ಕನ್ನಡದಲ್ಲಿ ‘ಬಡ್ಡಿಮಗ’ ಎಂಬುದೊಂದು ಪದ ಬಳಕೆಯಲ್ಲಿ ಇದೆ. ಈಗ ಅದು ಬೈಗುಳಕ್ಕೆ ಬಳಸುವ ಪದ ಮಾತ್ರ. ಅದರ ನಿಜವಾದ ಅರ್ಥ ಹುಡುಕಲು ಬಹಳ ಹಿಂದಿನ ಕಾಲಕ್ಕೇನೂ ಹೋಗಬೇಕಾಗುವುದಿಲ್ಲ. ಜೀತ ಪದ್ಧತಿ ಜಾರಿಯಲ್ಲಿ ಇದ್ದಾಗ ಬಡವನಾದವನು ಶ್ರೀಮಂತನಿಂದ ಪಡೆದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಅದಕ್ಕೆ ಪ್ರತಿಯಾಗಿ ತನ್ನ ಮಗನನ್ನು ಶ್ರೀಮಂತನ ಬಳಿ ದುಡಿಮೆಗೆ ಬಿಡುತ್ತಿದ್ದ. ಆ ಮಗನ ದುಡಿಮೆ ಸಾಲದ ಬಡ್ಡಿಗೆ ಚುಕ್ತಾ. ಆತ ಬಡ್ಡಿ ಮಗ.

ಈಗ ಚಿತ್ರ ಬದಲಾಗಿದೆ. ಬಡವ ಶ್ರೀಮಂತರೆಂಬ ಭೇದವಿಲ್ಲದೆ ಉಳಿತಾಯ ಮಾಡಿದ ಹಣವನ್ನು ಸುರಕ್ಷಿತವಾಗಿ ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ಗಳಿಸುತ್ತಾರೆ. ಶ್ರೀಮಂತರು ಬಡವರಿಗೆ ಸಾಲ ಕೊಡುವುದು ತಪ್ಪಿಲ್ಲ. ಆದರೆ ಬಡ್ಡಿಗಾಗಿ ದುಡಿಯುವ ಮಗನನ್ನು ಮನೆಯಲ್ಲಿ ತಂದು ಬಿಡು ಎಂದು ಹೇಳುವ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಕೊಟ್ಟ ಹಣಕ್ಕೆ ಬಡ್ಡಿಯ ಮಾತಿರಲಿ, ಅಸಲಿಗೇ ಮೋಸವಾಗುವ ಸಾಧ್ಯತೆ ಹೆಚ್ಚು. ಒಡವೆ, ಆಸ್ತಿ, ಷೇರು, ವ್ಯಾಪಾರ ಮುಂತಾದವುಗಳಲ್ಲಿ ಹಣ ತೊಡಗಿಸುವುದರ ಬದಲು ಪ್ರತಿಫಲ ಕಡಿಮೆ ಇದ್ದರೂ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಬಡ್ಡಿ ಸಂಗ್ರಹಿಸುವುದೇ ಕ್ಷೇಮವೆಂದು ಭಾವಿಸುವವರು ಸಾಕಷ್ಟಿದ್ದಾರೆ.

ಉದ್ಯೋಗದಿಂದ ನಿವೃತ್ತರಾದವರಂತೂ ನಿರಾಳ ಮುಪ್ಪಿನ ಜೀವನಕ್ಕಾಗಿ ಬ್ಯಾಂಕ್‌ನಲ್ಲಿ ಠೇವಣಿ ಇಡುವುದೇ ಕ್ಷೇಮ ಎಂದು ಭಾವಿಸುವುದೇ ಹೆಚ್ಚು. ಆದರೆ ಆ ವಾಡಿಕೆಯಾದರೂ ಈಗ ಆಕರ್ಷಕವಾಗಿ ಉಳಿದಿದೆಯೆ?

