ಬಳಕೆದಾರ ದಿನಾಚರಣೆ ಮತ್ತೆ ಮೊನ್ನೆ ಆಚರಣೆಗೆ ಒಳಗಾಯಿತು. ಪ್ರತಿ ವರ್ಷ ಆಷರಿಸುತ್ತೇವೆ. ಕಾಲು ಶತಮಾನದ ಹಿಂದೆ ವನಮಹೋತ್ಸವವನ್ನು ನಾವು ಆಚರಿಸುತ್ತಿದ್ದೆವು. ಅದರಿಂದ ಕಾಡು ಬೆಳಸಬೇಕೆಂಬ ಪ್ರಜ್ಞೆ ಎಷ್ಟು ಬೆಳೆಯಿತೋ ಗೊತ್ತಿಲ್ಲ. ಏಕೆಂದರೆ ಕಾಡು ನಾಶವಾಗಲು ಪ್ರತಿ ನಾಗರಿಕನೂ ತನ್ನ ಕೊಡುಗೆಯನ್ನು ಸಲ್ಲಿಸುತ್ತಲೇ ಇದ್ದಾನೆ. ವಿಶಾಲ ಅರ್ಥದಲ್ಲಿ ಈಗ ಪರಿಸರ ಸಂರಕ್ಷಣೆಯ ಬಗೆಗೆ ಮಾತನಾಡುತ್ತೇವೆ. ಮಾತನಾಡುತ್ತೇವೆ ಮಾತ್ರ. ಅದಕ್ಕಿಂತ ಮುಂದುವರೆದು ಹೋಗುವುದು ಬಹಳ ಕಡಿಮೆ.

ನಮ್ಮ ದೇಶದ ಸಂಸ್ಕೃತಿಯ ಹಿನ್ನೆಲೆಯಲ್ಲಿ ‘ಪವಿತ್ರ ಗೋವು’ ಎಂಬ ಪದಗಟ್ಟನ್ನು ಪದೇ ಪದೇ ಬಳಸುವುದುಂಟು. ಗೋವು ಒಂದು ಒಳ್ಳೆಯ ಉಪವೆ. ಗೋವನ್ನು ನಾವು ಪೂಜಿಸುತ್ತೇವೆ. ಗೃಹ ಪ್ರವೇಶವಾಗಲಿ, ವಾರ್ಷಿಕ ಶ್ರಾದ್ಧವಾಗಲಿ ಗೋ ಪೂಜೆ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಗೋವನ್ನು ಹಾಲು ಹಿಂಡಿಕೊಳ್ಳಲು ಧಾರಾಳ ಬಳಸಿಕೊಳ್ಳುತ್ತೇವೆ. ಆದರೆ ಅದನ್ನು ಬಡಕಲಾಗಿಯೇ ಉಳಿಸುತ್ತೇವೆ. ಇದು ಪವಿತ್ರ ಗೋವು ವಿದ್ಯಮಾನ.

ಕೆಲವೊಂದು ವೃತ್ತಿಪರ ಜನವರ್ಗಗಳಿಗೂ ಪವಿತ್ರ ಗೋವಿನ ಸ್ಥಾನಮಾನವನ್ನು ನೀಡಿ ನಾವು ಕೃತಾರ್ಥರಾಗುತ್ತೇವೆ. ರೈತರು, ಕಾರ್ಮಿಕರು, ಪೊಲೀಸರು, ಶಿಕ್ಷಕರು, ಗುಮಾಸ್ತರು ಇವರೆಲ್ಲ ನಮ್ಮ ಜನ ಜೀವನದ ಸುವ್ಯವಸ್ಥೆಗೆ ಬಹಳ ಬೇಕಾದವರು. ಅವರು ವಹಿಸುವ ಪಾತ್ರ ಬಹಳ ಮಹತ್ವದ್ದು. ಹಾಗೆಂದು ಹಾಡಿ ಹೊಗಳುತ್ತೇವೆ. ಅಲ್ಲಿಗೆ ಮುಗಿಯಿತು. ಪವಿತ್ರ ಗೋವು ಸ್ಥಾನವನ್ನು ಇವರೆಲ್ಲ ತುಂಬುವವರೇ?

