ಬಂಗಾರದೊಡವೆ ಬೇಕೆ? ಅಂಗನೆ ನಿನ್ನಂಗಕೊಪ್ಪುವ ಬಂಗಾರದೊಡವೆ ಬೇಕೆ?- ಪುರಂದರ ದಾಸರ ಈ ಪದ ಸದಾ ಕಾಲಕ್ಕೂ ಅನ್ವಯಿಸುವಂಥದು.

ಹೆಣ್ಣಿನ ಅಂದಕ್ಕೆ ಅಂದವೇ ಸಾಟಿ. ಆದರೂ ಒಡವೆ ಅಂದವನ್ನು ವೃದ್ಧಿಸುತ್ತದೆ ಎಂದೇ ಭಾವಿಸುತ್ತಾರೆ ಮಹಿಳೆಯರು; ಪುರುಷರು ಕೂಡಾ. ಹೆಣ್ಣಿಗೆ ಒಡವೆ ಕೊಡಿಸುವುದು ಪ್ರೀತಿಯ ದ್ಯೋತಕ ಎಂದೇ ಪುರುಷರು ಭಾವಿಸುವುದರಿಂದ ಚಿನಿವಾರರ ಮತ್ತು ಷರಾಫರ ಜೀವನ ನಡೆಯುತ್ತಿದೆ.

ಚಿನ್ನ ಅಥವಾ ಬಂಗಾರ ಎನ್ನುವ ನುಡಿಯೇ ಮಾರ್ದವ ಭಾವನೆಗಳನ್ನು ಉಕ್ಕಿಸುತ್ತದೆ. ಅದರ ಹೊಳೆಯುವ ಗುಣ ಅದಕ್ಕೆ ಕಾರಣ. ಬಾಳಿಕೆ ಕಾರಣ. ಅದರ ಹೊಳಪು ಮಾಸಲಾದರೂ ಹೊಳೆಯುವ ಗುಣ ಹೋಗುವುದಿಲ್ಲ. ಚಿನ್ನದ ಮೇಲೆ ಸುರಿದ ಹಣ ಎಂದೂ ಪೋಲಲ್ಲ ಎಂಬುದೇ ನಂಬಿಕೆ. ಅದು ವಾಸ್ತವ ಕೂಡಾ. ಆಪತ್ಕಾಲಕ್ಕೆ ಒದಗುವುದು ಬಂಗಾರವೇ ಸರಿ. ಒಂದೇ ದುಃಖದ ಸಂಗತಿ ಎಂದರೆ ಕೊಂಡಾಗ ಕೊಟ್ಟಷ್ಟು ಬೆಲೆ ಮಾರುವಾಗ ಬರುವುದಿಲ್ಲ. ಹಾಗೆ ಆಗಬಾರದು. ಕಡಿಮೆ ಆದರೂ ಪೂರಾ ಕಡಿಮೆಯಾಗಬಾರದು.

ಒಮ್ಮೆ ಕೊಂಡ ಒಡವೆಯನ್ನು ಸಾಮಾನ್ಯವಾಗಿ ಮಾರಲೊಪ್ಪುವುದಿಲ್ಲ. ಕಷ್ಟಕಾಲ ಬಂದಾಗ ಮಾತ್ರವೇ, ತುಂಬಾ ಇಕ್ಕಟ್ಟಾದ ಸಂದರ್ಭದಲ್ಲಿ ಮಾತ್ರವೇ ಒಡವೆಯನ್ನು ಮಾರಲು ಮುಂದಾಗುತ್ತಾರೆ. ಹಾಗೆ ಮಾರಲು ಬಂದಾಗ ಹತಾಶ ಸ್ಥಿತಿ ಇರುವ ಕಾರಣ ಪ್ರಫಲವು ಕಡಿಮೆಯೋ, ಅತಿ ಕಡಿಮೆಯೋ ಆಗಿದ್ದರೂ ಚಿಂತಿಸುವುದಿಲ್ಲ. ಹಣದ ದರವು ಅಷ್ಟಿರುತ್ತದೆ. ಒಡವೆಯನ್ನು ಮಾರುವಾಗ ಕೊಂಡಾಗ ಕೊಟ್ಟಷ್ಟು ಬೆಲೆ ಬರುವುದಿಲ್ಲ ಎಂದು ಒಡೆಯರಾದವರು ನಂಬಿರುತ್ತಾರೆ. ಕೊಂಡ ಒಡವೆಯನ್ನು ಧರಿಸಿ ನಲಿಗಿರುವ ಜನರು ಇವರಾದ್ದರಿಂದ ಅಂಥ ಒಡವೆ ಕೈಬಿಟ್ಟು ಹೋಗುತ್ತದೆ ಎಂಬ ಚಿಂತೆಯೇ ಅವರ ಮನಸ್ಸಿನ್ನೆಲ್ಲ ಆವರಿಸಿರುತ್ತದೆ. ಅದರ ಭಾರದಲ್ಲಿ ಕಡಿಮೆ ಹಣ ಬರುವುದೆಂಬ ಚಿಂತೆ ದೊಡ್ಡದಾಗಿ ಕಾಣಿಸುವುದಿಲ್ಲ.

