ಟಿ.ವಿ.ಯಲ್ಲಿ ಬರುವ ಕಾರ್ಯಕ್ರಮ ಯಾವುದು ಎಂದು ಕಿರಿಯರನ್ನಾಗಲಿ, ದೊಡ್ಡವರನ್ನಾಗಲಿ ಕೇಳಿದರೆ ತಟ್ಟನೆ ಉತ್ತರ ಬರದೇ ಇರಬಹುದು. ಅದೇ ವೇಳೆ ಈಚಿನ ಅತ್ಯುತ್ತಮ ಜಾಹೀರಾತು ಯಾವುದು ಎಂದು ಕೇಳಿದರೆ ತಕ್ಷಣ ಉತ್ತರಿಸುತ್ತಾರೆ.

ಒಂದೇ ಜಾಹೀರಾತನ್ನು ಪದೇ ಪದೇ ತೋರಿಸುವುದೇ ಅಲ್ಲದೆ ಅದೇ ಜಾಹೀರಾತನ್ನು ಬಹುಪಾಲು ಎಲ್ಲ ಚಾನೆಲ್‌ಗಳಲ್ಲೂ ಆಗಾಗ ತೋರಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ನಿರ್ದಿಷ್ಟವಾಗಿ ತಮಗೆ ಇಷ್ಟವಾದ ಚಾನೆಲ್‌ಅನ್ನು ನೋಡುವ ಹಾಕಿಕೊಂಡಾಗ ಆ ಒಂದೇ ಜಾಹೀರಾತು ಬೇಕೆನಿಸಿದರೂ ಬೇಡವೆನಿಸಿದರೂ ಕಾಣಿಸುತ್ತಲೇ ಇರುತ್ತದೆ. ‘ಕಾಡು’ತ್ತದೆ.

ಎಷ್ಟೋ ವೇಳೆ ಟಿ.ವಿ. ಜಾಹೀರಾತಿನ ನಾಟಕೀಯ ಸನ್ನಿವೇಶವನ್ನೋ, ಪ್ರಚಾರದ ಸಂದೇಶ ಸಾರುವ ಒಕ್ಕಣೆ ಮತ್ತು ನುಡಿಗಟ್ಟಗಳನ್ನೋ ನೋಡುಗನು ತನಗೆ ಅರಿವಿಲ್ಲದೆ ಉರು ಹೊಡೆದಿರುತ್ತಾನೆ. ಮಕ್ಕಳು ಅನಾಯಾಸವಾಗಿ ಜಾಹೀರಾತು ಶಬ್ದ ಸಾಗರವನ್ನು ಬಾಯಿಂದ ಹೊರಹೊಮ್ಮಿಸುತ್ತಾರೆ.

ಜಾಹೀರಾತು ಸಂಸ್ಥೆಗಳವರು ನಾನಾ ಬಳಕೆದಾರ ಉತ್ಪನ್ನಗಳ ಮತ್ತು ಸೇವೆಗಳ ಪ್ರಚಾರಕ್ಕಾಗಿ ಕೆಲವೊಮ್ಮೆ ಅತ್ಯಂತ ಕಲಾತ್ಮಕವಾಗಿ ಟಿ.ವಿ. ಜಾಹೀರಾತು ತುಣುಕುಗಳನ್ನು ಸೃಷ್ಟಿಸುತ್ತಾರೆ. ಭಾರತದಲ್ಲಿ ಜಾಹೀರಾತು ಉದ್ಯಮದವರು ಕಲಾತ್ಮಕವಾಗಿ ಹಾಗೂ ಬಾಲಿವುಡ್ ಶೈಲಿಯಲ್ಲಿ ಭಾವನಾತ್ಮಕವಾಗಿ ನಾಟಕೀಯ ಪ್ರಸಂಗಗಳನ್ನು ತಯಾರಿಸುತ್ತಾರೆ. ಕೋಟ್ಯಂತರ ರೂಪಾಯಿ ಬಜೆಟ್‌ಹಾಕಿಕೊಳ್ಳುವ ಉದ್ಯಮ ಸಂಸ್ಥೆಗಳಿಗಾಗಿ ದೃಶ್ಯ ಮಾಧ್ಯಮ (ಮುಖ್ಯವಾಗಿ ಟಿ.ವಿ.) ಮುದ್ರಣ ಮಾಧ್ಯಮ (ಪತ್ರಿಕೆ ನಿಯತಕಾಲಿಕೆಗಳು ಇತ್ಯಾದಿ) ಮತ್ತು ಹೊರಾಂಗಣ ಜಾಹೀರಾತು ಫಲಕ ಬಿತ್ತಿ, ಚಿಮ್ಮು ಬೆಳಕಿನ ದೃಶ್ಯ ಇತ್ಯಾದಿ ಎಲ್ಲ ಸೇರಿಸಿ ಒಂದೇ ಜಾಹೀರಾತಿನ ಕ್ಯಾಂಪೈನ್ ಸಿದ್ಧಪಡಿಸುತ್ತಾರೆ. ಕೆಲವು ದಿನ ಎಲ್ಲೆಲ್ಲೂ ಆ ಒಂದೇ ಜಾಹೀರಾತು ಕಣ್ಣಿಗೆ ಬೀಳುತ್ತದೆ. ಬಹಳ ಚೆನ್ನಾಗಿರುವ ಜಾಹೀರಾತನ್ನು ಪದೇ ಪದೇ ಬಿಂಬಿಸಿ ಕೊನೆಗೆ ನೋಡುಗನಿಗೆ ಅಸಹ್ಯ ಎನಿಸುವಂತೆ ಮಾಡಿ ಬಿಡುತ್ತಾರೆ.

