‘ಮನೆ ಕಟ್ಟಿ ನೋಡು’ ಹಳೆಯ ಗಾದೆ. ‘ಮನೆ ಸಾಲ ತೀರಿಸಿ ನೋಡು’ ಎಂಬುದು ಬಹುಶಃ ಹೊಸ ಗಾದೆ ಆಗಲಿಕ್ಕೆ ಸಾಕು. ಮಧ್ಯಮ ವರ್ಗದವರ ಮತ್ತು ಬಡವರ ಜೀವಮಾನ ಕಾಲದ ಆಶೋತ್ತರ ಒಂದು ಮನೆ ಮಾಡಿಕೊಳ್ಳುವುದು.

ನಗರಗಳಲ್ಲಿ ಮನೆ ಕಟ್ಟುವುದು ರೇಜಿಗೆಯ ಕೆಲಸ. ಹಣ ಇಟ್ಟುಕೊಂಡರೆ ಸ್ವಲ್ಪ ಸುಲಭವಾಗಬಹುದೇನೋ. ಬೇರೆ ಕಡೆ ಹಣ ಇಟ್ಟುಕೊಂಡರೂ ಅಷ್ಟು ಸುಲಭವಲ್ಲ. ಈಗೊಂದು ಎರಡು ದಶಕದ ಹಿಂದೆ ಮನೆ ಕಟ್ಟಲು ಸಾಲವೇ ಸಿಗುತ್ತಿರಲಿಲ್ಲ. ಸಾಲ ಮಂಜೂರು ಮಾಡಿಕೊಳ್ಳುವುದೇ ಒಂದು ಪರಿಪಾಟಲು. ಹತ್ತು ವರ್ಷದ ಹಿಂದೆ ಸಾಲವೆಂಬುದು ಅಷ್ಟು ಕಷ್ಟವಿರಲಿಲ್ಲ. ಈಗಿನ ಮಾತು ಬೇರೆ. ಬ್ಯಾಂಕುಗಳವರು, ಹೌಸಿಂಗ್ ಫೈನಾನ್ಸಿಯವರು ಕರೆದು ಕರೆದು ಸಾಲ ಕೊಡುತ್ತಿದ್ದಾರೆ. ಸಾಲ ಕೊಡುತ್ತೇವೆ ಬನ್ನಿ ಎಂದು ಜಾಹೀರಾತು ಕೊಡುತ್ತಿದ್ದಾರೆ. ಪೈಪೋಟಿ ಮೇಲೆ ಬಡ್ಡಿದರ ಇಳಿಸುತ್ತಿದ್ದಾರೆ. ಸದ್ಯ ಸ್ಥಿರಾಸ್ತಿ ಬೆಲೆಗಳು ಇಳಿದಿವೆ. ಇಳಿದ ಬೆಲೆಗಳಲ್ಲಿ ಮಾರಾಟ ಮಾಡುವ ತವಕ ಆಸ್ತಿದಾರರಲ್ಲಿ ಇಲ್ಲ; ಆ ಮಾತು ಬೇರೆ. ಈಗೆಲ್ಲ ಕಷ್ಟದ ದಿನಗಳು. ಇರುವ ಒಂದಿಷ್ಟು ಆಸ್ತಿ ಕಳೆದುಕೊಂಡರೆ ಮುಂದೆ ಹೇಗೆಂಬ ಚಿಂತೆ. ಇದಕ್ಕಿಂತ ಹೆಚ್ಚಾಗಿ ಸೈಟುಗಳನ್ನು ಕೊಂಡು ಮಾರುವ ದಂಧೆಯಲ್ಲಿ ಇರುವವರು ಮಾರಾಟಕ್ಕೆಂದು ಸೈಟುಗಳನ್ನು ಗುಡ್ಡೆ ಹಾಕಿ ಇಟ್ಟುಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದಾರೆ. ಹಣಕ್ಕೆ, ಸೈಟಿಗೆ, ಪ್ಲ್ಯಾಟಿಗೆ, ಮನೆಗಳಿಗೆ ಈಗ ಬೇಡಿಕೆ ಇಲ್ಲ. ಈ ಹಿನ್ನೆಲೆಯಲ್ಲಿ ಸೈಟುಗಳನ್ನು ಕೊಂಡುಮಾರುವ ದಂಧೆ ಸುಲಭವಾಗದು. ಅದರಲ್ಲಿ ನಿರತರಾದವರು ಹಿಂಜರಿಯುತ್ತಿರುವ ಕಾರಣ ವ್ಯವಹಾರ ಕಡಿಮೆಯಾಗಿದೆ. ಆದ್ದರಿಂದ ಬೆಲೆಗಳು ವಿಪರೀತ ಏರಿಲ್ಲ.

