‘ನಿಮಗೆ ಪಡಿತರ ಬೇಕೆ?’

ಈ ಪ್ರಶ್ನೆಯನ್ನು ನಗರ ಪ್ರದೇಶದ ಯಾವುದೇ ಗೃಹಿಣಿಗೆ ಹಾಕಿದರೆ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಬರುವ ಉತ್ತರ ಎಂದರೆ,

‘ಪಡಿತರ ಬೇಡ, ಪಡಿತರ ಚೀಟಿ ಬೇಕು!’

ನಿಜ, ಎಷ್ಟೋ ಮನೆಗಳವರು ಸಕ್ಕರೆ ತರಿಸಲು ಮಾತ್ರ ಪಡಿತರ ಚೀಟಿಯನ್ನು ಬಳಸುತ್ತಾರೆ. ಇತ್ತೀಚಿನವರೆಗೂ ಸೀಮೆ ಎಣ್ಣೆ ಸಹಾ ಆಕರ್ಷಕವಾಗಿ ಪರಿಣಮಿಸಿತ್ತು. ಆದರೆ ಮನೆಯಲ್ಲಿ ಅಡಿಗೆ ಅನಿಲ ಸಂಪರ್ಕ ಹೊಂದಿರುವವರಿಗೆ ಸೀಮೆಎಣ್ಣೆ ಪರಿತರ ಕೂಪನ್ ಕೊಡುವುದಿಲ್ಲ ಎಂದು ನಿಗದಿ ಮಾಡಿದ್ದರಿಂದ ಅದರ ಉಸಾಬರಿ ತಪ್ಪಿತು. ಇದೀಗ ಸಕ್ಕರೆ ಮೇಲಿನ ಸಬ್ಸಿಡಿಯನ್ನು ಕಡಿಮೆ ಮಾಡಿದ್ದರಿಂದ ಮುಕ್ತ ಮಾರುಕಟ್ಟೆ ಸಕ್ಕರೆ ಬೆಲೆಗೂ, ಪಡಿತರ ಅಂಗಡಿ ಬೆಲೆಗೂ ಹೆಚ್ಚು ವ್ಯತ್ಯಾಸ ಇಲ್ಲವಾದ್ದರಿಂದ ಸಕ್ಕತೆಯ ಆಕರ್ಷಣೆಯೂ ಕಡಿಮೆ ಆಗಿದೆ.

ಖಾದ್ಯ ತೈಲ ಬೆಲೆಗಳು ಏರುಮಟ್ಟದಲ್ಲಿ ಇದ್ದಾಗ, ಹಾಗೂ ಬೆರಕೆ ಇಲ್ಲದ ಅಡಿಗೆ ಎಣ್ಣೆ ಸಿಗುವುದು ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಪಡಿತರ ಅಂಗಡಿ ಮೂಲಕ ಬಿಡುಗಡೆ ಮಾಡಿದ ಆಮದು ಪಾಮೊಲೀನ್ ಎಣ್ಣೆಗಾಗಿ ಪಡಿತರ ಚೀಟಿಯನ್ನು ಆಧರಿಸುವುದು ತುಂಬಾ ನಡೆದಿತ್ತು. ಈಗ ಮುಕ್ತ ಮಾರುಕಟ್ಟೆಯ ತುಂಬಾ ಆಮದು ಖಾದ್ಯ ತೈಲದ ಪ್ರಭಾವವೇ ತುಂಬಿಕೊಂಡಿರುವಾಗ ಪಡಿತರ ಪಾಮೆಣ್ಣೆಗೂ ಬೇಡಿಕೆ ಇಲ್ಲ.

ಹೀಗಿರುವಾಗ ಪಡಿತರ ಚೀಟಿ ತಾನೇ ಏಕೆ ಬೇಕು? …. ಬೇಕು, ವಿಳಾಸ ರುಜುವಾತಿಗೆ ಪಡಿತರ ಚೀಟಿ ಬೇಕು!

