ಕಾಲು ಶತಮಾನದ ಹಿಂದೆ ಬ್ಯಾಂಕಿನಲ್ಲಿ ಕೆಲಸಕ್ಕಿರುವ ಹುಡುಗ ಅಳಿಯನಾಗಿ ದೊರೆತರೆ ತಮ್ಮ ಪುಣ್ಯ ಎಂದು ಹೆಣ್ಣು ಹೆತ್ತವರು ಭಾವಿಸುತ್ತಿದ್ದರು. ಈಗ ಪರಿಸ್ಥಿತಿ ತಿರುವು ಮುರುವು. ಆಗ ಸೇರಿದವರೆಲ್ಲ ಈಗ ಸ್ವಯಂ ನಿವೃತ್ತಿ ವಿಆರ್‌ಎಸ್ ತೆಗೆದು ಕೊಳ್ಳುತ್ತಿರುವುದುಂಟು. ಇಂದಿರಾಗಾಂಧಿ ಜಾರಿ ಮಾಡಿದ ಸಾಮಾಜಿಕ ನಿಯಂತ್ರಣ, ರಾಷ್ಟ್ರೀಕರಣ ಹಾಗೂ ಅನಂತರ ವಿಜೃಂಭಿಸಿದ ಸಾಲ ಮೇಳ ಮುಂತಾದ ವಿದ್ಯಮಾನಗಳೆಲ್ಲ ಬ್ಯಾಂಕಿಂಗ್ ಚಟುವಟಿಕೆಗಳನ್ನು ಜನ ಜೀವನದ ಮುಂಚೂಣಿಯಲ್ಲಿ ಇರಿಸಿದ್ದುವು. ವಾಸ್ತವವಾಗಿ ಜಾರಿಕೊಂಡ ಆರ್ಥಿಕ ಉದಾರೀಕರಣದ ಕರಿನೆರಳು ಬ್ಯಾಂಕಿಂಗ್ ಉದ್ಯಮದ ಮೇಲೆ ಬಿದ್ದಿವೆ.

ಬ್ಯಾಂಕ್‌ಗಳು ಪ್ರವರ್ಧಮಾನಕ್ಕೆ ಬಂದಿದ್ದೇ ಲೇವಾದೇವಿಯಿಂದ. ಖಾಸಗಿಯವರು ನಿರ್ದಯಿ ದರಗಳಲ್ಲಿ ಬಡ್ಡಿ ವಸೂಲು ಮಾಡುತ್ತಿದ್ದರು. ‘ಕೊಟ್ಟ ಹಣ ಕಳೆದು ಹೋಗುವ ಅಪಾಯ’ ಅವರ ಪಾಲಿಗೆ ಇಲ್ಲದೆ ಇರಲಿಲ್ಲ. ಬ್ಯಾಂಕುಗಳು ೧೮, ೨೦, ೨೫ ಹೀಗೆಲ್ಲ ಬಡ್ಡಿ ದುಡಿಯುತ್ತಿದ್ದಾಗ ಖಾಸಗಿಯವರಿಗೂ ಬ್ಯಾಂಕ್‌ಗಳವರಿಗೂ ವ್ಯತ್ಯಾಸವಿಲ್ಲ ಎಂದು ಜನ ಗೊಣಗುತ್ತಿದ್ದುದು ಉಂಟು. ಆದರೂ ಖಾಸಗಿಯವರ ಲೇವಾದೇವಿಗಿಂತ ಇವರದು ವಾಸಿ ಎನ್ನುವಂತೆಯೇ ಇತ್ತು. ಸಾಮಾನ್ಯ ಜನರಂತೆ ಶ್ರೀಮಂತರು, ವಾಣಿಜ್ಯೋದ್ಯಮಿಗಳು ಸಹಾ ಬ್ಯಾಂಕ್‌ಗಳವರನ್ನೇ ಆಶ್ರಯಿಸಿದ್ದರಿಂದ ವಹಿವಾಟು ಜೋರಾಗಿ ನಡೆದಿತ್ತು. ಬ್ಯಾಂಕ್‌ಗಳವರು ಠೇವಣಿಗೆ ನೀಡುವ ಬಡ್ಡಿದರ ಮತ್ತು ಸಾಲ ಪಡೆದು ಕೊಂಡವರಿಗೆ ವಿಧಿಸುವ ಬಡ್ಡಿದರ ಇವೆರಡರ ನಡುವಣ ಅಂತರ ಸಾಕಷ್ಟು ಇದ್ದುದರಿಂದ ಲಾಭವೂ, ಬ್ಯಾಂಕ್‌ಉದ್ಯೋಗಿಗಳಿಗೆ ನೀಡುವ ಸವಲತ್ತುಗಳೂ ಭಾರಿಯಾಗಿಯೇ ಇದ್ದವು. ವಾಸ್ತವವಾಗಿ ಆರ್ಥಿಕ ಉದಾರೀಕರಣ ಜಾರಿಗೆ ಬರುವ ಮುನ್ನವೇ ಬ್ಯಾಂಕ್‌ಗಳು ಸೋತವು. ಅದೆಲ್ಲ ಆಗಿದ್ದು ಹೀಗೆ:

ಲೇವಾದೇವಿಯವರು ಬಿಡಿ ವ್ಯಕ್ತಿಗಳಿಗೆ ಸಾಲ ಕೊಡುವ ದಂಧೆಯಲ್ಲಿ ಯಾವ ಅಪಾಯವನ್ನು ಎದುರಿಸುತ್ತಿದ್ದರೋ, ಅದೇ ಅಪಾಯವನ್ನು ಬ್ಯಾಂಕುಗಳವರು ಸಹಾ ಎದುರಿಸಿದರು. ಅದೇ ‘ಕೊಟ್ಟ ಹಣವನ್ನು ಕಳೆದುಕೊಳ್ಳುವುದು’, ಲೇವಾದೇವಿಯವರು ಹಣ ಕಳೆದುಕೊಂಡರೆ ಅದು ಅವರ ಪಾಲಿಗೆ ಸಂದ ವೈಯಕ್ತಿಕ ನಷ್ಟ ಆಗುತ್ತಿತ್ತು. ಅವರು ಕೊಟ್ಟ ಹಣ ವಸೂಲು ಮಾಡಲಾಗದೆ ದಿವಾಳಿ ಆದರೆ ಪರಿತಪಿಸುವವರು ಇರಲಿಲ್ಲ. ಆದರೆ ಬ್ಯಾಂಕ್‌ಗಳವರ ವಿಷಯ ಹಾಗಲ್ಲ. ನಷ್ಟವಾದರೆ ಅದು ವಾಸ್ತವವಾಗಿ ಸಾಂಸ್ಥಿಕ ನಷ್ಟ. ಬ್ಯಾಂಕ್‌ಗಳಿಗೆ ಅತೀವ ಮನ್ನಣೆ ದೊರಕಿದ ಮೇಲೆ ಅವುಗಳ ವಹಿವಾಟು ಹೆಚ್ಚಿದ ಮೇಲೆ ಅದರ ಬಹುಪಾಲು ಪ್ರಯೋಜನ ಆಗಿದ್ದು ವಾಣಿಜ್ಯೋದ್ಯಮಿಗಳಿಗೆ. ಸಣ್ಣಪುಟ್ಟ ಪ್ರಮಾಣದ ಸಾಲ ಪಡೆಯುವವರಿಗಿಂತ ಹೆಚ್ಚಾಗಿ ನೂರಾರು ಕೋಟಿ ರೂಪಾಯಿ ಪ್ರಮಾಣದಲ್ಲಿ ಹಣ ಎತ್ತುವವರಿಗೇ ಬ್ಯಾಂಕುಗಳಿಂದ ಪ್ರಯೋಜನವಾಗಿದ್ದು ಅಧಿಕ. ಬ್ಯಾಂಕುಗಳನ್ನು ನಡೆಸುವವರಿಗೆ ಮತ್ತು ಅಧಿಕಾರಿಗಳಿಗೆ ಇದರಿಂದ ಲಾಭ ಇರುತ್ತಿತ್ತು. ಸಣ್ಣವರಿಗಲ್ಲ. ಎಷ್ಟೋ ವೇಳೆ ಬ್ಯಾಂಕುಗಳವರು ಸಣ್ಣವರಾದ ಗ್ರಾಹಕರ ಜೊತೆ ನಿದ್ದಯಿಗಳಾಗಿ ನಡೆದುಕೊಳ್ಳುತ್ತಾರೆ. ‘ನಿರ್ದಾಕ್ಷಿಣ್ಯ’ವಾಗಿ ಎನ್ನುವುದಾದರೆ ಅದು ಬೇರೆ. ‘ನಿರ್ದಯಿಗಳಾಗುವುದು ಕ್ರೂರ. ಸ್ವಲ್ಪ ಒತ್ತಾಸೆ ಅಥವಾ ರಿಯಾಯಿತಿ ಇಲ್ಲವೇ ಕಾಲಾವಕಾಶ ನೀಡಿದರೆ ಮುಳುಗುವವನು ತೇಲಿ ಮೇಲೆ ಬರುತ್ತಾನೆ ಎನ್ನುವ ಪ್ರಸಂಗಗಳಲ್ಲೂ ಬ್ಯಾಂಕುಗಳವರು ತಮ್ಮ ಕೈಲಿ ಹಣ ಪ್ರಧಾನ ಅಧಿಕಾರವಿದೆಯೆನ್ನುವ ಒಂದೇ ಹಮ್ಮಿನಿಂದ ನಿರ್ದಯಿಗಳಾಗಿದ್ದರು. ಅದೇ ವೇಳೆ ರಾಜಕೀಯಸ್ಥರ ನಂಟು ಇರುವ ಅಥವಾ ಇಲ್ಲದಿರುವ ದೊಡ್ಡ ಗ್ರಾಹಕರ ವಿಷಯದಲ್ಲಿ ಉದಾರವಾಗಿರುತ್ತಿದ್ದರು. ಹೀಗೆ ಪ್ರಭಾವಿಗಳ ಮುಲಾಜಿಗೆ ಒಳಗಾಗಿಯೇ ಬ್ಯಾಂಕುಗಳವರು ಸೋತರು. ಹಣ ವಸೂಲು ಮಾಡಲಾಗದೆ ಹೋದಾಗ; ಹಣವನ್ನು ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವಂತಾದಾಗ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಹೆಚ್ಚಾಯಿತು. ಕೊಟ್ಟ ಸಾಲಕ್ಕೆ ಭದ್ರತೆಯಾಗಿ ಇರಿಸಿಕೊಂಡಿದ್ದ ಆಸ್ತಿಪಾಸ್ತಿಯೆಲ್ಲ ನಿರುಪಯುಕ್ತವಾಗಿ ಪರಿಣಮಿಸಿತು. ಗಟ್ಟಿ ಮರ ಒಳಗಿಂದೊಳಗೆ ಟೊಳ್ಳಾಯಿತು. ಎಡ್ಡಾಯಿತು.

ಬ್ಯಾಂಕುಗಳವರ ನಿರ್ವಿಣ್ಣತೆಗೆ ಸಾಲಮೇಳ ವಿದ್ಯಮಾನವೇ ಒಂದು ನಿದರ್ಶನ. ರಾಜಕೀಯ ಪಕ್ಷ ಯಾವುದೇ ಆದರೂ ಮೇಳ ನಡೆಸಿ ವಸೂಲಾಗದಂಥ ರೀತಿಯಲ್ಲಿ ಸಾಲಗಳನ್ನು ಕೂಡಿಸುವುದು ಅಸಂಬದ್ಧ. ಆದರೂ ಬ್ಯಾಂಕುಗಳು ಸಾಲಮೇಳಗಳಲ್ಲಿ ಹಣ ಹಂಚಿದವು. ದೊಡ್ಡ ದೊಡ್ಡವರಿಗೆ ಕೊಟ್ಟ ಸಾಲ ವಸೂಲಾಗದೆ ಭಾರೀ ಮೊತ್ತದ ಹಣವನ್ನು ‘ವಸೂಲಿದಾರಿ ಇಲ್ಲ’ ಎನ್ನುವ ಕಾರಣದ ಮೇಳೆ ಒಳಗಿಂದೊಳಗೆ ವಜಾ ಮಾಡಿ ತಪ್ಪಿತಸ್ಥರಾಗಿದ್ದ ಬ್ಯಾಂಕುಗಳವರು; ರಾಜಕೀಯ ಪಕ್ಷ ತೋಳು ತಿರುವಿದಾಗ ಮನಃ ಪೂರ್ತಿ ಮಣಿದರು, ತಮ್ಮ ತಪ್ಪು ಮುಚ್ಚಿಕೊಳ್ಳಲು ಮೇಳಗಳಲ್ಲಿ ವಸೂಲಾಗದಂಥ ಹಣ ಹಂಚಿದರು!

