ಕೇಬಲ್ ಟಿವಿಯನ್ನು ನಿಯಂತ್ರಿಸುವ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ. ಇನ್ನು ಇದು ರಾಜ್ಯ ಸಭೆಯಲ್ಲಿ ಅಸ್ತು ಎನ್ನಿಸಿಕೊಳ್ಳಬೇಕು ಮಾತ್ರ. ಬಹುಶಃ ಈ ಉದ್ದೇಶಿತ ಶಾಸನದಷ್ಟು ಬಳಕೆದಾರ ಪರ ಇರುವ ಇನ್ನೊಂದು ಶಾಸನ ಇನ್ನೊಂದಿಲ್ಲ.

ಈ ಶಾಸನದ ಪರಿಣಾಮವೆಂದರೆ ತನಗೆ ಯಾವ ಚಾನಲ್‌ಕಾರ್ಯಕ್ರಮ ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಬಳಕೆದಾರನಿಗೆ ಲಭಿಸುತ್ತದೆ. ಚಾನೆಲ್‌ಗಳಲ್ಲಿ ಎರಡು ವಿಧ. ಹಣ ಪಾವತಿ (ಪೇ) ಮಾಡಬೇಕಾದದ್ದು ಹಾಗೂ ಪ್ರಸಾರಕ್ಕೆ ಉಚಿತವಾಗಿ ಲಭ್ಯವಾಗುವಂಥದು. ಈಗ ಪ್ರತಿಯೊಂದು ಸಣ್ಣ ಪ್ರದೇಶದಲ್ಲೂ ಕೇಬಲ್ ಆಪರೇಟರ್ ಎನಿಸಿಕೊಂಡ ಬಿಡಿ ಬಿಡಿ ಖಾಸಗಿ ವ್ಯಕ್ತಿ ಕೆಲವು ಪೇ ಚಾಲನ್‌ಮತ್ತು ದೂರದರ್ಶನದಂಥ ಉಚಿತ ಚಾನಲ್‌ಗಳನ್ನು ಆಯ್ದುಕೊಂಡು ಮನೆ ಮನೆಗೆ ಕೇಬಲ್ ಮೂಲಕ ಕಾರ್ಯಕ್ರಮಗಳನ್ನು ತಲುಪಿಸುತ್ತಾನೆ. ಯಾವ ಚಾನೆಲ್‌ಬೇಕು ಯಾವುದು ತನಗೆ ಬೇಡ ಎಂದು ಹೇಳುವಂತೆಯೇ ಇಲ್ಲ. ಕೊಟ್ಟಿದ್ದನ್ನು ತೆಗೆದುಕೊಳ್ಳುವ ಅನಿವಾರ್ಯತೆ ಬಳಕೆದಾರನಿಗೆ. ಯಾವ ಪೇ ಚಾನೆಲ್‌ಗೆ ಎಷ್ಟು ಹಣ (ಶುಲ್ಕ) ಕೊಡಬೇಕೆನ್ನುವುದು ಕೇಬಲ್‌ಆಪರೇಟರ್‌ಗೂ ಕಾರ್ಯಕ್ರಮ ತಯಾರಿಸಿಕೊಡುವ ಚಾನೆಲ್‌ನವರಿಗೂ ಸೇರಿದ ವಿಷಯ. ಅವರಿಬ್ಬರಲ್ಲಿ ಜಗಳ ಜೋರಾಗಿ ನಡೆದಿದೆ.

ಕೇಬಲ್‌ಆಪರೇಟರ್‌ಗಳು ಎಷ್ಟು ಮನೆಗೆ ಸಂಪರ್ಕ ನೀಡುತ್ತಾರೋ ಅದನ್ನು ಸರಿಯಾಗಿ ತಿಳಿಸದೆ, ಕಡಿಮೆ ಲೆಕ್ಕ ಕೊಟ್ಟು ವಂಚಿಸುತ್ತಿದ್ದಾರೆ ಎಂಬುದು ಚಾನೆಲ್‌ನವರ ಆರೋಪ. ಪೇಟೆಗೆ ಹೊಸದಾಗಿ ಎಷ್ಟು ಟಿವಿಗಳು ಬರುತ್ತವೆ, ಮಾರಾಟ ಆಗುತ್ತಿವೆ ಎಂಬುದರ ಲೆಕ್ಕಾಚಾರದ ಮೇಲೆ ಹೆಚ್ಚು ಹೆಚ್ಚು ಸಂಪರ್ಕಗಳು ಆಗುತ್ತಿವೆ ಎಂದು ಅವರು ಹೇಳುತ್ತಾರೆ. ಕೇಬಲ್ ಆಪರೇಟರ್‌ನವರು ತಮ್ಮ ಖರ್ಚು ಜಾಸ್ತಿ ಆಗುತ್ತಿದ್ದೆ. ತಾವು ಕೊಡುವ ಲೆಕ್ಕವೇ ಸರಿ ಎನ್ನುತ್ತಾರೆ.

