‘ಸರ್ಕಾರ ನಮ್ಮ ತಾಯಿ ತಂದೆ’- ಹೀಗೆ ಹೇಳುವವರು ಯಾರೂ ಈಗ ಸಿಗುವುದಿಲ್ಲ. ‘ಸರ್ಕಾರ ಯಾವುದಕ್ಕೆ ಕೈ ಹಾಕುತ್ತದೋ ಕೆಲಸ ಹಾಳಾದಂತೆಯೇ!’- ಈ ಉದ್ಗಾರ ಈಗ ಜನಜನಿತ.

ಕೇಬಲ್ ಟಿವಿ ವಿಚಾರದಲ್ಲಿ ಈ ಉದ್ಗಾರವೇ ಚಾಲ್ತಿಯಲ್ಲಿರುವುದು.

ಕೇಬಲ್‌ನವರು ಬಳಕೆದಾರರಿಂದ ತಾವು ಎಷ್ಟು ಹಣ ವಸೂಲು ಮಾಡುತ್ತಾರೋ ಅದರ ಲೆಕ್ಕ ಕೊಡುವುದಿಲ್ಲ. ಕಡಿಮೆ ಆದಾಯ ತೋರಿಸುತ್ತಾರೆ ಎಂಬುದು ಸೀರಿಯಲ್ ಕಾರ್ಯಕ್ರಮಗಳ ನಿರ್ಮಾಪಕರು, ಅಂದರೆ ಸ್ಥೂಲವಾಗಿ ಹೇಳಬಹುದಾದರೆ ಪ್ರಸಾರಕರು, ಮಾಡುವ ದೂರು; ಕೊನೆಗೆ ಪ್ರಸಾರಕರು ಕೇಬಲ್‌ನವರಿಗೆ ವಿಧಿಸುವ ಶುಲ್ಕ ಜಾಸ್ತಿ ಮಾಡಿದರು. ಆಗ ಕೇಬಲ್‌ನವರು ಸಂಪು ಹೂಡಿದರು.

ಈ ಘಟ್ಟದ ತನಕ ಸುಮ್ಮನಿದ್ದ ಕೇಂದ್ರ ಸರ್ಕಾರ ತಲೆ ಹಾಕಿತು. ಕೇಬಲ್‌ನವರು ಮತ್ತು ಪ್ರಸಾರಕರು ಪರಸ್ಪರ ಜಗಳ ಆಡಿ ಬಳಕೆದಾರರ ಪಾಲಿಗೆ ಟಿ.ವಿ ಮೇಲೆ ಪುಟ್ಟ ಪೆಟ್ಟಿಗೆಯಾಕಾರದ ಸಾಧನವನ್ನು ಇರಿಸುವುದು. ಆ ತಲೆ ಪೆಟ್ಟಿಗೆಯು ಟಿವಿ ಬಳಕೆದಾರ ತನಗೆ ಬೇಕಾದ ಚಾನೆಲ್‌ಗಳನ್ನು ಒಳಕ್ಕೆ ಬಿಟ್ಟುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಕಾರ್ಯಕ್ರಮಗಳನ್ನು ಉಚಿತವಾಗಿ ಪೂರೈಸುವ ಚಾನೆಲ್‌ಗಳು ಇರುತ್ತವೆ. ಅವುಗಳ ಕಾರ್ಯಕ್ರಮಗಳನ್ನು ಪೂರೈಸುವುದಕ್ಕೆ ಕೇಬಲ್‌ನವರು ತಲಾ ಚಾನೆಲ್‌ಗೆ ಇಂತಿಷ್ಟು ಎಂದು ವಸೂಲು ಮಾಡುವುದಿಲ್ಲ. ಆದರೆ ಒಟ್ಟಾರೆಯಾಗಿ ಇಂತಿಷ್ಟು ಎಂದು ಉಚಿತ ಚಾಲೆನ್‌ಗಳ ಬಾಬಿಗೆ ಶುಲ್ಕ ನಿಗದಿ ಮಾಡಲಾಗುವುದು. ಜೊತೆಗೆ ಹಣ ಕೊಟ್ಟು ಕಾರ್ಯಕ್ರಮ ವೀಕ್ಷಿಸಿರೆಂದು ಹೇಳುವ ಚಾನೆಲ್‌ಗಳಿಗೆ ಪ್ರತ್ಯೇಕ ಶುಲ್ಕ ಬಳಕೆದಾರರು ತಲೆಪೆಟ್ಟಿಗೆ ಬಳಸಬೇಕು. ಬೇಕಾದ ‘ಪಾವತಿ ಚಾನೆಲ್‌’ಗಳ ಕಾರ್ಯಕ್ರಮಗಳನ್ನೆಲ್ಲ ವೀಕ್ಷಿಸಬಹುದು- ಇದು ಹೊಸ ವ್ಯವಸ್ಥೆ.