ಇತ್ತೀಚಿನವರೆಗೂ ಬ್ಯಾಂಕುಗಳವರು ಜನರೇ ಆಗಲಿ, ಸಂಘ ಸಂಸ್ಥೆಗಳಾಗಲಿ, ಸರ್ಕಾರಿ ಇಲಾಖೆಗಳೇ ಆಗಲಿ ಠೇವಣಿ ಇಡುವ ಸಾಧ್ಯತೆ ಇದೆಯೇ ಎಂದು ಹುಡುಕಿಕೊಂಡು ಎಲ್ಲೆಲ್ಲೂ ಅಲೆಯುತ್ತಿದ್ದರು. ಠೇವಣಿ ಹಣ ಇಡಲು ಬ್ಯಾಂಕಿಗೆ ಬಂದವರಿಗೆ ವಿಶೇಷ ಆದರ ತೋರಿಸಿ ಕುರ್ಚಿ ಸರಿಪಡಿಸಿ ಕೂರಿಸುತ್ತಿದ್ದರು. ಸಾಲ ತೆಗೆದುಕೊಳ್ಳಲು ಬಂದವರನ್ನು ಅನಾದರ ಮಾಡುತ್ತಿದ್ದರು. ಈಗ ತಿರುವು ಮುರುವು. ಠೇವಣಿ ಇಡಲು ಬಂದವರನ್ನು ಲೆಕ್ಕಿಸುವುದೇ ಇಲ್ಲ. ಮರುಪಾವತಿ ಖಾತರಿ ಮೇಲ್ನೋಟಕ್ಕೆ ಮನವರಿಕೆ ಆದರೂ ಸಾಕು; ಸಿಗುತ್ತದೆ. ಆರ್ಥಿಕ ಸುಧಾರಣೆ ಕ್ರಮಗಳು ೯೦ರ ದಶಕದ ಆರಂಭದಿಂದ ಜಾರಿಗೆ ಬಂದ ಮೇಲೆ ಹಾಗೂ ಆ ದಶಕದ ಅಂತ್ಯದ ವೇಳೆಗೆ ಆರ್ಥಿಕ ಹಿಂಜರಿತ ಕಾಣಿಸಿಕೊಂಡ ಮೇಲೆ ಸಾಲ ಬೇಡುವವರೇ ಕಡಿಮೆ. ಉತ್ಪಾದಕತೆ ಎಲ್ಲ ಕಡೆ ಇಳಿಮುಖವಾಗಿದೆ. ಠೇವಣಿಗೆ ಇಟ್ಟ ಹಣ ಬಡ್ಡಿ ಎಂಬ ರೂಪದಲ್ಲಿ ಮರಿ ಹಾಕುವುದು ಕಡಿಮೆಯಾಗಿದೆ.