ಇವರಲ್ಲಿ ಯಾವುದೇ ಒಂದು ವರ್ಗದವರಾದರೂ ಪ್ರತಿಫಲಕ್ಕಾಗಿ ದುಡಿಯುವವರೇ ಸರಿ, ಇವರೆಲ್ಲರೂ, ಮಿಕ್ಕ ಬಗೆಯ ಎಲ್ಲರೂ ಸೇರಿದಂತೆ ಇನ್ನಷ್ಟು ವಿಶಾಲ ಅರ್ಥದಲ್ಲಿ ಪವಿತ್ರ ಗೋವುಗಳಾಗಿ ವರ್ತಿಸುವ ಜನ ಸಮೂಹವೇ ಇದೆ. ಅದೇ ಬಳಕೆದಾರ ವರ್ಗ.

ಪ್ರತಿ ಬಳಕೆದಾರನೂ ಬಡಪಾಯಿಯೇ. ದವಸ ಧಾನ್ಯ ಉತ್ಪಾದಿಸುವ ರೈತರು ಹೇಗೋ ಹಾಗೆ, ನಾನಾ ಸರಕು ತಯಾರಿಸಿ ಮಾರುವ ಉದ್ಯಮಿ ಹಾಗೂ ದುಡಿಮೆ ಮಾರಿಕೊಳ್ಳುವ ಸಂಬಳಗಾರ ಸಹಾ ಬಳಕೆದಾರ ವರ್ಗಕ್ಕೇ ಸೇರಿದ್ದು. ತಾನು ಉತ್ಪಾದಿಸುವ ಸರಕು ಅಥವಾ ಸೇವೆ ಮಟ್ಟಿಗೆ ಮಾತ್ರ ಇವರಲ್ಲಿ ಪ್ರತಿಯೊಬ್ಬನೂ ಉತ್ಪಾದಕ. ಅಲ್ಲಿಂದ ಮುಂದೆ ಆತ ಸ್ವಂತ ಬಳಕೆಗೆಂದು ಯಾವುದೇ ಸರಕು ಅಥವಾ ಸೇವಾ ಸೌಲಭ್ಯ ಖರೀದಿಸುವಾಗಲೂ ಆತ ಬಳಕೆದಾರನೇ. ತಾನು ಉತ್ಪಾದಿಸುವುದನ್ನು ಮಾರಾಟ ಮಾಡುವ ಬಗೆಗೆ ತಾನು ನಿರ್ಣಯ ತೆಗೆದುಕೊಳ್ಳುವುದಕ್ಕೆ ಆತ ಸ್ವತಂತ್ರ. ಅಂದರೆ ತನ್ನ ಮನಸ್ಸಿಗೆ ಒಪ್ಪದಿದ್ದರೆ ನಷ್ಟವಾದರೂ ಚಿಂತೆಯಿಲ್ಲವೆಂದು ಮಾರಾಟ ನಿಲ್ಲಿಸಬಹುದು. ಆದರೆ, ತನಗೆ ಬೇಕಾದ್ದನ್ನು ಖರೀದಿಸುವಾಗ ನಷ್ಟವಾದರೂ ಚಿಂತೆಯಿಲ್ಲವೆಂದು ಇರಲಾಗದು. ಆದರೆ ಮೋಸವಾಗುತ್ತದೆ ಎಂದು ಗೊತ್ತಾಗುತ್ತಿದ್ದರೂ ಬೇಕೆನಿಸಿದ್ದನ್ನು ಖರೀದಿಸಲೇ ಬೇಕಾಗುತ್ತದೆ. ಶೋಷಣೆಗೆ ತಲೆಯೊಡ್ಡಲೇಬೇಕಾಗುತ್ತದೆ. ಇದು ಬಳಕೆದಾರನ ಜೀವನದ ಗುಣಲಕ್ಷಣ. ಜೀವಿಸಿರುವ ಪ್ರತಿಯೊಬ್ಬನೂ ಬಳಕೆದಾರನೇ. ನಿರ್ದಯಿ ಮಾರುಕಟ್ಟೆ ವ್ಯವಸ್ಥೆಯಡಿ ಇವನು ತತ್ತರಿಸುತ್ತಾನೆ.

