‘ಅತ್ಯಂತ ಪ್ರಬಲ; ಆದರೆ ಏನೂ ಅಧಿಕಾರವಿಲ್ಲ. ಯಾರು ಹೇಳಿ?” ಈ ಒಗಟಿಗೆ ಉತ್ತರವೆಂದರೆ ಗ್ರಾಹಕ ಅಥವಾ ಬಳಕೆದಾರ.

ಭಾರತದಲ್ಲಿ ಗ್ರಾಹಕ ಚಳುವಳಿ ಪರಿಣಾಮಕಾರಿಯಾಗಿ ಕಾಲು ಶತಮಾನ ಸಂದಾಯವಾಗಿದೆ. ಆದರೂ ಗ್ರಾಹಕನಾದವರು ಇಲ್ಲಿ ನಿರ್ಣಾಯಕ ಆಗಿಯೇ ಇಲ್ಲ.

ಪ್ರವಾಸಿ ಏಜೆಂಟ್ ಮೋಸ ಮಾಡುತ್ತಾನೆ; ಇಲ್ಲವೇ ಸೈಟು ಕೊಡುತ್ತೇನೆಂದು ಹಣ ಪಡೆದು ಕೈಕೊಟ್ಟಿದ್ದಾರೆ; ಅಥವಾ ಯಾವುದೇ ಉತ್ಪನ್ನ-ಸೇವೆ ಒದಗಿಸುವುದಾಗಿ ಒಪ್ಪಂದವಾಗಿ ಮೋಸ ವಾಗಿದೆ. ಈ ಬಗೆಯ ಹಲವು ಪ್ರಸಂಗಗಳಲ್ಲಿ ಗ್ರಾಹಕರ ವೇದಿಕೆ ನ್ಯಾಯ ಒದಗಿಸುತ್ತದೆ. ಸಿವಿಲ್‌ದಾವೆ ಬದಲು ಗ್ರಾಹಕರ ವೇದಿಕೆಗೆ ಹೋಗಿ ಗ್ರಾಹಕ ನ್ಯಾಯ ಪಡೆಯುತ್ತಾನೆ. ನೂರಾರು ಪ್ರಸಂಗಗಳಲ್ಲಿ ಗ್ರಾಹಕನಿಗೆ ನ್ಯಾಯ ಸಂದಾಯವಾಗಿದೆ. ಆಗುತ್ತಿದೆ. ಕೋರ್ಟಿಗೆ ಹೋಗಿದ್ದರೆ ಇಷ್ಟು ಸುಲಭ ಆಗುತ್ತಿರಲಿಲ್ಲ ಎಂದು ಅನಿಸಿರಲೂ ಬಹುದು. ಆದರೆ ಗ್ರಾಹಕರ ವೇದಿಕೆಗಳಲ್ಲಿ ಕೂಡಾ ಪ್ರಕರಣಗಳ ಸಂಖ್ಯೆ ಬೆಳೆದು ನ್ಯಾಯದಾನ ವಿಳಂಬವಾಗುತ್ತಿದೆ.

ಅಲ್ಲಿಗೆ ಸ್ವಲ್ಪ ಹೆಚ್ಚೂ ಕಡಿಮೆ ಗ್ರಾಹಕ ವೇದಿಕೆಗಳು ಪರ್ಯಾಯವಾಗಿ ಬೆಳೆದು ನ್ಯಾಯ ವಿತರಣಾ ವ್ಯವಸ್ಥೆ ಆತಿಯೇ ಹೊರತು ಮತ್ತೇನಿಲ್ಲ.

ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಮಾರ್ಚ್‌೧೫ರಂದು ಬಂದಿತ್ತು.

ಗುಣಮಟ್ಟ, ದರ ಖಾತರಿ, ತೂಕ ಅಳತೆ ಮುಂತಾದ ಪರಿಣಾಮ, ದೋಷಪೂರಿತ ಸರಕಿನ ವಿರುದ್ಧ ರಕ್ಷಣೆ ಮುಂತಾದ ಅಂಶಗಳ ಸಂಬಂಧ ಗ್ರಾಹಕನು ಹಕ್ಕು ಸಾಧಿಸುವುದಕ್ಕೆ ಅವಕಾಶವಿದೆ ಎಂಬುದನ್ನು ಬಿಂಬಿಸಲು ಕೇಂದ್ರ ಸರ್ಕಾರ ಜಾಹೀರಾತು ಬಿಡುಗಡೆ ಮಾಡಿತ್ತು. ಗ್ರಾಹಕರ ಕುಂದುಕೊರತೆಗಳ ಪರಿಹಾರಕ್ಕಾಗಿ ಗ್ರಾಹಕರ ಜಿಲ್ಲಾ ವೇದಿಕೆ ರಾಜ್ಯ ಮಟ್ಟದ ಆಯೋಗ ಅಥವಾ ರಾಷ್ಟ್ರೀಯ ಆಯೋಗಗಳು ಶ್ರಮಿಸುತ್ತಿವೆ ಎಂಬ ಅಂಶವೂ ಪ್ರಸ್ತಾಪಕ್ಕೆ ಬಂದಿತ್ತು.

ಒಳ್ಳೆಯದೇ ಸರಿ. ಸದುದ್ದೇಶದಿಂದ ಮಾಡಿರುವ ಗ್ರಾಹಕ ಹಿತರಕ್ಷಣಾ ಕ್ರಮಗಳು ಶ್ಲಾಘನೀಯವೇ ಸರಿ.

ಆದರೆ ಯಾವುದೇ ಪರಿಣಾಮವನ್ನು ಕಾಣದ ಬೃಹತ್ತಾಗಿ ಉಳಿದಿರುವ ಮೂಲ ಭೂತ ಸ್ವರೂಪದ ಸಮಸ್ಯೆಗಳು ಹಾಗೆಯೇ ಉಳಿದಿವೆ. ಈಗ ಏನಿದ್ದರೂ ಕಾನೂನು ತಿಳಿವಳಿಕೆ ಇರುವ ಹಾಗೂ ಹೋರಾಡಬಲ್ಲ ಮನೋಭಾವನದ ಗ್ರಾಹಕನಿಗೆ ಮಾತ್ರ ನ್ಯಾಯ ಸಿಕ್ಕೀತು. ಆದರೆ ತಂತಮ್ಮವೇ ಆದ ದೈನಂದಿನ ಜಂಜಡಗಳಲ್ಲಿ ಸಿಲುಕಿದ ಹಾಗೂ ಯಾರಲ್ಲೂ ಮೊರೆಯಿಡಲಾಗದ ಅಸಂಖ್ಯಾತ ಗ್ರಾಹಕರು ಹಕ್ಕುಗಳಿಂದ ವಂಚಿತರಾಗಿಯೇ ಮುಂದುವರೆದಿದ್ದಾರೆ. ಕಾನೂನು ಇದ್ದರೂ ಕಾನೂನು ಕ್ರಮಗಳಿಂದ ನುಣುಚಿಕೊಳ್ಳಬಹುದುದಾದ ಮಾರ್ಗೋಪಾಯಗಳನ್ನು ಬಲಿಷ್ಠರು ಕಂಡುಕೊಂಡಿದ್ದಾರೆ. ಅವರ ವಿರುದ್ಧ, ಎದುರು ದಿಕ್ಕಿನಲ್ಲಿ ಈಜಿ ಪಾರಾಗಲಾರರು ಸಾಮಾನ್ಯ ಜನರು.

