ಶುದ್ಧವಾದ ಸರಕು ಏನಾದರೂ ಈ ಪ್ರಪಂಚದಲ್ಲಿ ಸಿಗಬಹುದೇ?

ಬಹುಶಃ ಎಳನೀರು ಮಾತ್ರ. ಇನ್ನೂ ಕೆಡದೆ ಉಳಿದ ಕೋಳಿಮೊಟ್ಟೆ ಸಹಾ ಬೆರಕೆಗೆ ಹೊರತಾದುದೇ ಸರಿ.

ಬಳಕೆದಾರನಿಗೆ ಮೋಸ ಮಾಡಲೆಂದೇ ಇತರ ಸರಕನ್ನು ಮಿಶ್ರ ಮಾಡಿದ್ದರೆ ‘ಕಲಬೆರಕೆ’ ಎನಿಸಿಕೊಳ್ಳುತ್ತದೆ. ಯಾವುದೇ ಸರಕಿನ ‘ಬಳಕೆ ಮೌಲ್ಯ’ವನ್ನು ವೃದ್ಧಿಪಡಿಸಲು ಇತರ ಅಂಶಗಳನ್ನು ಜೊತೆಗೂಡಿಸಿ ಮಿಶ್ರಣ ಮಾಡಿದರೆ ಅದು ಕಲಬೆರೆಕೆಯಲ್ಲ, ಬೆರಕೆ ಮಾತ್ರ. ಬೆರಕೆ ಎನ್ನುವ ಪದಕ್ಕೂ ದುಷ್ಟ ಅರ್ಥವೇ ಇರುವುದರಿಂದ ಮಿಶ್ರಣ ಎಂಬ ಪದವನ್ನೇ ಬಳಸಬಹುದು.

ಮಿಶ್ರಣಕ್ಕೆ ಅತಿ ಒಳ್ಳೆಯ ಉದಾಹರಣೆ ಎಂದರೆ ಕಾಫಿ ಪುಡಿ. ಚಿಕೋರಿ ಬೆರಸದೇ ಇದ್ದರೆ ಕಡು ರುಚಿ ಬರುವುದಿಲ್ಲ ಎನ್ನುವ ಕಾರಣಕ್ಕೆ ಗ್ರಾಹಕರು ಕೇಳಿ ಮಿಶ್ರ ಮಾಡಿಸಿಕೊಳ್ಳುತ್ತಾರೆ. ಬ್ರ್ಯಾಂಡ್ ನಿಗದಿ ಮಾಡಿ ಸಿದ್ಧ ವಸ್ತುವಾಗಿ ಮಾಡುವ ಚಹಾ ಪುಡಿಯೂ ಸಹಾ ಬಹುಪಾಲು ಪ್ರಸಂಗಗಳಲ್ಲಿ ಮಿಶ್ರಣವೇ ಸರಿ. ಇಂಥ ಹಲವು ಪ್ರಸಂಗಗಳು ನಿದರ್ಶನಕ್ಕೆ ಸಿಗುತ್ತವೆ. ಇತ್ತೀಚಿನ ಉದಾಹರಣೆ ಎಂದರೆ ಗೋಧಿ ಹಿಟ್ಟು. ಏನನ್ನಾದರೂ. ಇನ್ನೇನು ಇಲ್ಲವಾದರೂ ವಿಟಮಿನ್‌ಗಳನ್ನಾದರೂ ಬೆರಸಿ ಮೌಲ್ಯವೃದ್ಧಿ ಮಾಡಿರುತ್ತಾರೆ.