ಚಾಲೆನ್‌ಗಳವರು ತಮಗೆ ಕಾರ್ಯಕ್ರಮ ಕೊಳ್ಳುವ ಅಥವಾ ನಿರ್ಮಿಸುವ ವೆಚ್ಚ ಹೆಚ್ಚಾಗುತ್ತಿದೆ ಎನ್ನುತ್ತಾರೆ. ತಮಗೆ ಜಾಹೀರಾತುದಾರರು ಎಷ್ಟು ಹಣ ಕೊಡುತ್ತಾರೆ ಎಂದು ಬಿಟ್ಟುಕೊಡುವುದಿಲ್ಲ.

ಒಂದು ಸಮೀಕ್ಷೆ ಪ್ರಕಾರ ೩೮೦ ಲಕ್ಷ ಮನೆಗಳಿಗೆ ಕೇಬಲ್‌ನವರು ಸಂಪರ್ಕ ಕೊಡುತ್ತಾರೆ. ಉಪಗ್ರಹಗಳು ಬಿತ್ತರಿಸುವ ಚಾನೆಲ್‌ಕಾರ್ಯಕ್ರಮಗಳನ್ನು ಸಂಗ್ರಹಿಸಿ ಸಂಪರ್ಕ ಕೊಡುವುದಷ್ಟೇ ಇವರ ಕೆಲಸ. ಮನೆಯವರಿಂದ ತಿಂಗಳಿಗೆ ೧೫೦ ರೂಪಾಯಿನಂತೆ ಲೆಕ್ಕ ಹಾಕಿದರೂ (ಮುಂಬೈನಲ್ಲಿ ರೂ.೩೦೦ ಕೂಡಾ ಶುಲ್ಕ ವಸೂಲು ಮಾಡುತ್ತಾರೆ) ವರ್ಷಕ್ಕೆ ೭೦೦೦ ಕೋಟಿ ರೂಪಾಯಿನಷ್ಟು ಆಯಿತು. ಈ ಮೊತ್ತವನ್ನು ಇಬ್ಬರೂ ಹಂಚಿಕೊಳ್ಳುತ್ತಾರೆ. ಬರುವುದು ಸಾಲದೆಂದು ಚಾನೆಲ್‌ನವರು ಶುಲ್ಕ ಏರಿಸಿಕೊಳ್ಳುತ್ತಾ ಹೋಗುತ್ತಾರೆ. ಆ ನೆಪದಲ್ಲಿ ಕೇಬಲ್‌ನವರು ಶುಲ್ಕ ಏರಿಸುತ್ತಲೇ ಇದ್ದಾರೆ. ಇವರಿಬ್ಬರ ಮಧ್ಯೆ ಬಳಕೆದಾರ ಮೆತ್ತಗಾಗುತ್ತಾನೆ. ಇಬ್ಬರೂ ಜಗಳವಾಡಿ ಕೋರ್ಟ್‌ಮೆಟ್ಟಿಲು ಹತ್ತುತ್ತಾರೆ. ಅನಂತರ ಕೋರ್ಟ್‌ಹೊರಗೆ ರಾಜಿ ಮಾಡಿಕೊಳ್ಳುತ್ತಾರೆ.

ಸ್ವಂತ ಆಯ್ಕೆ ಸ್ವಾತಂತ್ರ್ಯವೂ ಇಲ್ಲದ ಬಳಕೆದಾರ ಕೇಳಿದಷ್ಟು ಶುಲ್ಕ ತೆತ್ತೂ ನಿಸ್ಸಹಾಯಕ.