ತಲೆ ಪೆಟ್ಟಿಗೆ ತಯಾರಕರಿಗೆ ಲೈಸನ್ಸ್ ಕೊಡುವ ಕೆಲಸ ಮುಗಿಯಿತು. ಅವರು ತಯಾರಿಕೆ ಆರಂಭಿಸಿದ್ದಾರೆ. ಒಂದಕ್ಕೆ ಏಳು ಸಾವಿರ ರೂಪಾಯಿನಷ್ಟು ಖರ್ಚು ಬರುತ್ತಿದೆ. ದೊಡ್ಡ ಪ್ರಮಾಣದಲ್ಲಿ ತಯಾರಿಕೆ ನಡೆದಿಲ್ಲ. ಸರ್ಕಾರ ಕೂಡಾ ತಲೆ ಪೆಟ್ಟಿಗೆ ಇಟ್ಟುಕೊಂಡು ಉಚಿತ ಚಾನೆಲ್‌ಗಳನ್ನೂ, ಪಾವತಿ ಚಾನೆಲ್‌ಗಳನ್ನೂ ವೀಕ್ಷಕರು ಚಾಲೂ ಮಾಡಿಕೊಳ್ಳುವ ಪದ್ಧತಿಯನ್ನು ನಾಲ್ಕು ಮಹಾನಗರಗಳಲ್ಲಿ ಜಾರಿಗೆ ತಂದಿದೆ. ಜುಲೈ ೧೫ ಆಖೈರು ದಿನಾಂಕ: ಅನಂತರ ಹಳೇ ಪದ್ಧತಿ ಇರುವುದಿಲ್ಲ ಎಂಬ ನಿಯಮ. ದೆಹಲಿ, ಮುಂಬೈ, ಕೊಲ್ಕತ್ತಾ, ಚನ್ನೈಗಳಲ್ಲಿ ಜುಲೈ ೧೫ರ ನಂತರ ತಲೆ ಪೆಟ್ಟಿಗೆ ಕಡ್ಡಾಯ. ಇದು ಸರ್ಕಾರದ ನಿರ್ಧಾರ. ಆದರೆ ಈ ಮಹಾನಗರಗಳಲ್ಲಿ ಕೂಡಾ ಕೇಬಲ್ ಆಪರೇಟರ್‌ಗಳಿಗೆ ಅವರು ಕೇಳುವಷ್ಟು ಹಣ ಕೊಟ್ಟು ಅವರು ಸಂಪರ್ಕಿಸಿಕೊಟ್ಟ ಚಾನೆಲ್‌ಗಳ ಕಾಯ್ಯಕ್ರಮಗಳ ಪೈಕಿ ತಮಗೆ ಬೇಕಾದ್ದನ್ನು ಬ್ರೌಸ್ ಮಾಡಿಕೊಳ್ಳುವ ಪದ್ಧತಿಗೇ ಬಳಕೆದಾರರು ಜೋತು ಬಿದ್ದಿದ್ದಾರೆ.

ಕೇಬಲ್‌ನವರ ಧೋರಣೆಯಿಂದ ಬೇಸತ್ತಿದ್ದರೂ ಅವರು ಮಾಡುವ ಶುಲ್ಕ ಏರಿಕೆ ವಿರುದ್ಧ ಗೊಣಗಿಕೊಂಡಾದರೂ ಸಮ್ಮತಿಸುವ ಧೋರಣೆ ತಳೆದಿದ್ದಾರೆಯೇ ಹೊರತು ತಲೆಪೆಟ್ಟಿಗೆ ಕೊಳ್ಳುವ ಇಡಿಯಾಗಿ ಒಮ್ಮೆ ಹಣ ಕೊಡುವುದಕ್ಕೆ ಸುಲಭವಾಗಿ ತಮ್ಮತಿಸುತ್ತಿಲ್ಲ. ಇದು ವಸ್ತುಸ್ಥಿತಿ.