ಕೆಲವು ಪ್ರಸಂಗಗಳಲ್ಲಿ ಅಧಿಕ ಬೆಲೆ ವಿಧಿಸಬಹುದೆನ್ನುವ ಒಂದೇ ಕಾರಣಕ್ಕೆ ತಯಾರಕರು ಮಿಶ್ರಣಗಳನ್ನು ಸಿದ್ಧಪಡಿಸುತ್ತಾರೆ. ಮತ್ತೆ ಗೋಧಿಹಿಟ್ಟಿನ ಪ್ರಸಂಗ ತೆಗೆದುಕೊಳ್ಳಬಹುದಾದರೆ, ಬಳಕೆದಾರ ಸ್ವತಃ ಗೋಧಿಯನ್ನು ಬೀಸಿಕೊಂಡರೆ ಎಷ್ಟು ಬೀಡುತ್ತದೆ. ಹಾಗೂ ಪೊಟ್ಟಣದ ಖರ್ಚನ್ನು ಲೆಕ್ಕ ಹಾಕಿಕೊಂಡರೂ ಸಿದ್ಧ ವಸ್ತು ಗೋಧಿ ಹಿಟ್ಟು ಎಷ್ಟು ದುಬಾರಿ ಎನಿಸಿಕೊಳ್ಳುತ್ತದೆ ಎಂಬುದನ್ನು ಸುಲಭವಾಗಿ ಲೆಕ್ಕಹಾಕಿ ಬಿಡುತ್ತಾನೆ. ಇಂಥ ಪೇಚಿನಿಂದ ಪಾರಾಗಲು ಒಂದಷ್ಟು ವಿಟಮಿನ್ ಮುಂತಾದುವನ್ನು ಬೆರೆಸುತ್ತಾರೆ. ಆಗ ಏರು ಬೆಲೆಯನ್ನು ಸಮರ್ಥಿಸಿಕೊಳ್ಳಲು ಅವಕಾಶವಾಗುತ್ತದೆ ಎನ್ನುವ ಭಾವನೆ ಪ್ರಚಲಿತ. ಸೋಪು, ಶೃಂಗಾರ ಸಾಧನ ಮುಂತಾದವನ್ನು ತುಳಸಿ, ಶ್ರೀಗಂಧ, ಬೇವು ಸಹಿತ ತಯಾರು ಮಾಡುವುದೇಕೆ ಗೊತ್ತೆ? ಹರ್ಬಲ್ ಉತ್ಪನ್ನಗಳಿಗೆ ತೆರಿಗೆ ರಿಯಾಯ್ತಿ ಲಭ್ಯ.

ಈ ವಿದ್ಯಮಾನಕ್ಕೆ ಸರ್ಕಾರಿ ವಲಯದ ತೈಲ ಕಂಪನಿಗಳೂ ಇದೀಗ ಹೊರತಲ್ಲ. ಕಳೆದ ಜುಲೈನಿಂದ ಈಚೆಗೆ ಇವು ಪೈಪೋಟಿ ಮೇಲೆ ಮಿಶ್ರಣ ಪೆಟ್ರೋಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿಸಿಎಲ್), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಮತ್ತು ಇಂಡಿಯನ್ ಆಯಿಲ್ (ಐಓಸಿ) ಇವು ಮೂರು ಇದೀಗ ಮೌಲ್ಯವರ್ಧಿತ ಇಂಧನವನ್ನು ಆಯ್ದ ನಗರಗಳಲ್ಲಿ ಆರಾಟ ಮಾಡತೊಡಗಿವೆ. ಇವುಗಳ ಮಾರಾಟಕ್ಕೆಂದೇ ವಿಶೇಷವಾಗಿ ಆಯ್ದ ಬಂಕ್‌ಗಳನ್ನು ಸಜ್ಜು ಮಾಡಿವೆ. ‘ಪ್ಯೂರ್‌ಫಾರ್ ಶೂರ್’ ಎಂಬ ಹೆಸರು ಜೋಡಿಸಿದ ಬಂಕ್‌ಗಳಲ್ಲಿ ಬಿಪಿಸಿಎಲ್ ಮಾರಾಟ ಮಾಡುವುದು ಶುದ್ಧ ಪೆಟ್ರೋಲ್ ಅನ್ನು ಅಲ್ಲ ! ಅದರ ಹೆಸರು ‘ಸ್ಪೀಡ್’, ‘ಪವರ್’. ಅದನ್ನು ‘ಕ್ಲಬ್ ಎಚ್ ಪಿ’ ಎಂಬ ಬಂಕ್‌ಗಳಲ್ಲಿ ಅಳೆದು ಕೊಡುತ್ತಾರೆ. ಐಓಸಿಯು ‘ಪ್ರೀಮಿಯಂ’ ಎಂಬ ಮಿಶ್ರಣ ಪೆಟ್ರೋಲನ್ನು ಮಾತ್ರವಲ್ಲದೆ ಮಿಶ್ರಣ ಡೀಸೆಲನ್ನು ‘ಡಿಸೆಲ್ ಸೂಪರ್’ ಹೆಸರಿನಲ್ಲಿ ಹರಿಬಿಡುತ್ತಿದೆ. ಎಚ್‌ಪಿಸಿಎಲ್ ಸಹಾ ‘ಟರ್ಬೋ ಡೀಸೆಲ್’ ಸಿದ್ಧಪಡಿಸಿರುವುದುಂಟು.