ಈಗ ಸರ್ಕಾರ ಮಧ್ಯೆ ಪ್ರವೇಶಿಸಿದೆ. ಯಾವುದೇ ಮನೆಯಲ್ಲೂ ಚಾನಲ್ ಆಯ್ಕೆ ಸ್ವಾತಂತ್ರ್ಯಕ್ಕಾಗಿ ಒಂದು ಸೆಟ್ ಟಾಪ್ ಪೆಟ್ಟಿಗೆ ಇಟ್ಟುಕೊಳ್ಳಬೇಕಾಗುತ್ತದೆ. ‌ಬಹುಶಃ ವೋಲ್ಟೇಜ್ ಸ್ಟೆಬಿಲೈಸರ್ ಅಥವಾ ಅದಕ್ಕೂ ಕಡಿಮೆ ಗಾತ್ರದಲ್ಲಿರುತ್ತದೆ. ಈ ಪೆಟ್ಟಿಗೆ  ಚಾನಲ್‌ಗಳಲ್ಲಿ ಬೇಕಾದ್ದನ್ನು ಆಯ್ದುಕೊಂಡು, ಕಾರ್ಯಕ್ರಮವನ್ನು ಬಿಟ್ಟುಕೊಳ್ಳಬಹುದು. ಹಾಗೆ ಬಿಟ್ಟುಕೊಂಡು ಕಾರ್ಯಕ್ರಮದ ಚಾನಲ್ ನವರಿಗೆ ಲೆಕ್ಕಾಚಾರದ ಪ್ರಕಾರ ಶುಲ್ಕತೆರಬೇಕು. ಉಚಿತ ಚಾನಲ್ ಗಳಿಗೆಂದು ನಿಗದಿತ ನಾಮಮಾತ್ರ ಮೊತ್ತದ ಶುಲ್ಕತೆರಬೇಕು.

ಪೇ ಚಾನಲ್‌ನವರು ತಮ್ಮ ಶುಲ್ಕವನ್ನು ನಿಗದಿ ಮಾಡಲು ಮುಕ್ತರು. ಪೈಪೋಟಿ ಹೆಚ್ಚಾಗಿ ಶುಲ್ಕ ಇಳಿಯಲೂ ಸಾಕು. ಈಗ ಮೊಬೈಲ್ ಟೆಲಿಫೋನ್‌ನವರು ಪೈಪೋಟಿ ಮೇಲೆ ಬೆಲೆ ಇಳಿಸಿರುವ ನಿದರ್ಶನ ಇದೆ. ಕೇಬಲ್‌ನವರು ತಾವು ಒದಗಿಸುವ ಸೇವೆಗಾಗಿ ಎಷ್ಟು ಶುಲ್ಕ ವಸೂಲು ಮಾಡಬೇಕು ಎಂಬುದಕ್ಕೂ ಸೂತ್ರ ಸಿದ್ಧವಾಗುತ್ತದೆ. ಆರಂಭಕ್ಕೆ ಪೇ ಚಾಲನ್‌ಗಳಿಗೆ ತೆತ್ತ ಹಣದ ಶೇ. ೫ ರಷ್ಟು ಮೊತ್ತವನ್ನು ಕೇಬಲ್‌ನವರ ಸೇವೆಗೆ ಪ್ರತಿಫಲವಾಗಿ ಕೊಡಬೇಕೆಂದು ನಿರ್ಧಾರವಾಗಿದೆ.

ಸದ್ಯ ೩೩ ಪೇ ಚಾನೆಲ್‌ಗಳಿವೆ. ಅವುಗಳ ಸಂಖ್ಯೆಯೂ ಆ ಸಂಬಂಧ ಪೈಪೋಟಿಯೂ ಹೆಚ್ಚಾದಂತೆ, ಶುಲ್ಕ ಇಳಿಸಬಹುದು. ಒಬ್ಬೊಬ್ಬರ ಶುಲ್ಕ ಒಂದೊಂದು ತರಹ ಇರುವುದೂ ಉಂಟು. ಆಗೆಲ್ಲ ಬಳಕೆದಾರನ ಆಯ್ಕೆ ಸ್ವಾತಂತ್ರ್ಯ ಹೆಚ್ಚುತ್ತದೆ.

ಅದೆಲ್ಲ ಸರಿಯೆ! ಆದರೆ ಸೆಟ್‌ಟಾಪ್‌ಪೆಟ್ಟಿಗೆ ಖರ್ಚನ್ನು ಯಾರು ವಹಿಸಿಕೊಳ್ಳಬೇಕು? ಅದು ಬಳಕೆದಾರನ ಹೆಗಲಿಗೇ ಬರುವುದು. ಈ ಚಾನೆಲ್‌ಆಯ್ಕೆ ಪೆಟ್ಟಿಗೆ ಖರ್ಚು ಎಷ್ಟು ಬರುತ್ತದೆ. ಅದು ಇನ್ನೂ ಸ್ಪಷ್ಟವಿಲ್ಲ. ರೂ.೧೨೦೦ ರಿಂದ ರೂ. ೬೦೦೦ ತನಕ ಎಷ್ಟಾದರೂ ಆಗಬಹುದು.