ಬಳಕೆದಾರನಿಗೆ ಅನ್ಯಾಯವಾದಾಗ ಅಥವಾ ಮೋಸವಾದಾಗ ನ್ಯಾಯ ಒದಗಿಸಲು ಬಳಕೆದಾರ ಹಿತರಕ್ಷಣಾ ವೇದಿಕೆಗಳನ್ನು ರಾಷ್ಟ್ರ, ರಾಜ್ಯ ಮತ್ತು ಇದಕ್ಕಿಂತ ಕಳಮಟ್ಟದಲ್ಲಿ ಸಹಾ ರಚಿಸುವ ಕಾರ್ಯಕ್ರಮ ಗಂಭೀರವಾಗಿ ಆರಂಭವಾಗಿದ್ದರೂ ಕಳೆದ ಎರಡು ದಶಕಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಯಶಸ್ಸು ಕೈಗೂಡಿಲ್ಲ. ಈ ವೇದಿಕೆಗಳು ನ್ಯಾಯಾಲಯಗಳಂತೆ ಕೆಲಸ ಮಾಡುತ್ತವೆ. ಬಳಕೆದಾರರ ಪಾಲಿಗೆ ನ್ಯಾಯ ಒದಗಿಸದೇ ಹೋಗುವವರನ್ನು ಇವುಗಳ ಮೂಲಕ ಸುಲಭವಾಗಿ ಹಿಡಿದು ಹಾಕಬಹುದು. ನ್ಯಾಯಮೂರ್ತಿಯಳನ್ನೇ ಇದರ ನಿರ್ವಹಣೆಗೆ ನಿಯುಕ್ತಗೊಳಿಸಲಾಗಿದೆ. ಆದರೂ ಈ ವ್ಯವಸ್ಥೆಯಲ್ಲೂ ತೀರ್ಮಾನ ಅಪೇಕ್ಷಿಸಿ ಬರುವ ಪ್ರಕರಣಗಳ ಸಂಖ್ಯೆ ಬೆಳೆದು ನ್ಯಾಯದಾನ ವಿಳಂಬವಾಗುತ್ತಿದೆ. ಅಲ್ಲಿಗೆ ನ್ಯಾಯಾಲಯದಲ್ಲಿ ವಿಳಂಬಪೀಡೆಯೆಂಬ ಅನನುಕೂಲ ಏನಿದೆಯೋ ಅದೇ ಇಲ್ಲಿಯೂ ಬಳಕೆದಾರರನ್ನು ಕಾಡುತ್ತಿದೆ ಎಂದಾಯಿತು. ಆದರೂ ಬಳಕೆದಾರರ ಕೋರ್ಟಿಗೆ ಹೋಗುವುದಾಗಿ ಹೇಳಿದರೆ, ವಾಣಿಜ್ಯೋದ್ಯಮ ರಂಗದವರು ಅಂಜಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಈ ವ್ಯವಸ್ಥೆ ಪರಿಣಾಮಕಾರಿಯೇ ಸರಿ. ನ್ಯಾಯ ವಿತರಣೆ ಉದ್ದೇಶದ ಈ ವೇದಿಕೆಗಳ ಒಳಕ್ಕೂ ಅನಪೇಕ್ಷಿತ ಹಾಗೂ ಅನರ್ಹ ವ್ಯಕ್ತಿಗಳು ಸೇರಿಕೊಳ್ಳಬಲ್ಲರು ಎಂಬುದುದನ್ನು ನಿರೂಪಿಸುವ ಪ್ರಕರಣವೊಂದು ಈಚೆಗೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಾಗ ಬಳಕೆದಾರ ಸಮೂಹಕ್ಕೆ ಹೌಹಾರುವಂತಾಯಿತು.

