆಳೆಗಾರರನ್ನು, ಅವರು ಬೆಳೆದಿದ್ದನ್ನು ಮಾರುವವರನ್ನು ಅವರ ಪಾಡಿಗೆ ಅವರನ್ನು ಬಿಡುವುದೇ ನಡೆದಿದೆ. ತರಕಾರಿ ಬೆಳೆ ಯೋಜನೆ ರೂಪಿಸಿ ನಿರ್ಬಂಧಿಸದೇ ಇದ್ದರೂ ವಾಸ್ತವ ಸ್ಥಿತಿ ಕುರಿತ ಮಾಹಿತಿ ಪ್ರಸಾರ ಮಾಡಿದರೆ ರೈತರು ಸ್ವತಃ ಎಚ್ಚೆತ್ತುಕೊಳ್ಳುತ್ತಾರೆ.

ಈಗ ತರಕಾರಿ ಬೆಳೆ ಮತ್ತು ಲಭ್ಯತೆ ಕುರಿತ ಮಾಹಿತಿಯನ್ನು ಕರಾರುವಾಕ್ಕಾಗಿ ತಮ್ಮದೇ ಮೂಗಳಿಂದ ತಿಳಿದುಕೊಳ್ಳುವವರು ವರ್ತಕರು. ಯಾವ ದಿನಗಳಲ್ಲಿ ಎಂಥ ತರಕಾರಿ ಯಾವ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಎಂಬ ಸ್ಥೂಲ ಅಂದಾಜನ್ನು ಅವರು ಮಾಡುತ್ತಲೇ ಇರುತ್ತಾರೆ. ಅದೇ ಅವರ ನಿಜವಾದ ಬಂಡವಾಳ. ಸಮೃದ್ಧಿ ಸಾಧ್ಯವಾದಾಗ ದಿಢೀರೆಂದು ಅದಕ್ಕೆ ಬೇಡಿಕೆ ಇರುವ ಕಡೆಗೆ ಸಾಗಾಟ ಮಾಡುವವರು ಅವರೇ. ಅದೇ ರೀತಿ ಬೇರೆ ಕಡೆ, ಬೇರೆ ರಾಜ್ಯಗಳಲ್ಲಿ ಅಗ್ಗಕ್ಕೆ ಸಿಗುವುದೆಲ್ಲವನ್ನು ಪತ್ತೆಹಚ್ಚಿ ಬೇಡಿಕೆ ಇರುವ ನಮ್ಮಲ್ಲಿಗೆ ತಂದು ಹಾಕುವವರೂ ಅವರೇ.

ಲಾಭ ಮಾಡುವುದೇ ಅವರ ಉದ್ದೇಶ. ಆದರೂ ಕ್ಷಿಪ್ರವಾಗಿ ಸಾಗಾಣಿಕೆ ಮಾಡಿ ತರಕಾರಿಯು ಕೊಳೆತು ಗೊಬ್ಬರವಾಗುವುದನ್ನು ತಪ್ಪಿಸುವುದರ ಜೊತೆಗೆ ಬೆಳೆಗಾರರಿಗೂ ಒಂದಿಷ್ಟು ಹಣ ಸೇರುವಂತೆ ಮಾಡಬಲ್ಲರು. ಅದೇ ವೇಳೆ ತಾವು ಬೆಳೆಗಾರರಿಗಿಂತ ಹೆಚ್ಚು ಲಾಭ ಮಾಡಿಸಿಕೊಳ್ಳಬಲ್ಲರು.

ತರಕಾರಿ ಸಂಬಂಧ ಹೈನುಗಾರಿಕೆಯಲ್ಲಿ ಇರುವಂಥ ಯಾವ ವ್ಯವಸ್ಥೆಯೂ ಇಲ್ಲದಿರವುದರಿಂದ ಖಾಸಗಿ ಉದ್ಯಮ ಏನಿದೆಯೋ ಅದನ್ನೇ ವಿಧಿಯಿಲ್ಲದೆ ಒಪ್ಪಿಕೊಳ್ಳುವಂತಾಗಿದೆ.

ಬೆಂಗಳೂರಿನಲ್ಲಿ ವ್ಯಾಪಕವಾಗಿಯೂ, ಜಿಲ್ಲಾ ಕೇಂದ್ರಗಳಲ್ಲಿ ಹರಡಿಕೊಂಡಂತೆಯೂ ತೋಟಗಾರಿಕೆ ಇಲಾಖೆ ಪರವಾಗಿ ತೆರೆದ ತರಕಾರಿ ಮಳಿಗೆಗಳು ಬಳಕೆದಾರರು ಮತ್ತು ಬೆಳೆಗಾರರ ನೆರವಿಗೆ ಬರುತ್ತಿರುವುದುಂಟು. ಸಗಟು ಪೇಟೆಯಲ್ಲಿ ಮಾರಾಟ ಮಾಡಿದರೆ ರೈತನಿಗೆ ಸಿಗುವ ಹಣಕ್ಕಿಂತ ಹೆಚ್ಚು ಪ್ರತಿಫಲವನ್ನು ರೈತರು ಇಲ್ಲಿ ಪಡೆಯಬಲ್ಲರು. ಆದರೆ ಈ ಅಧಿಕೃತ ವ್ಯವಸ್ಥೆಯು ಪೇಟೆಗೆ ಬರುವ ಎಲ್ಲ ತರಕಾರಿಯನ್ನೂ ಕೊಳ್ಳುವಷ್ಟು ಶಕ್ತವಾಗಿಲ್ಲ. ಇನ್ನಿತರ ಆಡಳಿತ ನ್ಯೂನತೆಗಳೂ ಉಂಟು. ಅಲ್ಲದೆ ಖಾಸಾಗಿಯವರಿಗೆ ಇರುವಂಥ ರಾಜ್ಯದ ಹೊರಗಿನ ತರಕಾರಿ ಮಾರಾಟ ಜಾಲದ ಸಂಪರ್ಕ ಇವರಿಗೆ ಇದ್ದಂತಿಲ್ಲ. ಹೀಗಾಗಿ ರೈತರಿಗೆ ಹಾಗೂ ಬಳಕೆದಾರರಿಗೆ ಪೂರ್ಣ ಪ್ರಮಾಣದ ಸೇವೆ ಸಿಗುವುದಿಲ್ಲ. ಖಾಸಗಿಯವರು ಅನಿವಾರ್ಯ ಎನಿಸಿಬಿಟ್ಟಿದ್ದಾರೆ.

ಕರ್ನಾಟಕ ಸರ್ಕಾರವು ತರಕಾರಿ ವಹಿವಾಟಿಗೆ ಒತ್ತಾಸೆ ಕಟ್ಟಿದ್ದರೂ, ಗಟ್ಟಿಯಾದ ವ್ಯಾಪಕವಾದ ಸಾಂಸ್ಥಿಕ ಚೌಕಟ್ಟನ್ನು ಒದಗಿಸಿಲ್ಲ. ಅದೇ ದುರಂತ.

೨೦.೧೧.೨೦೦೨