ಏಷ್ಯಾದಲ್ಲಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಸಹಾ ಒಂದು. ಒಂದು ಬೀದಿ ಅಥವಾ ಪ್ರದೇಶಕ್ಕೆ ಒಂದೆರಡು ವರ್ಷದ ನಂತರ ಭೇಟಿ ಕೊಟ್ಟರೆ ಗುರುತು ಸಿಗುವುದಿಲ್ಲ. ಅಷ್ಟೊಂದು ಬದಲಾವಣೆ ಆಗಿರುತ್ತದೆ. ಎಲ್ಲೆಂದರಲ್ಲಿ ಕಟ್ಟಡ ಎದ್ದಿರುತ್ತದೆ. ಇದ್ದಕ್ಕಿದ್ದಂತೆ ಹಳೆಯ ಕಟ್ಟಡ ಮಾಯವಾಗಿರುತ್ತದೆ. ಹಾಗೆ ನೋಡಿದರೆ ನಿರ್ದಿಷ್ಟ ಪ್ರದೇಶದ ವೈಶಿಷ್ಟ ಮತ್ತು ಸ್ವಭಾವವೇ ಬದಲಾಗಿರುತ್ತದೆ.

ವಾಸ್ತವವಾಗಿ ದಂಡು ಪ್ರದೇಶದಲ್ಲಿ ಮನೆ ಮತ್ತು ಅಂಗಡಿಗಳಲ್ಲಿ ಕಾಣಬಹುದಾಗಿದಾಗಿದ್ದ ಬ್ರಿಟಿಷರ ಕಾಲದ ಛಾಪು ಅಥವಾ ಸೊಬಗು ದಿನೇ ದಿನೇ ಕಾಣೆಯಾಗುತ್ತಿರುವ ಬಗೆಗೆ ಅಭಿರುಚಿಯ ಜನ ಆಗಾಗ ಅಲವತ್ತುಕೊಳ್ಳುದುಂಟು. ಬೆಂಗಳೂರು ಸಹಾ ಕಾಂಕ್ರೀಟ್ ಕಾಡು ಆಗುತ್ತದೆ ಎಂದು ದೂರುತ್ತಾರೆ. ರೂಪದಲ್ಲಿ ವಿನ್ಯಾಸದಲ್ಲಿ ಒಂದನ್ನೊಂದು ಮೀರಿಸುವಂಥ ಕಟ್ಟಡಗಳು ಬರುತ್ತಿವೆ. ಆ ಮಾತು ಬೇರೆ.