ಬಳಕೆದಾರರ ಹಿತರಕ್ಷಣೆಗೆ ಶ್ರಮಿಸುತ್ತಿರುವುದಾಗಿ ನಿರೂಪಿಸಲು ಕೇಂದ್ರ ಸರ್ಕಾರವು  ಈ ನ್ಯಾಯ ವೇದಿಕೆಗಳ ನಿದರ್ಶನವನ್ನೇ ನೀಡುತ್ತದೆ. ಹಾಗೆಂದ ಬಳಕೆದಾರ ದಿನಾವರಣೆಯಂದು ರಾಷ್ಟ್ರಾದ್ಯಂತ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತದೆ. ವಾಸ್ತವವಾಗಿ ಇಷ್ಟರಿಂದಲೇ ಬಳಕೆದಾರ ಹಿತರಕ್ಷಣೆ ಆಗುತ್ತಿಲ್ಲ. ಹಲವಾರು ದಿಕ್ಕಿನಿಂದ ಆಗುವ ಆಘಾತಗಳಿಂದಾಗಿ ಬಳಕೆದಾರರು ಹೆಚ್ಚು ಹೆಚ್ಚು ಅಭದ್ರರೇ ಆಗುತ್ತಿದ್ದಾರೆ. ಇದನ್ನು ಯಾರೂ ಅಲ್ಲಗಳೆಯಲಾಗದು.

ಈ ಮಾತಿಗೆ ನಿದರ್ಶನವಾಗಿ ನಾನಾ ಬಗೆಯ ತಯಾರಿಕಾ ಸಾಮಗ್ರಿ ಮೇಲೆ ಮುದ್ರಿಸುವ ಗರಿಷ್ಠ ಮಾರಾಟ ಬೆಲೆ (ಎಂ.ಆರ್.ಪಿ) ವ್ಯವಸ್ಥೆಯನ್ನೇ ಒರೆಗೆ ಹಚ್ಚಬಹುದು.ಮಾರಾಟಗಾರರು ಮನಸ್ಸಿಗೆ ಬಂದಂತೆ ಬೆಲೆ ನಮೂದಿಸುವುದನ್ನು ತಪ್ಪಿಸುವುದು ಇದರ ಉದ್ದೇಶ. ಆದರೆ ಪೊಟ್ಟಣ ಸರಕಿನ ತಯಾರಕರು ಯಾವ ಅಸಲು, ಖರ್ಚು ಮುಂತಾದ ಆಧಾರದ ಮೇಲೆ ಬೆಲೆ ನಿಗದಿ ಮಾಡಬೇಕು ಎಂದು ಎಲ್ಲ ತಯಾರಕರಿಗೂ ಸೂಚಿಸುವುದಿಲ್ಲ. ಸ್ಥೂಲವಾಗಿ ಹೇಳುವುದಾದರೆ ಎಷ್ಟು ಬೇಕಾದರೂ ನಿಗದಿ ಮಾಡಬಹುದು. ಇದರಿಂದ ತಯಾರಕ ಮತ್ತು ಮಾರಾಟಗಾರ ಎಷ್ಟು ಬೇಕಾದರೂ ಲಾಭ ಇಟ್ಟುಕೊಂಡು ಎಂ.ಆರ್.ಪಿ. ಮುದ್ರಿಸಬಹುದು. ಸ್ಥಳೀಯ ತೆರಿಗೆಗಳನ್ನು ಪ್ರತ್ಯೇಕವಾಗಿ ವಸೂಲು ಮಾಡಲು ಅವಕಾಶವಿರುತ್ತದೆ. ಮಾರಾಟಗಾರರಲ್ಲಿ ಅನೇಕರು ಎಂ.ಆರ್.ಪಿ. ಗೇ ಮಾರಲು ಸಾಧ್ಯವಿದ್ದರೂ ತೆರಿಗೆಗಳ ಬಾಬು ಎಂದು ಒಂದಿಷ್ಟು ಸೇರಿಸಿಯೇ ಬೆಲೆ ವಸೂಲು ಮಾಡುತ್ತಾರೆ.