ಈಗ ಬಡ್ಡಿದರಗಳನ್ನು ಎಲ್ಲ ಕಡೆ ಇಳಿಸಿದ್ದಾರೆ. ನಗದು ನಗಣ್ಯ. ಆದ್ದರಿಂದ ಬಡ್ಡಿ ಗಿಟ್ಟದಿದ್ದರೂ ಹಣವನ್ನು ಮನೆ ಮತ್ತಿತರ ಕಟ್ಟಡಗಳ ಮೇಲೆ ಹಾಕಲು ಜನ ಮುಂದೆ ಬರುತ್ತಿದ್ದಾರೆ. ಆ ಕಾರಣದಿಂದ ಸ್ಥಿರಾಸ್ತಿಗೆ ಬೇಡಿಕೆ ಪೂರ್ತಿಯಾಗಿ ಕುಸಿದಿಲ್ಲ.

ಸದ್ಯ ಮನೆ ಸಾಲಕ್ಕೆ ಚಿಂತೆ ಪಡಬೇಕಿಲ್ಲ ಎಂಬುದೇನೋ ಸರಿ. ಸಾಲವು ಸುಲಭ ಕಂತುಗಳಲ್ಲಿ ಸಿಗುತ್ತದೆ ಕೂಡಾ. ಆದರೆ ಕಟ್ಟಡ ನಿರ್ಮಾಣ ವೆಚ್ಚ ವಿಪರೀತ ಏರಿಕೆ. ಆರ್ಥಿಕ ಹಿಂಜರಿತದ ವೇಳೆ ಕೂಡಾ ನಿರ್ಮಾಣ ಸಾಮಗ್ರಿ ಬೆಲೆಗಳು ಹುಚ್ಚಾಪಟ್ಟೆ ಏರುತ್ತಿವೆ. ಹಾಗೆ ನೋಡಿದರೆ ಗೃಹ ನಿರ್ಮಾಣ ಚಟುವಟಿಕೆ ಭಾರೀ ಚುರುಕಾಗೇನೋ ಇಲ್ಲ. ಆದರೂ ನಿರ್ಮಾಣ ಸಾಮಗ್ರಿ ಬೆಲೆ ಏರುತ್ತಲೇ ಹೋಗುತ್ತಿದೆ.

ಮುಂಚೆ ನಿರ್ಮಾಣ ಸಾಮಗ್ರಿ ಬೆಲೆಗಳು ಪ್ರತಿ ವರ್ಷ ಶೇ. ೧೦ ರಿಂದ ೧೫ ಏರುತ್ತಿದ್ದುವು. ಇದೀಗ ಒಂದು ಅಂಧಾಜಿನ ಪ್ರಕಾರ ಶೇ. ೨೫ ದರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಏರಿದೆ. ಒಂದು ಸ್ಥೂಲ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಒಂದು ಚದರ ಮನೆ ಕಟ್ಟಡ ನಿರ್ಮಾಣಕ್ಕೆ, ತೇಗದ ಮರ ಬಳಸಿ ನೆಲಕ್ಕೆ ಮೊಸಾಯಿಕ್ ಚದರ ಬಿಲ್ಲೆ ಹಾಸಿದರೆ, ೫೦ ರಿಂದ ೬೦ ಸಾವಿರ ರೂಪಾಯಿವರೆಗೆ ಖರ್ಚು ಬರುತ್ತದೆ. ಮೂರೇ ವರ್ಷದ ಹಿಂದೆ ಇದು ಹತ್ತು ಸಾವಿರ ರೂಪಾಯಿನಷ್ಟು ಕಡಿಮೆ ಇತ್ತು. ಗುಣಮಟ್ಟ ಮತ್ತು ವೈಯಕ್ತಿಕ ಇಷ್ಟಾನಿಷ್ಟ ಶೈಲಿಯ ನಿರ್ಮಾಣವನ್ನು ತೆಗೆದುಕೊಂಡು ಕಳೆದು ಹೋದ ಒಂದೆರಡು ವರ್ಷಗಳ ಹಿಂದಿನ ಲೆಕ್ಕಕ್ಕೆ ಹೋಲಿಸಿದಾಗ ಶೇ. ೨೦ ರಿಂದ ೨೫ ರ ವರೆಗಿನ ದರದಲ್ಲಿ ನಿರ್ಮಾಣ ವೆಚ್ಚ ಏರುತ್ತಿದೆ ಎಂಬ ಅಂಶ ಯಾರಿಗಾದರೂ ಮನದಟ್ಟು ಆಗುತ್ತದೆ.