ಯಾವುದೇ ಒಡವೆಯನ್ನು ಖರೀದಿಸುವಾಗ ಅದನ್ನು ಧರಿಸುವ ಆತುರವೇ ಗ್ರಾಹಕನನ್ನು ಆವರಿಸುತ್ತದೆ. ಅದನ್ನು ಆಯುವಾಗ, ಖರೀದಿಸುವಾಗ ಗ್ರಾಹಕನಿಗೆ ಅದು ಇಷ್ಟವಾಗಿರುತ್ತದೆ ಎಂಬುದು ಮುಖ್ಯವಾಗಿ ಪರಿಣಯಿಸುತ್ತದೆ. ಒಮ್ಮೆ ಇಷ್ಟವಾಗಿ ಬಿಟ್ಟರೆ ತೀರಿತು. ಅದನ್ನು ಖರೀದಿಸತಕ್ಕದ್ದೇ. ಈ ವಿಷಯ ಷರಾಫರಿಗೆ ಚೆನ್ನಾಗಿ ಗೊತ್ತು. ಒಡವೆಯು ಇಷ್ಟವಾಗುವಂತೆ ಮಾಡಲು ಅವರು ಏನೆಲ್ಲ ಕಷ್ಟಪಡುತ್ತಾರೆ. ಒಡವೆಯನ್ನು ಮಾರುವುದಕ್ಕೆ ಮುನ್ನ ಯಾವುದೇ ಒಡವೆಯನ್ನು ಇಷ್ಟವಾಗುವಂತೆ ಮಾಡುವುದು ಹೇಗೆಂದು ಅವರು ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ಗ್ರಾಹಕನಿಗೆ ಏನೆಲ್ಲ ಸಮಜಾಯಿಷಿ ನೀಡುತ್ತಾರೆ. ಕೊಟ್ಟ ಹಣಕ್ಕೆ ಮೋಸವಿಲ್ಲ ಎನ್ನುವ ಭಾವನೆ ಬರುವಂತೆ ಮಾಡುತ್ತಾರೆ. ಸರಕಿನ ಗುಣಮಟ್ಟದ ಖಾತರಿ ನೀಡುವುದಕ್ಕಿಂತ ಹೆಚ್ಚಾಗಿ, ಒಡವೆಯು ಅವರಿಗೆ ಇಷ್ಟವಾಗುವಂತೆ ಮಾಡುವುದು ಹೇಗೆಂದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಇದು ಸಮಸ್ಯೆಯ ಇನ್ನೊಂದು ಮುಖ.