ಇಡೀ ವ್ಯವಸ್ಥೆಯಲ್ಲಿ ಲಾಭವನ್ನು ‘ಹಂಚಿಕೊಳ್ಳುವ’ ಧೋರಣೆ ಕಾಣಿಸುವುದಿಲ್ಲ. ಬದಲು ‘ಬಾಚಿಕೊಳ್ಳುವ’ ಪ್ರವೃತ್ತಿಯೇ ವಿಜೃಂಭಿಸುತ್ತದೆ. ಕೇಬಲ್‌ಆಪರೇಟರ್‌ಗಳೆಂದರೆ ತಂತಿ ಹಾಯಿಸಿ ಬಳಕೆದಾರರ ಮನೆ ಬಾಗಿಲಿಗೆ ಕಾರ್ಯಕ್ರಮಗಳನ್ನು ತರುವವರು. ಅವರು ಸ್ಯಾಟಲೈಟುಗಳಿಂದ ಚಾನೆಲ್‌ಗಳಿಂದ ಸೆಳೆದುಕೊಳ್ಳುವ ಏರ್ಪಾಡು, ಪ್ರಸಾರಕರ ಜೊತೆ ಅವರು ಕಾರ್ಯಕ್ರಮ ಖರೀದಿ ಸಂಬಂಧ ನಡೆಸುವ ವ್ಯವಹಾರ ಇದೆಲ್ಲ ಇಡೀ ವ್ಯವಸ್ಥೆಯ ಒಂದು ಮುಖ.

ಪ್ರಸಾರಕರೆಂದರೆ ಸ್ಯಾಟಲೈಟುಗಳ ಮೂಲಕ ಕಾರ್ಯಕ್ರಮಗಳನ್ನು ಪೂರೈಸುವವರು. ಕಾರ್ಯಕ್ರಮ ನಿರ್ಮಾಪಕರು ಈ ಪೂರೈಕೆದಾರರೆಂಬ ವಿವಿಧ ಚಾನೆಲ್‌ಗಳಿಗೆ ಸೀರಿಯಲ್‌ಗಳನ್ನು ತಯಾರಿಸಿಕೊಡುತ್ತಾರೆ. ಕಾರ್ಯಕ್ರಮಗಳನ್ನು ಎಪಿಸೋಡ್‌ಗಳೆಂಬ ತುಂಡುಗಳ ರೂಪದಲ್ಲಿ ಒದಗಿಸುತ್ತಾರೆ. ಚಾನೆಲ್‌ಗಳವರು ಈ ಎಪಿಸೋಡ್‌ಗಳ ರೂಪದ ಕಾರ್ಯಕ್ರಮಗಳ ಮಧ್ಯೆ ತುರುಕುವ ಜಾಹೀರಾತುಗಳನ್ನು ಸಂಗ್ರಹಿಸಿ ಆದಾಯ ಕಂಡುಕೊಳ್ಳುತ್ತಾರೆ.

ಅಂತಿಮವಾಗಿ ಈ ಎರಡೂ ವರ್ಗದ ಉತ್ಪನ್ನವನ್ನು ಟಿ.ವಿ. ಮೂಲಕ ಖರೀದಿಸುವ ಬಳಕೆದಾರ ನಿಜವಾದ ಅರ್ಥದಲ್ಲಿ ‘ಮೂಕ ಪ್ರೇಕ್ಷಕ’. ಬೇಡದ ಕಾರ್ಯಕ್ರಮ, ತಲೆ ಚಿಟ್ಟು ಹಿಡಿಸುವ ಜಾಹೀರಾತು ಇವುಗಳನ್ನು ಸಹಾ ಈತ/ ಈಕೆ ಗ್ರಾಹ್ಯವಾಗಿಸಿಕೊಳ್ಳಬೇಕು. ತಲೆ ಪೆಟ್ಟಿಗೆಯ ಹೊಸ ವ್ಯವಸ್ಥೆಯಲ್ಲಿ (ಕಂಡಿಷನಲ್‌ಆಕ್ಸೆಸ್‌ಸಿಸ್ಟಂ-ಸಿಎಎಸ್‌ನಲ್ಲಿ) ಬಳಕೆದಾರನಿಗೆ ಒಂದು ಅನುಕೂಲವಿದೆ. ಬೇಕಾದ ಕಾರ್ಯಕ್ರಮವನ್ನು ಮಾತ್ರ ಕೇಳಿ ಪಡೆಯಬಹುದು. ಆದರೆ ಅದಕ್ಕೆ ತೆರಬೇಕಾದ ಬೆಲೆ ಮಾತ್ರ ಅಧಿಕವಾಗುತ್ತಿದೆ.

