‘ಕಾಳುಕಡ್ಡಿ ಮಾರಿದರೆ, ಮದುವೆ ಮುಂಜಿ!’- ರೈತರ ಮನೆವಾರ್ತೆಯ ಮನೆ ಮಾತು ಇದು. ಬೆಳೆದಿದ್ದನ್ನು ಸ್ವಂತಕ್ಕೆ ಉಳಿಸಿಕೊಂಡು ಹೆಚ್ಚುವರಿ ಆಗಿದ್ದನ್ನು ರೈತ ಮಾರುತ್ತಾನೆ. ಮಳೆ ಆದರೆ ಬೆಳೆ. ಬೆಳೆ ಆದರೆ ಬದುಕು. ತಪ್ಪಿದರೆ ಬವಣೆ. ಆ ವವಣೆ ಎಷ್ಟು ದೊಡ್ಡದೆಂದರೆ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುವುದು. ಇದು ಈಗ ಸಾಮಾನ್ಯ ಎನಿಸಿದ ವಿದ್ಯಮಾನ.

ದೇಶವೆಲ್ಲ ಇವನು ಬೆಳೆದು ಮಾರುವುದನ್ನು ಅವಲಂಬಿಸಿರುತ್ತದೆ. ಉದ್ಯಮದ ಚಕ್ರಗಳು ಓಡುವುದು ಇವನ ಫಸಲನ್ನು ಆಧರಿಸುತ್ತದೆ. ಆದರೂ ಇವನು ಅತಂತ್ರ. ಇವನ ಉತ್ಪನ್ನಕ್ಕೆ ಬೆಲೆ ಬರುವ ಖಾತರಿ ಇಲ್ಲ.

ಯಾವುದೇ ವಸ್ತುವಿನ ವಿಷಯ ತೆಗೆದುಕೊಂಡರೂ ‘ಇದರ ಬೆಲೆ ಎಷ್ಟು’ ಎಂಬುದಾಗಿ ತಯಾರಕ ನಮೂದಿಸುತ್ತಾನೆ. ಅಂದರೆ ಮಾರುವವನದು ಮೇಲುಗೈ. ಆದರೆ ಕೃಷಿ ಉತ್ಪನ್ನದ ವಿಷಯ ಬಂದಾಗ ಮಾತ್ರ ರೈತನನ್ನು ಖರೀದಿದಾರ ‘ಇಷ್ಟಕ್ಕೆ ಕೊಡುತ್ತೀಯಾ?’ ಎಂದು ಪ್ರಶ್ನಿಸುತ್ತಾನೆ. ಅದೇ ವಿಪರ್ಯಾಸ.

ಸದ್ಯ ಕೃಷಿ ಉತ್ಪನ್ನವನ್ನು ಮಾರುವುದಕ್ಕಾಗಿಯೇ ರೈತನ ಪಾಲಿಗೆ ಒಂದು ಸೌಲಭ್ಯ ಉಂಟು. ಅದೇ ಎಪಿಎಂಸಿ-ಕೃಷಿ ಉತ್ಪನ್ನ ಮಾರಾಟ ಸಮಿತಿ ಅಥವಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ ಅಥವಾ ರೆಗ್ಯುಲೇಟೆಡ್ ಮಾರುಕಟ್ಟೆ ಯಾರ್ಡ್‌. ರೈತನಾದವನು ತಾನು ಬೆಳೆದಿದ್ದನ್ನು ಈ ಪ್ರಾಂಗಣಕ್ಕೆ ತರಬೇಕು. ಸರಕಾರಿ ಅಧಿಕಾರಿಯಾದ ಸಮಿತಿ ಕಾರ್ಯದರ್ಶಿ ಈ ಯಾರ್ಡಿನ ಯಜಮಾನ. ಈ ಸಮಿತಿ ರೈತ ಪ್ರತಿನಿಧಿಗಳು, ವರ್ತಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಆದುದು. ಈ ಅಧಿಕಾರಿ ಕೈಲಿ ಅಪರಿಮಿತ ಅಧಿಕಾರ. ವರ್ತಕನ ಹಸ್ತಕನಾಗಿ ಭ್ರಷ್ಟಾಚಾರಿ ನಿಸ್ಪೃಹನೂ ದಕ್ಷನೂ ಆದರೆ ವಹಿವಾಟನ್ನು ನಿಯಂತ್ರಿಸಲು ತೊಡಗುವ ಬಲಿಷ್ಠ ವರ್ತಕ ಶಕ್ತಿಗಳನ್ನೆಲ್ಲ ಬಲಿ ಹಾಕಿ ರೈತರಿಗೆ ಅನುಕೂಲ ಮಾಡಿಕೊಡುತ್ತಾನೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ವರ್ತಕರ ಲೈಸನ್ಸನ್ನೇ ರದ್ದು ಮಾಡಬಲ್ಲ ಅಧಿಕಾರ ಈ ಅಧಿಕಾರಿಗೆ ಉಂಟು.