ಈ ಎರಡು ಮುಖಗಳ ನಡುವೆ ಅವರು ಒಡವೆಯನ್ನು ಧರಿಸಿ ಆನಂದಿಸುವ ಕಾಲಾವಧಿ ಬಂದು ಕುಳಿತಿರುತ್ತದೆ. ಈ ಅವಧಿಯಲ್ಲಿ ಒಡವೆ ಕುರಿತ ಮೋಹ ಒಡೆಯರನ್ನು ಆಳುತ್ತಿರುತ್ತದೆ. ಅದು ಎಷ್ಟು ಬೆಲೆ ಬಾಳುತ್ತದೆನ್ನುವ ಕಲ್ಪನೆ ಅವರಿಗೆ ಮುದ ಕೊಡುತ್ತಿರುತ್ತದೆ. ನಿರ್ದಿಷ್ಟ ಒಡವೆ ಅಂದುಕೊಂಡಷ್ಟು ಬೆಲೆ ಬಾಳುವುದಿಲ್ಲ ಎಂದು ಅವರಿಗೆ ಹೇಳಿದರೆ ಅವರ ಮನಸ್ಸಿಗೆ ಹೇಗಾಗಬೇಡ?

ಈಚೆಗೆ ಹಾಲ್‌ಮಾರ್ಕ್‌ಎಂಬ ಗುಣ ಖಾತರಿ ನೀಡುವ ಯಂತ್ರೋಪಕರಣ ವ್ಯವಸ್ಥೆಯವರು, ಗ್ರಾಹಕ ಹಿತ ರಕ್ಷಣೆ ಮಾಡುವ ಜನರನ್ನು ಮುಂದಿಟ್ಟುಕೊಂಡು ನಡೆಸಿದ ಪರೀಕ್ಷೆ ಮತ್ತು ಸಮೀಕಷೆಯ ಫಲಿತಾಂಶಗಳನ್ನು ಪ್ರಕಟಿಸಿದಾಗ ಗ್ರಾಹಕನ ಮನಸ್ಸಿಗೆ ಹೀಗೆ ಕಸಿವಿಸಿ ಆಯಿತು. ಒಡವೆ ಖರೀದಿಸಿದರೆ ಗಮನಾರ್ಹ ಎನಿಸುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಮೋಸವಾಗಿರುತ್ತದೆ ಎಂಬ ಅಂಶ ಸುದ್ದಿ ಕಾಲಂಗಳಲ್ಲಿ ರಾರಾಜಿಸಿತು. ಓದುಗರು ಮನೋಭಂಗಕ್ಕೆ ತುತ್ತಾದರು. ಗುಣಕ್ಕೆ, ಚಿನ್ನದ ಮಟ್ಟಕ್ಕೆ, ಖಾತರಿ ನೀಡುವ ವ್ಯವಸ್ಥೆ ಪೇಟೆಯಲ್ಲಿ ಇಲ್ಲ ಎಂಬ ಅಂಶ ವಿಜೃಂಭಿಸಿತು. ಓದುಗರು ತಾವು ಸಹಾ ಮೋಸ ಹೋಗುತ್ತಿರುವುದಾಗಿ ಪತ್ರ ಬರೆದರು. ಅವು ಸಹಾ ಅಚ್ಚಾಯಿತು. ವಾಸ್ತವವಾಗಿ ಇದರಲ್ಲಿ ಹೊಸತೇನೂ ಇಲ್ಲ. ಮಾರುಕಟ್ಟೆ ವ್ಯವಸ್ಥೆಗೆ ಒಳಪಟ್ಟಂತೆ ಮಾತ್ರ ಒಡವೆಯನ್ನು ಖರೀದಿಸಬೇಕಾಗಿರುವುದರಿಂದ ಷರಾಫರು ವಿಧಿಸುವ ನಿಯಮಗಳಿಗೆ ಗ್ರಾಹಕರು ಅನಿವಾಯ್ಯವಾಗಿ ತಲೆ ಕೊಡಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ‘ನಂಬಿಕೆ’ ಎನ್ನುವ ಅಂಶ ತಲೆ ಹಾಕುತ್ತದೆ. ನಂಬಿಕಸ್ಠ ಅಂಗಡಿಗಳಿಗೇ ಹೋಗುತ್ತಾರೆ. ಆಗಲೂ ತಮಗೆ ‘ಬಹಳ’ ಮೋಸವಾಗುವುದಿಲ್ಲ ಎಂಬ ನಂಬಿಕೆ! ಈ ನಂಬಿಕೆಯೇ ಷರಾಫರ ನಿಜವಾದ ಬಂಡವಾಳ.

