‘ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ’- ಅಷ್ಟೇ ಅಲ್ಲ  ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ’

-ಇವು ಕವಿ ವಾಣಿಯ ಎರಡು ಆದರಿ. ಮಳೆಯು ಕೈಕೊಟ್ಟಾಗ ನೀರಿಗಾಗಿ ಹಂಬಲಿಸಿ ಕವಿ ಹೃದಯವು ತುಡಿಯುವ ರೀತಿ ಇದು. ಮಳೆ ಬರಬೇಕೆನ್ನುವಾಗ ಉರಿವ ಬಿಸಿಲಿನಲ್ಲಿ ಆಗಸ ದಿಟ್ಟಿಸುವ ರೈತನ ಚಿತ್ರ ಕರುಣಾಜನಕ.

ಮಳೆ ಬಂದು ರೈತ ಫಸಲು ದಕ್ಕಿಸಿಕೊಂಡರೆ ಉಳಿಯಿತು. ಇಲ್ಲವಾದರೆ ದೇಶದ ಗತಿ ಆತಂಕಕಾರಿ. ನಮ್ಮದು ಕೃಷಿ ಪ್ರಧಾನ ಸಮುದಾಯ. ಮಳೆ ಬೀಳದೆ ಕಷ್ಟ ಬಂದರೆ ಹಿಂದುಗಳು, ಮುಸ್ಲಿಮರು ಇತರರು ಒಂದೇ ರೀತಿಯ ಬವಣೆಗೆ ತುತ್ತಾಗುತ್ತಾರೆ.

ವಾಸ್ತವವಾಗಿ ಭಾರತದ ಮಟ್ಟಿಗೆ ಹೇಳುವುದಾದರೆ ಮಳೆ ಆರುತಗಳು ಕಣ್ಣಾಮುಚ್ಚಾಲೆ ಆಡುತ್ತವೆ. ಪ್ರತಿ ಬಾರಿ ಮಳೆ ಬಂದಿತು ಎಂದರೆ ಬಂದಿತು. ಇಲ್ಲವಾದರೆ ಇಲ್ಲ. ಮಳೆಗಾಲ ಆರಂಭಕ್ಕೆ ಮುನ್ನ ಮುಂದಿನ ದಿನಗಳು ಹೇಗಪ್ಪಾ ಎಂಬಚಿಂತೆ. ಹನಿ ಹನಿ ನೀರು ಧರೆಗಿಳಿದರೆ ಸಮಾಧಾನ. ತಪ್ಪಿದರೆ ಮುಂದೆ ಹೇಗೆಂಬ ಲೆಕ್ಕಾಚಾರ. ಜೂನ್‌, ಜುಲೈ, ಆಗಸ್ಟ್ ನ ಮುಂಗಾರು ಮಳೆ ತಪ್ಪಿಹೋದರೆ, ಇಲ್ಲವೇ ಕಡಿಮೆ ಆದರೆ, ಅಕ್ಟೋಬರ್‌ನವೆಂಬರ್‌ನಲ್ಲಿ ಬೀಳುವ ಹಿಂಗಾರು ಮಾರುತವಾದರೂ ಮಳೆ ಸುರಿಸಬಹುದೇನೋ ಎನ್ನುವ ನಿರೀಕ್ಷೆ, ಕಾತರ. ಆಗಲೂ ತಪ್ಪಿದರೆ ಅನಾವೃಷ್ಟಿ, ಅಂದರೆ ಅಭಾವ ಪರಿಸ್ಥಿತಿ ಮೂಡಿತೆಂದೇ ಅರ್ಥ. ಒಟ್ಟಿನಲ್ಲಿ ಜೂನ್‌ಮೊದಲ್ಗೊಂಡು ನವೆಂಬರ್ ತನಕ ಅನಿಶ್ವಿತತೆ. ಆದ್ದರಿಂದಲೇ ಭಾರತದಲ್ಲಿ ಬೇಸಾಯಗಾರನು ಮಳೆ ಮಾರುತಗಳ ಜೊತೆ ಜೂಜಾಡುತ್ತಾನೆ ಎಂದು ಹೇಳುವ ನುಡಿಗಟ್ಟು ಚಾಲ್ತಿಯಲ್ಲಿದೆ.