ಆಮದು ಮಾಡಿಕೊಂಡು ರಾಸಾಯನಿಕಗಳನ್ನು ತೈಲ ಸಂಸ್ಕರಣಾಗಾರ ಮಟ್ಟದಲ್ಲೇ ಮಿಶ್ರಣ ಮಾಡಿ ಪೂರೈಸುತ್ತಾರೆ. ಬೆಲೆಯು ಮಾಮೂಲು ಪೆಟ್ರೋಲ್‌ಗಿಂತ ರೂ. ೧.೨೫ ಅಥವಾ ರೂ. ೧.೫೦ ರಷ್ಟು ಅಧಿಕ.

ಈ ಮಿಶ್ರಣ ತೈಲೋತ್ಪನ್ನಗಳಲ್ಲಿ ವಿಶಿಷ್ಟ ರಾಸಾಯನಿಕಗಳು ಮಾತ್ರವಲ್ಲದೆ ಅಧಿಕ ಇಂಧನಾಂಶವುಳ್ಳ ಆಕ್ಟೇನ್‌ಸೇರಿಸಿರುತ್ತಾರೆ. ಮಾಮೂಲು ಪೆಟ್ರೋಲ್‌ನ ಇಂಧನಾಂಶವನ್ನು ೭೯ ಆಕ್ಟೇನ್ ಎಂದು ಗುರುತಿಸುವುದಾದರೆ ಈ ವಿಶೇಷ ಪೆಟ್ರೋಲ್‌ಗಳಲ್ಲಿ ೯೦ ಅಥವಾ ಅದಕ್ಕಿಂತ ಹೆಚ್ಚು ಆಕ್ಟೇನ್ ಅನ್ನು ಗುರುತಿಸಬಹುದು. ಇದನ್ನು ವಾಹನಗಳನ್ನು ಬಳಸಿದಾಗ ಹೆಚ್ಚು ಮೈಲೇಜು ಬರುವುದು ಖಚಿತ. ಹೆಚ್ಚುವರಿಯಾಗಿ ಸೇರಿಸಿದ ರಾಸಾಯನಿಕಗಳು ಇಂಧನ ಉರಿದ ನಂತರ ಕಿಟ್ಟ ಕಟ್ಟುವುದನ್ನು ತಪ್ಪಿಸುತ್ತದೆ. ಕಾರ್ಬೋರೇಟರ್‌ಮತ್ತು ಇಂಧನ ಉರಿದು ಹೋಗುವ ಭಾಗಗಳಲ್ಲಿ ಇಂಗಾಲದ ಕೊಳೆ ಉಳಿಯುವುದಿಲ್ಲ. ಪ್ಲಗ್‌ಗಳು ವಾಲ್ವ್‌ಗಳು ಕಟ್ಟಿಕೊಳ್ಳುವುದಿಲ್ಲ.

ಈ ಉತ್ಪನ್ನಗಳ ಇನ್ನೊಂದು ವಿಶೇಷವೆಂದರೆ ಬ್ರ್ಯಾಂಡ್ ಮಾಡಿರುವುದು. ಗುಣಮಟ್ಟ ಹಾಗೂ ಹೆಸರು ಎರಡು ಸೇರಿಕೊಂಡು ಗ್ರಾಹಕನನ್ನು ಆಕರ್ಷಿಸುತ್ತಿವೆ. ಸಹಜವಾಗಿ ಮಾರಾಟ ಆರಂಬವಾಗಿರುವ ನಗರಗಳಲ್ಲಿ ಇವು ಜನಪ್ರಿಯವಾಗುತ್ತಿವೆ.

ಇದರ ಬಳಕೆ ಸಹಾ ಯೂರೋಪ್ ಮತ್ತು ಅಮೆರಿಕಗಳಿಂದಲೇ ಬಂದುದು. ಗ್ಯಾಸ್ ಅಥವಾ ಗ್ಯಾಸೋಲೀನ್‌ಎಂದು ಪರಿಚಿತವಾದ ಅಲ್ಲಿನ ಇಂಧನಗಳೆಲ್ಲ ಈ ಬಗೆಯವೇ. ಅಲ್ಲೂ ಕೂಡಾ ನಾನಾ ಹೆಸರಿನ ವಿಶೇಷ ಮಿಶ್ರಣ ತೈಲೋತ್ಪನ್ನಗಳೆಂದರೆ ಪರಮಾಯಿಷಿ.

ಇಷ್ಟೆಲ್ಲ ಆದರೂ ಒಂದು ಅಂಶ ಖಚಿತವಾಗಿಲ್ಲ. ಗ್ರಾಹಕನ ಉತ್ಸಾಹ ಕಂಡು ಬಂದಿದ್ದರೂ ಅಧಿಕ ಆಕ್ಟೇನ್ ಬಳಕೆಗೆ ಸದ್ಯದ ವಾಹನ ಎಂಜಿನ್‌ಗಳು ಯುಕ್ತವಾಗಿದೆಯೇ ಎಂಬುದು ಸ್ಪಷ್ಟವಿಲ್ಲ.

