‘ಕೆದಕಿಕೊಂಡು ತಿನ್ನುವ ಕೋಳಿಗೆ ಕಾಲು ಮುರಿದಂತೆ’. ಇದು ಕನ್ನಡದ ಗಾದೆಗಳಲ್ಲಿ ಒಂದು.

ಉದ್ಯೋಗಾವಕಾಶಗಳ ಮಟ್ಟಿಗೆ ಭಾರತದ ಕಾರ್ಮಿಕ ಬಂಧುಗಳಿಗೆ ಅನ್ವಯಿಸುವ ಮಾತಿದು.

ಮೈಯಲ್ಲಿ ಕಸುವು ಇದ್ದರೂ, ರಟ್ಟೆ ಬಲ ಇದ್ದರೂ, ಬುದ್ಧಿಶಕ್ತಿಗೆ ಏನೂ ಕೊರತೆ ಇಲ್ಲದಿದ್ದರೂ ಹೊಟ್ಟೆಗೆ ಮಾರ್ಗವಿಲ್ಲ. ಪೂರ್ತಿಯಾಗಿ ತೆರೆದ ಮಾರ್ಗವಿಲ್ಲ.

ಒಂದು ಉದ್ಯೋಗ ಸಿಕ್ಕಿಬಿಟ್ಟರೆ ಸಾಕು. ಜೀವನ ಪರ್ಯಂತ ಅದಕ್ಕೆ ಗಂಟು ಬೀಳುವುದೇ ಸರಿ. ಬದಲಾಯಿಸುವ ಸಾಹಸ ಬಹುಪಾಲು ಇರುವುದಿಲ್ಲ. ಅಧಿಕ ಸಂಬಳ. ಸುಧಾರಿತ ಕೆಲಸ ಎಂಬ ಕಾರಣಕ್ಕಾಗಿ ಕೆಲಸ ಬದಲಾಯಿಸುವುದು ಏನಿದ್ದರೂ ಕುಲೀನ ಹುದ್ದೆಗಳಲ್ಲಿ ಮಾತ್ರ.

ಕಾರ್ಮಿಕರು ಸಂಘ ಶಕ್ತಿಯಿಂದಾಗಿ ಆಗಾಗ ಇಡಿಯಾಗಿ ಎದ್ದು ನಿಲ್ಲುವುದುಂಟು. ಕಳೆದ ೧೦-೧೨ ವರ್ಷಗಳಲ್ಲಿ ಅದೂ ಅಪರೂಪವೆನಿಸಿದೆ.

ಸುಪ್ರೀಂಕೋರ್ಟು ಇದೀಗ ಕಾರ್ಮಿಕರ ಮುಷ್ಕರ ನಡೆಸುವ ಹಕ್ಕನ್ನು ಕಸಿದುಕೊಳ್ಳುವಂಥ ತೀರ್ಪು ನೀಡಿದೆ. ಈಚೆಗೆ ಭಾರತದಾದ್ಯಂತ ನಡೆದ ಸಮಾವೇಶಗಳಲ್ಲಿ ಕಾರ್ಮಿಕರು ಪ್ರತಿಭಟನೆ ವ್ಯಕ್ತಪಡಿಸಿದರು. ಅದನ್ನು ಏನಿದ್ದರೂ ಸಂಸತ್ತು ಶಾಸನ ಮಾಡಿ ಅಂಗೀಕರಿಸಬೇಕು. ಅದನ್ನು ನೆರವೇರಿಸಲು ರಾಜಕೀಯ ಪಕ್ಷಗಳಿಗೆ ಪುರಸೊತ್ತು ಇದ್ದಂತೆ ಕಾಣಿಸುವುದಿಲ್ಲ. ಸದ್ಯ ಪ್ರಜಾಸತ್ತೆ ಜೀವಂತ ಇರುವ ರಾಷ್ಟ್ರವೊಂದರಲ್ಲಿ ಇದೊಂದು ವಿಪರ್ಯಾಸ.

ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಸಂಬಂಧ ಕಾರ್ಮಿಕರು ಜಾಗೃತರಾಗುವುದೇನೋ ಸರಿ. ಆದರೆ ಆರ್ಥಿಕ ಸುಧಾರಣಾ ಕ್ರಮಗಳು ಜಾರಿಗೆ ಬಂದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಇದೇ ಕಾರ್ಮಿಕರು ತಮ್ಮ ಬದುಕಿಗೆ ಆಗುತ್ತಿರುವ ಧಕ್ಕೆ ಬಗೆಗೆ ಇದರ ಒಂದಂಶ ಜಾಗೃತಿಯನ್ನೂ ಪ್ರಕಟಿಸಿಲ್ಲ ಎನ್ನುವುದು ವಾಸ್ತವಾಂಶ.

ಮಾರುಕಟ್ಟೆ ಆರ್ಥಿಕತೆ ಒಂದೊಂದೇ ಹೆಜ್ಜೆಯನ್ನು ಬಲವಾಗಿ ಊರಿದಂತೆಲ್ಲ ಅತಿ ಹೆಚ್ಚು ಹಾನಿಯೇನಾದರೂ ಒಂದು ನಿರ್ದಿಷ್ಟ ಜನ ಸಮೂಹಕ್ಕೆ ನಿಶ್ಚಿತ ಸ್ವರೂಪದಲ್ಲಿ ಆಗಿರುವುದು ಇದ್ದರೆ ಈ ಕಾರ್ಮಿಕ ವರ್ಗಕ್ಕೆ ಮಾತ್ರವೇ! ಆದರೆ ಕಾರ್ಮಿಕ ವರ್ಗ ಎದ್ದು ನಿಂತಿದ್ದು ಇಲ್ಲ.

ಅತ್ಯುತ್ತಮ ಉದಾಹರಣೆ ಎಂದರೆ ಸ್ವಯಂ ನಿವೃತ್ತಿಗೊಳಿಸುವ ಯೋಜನೆಯೊಂದು ಮುಖ್ಯವಾಗಿ ಸರ್ಕಾರಿ ವಲಯದ ಉದ್ಯಮ ಸಂಸ್ಥೆಗಳಲ್ಲಿ, ಜಾರಿಗೆ ಬಂದಿತು. ಭವಿಷ್ಯ ನಿಧಿ ಮಾದರಿಯಲ್ಲಿ ಯಾವುದೊ ಒಂದು ಲೆಕ್ಕಾಚಾರದಲ್ಲಿ ಇಡುಗಂಟಿನ ಪರಿಹಾರ ನೀಡಿ ಕೆಲಸಗಾರರನ್ನು ಮನೆಗೆ ಕಳುಹಿಸುವುದು ಈ ಯೋಜನೆ ಗುರಿ. ಮೊದಲನೆಯದಾಗಿ ಇದು ‘ಸ್ವಯಂ’ ನಿವೃತ್ತಿ ಅಲ್ಲ. ಆಡಳಿತ ವರ್ಗದವರು ಬೊಟ್ಟು ಮಾಡಿದವರೆಲ್ಲ ಈ ಉರುಳಿಗೆ ಕೊರಳು ಒಡ್ಡಬೇಕಾಯಿತು.

ಈ ಯೋಜನೆ ಅತ್ಯಾಕರ್ಷಕ ಎಂದೂ, ಸುವರ್ಣಾವಕಾಶ ಎಂದೂ; ಅನತಿ ಭವಿಷ್ಯದಲ್ಲಿ ವಜಾ ಆಗಬೇಕಾಗಿ ಬಂದರೆ ಇಷ್ಟು ಪರಿಹಾರ ಕೂಡಾ ಸಿಗುವುದಿಲ್ಲವೆಂದೂ ಬಿಂಬಿಸಲಾಯಿತು. ಎರಡನೆಯದಾಗಿ ಉದ್ಯೋಗಿಗಳು ಸಹಾ ಇಡುಗಂಟಿನ ಆಸೆಗೆ ಸ್ವತಃ ಬಲಿಯಾದರು. ಸ್ವಂತ ನಿವೃತ್ತಿ ಯೋಜನೆ ದೇಶದ ಎಲ್ಲೆಡೆ ಚೆದುರದಂತೆ ವ್ಯಾಪಕವಾಗಿ ಜಾರಿಗೆ, ನಿಧಾನವಾಗಿ ಜಾರಿಗೆ ಬಂತು.