ಅನೇಕ ಕಡೆ ಈ ಅಧಿಕಾರಿಯೂ ಅತಂತ್ರನಾಗಿಬಿಡುತ್ತಾನೆ. ಸ್ಥಳೀಯ ರಾಜಕಾರಣಿಗಳು ಎಪಿಎಂಸಿಗಳನ್ನು ತಮ್ಮ ರಾಜಕೀಯ ಚಟುವಟಿಕೆಯ ಕೇಂದ್ರಗಳಲ್ಲಿ ಸೇರಿದೆ ಎಂದು ಭಾವಿಸುತ್ತಾರೆ. ಆಗ ಅಧಿಕಾರಿಯ ಕೈಕಟ್ಟಿ ಹಾಕಿದಂತೆಯೇ ಆಗುತ್ತದೆ. ಮಾರುಕಟ್ಟೆ ಸಮಿತಿಯಲ್ಲೇ ಒಬ್ಬನೇ ಸ್ಥಳೀಯ ರಾಜಕಾರಣಿಯ ಹಿಂಬಾಲಕರು ಸೇರಿಕೊಂಡರೆ ಅವರದೇ ರಾಜ್ಯಭಾರ. ರೈತರು ಮತ್ತು ವರ್ತಕರ ಹಿತಸಾಧನೆಯೇ ಗೌಣ ಅನಿಸುತ್ತದೆ. ಸಾಮಾನ್ಯವಾಗಿ ಆಡಳಿತ ಪಕ್ಷದವರೇ ಇಲ್ಲೆಲ್ಲ ತುಂಬಿಕೊಳ್ಳುತ್ತಾರೆ. ಅಧಿಕಾರಿ ಆಗ ಸಮತೋಲ ಸಾಧಿಸಿದರೆ ಬಚಾವು. ತಪ್ಪಿದರೆ ಮಾರುಕಟ್ಟೆ ಯಾರ್ಡಿನಲ್ಲಿ ಅರಾಜಕತೆ.

ಎಪಿಎಂಸಿ ಎಂದರೆ ವಹಿವಾಟು ಕೇಂದ್ರ ಮಾತ್ರ. ರೈತನಾದವನು ಬೆಳೆಯನ್ನು ಮಾರುವ ಆತುರದಲ್ಲೇ ಇರುತ್ತಾನೆ. ಅವನಿಗೆ ರಕ್ಷಣೆ ಕೊಡಲು, ಅವನನ್ನು ಶೋಷಿಸಬೇಕೆಂದು ಕಾದಿರುವವರನ್ನು ಹದ್ದು ಬಸ್ತಿನಲ್ಲಿ ಇಡಲು ಈ ವ್ಯವಸ್ಥೆ. ಇಲ್ಲಿ ರಾಜಕೀಯ ತಲೆ ಹಾಕಬಾರದು.

