ಸೋಪು ಖರೀದಿಸಿದರೆ ಮೂರಕ್ಕೆ ಒಂದು ಉಚಿತ. ಟೂತ್‌ಪೇಸ್ಟು ಅಥವಾ ಷೇವಿಂಗ್ ಕ್ರೀಮು ಬೇಕಾದರೆ ೨೦ ಅಥವಾ ೩೦ ಗ್ರಾಂ ಹೆಚ್ಚುವರಿ ಲಭ್ಯ. ವಿದೇಶಿ ಮೂಲಕ ಯಾವ ಸಾಮಗ್ರಿ ಬೇಕು? ಹಾಲೆ, ಹಣ್ಣಿನ ರಸವೆ, ಆಟಿಕೆಯ, ಸೊಂಟಕ್ಕೆ ಬಿಗಿದುಕೊಳ್ಳಲು ಬೆಲ್ಟೆ, ಸುಗಂಧವೆ, ಆಭರಣವೆ, ವಾಷೆ, ಷೂಸೆ, ಕನ್ನಡಕವೆ…. ಹೀಗೆ ಏನು ಬೇಕು? ಮಾಯಾನಗರಿ ಬೆಂಗಳೂರಿನಲ್ಲಿ ಮಾತ್ರವಲ್ಲ; ಸಣ್ಣ ಊರುಗಳಲ್ಲಿ ಸಹಾ ಅಗ್ಗದ ಬೆಲೆಗೆ ಸುಲಭ ಲಭ್ಯ. ಇನ್ನು  ದೇಶಿ ವಸ್ತುಗಳಲ್ಲಿ ಬಿಡುಬೀಸಾಗಿ ಸಿಗುತ್ತಿರುವುದೆಂದರೆ ಬಟ್ಟೆಬರೆ: ಹೆಣ್ಣು ಮಕ್ಕಳ ಗಂಡಸರ ಯಾವ ಜವಳಿ ಬೇಕು? ‘ಬಿಸಾಡಿದ ಬೆಲೆ’ಗಳಲ್ಲಿ ಸಿಗುತ್ತದೆ. ಸಿದ್ಧ ವಸ್ತುಗಳ ಪೈಕಿ ಇಂಥದು ಈಗ ಸಿಗುವುದಿಲ್ಲ ಎನ್ನುವುದಕ್ಕಿಲ್ಲ. ಟಿವಿ, ಫ್ರಿಜ್ಜು, ವಾಷಿಂಗ್ ಮೆಶಿನ್: ಅಷ್ಟೇಕೆ ಮೋಟಾರ್ ಬೈಕ್ ಅಥವಾ ಕಾರು ಬೇಕಾದರೂ ತುಂಬಾ ಸುಲಭವಾಗಿ ಕೊಳ್ಳಬಹುದು: ಸಾಲ ಕೂಡಾ ಕೊಟ್ಟು ಅವನ್ನು ಖರೀದಿಸಲು ಕುಮ್ಮಕ್ಕು ಕೊಡುತ್ತಾರೆ! ಗ್ರಾಹಕ ಖರೀದಿಗೆ ಸಿದ್ಧನಾದರೆ ಸಾಕು ಶೇ.೦ ಬಡ್ಡಿ ದರದ ಸಾಲ ಸ್ಥಳದಲ್ಲೇ ಸಿಗುತ್ತದೆ. ನಿವೇಶನ ಅಥವಾ ಮನೆ ಮಾಡಿಕೊಳ್ಳುವುದು ಈವರೆಗೆ ಹರಸಾಹಸ. ಈಗ ಹಾಗೇನಿಲ್ಲ. ಸಾಲ ಕೊಟ್ಟು ಕ್ರಯ ಪತ್ರ ಮಾಡಿಸಿಕೊಳ್ಳಲು ಹಣಕಾಸು ಸಂಸ್ಥೆಗಳು ತುದಿಗಾಲಲ್ಲಿ ನಿಂತಿರುತ್ತವೆ.