ಮುಖ್ಯವಾಗಿ ‘ಪೀಡೆ’ ಎನಿಸಿಕೊಳ್ಳುವುದು ಟಿ.ವಿ. ಜಾಹೀರಾತುಗಳು. ಏಕೆಂದರೆ ಒಳ್ಳೆಯ ರಸಮಯ ಸನ್ನಿವೇಶ ನೋಡುತ್ತಿರುವಾಗ ಅಡ್ಡ ಬರುವಂತೆ ಜಾಹೀರಾತನ್ನು ನೋಡುಗನ ಮುಖದ ಮೇಲೆ ಚೆಲ್ಲುತ್ತಾರೆ. ತನಗಾಗುವ ರಸಾಭಾಸವನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ. ಅಪ್ಯಾಯಮಾನವಾಗಿ ಇರುವಂತೆ ಬಿಂಬಿಸಿದ ಒಳ್ಳೆಯ ಜಾಹೀರಾತನ್ನು ಸಹಾ ಕ್ರಮೇಣ ದ್ವೇಷಿಸುವಂತೆ ಪದೇ ಪದೇ ತೆರೆ ಮೇಲೆ ಚೆಲ್ಲುತ್ತಾರೆ. ನೋಡಲು ಕುಳಿತ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಇಷ್ಟವಿಲ್ಲವಾದರೂ ನೋಡಬೇಕಾಗುವ ಜಾಹೀರಾತುಗಳಿಂದ ಟಿ.ವಿ. ಮುಂದೆ ಕುಳಿತವರಿಗೆ ತ್ರಾಸವಾಗುವುದೇ ಅಧಿಕ.

ಟಿ.ವಿ. ಮತ್ತು ಇತರ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ಚೆಲ್ಲಲು ಉದ್ಯಮಿಗಳು ಸದ್ಯ ಭಾರತದಲ್ಲಿ ವೆಚ್ಚ ಮಾಡುವ ಹಣ ವರ್ಷಕ್ಕೆ ೮೫೦೦ ಕೋಟಿ ರೂಪಾಯಿ. ಒಂದೆರಡು ನಿಮಿಷದ, ಬಹುತೇಕ ಸಂದರ್ಭಗಳಲ್ಲಿ ಕೇವಲ ಹಲವು ಸೆಕೆಂಡುಗಳ ಜಾಹೀರಾತನ್ನು ಸಿದ್ಧಪಡಿಸಲು ಜಾಹೀರಾತು ಸಂಸ್ಥೆಗಳು ಲಕ್ಷಾಂತರ ರೂಪಾಯಿ ಪಡೆಯುತ್ತಾರೆ. ‘ಉದ್ದೇಶಿತ ಪರಿಣಾಮ’ ಸಾಧಿಸಲು ಏನೆಲ್ಲ ಕಸರತ್ತು ಮಾಡುತ್ತಾರೆ. ಎಷ್ಟಾದರೂ ಜಾಹೀರಾತಿಗಾಗಿ ವೆಚ್ಚ ಮಾಡುವ ಒಟ್ಟು ಹಣದಲ್ಲಿ ಅರ್ಧಪಟ್ಟು ಭಾಗವು ಪತ್ರಿಕೆ ಮತ್ತು ನಿಯತಕಾಲಿಕೆಗಳ ಜಾಹೀರಾತೇ ತಿಂದು ಹಾಕುತ್ತದೆ.