ಬ್ಯಾಂಕುಗಳ ಆದಾಯದ ಮೂಲವು ಬಡ್ಡಿ ದುಡಿಯುವುದೇ ಆಗಿರುವಾಗ ಬಂಡವಾಳಕ್ಕೆ ಹೀಗೆ ಮೋಸವಾಗಿದ್ದು ದುರಂತ. ಇಡೀ ವ್ಯವಸ್ಥೆ ನಿಧಾನವಾಗಿ ಕುಸಿಯುವುದಕ್ಕೆ ಇದೇ ಕಾರಣ. ಸಂಗ್ರಹಿಸಿದ  ಠೇವಣಿ ಹಣದಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಶೇ. ೩೦ ಭಾಗ ಮಾತ್ರ ಸಾಲ ನೀಡಲು ಬ್ಯಾಂಕುಗಳಿಗೆ ದಕ್ಕುತ್ತಿದ್ದುದು. ಮಿಕ್ಕ ಭಾಗ ಆರ್‌ಬಿಐ ಕಟ್ಟಳೆ ಅನ್ವಯ ಬೇರೆಡೆ ಹೂಡಿಕೆಯಾಗುತ್ತದೆ. ಅಷ್ಟರಲ್ಲೇ ಲಾಭಕಾರಿಯಾದ ಬ್ಯಾಂಕುಗಳು ಕೆಟ್ಟ ನಿರ್ವಹಣತೆಯಿಂದ ಒಳಗೊಳಗೇ ರೋಗಕ್ಕೆ ತುತ್ತಾಗಿದ್ದು ನಿಜ. ಬ್ಯಾಂಕುಗಳ ವ್ಯವಹಾರ ಅನಿರ್ಬಾಧಿತವಾಗಿ ಮುಂದುವರೆದಿದ್ದರೆ ಇನ್ನಷ್ಟು ಕಾಲ ಹುಳುಕೆಲ್ಲ ಮುಚ್ಚಿ ಹೋಗುತ್ತಿತ್ತೋ ಏನೋ. ಆದರೆ ಆರ್ಥಿಕ ಉದಾರೀಕರಣದ ಫಲವಾಗಿ ಬ್ಯಾಂಕುಗಳು ನೀಡುವ ಸಾಲಕ್ಕೆ ಬೇಡಿಕೆಯೇ ಕಡಿಮೆ ಆಗಿ ಹೋಯಿತು. ಹೊಸ ಆರ್ಥಿಕತೆಯ ಉದ್ಯಮಗಳು ಬ್ಯಾಂಕೇತರ ಮೂಲಗಳಿಂದ ಹಣ ಪೂರೈಸಿಕೊಳ್ಳಲು ಆರಂಭಿಸಿದುವು. ಬಂಡವಾಳ ಪೇಟೆಯ ಮೂಲಕ ಜನರಿಂದ ಷೇರು ಬಿಡುಗಡೆ  ಮುಂತಾದ ರೂಪದಲ್ಲಿ ಅವು ಹಣ ಸಂಗ್ರಹಿಸುವುದು ಮಾಮೂಲಾಯಿತು. ವಿದೇಶಿ ಬಂಡವಾಳವಂತೂ ಉದ್ಯಮಗಳಿಗೆ ನೇರವಾಗಿ ಹರಿದು ಬರತೊಡಗಿತು. ಇದ್ದಕ್ಕಿದ್ದಂತೆ ಬ್ಯಾಂಕುಗಳಿಗೆ ಇದ್ದ ಪ್ರಾಮುಖ್ಯ ಕಡಿಮೆಯಾಯಿತು. ವಹಿವಾಟು ಕಡಿಮೆಯಾಯಿತು. ಬಡ್ಡಿದರ ಬಳಿಸಬೇಕೆನ್ನುವುದು ಸರ್ಕಾರದ ನೀತಿ ಆದಾಗ ಪೆಟ್ಟು ಬಿದ್ದಿದ್ದು ಬ್ಯಾಂಕುಗಳಿಗೆಯೇ. ಅವುಗಳ ಲಾಭಕ್ಷಮತೆಯೇ ಕರಗಿ ಹೋಯಿತು. ಬ್ಯಾಂಕುಗಳು ತಮ್ಮ ಭಾರಕ್ಕೆ ತಾವೇ ಕುಸಿಯತೊಡಗಿದಾಗ ವಯಸ್ಸಾದವರು ತಮ್ಮ ಮೈತೂಕ ಇಳಿಸಿಕೊಳ್ಳಲು ಹೆಣಗಾಡುವಂತೆ ಒದ್ದಾಡಿದವು. ಸ್ವಯಂ ನಿವೃತ್ತಿ ಯೋಜನೆ ವಿಆರ್‌ಎಸ್ ಅನ್ವಯ ಸಿಬ್ಬಂದಿ ಖೋತಾ ಆಯಿತು. ಈಗ ಬ್ಯಾಂಕು ಶಾಖೆಗಳು ಎಲ್ಲೆಡೆ ಇವೆ. ಆದರೆ ಅನೇಕ ಶಾಖೆಗಳಲ್ಲಿ ಸಿಬ್ಬಂದಿಯೇ ಇಲ್ಲದೆ ಸಮಸ್ಯೆ. ದುಡಿದು ಬದುಕುವುದೇ ಕಷ್ಟವಾದಾಗ ಬ್ಯಾಂಕುಗಳವರು ಮತ್ತೆ ಗ್ರಾಹಕರ ಮೇಲೆಯೇ ಬಿದ್ದಿದ್ದಾರೆ. ನಗದು ಪಾವತಿ ಮಾಡಿ ಒಂದು ಡಿಡಿ ಪಡೆಯಬೇಕಾದರೆ ಅನ್ಯಾಯ ಎನಿಸುವಂಥ ಮೊತ್ತದ ಕಮಿಷನ್ ಕೊಡಬೇಕು. ಯಾವುದೇ ಖಾತೆ ಯಡಿ ನಡೆಸಿದ ವ್ಯವಹಾರದ ಪಟ್ಟಿ ಬೇಕೆಂದರೆ ಅದಕ್ಕಾಗಿ ಪ್ರತ್ಯೇಕ ಶುಲ್ಕ ತೆರಬೇಕೆಂದು ಕೇಳುತ್ತಾರೆ. ಠೇವಣಿ ಇಡುತ್ತೇವೆಂದು ಬಂದವರಿಗೆ ವಿಶೇಷವಾಗಿ ಅಣಿಮಾಡಿ ಖುರ್ಚಿ ಹಾಕುತ್ತಿದ್ದ ಮಂದಿ ಠೇವಣಿ ಏಕಾದರೂ ಬರುವುದೋ ಎನ್ನುವ ಧೋರಣೆ ತೋರುತ್ತಾರೆ. ಹಾಗೆ ಸಂಗ್ರಹಿಸಿದ ಹಣವನ್ನು ಸಾಲವಾಗಿ ಕೊಟ್ಟು ಬಡ್ಡು ದುಡಿಯುವ ಅವಕಾಶವೇ ಕಡಿಮೆಯಾಗಿದೆ!

ಆರ್ಥಿಕ ಹಿಂಜರಿತ ಕಳೆದು ಬ್ಯಾಂಕುಗಳ ವೈಭವ ಮರಳಲು ಕಾಯಬೇಕಾಗುತ್ತದೆ. ಹಾಗೆ ಕಾಯುವಾಗ ಗ್ರಾಹರ ಪರ ಧೋರಣೆಯನ್ನಾದರೂ ಬಲಪಡಿಸಿಕೊಂಡರೆ ಮುಂದಿನ ಆರೋಗ್ಯಕ್ಕೆ ಅದು ಸಹಕಾರಿ ಆಗುತ್ತದೆ.

೧೫.೦೮.೨೦೦೧