ಹೀಗಾಗುವುದಕ್ಕೆ ಕಾರಣವಿಲ್ಲದೆ ಇಲ್ಲ. ಉದಾರೀಕರಣಕ್ಕೆ ಮುಂವೆ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡವರ ಮೇಲೆ ವಾರ್ಷಿಕ ಶೇ. ೨೦ರ ವರೆಗೆ ಬಡ್ಡಿ ಹೇರುತ್ತಿದ್ದರು. (ಈಗಲೂ ಕ್ರೆಡಿಟ್‌ಕಾರ್ಡ್‌ಗಳವರು ಸಾಲದ ಮೇಲೆ ವಾರ್ಷಿಕ ಶೇ. ೩೬ ಹೀಗೆಲ್ಲ ಬಡ್ಡಿ ಹೇರುತ್ತಾರೆ. ಆ ಮಾತು ಬೇರೆ). ಆದರೆ, ಉದಾರೀಕರಣ ಜಾರಿ ನಂತರ ಬಡ್ಡಿ ದರ ಕಡಿಮೆ ಆಗಿದೆ. ವಿದೇಶಗಳಲ್ಲಿ ವಾರ್ಷಿಕ ಶೇ. ಆರೇಳರ ಮಟ್ಟದಲ್ಲೇ ಬ್ಯಾಂಕ್ ಬಡ್ಡಿದರ ನಡೆಯುತ್ತಿದೆ. ಜಾಗತೀಕರಣ ಕಾಲಿಟ್ಟ ಮೇಲೆ ಭಾರತದಲ್ಲೂ ಬಡ್ಡಿಸರ ಇಳಿಸಬೇಕಾಗಿ ಬಂದಿದೆ. ವಿದೇಶಿ ಮೂಲಗಳಿಂದ ಬಂಡವಾಳ ತಂದು ಉದ್ಯಮ ನಡೆವವರ ಕಡೆಯಿಂದ ಬರುವ ದೊಡ್ಡ ಆಕ್ಷೇಪ ಎಂದರೆ ಭಾರತದಲ್ಲಿ ಬಡ್ಡಿ ದರ ದುಬಾರಿ ಎಂಬುದೇ ಆಗಿದೆ. ವಿಶ್ವಮಟ್ಟದ ಪೈಪೋಟಿ ಎದುರಿಸಬೇಕು ಎಂದಾದರೆ ಯಾವುದೇ ಸರಕು ಅಥವಾ ಸೇವಾ ಸೌಲಭ್ಯದ ಅಸಲು ವೆಚ್ಚ ಹೆಚ್ಚಾಗಬಾರದು; ಅಂತಾರಾಷ್ಟ್ರೀಯ ಮಟ್ಟಕ್ಕೆ ಬಡ್ಡಿ ದರಗಳನ್ನು ಇಳಿಸಬೇಕು ಎಂದೇ ಉದ್ಯಮಿಗಳು ಹೇಳುತ್ತಾರೆ. ಇದು ತಳ್ಳಿ ಹಾಕುವಂಥ ಬೇಡಿಕೆ ಎಂದೇನೂ ಅನಿಸುವುದಿಲ್ಲ.

ಬಡ್ಡಿ ದರಗಳನ್ನು ಇಳಿಸಲು ಪ್ರಶಸ್ತ ಸನ್ನಿವೇಶವೂ ಇರಬೇಕಾಗುತ್ತದೆ. ಸಾಲಕ್ಕೆ ವಿಶೇಷ ಬೇಡಿಕೆ ಇಲ್ಲ ಎನ್ನುವಾಗಲೇ ಬಡ್ಡಿ ದರ ಇಳಿಸಲು ಸುಲಭ. ಅದಕ್ಕಿಂತ ಹೆಚ್ಚಾಗಿ ಭಾರತದ ಹಣಕಾಸು ವ್ಯವಹಾರಗಳು ವಿಶ್ವ ಬ್ಯಾಂಕ್ ಮಾರ್ಗದರ್ಶನಕ್ಕೆ ಒಳಪಟ್ಟ ಮೇಲೆ ಬಡ್ಡಿ ದರಗಳನ್ನು ಭಾರತದಲ್ಲಿ ಇಳಿಸಬೇಕೆಂಬ ಒತ್ತಡ ಹೆಚ್ಚಾಗಿದೆ. ವಾಸ್ತವವಾಗಿ ಹಣದುಬ್ಬರ ಜೋರಾಗಿದ್ದರೆ ಬಡ್ಡಿ ದರ ಇಳಿಸುವುದು ಸುಲಭ ಎನಿಸುವುದಿಲ್ಲ. ಆದರೆ ಈಗ ಹಣ ದುಬ್ಬರ ಹತೋಟಿ ಸರ್ಕಾರದ ಪಾಲಿಗೆ ಸಾಧ್ಯವಾಗಿದೆ. ಬಳಕೆದಾರ ಸೂಚ್ಯಂಕದ ಅನ್ವಯ ಅಳೆಯುವ ಹಣದುಬ್ಬರ ವೃದ್ಧಿ ದರವು ೧೯೯೯ರಲ್ಲಿ ಶೇಕಡಾ ೧೦ ಇತ್ತು. ಅದು ಕಳೆದ ಎರಡು ವರ್ಷಗಳಲ್ಲಿ ಶೇ. ೪ಕ್ಕೆ ಇಳಿದಿದೆ. ಆದ್ದರಿಂದಲೇ ಕೇಂದ್ರ ಸರ್ಕಾರ ಬಡ್ಡಿ ದರಗಳನ್ನು ಇಳಿಸುತ್ತಾ ಬಂದಿದೆ. ಬಡ್ಡಿ ದರಗಳನ್ನು ಇಳಿಸುವುದೆಂದರೆ ಉಳಿತಾಯ ಪ್ರವೃತ್ತಿಗೆ ಮಾರಕ; ಬಡ್ಡಿಯನ್ನು ಆಧರಿಸಿ ಬದುಕುವ ನಿವೃತ್ತ ಉದ್ಯೋಗಿಗಳು ಮುಂತಾದವರು ಪಾಡು ಪಡುತ್ತಾರೆ ಎಂಬ ಆಕ್ಷೇಪಗಳನ್ನೂ ಸರ್ಕಾರ ಲೆಕ್ಕಿಸುತ್ತಿಲ್ಲ.