ದೇಶದ ಆರ್ಥಿಕತೆಯೇ ಮಳೆಯನ್ನು ಅವಲಂಬಿಸಿದೆ. ಈಚೆಗೆ ಪ್ರಧಾನಿ ಅವರು ದೇಶದ ಜಿಡಿಪಿಯನ್ನು ಅಂದರೆ ವರ್ಷದಲ್ಲಿ ಉತ್ಪಾದನೆಯಾಗುವ ಎಲ್ಲ ಸರಕು ಮತ್ತು ಸೇವಾ ಸೌಲಭ್ಯಗಳು ವೃದ್ಧಿಯಾಗುವುದನ್ನು ಶೇ. ಸದ್ಯದ ೫.೮ ರಿಂದ ಶೇ ೮ ಕ್ಕೆ ಏರಿಸಲು ಸಾಧ್ಯವಾಗಬೇಕೆಂಬ ಗುರಿ ಇಟ್ಟುಕೊಳ್ಳಬೇಕು. ಎಂದು ಹೇಳಿದಾಗ, ಇದು ಕಾರ್ಯಸಾಧು ಆಗಲಾರದು ಎನಿಸಿತು. ೨೦೦೨-೦೩ರ ಸಾಲಿನಲ್ಲಿ ಮಳೆಯೇ ಆಗದಿದ್ದಾಗ, ಕೃಷಿ ಉತ್ಪಾದನೆ ಎಡವಿರುವಾಗಿ, ಜಿಟಿಪಿ ವೃದ್ಧಿಯಾಗುವುದೆಂತು? ಎಂದಿನಂತೆ ಮುಂದಿನ ವರ್ಷವೂ ಏನೂ ಹೇಳಲಾಗದು ಎನ್ನುವ ಪರಿಸ್ಥಿತಿ ಇರಬಹುದು ಎನ್ನುವಾಗ ವೃದ್ಧಿ ಎನ್ನುವುದು ಎಲ್ಲಿ ಬಂತು?

ಕೃಷಿ ಉತ್ಪನ್ನ ಕಡಿಮೆಯಾದರೆ ಸಾಮಾನ್ಯ ಜನರ ಕೈಗೆ ದಕ್ಕುವ ಹಣ ಕಡಿಮೆಯಾಗುತ್ತದೆ. ಅಂದರೆ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಅದರಿಂದಾಗಿ ಕೈಗಾರಿಕಾ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ.

ವಾಸ್ತವವಾಗಿ ಹೊಲಗದ್ದೆಗಳಲ್ಲಿ ಮಣ್ಣನ್ನು ಸಡಿಲಪಡಿಸುವ ನೇಗಿಲುಗಳು ಕಾರ್ಖಾನೆಗಳ ಯಂತ್ರಗಳ ವೇಗವನ್ನು ನಿಯಂತ್ರಿಸುತ್ತವೆ. ಖರೀದಿದಾರರು ಕೊಳ್ಳುವುದಕ್ಕೆ ಹಿಂಜರಿಯುತ್ತಾರೆ ಎನ್ನುವಾಗ, ಕಾರ್ಖಾನೆಗಳು ಉತ್ಪಾದನೆಯನ್ನು ಕಡಿಮೆ ಮಾಡದೆ ಇನ್ನೇನು ಮಾಡಬೇಕು? ಮಳೆ ಅಥವಾ ಮಳೆಯ ಅಭಾವವು ಅನ್ನ ಅಥವಾ ರೊಟ್ಟಿ ತಿನ್ನುವುದನ್ನು ಮಾತ್ರವಲ್ಲ, ಸಮಸ್ತ ಚಟುವಟಿಕೆಯನ್ನು ನಿರ್ಣಯಿಸುತ್ತದೆ ಭಾರತದಲ್ಲಿ.