ಸ್ವಯಂ ನಿವೃತ್ತಿಗೆ ಪಾತ್ರರಾದವರು ಎರಡು ವಿಚಾರ ಇಟ್ಟುಕೊಂಡಿದ್ದರು. ಪರಿಹಾರ ಧನವು ಸಾಕಷ್ಟು ಬಡ್ಡಿಯನ್ನು ತಂದುಕೊಡುತ್ತದೆ. ಅದರ ಜೊತೆಗೆ ಉದ್ಯೋಗಕ್ಕೆ ಬದಲಾಗಿ ಇನ್ನೊಂದು ಉದ್ಯೋಗವನ್ನೋ, ಸ್ವಯಂ ವೃತ್ತಿಯನ್ನೋ ಕೈಗೊಳ್ಳಬಹುದು. ಆದರೆ ಅದೆಲ್ಲ ನಿಷ್ಫಲವಾಯಿತು. ಸರ್ಕಾರ ಅಂಗೀಕರಿಸಿದ ನೀತಿ ಅನ್ವಯ ರಿಸರ್ವ್ ಬ್ಯಾಂಕು ಬಡ್ಡಿ ದರಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಸತತವಾಗಿ ಇಳಿಸುತ್ತಾ ಬಂತು. ಪರಿಣಾಮವಾಗಿ ಪರಿಹಾರ ಧನ ನಿಷ್ಪಲಗೊಂಡಿತು. ಬಡ್ಡಿ ದರ ಅರ್ಧಕ್ಕರ್ಧ ಇಳಿದುಹೋಗಿದೆ.

ಜೊತೆಗೆ ಫಲಾನುಭವಿಗಳಲ್ಲಿ ಬಹುತೇಕ ಜನ ಇಡುಗಂಟನ್ನೇ ತಿಂದು ಹಾಕಿದ್ದಾರೆ. ಲಾಭಕರವಾಗಿ ಹೂಡಿರುವುದು ಕಡಿಮೆ.

ಇನ್ನು ಬೇರೆ ಉದ್ಯೋಗ ಅಥವಾ ಕಸಬು ಕೈಗೊಂಡ ವಿಚಾರ. ಈ ದಿಕ್ಕಿನಲ್ಲಿ ಯಶಸ್ವಿ ಆಗಿರುವವರು ಬಹುಶಃ ಶೇ ೧೫ ರಿಂದ ೨೦ ಜನ ಮಾತ್ರ. ಮಿಕ್ಕವರೆಲ್ಲ ಅತಂತ್ರರು. ವಾಸ್ತವವಾಗಿ ಅಧಿಕ ಸಂಬಳ ಬರುವ, ಒಳ್ಲೆಯ ಬೇಡಿಕೆಯ, ಇನ್ನೊಂದು ಉದ್ಯೋಗವನ್ನು ಪೂರ್ವಭಾವಿಯಾಗಿಯೇ ಹುಡುಕಿಕೊಂಡು ಸ್ವಯಂ ನಿವೃತ್ತಿ ಪಡೆದವರ ಸಂಖ್ಯೆ ಬಹಳ ಕಡಿಮೆ. ಆಡಳಿತ ವರ್ಗದವರು ತಮ್ಮ ಪಾಡಿಗೆ ಇಂತಿಂಥವರು ಇನ್ನು ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ ಎಂದು ಸ್ವಯಂ ನಿವೃತ್ತಿ ಯೋಜನೆಗೆ ದೂಡಿದ್ದರಿಂದ ಕೆಲಸ ಕಳೆದುಕೊಂಡವರೇ ಹೆಚ್ಚು.

ಇಂಥವರ ಸಮಸ್ಯೆಗೆ ಒಂದು ಮಾನವೀಯ ಮುಖ ಇದೆ ಎಂದು ಪರಿಗಣಿಸಿ ಸಂತಾಪ ವ್ಯಕ್ತಪಡಿಸಿದವರೇ ಕಡಿಮೆ. ಇನ್ನು ಇಂಥ ಯೋಜನೆಗಳ ವಿರುದ್ಧ ಚಳವಳಿ ನಡೆಸುವ ಮಾತು ದೂರವೇ ಉಳಿಯಿತು.

ಪರಿಹಾರ ಧನವನ್ನಾಗಲೀ, ನಿವೃತ್ತಿ ವೇತನದಲ್ಲಾಗಲೀ ಏಕರೂಪತೆ ಇಲ್ಲ. ಇಬ್ಬರು ನಿವೃತ್ತರು ಎರಡು ಬಗೆಯ ಸೌಲಭ್ಯ ಪಡೆದರು. ಅನ್ಯಾಯ ಎಂದು ಗೋಳಿಡುವವರನ್ನು ಕೇಳುವವರಿಲ್ಲ.