ವಾಸ್ತವವಾಗಿ ಸಿಎಎಸ್‌ವ್ಯವಸ್ಥೆ ಬಹಳ ಒಳ್ಳೆಯದು. ವಿಶ್ವಾದ್ಯಂತ ಇದೇ ವ್ಯವಸ್ಥೆ ಯಶಸ್ವಿ ಆಗಿರುವುದು. ಆದರೆ ಭಾರತದಲ್ಲಿ ಆರಂಭದಲ್ಲೇ ಗೊಂದಲ. ತಂತಮ್ಮ ಹಿತ ಸಾಧಿಸಿಕೊಳ್ಳುವಲ್ಲೇ ಎಲ್ಲರೂ ಮಗ್ನ. ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರಕ್ಕೆ ಸುಲಭವಾಗಿ ಸಾಧ್ಯವಾಗುತ್ತಿಲ್ಲ.

ಉಚಿತ ಚಾನೆಲ್‌ಗಳ ಸಂಖ್ಯೆ ೩೦ ಇರಲಿ ಎಂದು ನಿಗದಿ ಮಾಡಲಾಗಿದೆ. ಆದರೆ ಜಾಹೀರಾತು ಸಂಗ್ರಹಿಸುವ ಶಕ್ತಿ ಇಲ್ಲದೆ ಬರಿದೆ ಕಾರ್ಯಕ್ರಮ ತಯಾರು ಮಾಡುವಂಥ ಉಚಿತ ಚಾನೆಲ್‌ಗಳ ಸಂಖ್ಯೆ ೩೦ ಕ್ಕಿಂತ ಬಹಳ ಜಾಸ್ತಿ ಇದೆ. ಅವುಗಳಲ್ಲಿ ಕೆಲವು ಚಾನೆಲ್‌ಗಳವರು ಮಾತ್ರ ತಮ್ಮದು ಪಾವತಿ ಚಾನೆಲ್‌ಆಗಬೇಕೆಂಬ ತವಕ ಹೊಂದಿರುವವರು. ೩೦ ಕ್ಕೆ ಮಿತಿ ಹಾಕಬೇಡಿ ಎಂದು ಪ್ರಸಾರಕರು ಒತ್ತಡ ತರುತ್ತಿದ್ದಾರೆ.

ಪಾವತಿ ಚಾನೆಲ್‌ಗಳವರು ಒಟ್ಟೊಟ್ಟಾಗಿ ಗುಂಪು ಗೂಡಿಸಿ ಮಾರಾಟ ಮಾಡುವುದಕ್ಕೆ ಸಮ್ಮತಿಸಿಲ್ಲ. ಅಂದರೆ ಇಂತಿಂಥ ಕೆಲವು ಪಾವತಿ ಚಾನೆಲ್‌ಗಳನ್ನು ಒಟ್ಟಾಗಿ ತೆಗೆದುಕೊಳ್ಳಿ ಎಂದು ಹೇಳಲಿ ತಯಾರಿಲ್ಲ. ಪ್ರತಿ ಪಾವತಿ ಚಾನೆಲ್‌ಅನ್ನೂ ಪ್ರತ್ಯೇಕಿಸಿ ಬೇಕಾದ್ದನ್ನು ತೆಗೆದುಕೊಳ್ಳಿರೆಂದು ಬಳಕೆದಾರರಿಗೆ ಹೇಳಿ ಎನ್ನುತ್ತಾರೆ. ಹೀಗೆ ಮಾಡಿದರೆ ಬಳಕೆದಾರನಿಗೆ ಕಾರ್ಯಕ್ರಮ ಸಮೂಹ ದುಬಾರಿಯಾಗಿ ಪರಿಣಮಿಸುತ್ತದೆ. ಜೊತೆಗೆ ಬಿಡಿ ಬಿಡಿ ಚಾನೆಲ್‌ಗೆ ಪಾವತಿ ಹಣ ನಿಗದಿ ಮಾಡಿದರೆ ಎಷ್ಟೋ ದುರ್ಬಲ ಚಾನೆಲ್‌ಗಳು ಮುಚ್ಚಿ ಹೋಗುತ್ತವೆ.