ಸುಗ್ಗಿ ಆದ ತಕ್ಷಣ ಮಾರುವ ಆತುರ ತೋರಲು ಕಾರಣ ಹಲವಾರು. ಬೀಜಕ್ಕೆ ಗೊಬ್ಬರಕ್ಕೆ ನಾನಾ ಬಗೆಯ ಕೂಲಿ ಸಲ್ಲಿಕೆಗೆ, ಸ್ವಂತ ಊಟೋಪಚಾರಕ್ಕೆ ಬೇಕಾದ ಹಣಕ್ಕಾಗಿ ರೈತ ವರ್ಷದುದ್ದಕ್ಕೂ ಸಾಲ ಮಾಡಿರುತ್ತಾನೆ. ಅದನ್ನು ತೀರಿಸುವ ಆತುರ, ಯಾವುದಾದರೂ ಒಂದು ವರ್ಷ ಬೆಳೆ ಚೆನ್ನಾಗಿ ಆಗಿ, ಅದಕ್ಕೆ ಒಳ್ಳೆಯ ಬೆಲೆ ಬಂದರೆ ಮನೆಯಲ್ಲಿ ಮದುವೆ ಮುಂಜಿ ಮಾಡುವ ಕಾರ್ಯಕ್ರಮ ಅವನದು. ಆದರೆ ರೈತನು ಬೆಳೆದ ಸರಕು ಆತನ ಬಳಿ ಇದ್ದಷ್ಟು ಕಾಲ ಅದಕ್ಕೆ ಬೆಲೆ ಇರುವುದಿಲ್ಲ. ಆತ ಅದನ್ನು ಮಾರಿದಾಕ್ಷಣ ಅವರ ಬೆಲೆ ಏರುತ್ತದೆ. ಕೃಷಿ ಉತ್ಪನ್ನ ಎನ್ನುವುದು ಕೈಯಿಂದ ಕೈಗೆ ದಾಟಿದಂತೆಲ್ಲ ದುಬಾರಿ ಆಗುತ್ತಾ ಹೋಗುತ್ತದೆ.

ರೈತ ಕೂಡ ದವಸಧಾನ್ಯ ತನ್ನ ಬಳಿ ಇರಿಸಿಕೊಂಡು ತಿಂಗಳುಗಳ ನಂತರ ಮಾರಲು ಶಕ್ಯವಾದರೆ, ಆತ ಆತುರಪಡದಿದ್ದರೆ ಒಳ್ಳೆಯ ಬೆಲೆ ಬರುತ್ತದೆ. ಆದರೆ ಬಹುತೇಕ ರೈತರಿಗೆ ಆ ದಾರ್ಢ್ಯ ಇರುವುದಿಲ್ಲ. ಮಾರುತ್ತಾನೆ; ಬೇರೆಯವರು ದಾಸ್ತಾನು ಮಾಡಿ ಬೆಲೆ ಏರಿಸಿಕೊಳ್ಳುತ್ತಾರೆ. ಸ್ವತಃ ಜೀವನ ಸಾಗಿಸುತ್ತಾರೆ.

ಎಪಿಎಂಸಿಯಲ್ಲಿ ಅವನಿಗೆ ನ್ಯಾಯ ಸಿಗಬೇಕು ಎನ್ನುವುದು ಒಂದು ಸದಾಶಯ. ನ್ಯಾಯದ ಮಾತಿರಲಿ; ಆತ ಯಾರ್ಡಿಗೆ ತಂದ ಸರಕನ್ನು ಕಿತ್ತು ತಿನ್ನುವುದರಿಂದ, ಕಳ್ಳತನ ಮಾಡುವವರಿಂದ ಕಾಪಾಡುವುದೇ ಬಲು ಪ್ರಯಾಸವೆನಿಸುತ್ತದೆ. ಯಾರ್ಡಿಗೆ ಬಂದು ಬೀಡುಬಿಟ್ಟಾಗ ಅವನಿಗೆ ಅವನ ಬಂಡಿಯ ಎತ್ತುಗಳಿಗೆ ಆಹಾರ ನೆರಳು ಸಹಾ ಸಮಸ್ಯೆ ಆಗುವುದುಂಟು. ಈ ಗೋಜಲೇ ಬೇಡವೆಂದು ಎಷ್ಟೋ ವೇಳೆ ರೈತರು ಎಪಿಎಂಸಿಗೆ ಬರದೆಯೇ ಮಧ್ಯವರ್ತಿ ವರ್ತಕರಿಗೆ ಮಾರಿಬಿಡುವುದುಂಟು.