ವಾಸ್ತವವಾಗಿ ಪಡಿತರ ಚೀಟಿಯು ಮಹಾಯುದ್ಧ ಕಾಲದ ರೇಷನ್ ಕಾರ್ಡ್‌ನ ಪಳೆಯುಳಿಕೆ. ಆ ಕಾಲಕ್ಕೆ ರೇಷನ್ ಸಂಗ್ರಹಿಸಿ ತರುವುದೆಂದರೆ ಜೀವನ ಧಾರಣೆ ಸಮಸ್ಯೆ. ತಲೆಗಿಷ್ಟೆಂದು ನಿಗದಿ ಮಾಡಿದ ಧಾನ್ಯ ಮುಂತಾದುವನ್ನು ತರದಿದ್ದರೆ ಕಾಳಸಂತೆಗೆ ಮೊರೆ ಹೋಗಬೇಕಾಗುತ್ತಿತ್ತು. ಕಾಳಸಂತೆ ಎಂದರೆ ಈಗ ಸಿನಿಮಾ ಟಿಕೆಟ್‌ನ ಕಾಳಸಂತೆ ಮಾತ್ರ ನೆನಪಿಗೆ ಬರುತ್ತದೆ. ಆಗ ಹಾಗಲ್ಲ; ಪ್ರತಿ ಅಗತ್ಯ ಸರಕು ಕಾಳಸಂತೆಗೆ ಬರುತ್ತಿತ್ತು. ಎಷ್ಟೋ ಬಾರಿ ಬೆಲೆ ಎರಡು ಪಟ್ಟು, ಮೂರು ಪಟ್ಟು. ಪ್ರತಿ ಸರಕಿನ ವಿಷಯದಲ್ಲೂ ಕೊರತೆಯೋ ಕೊರತೆ. ಆಗಿನ ದುರ್ಭರ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಮಹಾಯುದ್ಧ ಮುಗಿದ ಮೇಲೂ ಅದರ ಬಿಸಿ ಹಲವು ವರ್ಷ ತಪ್ಪಲಿಲ್ಲ. ಆಗೆಲ್ಲ ರೇಷನ್ ಕಾರ್ಡ್‌ಅಮೂಲ್ಯ.

ಇತ್ತೀಚಿನವರೆಗೂ ಮಧ್ಯಮ ವರ್ಗದವರು ಪಡಿತರ ಚೀಟಿಯನ್ನು ಅವಲಂಭಿಸುತ್ತಿದ್ದರು. ಅಲ್ಲಿ ವಿತರಣೆ ಆಗುವ ಸೂಪರ್ ಫೈನ್‌ಅಕ್ಕಿ ವಾಸ್ತವವಾಗಿ ಪರಮಾಯಿಷಿ. ಹಿಟ್ಟಿಗೆ ಬೇಕಾಗುವ ದಪ್ಪ ಅಕ್ಕಿಯಾಗಲಿ, ಗೋಧಿ ಆಗಲಿ, ಅನಾಕರ್ಷಕವೇನಲ್ಲ. ಆದರೆ ಪರಿಸ್ಥಿತಿ ಬದಲಾಗಿದೆ.

ಬಡವರ ಮಟ್ಟಿಗೆ ಪಡಿತರ ಸರಕು ಈಗಲೂ ಅಮೂಲ್ಯ. ಅಳತೆಯಲ್ಲಿ ಆಗುವ ಮೋಸವನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಪಡಿತರ ಸೀಮೆಎಣ್ಣೆ ಬಡವರ ಮಟ್ಟಿಗೆ ಭಾರೀ ಅನುಕೂಲಕರ, ಅಗ್ಗ. ಪಡಿತರ ವ್ಯವಸ್ಥೆ ಇಲ್ಲದಿದ್ದರೆ ಬಡವರ ಹಾಗೂ ಅತಿ ಬಡವರ ಬದುಕು ಈಗಲೂ ಬಲು ದುರ್ಭರ. ಇದು ವಾಸ್ತವಾಂಶ.