ಕೇಬಲ್‌ಆಪರೇಟರ್‌ಗಳ ಅತೃಪ್ತಿ ಬೇರೆ ತರಹದ್ದು. ಉಚಿತ ಚಾನೆಲ್‌ಗಳ ಸಮೂಹದ ಒಟ್ಟು ಸೇವೆಗೆ ರೂ. ೭೨ ಎಂದು ಸರ್ಕಾರ ನಿಗದಿ ಮಾಡಿದೆ. ಇದು ತುಂಬಾ ಕಡಿಮೆ ಎಂದು ಅವರು ದೂರುತ್ತಾರೆ. ಸಿಎಎಸ್ ವ್ಯವಸ್ಥೆಗೆ ಮುನ್ನ ರೂ. ೧೨೫ ರಿಂದ ೨೫೦ರ ವರೆಗಿನ ಮಾಸಿಕ ಶುಲ್ಕಕ್ಕೆ ಎಲ್ಲವೂ ಉಚಿತ ಎನ್ನುವ ವ್ಯವಸ್ಥೆಯಲ್ಲಿ ೪೦ ರಿಂದ ೬೦ ಚಾನೆಲ್‌ಗಳ ಕಾರ್ಯಕ್ರಮವನ್ನು ಬಳಕೆದಾರರು ಪಡೆಯುತ್ತಿದ್ದಾರೆ.

ಬಳಕೆದಾರರು ತಲೆಪೆಟ್ಟಿಗೆಯನ್ನು ಸ್ವತಃ ಕೊಳ್ಳುತ್ತಿದ್ದರೆ ಬಾಡಿಗೆಗೆ ಪಡೆಯುವ ಏರ್ಪಾಡು ಆಗಲಿದೆ. ಅದಕ್ಕೆ ರೂ. ೮೦ ರಿಂದ ೧೦೦ ಖರ್ಚು ಬರುತ್ತದೆ. ಉಚಿತ ಚಾನೆಲ್‌ಗಳಿಗಾಗಿ ತೆರಿಗೆಗೂ ಸೇರಿದಂತೆ ರೂ. ೯೦ ರಿಂದ ೧೦೦ ಶುಲ್ಕ ಬೀಳುತ್ತದೆ. ಜೊತೆಗೆ ಸ್ಟಾರ್, ಝೀ, ಸೋನಿ, ಮಾತ್ರವಲ್ಲದೆ ಸ್ಥಳೀಯ ಭಾಷೆ ಚಾನೆಲ್‌ಗಳು, ಕೆಲವು ಕ್ರೀಡೆ ಸಿನಿಮಾ ಮುಂತಾದ ಚಾನೆಲ್‌ಗಳು ಇವಕ್ಕೆಲ್ಲ ಪಾವತಿ ಮಾಡುವುದು ಇದನ್ನೆಲ್ಲ ಸೇರಿಸಿದರೆ ಕೇಬಲ್‌ನವರಿಗೆ ಪ್ರತಿ ತಿಂಗಳು ಕೊಡಬೇಕಾದ ಹಣ ರೂ. ೩೦೦ ತನಕ ಏರಬಹುದು.

ಸರ್ಕಾರದ ಹಿಡಿತ ಮತ್ತು ಕೇಬಲ್ ಆಪರೇಟರ್‌ಗಳ ಜೊತೆ ವ್ಯವಹಾರ ಇವುಗಳ ಗೋಜೆ ಬೇಡವೆಂದು; ಸ್ಟಾರ್, ಝೀ ತರಹೆ ಕೆಲವು ದೊಡ್ಡ ಚಾನೆಲ್‌ಗಳು ನೇರವಾಗಿ ಮನೆಗಳಿಗೆ ಕಾರ್ಯಕ್ರಮ ಮುಟ್ಟಿಸುವ ಪದ್ಧತಿ ಜಾರಿಗೆ ಬರಲೆಂದು ಹೇಳತೊಡಗಿದ್ದಾರೆ.

