ಮನುಷ್ಯ ದೇಹಕ್ಕೆ ಎರಡು ಅವಸ್ಥೆ: ಹೊಟ್ಟೆ ತುಂಬಿರುವುದು; ಹಸಿವು. ಭೂಮಿಗೂ ಅಷ್ಟೆ. ಮಳೆ ಬಿದ್ದಾದ ನಂತರ ತಣ್ಣಗಿರುವುದು. ಮಳೆ ಅಭಾವದಿಂದ ಬೇಯುವುದು. ಹಸಿವನ್ನು ಹೇಗೆ ಭರಿಸಲು ಸಾಧ್ಯವಿಲ್ಲವೋ ಹಾಗೆಯೇ ಅನಾವೃಷ್ಟಿಯನ್ನು, ಬರವನ್ನು ಭರಿಸಲಾಗದು. ನಮ್ಮಲ್ಲಿ ಹವಾಮಾನ ಮುನ್ಸೂಚನೆ ಎಂಬುದಿದೆ. ಗುಡುಗು ಮಿಂಚು ಸಹಿತ ಮಳೆ ಎಂಬ ಮುನ್ಸೂಚನೆ ವರದಿ ಅನುಸರಿಸಿ ಮನೆಯಿಂದ ಹೊರಗೆ ಹೋಗುವಾಗ ಛತ್ರಿ ಅಥವಾ ರೇನ್‌ಕೋಟ್‌ ಹೊಂದಿಸಿಕೊಂಡು ಹೊರಟರೆ, ಅಂದು ಮನೆಗೆ ವಾಪಸ್ ಬರುವ ತನಕ ಅದರ ಉಪಯೋಗ ಪ್ರಮೇಯ ಬರುವುದಿಲ್ಲ. ನಿರ್ಮಲ ಆಕಾಶ ಇರುತ್ತದೆಂಬ ವರದಿ ಇದ್ದ ದಿವಸ ಮಳೆ ಬರುತ್ತದೆ. ಅದು ನಗೆಚಾಟಿಕೆಗೆ ವಸ್ತು ಆಗಿರುವುದು ಮಾತ್ರ ನಿಜ. ವಾಸ್ತವವಾಗಿ ಮಳೆ ಎನ್ನುವುದು ಭಾರತದಲ್ಲಿ ‘ಅನ್‌ಪ್ರಿಟಿಕ್ಟಬಲ್’.

ಮಲೇಷ್ಯದಲ್ಲಿ ನಿತ್ಯ ಒಂದರ್ಧ ಗಂಟೆಯಾದರೂ ಧೋ ಎಂದು ಬೀಳುವ ಮಳೆ ಬರುತ್ತದೆ. ಬ್ರಿಟನ್ನಿಗೆ ಮಳೆಯಂತೂ ದಿಢೀರ್ ಹನಿಯುವ ಗುಣಕ್ಕೆ ಹೆಸರಾದುದು. ಅಲ್ಲಿ ಎರಡೇ ಋತುಮಾನ. ಮಳೆ ಸಹಾ ಬೀಳುವ ಬೇಸಿಗೆ ಮತ್ತು ಚಳಿಗಾಲ. ನೆಲದ ಮೇಲೆ ನೀರು ಹರಿಯುವಷ್ಟು ಜೋರಾದ ಮಳೆ ಬರುವುದಿಲ್ಲ. ಅಲ್ಲಿನ ಮೂರು ‘ಡಬ್ಲ್ಯು’ಗಳು ಸದಾ ಅನ್‌ಪ್ರಿಟಿಕ್ಟಬಲ್ ಎನ್ನುತ್ತಾರೆ: ವೆದರ್, ವಿಮೆನ್ ಮತ್ತು ವೈನ್. ಒಂದು ಮಾತು ನಿಜ. ಒಂದು ದೇಶದ ಹವಮಾನ ಅಥವಾ ಋತುಮಾನ ಪದ್ಧತಿ ಹೇಗಿದೆ ಎಂದು ತಿಳಿದುಕೊಂಡರೆ ಅಲ್ಲಿನ ಜನರ ಮನೋಭಾವವನ್ನು ಅಭ್ಯಾಸ ಮಾಡುವುದಕ್ಕೆ ಸುಲಭವಾಗುತ್ತದೆ.