ಮುಂಗಾರು ಮಾರುತವು ಅರಬ್ಬಿ ಸಮುದ್ರ ಕಡೆಯಿಂದ ಬೀಸುವ (ದಕ್ಷಿಣ-ಪಶ್ಚಿಮ) ನೈರುತ್ಯ ಮಾರುತ. ಪ್ರತಿ ವರ್ಷ ಜೂನ್ ೧ ರಂದು ಕೇರಳ ಕರಾಳಿಯನ್ನು ಬಡಿಯಬೇಕೆಂಬ ನಿರೀಕ್ಷೆ. ಕರ್ನಾಟಕಕ್ಕೆ ಜೂನ್ ೬ ಅಥವಾ ೭ರ ವೇಳೆಗೆ ಮಳೆ ತರುತ್ತದೆ. ಮಳೆ ಮಾಮೂಲಿ ಆಗಿ ಬಂದರೆ ಇಷ್ಟು ಕರಾರುವಾಕ್ಕಾಗಿ ಮೋಡಗಳು ಬರುತ್ತವೆ. ಬಂಗಾಳ ಕೊಲ್ಲಿಯಿಂದ ಭೂ ಪ್ರದೇಶದತ್ತ ನುಗ್ಗುವ (ಉತ್ತರ-ಪೂರ್ವ) ಈಶಾನ್ಯ ಮಾರುತಗಳು ಇಷ್ಟು ನಿಖರವಾಗಿ ಪ್ರವೇಶ ಮಾಡುವುದಿಲ್ಲ. ಮುಖ್ಯ ಬೆಳೆ ಎಂದರೆ ಮುಂಗಾರು ಬೆಳೆಯೇ. ಹಿಂಗಾರು ಬೆಳೆ ಕಡಿಮೆ.

ಮುಂಗಾರು ಮಾರುತವನ್ನು ಬೇಸಿಗೆ ಬೆಳೆ ಮಾರುತ ಎಂದೇ ಕರೆಯುತ್ತಾರೆ. ಬೇಸಿಗೆಯಲ್ಲಿ ನೆಲ ಚೆನ್ನಾಗಿ ಕಾದು ತಣ್ಣಗಿನ ಗಾಳಿಯನ್ನು ಸಮುದ್ರದ ಕಡೆಯಿಂದ ಸೆಳೆದುಕೊಳ್ಳುತ್ತದೆ. ಬೇಸಿಗೆಯು ತಾರಕಕ್ಕೇರಿದಾಗ ಸಮುದ್ರದ ಮೇಲೆ ಗಾಳಿ ಬೀಸಿ ಮೋಡಗಳು ಘನೀಕಸಿರಬೇಕು. ಆಗ ಮಾತ್ರ ಮಳೆ ಜರುಗಿ ಬರಲು ಸಾಧ್ಯ. ತಪ್ಪಿದರೆ ಆ ವಿದ್ಯಮಾನಕ್ಕಾಗಿ ಕಾಯಬೇಕು.

ಹಿಂಗಾರು ಮಾರುತವು ‘ಚಳಿಗಾಲಕ್ಕೆ ಮುನ್ನ’ ಎನಿಸುವ ಹಂಗಾಮಿನ ಮಳೆಯನ್ನು ತರುವಂಥದು. ಈ ಮಳೆಯನ್ನು ಅನುಸರಿಸಿ ಚಳಿಗಾಲದ ದಿನಗಳು ಆರಂಭವಾಗುತ್ತವೆ.