ಅಪರಂಜಿ ಎಂದೇ ಹೆಸರಾದ ಪರಿಶುದ್ಧ ಬಂಗಾರದಿಂದ ಒಡವೆ ತಯಾರಿಸಲಾಗದು. ಅದಕ್ಕೆ ಒಂದಿಷ್ಟು ತಾಮ್ರವೇ ಮುಂತಾದ ಲೋಹವನ್ನು ಬೆರೆಸಿದರೆ ಆಗ ಗಟ್ಟಿ ಗುಣ ಬರುತ್ತದೆ. ಅಪರಂಜಿ ಎಂದರೆ ೨೪ ಕ್ಯಾರೆಟ್ ಚಿನ್ನ. ತೂಕಕರ ೨೪ನೇ ಒಂದು ಭಾಗವೇ ಕ್ಯಾರೆಟ್. ಸಾಮಾನ್ಯವಾಗಿ ೨ ಕ್ಯಾರೆಟ್ ತಾಮ್ರ ಮತ್ತಿತರ ಲೋಹ ಬೆರೆಸಿದರೆ ಆಗ ಬಂಗಾರದ ಗುಣಮಟ್ಟ ೨೨ ಕ್ಯಾರೆಟ್‌ನದಾಗಿರುತ್ತದೆ.

ಮುಂಚೆ ರೂಪಾಯಿನ ಹದಿನಾರು ಆಣೆ ಲೆಕ್ಕದಲ್ಲಿ ಮಟ್ಟ ಕಟ್ಟುತ್ತಿದ್ದರು. ೨೨ ಕ್ಯಾರೆಟ್ ಎಂದರೆ ಸುಮಾರು ಹದಿನಾಲ್ಕೂವರೆ ಆಣೆ. ಸಾಮಾನ್ಯವಾಗಿ ಹದಿನಾಲ್ಕು ಆಣೆ. ತಪ್ಪಿದರೆ ಹದಿಮೂರಾಣೆ ಮಟ್ಟ ಇಡುತ್ತಿದ್ದರು. ಬರುತ್ತ ಬರುತ್ತ ಹನ್ನೆರಡು ಆಣೆ ಮಟ್ಟ ಇಟ್ಟಾಗ ಮೋಸ ಎನಿಸತೊಡಗಿತ್ತು. ಅದು ಈಗಿನ ೧೮ ಕ್ಯಾರೆಟ್‌ಗೆ ಸಮ.

ಮಟ್ಟ ಅಳೆಯಲು ಒರೆಗಲ್ಲಿನ ಮೇಲೆ ಚಿನ್ನ ಉಜ್ಜಿ ಒರೆ ಇಡುತ್ತಾರೆ. ಅನುಭವಸ್ಥರಿಗೆ ಮಾತ್ರ ಒರೆ ಪದ್ಧತಿಯಲ್ಲಿ ಮಟ್ಟ ಗುರುತಿಸಲು ಬರುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಗ್ರಾಹಕನಿಗೆ ಮಟ್ಟದ ಅರಿವು ತಂದು ಕೊಡುವುದು ಇನ್ನೂ ಸಾಧ್ಯವಾಗಿಲ್ಲ. ಅದು ಸಾಧ್ಯವಾಗುವ ತನಕ ಮಾರಾಟಗಾರ ಹೇಳಿದ್ದೇ, ನಮೂದಿಸಿದ್ದೇ ಮಟ್ಟ. ಗ್ರಾಹಕನ ಪಾಲಿಗೆ ಖರೀದಿ ವೇಳೆ ಮಟ್ಟ ಒಂದಾದರೆ ಬಿಕರಿ ವೇಳೆ ಮಟ್ಟ ಕಡಿಮೆ ಕಾಣುತ್ತದೆ ! ಮಾರುವಾಗೆಲ್ಲ ವಾಪಸು ತಂದಾಗ ಅದೇ ಮಟ್ಟದ ಲೆಕ್ಕದಲ್ಲಿ ಹಣ ಕೊಡುವುದಾಗಿ ಹೇಳುತ್ತಾರೆ. ಆದರೆ ಕೊಡುವುದಿಲ್ಲ.