ಭಾರತದಲ್ಲಿ ಮಳೆ ಎನ್ನುವುದು ತುಂಬಾ ಅನ್‌ಪ್ರಿಡಿಕ್ಟ್‌ಬಲ್ ಏನಲ್ಲ. ಬರಬೇಕಾದಾಗ ಮಳೆ ಬರುವುದಿಲ್ಲ ಎನ್ನುವ ನಿರಾಶೆ ಮಾತ್ರ ಇರುತ್ತದೆ. ಮಳೆಯನ್ನು ನೆಚ್ಚಿಕೊಂಡು ಜೂಜಾಡುವಂತೆ ರೈತರು ಬೆಳೆ ಕಾರ್ಯದಲ್ಲಿ ತೊಡಗುತ್ತಾನೆ. ಮಳೆ ಬರದಿದ್ದರೆ ನೆಲಕ್ಕೆ ಹಾಕಿದ ಬಿತ್ತನೆ ಬೀಜ ಸಹಾ ನಷ್ಟವಾಗುತ್ತದೆ.

ಭಾರತದ ಮಾನ್ಸೂನ್ ಮಾರುತಗಳು ಜಗತ್‌ಪ್ರಸಿದ್ಧ. ನೆತ್ತಿಯ ಕಡೆ ಮಾತ್ರ ಇತರ ಭೂಭಾಗಕ್ಕೆ ಸೇರಿಕೊಂಡಿರುವ ಉಪಖಂಡ ಎಂಬುದು ಭಾರತದ ಭೂ ಲಕ್ಷಣ. ಇನ್ನು ಮಿಕ್ಕೆಲ್ಲ ಕಡೆ- ಮೂರು ಕಡೆಯಲ್ಲ- ತ್ರಿಭುಜಾಕಾರದ ಎರಡು ಬಾಹುಗಳಿರುವ ಕಡೆ ಸಮುದ್ರ. ಬೇಸಿಗೆಯಲ್ಲಿ ಭೂಮಿ ಕಾದು ನೆಲದ ಮಾಲಿನ ಹವೆ ಹಗುರಾಗುತ್ತದೆ. ವಾರಗಳ ಪರ್ಯಂತ ಹವೆ ಹಗುರಾಗಿ ಸಮುದ್ರದ ಕಡೆಯಿಂದ ತಣ್ಣಗಿನ ಗಾಳಿಯನ್ನು ಭೂಪದರದ ಮೇಲ್ಭಾಗಕ್ಕೆ ಸೆಳೆದುಕೊಳ್ಳುತ್ತದೆ. ಹಾಗೆ ಒಳನುಗ್ಗಿದ ಗಾಳಿ ಮೋಡಗಳಾಗುವಷ್ಟು ದಟ್ಟೈಸಿದರೆ ಹಾಗೆ ದಟ್ಟೈಸಿದ ಮೋಡಗಳು ಭೂಭಾಗಗಳ ಮೇಲಕ್ಕೆ ಸಾಗಿ ಬಂದು ಮಳೆ ಸುರಿಸುತ್ತವೆ. ಮೋಡಗಳು ಹೀಗೆ ಜರುಗಿ ಎಲ್ಲೆಲ್ಲಿ ಮಳೆ ಸುರಿಸುತ್ತವೆ ಎಂಬುದು ಮಾತ್ರ ಅನ್‌ಪ್ರಿಡಿಕ್ಟ್‌ಬಲ್. ಒಂದೇ ಭೂಭಾಗದ ಮೇಲೆ ಅಂದರೆ ಉಪಖಂಡದ ಮೇಲೆ ಕೆಲವೆಡೆ ಅನಾವೃಷ್ಟಿ. ಕೆಲವೆಡೆ ಅತಿವೃಷ್ಟಿ. ಇದರ ಮುನ್ಸೂಚನೆಯೇ ಸಾಧ್ಯವಾಗದೇ ಇರುವುದು.