ಈ ಮಾರುತಗಳನ್ನು ಇಂಗ್ಲಿಷಿನಲ್ಲಿ ಮಾನ್ಸೂನ್‌ ಮಾರುತಗಳು ಎನ್ನುತ್ತಾರೆ. ಬೆಳೆ ಪದ್ಧತಿ ಈ ಮಳೆ ಪದ್ಧತಿಯನ್ನೇ ಅವಲಂಬಿಸಿದ್ದು. ಯಾವಾಗ ಯಾವಾಗ ಯಾವ ಯಾವ ಪ್ರದೇಶದಲ್ಲಿ ಮಳೆ ಬೀಳುತ್ತದೆ ಎನ್ನುವ ಖಚಿತ ನಿರೀಕ್ಷೆ ಉಂಟು. ಅದರ ಪ್ರಕಾರ ರೈತ ಬೆಳೆ ಇಡಲು ಸಿದ್ಧನಾಗಿರುತ್ತಾನೆ.

ಹೀಗಿರುವಾಗ ಮಳೆ ಬೀಳುವುದು ಹೆಚ್ಚೂ ಕಡಿಮೆ ಅದಕ್ಕೆ ತಕ್ಕಂತೆ ಬೆಳೆ ವ್ಯವಸ್ಥೆಯನ್ನೂ ರೈತ ಮಾರ್ಪಡಿಸಿಕೊಳ್ಳಬಲ್ಲ. ತಡವಾದಾಗ ಉದ್ದೇಶಿತ ದೀರ್ಘಾವಧಿ ಬೆಳೆ ಕೈಬಿಟ್ಟು ಅಲ್ಪಾವಧಿ ಬೆಳೆ ತೆಗೆಯಲು ಸಿದ್ಧನಾಗುತ್ತಾನೆ. ಬದಲಾದ ಮಳೆಗೆ ಅನುಸಾರ ಆ ಬೆಳೆ ಬದಲು ಈ ಬೆಳೆ ಯಾಕಾಗಬಾರದು ಎಂದು ಯೋಚಿಸಿ ಬದಲಾವಣೆ ಮಾಡಿಕೊಡಬಲ್ಲ.

ಹಂಗಾಮು, ಅಂದರೆ ಋತುಮಾನ, ಲೆಕ್ಕಾಚಾರ ಹಾಕುವ ವಿಶಿಷ್ಟ ವಾಡಿಕೆ ಸಹಾ ರೈತರದೇ ಸರಿ. ಒಂದೊಂದು ಮಳೆಯನ್ನೂ ಇಂಥ ನಕ್ಷತ್ರ ಬಂದಾಗಬೀಳುವುದೆಂದು ರೈತ ಗುರುತು ಮಾಡಿಕೊಂಡಿರುತ್ತಾನೆ.

ಸೂರ್ಯನು ರಾಶಿ ಪಥದಲ್ಲಿ ಸಂಚಿರಿಸುವಾಗ ಇಂಥ ನಕ್ಷತ್ರಕ್ಕೆ ಬಂದಾಗ ಬೀಳುವ ಮಳೆ ಎಂದು ಗುರುತಿಸುವ ವಾಟಿಕೆ ಉಂಟು. ಯಾವ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸುತ್ತಾನೋ ಅದು ಮಳೆ ನಕ್ಷತ್ರ.