ಯಾವಾಗಲೂ ಸನ್ನಿವೇಶ ಇಷ್ಟು ಪ್ರಶಸ್ತವಿರಲಿಲ್ಲ. ಬ್ಯಾಂಕುಗಳಂತೂ ಒಳ್ಳೆಯ ಗ್ರಾಹಕರು ಬರಲೆಂದು ತುದಿಗಾಲಲ್ಲಿ ನಿಂತಿರುತ್ತವೆ. ಸಾಲ ಎತ್ತುವವರೇ ಇಲ್ಲ. ಫೋನ್ ಬೇಕೆ?; ಅಡಿಗೆಗೆ ಗ್ಯಾಸ್ ತಕ್ಷಣ ಬೇಕೆ?; ಕಾರು ಬೇಕೆ?; ಕ್ಯಾಮೆರಾ ಬೇಕೆ?; ಏನು ಬೇಕಾದರೂ ಕೇಳಬಹುದು. ಕ್ರೆಡಿಟ್ ಕಾರ್ಡ್‌ರೂಪದ ಪ್ಲಾಸ್ಟಿಕ್ ಹಣ ಗ್ರಾಹಕರ ಜೇಬಿನಲ್ಲೇ ಇಡುತ್ತದೆ. ಮನೆ ಅಥವಾ ಆಫೀಸಿನಿಂದ ಹೊರಕ್ಕೆ ಹೋಗಬೇಕಾಗಿಯೂ ಇಲ್ಲ. ಕಂಪ್ಯೂಟರ್ ಚಾಲೂ ಮಾಡಿ ಆನ್‌ಲೈನ್ ವ್ಯಾಪಾರ ಮಾಡಬಹುದು. ರೊಕ್ಕ ತಕ್ಷಣ ಕೊಡಬೇಕಿಲ್ಲ. ಕ್ರೆಡಿಟ್ ಕಾರ್ಡ್ ಸಂಕೇತಗಳನ್ನು ಬಳಸಿ ಕಾರ್ಯ ಮುಗಿಸಿದರೆ ಗ್ರಾಹಕನ ಮನೆಬಾಗಿಲಿಗೆ ಸರಕು ಬಂದು ಬೀಳುತ್ತದೆ. ಉಡುಗೊರೆ ಕೊಡಬೇಕೆಂದರೂ ಚಿಂತಿಸಬೇಕಿಲ್ಲ. ಆನ್‌ಲೈನ್ ಸೂಚನೆ ನೀಡಿದರೆ ಹೂಗುಚ್ಛವೋ, ಉಡುಗೊರೆಯೋ ಸಂದಾಯವಾಗುತ್ತದೆ. ಫೋನಿನಲ್ಲಿ ಕೃತಜ್ಞತೆ ಕೂಡಾ ಬಂದು ಸೇರುತ್ತದೆ. ಪಾಸ್‌ಪೋರ್ಟ್ ಮುಂತಾದ ಪ್ರಮಾಣ ದಾಖಲೆಗಳು ಸಿದ್ಧವಾಗಿರುತ್ತದಾದರೆ ಭಾರತದಲ್ಲಿ ಉಪಾಹಾರ ಸೇವನೆ ನಂತರ ಆನ್‌ಲೈನ್ ವ್ಯವಹಾರದ ಮೂಲಕ ಎಲ್ಲ ವ್ಯವಸ್ಥೆ ಮಾಡಿಕೊಂಡು ಊಟದ ವೇಳೆಗೆ ವಿದೇಶದಲ್ಲಿರಬಹುದು. ಮರಳಿ ವಿಮಾನದ ಹತ್ತಿ ವಾಪಾಸಾಗಬಹುದು. ಯಾರೂ ಹೇಳಲು ಸಾಧ್ಯ, ನಮ್ಮದು ಹಿಂದುಳಿದ ದೇಶವೆಂದು?

ಈ ಮಾತುಗಳಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಹಣ ಖರ್ಚು ಮಾಡಲು ಸಿದ್ಧವಿದ್ದರೆ ವಿದೇಶಗಳಲ್ಲಿ ಮಾತ್ರ ಯೋಷಿಸಬಹುದಾದ ಈ ಎಲ್ಲ ಸೌಲಭ್ಯವನ್ನು ಇಲ್ಲೇ ಪಡೆಯಬಹುದು. ಆದರೆ ಖರ್ಚು ಮಾಡಲು ಹಣ ಎಲ್ಲಿಂದ ಬರಬೇಕು?