ಹಿಂದಿನ ಕಾಲದವರು ಭೂಗೋಳ ಪಾಠದಲ್ಲಿ ಖಚಿತವಾಗಿ ಕಲಿತುಕೊಳ್ಳುತ್ತಿದ್ದಂತೆ ಭಾರತದ ಭೂಭಾಗದೊಳಕ್ಕೆ ನುಗ್ಗಿ ಬರುವ ಗಾಳಿ ಮಾರುತಗವಾಗುತ್ತದೆ. ಮಾರುತವೆಂದರೆ ಕ್ಲುಪ್ತವಾಗಿ ಬೀಸುವ ಗಾಳಿ. ಇದು ಅನ್‌ಪ್ರಿಡಿಕ್ಟಬಲ್‌ ಅಲ್ಲ. ತಪ್ಪುವುದೇ ಇಲ್ಲ. ಆದರೆ ಮಳೆ ಬೀಳಿಸಲಾಗದಷ್ಟು ದುರ್ಬಲವಾಗಿರುತ್ತದೆ, ಕೆಲವೊಮ್ಮೆ. ಭೂಮಿಯ ಚಲನೆ, ಸಮುದ್ರದೊಳಗಿನ ಶೀತೋಷ್ಣ ಪ್ರವಾಹಗಳು ಮುಂತಾದ ಕ್ಲುಪ್ತ ವಿದ್ಯಮಾನಗಳಿಂದಾಗಿ ಮಾರುತಗಳು ನಿಯತವಾಗಿ ಬೀಸುತ್ತವೆ. ಭಾರತ ಉಪಖಂಡವನ್ನು ಒಂದು ಋತುಮಾನದಲ್ಲಿ ನೈರುತ್ಯ ದಿಕ್ಕಿನಿಂದ ಪ್ರವೇಶಿಸಿ ದೇಶದಾದ್ಯಂತ ಹರಡಿಕೊಳ್ಳುತ್ತದೆ. ಇನ್ನೊಂದು ಋತುಮಾನದಲ್ಲಿ ಈಶಾನ್ಯ ದಿಕ್ಕಿನಿಂದ ಪ್ರವೇಶಿಸುತ್ತದೆ.

ನೈರುತ್ಯ ದಿಕ್ಕಿನಿಂತ ಬೀಸುವ ಮಾರುತವೆ ಮುಖ್ಯ. ಸರಿಯಾಗಿ ಜೂನ್ ೧ ರಂದು ಕೇರಳ ಕರಾವಳಿಯ ಮೇಲೆ ಅಪ್ಪಳಿಸುತ್ತದೆ. ಹಿಂದುಮುಂದು ಆದರೆ ಒಂದೆರಡು ದಿನ ಮಾತ್ರ. ಕರ್ನಾಟಕವನ್ನು ಈ ಮಾರುತ ತಲುಪುವುದು ಸಾಮಾನ್ಯವಾಗಿ ಜೂನ್ ೭ರ  ಹೊತ್ತಿಗೆ. ಇನ್ನೊಂದು ವಾರ ಕಳೆದಂತೆ ಉತ್ತರ ದಿಕ್ಕಿನತ್ತ ಸಾಗಿ ಇತರ ರಾಜ್ಯಗಳಿಗೆ ಹರಡಿಕೊಳ್ಳುತ್ತದೆ. ೧೦-೧೨ ವಾರಗಳಷ್ಟು ಹರಡಿಕೊಳ್ಳುವ ಅವಧಿಯಲ್ಲಿ ಬರುವ ಈ ಮಳೆಯಿಂದಲೇ ಖರೀಫ್‌ಬೆಳೆ ತೆಗೆಯುವುದು. ಇದೇ ಮುಂಗಾರು ಬೆಳೆ.

ಈಶಾನ್ಯ ದಿಕ್ಕಿನಿಂದ ಬಳಗಾಳ ಕೊಲ್ಲಿ ಕಡೆಯಿಂದ ಬೀಸುವ ಮಾರುತವು ಅಕ್ಟೋಬರ್‌ಮಧ್ಯಭಾಗದ ವೇಳೆಗೆ ಮಳೆ ತರುತ್ತದೆ. ಅದರಿಂದ ಬೆಳೆಯುವುದು ರಬಿ ಬೆಳೆ. ಇದು ಹಿಂಗಾರು ಬೆಳೆ.