ಮಳೆ ಮಾರುತಗಳ ಅನಿಶ್ಚಿತತೆಯನ್ನು ಎದುರಿಸಲು ರೈತ ಹೀಗೆ ಸದಾ ಸನ್ನದ್ಧ. ಮಳೆ ಮತ್ತು ಬೆಳೆ ರೈತನ ಜೀವನಾಧಾರ. ಅವುಗಳ ಬಗೆಗೆ ಅವನಿಗೆ ತನ್ನದೇ ಆದ ಲೆಕ್ಕಾಚಾರ. ಕುರುಡು ಲೆಕ್ಕಾಚಾರ ಮೂಢನಂಬಿಕೆ ಎನ್ನುವಂತೇನೂ ಇಲ್ಲ. ಏಕೆಂದರೆ ಹವಾಮಾನ ತಜ್ಞರು ನಡೆಸುವ ಪ್ರತೀಕ್ಷೆಗಳೂ ತಪ್ಪಾಗುತ್ತವೆ. ಕಳೆದ ಜೂನ್‌ಗೆ ಮುಂಚೆ ಸಹಾ ಈ ಬಾರಿ ಒಳ್ಳೆಯ ಮಳೆ ಉಂಟು ಎಂದು ತಜ್ಞರು ಹೇಳಿದ್ದರು. ಆದರೆ ಹುಸಿ ಆಯಿತು. ಬಹುತೇಕ ಪ್ರಸಂಗಗಳಲ್ಲಿ ತಜ್ಞರು ಸಹಾ ಖಚಿತವಾಗಿ ಅಂದಾಜು ಮಾಡಲು ಹಿಂಜರಿಯುತ್ತಾರೆ. ರೈತ ಮಾತ್ರ ಯಾವ ಲೆಕ್ಕಾಚಾರ ತಪ್ಪಿದರೂ, ಹಾಗೆ ತಪ್ಪಿ ಯಾವಾಗ ಮಳೆ ಬಿದ್ದರೂ, ಅದರ ಸದುಪಯೋಗ ಹೇಗೆ ಪಡೆಯಬಹುದೆಂದೇ ಯೋಚಿಸುತ್ತಾನೆ. ಭಾರತೀಯ ಕೃಷಿ ಎಂಬ ವಿದ್ಯಮಾನದಲ್ಲಿ ರೈತನೇ ಧೀರ. ಅವನ ಅಂತರ್ಬೋಧನೆಗೆ ಮಹತ್ವ ಬಹಳ.

ಮುಂಗಾರು ಕೈಕೊಟ್ಟರೆ ಹಿಂಗಾರು ಮಳೆ ಆದರೂ ಆಗಬಹುದು ಎಂದು ಆಶಿಸುವುದಷ್ಟೇ ಉಳಿಯುತ್ತದೆ. ಎಷ್ಟೋ ಬಾರಿ ಮುಂಗಾರು ನಿಧಾನವಾಗಿ, ಹಿಂಗಾರು ಬೇಗ ಆರಂಭವಾಗಿ ಒಟ್ಟಿಗೇ ಕೆಲವು ವಾರ ಮಳೆ ಬಿದ್ದು ನಿಂತು ಬಿಡುತ್ತದೆ. ಕೆಲವೊಮ್ಮೆ ಎರಡೂ ದೂರ ದೂರ ಸರಿದು ಆಭಾಸವಾಗುತ್ತದೆ. ಒಂದು ಕೈಕೊಟ್ಟು ಇನ್ನೊಂದು ಫಲಿಸುತ್ತದೆ. ಮಳೆಯು ಬೆಳೆಗೆ ಸಹಾಯಕ ಆಗದಿದ್ದರೂ ಅಂತರ್ಜಲ ವೃದ್ಧಿಗೆ ನೆರವಾಗಿ ಕುಡಿಯುವ ನೀರು ಲಭ್ಯವಾದರೆ ಸಾಕು ಅನಿಸದಿರದು. ಪ್ರಸ್ತುತ ಸಾಲಿನಲ್ಲಿ ಆದಂತೆ ಎರಡೂ ಮಳೆ ಕೈಕೊಟ್ಟಾಗ ಕುಡಿಯುವ ನೀರಿಗೂ ತತ್ವಾರ.