ರೈತ ತನ್ನ ಸರಕನ್ನು ಮಾರಿದ ಮೇಲೆ ಕಮಿಷನ್ ಏಜೆಂಟ್, ಸಗಟು ವರ್ತಕ, ಚಿಲ್ಲರೆ ವರ್ತಕ ಇವರ ಲಾಭಾಂಶಗಳು ನಾನಾ ಕೇಂದ್ರಗಳಿಗೆ ಸಾಗಾಣಿಕೆ ಆಗುವ ವೆಚ್ಚ ಇವೆಲ್ಲ ಸೇರಿಕೊಂಡು ಬಳಕೆದಾರನನ್ನು ತಲುಪುವ ವೇಳೆಗೆ ಒಂದಕ್ಕೆ ಒಂದೂವರೆ ಅಥವಾ ಎರಡರಷ್ಟು ಆಗುವುದೂ ಉಂಟು. ಬತ್ತ ಅಕ್ಕಿಯಾಗುವುದು, ಗೋಧಿಯು ಹಿಟ್ಟು ಅಥವಾ ರವೆ ಆಗುವುದು, ಸರಕು ಮಧ್ಯದಲ್ಲಿ ಶೀತಲಗೃಹದಲ್ಲಿ ನೆಲಸುವುದು ಮುಂತಾದವು ಇದ್ದರೆ ತುಟ್ಟಿಯಾಗುತ್ತಲೇ ಹೋಗುತ್ತದೆ. ರೈತ ಮಾರುವ ಬೆಲೆ ಹಾಗೂ ಬಳಕೆದಾರ ಕೊಳ್ಳುವ ಬೆಲೆ ಇವುಗಳ ನಡುವಣ ವ್ಯತ್ಯಾಸ ಏನಿರುವುದೋ ಅದನ್ನು ಕಡಿಮೆ ಮಾಡುವುದೇ ತಮ್ಮ ಗುರಿ ಎಂದು ಮಾರುಕಟ್ಟೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಎಲ್ಲ ಪ್ರಸಂಗಗಳಲ್ಲೂ ಈ ಉದ್ದೇಶ ಸಾಧನೆ ಆಗುವುದಿಲ್ಲ. ಅದೇ ದುರಂತ.