ಉದಾಹರಣೆಗೆ ಪೊಟ್ಟಣ ಸರಕಿನ ಮೇಲೆ ಮುದ್ರಿಸುವ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ. ಚಿಲ್ಲರೆ ಮಾರಾಟಗಾರನು ಅತ್ಯಂತ ಸಂತೋಷದಿಂದ ಆ ಬೆಲೆಗೆ ಸರಕನ್ನು ಮಾರುತ್ತಾನೆ. ಸರ್ವವಸ್ತು ಮಳಿಗೆಗಳಲ್ಲಿ ಗರಿಷ್ಠ ಚಿಲ್ಲರೆ ಬೆಲೆಯೇ ಸಾಧುವಾದ ಬೆಲೆ. ಗರಿಷ್ಠ ಎಂದರೆ ಅತಿ ಹೆಚ್ಚು ಎಂದು ಅರ್ಥ. ಅಲ್ಲಿಯವರೆಗೆ ಬೆಲೆ ವಿಧಿಸಬಹುದು ಎಂಬುದು ನಿರ್ಣಯ. ಅಂದರೆ ಅದಕ್ಕಿಂತ ಕಡಿಮೆ ಬೆಲೆಗೂ ಮಾರಲು ಶಕ್ಯವಿದೆ. ‘ಬಯ್‌ಎಂಡ್ ಸೇವ್’ ಎಂಬ ಮಾದರಿಯ ವ್ಯವಹಾರ ನಡೆಸುತ್ತ ಕನಿಷ್ಠ ಲಾಭ ಇರಿಸಿಕೊಂಡು ಬಹುಪಾಲು ಬೆಲೆ ಅನುಕೂಲವನ್ನು ಗ್ರಾಹಕನಿಗೆ ವರ್ಗಾಯಿಸುವ ಮಾರಾಟಗಾರರು ಎಲ್ಲೆಡೆ ಇರುತ್ತಾರೆ. ಇವರು ಸರಕನ್ನು ಗರಿಷ್ಠ ಬೆಲೆಗಿಂತ ಶೇಕಡಾ ಐದು ಅಥವಾ ಎಂಟರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಇಂಥವರನ್ನು ಗ್ರಾಹಕರು ಮುತ್ತಿಕೊಳ್ಳುತ್ತಾರೆ. ಬೇಕಾದ್ದನ್ನು ಖುಷಿಯಿಂದ ಖರೀದಿಸಿ ಮನೆಗೆ ಹೋಗುತ್ತಾರೆ. ಆದರೆ ಮುಕ್ಕೆಲ್ಲ ಅಂಗಡಿಗಳಲ್ಲಿ ಸರ್ವ ವಸ್ತು ಮಳಿಗೆಗಳಲ್ಲಿ ನಮೂದಿಸಲಾದ ಗರಿಷ್ಠ ಬೆಲೆಗೆ ಮಾರಿದರೆ ಯಾರೂ ಆಕ್ಷೇಪಿಸುವಂತಿಲ್ಲ. ಅಂದರೆ ಗ್ರಾಹಕ ತನಗೆ ಅರಿವಿರುವ ಹಾಗೆಯೇ ಹೆಚ್ಚು ತೆರುತ್ತಿರುತ್ತಾನೆ. ನಿರ್ವಾಹವಿಲ್ಲ.

ಗರಿಷ್ಠ ಬೆಲೆ ನಿಗದಿ ಮಾಡುವಾಗ ಅಸಲು ಬೆಲೆಗೂ, ವಿತರಣಾ ವೆಚ್ಚ ಅನುಸರಿಸಿ ಬೇರೆ ಬೇರೆ ಕಡೆಗೆಂದು ನಿಗದಿ ಆಗುವ ಗರಿಷ್ಠ ಚಿಲ್ಲರೆ ಬೆಲೆಗೂ, ವ್ಯತ್ಯಾಸ ಏನಿರುವುದೋ ಅದನ್ನು ನಿರ್ಣಯಿಸುವುದು ಹೇಗೆಂದು ಗ್ರಾಹಕನಿಗೆ ತಿಳಿದೇ ಇರುವುದಿಲ್ಲ. ವಿಶೇಷತಃ ಬಳಕೆದಾರ ವಸ್ತುಗಳಾದ ಸೋಪು, ಟೂತ್‌ಪೇಸ್ಟು, ಪೇಯ, ಪೊಟ್ಟಣ ಆಹಾಯ ಮತ್ತಿತರ ಸಹಸ್ರಾರು ತಯಾರಿಕಾ ಸಿದ್ಧ ವಸ್ತುಗಳ ಬೆಲೆಗಳನ್ನು ಅನಗತ್ಯವಾಗಿ ಹೆಚ್ಚಾಗಿ ನಮೂದಿಸುವ ಪರಿಪಾಟದಿಂದ ಗ್ರಾಹಕನಿಗೆ ಹೊರೆಯಾಗುತ್ತಿರುವುದು ನಿಜ. ಮಾರಾಟಗಾರನು ತನಗಿಷ್ಟವಾದರೆ ಕಡಿಮೆ ಬೆಲೆಗೆ ಕೊಡಲು ಸಾಧ್ಯ ಎನ್ನುವಂಥ ವ್ಯವಸ್ಥೆ ವಾಸ್ತವವಾಗಿ ಮಾರಾಟಗಾರನಿಗೆ ಅನುಕೂಲ ಮಾಡಿಕೊಡುವುದೇ ಹೊರತು ಅನ್ಯಥಾ ಅಲ್ಲ.