ಸ್ವಯಂ ನಿವೃತ್ತಿ ಮಾತ್ರವಲ್ಲ;  ಷೇರು ವಿಕ್ರಯದ ಕಾರಣ, ಪರಸ್ಪರ ಕಂಪೆನಗಳ ವಿಲೀನ ಅಥವಾ ವಶ ಎನ್ನುವ ಸನ್ನಿವೇಶಗಳಲ್ಲಿ ಆಡಳಿತ ವರ್ಗಗಳವರು ತಮ್ಮ ಪಾಲಿಗೆ ಅನುತ್ಪಾದಕ ಎನ್ನುವ ಹುದ್ದೆಗಳಿಂದ ಜನರನ್ನು ನಿರ್ದಯವಾಗಿ ಕಿತ್ತೊಗಯುತ್ತಾರೆ. ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತದೆ. ಚಕಾರ ಎತ್ತುವಂತಿಲ್ಲ. ಏಕೆಂದರೆ ಕಾರ್ಮಿಕ ಬಲವನ್ನು ತಮ್ಮ ಬಲ ಎಂದು ಭಾವಿಸುವ ಎಡಪಂಥ ಶಕ್ತಿಗಳು ನಿರ್ವೀರ್ಯಗೊಳ್ಳುತ್ತಿವೆ. ಪ್ರಪಂಚದಾದ್ಯಂತ ಬಲಪಂಥ ಬಲಗೊಳ್ಳುತ್ತಿದೆ. ಚೀನಾದಂಥ ರಾಷ್ಟ್ರ ಸಹಾ ಮಾರುಕಟ್ಟೆ ಆರ್ಥಿಕತೆಗೆ, ತನ್ಮೂಲಕ ಬಂಡವಾಳ ವಾದಕ್ಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತ ಹೆಚ್ಚು ಮಾರುಹೋಗಿದೆ. ಕಾರ್ಮಿಕರ ಮೂಲಭೂತ ಹಕ್ಕು ಎಂಬಂಥ ಮಾತುಗಳೆಲ್ಲ ಇದೀಗ ನಗೆಪಾಟಲು. ಭಾರತದಲ್ಲಿ ಸದ್ಯ ಆಡಳಿತ ನಡೆಸುತ್ತಿರುವುದು ಬಲಪಂಥೀಯ ಸರ್ಕಾರವೇ. ಮುಂದಿನ ಬಾರಿ ವಿಭಿನ್ನವೆನಿಸಿದ ಯಾವುದೇ ಸರ್ಕಾರ ಬಂದರೂ ಪರಿಸ್ಥಿತಿ ಬದಲಾಗುವುದಿಲ್ಲ.

ಮಾರುಕಟ್ಟೆ ಪ್ರಧಾನ ಆರ್ಥಿಕ ವ್ಯವಸ್ಥೆಯಲ್ಲಿ ನಿರೂಪಿತವಾಗುವಂತೆ ಕಾರ್ಮಿಕರು ಸಹಾ ಮಾರಾಟಗಾರರೇ ಸರಿ. ಒಂದು ದೇಶದಲ್ಲಿ ಸರಕು ತಯಾರಾಗುತ್ತದೆ; ಮಾರಾಟ ಮಾಡಬಲ್ಲ ಸೇವಾ ಸೌಲಭ್ಯಗಳೂ ಸೃಷ್ಟಿಗೊಳ್ಳುತ್ತವೆ. (ಉದಾಹರಣೆಗೆ ಟೆಲಿಫೋನ್ ಸೇವೆ ಒದಗಿಸುವುದು) ಬಿಡಿ ಬಿಡಿಯಾಗಿ ಕಾರ್ಮಿಕರು ಸಹಾ ತಮ್ಮ ಸೇವೆಯನ್ನು ಮಾರಾಟ ಮಾಡುವವರೇ ಸೈ.