ಜಾಹೀರಾತಿಗಾಗಿ ವೆಚ್ಚವಾಗುವ ಒಟ್ಟು ಹಣ ಪ್ರತಿ ವರ್ಷ ಏರುತ್ತಲೇ ಹೋಗುತ್ತದೆ. ಎಪ್ಪತ್ತರ ದಶಕದಲ್ಲಿ ಒಂದು ವರ್ಷ ಹಿಂದಿನ ಸಾಲಿಗಿಂತ ಶೇ. ೫೦ ರಷ್ಟು ಅಧಿಕ ಹಣವನ್ನು ಜಾಹೀರಾತು ತಯಾರಿಸುವವರು ಪಡೆದಿದ್ದರು. ಜಾಹೀರಾತು ವೆಚ್ಚದ ವಾರ್ಷಿಕ ವೃದ್ಧಿ ದರ ಶೇ. ೧೦ ಅಥವಾ ಶೇ. ೨೦ ಆಗಿರಲಿಕ್ಕೆ ಏನೂ ಅಡ್ಡಿ ಇರುತ್ತಿರಲಿಲ್ಲ. ಆರ್ಥಿಕ ಹಿಂಜರಿತದ ಕಾರಣ ಪ್ರಥಮ ಬಾರಿಗೆ ಮುಂಬರುವ ಒಂದು ವರ್ಷ ಅವಧಿಯಲ್ಲಿ ಈ ಸಾಲಿನ ೪೮೦೦ ಕೋಟಿ ರೂಪಾಯಿಗಿಂದ ಕಡಿಮೆ ವೆಚ್ಚವಾಗಲಿಕ್ಕೂ ಸಾಕು ಎಂಬ ಅಂದಾಜು ವರ್ಷಾಂತ್ಯ ವೇಳೆ ವ್ಯಕ್ತವಾಗಿದೆ.

ಜಾಹೀರಾತನ್ನು ಸಿದ್ಧಪಡಿಸುವುದು ಮತ್ತು ಅನಂತರ ಪ್ರಕಟ, ಪ್ರಸಾರ ಮತ್ತು ಪ್ರದರ್ಶನ ಸಲವತ್ತನ್ನು ಒದಗಿಸುವ ಈ ಉದ್ಯಮ ಸ್ವತಃ ದೊಡ್ಡದು. ಟಿ.ವಿ. ಚಾನೆಲ್‌ಗಳಲ್ಲಿ ಪತ್ರಿಕೆ ನಿಯತಕಾಲಿಕೆಯಲ್ಲಿ ಕೆಲಸ ಮಾಡುವ ಕೆಲವು ಕೋಟಿ ಜನಕ್ಕೆ ಇದು ಜೀವನೋಪಾಯ. ಒಂದು ಒಳ್ಳೆಯ ಧಾರಾವಾಹಿ ನಿರ್ಮಿಸಬೇಕಾದರೆ, ಉಪಯುಕ್ತವಾಗಿರುವಂತೆ ಪತ್ರಿಕೆ ಅಥವಾ ನಿಯತಕಾಲಿಕೆ ತರಬೇಕಾದರೆ ಜಾಹೀರಾತು ಮೂಲಕ ಆದಾಯ ವಿದ್ದರೇನೇ ಸಾಧ್ಯ. ಇಷ್ಟವಿಲ್ಲದ ಜಾಹೀರಾತನ್ನು ನೋಡಿಯಾದರೂ ತಮಗೆ ಬೇಕಾದ ಧಾರವಾಹಿಯ ಪ್ರಸಾರವನ್ನು ನೋಡುಗ ನಿರೀಕ್ಷಿಸಬೇಕಾಗುತ್ತದೆ. ಉತ್ತಮ ಪತ್ರಿಕೆ ಅಥವಾ ನಿಯತಕಾಲಿಕವನ್ನು ಬಯಸುವುದಾದರೆ ಅದರ ಜಾಹೀರಾತನ್ನು ತಪ್ಪಿಸಿಕೊಳ್ಳಲಾಗದು. ಇದು ವಾಸ್ತವ.