ಈಚೆಗೆ ಪಡಿತರ ಅಂಗಡಿಗಳಿಂದ ಯಾರು ಬೇಕಾದರೂ ಧಾರಾಳವಾಗಿ ಅಕ್ಕಿ ಮುಂತಾದವುಗಳನ್ನು ಪಡೆಯಬಹುದು ಎಂಬ ಪ್ರಕಟಣೆಗಳು ಬಂದಿವೆ. ಆದರೆ ಪಡಿತರ ಸರಕಿಗೆ ಬೇಡಿಕೆಯೇ ಕಡಿಮೆಯಾಗಿದೆ. ಏಕೆಂದರೆ ಎಲ್ಲ ಬಗೆಯ ಸರಕುಗಳು ಹೊರಗೆ ಸಮೃದ್ಧವಾಗಿವೆ.

ಮೊಟ್ಟ ಮೊದಲ ಬಾರಿಗೆ ಕಂಟ್ರೋಲರ್ ಆಫ್ ಆಡಿಟರ್ ಜನರಲ್ (ಸಿ.ಎ.ಜಿ) ಅವರು ಆಹಾರ ಧಾನ್ಯದ ಸಾರ್ವಜನಿಕ ವಿತರಣೆ ನೀತಿಯನ್ನು ಟೀಕಿಸಿದ್ದಾರೆ. ಅದರ ಇತ್ತೀಚಿನ ವರದಿ ಪ್ರಕಾರ ಶೇ. ೬೫ಕ್ಕೂ ಅಧಿಕ ಸಂಖ್ಯೆಯ ಕಾಡುದಾರರು ಪಡಿತರ ಅಂಗಡಿಗಳ ಹೊಸಿಲು ತುಳಿಯುವುದಿಲ್ಲ. ಪಡಿತರ ಸರಕಿನ ಬೆಲೆ ನಿಗದಿ ಮಾಡುವ ನೀತಿಯು ನಿಜವಾಗಿ ಬಳಕೆದಾರನ ಪಾಲಿಗೆ ಅನುಕೂಲಕರವಾಗಿ ಇಲ್ಲ.

ಈ ಬೆಲೆ ನೀತಿಯಿಮದಾಗಿ, ಖರ್ಚಾಗಲಿಲ್ಲ ಎಂಬ ಕಾರಣಕ್ಕೆ ರಾಜ್ಯಗಳು ಪರಿತರ ಧಾನ್ಯವನ್ನು ವಿತರಣೆಗಾಗಿ ಎತ್ತಿಕೊಳ್ಳುವುದೇ ಇಲ್ಲ. ಇದರ ಪರಿಣಾಮವೆಂದರೆ ಕೇಂದ್ರದ ಬಳಿ ಸಂಗ್ರಹವಾಗುವ ಹೆಚ್ಚುವರಿ ಧಾನ್ಯದ ದಾಸ್ತಾನಿನ ನಿರ್ವಹಣೆಗಾಗಿ ಸರ್ಕಾರವು ೮೪೦೦ ಕೋಟಿ ರೂಪಾಯಿ ಖರ್ಚು ಮಾಡಿದೆ. ವರದಿ ಪ್ರಕಾರ ಇದು ವಾಸ್ತವಾಂಶ.

ಪಡಿತರ ಅಂಗಡಿಗಳ ಬಾಗಿಲನ್ನು ಯಾವಾಗಲೋ ತೆರೆಯುತ್ತಾರೆ. ಯಾವಾಗಲೋ ಹಾಕುತ್ತಾರೆ. ಬಳಕೆದಾರರಿಗೆ ಕಿರುಕುಳ ಕೊಡುತ್ತಾರೆ. ಅವರ ಪಾಲಿಗೆ ಬರಬೇಕಾದ ಧಾನ್ಯವನ್ನು ಕಾಳ ಸಂತೆಯಲ್ಲಿ ಮಾಡುತ್ತಾರೆ. ‘ಸ್ಟಾಕ್ ಇಲ್ಲ’ ಬೋರ್ಡ್‌ಹಾಕುತ್ತಾರೆ. ಇದೆಲ್ಲ ವಾಚಕರವಾಣಿ ಪತ್ರಗಳಲ್ಲಿ ಬಂದ ನುಡಿಗಟ್ಟುಗಳಲ್ಲ; ಸಿಎಜಿ ವರದಿಯಲ್ಲಿರುವ ವಾಕ್ಯಗಳು.