ಬೆಂಗಳೂರಿನಲ್ಲಿ ‘ಷಾಪರ್ಸ್ ಸ್ಟಾಪ್’, ‘ದಿ ಬಾಂಬೇ ಸ್ಟೋರ್’ ಅಥವಾ ಹೊಸ ‘ಲೈಫ್‌ಸ್ಟೈಲ್‌’ ಇಲ್ಲಿಗೆ ಹೋದರೆ ವಿದೇಶವೇ ಮನೆ ಬಾಗಿಲಿಗೆ ಬಂದಿರುವುದು ವೇದ್ಯವಾಗುತ್ತದೆ. ಅಲ್ಲದೆ ಫುಟ್‌ಪಾತ್‌ಗಳಲ್ಲೆಲ್ಲ ವಿದೇಶಿ ವಸ್ತುಗಳು ಸಿಗುತ್ತವೆ. ಎಂ.ಜಿ. ರಸ್ತೆ ಮುಂತಾದ ಕಡೆ ಟಿಪ್‌ಟಾಪಾಗಿ ಧಿರಿಸು ಧರಿಸಿದ ಯುವಕ ಮಾರಾಟಗಾರರು ಯಾವುದಾವುದೋ ಐಟಂಗಳನ್ನು ಬೇಕೇ ಎಂದು ಕೇಳಿ ಮುಖಕ್ಕೆ ರಾಚುತ್ತಾರೆ. ಆದರೆ ಅವನ್ನು ಖರೀದಿಸಲು ಹಣ ಎಲ್ಲಿಂದ ಬರಬೇಕು? ಅವನ್ನು ಖರೀದಿಸವ ಜನ ಕೂಡಾ ಜತನದಿಂದ ತೂಗಿ ಅಳೆದು ವ್ಯವಹಾರ ಮಾಡುತ್ತಾರೆಯೇ ಹೊರತು ಬೇಕೆಂದ ಹಾಗೆ ನುಗ್ಗುವುದಿಲ್ಲ ಸಫೀನಾ ಪ್ಲಾಜಾ, ಬರ್ಮ ಬಜಾರು ಮುಂತಾದ ಕಡೆ ಸರಕಿನ ಮಹಾಪೂರ ಅಗ್ಗಕ್ಕೆ ಸಿಗುವುದೇ ಎಂದು ಪರೀಕ್ಷಿಸುವವರೇ ಅಧಿಕ. ಹಣ ಸುಲಭವಾಗಿ ಬರುತ್ತದೆಯೇ? ಆದರೂ ಕೊಳ್ಳಲು ಒಂದು ಕೈ ನೋಡೋಣ ಎನ್ನುವ ತರದೂದು.

ಖರ್ಚು ಮಾಡಲು ಪ್ರಲೋಭನೆ ಏನಿದೆಯೋ ಅದನ್ನೇ ನಾವು ಈಗ ವಿದೇಶಗಳಿಂದ ಆಮದು ಮಾಡಿಕೊಂಡಿರುವುದು. ಭಾರತದಂಥ ದೇಶದಲ್ಲಿ ಸರಕು ಸಾಮಗ್ರಿ ಮತ್ತು ಸೇವಾ ಸೌಲಭ್ಯಗಳನ್ನು ಮುಕ್ಕಿ ಬಳಸುವ ವಾಡಿಕೆ ಇರಲಿಲ್ಲ. ಬೇಕಾದ್ದನ್ನು ಮಾತ್ರ ಬೇಕಾದಾಗ ಮಾತ್ರ ಖರೀದಿಸಿ ಆಸ್ವಾದಿಸುವ ಸಂಯಮದ ಗುಣವೇ ನಮ್ಮದು. ಈಗ ಬದಲಾಗುತ್ತಿದೆ. ಬೇಡದಿದ್ದರೂ ಜಾಹೀರಾತಿನ ಪ್ರಭಾವಕ್ಕೆ ಮರುಳಾಗಿ ಆಯಾ ಕ್ಷಣದ ಲಹರಿಗೆ ಅನುಗುಣವಾಗಿ ಖರೀದಿ ಮಾಡುವುದು ಚಿಕ್ಕ ಪ್ರಾಯದವರಲ್ಲಿ ಮಾತ್ರವಲ್ಲದೆ ದೊಡ್ಡವರಲ್ಲೂ ಸಾಮಾನ್ಯವಾಗುತ್ತಿದೆ. ಇದನ್ನೇ ಬಳಕೆಬಾರ ಸಂಸ್ಕೃತಿ ಎನ್ನುವುದು. ಇದರ ಪ್ರಮುಖ ಲಕ್ಷಣ ಎಂದರೆ ಖರೀದಿದಾರನ ಅಗತ್ಯಗಳನ್ನು ಸಜ್ಜು ಮಾಡಿ ಮಾರಿ ಕೈತೊಳೆದುಕೊಳ್ಳುತ್ತಾರೆ. ಬಳಕೆಗಾಗಿ ಸರಕನ್ನು ಖರೀದಿಸುವವರು ಅಗತ್ಯ ಪೂರೈಕೆ ಆಗಿದೆಯೇ ಎಂದು ಪರಿಗಣಿಸದೆ ಬೇಸರವಾಯಿತು ಅನ್ನುವ ಕಾರಣಕ್ಕೆ ಅವನ್ನು ಬಿಸುಟು ಇನ್ನಷ್ಟು ಖರೀದಿಗೆ ಸಜ್ಜಾಗುತ್ತಾರೆ. ಅವರ ಪಾಲಿಗೆ ಹೊಸ ಪ್ರಲೋಭನೆಗಳು ಸಿದ್ಧವಾಗಿರುತ್ತವೆ.