ಪತ್ರಿಕೋದ್ಯಮ ಹಾಗೂ ಕೈಗಾರಿಕಾ ರಂಗದಲ್ಲಿ ಹೆಸರು ಮಾಡಿದ್ದ ಬಿ.ಎನ್. ಗುಪ್ತಾ ಅವರು ೧೯೭೦ರ ದಶಕದಲ್ಲಿ ಒಮ್ಮೆ ಟೂತ್‌ಪೇಸ್ಟ್‌ನ ಬೆಲೆ ನೋಡಿ ಕುಪಿತರಾದರು. ಸ್ಥೂಲವಾಗಿ ಅದರ ಅಸಲು ಬೆಲೆಯನ್ನು ಲೆಕ್ಕ ಹಾಕಿದ ಅವರು ಪೊಟ್ಟಣ ಸರಕಿನ ಬೆಲೆ ಕುರಿತಂತೆ ಯಾವುದಾರೂ ನಿರ್ಬಂಧ ಇರುವುದೇ ಒಳ್ಳೆಯದೆಂದು ಭಾವಿಸಿದರು. ಆಗ ಕೇಂದ್ರ ಅರ್ಥ ಸಚಿವರಾಗಿದ್ದ ಟಿ.ಎ.ಪೈ. ಅವರಿಗೆ ಆಮೂಲಾಗ್ರವಾಗಿ ವಿವರಿಸಿ ಒಂದು ಪತ್ರ ಬರೆದರು. ಅದರ ಪರಿಣಾಮವಾಗಿ ಎಂ.ಆರ್.ಪಿ. ಮುದ್ರಿಸುವುದನ್ನು ಕಡ್ಡಾಯಪಡಿಸುವ ಶಾಸನ ಬಂದಿತು.

ಈಗಲೂ ಅದೇ ಟೂತ್‌ಪೇಸ್ಟಿನ ನಿದರ್ಶನ ತೆಗೆದುಕೊಂಡರೆ ಇನ್ನೊಂದು ಅಂಶ ಬಳಕೆದಾರನ ಹಿತಕ್ಕೆ ಧಕ್ಕೆ ಬರುವಂಥದ್ದು ಗೋಚರಕ್ಕೆ ಬರುತ್ತದೆ. ಕಳೆದ ಒಂದು ವರ್ಷ ಅವಧಿಯಲ್ಲಿ ಟೂತ್‌ಪೇಸ್ಟ್‌ಬೆಲೆಗಳು ಶೇ.೫೦ ಮತ್ತು ಅದಕ್ಕೂ ಹೆಚ್ಚು ಪ್ರಮಾಣದಲ್ಲಿ ಜಾಸ್ತಿ ಆಗಿವೆ. ಟೂತ್ ಪೇಸ್ಟ್‌ಮಾತ್ರವಲ್ಲ. ಶೃಂಗಾರ ಹಾಗೂ ಪ್ರಸಾಧನ ಸಾಮಗ್ರಿಯೇ ಮುಂತಾದ ತಯಾರಿಕಾ ವಸ್ತುಗಳು ತುಟ್ಟಿಯಾಗುತ್ತಲೇ ಹೋಗಿವೆ. ದೇಶದ ತುಂಬಾ ಆರ್ಥಿಕ ಹಿಂಜರಿತ ಖಾಡುತ್ತಿದೆ. ಶ್ರೀ ಸಾಮಾನ್ಯನ ಖರೀದಿ ಸಾಮರ್ಥ್ಯ ಕಡಿಮೆ ಆಗಿದೆ. ಆದರೆ ಸಾಬೂನು ಟೂತ್‌ಪೇಸ್ಟ್ ಮುಂತಾದವುಗಳ ಬೆಲೆಗಳು ಏರುತ್ತಲೇ ಇವೆ. ಏರಿಕೆಗೆ ಅಡೆತಡೆಯೇ ಇಲ್ಲ. ಉತ್ಪಾದಕರಿಂದ ಸರಕು ಖರ್ಚಾಗುವಂತೆ ಮಾಡಲು ನಾನಾ ಆಮಿಷಗಳನ್ನು ಒಡ್ಡವು ಕಾರ್ಯ ನಡೆದಿದೆ. ಆದರೆ ಅನಗತ್ಯವಾಗಿ ಬೆಲೆ ಏರಿಸುವುದು ಬೇಡವೆಂಬ ನಿಲುವು ಮಾತ್ರ ಅವರದಲ್ಲ.

ಏನೇ ಮಾಡಿದರೂ ಬಳಕೆದಾರ ಸಹಿಸಿಕೊಳ್ಳುತ್ತಾನೆ. ಅವನನ್ನು ಲೆಕ್ಕಿಸಬೇಕಾಗಿದ್ದಿಲ್ಲ ಎನ್ನುವ ಧೋರಣೆ ಬಗೆಗೆ ಹೇಳಲು ಹೊರಟರೆ ಅದಕ್ಕೆ ಮಿತಿಯೇ ಇಲ್ಲ.

ಆರ್ಥಿಕ ಉದಾರೀಕರಣ ನೀತಿ ಜಾರಿಗೆ ಬರುತ್ತಿದ್ದಂತೆ ಭಾರತದಲ್ಲಿ ಪರಿಣಾಮಕಾರಿಯಾಗಿ ಅಸ್ತಿತ್ವದಲ್ಲಿ ಇದ್ದಂತ ಏಕಸ್ವಾಮ್ಯ ಹಾಗೂ ನಿರ್ಬಂಧಿತ ವಾಣಿಜ್ಯ ಕ್ರಮ ತಡೆ ಆಯೋಗ ನಿಷ್ಫಲಗೊಮಡಿತು. ಇದು ಸಹಾ ಬಳಕೆದಾರರ ಪರವಾಗಿ ನಿಲ್ಲುತ್ತಿತ್ತು. ಆದರೆ ಮುಕ್ತ ಆರ್ಥಿಕತೆಯನ್ನು, ಪೈಪೋಟಿಗೆ ಅವಕಾಶವನ್ನು ವಿಫುಲವಾಗಿ ಒದಗಿಸಬೇಕು ಎಂಬುದನ್ನು ಅಂಗೀಕರಿಸಿದ ತಕ್ಷಣ ಇದು ನಿರುಪಯುಕ್ತವಾಯಿತು. ವಿಪರ್ಯಾಸವೆಂದರೆ ಈ ಬಗೆಯ ಒಂದೊಂದೆ ಕ್ರಮವೂ ಬಳಕೆದಾರ ಆಂದೋಲನವನ್ನು ಕ್ಷೀಣಗೊಳಿಸುತ್ತದೆ. ಸಹಕವಾಗಿ ಬಳಕೆದಾರನಿಗೆ ಇರುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ.

ಮಾರುಕಟ್ಟೆ ಪ್ರಧಾನ ಅಥವಾ ಮುಕ್ತ ಆರ್ಥಿಕ ನೀತಿಯು ಕೊಳ್ಳಬಾಕ ಸಂಸ್ಕೃತಿಯನ್ನು ಪೋಷಿಸುತ್ತದೆ. ಉತ್ಪನ್ನ ವೈವಿಧ್ಯ, ಪೈಪೋಟಿ. ಖರೀದಿದಾರನಿಗೆ ಆಮಿಷ ಒಡ್ಡುವುದು ಇವೆಲ್ಲವೂ ಆತ ಖರ್ಚು ಮಾಡುವುದಕ್ಕೆ ಪ್ರಚೋದನೆ ನೀಡುವಂಥವೇ. ‘ಹಣ ಇರುವುದೇ ಭೋಗಿಸುವುದಕ್ಕೆ, ಗಳಿಸುವುದೇ ಸುಖಿಸುವುದಕ್ಕಾಗಿ’ ಎಂಬ ಜೀವನ ತತ್ವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿವೆ. ಅದನ್ನು ಈಗ ಆಮದು ಮಾಡಿಕೊಳ್ಳುತ್ತಿದ್ದೇವೆ. ಅದರಿಂದಾಗಿ ಆ ರಾಷ್ಟ್ರಗಳಲ್ಲಿರುವ ಸುಖೀ ಸೌಲಭ್ಯಗಳು ನಮ್ಮಲ್ಲೂ ಸಿಗುವಂತಾಗುತ್ತದೆ. ಎಂಬುದು ನಿರೀಕ್ಷೆ. ಆದರೆ ಐಷಾರಾಮದ ಉತ್ಪನ್ನಗಳು ಪೇಟೆಗಳಿಗೆ ಬಂದು ಇಳಿದಷ್ಟು ವೇಗವಾಗಿ ಸಾಮಾನ್ಯ ಜನರ ಗಳಿಕೆ ಸಾಮರ್ಥ್ಯ ಹೆಚ್ಚುತ್ತಿಲ್ಲ. ಇದು ಇವತ್ತು ಸಾಧ್ಯವಾಗುತ್ತದೆ. ನಾಳೆ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸುವುದೇ ಬಂತು. ಪರಿಸ್ಥಿತಿ ಸುಧಾರಿಸಲಿಲ್ಲ.