ಆರ್ಥಿಕ ಹಿಂಜರಿತ ಕಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಹಣವಿಲ್ಲ ಎನ್ನುವ ಮಾತು ಈಗ ಸಲ್ಲುತ್ತಿಲ್ಲ. ಬಹು ಅಂತಸ್ತಿನ ಕಟ್ಟಡಗಳಲ್ಲಿರುವ ಫ್ಲ್ಯಾಟುಗಳು ಖಾಲಿ ಬಿದ್ದಿವೆ ಎಂಬುದು ನಿಜ. ಆದರೆ ಕಮರ್ಷಿಯಲ್ ಉದ್ದೇಶದ ಕಟ್ಟಡಗಳು ಮಾತ್ರ ನವನವೀನ ಸ್ವರೂಪ ತಳೆದು ಆವರಿಸುತ್ತಿವೆ. ಕಳೆದ ಒಂದು ವರ್ಷದಲ್ಲಿ ಕಟ್ಟಡ ವಾಣಿಜ್ಯ ಮಳಿಗೆಗಳು ಯಾವುವೂ ಖಾಲಿ ಉಳಿದಿಲ್ಲ. ಪೀಠೋಪಕರಣ ಹೊಂದಿಸಿ ಬಾಡಿಗೆಗೆ ಅಥವಾ ಭೋಗ್ಯಕ್ಕೆ ಕೊಡುವುದು ಸಹಾ ಆರಂಭವಾಗಿದೆ. ಕಟ್ಟಡವನ್ನು ಕಟ್ಟುವುದಕ್ಕೆ ಮುಂಚೆಯೇ ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಸೌಲಭ್ಯ ಕಲ್ಪಿಸುವುದು ಈಗ ಮಾಮೂಲು. ವಾಸ್ತವವಾಗಿ ಒಳ್ಳೆಯ ಕಂಪೆನಿಗಳವರು, ಅಪೇಕ್ಷೆ ಪಟ್ಟರೆ ಸ್ಥಿರಾಸ್ತಿ ಡೆವಲಪರ್‌ಗಳು, ಕೆಲವು ನಿವೇಶನಗಳನ್ನು ತೋರಿಸಬಲ್ಲರು. ಬಾಡಿಗೆ ಅಥವಾ ಭೋಗ್ಯ ಯಾವುದಕ್ಕೂ ಸೈ. ಕಟ್ಟಡಗಳು ಮತ್ತು ನಿವೇಶನಗಳ ಬೆಲೆ ಸ್ವಲ್ಪ ಇಳಿದ ಮಟ್ಟದಲ್ಲಿ ಸ್ಥಿರವಾಗಿರುವುದರಿಂದ ಕಚೇರಿ ಅಥವಾ ವ್ಯಾಪಾರ ಮಳಿಗೆ ಉದ್ದೇಶಕ್ಕೆ ಜಾಗ ಹಿಡಿಯುವವರ ಸಂಖ್ಯೆ ಹೆಚ್ಚಾಗಿದೆ. ಕಷ್ಟ ಕಾಲದಲ್ಲೂ ಕಟ್ಟಡ ನಿರ್ಮಾಣ ನಿಂತಿಲ್ಲ. ವಾಸ್ತವವಾಗಿ ಆರ್ಥಿಕ ಹಿಂಜರಿತವು ಹಲವಾರು ಕಂಪೆನಿಗಳವರ ಪಾಲಿಗೆ ವರವಾಗಿ ಪರಿಣಮಿಸಿದೆ. ವಹಿವಾಟು ಅಥವಾ ವಹಿವಾಟಿನಲ್ಲಿ ಲಾಭಾಂಶ ಕಡಿಮೆಯಾಗಿದ್ದರೂ ಕಂಪೆನಿಗಳವರು ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳಲು ಇದೇ ಸುಸಮಯ ಎಂದು ಭಾವಿಸಿದ್ದಾರೆ. ಹೊಸ ಹೊಸ ವಾಣಿಜ್ಯ ಸಂಕೀರ್ಣಗಳು ಮತ್ತ ಷೋರೂಮುಗಳು ತಲೆಯೆತ್ತಲು ಅದೇ ಕಾರಣ. ಸ್ಥಿರಾಸ್ತಿ ವಹಿವಾಟುದಾರರು ಬೇಕೆಂದಾಗ ನಿಗದಿತ ಅವಧಿಯೊಳಗೆ ಏನು ಬೇಕಾದರೂ ನಿರ್ಮಿಸಿಕೊಡುತ್ತಾರೆಂದರೆ ಅದಕ್ಕಿಂತ ಇನ್ನೇನು ಬೇಕು?

ಬಹುರಾಷ್ಟ್ರೀಯ ಕಂಪನಿಗಳು (ಎಂಎನ್‌ಸಿಗಳು) ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳು ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಜಾಗ ಹಿಡಿದು ಹಾಕುತ್ತಿವೆ. ಲ್ಯಾಂಗ್‌ಫರ್ಡ್‌ರಸ್ತೆಯಲ್ಲಿ ಸಿಕ್ಕಿದ ದೊಡ್ಡ ನಿವೇಶನದಲ್ಲಿ ಎಬ್ಬಿಸಿದ ದಿವ್ಯಶ್ರೀ ಚೇಂಬರ್ಸ್‌ನಲ್ಲಿ ಸಿಸ್ಕೊ ಸಿಸ್ಟಮ್ಸ್ ಕಂಪೆನಿಯು ೧.೭೫ ಲಕ್ಷ ಚದರಡಿ ಜಾಗ ಹಿಡಿಯಿತು. ಸಿಲಿಕಾನ್ ಆಟೋಮೇಷನ್‌ಅಲಸೂರಿನ ಬ್ರಿಗೇಡ್ ಸ್ಕ್ವೇರ್‌ನಲ್ಲಿ ೨೮ ಸಾವಿರ ಚದರ ಅಡಿ ಜಾಗ ಹವಣಿಸಿಕೊಂಡಿತು. ರೇಸ್‌ಕೋರ್ಸ್‌ರಸ್ತೆಯ ಖನಿಜ ಭವನದಲ್ಲಿ ಡಿಜಿಟಲ್ ಎಕ್ವಿಪ್‌ಮೆಂಟ್ಸ್ ೪೦ ಸಾವಿರ ಚದರಡಿ, ಮಿಷನ್ ರಸ್ತೆಯಲ್ಲಿ ಕಾಗ್ನಿಜೆಂಟ್‌ಟೆಕ್ನಾಲಜೀಸ್ ೩೫ ಸಾವಿರ ಚದರಡಿ ಜಾಗ ಹಿಡಿದಿದೆ.