ಪಡಿತರ ಧಾನ್ಯ ಬೆಲೆಗಳನ್ನು ಖರೀದಿದಾರರ ಬದಲಾಗಿ ಉತ್ಪಾದಕರಿಗೆ ಅನುಕೂಲವಾಗುವಂತೆ ಬದಲಾಯಿಸುತ್ತಾ ಬಂದಿದ್ದಾರೆ. ಮೊದಮೊದಲು ಧಾನ್ಯ ಮಾರಾಟದ ಮೇಲೆ ಸಬ್ಸಿಡಿಯನ್ನು ಹೆಚ್ಚಿಸಿ ಅನಂತರ ಮಾರಾಟ ಬೆಲೆಯನ್ನು ಹೆಚ್ಚಿಸಿದ್ದರಿಂದ ಪಡಿತರ ಬೆಲೆ ಮತ್ತು ಮುಕ್ತ ಮಾರುಕಟ್ಟೆ ಬೆಲೆ ಇವೆರಡರ ನಡುವಣ ಅಂತರವೇ ಮಡಿಮೆಯಾಗಿದೆ. ಅದನ್ನು ಕೊಳ್ಳುವವರೇ ಕಡಿಮೆಯಾಗಿದೆ.

ಇದರ ಪರಿಣಾಮವಾಗಿ ಕೇಂದ್ರ ಸರ್ಕಾರದ ದಾಸ್ತಾನು ವಿಪರೀತ ಏರಿದೆ. ದಾಸ್ತಾನು ವೆಚ್ಚ ಭರಿಸುವಂತಾಗಿದೆ.

ಆಹಾರ ಧಾನ್ಯ ಮಾತ್ರವಲ್ಲ; ಎಲ್ಲ ಸಾಮಗ್ರಿಯ ಸಮೃದ್ಧತೆ ಕಾಡುತ್ತಿದೆ. ಯಾವುದೇ ತಯಾರಿಕಾ ಉತ್ಪನ್ನ ಇದೀಗ ಭಾರತದಾದ್ಯಂತ ಬಿಡುಬೀಸಾಗಿ ಸಿಗುತ್ತಿದೆ. ಉತ್ಪನ್ನಗಳು ಮಾತ್ರವಲ್ಲ; ಯಂತ್ರೋಪಕರಣ ಮತ್ತು ಉದ್ಯಮ ನಡೆಸಲು ಸಾಲ ಸೌಲಭ್ಯ ಎಂದೂ ಇಲ್ಲದಷ್ಟು ಸುಲಭ ಷರತ್ತುಗಳ ಮೇಲೆ ಲಭ್ಯವಾಗುತ್ತದೆ. ಆದರೆ ಉದ್ಯಮ ನಡೆಸುವವರೇ ಇಲ್ಲ.