ಹಲವು ಐಟಂಗಳಲ್ಲಿ ಮಾತ್ರವೇ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು ಎಲ್ಲ ತೆರಿಗೆಗಳನ್ನು ಸೇರಿದಂತೆ ನಮೂದಿಸುತ್ತಾರೆ. ಆದರೆ ಇನ್ನು ಹಲವು ಐಟಂಗಳ ಬೆಲೆ ನಮೂದಿಸುವಾಗ ‘ಸ್ಥಳೀಯ ತೆರಿಗೆಗಳು ಪ್ರತ್ಯೇಕ’ ಎಂದೇ ಬರೆಯುತ್ತಾರೆ. ಇದು ಎಷ್ಟೆಂದು ಗ್ರಾಹಕನಿಗೆ ತಿಳಿದೇ ಇರುವುದಿಲ್ಲ. ಮಾರಾಟಗಾರರ ಸಂಘಗಳವರು ಕೆಲವೊಮ್ಮೆ ಯಾವ ಸ್ಥಳೀಯ ತೆರಿಗೆಗಳನ್ನು ಯಾವ ಶೇಕಡಾವಾರು ಪ್ರಮಾಣದಲ್ಲಿ ವಿಧಿಸಲು ಶಕ್ಯವಿದೆ ಎಂಬುದಾಗಿ ವಿವರ ಮುದ್ರಿಸಿ ಹಂಚುತ್ತಾರೆ. ಮಾರಾಟಗಾರ ಆಗ ಗ್ರಾಹಕನಿಗೆ ಯಾವುದೇ ರಿಯಾಯಿತಿ ತೋರಿಸದೆ ಅಷ್ಟೂ ಮೊತ್ತವನ್ನು ಜಡಿಯುತ್ತಾನೆ. ಬಹುಶಃ ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ಮೇಲೆ ‘ಸ್ಥಳೀಯ ತೆರಿಗೆ ಪ್ರತ್ಯೇಕ’ ಎಂಬ ಬಾಧೆಗೆ ಪರಿಹಾರ ಸಿಕ್ಕೀತೇನೋ!

ಸಕಲ ಸರಕಿನ ಬೇಡಿಕೆ ಕುಸಿದಿರುವ ಕಾಲವಿದು. ಗ್ರಾಹಕನ ಖರೀದಿ ಸಾಮರ್ಥ್ಯವೇ ಕಡಿಮೆಯಾಗಿದೆ. ಆರ್ಥಿಕ ಹಿಂಜರಿತರ ಈ ಹಿನ್ನೆಲೆಯಲ್ಲ್ಲಿ ತಯಾರಕರ ಪಾಲಿಗೆ ಸಮಸ್ಯೆಯಾಗಿದೆ. ಸರಕು ಉಳಿದು ಹೋಗುತ್ತಿದೆ. ತಯಾರಿಕೆಯನ್ನೇ ಕಡಿಮೆ ಮಾಡಿದರೂ ನಿರ್ದಿಷ್ಟ ಉತ್ಪನ್ನ; ಗೋಡೌನುಗಳಲ್ಲಿ ಕೆಲವೊಮ್ಮೆ ಉಳಿದು ಹೋಗುತ್ತದೆ. ಕಷ್ಟ ಕಾಲದಲ್ಲಿ ನಗದಿಗೆ ಬೇಡಿಕೆ ಬಹಳ ಹೇಗಾದರೂ ಮಾಡಿ ಸರಕನ್ನು ಮಾರಿಕೊಳ್ಳಬೇಕು ಎನ್ನುವ ಪರಿಸ್ಥಿತಿ. ಆಗ ಶೇ. ೨೦-೩೦-೫೦ ಹೀಗೆ ವಿವಿಧ ಪ್ರಮಾಣದ ಹೆಚ್ಚುವರಿ ಉತ್ಪನ್ನವನ್ನು ಸಿದ್ಧಪಡಿಸಿದ ಪೊಟ್ಟಣದ ಬೆಲೆ ಏರಿಸದೆ ಉಚಿತವಾಗಿ ನೀಡುತ್ತಾರೆ. ಗ್ರಾಹಕ ಸಂತುಷ್ಟನಾಗಿ ಅಂಥ ಸರಕನ್ನೇ ಆಯ್ದುಕೊಳ್ಳುತ್ತಾನೆ. ಸರಿಯೇ ಸರಿ. ಆದರೆ ಲಾಭ ಕಡಿಮೆ ಮಾಡಿಕೊಳ್ಳಬಹುದು ಮಾತ್ರ. ಶೇ. ೨೦ ರಿಂದ ಶೇ. ೫೦ರ ವರೆಗೆ ಉಚಿತವಾಗಿ ಕೊಡುತ್ತಾನೆ ಎಂದರೆ ಆತ ಇಟ್ಟಿರುವ ಲಾಭಾಂಶವು ಕನಿಷ್ಠ ಅಷ್ಟಾದರೂ ಇರುತ್ತದೆ ಎಂದರ್ಥ!