ಪ್ರಸಾರಕರ ಪಾಲಿಗೆ ಇನ್ನೊಂದು ಸಂಕಟ ಸಹಾ ಎದುರಾಗಿದೆ. ಸಿಎಎಸ್‌ವ್ಯವಸ್ಥೆಗೆ ಮುಂಚಿನ ಈಗಿನ ವ್ಯವಸ್ಥೆಯಲ್ಲಿ ಬಳಕೆದಾರನು ತನಗೆ ಕಾರ್ಯಕ್ರಮ ಬೇಡವಾದರೆ ಬರಿದೇ ಚಾನೆಲ್‌ಬದಲಾಯಿಸುತ್ತಾರೆ. ಆದರೆ ಸಿಎಎಸ್‌ವ್ಯವಸ್ಥೆಯಲ್ಲಿ ಚಾನೆಲ್‌ಬೇಡವೆಂದು ನಿಲ್ಲಿಸುತ್ತಾನೆ. ಪಾವತಿ ತಪ್ಪುತ್ತದೆ. ಇದರಿಂದ ನಿಖರವಾಗಿ ಯಾವುದೇ ಕಾರ್ಯಕ್ರಮ ಎಷ್ಟು ಜನಪ್ರಿಯ ಎಂಬುದು ಗೊತ್ತಾಗಿ ಹೋಗುತ್ತದೆ. ಅಷ್ಟು ದಶಲಕ್ಷ ಜನ ನೋಡುತ್ತಾರೆ ಎಂಬ ಜಾಹೀರಾತುದಾರರನ್ನು ನಂಬಿಸುವುದಕ್ಕೆ ಕಷ್ಟವಾಗುತ್ತದೆ.

ಬಳಕೆದಾರರು ಕ್ರಿಕೆಟ್ ಜ್ವರ ಇದ್ದಾಗ ಮಾತ್ರ ಪಾವತಿಗೆ ಸಿದ್ಧರಾಗಿ ಬೇರೆ ವೇಳೆ ನಿರ್ದಿಷ್ಟ ಚಾನೆಲ್‌ಗಳೇ ಬೇಡ ಎನ್ನುತ್ತಾರೆ. ಕೇಬಲ್‌ಆಪರೇಟರರು ಮಾತ್ರ ಬಳಕೆದಾರರು ತಮ್ಮ ಮುಷ್ಟಿಯಲ್ಲೇ ಇರುವವರಾದ ಕಾರಣ ಯಾವುದೇ ವ್ಯವಸ್ಥೆ ಆದರೂ ತಾವೂ ಅನಿವಾರ್ಯ; ತಮ್ಮ ಮಾತೆ ನಡೆಯುವುದು, ಬೇಕಾದ ಹಾಗೆ ಶುಲ್ಕ ನಿಗದಿ ಮಾಡುಬಹುದು ಎಂದು ಬೀಗುತ್ತ ತೆಪ್ಪಗಿದ್ದಾರೆ.

ಒಂದು ಸಮೀಕ್ಷೆ ಪ್ರಕಾರ ಬಳಕೆದಾರರಲ್ಲಿ ಶೇ. ೩೦ ಕುಟುಂಬಗಳವರು ರೂ. ೨೦೦೦ ರಿಂದ ರೂ. ೪೦೦೦ ವರೆಗಿನ ತಿಂಗಳ ವರಮಾನದವರು. ಕೇಬಲ್ ಆಪರೇಟರ್‌ಗಳು ವಸೂಲು ಮಾಡುತ್ತಿರುವ ಸಿಎಎಸ್‌ಗೆ ಮುಂಚಿನ ತಿಂಗಳ ಶುಲ್ಕ ಸರಾಸರಿ ರೂ. ೧೫೭ ಬೀಳುತ್ತದೆ. ಅಂದರೆ ಅವರ ಪಾಡಿಗೆ ಟಿವಿಗೆ ಮಾಡುವ ವೆಚ್ಚ ಶೇ. ೨ ರಿಂದ ೮ ರವರೆಗೆ ಬೀಳುತ್ತದೆ.

ಸಿಎಎಸ್ ಜಾರಿ ನಂತರ ತಿಂಗಳ ಶುಲ್ಕ ರೂ. ೨೫೦ ರಿಂದ ರೂ.೪೫೦ ರ ತನಕ ಆಗಿರುತ್ತದೆ ಎಂದು ಭಾವಿಸಿದರೆ; ಮುಂಬೈನಂಥ  ಮಹಾನಗರಗಳಲ್ಲಿ ಪಾವತಿ ಚಾನಲ್‌ಗಳ ವೆಚ್ಚ ಅಧಿಕ ಇರುತ್ತದೆ ಎನ್ನುವುದಾದರೆ; ಆಗ ಇದೇ ಬಡ ವರ್ಗದ ಬಳಕೆದಾರರು ಭರಿಸಬೇಕಾದ ವೆಚ್ಚವು ತಮ್ಮ ವರಮಾನದ ಶೇ. ೧೦-೧೨ ರಷ್ಟು ಆಗುತ್ತದೆ.