ಹಾಗಿರುವಾಗ ಜಾಹೀರಾತುಗಳು ಕಡಿಮೆ ಆಗದಿದ್ದರೂ ಇನ್ನಷ್ಟು ಹೆಚ್ಚುವುದಿಲ್ಲ ಎನ್ನುವ ಅಂಶ ಬಳಕೆದಾರನ ಪಾಲಿಗೆ ಆಪ್ಯಾಯಮಾನಕರ. ಜಾಹೀರಾತುಗಳಿಂದ ತಲೆ ಚಿಟ್ಟು ಹಿಡಿಸುವುದು ಕಡಿಮೆಯಾಗದಿದ್ದರೂ ಈಗಿನ ಮಟ್ಟದಲ್ಲೆ ಮುಂದುವರೆಯುತ್ತದೆ ಎನ್ನುವುದು ಸಹ್ಯವೇ ಸರಿ.

ಜಾಹೀರಾತುಗಳ ಗುಣ, ಪ್ರಭಾವ ಹಾಗೂ ಅದರ ಜೊತೆಗೆ ಅನಿವಾರ್ಯತೆ ಏನೇ ಆದರೂ ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವವರಿಗೆ ಲಾಭ ದಕ್ಕುವುದೆ? ಸಾಮಾನ್ಯವಾಗಿ ತಮ್ಮ ಉತ್ಪನ್ನದ ಮಾರಾಟ ವೃದ್ಧಿಯಾಗಲೆಂದು ಕೋಟ್ಯಂತರ ರೂಪಾಯಿ ವೆಚ್ಚಕ್ಕೆ ಅವರು ಸಿದ್ಧರಾಗುತ್ತಾರೆ. ಸಾಕಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳಲ್ಲಿ ಆ ಗುರಿ ಸಾಧಿಸುತ್ತಾರೆ. ಜಾಹೀರಾತು ಮಾಡಿದರೂ ಮಾರಾಟ ಸಾಕಷ್ಟು ಹೆಚ್ಚದೆ ಇರುವ ಪ್ರಕರಣಗಳೂ ಉಂಟು.

ಎಷ್ಟೋ ಬಾರಿ ಈ ಪ್ರಮಾಣದಲ್ಲಿ ಜಾಹೀರಾತಿಗೆ ಹಣ ವೆಚ್ಚ ಮಾಡುವ ಬದಲು ಉತ್ಪನ್ನದ ಬೆಲೆಯನ್ನು ಗಮನಾರ್ಹವಾಗಿ ಇಳಿಸುವುದು ಯುಕ್ತವೆನಿಸದೇನು ಎಂದು ಬಳಕೆದಾರ ಭಾವಿಸುತ್ತಾನೆ. ಈ ಅನಿಸಿಕೆ ಯುಕ್ತವಲ್ಲದ್ದೇನೂ ಅಲ್ಲ. ಆದರೆ ಉದ್ಯಮದವರು ಯೋಚಿಸುವ ರೀತಿಯೇ ಬೇರೆ. ವಾಸ್ತವವಾಗಿ ಜಾಹೀರಾತನ್ನು ಪದೇ ಪದೇ ಬಳಕೆದಾರನ ಮೇಲೆ ಅಪ್ಪಳಿಸುವಂತೆ ಮಾಡಿ ಅವನ ತಲೆತೊಳೆದಿಟ್ಟರೆ ದೀರ್ಘಾವಧಿ ಲಾಭ ಇರುತ್ತದೆಂದು ಉತ್ಪಾದಕ ನಂಬುತ್ತಾನೆ. ನಿರ್ದಿಷ್ಟ ಉತ್ಪನ್ನ ಅಲ್ಲವಾದರೂ ಕಂಪೆನಿಯ ಹೆಸರು, ಕಂಪೆನಿಯ ಬ್ರ್ಯಾಂಡ್‌ಇವೆಲ್ಲ ಗ್ರಾಹಕನ ತಲೆಯಲ್ಲಿ ನೆಲೆಯೂರಿ ನಿಂತರೆ ಆತ ಖರೀದಿಗೆ ಹೋದಾಗಲೆಲ್ಲ ತನ್ನ ಪರವಾಗಿ ನಿರ್ಣಯ ಕೈಗೊಳ್ಳಲು ಅವಕಾಶವಾಗುತ್ತದೆ ಎಂಬುದೇ ಆಶಯ.