ಇಲ್ಲಿ ಗ್ರಾಹಕನಾದವನು ಎತ್ತುವ ಪ್ರಶ್ನೆ ಎಂದರೆ; ತಯಾರಕನು, ಅದರಲ್ಲೂ ಬೃಹತ್ ಬಳಕೆ ನಿತ್ಯೋಪಯೋಗಿ ತಯಾರಿಕಾ ಸರಕನ್ನು ತಯಾರಿಸುವವನು. ಅಷ್ಟೊಂದು ಲಾಭ ಇರಿಸಲು ಅವಕಾಶ ಮಾಡಿಕೊಡುವುದು. ಸರಿಯೇ? ಇದನ್ನೇ ಲಾಭಕೋರತನ ಎನ್ನುವುದು. ಇದನ್ನು ಪ್ರಶ್ನಿಸುವ ಹಕ್ಕು ಗ್ರಾಹಕನಿಗೆ ಇದೆ ಎಂದು ಯಾರಾದರೂ ಹೇಳಬಹುದೇ?

ಈ ವಿದ್ಯಮಾನಕ್ಕೆ ಇನ್ನೊಂದು ಕುತೂಹಲಕಾರಿ ಆಯಾಮವೂ ಉಂಟು. ಸೋಪು, ಟೂತ್‌ಪೇಸ್ಟು, ಶೃಂಗಾರ ಸಾಧನೆ ಮುಂತಾದ ಬೃಹತ್ ಬಳಕೆಯ ವಸ್ತುಗಳ ಬೆಲೆಯನ್ನು ತಯಾರಕರು ಸದಾಕಾಲ ಏರಿಸುತ್ತಲೇ ಹೋಗುತ್ತಾರೆ. ಈಗಿನ ಬೆಲೆ ಇನ್ನು ಮೂರು ತಿಂಗಳಿಗೆ ಇರುವುದಿಲ್ಲ. ಎರಡು ಮೂರು ವರ್ಷದಲ್ಲಿ ಬೆಲೆ ಎರಡರಷ್ಟು ಆಗುತ್ತದೆ; ಬೇಡಿಕೆಯೇ ಇಲ್ಲ; ಮಾರುವುದೇ ಕಷ್ಟ; ಎನ್ನುವಂಥ ಕಾಲದಲ್ಲಿ ಕೂಡಾ ಇದೆಂಥ ಬೆಲೆ ಏರಿಕೆ?

ವಿಪರ್ಯಾಸವೆಂದರೆ ಬೆಲೆಗಳನ್ನು ಅಸಮರ್ಥನೀಯವಾಗಿ; ಕೊಳ್ಳುವವರು ಯಾವುದೇ ಬೆಲೆ ತೆತ್ತಾದರೂ ಕೊಳ್ಳುತ್ತಾರೆ ಎನ್ನುವ ಒಂದೇ ಕಾರಣದಿಂದ; ಯದ್ವಾತದ್ವಾ ಏರಿಸುವಲ್ಲಿ ಕೇಂದ್ರ ಸರ್ಕಾರವೂ ಸ್ವತಃ ಇಷ್ಟಪಟ್ಟು ಷಾಮೀಲಾಗುತ್ತದೆ. ಬೆಲೆ ಏರಿಕೆಗೆ ಅವಕಾಶ ಕೊಟ್ಟಂತೆ ತೆರಿಗೆ ಸುಂಕಗಳ ಬಾಬಿನ ಹಣ ಬೊಕ್ಕಸಕ್ಕೆ ಸೇರವುದು ಹೆಚ್ಚುತ್ತದೆ ಎಂಬ ಆಸೆ ಅವರದು!