ಹೀಗೇಕಾಯಿತೆಂದು ಪ್ರಶ್ನಿಸಿದಾಗ ಬಲ್ಲವರು ಎರಡು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದು, ಯಾವುದೇ ಬದಲಾವಣೆಯು ತತ್‌ಕ್ಷಣವೇ ಫಲಿತವನ್ನು ತರುವುದಿಲ್ಲ, ಹಾಗೂ ಸುಧಾರಣಾ ಕ್ರಮಗಳು ಪೂರ್ತಿಯಾಗಿ, ಸಮಗ್ರವಾಗಿ ಜಾರಿಯಾಗಿಲ್ಲ. ಎರಡನೆಯ ಕಾರಣವೆಂದರೆ ವಿಶ್ವಾದ್ಯಂತ ಆರ್ಥಿಕ ಹಿಂಜರಿತ ಪರಿಸ್ಥಿತಿ ಇರುವ ಕಾಲ ಅದರ ಬಿಸಿಯು ಮುಂದುವರೆದ ಕೈಗಾರಿಕಾ ರಾಷ್ಟ್ರಗಳಿಗೆ ಮಾತ್ರವಲ್ಲದೆ ಇನ್ನೂ ಮುಂದುವರೆದ ರಾಷ್ಟ್ರಗಳಿಗೂ ತಟ್ಟುತ್ತದೆ.

ಈಚೆಗೆ ಆತಂಕಕಾರಿ ಸುದ್ದಿ ತುಣುಕೊಂದು ಪತ್ರಿಕೆಗಳಲ್ಲಿ ಕಾಣಿಸಿಕೊಂಡಿತು. ಅದರ ಪ್ರಕಾರ ಆರ್ಥಿಕ ಹಿಂಜರಿತವನ್ನು ಕೊಡವಿಕೊಳ್ಳುತ್ತಿರುವ ಮುಂದುವರೆದ ರಾಷ್ಟ್ರಗಳು ಪುನಃ ಹಿಂಜರಿತಕ್ಕೆ ಜಾರಿ ಬೀಳುವ ಸೂಚನೆಗಳಿವೆ. ಅಂದರೆ ಕಷ್ಟದ ದಿನಗಳು ಕಳೆದು ಒಳ್ಳೆಯ ದಿನಗಳ ಬರುತ್ತವೆ, ಆ ಬಗೆಯ ಸೂಚನೆಗಳು ಇವೆ ಎಂದು ಭಾವಿಸಿ ನೆಮ್ಮದಿಯ ಉಸಿರು ಬಿಟ್ಟವರೆಲ್ಲ ಮತ್ತೆ ನಿರಾಶಾವಾದಕ್ಕೆ ಜೋತು ಬೀಳಬೇಕಾಗಿ ಬಂದಿದೆ.

ಮಿಕ್ಕ ಎಲ್ಲವೂ ವಿಫಲವಾದಾಗ ತಾಳ್ಮೆಯೊಂದೇ ಮಾರ್ಗೋಪಾಯವಾಗಿ ಉಳಿಯುವುದಂತೆ .

೦೧.೦೧.೨೦೦೩