ಜಾಗತೀಕರಣದ ಫಲವೆನಿಸಿದ ಮಾರುಕಟ್ಟೆ ಆರ್ಥಿಕತೆಯ ರುಚಿ ಇದು. ವಿದೇಶಗಳ ಜೀವನಶೈಲಿಯೇ ಇದು. ಸೀಮಿತ ವಾಸ್ತವ್ಯಕ್ಕಾಗಿ ಆದರೂ ‘ದುಡಿಯುವ’ ವ್ಯಕ್ತಿ ವಿದೇಶಕ್ಕೆ ಹೋದ ತಕ್ಷಣ ಅವನಿಗೆ ಅಥವಾ ಅವಳಿಗೆ ಖರ್ಚು ಮಾಡಲು ಪ್ರಲೋಭನೆ ಬರುತ್ತದೆ. ಗಳಿಸಿದ್ದರಲ್ಲಿ ಉಳಿಸಿ ಅದರಿಂದ ಬೇಕಾದ್ದನ್ನು ಖರೀದಿಸುವ ಜಾಯಮಾನಕ್ಕೆ ವಿರುದ್ಧವಾಗಿ ದುಡಿಯುವ ಸಾಮರ್ಥ್ಯದ ಆಧಾರದ ಮೇಲೆ ಖರ್ಚು ಮಾಡಲು ಏನೆಲ್ಲ ದಾರಿಗಳನ್ನು ಮಾಡಿಕೊಟ್ಟು, ಸಾಲ ಕೊಟ್ಟು, ಸಮಸ್ತ ಭೋಗಗಳ ತಕ್ಷಣ ಅನುಭವಕ್ಕೆ ಅನುಕೂಲ ಮಾಡಿಕೊಡುವುದಾಗುತ್ತದೆ. ಗಳಿಸು-ಖರ್ಚು ಮಾಡು. ಗಳಿಸು-ಸಾಲ ತೀರಿಸು. ಗಳಿಸು ಮತ್ತೆ ಖರ್ಚು ಮಾಡು. ಇದೇ ಜೀವನ. ಇಂಥ ಜೀವನದ ಬೋನಿಗೆ ಸಿಲುಕಿಯೇ ಅಲ್ಲಿಗೆ ಹೋದವರು ಶಾಶ್ವತವಾಗಿ ನೆಲೆಸುವಂತಾಗುತ್ತದೆ. ಅದೆಲ್ಲ ಬೇರೆ ಮಾತು.