ವಾಸ್ತವವಾಗಿ ಇಂಟರ್‌ನ್ಯಾಷನಲ್ ಟೆಕ್ನಾಲಜಿ ಪಾರ್ಕ್‌(ಐಟಿಪಿಎಲ್) ಬಿಟ್ಟರೆ ಐಟಿ ಉದ್ಯಮ ದೊಡ್ಡದಾಗಿ ನೆಲೆಗೊಂಡಿರುವುದು ಬೆಂಗಳೂರಿನ ದಕ್ಷಿಣ ಭಾಗದಲ್ಲೇ ಎಲೆಕ್ಟ್ರಾನಿಕ್‌ಸಿಟಿ ಮತ್ತು ಎಲ್ ಆಂಡ್ ಟಿ ಟವರ್‌ಗಳು ಪ್ರತಿಷ್ಠೆಯ ದ್ಯೋತಕ. ಕೋರಮಂಗಲವಂತೂ ಪ್ರತ್ಯೇಕ ಐಟಿ  ಉಪನಗರವಾಗಿ ಪರಿಣಮಸಿದೆ. ಬಸವನಗುಡಿ, ಜಯನಗರ, ಜೆ.ಪಿ. ನಗರ, ಬಿಟಿಎಂ ಲೇಔಟ್‌ಮತ್ತು ಬನಶಂಕರಿಗಳಲ್ಲೆಲ್ಲ ಅಸಂಖ್ಯಾತ ಐಟಿ ಕಂಪೆನಿಗಳು ನೆಲೆ ಕಂಡುಕೊಂಡಿವೆ. ಇವಕ್ಕೆ ಜಾಗ ಒದಗಿಸಿದ ಸಣ್ಣಪುಟ್ಟ ಕಟ್ಟಡಗಳಿಗೂ ಲೆಕ್ಕವಿಲ್ಲ. ನಿರ್ಮಾಣದಾರರಾಗ ಬ್ರಿಗೇಡ್ ಗ್ರೂಪ್‌ನವರು ತಮ್ಮ ಎರಡನೇ ಸಾಫ್ಟ್‌ವೇರ್ ಪಾರ್ಕ್‌ಅನ್ನು ಬನಶಂಕರಿಯಲ್ಲಿ ಎಬ್ಬಿಸಿದಾಗ ಇಂಥ ಕಡೆ ಹೀಗೊಂದು ಬೃಹತ್‌ಕಟ್ಟಡ ಬರಲಿಕ್ಕೆ ಸಾಧ್ಯವಿತ್ತೇ ಎಂದು ಅನಿಸದಿರಲಿಲ್ಲ.