ಮರಳು, ಕಲ್ಲು, ಸಿಮೆಂಟ್, ಮರ, ಪೈಪು ಮತ್ತಿತರ ಫಿಟ್ಟಿಂಗ್; ಎಲೆಕ್ಟ್ರಿಕಲ್ ಸಾಮಗ್ರಿ; ಎಲ್ಲಕ್ಕಿಂತ ಹೆಚ್ಚಾಗಿ ಪೇಂಟ್ ಮತ್ತು ಪಾಲಿಷ್ ಎಲ್ಲವೂ ತುಟ್ಟಿ. ಹಣ ನೀರಿನಂತೆ ಖರ್ಚಾಗುತ್ತದೆ ಎನ್ನುವುದುಂಟು.

ಆದರೂ ಮನೆ ಮಾಡಿಕೊಳ್ಳುವ ‘ಮೋಹ’ ತಪ್ಪಿದ್ದಲ್ಲ. ಮನೆ ಎಂಬುದು ಸುರಕ್ಷತೆ ಮತ್ತು ಜೀವನದಲ್ಲಿ ಭರವಸೆಯ ಭಾವನೆ ಮೂಡಿಸುತ್ತದೆ ನಿಜ. ಆದರೆ ಸೈಟು ಮತ್ತು ಮನೆ ಸಾಲಗಳು ದುಬಾರಿ ಆಗುತ್ತಿಲ್ಲ ಎಂಬ ಕಾರಣ ಸದ್ಯ ಉತ್ತೇಜಿತವಾಗುವುದು. ಆ ಪರಿಣಾಮವನ್ನು ಈ ಸಾಮಗ್ರಿ ವೆಚ್ಚ ತಿಂದು ಹಾಕುತ್ತಿದೆ.

ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಪರಿಣಮಿಸಿದ ವಿದ್ಯಮಾನವೆಂದರೆ ಸ್ವಂತ ಕಟ್ಟಿಕೊಳ್ಳುವುದಕ್ಕೆ ಹೋಗದೆ ಕಟ್ಟಿರುವುದನ್ನು ಕೊಂಡುಕೊಳ್ಳುವುದರತ್ತ ಒಲವು ಮೂಡದೇ ಇರುವುದು. ಫ್ಲ್ಯಾಟನ್ನಾಗಲಿ, ಡೆವಲಪರ್‌ಗಳು ನಿರ್ಮಿಸಿದ ಮನೆಗಳನ್ನಾಗಲಿ ಎಲ್ಲರೂ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅವುಗಳ ಕಳಪೆ ಗುಣಮಟ್ಟ ಅದಕ್ಕೆ ಕಾರಣ. ಸಾಲ ಮಾಡಿ ತಂದೊಪ್ಪಿಸುವ ಹಣಕ್ಕೆ ಪೂರ್ಣ ಪ್ರತಿಫಲ ಸಿಗುವುದೇ ಎಂದು ಲೆಕ್ಕ ಹಾಕಲಾಗದವರು; ಸ್ವಂತವಾಗಿ ಮನೆ ಕಟ್ಟಿಸಲು ಹೊರಟಾಗ ಕಾಟ ಕೊಡುವ ಇಲ್ಲವೇ ಹಣವನ್ನು ನುಂಗಿಹಾಕುವ ನಿರ್ಮಾಣ ಕಾರ್ಯದ ರೇಜಿಗೆ ಕೆಲಸಕ್ಕೆ ವ್ಯವ ಮಾಡಬೇಕಾದ ಸಮಯ ತಮ್ಮ ಬಳಿ ಇಲ್ಲ ಎನ್ನುವವರು ಸಿದ್ಧವಾಗಿರುವ ಕಟ್ಟಡದೊಳಕ್ಕೆ ಹೋಗಲು ಇಚ್ಛಿಸುತ್ತಾರೆ.

ಫ್ಯ್ಲಾಟುಗಳು ಜನಪ್ರಿಯ ಆಗದಿರುವುದಕ್ಕೆ ಒಂದು ಕುತೂಹಲಕರ ಕಾರಣವುಂಟು. ಫ್ಯ್ಲಾಟನ್ನು ಕೊಂಡರೆ ನೆಲ ನಮ್ಮದಲ್ಲ; ಸೂರು ನಮ್ಮದಲ್ಲ; ನಾಲ್ಕು ಗೋಡೆಗಳು ಮತ್ತು ಕಿಟಕಿ ಬಾಗಿಲಿಗೆ ದುಡ್ಡು ಕೊಟ್ಟಂತೆಯೇ ಸರಿ ಎಂದು ಉದ್ಗರಿಸುವವರುಂಟು. ಕೆಲವು ಸಾವಿರ ಚದರಡಿ ನೆಲದ ಒಡೆತನವನ್ನು ಅದರ ಮೇಲೆ ಕಟ್ಟಿದ ೪೦-೫೦ ಫ್ಯಾಟುಗಳವರಿಗೆ ಹಂಚಿದರೆ; ಆ ನೆಲವೂ ಮೂರ್ತ ಸ್ವರೂಪದಲ್ಲಿ ಸ್ವಂತದ್ದು ಎಂದು ಆಗದೇ ಇರುವಾಗ; ಕಷ್ಟಪಟ್ಟು ದುಡಿದು ತೆತ್ತ ಹಣಕ್ಕೆ ಬಂದ ಪ್ರತಿ ಫಲವೇನು?