ತಯಾರಕರು ಮಾರಾಟಗಾರರು ಹಾಗೂ ಸರ್ಕಾರ ಪರಸ್ಪರ ಹಿತಾಸಕ್ತಿಗಾಗಿ ಒಂದು ಗೂಡುವಾಗ ಗ್ರಾಹಕನಾದವನು ತನ್ನ ಹಕ್ಕನ್ನು ಕಟ್ಟಿಕೊಂಡು ಏನು ಮಾರಬೇಕು?

ಗ್ರಾಹಕ ಚಳವಳಿ ಭದ್ರವಾಗಿಲ್ಲ, ತೀವ್ರವಾಗಿಲ್ಲ ಎಂದು ಹೇಳುವುದು ಈ ಕಾರಣದಿಂದ. ನೋಡುತ್ತಾ ನೋಡುತ್ತಾ, ಗೊತ್ತಿದ್ದೂ ಗೊತ್ತಿದ್ದೂ, ಸರಕಿನ ಅಸಲು ಯೋಗ್ಯತೆ ಏನಿದೆಯೋ ಅದಕ್ಕೆ ಹೋಲಿಸಿದಾಗ ‘ಬಹಳ ಜಾಸ್ತಿ’ ಎನ್ನುವ ಪ್ರಮಾಣದಲ್ಲಿ ಬೆಲೆ ತೆರುವುದು ಗ್ರಾಹಕನ ಹಕ್ಕಿನ ಪಾಲನೆ ಆಗುವುದಿಲ್ಲ; ಅನಿವಾರ್ಯ ಬಾಧ್ಯತೆಯಾಗಿದೆ.

ಯಾವುದೇ ಒಂದು ದೇಶದಲ್ಲಿ ಬೆಣ್ಣೆಯೋ ಗಿಣ್ಣೋ ಯಾವುದೋ ಒಂದು ಉತ್ಪನ್ನದ ಬೆಲೆ ವಿಪರೀತ ಹೆಚ್ಚಾದಾಗ ಬಳಕೆಯನ್ನೇ ನಿಲ್ಲಿಸಿ ಬಿಕ್ಕಟ್ಟು ಸೃಷ್ಟಿಸಿದರಂತೆ ಗ್ರಾಹಕರು. ಅನಂತರ ಬೆಲೆ ಇಳಿಯಿತಂತೆ. ಇಂಥ ಒಂದು ಸಂದರ್ಭವನ್ನು ನಮ್ಮ ದೇಶದಲ್ಲಿ ಊಹಿಸಿಕೊಳ್ಳಲು ಸಾಧ್ಯವೇ? ಇಂಥ ಚಳುವಳಿ ನಡೆಸಬಹುದಾದರೆ, ಒಂದೇ ಎರಡೇ ಎಷ್ಟೊಂದು ಸಖ್ಯೆಯ ಉತ್ಯನ್ನಗಳ ಬಗೆಗೆ ಹೋರಾಡಬೇಕು?!

ಬಳಕೆದಾರ ವಸ್ತುಗಳಿಗೆ ಭಾರತವು ಒಂದು ದೊಡ್ಡ ಮಾರುಕಟ್ಟೆ ಎಂದೇ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಭಾವಿಸುತ್ತವೆ. ನಾನಾ ಬಗೆಯ ಸಹಸ್ರಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಅವುಗಳ ಪಾಲಿಗೆ ಇರುವ ಅನುಕೂಲ ಎಂದರೆ ಬಳಕೆದಾರ ಹೋರಾಟ ಮಾಡುವುದಿಲ್ಲ ಅನ್ನುವುದು; ಹಾಗೂ ಬೆಲೆ ನಿಗದಿ ಮಾಡಲು ಕಂಪೆನಿಗಳು ಸರ್ವಸ್ವತಂತ್ರ್ಯವಿವೆ ಎನ್ನುವುದು. ಎಲ್ಲಕ್ಕಿಂತ ಹೆಚ್ಚಿನ ಅನುಕೂಲ ಎಂದರೆ ಭಾರತದಲ್ಲಿ ಬಳಕೆಬಾಕ (ಕೊಳ್ಳುಬಾಕ) ಸಂಸ್ಕೃತಿ ಬೆಳೆಯುತ್ತಿದೆ ಎನ್ನುವುದು. ಬೇಕು-ಬೇಕುಗಳಿಗೆ ಅಂತ್ಯವೇ ಇಲ್ಲದಿರುವಾಗ, ಬಳಕೆದಾರನು ಮಾರುಕಟ್ಟೆಗೆ ಬಂದಿದ್ದನ್ನೆಲ್ಲ ಖರೀದಿಸಲೇ ಉತ್ಸುಕನಿದ್ದಾನೆ ಎನ್ನುವಾಗ  ಬಳಕೆದಾರ ಹಿತ ಮೀರಿದಂತೆ ಮಾರುಕಟ್ಟೆ ಪ್ರಧಾನ ಆರ್ಥಿಕತೆ ಬೆಳೆಯುವುದರಲ್ಲಿ ಸಂಶಯವಿಲ್ಲ.