ಇಂಥ ಸನ್ನಿವೇಶದಲ್ಲಿ ಚಾನೆಲ್‌ಗಳ ಒಟ್ಟಾರೆ ವೀಕ್ಷಣೆ ಕಡಿಮೆಯಾಗುತ್ತದೆ. ಎಲ್ಲರೂ ಕೆಲವೇ ಪಾವತಿ ಚಾನೆಲ್‌ಗಳಿಗೆ ಸೀಮಿತಗೊಳ್ಳುತ್ತಾರೆ. ಇಡೀ ಉದ್ಯಮಕ್ಕೆ ಇದರಿಂದ ಧಕ್ಕೆ.

ಬಿಡಿ ಬಿಡಿ ಸಣ್ಣ ಪ್ರದೇಶಗಳ ಕೇಬಲ್ ಆಪರೇಟರ್‌ಗಳಿಗೆ ಸಾಮೂಹಿಕಗೊಳಿಸಿ ಚಾನೆಲ್ ಕಾರ್ಯಕ್ರಮಗಳನ್ನು ಪೂರೈಸುವ ಮಲ್ಟಿಸಿಸ್ಟಂ ಆಪರೇಟರ್‌ಗಳೂ ಇದ್ದಾರೆ. ವಾಸ್ತವವಾಗಿ ಕಾರ್ಯಕ್ರಮ ಪೂರೈಕೆ ವ್ಯವಸ್ಥೆಯನ್ನು ನಿಯಂತ್ರಿಸುವವೇ ಇವರು.

ಈ ‘ಒಟ್ಟುಗಟ್ಟಲೆ ವ್ಯವಹಾರ’ದ ಜನರೇ ಪ್ರಸಾರಕರ ಪಾಲಿಗೆ ಸವಾಲು ಎಸೆದಿರುವವರು. ಅವರು ಭಾರೀ ಹಣ ಹೂಡಿ ದುಬಾರಿ ಸಾಧನೋಪಕರಣ ಸ್ಥಾಪಿಸಿ, ಕೇಬಲ್‌ಆಪರೇಟರ್‌ಗಳ ಇದೇ ಕಾರ್ಯಾಚರಣೆ ನಿಯಂತ್ರಿಸುತ್ತಾರೆ.

ಇವರು ಈಗಾಗಲೇ ರೂ. ೭೦೦೦ ಬೆಲೆಯ ದುಬಾರಿ ತಲೆಪೆಟ್ಟಿಗೆ ಬದಲು ಅಗ್ಗದ ರೂ.೩೮೦೦ ಬೆಲೆಯ ತಲೆಪೆಟ್ಟಿಗೆ ಪೂರೈಸುವ ಹಾಗೆ ಆಗಬೇಕೆಂದು ಹೇಳತೊಡಗಿದ್ದಾರೆ. ಆದರೆ ತಲೆಪೆಟ್ಟಿಗೆ ಕೈವಾಡ ನಡೆಸಿದರೆ ಆದಾಯ ಎಲ್ಲೋ ಸೋರಿ ಹೋಗುವಂತೆ ಆಗುವುದನ್ನು ತಪ್ಪಿಸುವ ಬಗೆಗೆ ಯಾರೂ ಖಾತರಿ ನೀಡುವುದಿಲ್ಲ.

ಇದೀಗ ಪ್ರಸಾರಕರು ಸಿಎಎಸ್‌ಕಡ್ಡಾಯಗೊಳಿಸುವ ಯೋಚನೆಯನ್ನು ಜುಲೈ ೧೫ ರಿಂದ ಮುಂದಕ್ಕೆ ಹಾಕಲು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ.

ಸ್ವತಃ ಬಳಕೆದಾರರು ಮಾತ್ರ ತಮ್ಮ ಪಾತ್ರ ಮಹತ್ವದ್ದೇ ಆದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಇರುವುದಕ್ಕಾಗಿ ಪರಿತಪಿಸುತ್ತ ಕುಳಿತಿದ್ದಾರೆ.