ಕರ್ನಾಟಕದಲ್ಲಿ ನಗರಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಬೆಳೆಯದೇ ಇರುವಾಗ; ಕಟ್ಟಡಗಳಿಗೆ ಬೇಕಾಗುವ ಜಮೀನು ಇನ್ನೂ ಲಭ್ಯ ಇರುವುದರಿಂದ ಇಂಥ ಭಾವನೆಗಳು ಇನ್ನೂ ಪ್ರಚಲಿತವಿವೆ. ಆದರೆ ವಸತಿ ಅಭಾವ ತಲೆದೋರಿದರೆ ಈ ಬಗೆಯ ಅನಿಸಿಕೆಗಳೆಲ್ಲ ಮಾಯವಾಗುತ್ತವೆ. ಸದ್ಯ ಬೆಂಗಳೂರಿನಲ್ಲಿ ಕಟ್ಟಿರುವ ಫ್ಯಾಟುಗಳ ಸಂಕೀರ್ಣಗಳಲ್ಲಿ ಸಾಕಷ್ಟು ಖಾಲಿ ಇವೆ. ಇದಕ್ಕೆ ಕಾರಣ ಎಲ್ಲರ ಪಾಲಿನ ವಸತಿ ಪ್ರಶ್ನೆ ಪರಿಹಾರಗೊಂಡಿದೆ ಎಂಬುದು ಕಾರಣವಲ್ಲ. ಕೊಟ್ಟ ಹಣಕ್ಕೆ ಅಲ್ಲೆಲ್ಲ ಪ್ರತಿಫಲ ಸಿಗುತ್ತಿಲ್ಲ ಎಂಬುದು.

ಕೇಂದ್ರ ಸರ್ಕಾರ ವಿದೇಶಿ ಮೂಲದ ಬಂಡವಾಳಿಗರಿಗೆ ವಸತಿ ಯೋಜನೆಗಳಲ್ಲಿ ಶೇ.೧೦೦ ಬಂಡವಾಳ ತೊಡಗಿಸಲು ಅವಕಾಶ ಕೊಡಲಾಗಿದೆ ಎಂದು ಪ್ರಕಟಿಸಿದೆ. ಒಂದೇ ನಿರ್ಬಂಧವೆಂದರೆ ಅಂಥ ಯೋಜನೆಯಲ್ಲಿ ೧೦೦ ಎಕರೆ ಜಮೀನನ್ನು ಬಳಸಿ ಕೊಂಡಿರಬೇಕು.

ಅಂದರೆ ಊರಾಚೆ ಧಾರಾಳವಾಗಿ ಸಿಗುವ ಜಮೀನಿನಲ್ಲಿ ವಸತಿ ಸಮೂಹಗಳನ್ನು ನಿರ್ಮಿಸಲು ಅವಕಾಶ ನೀಡಲಾಗಿದೆ ಎಂದೇ ಅರ್ಥ. ಅಂಥ ಸ್ಥಳಗಳಿಗೆ ರಸ್ತೆ, ನೀರು, ವಿದ್ಯುತ್, ವಾಹನ ಸೌಕರ್ಯ ಮುಂತಾದವು ಸಿದ್ಧವಾದ ಮೇಲೆ; ಕೊಟ್ಟ ಹಣಕ್ಕೆ ತಕ್ಕ ಪ್ರತಿಫಲ ಎನ್ನುವಂಥ ಗುಣಮಟ್ಟದ ನಿರ್ಮಾಣ ಸಾಧ್ಯವಾದ ಮೇಲೆ; ಯೋಜನೆ ಯಶಸ್ವಿ ಆದೀತು. ಅಂಥ ನಂಬಿಕೆ ಸದ್ಯದ ಭವಿಷ್ಯತ್ತಿನಲ್ಲಿ ಮೂಡುವಂತೆ ಕಾಣದು.

೦೯.೦೧.೨೦೦೨