ವಾಸ್ತವವಾಗಿ ಜಾಹೀರಾತು ಒಂದೇ ಉತ್ಪನ್ನದ ಮಾರಾಟ ಕ್ಷಮತೆಯನ್ನು ನಿರ್ಣಯಿಸುವುದಿಲ್ಲ. ಉತ್ಪನ್ನದ ಗುಣಮಟ್ಟ ಗ್ರಾಹಕನ ನಿರೀಕ್ಷೆಗಿಂತ ಕೆಳಗೆ ಇದ್ದರೆ ಎಷ್ಟೇ ದೊಡ್ಡದಾಗಿ ಹಾಗೂ ಚೆನ್ನಾಗಿ ಜಾಹೀರು ಮಾಡಿದರೂ ಪ್ರಯೋಜನ ಆಗುವುದಿಲ್ಲ. ನಿರಾಶೆಗೊಂಡ ಗ್ರಾಹಕ ಮತ್ತೊಮ್ಮೆ ಖರೀದಿಸುವುದಿಲ್ಲ ಮಾರಾಟ ವ್ಯವಸ್ಥೆಯನ್ನು ವ್ಯಾಪಕವಾಗಿ ದಕ್ಷತೆಯಿಂದ ಮಾಡದೆ ಜಾಹೀರಾತು ಬಿಡುಗಡೆ ಮಾಡಿದರೆ ಅದು ವ್ಯರ್ಥವಾಗುತ್ತದೆ. ಎಷ್ಟೆಲ್ಲ ಜಾಹೀರಾತು ಮಾಡಿದರೂ ಉತ್ಪನ್ನ ಚೆನ್ನಾಗಿದ್ದರೂ ಮಾರಾಟ ಜಾಲದ ವರ್ತಕರು ವಿತರಕರು ಮುಂತಾದವರು ಸಹಕರಿಸದಿದ್ದರೆ ಉತ್ಪನ್ನವು ಅಪೇಕ್ಷಿತ ಗ್ರಾಹಕನ ಕೈ ಸೇರುವುದಿಲ್ಲ. ಹೀಗಾಗಿ ಜಾಹೀರಾತು ಒಂದು ಪ್ರಮುಖ ಕೊಂಡಿ ಮಾತ್ರ.

ಜಾಹೀರಾತು ನೀಡುವವರೂ ಅದನ್ನು ಗ್ರಾಹಕನ ತಲೆಗೆ ತುಂಬುವ ಉದ್ಯೋಗದಲ್ಲಿರುವ ಜಾಹೀರಾತು ಏಜೆನ್ಸಿಗಳವರೂ ಒಂದು ಅಂಶವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು; ಗ್ರಹಕನು ಜಾಹೀರಾತುದಾರರು ಹೇಳುವುದನ್ನೆಲ್ಲ ಸುಲಭವಾಗಿ ನಂಬಿ ಬಿಡುವುದಿಲ್ಲ. ಭಾರತದಲ್ಲಂತೂ ಪರೀಕ್ಷಿಸಿ ನೋಡುವ ಬಳಕೆದಾರ ಪ್ರಜ್ಞೆ ಅಧಿಕ. ಬಳಕೆದಾರನನ್ನು ಏಮಾರಿಸುವ ನಾನಾ ಮಾರ್ಗಗಳನ್ನು ಜಾಹೀರಾತುದಾರರು ಕಂಡು ಕೊಂಡಿರಬಹುದು. ಆದರೆ ಯಾವುದೇ ಉತ್ಪನ್ನ ಅಥವಾ ಸೇವೆಯು ಕೊಟ್ಟ ಹಣಕ್ಕೆ ತಕ್ಕುದಾಗಿದೆಯೇ ಎಂದು ಲೆಕ್ಕ ಹಾಕುವುದು; ಬೆಲೆ ಹೋಲಿಸಿ ನೋಡುವುದು ಭಾರತದಲ್ಲಂತೂ ಸಾಕಷ್ಟು ಉಂಟು.

ಆದರೆ ಇಡೀ ಉದ್ಯಮ ವಲಯವೇ ಒಂದಾಗಿ ಬಳಕೆದಾರನನ್ನು ಒತ್ತೆಯಾಳಾಗಿ ಇರಿಸಿಕೊಂಡು ಅವನು ಖರ್ಚು ಮಾಡುವಂತೆ ನೋಡಿಕೊಳ್ಳುತ್ತಾರೆ; ಸಾರಾಸಗಟಾಗಿ ಅವನನ್ನು ಹಿಂಡುತ್ತಾರೆ; ಆ ಮಾತು ಬೇರೆ.