ಕರ್ನಾಟಕದಲ್ಲಿ ೧೧೪ ಮುಖ್ಯ ಮಾರುಕಟ್ಟೆ ಯಾರ್ಡುಗಳಿವೆ. ೩೪೩ ಉಪ ಮಾರುಕಟ್ಟೆ ಯಾರ್ಡುಗಳಿವೆ. ಎಷ್ಟೋ ಯಾರ್ಡು, ಉಪಯಾರ್ಡುಗಳು ಬಹುತೇಕ ಖಾಲಿ ಇರುತ್ತವೆ ಎನ್ನುವುದುಂಟು. ಆಯಾ ಋತುಮಾನಕ್ಕೆ ಅನುಸಾರ ಸ್ಥಳೀಯ ಕೃಷಿ ಉತ್ಪನ್ನ ಏನಿರುವುದೋ ಅದು ಮಾತ್ರ ಇಲ್ಲಿಗೆ ಬರುವುದರಿಂದ ಈ ಪರಿಸ್ಥಿತಿ. ಹಲವು ಕಡೆ ಯಾರ್ಡುಗಳು ಇದ್ದರೂ ವರ್ತಕರು ದಟ್ಟೈಸಿರುವ ಪೇಟೆಗಳಲ್ಲೇ ವಹಿವಾಟು ಮುಂದುವರೆದಿದೆ. ಇದೇನೇ ಇದ್ದರೂ ರಾಜ್ಯದಲ್ಲಿ ಒಳ್ಳೆಯ ಕೃಷಿ ಉತ್ಪನ್ನ ಮಾರುಕಟ್ಟೆ ಜಾಲ ನಿರ್ಮಾಣ ಆಗಿರುವುದಂತೂ ದಿಟ. ಮೂವತ್ತು ವರ್ಷಗಳಿಂದ ಈ ಜಾಲ ಸತತವಾಗಿ ಬಲಗೊಂಡಿದೆ. ಇಲ್ಲಿ ವಸೂಲಾಗುವ ಶುಲ್ಕ ಪೂರ್ತಿಯಾಗಿ ಇವುಗಳ ಅಭಿವೃದ್ಧಿಗೆಂದೇ, ಬೆಲೆ ಸ್ಥಿರತೆಗೆಂದೇ ವಿನಿಯೋಗವಾಗುತ್ತಿಲ್ಲ. ಆ ಮಾತು ಬೇರೆ.

ರಾಜ್ಯಕ್ಕಿಂತ ಮಹಾರಾಷ್ಟ್ರದ ಮಾರುಕಟ್ಟೆ ಜಾಲ ಹಳೆಯದು. ಅವರದೇ ಮಾದರಿ ಕರ್ನಾಟಕದ್ದು. ಎರಡೂ ರಾಜ್ಯಗಳ ಯಾರ್ಡುಗಳಿಗೆ ಬರದೇ ಇರುವ ಸರಕೇ ಇಲ್ಲ. ಸೌದೆ, ಜಾನುವಾರು, ಅರಣ್ಯ ಉತ್ಪನ್ನ ಹೀಗೆ ಯಾವುದೇ ಸರಕನ್ನು ಎಪಿಎಂಸಿ ಯಾರ್ಡಿನ ವ್ಯಾಪ್ತಿಗೆ ಸೇರಿಸುತ್ತಾರೋ, ಅವೆಲ್ಲ ನಿಯಂತ್ರಣಕ್ಕೆ ಒಳಪಡುತ್ತವೆ.

ಜಾಗತೀಕರಣದ ಗಾಳಿ ಬೀಸಿದಂತೆ ಈ ಎಪಿಎಂಸಿ ಅಸ್ತಿತ್ವ ಉಳಿದೀತೆ ಎಂಬ ಅಂಜಿಕೆ ಮೂಡಿರುವುದು ಸಹಜ. ಬಹುರಾಷ್ಟ್ರೀಯ ಮಾದರಿಯ ವಹಿವಾಟು ಸಂಸ್ಥೆಗಳು ಎಪಿಎಂಸಿ ಮಾದರಿಯ ಹಾಗೆ ಅದಕ್ಕೆ ಪೈಪೋಟಿ ನೀಡುವಂಥ ಚಟುವಟಿಕೆಗೆ ಸಜ್ಜಾಗಿವೆ. ಒಂದು ರೀತಿಯ ಏಕಸ್ವಾಮ್ಯ ಹೊಂದಿರುವ ಈ ವ್ಯವಸ್ಥೆ ಈಗ ತಡಬಡಾಯಿಸಬೇಕಾದುದು ಸಹಜವೇ.