ಮುಂಗಾರು, ಹಿಂಗಾರು ಸೇರಿದಂತೆ ಮಾನ್ಸೂನ್‌ಮಾರುತಗಳು ಎಂದು ಕರೆಯುತ್ತಾರೆ. ಮುಂಗಾರು ಮಾರುತಗಳು ಬಹಳ ಸರಾಗವಾಗಿ ಉಪಖಂಡ ಪ್ರವೇಶಿಸುವುದಿಲ್ಲ ಪಶ್ಚಿಮ ಘಟ್ಟಗಳು ತಡೆಯುತ್ತವೆ. ನಿರ್ದಿಷ್ಟ ಸಾಂದ್ರತೆ ಮತ್ತು ರಭಸ ಇದ್ದರೆ ಮಾತ್ರವೇ ಕರಾವಳಿಯಲ್ಲಿ ಸುರಿಸುತ್ತಾ ಘಟ್ಟಗಳನ್ನು ದಾಟಿ ಉಪಖಂಡವನ್ನು ಪ್ರವೇಶಿಸುವುದು. ಹಿಂಗಾರು ಮಾರುತಗಳು ಮಾತ್ರ ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಪ್ರಕರಣಗಳ ಅನ್ವಯ ಸಲೀಸಾಗಿ ಒಳನುಗ್ಗಬಲ್ಲವು.

ಇಷ್ಟು ಕ್ಲುಪ್ತವಾಗಿ ಬೀಸುವ ಮಳೆ ಮಾರುತಗಳು ವ್ಯತ್ಯಾಸಗೊಳ್ಳುತ್ತವೆ. ಭೂ ಪ್ರದೇಶದೊಳಕ್ಕೆ ಮಾರುತಗಳನ್ನು ಸೆಳೆದುಕೊಳ್ಳುವುದಕ್ಕೆ ನೆರವಾಗುವ ಅರಣ್ಯವಯ ಖಾಲಿಯಾಗುತ್ತಿದೆ. ಅದೇ ದುರಂತ.

ಮಳೆ ಮಾರುತಗಳನ್ನು ಹಲವು ಹತ್ತು ವರ್ಷಗಳ ಅಭ್ಯಾಸ ಮಾಡಿ ಸಂರಕ್ಷಿಸಿಟ್ಟ ದಾಖಲೆಗಳಿವೆ. ಗಾಳಿಯೇ ಮುಂತಾದ ಹಲವು ಮಳೆ ದತ್ತಾಂಶಗಳನ್ನು ಅಳೆಯುವ ತಂತ್ರಜ್ಞಾನ ಲಭ್ಯವಿದೆ. ಮುನ್ಸೂಚನೆ ಸಾಧ್ಯವಾಗಿದೆ. ಅದರ ಪ್ರಕಾರ ಹವಾಮಾನ ಕುರಿತ ಅಧ್ಯಯನಕ್ಕೆ ಮೀಸಲಾದ ಇಲಾಖೆಯು ಹಲವು ವಾರಗಳ ಮುಂಚೆಯೇ ಮುನ್ಸೂಚನೆ ನೀಡುತ್ತದೆ.