ಮಾಮೂಲಿ ಅನಲಾಗ್ ಟಿವಿ ಆಯ್ಕೆ ಪೆಟ್ಟಿಗೆಯಲ್ಲಿ ಟಿ.ವಿ. ಚಾನೆಲ್‌ಗಳನ್ನು ಗುರುತಿಸಿ ತಿರುಗಿಸುವ ಕಾರ್ಯ ಮಾತ್ರ ನಡೆಯುತ್ತದೆ. ಅದನ್ನು ತಾಂತ್ರಿಕವಾಗಿ ಅಪ್‌ಗ್ರೇಡ್ ಮಾಡಲು ಬರುವುದಿಲ್ಲ. ಆದರೆ ಡಿಜಿಟಲ್‌ಪೆಟ್ಟಿಗೆ, ಅದು ದುಬಾರಿ, ಕೊಂಡರೆ ಒಂದೇ ಚಾನೆಲ್ ಗುರುತಿಸಬಹುದು. ಅಷ್ಟೇ ಅಲ್ಲದೆ ಏನೆಲ್ಲ ಇತರ ಅನುಕೂಲಗಳೂ ಇರುತ್ತವೆ. ಕಂಪ್ಯೂಟರ್‌ಪಿಸಿ ಅಗತ್ಯವಿಲ್ಲದೆ ಟಿವಿ ಪರದೆ ಬಳಸಿ ಇಂಟರ್‌ನೆಟ್ ಸಂಪರ್ಕ ಪಡೆಯಬಹುದು. ಇಂಟರ್‌ನೆಟ್ ಮೂಲಕ ಟೆಲಿಪೋನ್‌ಸಂಪರ್ಕ ಸಹಾ ಪಡೆಯಲು ಶಕ್ಯ.

ಈ ಪೆಟ್ಟಿಗೆ ತಯಾರು ಮಾಡುವವರು ಎಂಥ ತಾಂತ್ರಿಕತೆಯನ್ನು ಬಳಸಬೇಕೆಂದರೆ ಬಳಕೆದಾರರು ಅದನ್ನು ಬಿಚ್ಚಿ ಬೇಕಾದೆಡೆಗೆ ಒಯ್ಯುವಂತಿರಬೇಕು. ಹಾಗೆಂದೇ ಸರ್ಕಾರ ಸೂಚಿಸುತ್ತದೆ.

ಈಗಂತೂ ಇಂಥ ಪೆಟ್ಟಿಗೆಗಳನ್ನು ತಯಾರು ಮಾಡಿಕೊಡಲು, ಉತ್ಪಾದನಾ ಲೈಸನ್ಸ್‌ಗಳನ್ನೂ ಪಡೆದುಕೊಂಡಿರುವ ಒಂದು ಡಜನ್‌ಕಂಪೆನಿಗಳು ತುದಿಗಾಲಲ್ಲಿ ನಿಂತಿವೆ. ಟಿವಿ ಕ್ಷೇತ್ರದ ಮರಿಕ್ರಾಂತಿ ನಡೆಯಲಿದೆ. ಏಕೆಂದರೆ ಒಟ್ಟು ೬೦ ಕೋಟಿ ಡಾಲರ್‌ಗಳ ಮಾರುಕಟ್ಟೆಯು ಈ ತಯಾರಕರ ಪಾಲಿಗೆ ತೆರೆದುಕೊಳ್ಳುತ್ತದೆ.

ಇವುಗಳನ್ನು ಕೊಳ್ಳುವವರು ಸ್ವಲ್ಪ ಕಾದರೆ ಕಂತು ಪಾವತಿ ಆಧಾರದ ಮೇಲೆ ಸಿಗಬಹುದು. ಕೆಲವು ವಿದೇಶಗಳಲ್ಲಿ ಆಗಿರುವಂತೆ ಬಾಡಿಗೆಗೂ ಸಿಗಬಹುದು. ಇವಾವುದೂ ಬೇಡವೆಂದರೆ ಉಚಿತ ಚಾನೆಲ್‌ಗಳ ವೀಕ್ಷಣೆ ಅನಿರ್ಬಾಧಿತ. ಅಂಥ ಚಾನೆಲ್‌ನವರು ಬಳಕೆದಾರರಿಗೆ ಒದಗಿಸುವ ಕಾರ್ಯಕ್ರಮಕ್ಕೆ ಬದಲಾಗುತ್ತಾ ಹೋಗುವ ಶುಲ್ಕ ಕೇಳುವುದಿಲ್ಲ. ತಮಗೆ ಬರುವ ಜಾಹೀರಾತು ಆದಾಯವೇ ಸಾಕೆನ್ನುತ್ತಾರೆ.