ಚಿನ್ನದ ಬೆಲೆ ಏರುತ್ತಿಲ್ಲ. ಭೂಮಿಕಾಣಿ, ಕಟ್ಟಡ ಮುಂತಾದ ಸ್ಥಿರಾಸ್ತಿ ಬೆಲೆಗಳು ತಣ್ಣಗಿವೆ. ಇದರ ಜೊತೆಗೆ ಷೇರು ಬೆಲೆಗಳು ಏರುತ್ತಿಲ್ಲ. ಆದ್ದರಿಂದ ಠೇವಣಿಗಳಲ್ಲಿ ಹಣ ಇಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಹಣಕ್ಕೆ ಬೆಲೆಯೇ ಇಲ್ಲದಂತಾಗಿದೆ. ಹಣದುಬ್ಬರ ಹತೋಟಿ ಏನೇ ಇದ್ದರೂ ಆರ್ಥಿಕ ಹಿಂತರಿತ ಕಾಡದಿದ್ದರೆ ಭಾರತದಕ್ಕು ಬಂಡವಾಳ ಎನ್ನವುದಕ್ಕೆ ಒಂದಿಷ್ಟು ಬೆಲೆ ಇರುತ್ತಿತ್ತು. ಆದರೆ ಅದೇ ಇಲ್ಲ. ಕಷ್ಟದ ದಿನಗಳು ಎಂದು ನೀಗುವುದೋ ಎಂಬ ಅಂದಾಜೇ ಇಲ್ಲ. ಕನಿಷ್ಠ ಇನ್ನು ಎರಡು ವರ್ಷವಾದರೂ ಅದಕ್ಕೆ ಕಾಯಬೇಕಾಗಬಹುದು.

ಈ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಕೆಲಸ ಮಾಡುವುದೇ ಕಷ್ಟವಾಗಿದೆ. ಮೊದಲು ಸಾಲಕ್ಕೆ ಬೇಡಿಕೆ ಇದ್ದಾಗ ಚೆನ್ನಾಗಿ ಬಡ್ಡಿ ವಿಧಿಸುತ್ತಿದ್ದರು. ಠೇವಣಿಗೆ ಕೊಡುವ ಬಡ್ಡಿದರ ಮತ್ತು ಸಾಲಕ್ಕೆ ಹೇರುವ ಬಡ್ಡಿದರಗಳ ನಡುವೆ ಅಂತರ ಹೆಚ್ಚಾಗಿತ್ತು. ಠೇವಣಿ ಹಣ ಸಂಗ್ರಹಿಸಿದಷ್ಟೂ ಸಾಲವನ್ನು ಕೊಡಬಹುದಿತ್ತು. ಲಾಭ ಗಳಿಕೆ ಅನಿರ್ಬಾಧಿತವಿತ್ತು. ಈಗ ಹಾಗಿಲ್ಲ. ಸಾಲ ಕೇಳುವವರೇ ಇಲ್ಲ. ಠೇವಣಿ ಇಡುವವರು ಹೆಚ್ಚಾಗಿದ್ದಾರೆ. ಪರಿಣಾಮವಾಗಿ ಹಣ ಗುಡ್ಡೆ ಬೀಳುತ್ತಿದೆ. ಏನು ಮಾಡಬೇಕು? ಅನಿವಾರ್ಯವಾಗಿ ಸರ್ಕಾರಿ ಸಾಲಪತ್ರಗಳಲ್ಲಿ ಬ್ಯಾಂಕ್‌ಗಳವರು ಹಣ ತೊಡಗಿಸುತ್ತಿದ್ದಾರೆ. ಅದರಲ್ಲಿ ಸಿಗುವ ಬಡ್ಡಿ ಕಡಿಮೆ. ಹೀಗಾಗಿ ಬ್ಯಾಂಕುಗಳ ಲಾಭಕ್ಷಮತೆಯೇ ಕುಸಿದಿದೆ.