ನಡೆಯುತ್ತಿರುವ ಉದ್ಯಮ ಘಟಕಗಳು ಹೊರಹಾಕುತ್ತಿರುವ ಸರಕು ಸಹಾ ಖರ್ಚಾಗದೇ ಉಳಿದು ಹೋಗುತ್ತಿದೆ. ತಯಾರಿಕೆ ಕಡಿಮೆ ಮಾಡಿದರೆ ಅದಲು ವೆಚ್ಚ ಅಧಿಕವಾಗುತ್ತದೆ. ಆಗ ಸರಕು ಖರ್ಚಾಗುವುದು ಇನ್ನೂ ಕಷ್ಟವಾಗುತ್ತದೆ. ಕಚ್ಚಾ ಸಾಮಗ್ರಿ ಸುಲಭವಾಗಿ ಲಭ್ಯವಿದೆ. ಎಂಬ ಕಾರಣದಿಂದ ಮಾಮೂಲು ಪ್ರಮಾಣದಲ್ಲಿ ಇಲ್ಲವೇ ಅದಕ್ಕಿಂತ ಹೆಚ್ಚಾಗಿ ಉತ್ಪಾದನೆ ಮಾಡಿದರೆ ಖರ್ಚಾಗದೆ ಉಳಿದು ಹೋಗುತ್ತದೆ. ಬಡ್ಡಿ ಬೆಳೆಯುತ್ತದೆ. ನಷ್ಟವಾಗುತ್ತದೆ.

ಇದರಿಂದಾಗಿ ಬಳಕೆ ವಸ್ತುಗಳನ್ನು ಸಾಕಷ್ಟು ಅಗ್ಗಕ್ಕೆ ದಾಟಿಸಿ ಕೈ ತೊಳೆದುಕೊಳ್ಳಬೇಕೆಂದೇ ತಯಾರಿಕಾ ಸಂಸ್ಥೆಗಳು ಆತುರಪಡುತ್ತಿವೆ.

ಮಾಮೂಲು ಪ್ರಮಾಣಕ್ಕಿಂತ ಶೇ. ೨೦ ಅಧಿಕ, ಶೇ. ೩೦ ಅಧಿಕ. ಹೀಗೆ ನಾನಾ ಪ್ರಮಾಣದಲ್ಲಿ ಅಧಿಕವಾಗಿ ತುಂಬಿದ ಪ್ಯಾಕುಗಳನ್ನು ಮಾರಾಟಕ್ಕೆ ಬಿಡುತ್ತಿದ್ದಾರೆ. ಎರಡು ಖರೀದಿಸಿದರೆ ಮೂರು, ಮೂರು ಖರೀದಿಸಿದರೆ ನಾಲ್ಕು ಪೂರೈಸುವಂಥ ವಾಡಿಕೆ  ಬಂದಿದೆ.

ಟಿವಿ, ಸ್ಟೀರಿಯೋ, ಫ್ರಿಜ್, ಸೌಂಡ್ ಸಿಸ್ಟಂ, ನಾನಾ ನಮೂನೆ ದ್ವಿಚಕ್ತ ವಾಹನ ಹಾಗೂ ಕಾರು, ಅಗ್ಗದ ಹಾಗೂ ಬೆಲೆ ಬಾಳುವ ಜವಳಿ ಹೀಗೆ ಯಾವುದು ಬೇಕಾದರೂ ಯಥೇಚ್ಛವಾಗಿ ಸಿಗುತ್ತದೆ. ಒಡವೆ, ಸುಗಂಧ ದ್ರವ್ಯ, ಫ್ಯಾಷನ್, ವಸ್ತ್ರ, ವಜ್ರ ವೈಢೂರ್ಯ, ಪಾನೀಯ, ಪೇಯ ಗೃಹ ನಿರ್ಮಾಣ ಅಥವಾ ಖರೀದಿ ಯಾವುದಕ್ಕೆ ಬೇಕಾದರೂ ಸುಲಭ ಲಾಭ ಸಿದ್ಧ. ಎಷ್ಟೋ ಸಲ ಖರೀದಿ ವೇಳೆ ಶೇ. ೦ ಬಡ್ಡಿ ದರದ ಸಾಲ ಕೊಟ್ಟು ಉತ್ಪನ್ನ ಸಾಗಹಾಕುತ್ತಾರೆ. ಇಷ್ಟೆಲ್ಲ ಆದರೂ ಸರಕು ಖರ್ಚಾಗುತ್ತಿಲ್ಲ. ಬಡವರು ಜೀವನಾವಶ್ಯಕ ವಸ್ತು ಖರೀದಿಸಲು ಭಂಗಪಟ್ಟರೆ ಶ್ರೀಮಂತರು ಭೋಗವಸ್ತು ಖರೀದಿಸಲು ಒದ್ದಾಡುತ್ತಾರೆ. ಆದರೆ ಯಾರಿಗೇ ಆದರೂ ಖರೀದಿ ಸಾಮರ್ಥ್ಯವೇ ಕಡಿಮೆಯಾಗಿದೆ. ಸರಕು ಸಮೃದ್ಧ; ಆದರೆ ಖರೀದಿಸುವ ಶಕ್ತಿ ಇಲ್ಲ.