ಆದರೆ ಕಾರ್ಮಿಕರಿಂದ ಸೇವೆಯನ್ನು ಕೊಳ್ಳುವ ವ್ಯವಸ್ಥೆ ಏನಿದೆಯೋ ಅದು ಈ ಕಾಲಕ್ಕೆ ಅನುಗುಣವಾಗಿಲ್ಲ. ಅಂದರೆ ವಿಶ್ವ ಪೈಪೋಟಿಯನ್ನು ಎದುರಿಸಿ ಸರಕನ್ನು ಅಥವಾ ಸೇವಾ ಸೌಲಭ್ಯವನ್ನು ಅತ್ಯಂತ ಅಗ್ಗವಾಗಿ ಅತ್ಯುತ್ತಮವಾಗಿ ತಯಾರಿಸಬಲ್ಲ ರಾಷ್ಟ್ರ ಮಾತ್ರ ಪ್ರಬಲವಾಗಬಲ್ಲದು. ಆದ್ದರಿಂದ ಕಾರ್ಮಿಕರಿಂದ ಕೊಳ್ಳಬಲ್ಲ ಸೇವೆ ತನ್ನ ಪಾಲಿಗೆ ಅಗ್ಗವಾಗಿ ಪರಿಣಮಿಸಬೇಕು; ರಫ್ತು ಮಾಡುವಾಗ ಅದು ಅಗ್ಗವಾಗಿರಲಿಕ್ಕೇ ಬೇಕು ಎಂದು ಉದ್ಯಮಿಗಳು ಬಯಸುತ್ತಾರೆ. ಅಂದರೆ ಕಾರ್ಮಿಕ ಮಾರುಕಟ್ಟೆ ಏನಿದೆಯೋ ಅದು ಬದಲಾಗಬೇಕು; ಆರ್ಥಿಕ ಸುಧಾರಣೆ ತರಹ ಕಾರ್ಮಿಕ ಸುಧಾರಣೆ ಆಗಬೇಕು ಎನ್ನುವುದು ಈಗಿನ ಜರೂರು. ಅದನ್ನು ಅಗ್ಗ ಮಾಡಿಸುವುದು ಹೇಗೆ ಎನ್ನುವುದೇ ಈಗ ಸರ್ಕಾರದ ಮುಂದಿನ ಸವಾಲು.

ಉದ್ಯಮಿಗಳ ಪ್ರಕಾರ ರಾಷ್ಟ್ರದಲ್ಲಿ ಜಾರಿಯಲ್ಲಿರುವ ವೇತನ ನೀತಿ ಏನಿದೆಯೋ ಅದು ಬದಲಾಗಬೇಕು. ಅದನ್ನು ಕಾರ್ಮಿಕ ವರ್ಗದವರು ಸುಲಭವಾಗಿ ಒಪ್ಪುವುದಿಲ್ಲ. ಆದರೆ ಸರ್ಕಾರ ಏನನ್ನಾದರೂ ಮಾಡಲೇಬೇಕು. ಅಧ್ಯಯನಗಳ ಪ್ರಕಾರ ೨೦೧೨ರ ಹೊತ್ತಿಗೆ ಹೊಸ ಪೀಳಿಗೆಯ ದುಡಿಯುವ ಕೈಗಳು ಅಪಾರವಾಗಿ ತಯಾರಾಗಿರುತ್ತವೆ. ಅವುಗಳಿಗೆ ಕೆಲಸ ಕೊಡಲು ಈಗಂದೀಗ ಬುನಾದಿ ಸೃಷ್ಟಿಸುವ ಕ್ರಮಗಳನ್ನು ರೂಪಿಸದಿದ್ದರೆ ಅರಾಜಕತೆ ಭುಗಿಲೇಳುತ್ತದೆ.