ಆಯಾ ಕಾಲಕ್ಕೆ ಮಾಮೂಲಾಗಿ ಎಷ್ಟು ಮಳೆ ಬರಬೇಕಾಗುತ್ತದೋ ಅದಕ್ಕಿಂತ ಎಷ್ಟು ಹೆಚ್ಚು ಅಥವಾ ಕಡಿಮೆ ಬೀಳುತ್ತದೆ ಎಂದು ಹವಾಮಾನ ತಜ್ಞರು ಸತತವಾಗಿ ಮಾಹಿತಿ ನೀಡುತ್ತಿರುತ್ತಾರೆ. ಹವಾಮಾನ ಅಧ್ಯಯನಕ್ಕಾಗಿ ದೇಶವನ್ನು ೩೬ ಉಪವಿಭಾಗಗಳಾಗಿ ವಿಂಗಡಿಸಿ ಇಡಲಾಗಿದೆ. ಅದರಲ್ಲಿ ೨೭ ಉಪ ವಿಭಾಗಗಳಲ್ಲಿ ೨೦೦೨-೦೩ ರಲ್ಲಿ ಹಿಂಗಾರು ಮಳೆ ಸರಿಯಾಗಿ ಬೀಳಲೇ ಇಲ್ಲ. ಅವುಗಳ ೧೪ರಲ್ಲಿ ಮುಂಗಾರು ಮಳೆ ಸಹಾ ಬಿದ್ದಿಲ್ಲ. ಅಂದರೆ ದೇಶದ ಶೇ ೪೦ ಭೂ ಪ್ರದೇಶದಲ್ಲಿ ಈ ಬಾರಿ ಅನಾವೃಷ್ಟಿ. ಉತ್ತರ ಭಾರತ, ಪಶ್ಚಿಮ ಭಾರತ ಮತ್ತು ಮಧ್ಯ ಭಾರತದಲ್ಲಿ ಈ ಪರಿಸ್ಥಿತಿ.

ಡಿಸೆಂಬರ್ ಮಧ್ಯಭಾಗದವರೆಗಿನ ಜಲಾಶಯ ಸಮೀಕ್ಷಾ ವರದಿ ಪ್ರಕಾರ, ದೇಶದ ಪ್ರಮುಖ ೭೦ ಜಲಾಶಯಗಳಲ್ಲಿ ಶೇ. ೪೦ ರಷ್ಟು ಮಾತ್ರ ನೀರಿದೆ. ಮತ್ತೆ ಮಳೆ ಬರಲು ಇನ್ನು ಆರು ತಿಂಗಳು ಕಾಯಬೇಕು.

ಹಾಗೆ ನೋಡಿದರೆ ದಕ್ಷಿಣ ಭಾರತದಲ್ಲೇ ವಾಸಿ. ಹಿಂಗಾರು ಮಳೆ ಸಹಾಯ ಮಾಡಿದೆ. ಅದರಲ್ಲೂ ತಮಿಳುನಾಡು ಕರ್ನಾಟಕಗಳಲ್ಲಿ ಮಿಕ್ಕ ರಾಜ್ಯಗಳಾದ ಆಂಧ್ರ ಕೇರಳಗಳಿಗಿಂತ ಪರಿಸ್ಥಿತಿ ಉತ್ತಮ! ಕಾವೇರಿ ನೀರಿಗಾಗಿ ನಡೆದ ವಾರ್ಷಿಕ ಜಗಳವು ಹಿಂಗಾರು ಸಹಾಯ ಮಾಡಿದರೆ ಮಾತ್ರ ತಣ್ಣಗಾಗಬಲ್ಲದು. ಈ ಬಾರಿ ಹಾಗೆ ಆಯಿತು.

ಕೃಷಿ ಇಲಾಖೆ ನವೆಂಬರ್‌ವರೆಗೆ ಆಖೈರುಗೊಳಿಸಿದ ಮಾಹಿತಿ ಪ್ರಕಾರ, ಪ್ರಸ್ತುತ ಸಾಲಿನಲ್ಲಿ ಆಹಾರ ಧಾನ್ಯ ಉತ್ಪಾದನೆ ೩೦೦ ಲಕ್ಷ ಟನ್ ಕಡಿಮೆ ಆಗಿ ೧೮೧೦ ಲಕ್ಷ ಟನ್‌ಗೆ ಬಂದು ನಿಲ್ಲುತ್ತದೆ. ೨೦೦೧-೦೨ ರಲ್ಲಿ ಇದು ೨೧೧೦ ಲಕ್ಷ ಟನ್ ಆಗಿತ್ತು.