ಮಳೆಗಳನ್ನು ಕುರಿತ ನಂಬಿಕೆಗಳೂ, ರೂಢಮೂಲ ಲೆಕ್ಕಾಚಾರಗಳೂ ಇವೆ. ರೈತರು ಹವಾಮಾನ ಇಲಾಖೆ ಸಮೀಕ್ಷೆಗಳಿಗಿಂತ ಹೆಚ್ಚಾಗಿ ಇವನ್ನೇ ನಂಬುತ್ತಾರೆ. ಸೂರ್ಯನು ಯಾವ ನಕ್ಷತ್ರಕ್ಕೆ ಬರುತ್ತಾನೆ. ಅದರ ಆಸುಪಾಸಿನಲ್ಲಿ ಯಾವಾಗ ಸಂಚಿರುತ್ತಾನೆ ಎಂದು ಪಂಚಾಂಗ ಕರ್ತರು ಲೆಕ್ಕ ಹಾಕಿಕೊಡುತ್ತಾರೆ. ಸೂರ್ಯ ಪ್ರವೇಶಿಸುವ ನಕ್ಷತ್ರವನ್ನು ಮಳೆ ನಕ್ಷತ್ರ ಎಂದು ಕರೆಯುತ್ತಾರೆ. ಎಲ್ಲ ಮಳೆ ನಕ್ಷತ್ರಗಳೂ ಮಳೆ ಸುರಿಸುತ್ತವೆ ಎದೇನಿಲ್ಲ. ಕೆಲವು ನಕ್ಷತ್ರಗಳ ಮಳೆಯನ್ನಂತೂ ರೈತರು ತುಂಬಾ ನಂಬುತ್ತಾರೆ. ಯಾವ ವೇಳೆ ಬಿತ್ತನೆ ಮಾಡಿದ್ದರೆ ಇನ್ನು ಯಾವ ಯಾವ ಮಳೆ ನಕ್ಷತ್ರದ ಹೊತ್ತಿಗೆ ಎಷ್ಟು ಬೀಸು ಮಳೆ ಬೀಳುತ್ತದೆ ಎಂದು ಲೆಕ್ಕ ಹಾಕಿ ಆ ಪ್ರಕಾರ ಕೃಷಿ ಕಾರ್ಯಾಚರಣೆಗಳನ್ನು ನಿಗದಿಪಡಿಸಿಕೊಳ್ಳುತ್ತಾರೆ.

ಮುಂಗಾರು-ಹಿಂಗಾರು ಮಾರುತಗಳ ಬಗೆಗೂ ನಂಬಿಕೆಗಳು ಇಲ್ಲದಿಲ್ಲ, ಪ್ರತಿ ನಾಲ್ಕನೆಯ ವರ್ಷ ಮಾರುತಗಳ ಕ್ಲುಪ್ತತೆ ಏರುಪೇರಾಗುತ್ತದೆ, ಮಳೆ ಕಡಿಮೆಯಾಗುತ್ತದೆ ಎಂಬುದು ಜನಜನಿತ ಭಾವನೆಯಾಗಿತ್ತು. ಒಮ್ಮೊಮ್ಮೆ ನಾಲ್ಕನೆಯ ವಷ್ಷದ ಅನಾವೃಷ್ಟಿಯ ಮುಂದಿನ ನಾಲ್ಕು ವಷ್ಷಗಳಿಗೆ ಹರಡಿಕೊಳ್ಳುತ್ತದೆ. ಇದು ಸಹಾ ಅನುಭವಕ್ಕೆ ಬಂದಿರುವ ವಿಚಾರ; ಇತ್ತೀಚೆಗೆ ಕೂಡಾ.

ಎಷ್ಟೋ ಬಾರಿ ಮುಂಗಾರು ತಡವಾಗಿ ಆರಂಭವಾಗಿ ಮುಂದಿನ ಹಿಂಗಾರಿ ಅವಧಿಯೊಳಕ್ಕೆ ಹರಡಿಕೊಳ್ಳುತ್ತದೆ. ಆಗೆಲ್ಲ ಮುಂಗಾರಿನ ಕೊನೆ ಭಾಗ ಹಿಂಗಾರಿನ ಮೊದಲ ಭಾಗ ಒಂದಾಗಿ ಮಳೆಯೋ ಮಳೆ! ಹೀಗೂ ಆಗುವುದುಂಟು.

ಈ ಎಲ್ಲ ನಂಬಿಕೆಗಳೂ, ದೃಷ್ಟಾಂತಜನ್ಯ ಲೆಕ್ಕಾಚಾರಗಳೂ ತಜ್ಞರ, ಭರ್ತ್ಸನೆಗೆ ಗುರಿ ಆಗುತ್ತವೆ. ಹವಾಮಾನ ಇಲಾಖೆಯವರ ಲೆಕ್ಕಾಚಾರಗಳೂ ತಲೆಕೆಳಕಾಗುತ್ತವೆ ಎಂಬುದು ಸಹಾ ವಾಸ್ತವಾಂಶವೇ ಸರಿ.