ಚಿನಿವಾರರು ಮತ್ತು ಷರಾಫರ ಮೇಲಿನ ಮುಖ್ಯ ಆರೋಪಗಳೆಂದರೆ ೧) ಮಟ್ಟ ಕಡಿಮೆ ಇಡುತ್ತಾರೆ. ೨) ೨೨ ಕ್ಯಾರೆಟ್ ಚಿನ್ನ ಕೊಟ್ಟು ೨೪ ಕ್ಯಾರೆಟ್‌ಬೆಲೆ ಪಡೆಯುತ್ತಾರೆ. ೩) ಒಟ್ಟು ಒಡವೆಯ ತೂಕ ಮಾಡುವಾಗ ಹರಳಿನ ತೂಕ ಬೇರ್ಪಡಿಸಿದಂತೆ ಚಿನ್ನದ ತೂಕ ಹೇಳುವುದಿಲ್ಲ; ಅಂದರೆ ಹರಳಿನ ತೂಕದಷ್ಟು ಚಿನ್ನವನ್ನು ಒಳಹಾಕಿಕೊಳ್ಳುತ್ತಾರೆ. ೪ ವೇಸ್ಟೇಜ್ ಅಥವಾ ತ್ಯಾಮಾನ ಎಂದು ನಮೂದಿಸಿ ಚಿನ್ನ ಒಳಹಾಕಿಕೊಳ್ಳುತ್ತಾರೆ. ಈ ಆರೋಪಗಳು ನಿಜವಾದುದೇ ಸರಿ. ನಾಲ್ಕರಲ್ಲಿ ಪ್ರತಿಯೊಂದು ಬಾಬಿನಲ್ಲೂ ಷರಾಫರು ಹಣ ಪಡೆಯುತ್ತಾರೆ. ಜೊತೆಗೆ ಒಡವೆ ತಯಾರಿಸುವ ಶುಲ್ಕ ಬೇರೆ.

ಇವುಗಳಲ್ಲಿನ ಯಾವ ಬಾಬಿನಲ್ಲಿ ಎಷ್ಟೆಂದು ನಿಗದಿಪಡಿಸುವ ಕ್ರಮವಿಲ್ಲ; ಒಳ್ಳೆಯ ಷರಾಫರು ಎಲ್ಲ ಬಾಬುಗಳಲ್ಲೂ ರಿಯಾಯ್ತಿ ಧೋರಣೆ ವಹಿಸಿ ಒಳ್ಳೆಯ ಹೆಸರು ಕಾಪಾಡಿಕೊಳ್ಳುತ್ತಾರೆ. ಬಹುತೇಕ ಜನ ಇದಕ್ಕೆ ವೃತ್ತಿರಿಕ್ತ. ಷರಾಫರ ಸಂಘದವರಾದರೂ ಗುಣಮಟ್ಟ ಪರೀಕ್ಷಿಸುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಬೇಕು.

ಒಡವೆಯು ಹೆಚ್ಚು ಹೆಚ್ಚಾಗಿ ಗಟ್ಟಿ ಸ್ವರೂಪದಲ್ಲಿದ್ದರೆ ಮಟ್ಟ ಚೆನ್ನಾಗಿರುತ್ತದೆ. ಬೆಸುಗೆ ಇಟ್ಟಿರುವುದು ಹೆಚ್ಚಾಗಿದ್ದರೆ, ಒಳಗೆ ಪೊಳ್ಳಿನ ಅಂಶ ಇದ್ದರೆ ಮಟ್ಟ ಕಡಿಮೆ ಕಡಿಮೆಯಾಗುತ್ತದೆ. ಹರಳು ಕೂರಿಸುವುದು ಹೆಚ್ಚಾದಷ್ಟೂ ಮಟ್ಟ ಕಡಿಮೆಯಾಗುತ್ತದೆ. ಗ್ರಾಹಕರು ಇದನ್ನು ಗಮನಿಸಬೇಕು.