ಇಷ್ಟೆಲ್ಲ ರಂಪರಾದ್ಧಾಂತವಾಗಿ ಸರ್ಕಾರವು ಶಾಸನ ತಂದಿದ್ದರೂ ಸ್ವಲ್ಪ ಕಾಲ ಬಳಕೆದಾರರಿಗೆ ಬಾಧೆ ತಪ್ಪಿದ್ದಲ್ಲ. ಚಾನೆಲ್ ಆಯ್ಕೆ ಪೆಟ್ಟಿಗೆಗಳು ಲಕ್ಷಾವಧಿ ಸಂಖ್ಯೆಯಲ್ಲಿ ತಯಾರಾಗಿ ಇಲ್ಲವೇ ಆಮದಾಗಿ ಬಳಕೆದಾರರ ಕೈ ಸೇರಲು ಸಮಯ ಹಿಡಿಯುತ್ತದೆ. ತಯಾರಕರನ್ನು ಬಳಸಿಕೊಂಡು ಸಚಿವರು ದುಡ್ಡು ಮಾಡಿಕೊಳ್ಳುತ್ತಾರೆ ಎನ್ನುವ ಪುಕಾರು ಈಗಾಗಲೇ ಎದ್ದಿದೆ. ಮಸೂದೆಗೆ ರಾಜ್ಯ ಸಭೆಯಲ್ಲಿ ಅಂಗೀಕಾರ ಸಿಕ್ಕಿಲ್ಲ. ಕೇಂದ್ರ ಪ್ರಸಾರ ಖಾತೆ ಮತ್ತು ಸಂಸದೀಯ ವ್ಯವಹಾರಖಾತೆ ಸಚಿವದ್ವಯರಿಗೆ ಭಿನ್ನಾಭಿಪ್ರಾಯವಿದೆ ಎಂಬ ಮಾತೂ ಇದೆ.

ವಾಸ್ತವವಾಗಿ ಎರಡು ಚಾನೆಲ್‌ಸಮುದಾಯಗಳ ನಡುವಣ ಹೋರಾಟ ಈಗಿನ ವಿವಾದಕ್ಕೆ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲವೂ ತಿಳಿಯಾಗುವ ಹೊತ್ತಿಗೆ ಇನ್ನೂ ಏನೆಲ್ಲ ಪರಿಪಾಟಲು ಬಳಕೆದಾರರ ಪಾಲಿಗೆ ಇದೆಯೋ ಗೊತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಚಾನೆಲ್‌ಆಯ್ಕೆ ಪೆಟ್ಟಿಗೆ ಕುರಿತ ಖರ್ಚು ಬಳಕೆದಾರನ ಮೈಮೇಲೆ ಬಂದಿದೆ. ಅದೇ ವಾಸ್ತವಾಂಶ.

ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ಸ್ ಮಾಧ್ಯಮ ಮತ್ತು ಉದ್ಯಮ ಕುರಿತಂತೆ ಏಕೀಭವ ಮಸೂದೆಯೊಂದನ್ನು (ಕನ್ವರ್ಜೆನ್ಸ್ ಬಿಲ್‌ವೊಂದನ್ನು) ಸಮಗ್ರ ರೂಪದಲ್ಲಿ ತರಲಿದೆ. ಅಷ್ಟರೊಳಗೆ ಸೀಮಿತ ಕ್ಷೇತ್ರಗಳ ಮಸೂದೆಗಳು ಏಕೆ ಎಂಬ ಪ್ರಶ್ನೆಯೂ ಇದೆ.

ಈಗ ಬರುತ್ತಿರುವುದು ಕೇಬಲ್ ಶಾಸನ. ಇದಕ್ಕೆ ಮುನ್ನ ಕಾರ್ಯಕ್ರಮಗಳನ್ನು ಉಪಗ್ರಹಕ್ಕೆ ಅಪ್‌ಲಿಂಕ್‌ಮಾಡುವುದಕ್ಕೆ ಅವಕಾಶ ಕೊಡುವ ಶಾಸನ ಬಂದಿತು. ಹೀಗೆಯೇ ಹಲವು ಶಾಸನಗಳು ಬಂದು ಅನಂತರ ಅವೆಲ್ಲ ಏಕೀಭವಗೊಳ್ಳಬೇಕು. ಅದಕ್ಕೆ ಸಂಸದೀಯರು ಮತ್ತು ಸಚಿವರು ಜಗಳವಾಡುತ್ತಾ ಕೂರುವಂತಾಗಬಾರದು.

೨೨.೦೫.೨೦೦೨