ಹಿಂದೆ ೧೯೭೯-೮೦ ರಲ್ಲಿ ಹಾಗೂ ಅದರ ನಂತರ ೧೯೮೬-೮೭ ಮತ್ತು ೮೭-೮೮ ರಲ್ಲಿ (ಅಂದರೆ ಸತತವಾಗಿ ಎರಡು ವರ್ಷ) ಅನಾವೃಷ್ಟಿ ಕಾಡಿತ್ತು. ೮೭ ಮತ್ತು ೮೮ ಎರಡು ವರ್ಷ ಜಿಡಿಪಿ ಲೆಕ್ಕ ಹಾಕಿದಾಗ ಕ್ರಮವಾಗಿ ಶೇ. ೦.೬ ಮತ್ತು ಶೇ. ೧.೪ ಕಡಿಮೆ ಆಗಿತ್ತು!

ಖಚಿತವಾಗಿ ಅನುಭವಕ್ಕೆ ಬಂದ ವಿದ್ಯಮಾನದ ಪ್ರಕಾರ, ಹೀಗೆ ಅನಾವೃಷ್ಟಿಯು ಕಾಡಿದ ಮರು ವರ್ಷ ಬಹಳ ಒಳ್ಳಯ ಮಳೆ ಆಯಿತು! ೧೯೮೦-೮೧ ಮತ್ತು ೧೯೮೮-೮೯ ಈ ಎರಡೂ ವರ್ಷ ಒಳ್ಳೆಯ ಮಳೆ ಮತ್ತು ಬಂಪರ್‌ಬೆಳೆ.

೮೦-೮೧ ರಲ್ಲಿ, ಹಿಂದಿನ ವರ್ಷ ೧೦೯೦ ಲಕ್ಷಟನ್‌ಇದ್ದ ಧಾನ್ಯ ಉತ್ಪಾದನೆ ೧೨೯೦ ಲಕ್ಷ ಟನ್‌ಗೆ ಏರಿತು. ೧೯೮೦-೮೯ ರಲ್ಲಂತೂ ಹಿಂದಿನ ಸಾಲಿನ ೧೪೦೦ ಲಕ್ಷಟನ್‌ಬೆಳೆ ಮೀರಿ ೧೯೭೦ ಲಕ್ಷ ಟನ್‌ಗೆ ಏರಿತು.

ಅಂದರೆ ೨೦೦೩ ರ ಆರಂಭದಲ್ಲಿ ಒಳ್ಳೆಯ ನಿರೀಕ್ಷೆ ಇದೆ ಎಂದಾಯಿತು.

ಇದೇನೇ ಇದ್ದರೂ ಕಾಪು ದಾಸ್ತಾನು ತುಂಬಿ ತುಳುಕುತ್ತಿದೆ. ಅದನ್ನು ಹೇಗೆ ಖರ್ಚು ಮಾಡುವುದೆಂದು ಸರ್ಕಾರಕ್ಕೆ ತೋಚುತ್ತಿಲ್ಲ. ಖರೀದಿ ಸಾಮರ್ಥ್ಯ ಜನಕ್ಕಿಲ್ಲ.

ಅನಾವೃಷ್ಟಿ ನೆಪದಲ್ಲಾದರೂ ಸರ್ಕಾರವು ಮುಗ್ಗುವ ಧಾನ್ಯವನ್ನು ಹೊರಗೆಳೆದು ಹಾಕುವ ಹಾದಿ ಹುಡುಕಬೇಕು.