ವಾಸ್ತವವಾಗಿ ಕಾರ್ಮಿಕರ ಸಮಸ್ಯೆ ನೀಗಿಸುವಲ್ಲಿ ಸರ್ಕಾರಗಳು ವಹಿಸಿರುವ ಪಾತ್ರವಾದರೂ ಏನು? ಈ ಐದು ದಶಕಗಳಲ್ಲಿ ನಡೆದಿದ್ದೇನು? ಸಾಧಿಸಿದ್ದೇನು? ಬಹಳ ಕಡಿಮೆ. ಆಡಳಿತ ವರ್ಗದವರು ಬೇಕೆಂದಾಗ ತೆಗೆದು ಹಾಕಲು ಸಾಧ್ಯವಾಗದಂಥ. ತಿಂಗಳ ಸಂಬಳದ ಆಧಾರದ ಮೇಲಿನ ಉದ್ಯೋಗಗಳು ಎಷ್ಟು ಮಾತ್ರ ಜನಕ್ಕೆ ಸಿಕ್ಕೀತು? ನೂರರಲ್ಲಿ ಎಂಟು ಜನ ಮಾತ್ರ ಅಂಥ ಅದೃಷ್ಟಶಾಲಿಗಳು. ಇಂಥವರಾದ ಸಂಘಟಿತ ಕಾರ್ಮಿಕರು ಶೇ. ೮ ಮಾತ್ರ. ಅವರಲ್ಲಿ ಶೇ. ೨.೫ ಭಾಗ ಕೆಲಸಗಾರರು ಖಾಸಗಿ ವಲಯದ ಮಾಲೀಕರಿಗಾಗಿ ದುಡಿಯುವವರು. ಈ ಶೇ. ೮ ಭಾಗ ಕಾರ್ಮಿಕರು ಬಹುಪಾಲು ಕಾರ್ಖಾನೆ ಕಾರ್ಮಿಕರು ಹಾಗೂ ಸರ್ಕಾರಿ ಖಾಸಗಿ ಕಚೇರಿಗಳಿಗೆ ಕೆಲಸಕ್ಕೆ ಹೋಗುವವರು. ಇವರಿಗೆ ಮಾತ್ರವೇ ಕಾನೂನಿನ ರಕ್ಷಣೆ. ಕೃಷಿಕರು, ಕೃಷಿಕಾರ್ಮಿಕರು ಒಳಗೊಂಡಂತೆ ನಿಗದಿ ಸಂಬಳವಿಲ್ಲದೆ ದುಡಿಯುವವರೆಲ್ಲ ಅಸಂಘಟಿತ ಕಾರ್ಮಿಕರೇ. ಅವರು ಶೇ. ೯೨ ಇದ್ದಾರೆ.

ಸರ್ಕಾರದ ನೀತಿ ಇದುವರೆಗೆ ಉದ್ಯೋಗ ಸೃಷ್ಟಿಸುವುದೇ ಆಗಿತ್ತು. ಯಾವ ಸರ್ಕಾರಿ ಇಲಾಖೆ ಅಥವಾ ಸರ್ಕಾರಿ ವಲಯದ ಯಾವ ಕಾರ್ಖಾನೆ ತೆಗೆದುಕೊಂಡರೂ, ಜನ, ಜನ, ಜನ. ಎಷ್ಟು ಬೇಕೋ ಅಷ್ಟು ಎನ್ನುವ ಮಾತೇ ಇಲ್ಲ. ಉತ್ಪಾದಕವೋ, ಅನುತ್ಪಾದಕವೋ ಜನರನ್ನು ತುಂಬಿಕೊಳ್ಳುವುದು ಸರ್ಕಾರದ ನೀತಿ. ಬೇಕಿಲ್ಲದ ಕಡೆಯಲ್ಲಿ ಜನರನ್ನು ತುಂಬಿಕೊಳ್ಳುವುದು; ಶಿಕ್ಷಣ, ರಕ್ಷಣೆ, ಕಾನೂನು ಪಾಲನೆ ಮುಂತಾದ ಕಡೆ ಜನ ಕಡಿಮೆ. ಅದೊಂದು ವಿಪರ್ಯಾಸ. ಇದೀಗ ಸರ್ಕಾರಗಳು ಸಹಾ ಕಚೇರಿಗಳನ್ನು ತುಂಬಿಸಿಕೊಳ್ಳುವುದು ಬೇಡ ಎನ್ನತೊಡಗಿದೆ. ಆಡಳಿತ ವೆಚ್ಚದ ದೊಡ್ಡ ಪಾಲು ತನ್ನ ನೌಕರರ ಸಂಬಳ ಪೂರೈಸುವುದಕ್ಕೇ ಬೇಕಾಗುತ್ತದೆ.