ತಯಾರಿಕಾ ವಸ್ತುಗಳ ಸಂಬಂಧ ಇಷ್ಟೆಲ್ಲ ಪ್ರಸ್ತಾಪಿಸಬಹುದಾದರೆ ಕೃಷಿ ಉತ್ಪನ್ನಗಳ ವಿಷಯ ಬಂದಾಗ ತೀರಾ ತದ್ವಿರುದ್ಧ ಪರಿಸ್ಥಿತಿ. ಭಾರತವು ಕೃಷಿ ಪ್ರಧಾನ ರಾಷ್ಟ್ರ. ಯಾವುದೇ ವರ್ಷ ಮಳೆ ಬರದೆ ಕೃಷಿಗೆ ಹಿನ್ನಡೆಯಾದರೆ ತಕ್ಷಣದ ಮುಂದಿನ ತಿಂಗಳುಗಳಲ್ಲಿ ತಯಾರಿಕಾ ವಸ್ತುಗಳ ಮಾರಟಕ್ಕೆ ಧಕ್ಕೆಯಾಗುತ್ತದೆ. ಇದು ಮತ್ತೆ ಮತ್ತೆ ಅನುಭವಕ್ಕೆ ಬಂದಿರುವ ವಿಚಾರ. ಕೃಷಿ ಉತ್ಪನ್ನ ಆವಕ ಮಾರಾಟಗಳು ತಯಾರಿಕಾ ವಸ್ತುಗಳ ಮೇಲೆ ತೀಕಷ್ಣ ಪರಿಣಾಮ ಬೀರಬಲ್ಲವು. ಆದರೆ ಬೆಲೆ ನಿಗದಿಗೊಳ್ಳುವ ವಿಚಾರ ಬಂದಾಗ ತಯಾರಿಕಾ ವಸ್ತುಗಳಿಗೆ ಇರುವಂಥ ‘ಅನುಕೂಲ’ ಕೃಷಿ ಉತ್ಪನ್ನಕ್ಕೆ ಇಲ್ಲ.

ಎಲ್ಲ ವಸ್ತುಗಳ ಬೆಲೆಯನ್ನು ಮಾರಾಟ ಮಾಡುವವರು (ಅಂದರೆ ಸರಕನ್ನು ಪೇಡೆಗೆ ಬಿಟ್ಟವನು) ನಿಗದಿ ಮಾಡುತ್ತಾರೆ. ಆದರೆ ಕೃಷಿ ಉತ್ಪನ್ನವನ್ನು ಉತ್ಪಾದಕನಾದ ರೈತ ಪೇಟೆಗೆ ತಂದಾಗ ಖರೀದಿದಾರ ‘ಉಷ್ಟಕ್ಕೆ ಕೊಡುತ್ತೀಯಾ’ ಎಂದು ಬೆಲೆ ನಮೂದಿಸುತ್ತಾನೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೀಗೆ ಆದಾಗ ರೈತನು ತನ್ನ ಸರಕನ್ನು ಮಾರುವುದಕ್ಕೆ ಸಮ್ಮತಿಸದೇ ಹೋಗಬಹುದು. ಆ ಮಾತು ಬೇರೆ. ಆದರೆ ಬೆಲೆ ನಿಗದಿ ವಿಚಾರದಲ್ಲಿ ಆತ ಸ್ವತಂತ್ರನಲ್ಲ. ಅದೇ ವಿಪರ್ಯಾಸ.