ಒಂದು ಕಾಲಕ್ಕೆ ಉದ್ಯಮದವರು ತಮ್ಮೆಲ್ಲ ಹಣಕಾಸು ಅಗತ್ಯಗಳಿಗೆ ಮುಖ್ಯವಾಗಿ ಬ್ಯಾಂಕುಗಳನ್ನೇ ಅವಲಂಬಿಸಿದ್ದರು. ಈಗ ಬಂಡವಾಳವು ದೇಶದ ಹೊರಗಿನಿಂದ ಬರುತ್ತಿರುವುದರಿಂದ ಉದ್ಯಮದ ಪಾಲಿಗೆ ಒಂದು ಸಮಸ್ಯೆಯೇ ಅಲ್ಲ. ಹಳ್ಳಿಗಳಲ್ಲಿ ಕೂಡಾ ಹರಡಿಕೊಂಡಿರುವ ಬ್ಯಾಂಕು ಶಾಖೆಗಳ ಜಾಲವನ್ನು ಇನ್ನು ಯಾವ ಯಾವ ರೀತಿ ಬಳಸಿಕೊಳ್ಳಬಹುದೆಂಬ ವಿಚಾರ ನಡೆದಿದೆ.

ಕೊರಿಯರ್ ಮೂಲಕ ಕಾಗದಪತ್ರ ಹಾಗೂ ಭಾಂಗಿಗಳನ್ನು ಕಳುಹಿಸುವ ಖಾಸಗಿ ವ್ಯವಸ್ಥೆ ಆರಂಭವಾದ ಮೇಲೆ ಅಂಚೆ ವ್ಯವಸ್ಥೆಗೆ ಇದ್ದ ಪ್ರಾಶಸ್ತ್ಯ ಕಡಿಮೆಯೇನೂ ಆಗಿಲ್ಲ. ನಗರಗಳಿಂದ ದೂರ ಇರುವ ಹಳ್ಳಿಗಳಿಗೆ ಕೊರಿಯರ್ ಮೂಲಕ ಅಂಚೆ ಕಳುಹಿಸಬೇಕಾದರೆ ಭಾರಿ ದುಬಾರಿ ಎನಿಸುತ್ತದೆ. ಏಕೆಂದರೆ ಅವರ ಬಳಿ ಅಷ್ಟು ವ್ಯಾಪಕ ಜಾಲವೇ ಇರುವುದಿಲ್ಲ.

ಟೆಲಿಕಾಂ ವಲಯದ ಜಾಗತೀಕರಣದಿಂದಾಗಿ ಮೊಬೈಲ್‌ ಸೇವೆ ಇಟ್ಟಾಡಿ ಹೋಗಿದೆ; ಅದರದು ನಗರಗಳಲ್ಲಿ ಮಾತ್ರ. ಹಳ್ಳಿಗಳಿಗೂ ಟೆಲಿಕಾಂ ಕ್ರಾಂತಿಯ ಫಲ ಸಿಗಬೇಕೆಂದರೆ ಸರ್ಕಾರಿ ವಲಯದ ಬಿಎಸ್‌ಎನ್‌ಎಲ್‌ನಿಂದ ಮಾತ್ರವೇ ಸಾಧ್ಯ.

ಸರ್ಕಾರದ ಪ್ರೋತ್ಸಾಹದಿಂದ ಹಾಗೂ ವಿದೇಶಿ ನೆರವಿನ ತಂತ್ರಜ್ಞಾನದಿಂದ ದೇಶದಲ್ಲಿ ಕ್ಷೀರಕ್ರಾಂತಿ ನಡೆಯಿತು. ಹಳ್ಳಿಗಾಡಿನ ಜೋಪಡಿಯ ಮಹಿಳೆಯರು ಸಹಾ ತಮ್ಮ ಪಾಲಿಗೆ ಹೆಚ್ಚುವರಿ ಎನಿಸಿದ ಹಲವು ನೂರು ಮಿಮೀ ಹಾಲನ್ನು ಸಹಾ ಸಹಕಾರಿ ಡೈರಿ ಜಾಲಕ್ಕೆ ಪೂರೈಸಬಲ್ಲರು. ಅದರಿಂದ ಅವರ ಜೀವನೋಪಾಯಕ್ಕೆ ಕಿಂಚಿತ್ತು ಸಹಾಯ ಆಗುತ್ತದೆ ನಿಜ. ಖಾಸಗಿ ಡೈರಿಗಳೂ ಬಂದಿವೆ. ಎಲ್ಲವೂ ಸೀಮಿತ ಜಾಲ ಹೊಂದಿರುವಂಥವು.

ಬೆಂಗಳೂರು ಮೈಸೂರು ಕಡೆ ತೋಟದ ಉತ್ಪನ್ನಗಳಾದ ಹಣ್ಣು ತರಕಾರಿಗಳನ್ನು ಹಳ್ಳಿಗಾಡಿನವರಿಂದ ಸಂಗ್ರಹಿಸಿ ಮಾರಾಟ ಮಾಡುವ ಸಹಕಾರಿ ವ್ಯವಸ್ಥೆ ಕೂಡಾ ಹಾಲಿನ ಮಾರಾಟ ವ್ಯವಸ್ಥೆಯನ್ನೇ ಹೋಲುತ್ತದೆ. ಆದರೆ ಖಾಸಗಿ ಸಗಟು ತರಕಾರಿ ಮಾರಾಟಗಾರರು ವಾಸ್ತವವಾಗಿ ಖಾಸಗಿ ಡೈರಿಗಳಿಗಿಂತ ಹೆಚ್ಚು ಪ್ರಬಲರು.

ಬಸ್ ಸಂಚಾರ ವ್ಯವಸ್ಥೆ ಸಹಾ ಇದೇ ಸಾಲಿಗೆ ಸೇರುತ್ತವೆ. ಏಕಸ್ವಾಮ್ಯ ಧೋರಣೆಯ ಸಾರಿಗೆ ಸಂಸ್ಥೆ ಅಲ್ಲಲ್ಲಿ ಖಾಸಗಿಯವರಿಗೆ ಅವಕಾಶ ಕೊಟ್ಟಿದೆ. ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟರೆ ಖಾಸಗಿ ಬಸ್ ಸಂಸ್ಥೆಗಳು ಬೇರೆಡೆ ಬಹಳ ಒಳ್ಳೆಯ ಹೆಸರು ಗಳಿಸಿಲ್ಲ. ಸಾರಿಗೆ ಸಂಸ್ಥೆ ಹರಡಿಕೊಂಡಷ್ಟು ವ್ಯಾಪಕವಾಗಿ ಗ್ರಾಮ ಪ್ರದೇಶಗಳಲ್ಲಿ ಹರಡಿಕೊಳ್ಳಲು ಖಾಸಗಿ ವ್ಯವಸ್ಥೆಗೆ ಸಾಧ್ಯವಾಗಿಲ್ಲ.

ಹೀಗೆ ದೃಷ್ಟಾಂತಗಳನ್ನು ಬೆಳೆಸುತ್ತಾ ಹೋಗಬಹುದು. ಯಾವುದೇ ನಿರ್ದಿಷ್ಟ ದೃಷ್ಟಾಂತವನ್ನು ತೆಗೆದುಕೊಂಡರೂ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ ಸರ್ಕಾರಿ ವಲಯದ ಉದ್ಯಮ ಅಥವಾ ಸೇವಾ ವ್ಯವಸ್ಥೆ ಇರುವುದರಿಂದಲೇ ಗ್ರಾಮ ಪ್ರದೇಶಗಳಿಗೆ ಲಾಭವಾಗುತ್ತಿರುವುದು. ಖಾಸಗಿಯವರ ಸೇವೆ ಅಥವಾ ಉದ್ಯಮ ಬಹುಪಾಲು ನಗರ ಪ್ರದೇಶ ಪ್ರಧಾನ ಆಗಿರುತ್ತವೆ.