ಭಾರತದಲ್ಲಿ ಇದೀಗ ಎಲ್ಲವೂ ಲಭ್ಯವಾಗುತ್ತಿದೆ. ಆದರೆ ದುಡಿಮೆಗೆ ಅವಕಾಶ ಅದೇ ಕಾಣಿಸುತ್ತಿಲ್ಲ. ಯಾವುದೇ ಸುಖಲೋಲುಪತೆಗೆ ಇರುವ ಅರ್ಹತೆ ಎಂದರೆ ಅದನ್ನು ‘ಗಳಿಸಿ’ಕೊಳ್ಳುವುದು. ಅದೇ ಈಗ ಸಾಧ್ಯವಾಗದೇ ಇರುವುದು. ಖರೀದಿ ಸಾಮರ್ಥ್ಯವೇ ಇಲ್ಲವಾಗಿದೆ. ಭಾರತದ ಅನುಭವಕ್ಕೆ ಈಗಿನ ತನಕ ಬಂದಿರುವ ಒಂದು ವಿದ್ಯಮಾನವೆಂದರೆ ಸರ್ಕಾರ ವೆಚ್ಚ ಮಾಡುತ್ತಾ ಹೋದಷ್ಟೂ ಜನಜೀವನ ಸಂಪನ್ನವಾಗಿರುತ್ತದೆ. ಅಭಿವೃದ್ಧಿ ಕಾರ್ಯಯೋಜನೆ ಮುಂತಾದ ಹೆಸರುಗಳಲ್ಲಿ ಸರ್ಕಾರ ವೆಚ್ಚ ಮಾಡಲು ಈಗ ಹೆಚ್ಚು ಸಾಧ್ಯವಾಗುತ್ತಿಲ್ಲ. ಜನರ ಪಾಲಿಗೆ ದುಡಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಣದುಬ್ಬರವನ್ನು ಪೂರ್ತಿ ಹದ್ದುಬಸ್ತಿನಲ್ಲಿ ಇಡಲಾಗಿದೆ. ಇದರಿಂದ ಹಣ ಅಥವಾ ಬಂಡವಾಳ ಬೆಳೆಯುತ್ತಿಲ್ಲ. ಜನರ ಕೈಗೆ ದುಡ್ಡು ಹತ್ತುತ್ತಿಲ್ಲ. ಉಳಿತಾಯ ಹಣಕ್ಕೂ, ಬಡ್ಡಿದರ ಇಳಿತದಿಂದಾಗಿ, ಹುಟ್ಟುವಳಿಯೇ ಕಡಿಮೆಯಾಗಿ ಹೋಗಿದೆ. ಇರುವ ಒಂದೇ ದಾರಿ ಎಂದರೆ ಹಣ ಹೂಡಿಕೆ ಎಂಬುದು ಸಾಧ್ಯವಾಗಬೇಕು; ದೇಶಿ ಉದ್ಯಮಿಗಳು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಸರ್ಕಾರಿ ಕೃಪಾಶ್ರಯವನ್ನು ಮಾತ್ರ ಅಪೇಕ್ಷಿಸುತ್ತಾರೆ. ಅವರು ಸರಕು ಸೇವೆ ಉತ್ಪಾದಿಸಿದರೂ ಬಂಡವಾಳ ಹರಿದು ಬರಬೇಕು; ಉತ್ಪಾದನೆ ಏನೇ ಆದರೂ ದೇಶೀಯರು ಮಾತ್ರವಲ್ಲದೆ ನಮ್ಮಿಂದ ಅವನ್ನು ಖರೀದಿಸಿದ ವಿದೇಶಿಯರು ಸಹಾ ಬಳಸುವಂತಾಗಬೇಕು. ಆಗ ಬಳಸಿ ಮಿಕ್ಕ ಸಂಪತ್ತು ಎನ್ನುವುದು ಗೋಚರಿಸುತ್ತದೆ. ಸರಿಯೇ; ವಿದೇಶಿ ಹಣಹೂಡಿಕೆ ಎನ್ನುವುದು ಮರೀಚಿಕೆ ಆಗಿಯೇ ಉಳಿದಿದೆಯಲ್ಲ!

ಅನ್ಯರಿಗೆ ಮಾರಲಾಗುವ ಗುಣಮಟ್ಟದ ಸರಕು ಸೇವೆಯನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಲೇ ನಮಗೆ ಸಾಧ್ಯವಾಗುತ್ತಿಲ್ಲ. ಇನ್ನು ಮಾಡುವುದು ಯಾವಾಗ? ಆದರೂ ಪ್ರಧಾನಿಯೇ ಮುಂತಾಗಿ ಎಲ್ಲರೂ ಸಹಸ್ತಾರು ಕೋಟಿ ಗಾತ್ರದ ಹಣ ಹೂಡಿಕೆ ಸಾಧ್ಯವಾಗುತ್ತಿದೆ ಎನ್ನುವ ಮಾತುಗಳನ್ನೇ ಆಡುತ್ತಾರೆ. ಕನಸುಗಳನ್ನು ಮಾಡುತ್ತಿದ್ದಾರೆಯೇ, ಹಿಂದಿ ಸಿನಿಮಾಗಳ ತರಹೆ?!

೧೨.೦೯.೨೦೦೧