ಸಿದ್ಧ ವಸ್ತುಗಳ ಬೆಲೆಯನ್ನು, ಮುಖ್ಯವಾಗಿ ಬೆಲೆ ಮುದ್ರಿಸಿದ ಸರಕಿನ ಬಿಕರಿ ಬೆಲೆಯನ್ನು ತಯಾರಕರು ಸತತವಾಗಿ ಏರಿಸುತ್ತಾ ಹೋಗುವುದೇ ಸಾಮಾನ್ಯ. ಆದರೆ ಕೃಷಿ ಉತ್ಪನ್ನದ ವಿಷಯದಲ್ಲಿ ಹಾಗಲ್ಲ. ಸುಗ್ಗಿ ವೇಳೆ ರೈತ ತರುವ ಸರಕಿನ ಬೆಲೆ ಕಡಿಮೆ. ಆತ ಅದನ್ನು ಮಾಡಿ ಆದ ಮೇಲೆ ಅದೇ ಸರಕು ಮಾರುಕಟ್ಟೆಯಲ್ಲಿ ಏರುಬೆಲೆ ಪಡೆಯುತ್ತದೆ. ರೈತನ ಕೈದಾಟುವ ತನಕ ಅದಕ್ಕೆ ಬೆಲೆ ಕಡಿಮೆ. ಗೋಡೌನು ಅಥವಾ ಅಂಗಡಿ ಸೇರಿದ ಮೇಲೆ ಅದೇ ಉತ್ಪನ್ನಕ್ಕೇ ಬೆಲೆ ಜಾಸ್ತಿ. ಸಾಗಾಣಿಕೆ ವೆಚ್ಚವೇ ಮುಂತಾದ ಹೆಸರನ್ನು ಹೇಳಿ ಬೆಲೆ ಏರಿಸುತ್ತಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ, ಅಂದರೆ ನಿಯಂತ್ರಿತ ಮಾರುಕಟ್ಟೆ ಯಾರ್ಡುಗಳ ವ್ಯವಸ್ಥೆ, ಉದ್ದೇಶ ಸ್ಪಷ್ಟವಿದೆ; ರೈತನ ಕೈಗೆ ದಕ್ಕುವ ಹಣ ಮತ್ತು ಬಳಕೆದಾರ ತೆರುವ ಬೆಲೆ ಇವೆರಡರ ನಡುವಣ ಅಂತರ ಕಡಿಮೆಯಾಗಬೇಕು. ಆದರೆ ಈ ಉದ್ದೇಶ. ಸಾಧನೆ ಮಾತ್ರ ಕಷ್ಟವಾಗಿದೆ. ರೈತ ಮತ್ತು ಬಳಕೆದಾರರ ನಡುವೆ ಕಮೀಷನ್‌ಏಜೆಂಟ್ ಸಗಟು ಮಾರಾಟಗಾರ, ಅರೆ ಸಗಟು ಮಾರಾಟಗಾರ ಅನಂತರ ಚಿಲ್ಲರೆ ಮಾರಾಟಗಾರ ಹೀಗೆ ವಿವಿಧ ಹಂತದ ಮಧ್ಯವರ್ತಿಗಳು ಇರುವುದರಿಂದ ಎರಡು ಬೆಲೆಗಳ ಅಂತರ ಬಹಳವಾಗಿಯೇ ಉಳಿಯುತ್ತದೆ.

ಕೃಷಿ ಉತ್ಪನ್ನ ರೂಪದ ಸಂಪನ್ಮೂಲ ಏನಿದೆಯೋ ಆಹಾರ ಧಾನ್ಯ ಮುಂತಾದವನ್ನು ಕುರಿತ ವಹಿವಾಟನ್ನೇ ಆಧರಿಸಿದಂತೆ ಜೀವನೋಪಾಯ ಕಂಡುಕೊಳ್ಳುವ ಕೃಷಿಕೇತರ ಜನ ಬಹಳ. ಅದೇ ಬೆಲೆಗಳ ನಡುವಣ ಅಂತರ ಹೆಚ್ಚಲು ಕಾರಣ.

ಒಟ್ಟಿನಲ್ಲಿ ಬಳಕೆದಾರನಿಗೆ ಬೆಲೆ ಸಂದಿಗ್ಧ ಮಾತ್ರ ತಪ್ಪಿದ್ದಲ್ಲ.

೧೯.೦೩.೨೦೦೩