ಈಗ ವಿದೇಶಿ ವ್ಯವಹಾರಸ್ಥರು ಗ್ರಾಮ ಪ್ರಧಾನ ಉತ್ಪನ್ನಗಳಿಗೂ ಕೈ ಹಾಕಿರುವುದರಿಂದ ಎಪಿಎಂಸಿಗಳಿಂದ ಸುಸಜ್ಜಿತ ವ್ಯವಸ್ಥೆ ನಿರುಪಯುಕ್ತ ಆಗುವುದೇ?

ಬದಲಾವಣೆಯ ಗಾಳಿ ಬೀಸಿದಾಗೆಲ್ಲ ಇಂಥ ಪ್ರಶ್ನೆ ಏಳುತ್ತದೆ. ಪ್ರತಿಸ್ಪರ್ಧಿ ಬಂದಾಗ ಎಂಥ ದುರ್ಬಲನೂ ಪ್ರತಿರೋಧ ಒಡ್ಡುತ್ತಾನೆ. ಆಗ ವ್ಯವಸ್ಥೆಗಳು ವಹಿಸುವ ಪಾತ್ರ ಹಿಂದೆ ಮುಂದೆ ಅಥವಾ ದೊಡ್ಡದು ಚಿಕ್ಕದು ಆಗುತ್ತದೆ. ಪ್ರತಿಸ್ಪರ್ಧೆ ಪರಸ್ಪರ ಪ್ರಯೋಜನಕಾರಿ ಎಂದು ಉಭಯತ್ರರಿಗೂ ಮನವರಿಕೆ ಆದಾಗ ಪರಸ್ಪರ ಪೂರಕ ಆಗಿ ಪರಿಣಮಿಸುತ್ತವೆ.

ವಿದೇಶಿ ಮೂಲಕ ವ್ಯವಹಾರಸ್ಥರು ಬಹುರಾಷ್ಟ್ರೀಯ ಶೈಲಿಯಲ್ಲಿ ವ್ಯಾಪಾರ ಆರಂಭಿಸಿದಾಗಲೂ ಹೀಗೆಯೇ ಆಗುವುದು. ಸರ್ಕಾರಿ ವ್ಯವಸ್ಥೆ ಜೊತೆ ಸಹಕಾರಿ ವ್ಯವಸ್ಥೆ ಮತ್ತು ಖಾಸಗಿ ವ್ಯವಸ್ಥೆಗಳು ಹೇಗೆ ಜೊತೆ ಜೊತೆಯಾಗಿ ಅಸ್ತಿತ್ವದಲ್ಲಿರುವುವೋ ಅದೇ ರೀತಿ ವಿದೇಶಿ ಮೂಲದವರ ವ್ಯವಹಾರದ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅದು ಆಗುವ ತನಕ ಗೊಂದಲ, ಅನುಮಾನ ಮತ್ತು ಸಂಘರ್ಷಗಳು ಇದ್ದೇ ಇರುತ್ತವೆ. ವಿದೇಶಿ ಮೂಲ ವ್ಯಾಪಾರ ಎಂದಾಗ ಆಮದು ವಸ್ತು ಸಹಾ ಸೇರಿಕೊಳ್ಳುತ್ತದೆ ಎಂಬುದು ಮುಖ್ಯ.

ಜಾಗತೀಕರಣದಿಂದ ಏನು ಲಾಭವಾಗುವುದೋ ಎಂದು ಬಳಕೆದಾರ ಹೇಗೆ ಎದುರು ನೋಡುತ್ತಿದ್ದಾನೋ ಅದೇ ರೀತಿ ರೈತ ಸಹಾ ಕಾಯಬೇಕು. ತನ್ನ ಉತ್ಪನ್ನಕ್ಕೆ ಬೇಡಿಕೆ ತಪ್ಪಿದರೆ, ತನ್ನ ಜೀವನ ಶೈಲಿಗೆ ಧಕ್ಕೆ ಒದಗಿಸಿದರೆ ಪ್ರತಿರೋಧಕ್ಕೆ ಹಿಂಜರಿಯಬಾರದು.

೧೫.೧೦.೨೦೦೩