ಬ್ಯಾಂಕುಗಳು ನೀಡುವ ಸಾಲದಿಂದ ಬರುವ ಬಡ್ಡಿ ಹಾಗೂ ತೊಡಗಿಸಿದ ಹಣ ತರುವ ಹುಟ್ಟುವಳಿ ಇದೇ ಅವುಗಳ ಆದಾಯ ಮೂಲ. ಠೇವಣಿ ಇಟ್ಟವರಿಗೆ ಕೊಡುವ ಬಡ್ಡಿ ಕಡಿಮೆ ಆಗಿದೆ. ಇವೆರಡರ ನಡುವಣ ಪ್ರತಿಫಲವೇ ಬ್ಯಾಂಕುಗಳ ಲಾಭವನ್ನು ನಿರ್ಧರಿಸುವುದು. ಇದು ಕಳೆದ ವರ್ಷ ಶೇಕಡಾ ೧.೫೫ ಇದ್ದುದು ಈ ವರ್ಷ ಶೇಕಡಾ ೦.೨೭ಕ್ಕೆ ಇಳಿದಿದೆ ಎಂಬುದು ಒಂದು ಅಂದಾಜು.

ಈ ಪರಿಸ್ಥಿತಿಯಿಂದ ಪರಾಗಲು ಬ್ಯಾಂಕುಗಳಿಗೆ ವಿ.ಆರ್.ಎಸ್. (ಉದ್ಯೋಗಿಗಳ ಸ್ವಯಂ ನಿವೃತ್ತಿ ಯೋಜನೆ) ನೆರವಾಗುತ್ತಿದೆ. ಆದರೆ ಬಹಳಷ್ಟು ನೆರವಾಗುತ್ತಿಲ್ಲ. ಕಾರ್ಯಾಚರಣೆ ವೆಚ್ಚ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ಸರಿದೂಗಿಸಲು ಚೆಕ್‌ಬುಕ್‌ಸಹಿತ ವಿವಿಧ ಸೇವೆಗಳಿಗೆ ಶುಲ್ಕ ವಿಧಿಸಲು ಬ್ಯಾಂಕುಗಳವರು ಆರಂಭಿಸಿದ್ದಾರೆ. ವಾಸ್ತವವಾಗಿ ಗ್ರಾಹಕ ವಿರೋಧಿ ಎನ್ನುವಂತಹ ಈ ಬಗೆಯ ಧೋರಣೆ ತರವಲ್ಲ. ವಿ.ಆರ್.ಎಸ್. ನೆಪದಲ್ಲಿ ಕಾರ್ಯ ನಿರ್ವಹಣೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಕೂಡಾ ಶಾಖೆಗಳಲ್ಲಿ ನಡೆದಿದೆ. ಇದು ಉತ್ಪಾದಕವಲ್ಲ. ದೀರ್ಘಕಾಲೀನ ದುಷ್ಪರಿಣಾಮ ಬೀರುತ್ತದೆ.

೨೨.೦೮.೨೦೦೧