ಇನ್ನು ಸರ್ಕಾರ ವೇತನ ನಿಗದಿ ಕುರಿತಂತೆ ಕನಿಷ್ಠ ವೇತನ ನಿಗದಿ ಶಾಸನ ಜಾರಿ ಮಾಡುತ್ತದೆ. ಸಂಘಟಿತರಿಗೂ, ಅಸಂಘಟಿತರಿಗೂ ಶಾಸನಬದ್ಧ ಕನಿಷ್ಠ ವೇತನ ನಿಗದಿ ಹೀಗೆ ಸಾಧ್ಯ. ಆದರೆ ಅಸಂಘಟಿತರಿಗೆ ನಿಗದಿ ಮಾಡಿದ ಕನಿಷ್ಠ ವೇತನವನ್ನು ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಸಂಘಟಿತರಿಗೆ ನಿಗದಿ ಮಾಡಿದ ಶಾಸನಬದ್ಧ ಕನಿಷ್ಠ ವೇತನ ಏನಿದೆಯೋ ಅದಕ್ಕಿಂತ ಹೆಚ್ಚಿಗೆಯೇ ಕೊಡಿಸುತ್ತದೆ.

ಈ ತನಕ ಸರ್ಕಾರಗಳು ಉದ್ಯೋಗ ಭದ್ರತೆಯ ಬಗೆಗೆ ಯೋಚಿಸಿದಷ್ಟು ವರಮಾನ ಭದ್ರತೆಯ ಬಗೆಗೆ ಯೋಚಿಸಿಲ್ಲ. ಜೀವಮಾನ ಪರ್ಯಂತ ಕಾರ್ಮಿಕರನ್ನು ಉದ್ಯೋಗದಾತರು ಸಂರಕ್ಷಿಸಬೇಕು ಎಂದು ಸರ್ಕಾರ ಭಾವಿಸುತ್ತದೆಯೇ ಹೊರತು ಕಾರ್ಮಿಕರ ಕೆಲಸ ಉತ್ಪಾದಕವಾಗಿರಬೇಕು; ಉದ್ಯಮದ ಪಾಲಿಗೆ ಲಾಭಕರ ಆಗಿರಬೇಕು ಎಂದು ಒತ್ತಾಯಿಸುವುದಿಲ್ಲ. ಅವರನ್ನು ಸಾಕಿರಿ; ಅವರಿಂದ ಕೆಲಸ ತೆಗೆದುಕೊಳ್ಳಿರಿ ಎಂದು ಉದ್ಯಮಗಳಿಗೆ ಹೇಳುವುದಷ್ಟೇ ಅದರ ಮುಖ್ಯ ಕೆಲಸವಾಗಿದೆ.

ಈಗ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ಕೊಟ್ಟ ಮೇಲೆ ಉದ್ಯಮ ಪ್ರತಿನಿಧಿಗಳು ಎತ್ತುವ ಪ್ರಶ್ನೆಗಳಿಂದ ಸರ್ಕಾರಗಳು ತತ್ತರಿಸುವಂತಾಗಿದೆ. ಕಾರ್ಮಿಕರ ಪರವಾಗಿ ಪೂರ್ತಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಅದೇ ವೇಳೆ ಮುಕ್ತ ಮಾರುಕಟ್ಟೆ ಬೇಡುವುದನ್ನೆಲ್ಲ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಳೆಯ ಉದ್ಯಮಗಳು ನಷ್ಟ ಪೀಡೆಗೆ ಗುರಿಯಾದಂತೆಲ್ಲ ಕಾರ್ಮಿಕರು ಒಂದೇ ಸಮನೆ ಕೆಲಸ ಕಳೆದುಕೊಳ್ಳುತ್ತಿದ್ದರೆ ಸರ್ಕಾರ ಅವರ ನೆರವಿಗೆ ಧಾವಿಸಲು ಶಕ್ತವಾಗುತ್ತಿಲ್ಲ.