ನಾಲ್ಕು ದಶಕಗಳ ಹಿಂದೆ ಕಲ್ಕತ್ತಾ ಮತ್ತಿತರ ಕಡೆಯಿಂದ ವಲಸೆ ಬಂದ ಉದ್ಯಮಿಗಳಿಗೆ ರಾಜ್ಯ ಸರ್ಕಾರ ನೆಲೆ ಒದಗಿಸಿಕೊಟ್ಟಾಗ ವೈಟ್‌ಫೀಲ್ಡ್ ಕಾರ್ಖಾನೆಗಳು ತಲೆ ಎತ್ತಿದುವು. ಈಗ ಆ ಪ್ರದೇಶ ಭಾರೀ ಪ್ರವರ್ಧಮಾನ. ಗೋಪಾಲನ್ ನಿರ್ಮಾಣದಾರರು ಎರಡು ಲಕ್ಷ ಚದರಡಿ ಜಾಗವನ್ನು ಈಗ ಮಿಲೆನಿಯಂ ಟವರ್ಸ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಇನ್ನೊಂದೆಡೆ ತಲೆ ಎತ್ತುತ್ತಿರುವ ಪ್ರಸಾದ್ ಟೆಕ್ನಾಲಜಿ ಪಾರ್ಕ್‌ನಲ್ಲಿ ೫೫ ಸಾವಿರ ಚದರಡಿ ಜಾಗವಿದೆ.

ಕಟ್ಟಡಗಳ ಬೆಳವಣಿಗೆ ಕೆಲವೊಂದು ಪ್ರದೇಶಕ್ಕೆ ಅಥವಾ ಐಟಿ ಉದ್ಯಮಕ್ಕೆ ಸೀಮಿತವಲ್ಲ. ರಹೇಜಾ ಗ್ರೂಪ್, ಪ್ರೆಸ್ಟೀಜ್ ಗ್ರೂಪ್, ಎಚ್ ಎಂ ಕನ್‌ಸ್ಟ್ರಕ್ಷನ್, ಸಾಲಾರ್ ಪೂರಿಯಾ ಸಂಸ್ಥೆ (ಹೊಸೂರು ರಸ್ತೆಯಲ್ಲಿ ೧.೩ ಲಕ್ಷ ಚದರಡಿ) ಇವು ಕೆಲವು ಮಾತ್ರ. ಕಮರ್ಷಿಯಲ್ ಜಾಗ ಅಭಿವೃದ್ಧಿಪಡಿಸುತ್ತಿರುವ ಹಲವಾರು ಸಂಸ್ಥೆಗಳು ಬೆಂಗಳೂರಿನಾದ್ಯಂತ ನಿರ್ಮಾಣ ಕಾರ್ಯದಲ್ಲಿ ನಿರತವಾಗಿವೆ.

ಮುಂಬೈನಂತಾಗುತ್ತದೆಯೆ ಬೆಂಗಳೂರು? ಹಾಗೆ ಅನಿಸುತ್ತದೆ. ಆದರೆ ಪರಿಸ್ಥಿತಿ ಇನ್ನೂ ಅಷ್ಟು ಹದಗೆಟ್ಟಿಲ್ಲ. ದೊಡ್ಡ ಹಾಗೂ ಸಣ್ಣ ಪುಟ್ಟ ಕಟ್ಟಡಗಳ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಸಾಕಷ್ಟು ಭೂಪ್ರದೇಶ ಲಭ್ಯವಿದೆ ಎಂದೇ ನಿರ್ಮಾಣದಾರರು ಭಾವಿಸುತ್ತಾರೆ. ಆದರೆ ಸುತ್ತ ಮುತ್ತ ವಸತಿ ಸೌಕರ್ಯ, ರಸ್ತೆ ಮತ್ತು ವಿದ್ಯುತ್ತು, ಟೆಲಿಸಂಪರ್ಕ, ನೀರಿನ ಸೌಲಭ್ಯ ಇವೆಲ್ಲ ಹುಡುಕಿ ನಿವೇಶನವು ಕಮರ್ಷಿಯಲ್ ಆಗಬಹುದೇ ಎಂದು ಲೆಕ್ಕ ಹಾಕಿ ಆಯ್ದು ಕೊಳ್ಳುವುದಕ್ಕೆ ಇನ್ನೂ ಅವಕಾಶವಿದೆ.

ತಿಂಗಳ ಬಾಡಿಗೆ ಚದರಡಿಗೆ ರೂ.೧೫ ರಿಂದ ೫೦ ತನಕ ನಡೆಯುತ್ತದೆ. ಖರೀದಿಗಾದರೆ ರೂ. ೨೦೦೦ ಪ್ರಾರಂಭ; ರೂ. ೪೫೦೦ ತನಕ ಹೋಗುವುದುಂಟು. ಅಷ್ಟೊಂದು ಪರಮಾಯಿಷಿ ಅಲ್ಲದ ಜಾಗ ಚರದಡಿಗೆ ರೂ. ೧೫೦೦ ರಂತೆ ಮಾರಾಟವಾಗುವುದೂ ಉಂಟು.