ಪ್ರತಿ ವರ್ಷದಂತೆ ಈ ಬಾರಿ ಸಹಾ ಹವಾಮಾನ ಇಲಾಖೆ ತನ್ನ ಮುನ್ಸೂಚನೆ ನೀಡಿತು. ಸಾಮಾನ್ಯವಾಗಿ ಮೇ ೨೫ಕ್ಕೆ ಕೊಡುತ್ತಿದ್ದ ತನ್ನ ಮುನ್ಸೂಚನೆಯನ್ನು ಈ ಬಾರಿ ಮುಂಚೆಯೇ, ಅಂದರೆ ಏಪ್ರಿಲ್ ೧೬ ಕ್ಕೆ ನೀಡಿತು. ಈ ಬಾರಿ ಸಾಕಷ್ಟು ಮುಂಚೆಯೇ ಭವಿಷ್ಯದ ಸೂಚನೆ ನೀಡುತ್ತಿದ್ದರೂ ಅಪನಂಬಿಕೆ ಉಂಟು. ಈ ಬಾರಿ ಭಾರೀ ಮಳೆ ಕೊರತೆ ಇರದು ಎಂಬುದು ಅದರ ಅಂಬೋಣ. ಕಳೆದ ವರ್ಷ ಹೆಚ್ಚು ವ್ಯತ್ಯಾಸವಿಲ್ಲದ ಸಾಮಾನ್ಯ ಎನಿಸುವಂಥ ಮಳೆ ಬರುತ್ತದೆಂದು ಇಲಾಖೆ ಹೇಳಿತ್ತು. ಆದರೆ ಅದು ಹುಸಿಯಾಯಿತು.

ಹವಾಮಾನ ಇಲಾಖೆ ಮುಖ್ಯಸ್ಥರ ಪ್ರಕಾರ ೧೬ ಬಗೆಯ ಮಾನಕಾಂಶಗಳ ಆಧಾರದ ಮೇಲೆ ಮುನ್ಸೂಚನೆ ನೀಡಲಾಗಿತ್ತು. ಈ ಬಾರಿ ಹೆಚ್ಚು ವಿಶ್ವಾಸಾರ್ಹ ಎನಿಸುವ ಬೇರೆಯವೇ ಆದ ಎಂಟು ಬಗೆಯ ಮಾನಕಾಂಶಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಿದೆ. ಅಲ್ಲದೆ ಜೂನ್‌ವರೆಗಿನ ವಾಸ್ತವಾಂಶಗಳ ಆಧಾರದ ಮೇಲೆ ಲೆಕ್ಕಾಚಾರ ನಡೆಸಿ ಜುಲೈ ಮಧ್ಯಭಾಗದಲ್ಲೂ ಒಂದು ಮುನ್ಸೂಚನೆ ನೀಡಲಾಗುವುದು ಎಂಬುದು ಅವರು ನೀಡಿದ ಭರವಸೆ.

ಇಷ್ಟಾಗಿ ಹೊಸ ೮ ಬಗೆಯ ಮಾನಕಾಂಶಗಳನ್ನು ಆಧರಿಸಿದ ವಿಶ್ಲೇಷಣೆಯನ್ನು ಇರುವರೆಗೆ ಒಮ್ಮೆಯೂ ಒರೆಗೆ ಹಚ್ಚಿಲ್ಲ !

ಇದೇನೇ ಇದ್ದರೂ ಮುನ್ಸೂಚನೆಯನ್ನು ಸಾಕಷ್ಟು ಮುಂಚೆ ನೀಡಿದ್ದಾರೆ ಎನ್ನುವುದು ಮಾತ್ರ ವಿಶೇಷವೇ ಸರಿ. ಇದರಿಂದ ಮಳೆ ನಂತರದ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಸಿದ್ಧತೆಗಳನ್ನು ನಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಕಾಲಾವಕಾಶ ಲಭಿಸಿದಂತಾಗಿದೆ.