ಈಗಲೂ ಸರ್ಕಾರದ ಅನುಮತಿ ಇಲ್ಲದೆ ಉದ್ಯಮಿಗಳು ಕೆಲಸಗಾರರನ್ನು ವಜಾ ಮಾಡುವಂತಿಲ್ಲ. ಹಾಗೆನ್ನುವ ಕಾನೂನು ಇದೆ. ೧೦೦ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಘಟಕಗಳಿಗೆಲ್ಲ ಇದು ಅನ್ವಯಿಸುತ್ತದೆ. ೧೦೦ರ ಬದಲು ೧೦೦೦ಕ್ಕಂತ ಹೆಚ್ಚಿಗೆ ಇರುವ ಕಾರ್ಖಾನೆಗಳಿಗೆ ಇದನ್ನು ಅನ್ವಯಿಸುವಂತೆ ತಿದ್ದುಪಡಿ ಮಾಡಲು ೨೦೦೧ರಲ್ಲಿ ಸರ್ಕಾರ ಯೋಚಿಸಿತು. ಅದು ಜಾರಿ ಆಗಿದ್ದರೆ ಮುಕ್ಕಾಲು ಪಾಲು ಕಾರ್ಮಿಕರಿಗೆ ಅಭದ್ರತೆ ಉಂಟಾಗುತ್ತಿತ್ತು. ವಿರೋಧ ಬಂತು. ಏನೂ ತೀರ್ಮಾನವಾಗಲಿಲ್ಲ. ೧೦೦ರ ಬದಲು ೩೦೦ ಎಂದು ತಿದ್ದುಪಡಿ ಮಾಡುವ ಬಗೆಗೆ ವಿಚಾರ ನಡೆದಿದೆ.

ಆರ್ಥಿಕ ಸುಧಾರಣೆ ಜಾರಿಗೆ ಬಂದ ೧೯೯೧ರಲ್ಲೇ ನಷ್ಟಪೀಡಿತ ಘಟಕಗಳನ್ನು ಮುಚ್ಚಿಬಿಡುವುದಕ್ಕೆ ಅವಕಾಶ ಕೊಡಬೇಕೆಂಬ ವಿಚಾರ ಪ್ರಸ್ತಾಪವಾಯಿತು. ಆಗಿನಿಂದ ನಷ್ಟಪೀಡಿತ ಘಟಕಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಅಧಿಕೃತ ಅಂದಾಜಿನ ಪ್ರಕಾರವೇ ೪೫ ಲಕ್ಷ ಕಾರ್ಮಿಕರು ನಷ್ಟಪೀಡಿತ ಘಟಕಗಳಲ್ಲಿದ್ದಾರೆ. ಖಾಸಗಿ ಉದ್ಯಮದ ಪಾಲೇ ಇದರಲ್ಲಿ ಹೆಚ್ಚು.

ಕಾರ್ಮಿಕ ಸಂಘಗಳು ಮತ್ತು ಎಡಪಕ್ಷಗಳು ಸಹಾ ಹೊಸ ವ್ಯವಸ್ಥೆಯನ್ನು ದ್ವೇಷಿಸುವುದನ್ನು ಕಡಿಮೆ ಮಾಡಬೇಕು. ಇಷ್ಟವಿರಲಿ ಇಲ್ಲದಿರಲಿ ಮಾರುಕಟ್ಟೆ ಪ್ರಧಾನ ಆರ್ಥಿಕತೆ ಜಾರಿ ಆಗಿಯೇ ಆಗುತ್ತದೆ. ನಿಧಾನವಾಗಬಹುದು ಮಾತ್ರ. ಉತ್ಪಾದಕತೆಗೆ ಲಗತ್ತಾದಂತೆ ವೇತನ ಎಂಬುದನ್ನು ಒಪ್ಪಿಕೊಳ್ಳದೇ ಅನ್ಯ ಮಾರ್ಗ ಇರುವುದಿಲ್ಲ.

ಬಂಡವಾಳ, ವಿದೇಶಿ ನೇರ ಬಂಡವಾಳವೇ ಮುಂತಾದ ರೂಪದಲ್ಲಿ, ಬರುವುದು ನಿಧಾನವಾಗುತ್ತಿದೆ ಎಂಬ ಅಳುಕು ಭಾರತಕ್ಕಿತ್ತು. ಈಗ ಅದು ನಿವಾರಣೆ ಆಗುತ್ತಿದೆ.

ಬಂಡವಾಳವನ್ನು ಉದ್ಯಮಕ್ಕೇ ಹೆಚ್ಚುವುದಕ್ಕೆ ಸಾಧ್ಯವಾಗಬೇಕಾದರೆ ತುರ್ತಾಗಿ ಕಾರ್ಮಿಕ ವಿಷಯಗಳ ಸುಧಾರಣೆ ಶೀಘ್ರವಾಗಿ ಆಗಬೇಕಿದೆ.

೦೮.೧೦.೨೦೦೩