ಇದೆಲ್ಲ ಏನೇ ಇದ್ದರೂ ವಾಣಿಜ್ಯ ಪ್ರಪಂಚಕ್ಕೆ ಯುಕ್ತವಾದಂಥ ಈ ವಿದ್ಯಮಾನ ಬೆಳಕಿಗೆ ಬಂದಿದ್ದರೂ ಪರಿಸರ ಪ್ರೇಮಿ ಪೆಟ್ರೋಲನ್ನು ತರುವ ಭಾರತ ಸರ್ಕಾರದ ಯತ್ನ ಇನ್ನೂ ಫಲಿಸಿಯೇ ಇಲ್ಲ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಪೆಟ್ರೋಲಿಗೆ ಎಥನಾಲ್ ಅನ್ನು ಬೆರೆಸಿ ಮಾರಾಟ ಮಾಡಬೇಕೆಂದು ಕಾರ್ಯಕ್ರಮವನ್ನು ರೂಪಿಸಿದೆ. ಹಿಂದಿ ಕಾರ್ಯಕ್ರಮದ ಪ್ರಕಾರ ಹೀಗೆ ಬೆರೆಸುವುದು ೨೦೦೩ರ ಜನವರಿ ೧ ರಂದು ಆರಂಭ ವಾಗಬೇಕಿತ್ತು. ಈ ಕಾರ್ಯಕ್ರಮ ಕುರಿತ ಪರಾಮರ್ಶೆ ಸಭೆಯೊಂದರಲ್ಲಿ ಈಚೆಗೆ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕನಿಷ್ಠ ಮಾರ್ಚ್‌ವರೆಗಾದರೂ ಇದನ್ನು ಮುಂದಕ್ಕೆ ಹಾಕಬೇಕೆಂಬ ಒತ್ತಾಯ ಬಂದಿತು.

ಎಥನಾಲ್ ಎನ್ನುವುದು ಮದ್ಯಸಾರದ ಒಂದು ರೂಪ. ಡಿಸ್ಟಿಲರಿ ಸಹಾ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಎಥನಾಲ್‌ ಅನ್ನು ಉತ್ಪಾದಿಸಬಲ್ಲವು. ಈಗಾಗಲೇ ರಾಜ್ಯಗಳು ಎಥನಾಲ್ ಬೆರೆಸಿ ಪೆಟ್ರೋಲ್ ಬಳಕೆಗೆ ಅವಕಾಶ ಕೊಡುವ ಶಾಸನ ಕ್ರಮಗಳನ್ನು ಕೈಗೊಂಡಿವೆ. ತೈಲ ಚಟುವಟಿಕೆ ಹೊಣೆ ಹೊತ್ತ ಕೇಂದ್ರ ಸಚಿವ ಖಾತೆಯ ತಮ್ಮ ಎಥನಾಲನ್ನು ಖರೀದಿ ಮಾಡಿಯೇ ತೀರುವ ಸಂಬಂಧ ಗ್ಯಾರಂಟಿ ಕೊಡಬೇಕೆಂದು ಸಕ್ಕರೆ ಕರ್ಖಾನೆಗಳವರು ಕೇಳುತ್ತಿದ್ದಾರೆ. ಏಕೆಂದರೆ ಎಥನಾಲ್ ತಯಾರಿಕೆ ಕೈಗೊಳ್ಳಬೇಕಾದರೆ ಭಾರಿ ಮೊತ್ತದ ಹೂಡಿಕೆ ಅನಿವಾರ್ಯ.