ಬೇಡಿಕೆ ಕುಸಿತ ಎನ್ನುವುದು ಆರ್ಥಿಕ ಹಿಂಜರಿತದ ಒಂದು ಲಕ್ಷಣ. ಉತ್ಪಾದಕತೆ ಹೆಚ್ಚಿ ಗಳಿಕೆ ವೃದ್ಧಿಗೊಂಡರೆ ಪರಿಸ್ಥಿತಿ ಸುಧಾರಿಸುತ್ತದೆ. ಅದು ಸಾಧ್ಯವಾಗುತ್ತಿಲ್ಲ. ನಮಗೆ ಈಗ ಸಾಲ, ಗ್ರಾಂಟು ಸಿಗುವುದಿಲ್ಲ. ರಫ್ತು ಮಾಡಿ ಗಳಿಸಬೇಕು. ರಫ್ತು ಹೆಚ್ಚಿಸಲು ಹೋದರೆ ನಾನಾ ಆತಂಕ. ನಮ್ಮದು ಹಳೆಯ ತಂತ್ರಜ್ಞಾನ. ಉತ್ಪಾದನಾ ವೆಚ್ಚ ನಮ್ಮಲ್ಲಿ ಹೆಚ್ಚು. ಹೀಗಾಗಿ ರಫ್ತು ಅಸಾಧ್ಯ. ಅನ್ಯರ ಪೈಪೋಟಿ ಎದುರಿಸಲು ಅಸಾಧ್ಯ. ಒಂದೇ ಮಾರ್ಗ ವಿದೇಶಿ ಮೂಲಕ ಹಣ ಹೂಡಿಕೆ ಹೆಚ್ಚಬೇಕು. ಅದು ಸುಲಭವೆನಿಸಿಲ್ಲ. ಆರ್ಥಿಕ ಹಿಂಜರಿತ ವಿಶ್ವವನ್ನೇ ಕಾಡುತ್ತಿದೆ.

ಇಂಥ ಪರಿಸ್ಥಿತಿಯಲ್ಲಿ ನಮ್ಮ ಜನಜೀವನ ಇನ್ನಷ್ಟು ದುರ್ಭರ ಆಗುತ್ತಿತ್ತು. ಆದರೆ, ಕೃಷಿ ಪ್ರಧಾನ ರಾಷ್ಟ್ರವಾದ ನಮ್ಮಲ್ಲಿ ಒಳ್ಳೆಯ ಬೆಳೆ ಆಗುತ್ತಿದೆ. ಕೃಷಿಕ ತನ್ನೆಲ್ಲ ಸಂಕಷ್ಟದ ನಡುವೆಯೂ ಬೆಳೆ ತೆಗೆಯುತ್ತಿದ್ದಾನೆ. ಅದರಿಂದಾಗಿ ಹಾಹಾಕಾರ ಎದ್ದಿಲ್ಲ.

ಒಂದಿಷ್ಟು ಹೆಚ್ಚಿಗೆ ಉದ್ಯೋಗ ಸೃಷ್ಟಿಯಾಗಿ ಖರೀದಿ ಸಾಮರ್ಥ್ಯ ಜಾಸ್ತಿಯಾದರೆ ಪರಿಹಾರ ಸುಲಭ. ಅದಕ್ಕಾಗಿ ಕಾಯುತ್ತಿರುವ ಕಾಲವಿದು.

೦೧.೦೫.೨೦೦೨