ವಿದೇಶಗಳಲ್ಲಿ ಒಡವೆಯಲ್ಲಿರುವ ಬಂಗಾರದ ಗುಣಮಟ್ಟವನ್ನು ಖಚಿತವಾಗಿ ನಮೂದಿಸುವ ಪರಿಪಾಠವುಂಟು. ಆದರೆ ಅಲ್ಲಿನ ಒಡವೆಗಳ ವಿನ್ಯಾಸವೇ ನಮ್ಮವರಿಗೆ ಹಿಡಿಸುವುದಿಲ್ಲ.

ನಮ್ಮಲ್ಲಿ ಒಂದೊಂದು ಜನಸಮೂಹಕ್ಕೆ ಒಂದೊಂದು ನಮೂನೆ, ಒಂದೊಂದು ಭೂಪ್ರದೇಶಕ್ಕೆ ಒಂದೊಂದು ವಿನ್ಯಾಸ ಪ್ರಚಲಿತವಾಗಿರುತ್ತದೆ. ಭಿನ್ನ ರುಚಿಯ ಒಡವೆಗಳನ್ನು ತಯಾರಿಸಬಲ್ಲ ಪ್ರತ್ಯೇಕ ಚಿನಿವಾರರು ಇರುತ್ತಾರೆ. ತಮ್ಮದಲ್ಲದ ಶೈಲಿಯ ವೈಖರಿಯ ಒಡವೆ ಯಾರಿಗೂ ಇಷ್ಟವಾಗುವುದಿಲ್ಲ. ಇಷ್ಟವಾಗುವಂಥ ಒಡವೆ ಸಿಕ್ಕರೆ ಮಹಿಳೆಯರು ಎಷ್ಟು ಬೆಲೆ ತೆರಲಾದರೂ ಸಿದ್ಧರಾಗುತ್ತಾರೆ.

ಒಡವೆ ಎನ್ನುವುದು ಹಲವು ವರ್ಷಗಳಿಗೊಮ್ಮೆ, ಎಷ್ಟೋ ಸಂದರ್ಭಗಳಲ್ಲಿ ಜೀವಮಾನ ಕಾಲದಲ್ಲೊಮ್ಮೆ ಖರೀದಿಸುವ ಪ್ರಶಸ್ತ ಸರಕು ಇಂಥ ಸರಕಿನಲ್ಲಿ ಲಾಭಾಂಶ ಅಧಿಕ ಇಡುವುದು ಸಾಮಾನ್ಯ. ನಿತ್ಯ ಬಳಕೆಯ ಸಾಮಾನು, ಟೂತ್‌ಪೇಸ್ಟ್ ಮುಂತಾದುವುಗಳ ಅಸಲು ವೆಚ್ಚ ಎಷ್ಟಿರುತ್ತದೆಂಬುದು ಸಾಮಾನ್ಯ ಗ್ರಾಹಕನಿಗೆ ಗೊತ್ತಾದರೆ ಆತ ಹೌಹಾರ ಬೇಕಾಗುತ್ತದೆ. ಹಾಗಿರುವಾಗ ಒಡವೆಯ ಲಾಭಾಂಶ ಕುರಿತಂತೆ ಗೊಣಗುವುದರಲ್ಲಿ ಅರ್ಥವಿಲ್ಲ.

ಬಹುತೇಕ ಸಂದರ್ಭಗಳಲ್ಲಿ ಒಡವೆ ಗ್ರಾಹಕನು ಗೊತ್ತಿದ್ದೂ ಹಳ್ಳಕ್ಕೆ ಬೀಳುತ್ತಾನೆ. ಅದೇ ವಿಪರ್ಯಾಸ. ಬಂಗಾರದ ಒಡವೆ ಹಾಗೂ ಬೆಳ್ಳಿ ಸರಕಿನ ವ್ಯಾಪಾರದ ಪಾಲಿಗೆ ಆ ವಿಪರ್ಯಾಸವೇ ಬಂಡವಾಳ.

೨೩.೦೧.೨೦೦೨