ರಾಜ್ಯಗಳ ಪ್ರತಿನಿಧಿಗಳು ಎಥನಾಲ್ ಉತ್ಪಾದನೆ ಮಾತ್ರವಲ್ಲದೆ ಸಾಗಣಿಕೆಯೇ ಮುಂತಾದ ಹಲವು ಕಡೆಗಳಿಂದ ಉದ್ಭವಿಸುವ ಸಮಸ್ಯೆಗಳ ಬಗೆಗೆ ಆತಂಕ ವ್ಯಕ್ತಪಡಿಸಿದರು. ಒಂದು ರಾಜ್ಯದಲ್ಲಿ ಹೆಚ್ಚುವರಿ ಎಥನಾಲ್ ಇದ್ದರೆ ಇನ್ನೊಂದು ರಾಜ್ಯ ಅದನ್ನು ಆಮದು ಮಾಡಿಕೊಳ್ಳಬಹುದೇ ಹೇಗೆ? ಅದಕ್ಕಾಗಿ ಅಂತರ್‌ರಾಜ್ಯ ಒಡಂಬಡಿಕೆ ಹಾಗೂ ಆ ಸಂಬಂಧದ ಕಾನೂನು ಆಗಬೇಕೇ ಹೇಗೆ? ಎಥನಾಲ್ ವಾಸ್ತವವಾಗಿ ಶುದ್ಧ ಮದ್ಯಸಾರ ಆಗಿರುವುದರಿಂದ ಸಾಗಾಣಿಕೆ ವೇಳೆ ಎಕ್ಸೈಜ್‌ ಇಲಾಖೆ ತೊಡುಕುಗಳು ಬರುವುದಿಲ್ಲವೆ?

ಹೆಚ್ಚು ಹೊಗೆ ಉಗುಳದ ಎಥನಾಲ್ ಮಿಶ್ರಣವು ಲೀಟರಿಗೆ ೫೦ ಪೈಸೆ ಅಥವಾ ಒಂದು ರೂಪಾಯಿ ತುಟ್ಟಿ ಆಗಿರುತ್ತದೆ. ಅದೇನೊ ದೊಡ್ಡ ತಲೆ ನೋವಲ್ಲ. ಇರುವ ದೊಡ್ಡ ಅನುಕೂಲವೆಂದರೆ ನಾನಾ ಕಾರಣಗಳಿಂದ ಸೊರಗಿರುವ ಸಕ್ಕರೆ ವಲಯದ ಆರೋಗ್ಯ ಸುಧಾರಿಸಲು ಅವಕಾಶವಾಗುತ್ತದೆ. ಡಿಸ್ಟಿಲರಿಗಳನ್ನು ಸಹಾ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಅಧಿಕ ಲಾಭ ಮಾಡಿಕೊಳ್ಳಲು ಶಕ್ತವಾಗುತ್ತವೆ. ಪರಿಸರ ರಕ್ಷಣೆ ಜೊತೆ ಜೊತೆಗೆ ಅನುಕೂಲವೂ ಉಂಟು.

ಈ ಅಂಶಗಳನ್ನೆಲ್ಲ ಗಮನಿಸಿದಾಗ ಏಳುವ ಒಂದೇ ಪ್ರಶ್ನೆ ಎಂದರೆ ಎಥನಾಲ್ ಪೆಟ್ರೋಲ್ ಮಿಶ್ರಣ ಬಳಕೆಗೆ ಬರಲು ಇಷ್ಟೊಂದು ತಡ ಆಗಿರುವುದು ಏಕೆ? ಸಕ್ಕರೆ ಉದ್ಯಮವು ಕಳೆದ ೧೫ ವರ್ಷಗಳಿಂದ ಲಾಭಕ್ಷಮತೆ ಕಾಣದೆ ಬಸವಳಿದಿರುವಾಗ ಮುಂಚೆಯೇ ಇದು ಸಾಧ್ಯ ಆಗಬೇಕಲ್ಲವೇ?

ನಿಜ. ಆದರೆ ಇದು ಸರ್ಕಾರಿ ವಲಯದ ಕಾರ್ಯಕ್ರಮ! ಎಲ್ಲವೂ ಭಾರೀ ಸುಲಭವೇನಲ್ಲ. ಅದೇ ವೇಳೆ ಖಾಸಗಿ ವಲಯದ ಪ್ರಯತ್ನಗಳಿಂದಾಗಿ ಅಂದರೆ ಆಮದಾಗುವ ಪೆಟ್ರೋಲ್ ಮಿಶ್ರಣದ ರಾಸಾಯನಿಕಗಳನ್ನು ತಯಾರಿಸುವವರ ವ್ಯವಹಾರ ಕೌಶಲದಿಂದಾಗಿ ಬ್ರ್ಯಾಂಡ್ ಸಹಿತ ವಿಶೇಷ ಪೆಟ್ರೋಲಿಯಂ ಉತ್ಪನ್ನ ಸದ್ದಿಲ್ಲದೆ ದೇಶದಲ್ಲಿ ಮಾರಾಟಕ್ಕೆ ಬರುತ್ತಿದೆ. ಎಥನಾಲ್ ಯುಕ್ತ ಪೆಟ್ರೋಲ್ ಇನ್ನು ನೆನೆಗುದಿಗೆ ಬಿದ್ದಂತೆಯೇ ಸರಿ.

೦೯.೧೦.೨೦೦೨