ಬಿತ್ತನೆ ಬೀಜ, ಗೊಬ್ಬರಗಳನ್ನು ಸಾಗಿಸಿ ಇಡಲು ಅನುಕೂಲವಾಗುತ್ತದೆ. ಮಳೆ ಕೊರತೆ ಎನ್ನುವಂತಿದ್ದರೆ ಇವುಗಳ ಬಳಕೆ ಕಡಿಮೆ. ಕೊರತೆ ಇಲ್ಲ ಅಥವಾ ಅಲ್ಪಮಾತ್ರ ಕೊರತೆ ಇರುತ್ತದೆ. ಎದಾದರೆ (ಈ ಬಾರಿ ಹೇಳಿರುವಂತೆ ಆದರೆ) ಮಳೆಯು ಕೆಲವೆಡೆ ಹೆಚ್ಚಾಗಲೂಬಹುದು. ಆಗ ಇವುಗಳ ಬಳಕೆ ಅಗತ್ಯಕ್ಕಿಂತ ಹೆಚ್ಚಾಗುತ್ತದೆ. ಎಚ್ಚರ ವಹಿಸದಿದ್ದರೆ ಅವುಗಳ ಕೊರತೆಯುಂಟಾಗಿ ರೈತರ ಕೈಕಟ್ಟಿದಂತಾಗುತ್ತದೆ.

ನಮ್ಮ ದೇಶದ ಸಂಪನ್ನತೆ ಕೃಷಿ ಉತ್ಪನ್ನವನ್ನೇ ಅವಲಂಭಿಸಿರುತ್ತದೆ. ಆದ್ದರಿಂದಲೇ ವಾಣಿಜ್ಯೋದ್ಯಮದ ಚೇಂಬರ್‌ಗಳ ಫೆಡರೇಷನ್‌ಎನಿಸಿದ ‘ಫಿಕ್ಕಿ’ಯು ಮಳೆ ನೀರನ್ನು ವಾಸ್ತವವಾಗಿ ನೆಲದಡಿ ಸೇರಿಸಿ ಮುಂದಿನ ತಿಂಗಳುಗಳ ಅಂತರ್ಜಲವಾಗಿ ಕಾಪಾಡಬೇಕು ಎಂದು ಮುಖ್ಯವಾಗಿ ಬಯಸುತ್ತದೆ.

ಅದೇ ವೇಳೆ ಭಾರತೀಯ ಉದ್ಯಮ ಕೂಟ ಸಿ.ಐ.ಐ. ನೆಲದಡಿ ನೀರು ಸೇರುವಂತೆ ಮಾಡುವುದೇ ಅಲ್ಲದೇ ನೆಲದ ಮೇಲಿನ ಜನ ಸಂಗ್ರಹಗಳೂ, ಅದರ ದಕ್ಷ ಬಳಕೆಯೂ ಸಾಧ್ಯವಾಗಬೇಕೆಂದು ಹೇಳುತ್ತದೆ. ನೀರಾವರಿ ಕೃಷಿ ಮಾತ್ರವಲ್ಲದೆ ಜನ ಬಳಕೆ ನೀರು, ಉದ್ಯಮಕ್ಕೆ ಬೇಕಾಗುವ ನೀರು, ವಿದ್ಯುತ್ತಿಗೆ ಬೇಕಾಗುವ ನೀರು ಮತ್ತು ಪರಿಸರ ರಕ್ಷಣೆಗೆ ಬೇಕಾಗುವ ನೀರು ಹೀಗೆ ವಿವಿಧ ಬಾಬುಗಳಿಗೆ ಎಷ್ಟೆಷ್ಟು ನೀರು ವಿನಿಯೋಗವಾಗಬೇಕೆಂಬ ಲೆಕ್ಕಾಚಾರ ಸಹಾ ನಡೆಯಬೇಕೆಂದು ಸಿ.ಐ.ಐ. ಹೇಳುತ್ತದೆ.

ನೀರು ಎನ್ನುವುದು ಬರುಬರುತ್ತಾ ಹೆಚ್ಚು ಹೆಚ್ಚು ವಿವಾದಾತ್ಮಕ ವಿಷಯವಾಗುವುದು ಖಚಿತ.

೨೩.೦೪.೨೦೦೩