ಬೆಂಗಳೂರಿನಷ್ಟು ಅಲ್ಲವಾದರೂ ದಕ್ಷಿಣದ ಇನ್ನೊಂದು ಮುಖ್ಯ ನಗರವಾದ ಹೈದರಾಬಾದ್‌ನಲ್ಲೂ ಜಾಗಕ್ಕೆ ಬೇಡಿಕೆ ಕುದುರಿದೆ. ಪ್ರಖ್ಯಾತ ಬಂಜಾರ ಹಿಲ್ಸ್, ಜೂಬಿಲಿ ಹಿಲ್ಸ್ ಮಾತ್ರವಲ್ಲದೆ ಹಲವು ವಸತಿ ಪ್ರದೇಶಗಳು ಕಮರ್ಷಿಯಲ್ ಆಗುತ್ತಿವೆ. ದಕ್ಷಿಣ ದೆಹಲಿ ಮತ್ತು ಗುರುಗಾವ್‌ಗಳಲ್ಲಿ ಸಹಾ ಇದೇ ವಿದ್ಯಮಾನ. ಮುಂಬೈನಲ್ಲಿ ಕಂಪನಿಗಳು ತಮ್ಮ ಚಟುವಟಿಕೆಯನ್ನು ಜನದಟ್ಟಣೆ ಪ್ರದೇಶಗಳಿಂದ ಹೊರವಲಯ ಉಪನಗರಗಳಿಗೆ ಬದಲಾಯಿಸುತ್ತಿವೆ. ಪಶ್ಚಿಮ ಬಾಂದ್ರಾ. ಪಶ್ಚಿಮ ಅಂದೇರಿ ಮತ್ತು ವರ್ಸೋವಾಗಳಲ್ಲಿ ಬೇಡಿಕೆ ಹೆಚ್ಚಿದೆ ಎಂದು ನಿರ್ಮಾಣಕಾರರು ಹೇಳುತ್ತಿದ್ದಾರೆ.

ಸ್ಥಿರಾಸ್ತಿ ಎಂಬುದು ಏನಿದ್ದರೂ ಭವಿಷ್ಯಕ್ಕೆ ಒದಗಿಬರುವಂಥದು. ಈಗ ಕಂಪೆನಿಗಳು ಸ್ಥಿರಾಸ್ತಿಯ ಮೇಲೆ ಲಗ್ಗೆ ಹಾಕುತ್ತಿರುವುದಕ್ಕೂ ಅದೇ ಕಾರಣ. ಇಂದಿಗಲ್ಲ ನಾಳೆಗೆ ಭದ್ರ. ಈಗ ವ್ಯಾಪಾರಗಳಿಲ್ಲ. ಆದರೆ ಎಂಎನ್‌ಸಿಗಳು ಸಿಕ್ಕಲ್ಲೆಲ್ಲ ಷೋರೂಂಗಳನ್ನು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಿದ ಹಾಗೂ ಫರ್ನಿಷ್‌ಮಾಡಿದ ಧಾಟಿಯಲ್ಲಿ ಸ್ಥಾಪಿಸುತ್ತಿವೆ.

ವಿಶ್ವ ವಾಣಿಜ್ಯ ಸಂಸ್ಥೆ (ಡ್ಬ್ಯುಟಿಓ) ತನ್ನ ಹಣ ಹೂಡಿಕೆ ಕುರಿತ ಕಾರ್ಯಕ್ರಮಗಳನ್ನು ಭಾರತಕ್ಕೆ ವಿಸ್ತರಿಸಿಲ್ಲ. ಆದರೆ ಸ್ಥಿರಾಸ್ತಿ ಮೇಲೆ ಹಣ ಹೂಡುವ ಪ್ರವೃತ್ತಿ, ಆರ್ಥಿಕ ಹಿಂಜರಿತದ ವೇಳೆ ಕೂಡಾ ಹೆಚ್ಚಿದೆ.

೨೮.೧೧.೨೦೦೧