‘ರಾಜ್ಯಗಳಳಿಯಲಿ, ರಾಜ್ಯಗಳುಳಿಯಲಿ; ತನ್ನೀ ಕಾರ್ಯವ ಬಿಡೆನೆಂದು…. ಉತ್ತುಳುವ ಬಿಡುವುದೆ ಇಲ್ಲ…. ಉಳುವಾ ಯೋಗಿಯ ನೋಡಲ್ಲಿ’. ಕವಿವಾಣಿ ಹೀಗೆ ಕಿವಿಯಲ್ಲಿ ಗುಂಯ್‌ಗುಡುವುದು ತಪ್ಪುವುದೇ ಇಲ್ಲ. ಏನೇ ಬದಲಾವಣೆಗಳು ಜಾರಿಗೆ ಬಂದರೂ ನೇಗಿಲ ಯೋಗಿಯ ಈ ಧೋರಣೆ, ಈ ಕಾಯಕ ತಪ್ಪುವುದೇ ಇಲ್ಲ.

ಕೃಷಿ ರಂಗ ಈಗ ನಿಸ್ತೇಜಗೊಂಡಿದೆ. ಹಸಿರುಕ್ರಾಂತಿಯ ನೆನಪು ಕಾಡುತ್ತದೆ. ಇಂಥ ಇನ್ನೊಂದು ಕ್ರಾಂತಿ, ವಿಪ್ಲವ ಸಂಭವಿಸುವುದೇನೋ ಎನ್ನುವ ಕಾತರ ಸರ್ವತ್ರ.

ಈ ಮಧ್ಯೆ ನಾವು ವಿಶ್ವ ವಾಣಿಜ್ಯ ಸಂಸ್ಥೆ ಸೇರಿದ ಮೇಲೆ ಅನಿಶ್ಚಿತತೆ ಹೆಚ್ಚಾಗಿದೆ. ಅದಕ್ಕೆ ಕಾರಣಗಳು ಎರಡು. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಸ್ವಂತ ಬಳಕೆಗಾಗಿ ಬೆಳೆ ತೆಗೆಯುವುದು ಹೋಗಬೇಕೆನ್ನುವ ವಿಚಾರ. ರಫ್ತಿಗೆ ಯುಕ್ತ ಎನ್ನುವಂಥ, ರಫ್ತು ಸಾಧ್ಯವಾಗುವಂಥ ಬೇಸಾಯ ನಮ್ಮದಾಗಬೇಕು. ಈ ಅನಿವಾರ್ಯತೆ ಒಂದು ಕಾರಣ.

ಕೃಷಿ ಎಂದಾಗ ಬರಿದೆ ಆಹಾರ ಧಾನ್ಯ ಅಥವಾ ಕಚ್ಚಾ ಸಾಮಗ್ರಿ ಎನ್ನುವಂಥ ಕೃಷಿ ಉತ್ಪನ್ನ ಕೈಗೂಡಿಸಿಕೊಳ್ಳುವುದಷ್ಟೇ ಮುಖ್ಯವಲ್ಲ. ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್ ಮಾರುಕಟ್ಟೆ ತಂತ್ರಗಳ ಅನ್ವಯ ಈ ಮಾರ್ಗಗಳಿಂದ ಕೃಷಿ ಉತ್ಪನ್ನದ ಮೌಲ್ಯ ಹೆಚ್ಚುವಂತೆ ಮಾಡಬೇಕು. ಅದನ್ನು ಬಳಕೆದಾರನಿಗೆ ಮುಟ್ಟಿಸಿ ಆಂತರಿಕ ಬಳಕೆ ಹೆಚ್ಚಿಸಬೇಕು. ಈ ರೀತಿಯ ಚಟುವಟಿಕೆ ಗ್ರಾಮಗಳದು ಆಗಬೇಕು.

ಈ ಎರಡೂ ದಿಕ್ಕಿನ ಸಾಧನೆ ಭಾರತದ ಗ್ರಾಮಸ್ಥನ ಪಾಲಿಗೆ ಸಾಧ್ಯವಾದರೆ ಅದೇ ಒಂದು ವಿಪ್ಲವ. ಆದರದು ಸುಲಭವೇ? ಆಡಳಿತ ಚುಕ್ಕಾಣಿ ಹಿಡಿಯುವ ವಿವಿಧ ಪಕ್ಷಗಳ ರಾಜಕಾರಣಿಗಳು ಈ ದಿಕ್ಕಿನಲ್ಲಿ ಸಮರ್ಥ ನಾಯಕತ್ವ ಒದಗಿಸಬಲ್ಲರೇ?

ಆಶಾದಾಯಕ ಉತ್ತರವು ಈ ಪ್ರಶ್ನೆಗಳನ್ನು ಹಾಕಿದಾಗ ಬರುವುದಿಲ್ಲ.

ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಓ) ಅಸ್ತಿತ್ವಕ್ಕೆ ಬರಲು ಸ್ವತಃ ಕಾರಣರಾದ ಭಾರತದ ನಾಯಕರು, ಅದರ ಮುಷ್ಟಿಯಲ್ಲಿ ಸಿಕ್ಕಿಬಿದ್ದಿದ್ದಾರೆಯೇ ಹೊರತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಹುನ್ನಾರವೆಂಬ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಭಾದರದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳು ಇನ್ನೂ ವಾಣಿಜ್ಯ ಕುರಿತ ವಿಚಾರಗಳಿಗೆ ಸೀಮಿತ ಆಗಿವೆ. ಕೃಷಿ ಕ್ಷೇತ್ರಕ್ಕೆ ವ್ಯಾಪಿಸಿಲ್ಲ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕ್ರಮಗಳನ್ನು ಡಬ್ಲ್ಯುಟಿಓ ವ್ಯವಸ್ಥೆಗೆ ಒಳಪಟ್ಟಂತೆ ಕೈಗೊಂಡಾಗ ನಿಜವಾದ ಅರ್ಥದಲ್ಲಿ ಬಿಸಿ ಮುಟ್ಟುತ್ತದೆ. ಈಗ ಕೃಷಿ ಕುರಿತ ಒಪ್ಪಂದ (ಅಗ್ರಿಮೆಂಟ್ ಆನ್ ಅಗ್ರಿಕಲ್ಚರ್‌ಎಓಎಗೆ) ಸಹಿ ಹಾಕಿ ಆಗಿದೆ. ಅದರ ಪ್ರಕಾರ ಹೊರಗಿನವರಿಂದ ರಕ್ಷಣೆ ಕೊಡುವಂಥ ತೆರಿಗೆ ಸುಂಕಗಳ ಗೋಡೆಗಳನ್ನು ಎಲ್ಲ ರಾಷ್ಟ್ರಗಳೂ ಕೆಡವಿ ಹಾಕಬೇಕು; ಆಂತರಿಕವಾಗಿ ಸಹಾ ಸರ್ಕಾರದ ಕಡೆಯಿಂದ ಕೃಷಿಗೆ ಒತ್ತಾಸೆ ಕೊಡುವ ಚಟುವಟಿಕೆಯು ಡಬ್ಲ್ಯುಟಿಓ ಆಶಯಗಳಿಗೆ ಒಳಪಟ್ಟಿರಬೇಕು; ಹೆಚ್ಚು ಹೆಚ್ಚು ರಫ್ತು ಸಾಧಿಸಲೆಂದು ಸಬ್ಸಿಡಿ ಕೊಡುವುದನ್ನು ನಿಯಂತ್ರಿಸಬೇಕು.

ಈ ಮೂಲಕ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಕೃಷಿಗೆ ಏಕರೂಪ ಒತ್ತಾಸೆ ಸಿಗುವಂತಾಗಬೇಕು. ಎಂಬುದು ಆಶಯ.

ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳು ಯಾವ ಯಾವ ಮಟ್ಟಕ್ಕೆ ತೆರಿಗೆ ಸುಂಕಗಳನ್ನು ಇಳಿಸಬೇಕು ಎಂಬೆಲ್ಲಾ ಲೆಕ್ಕಾಚಾರಗಳು ಅಂಗೀಕೃತವಾಗಿವೆ. ಆದರೆ ಅವೆಲ್ಲ ಮುಂದುವರೆದ ರಾಷ್ಟ್ರಗಳಿಗೆ ಮಾತ್ರ ಅನುಕೂಲಕರ ಆಗಿ ಪರಿಣಮಸಿವೆ.

ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಸಂಶೋಧನೆ, ತರಬೇತಿ, ವಿಸ್ತರಣೆ ಕಾರ್ಯ ಪೇಟೆ ಮಾಹಿತಿ ಪೂರೈಕೆ ಮುಂತಾದ ಬಾಬುಗಳಿಗೆ ಅಧಿಕಾಧಿಕ ಹಣವನ್ನು ದೊಡ್ಡ ರಾಷ್ಟ್ರಗಳು ಖರ್ಚು ಮಾಡುತ್ತವೆ. ಅದಕ್ಕೆ ಮಿತಿ ಹೇರಿಲ್ಲ. (ಭಾರತದಂಥ ರಾಷ್ಟ್ರಗಳಲ್ಲಿ ಈ ಬಾಬಿಗೆ ಹಣವೇ ಇರುವುದಿಲ್ಲ)

ಅಮೆರಿಕಾದಲ್ಲಿ ಕನಿಷ್ಠ ಬೆಂಬಲ ಬೆಲೆ ಹಾಗೂ ಮಾರುಕಟ್ಟೆ ಬೆಲೆ ನಡುವಣ ವ್ಯತ್ಯಾಸದಷ್ಟು ಹಣವನ್ನು ರೈತರಿಗೆ ನಗದು ಪರಿಹಾರವಾಗಿ ಕೊಡುತ್ತಾರೆ.

ರಫ್ತು ಸಂದಿಗ್ಧತೆ ಬರದ ಹಾಗೆ ಮಾಡಲು ಉತ್ಪಾದನೆ ಮೇಲೆ ನಿರ್ಬಂಧ ಹಾಕಿ ಐರೋಪ್ಯ ರಾಷ್ಟ್ರಗಳಲ್ಲಿ ನಗದು ಪರಿಹಾರವಾಗಿ ಕೊಡುತ್ತಾರೆ.

ರಫ್ತು ಸಂದಿಗ್ಧತೆ ಬರದ ಹಾಗೆ ಮಾಡಲು ಉತ್ಪಾದನೆ ಮೇಲೆ ನಿರ್ಬಂಧ ಹಾಕಿ ಐರೋಪ್ಯ ರಾಷ್ಟ್ರಗಳಲ್ಲಿ ನಗದು ಪರಿಹಾರವನ್ನು ನೇರವಾಗಿ ಕೊಡುತ್ತಾರೆ.

ಈ ಎರಡೂ ಕ್ರಮಗಳಿಗೆ ಒಪ್ಪಮದದ ಪ್ರಕಾರ ಅವಕಾಶವುಂಟು. ಭಾರತದಂಥ ರಾಷ್ಟ್ರಗಳು ಕೃಷಿ ರಂಗದ ಹಣ ಹೂಡಿಕೆಗೆ ಸಬ್ಸಿಡಿ, ಗೊಬ್ಬರ, ಬೀಜ ಮುಂತಾದ ಮೂಲ ಸಾಮಗ್ರಿ ಬೆಲೆ ಮೇಳೆ ಸಬ್ಸಿಡಿ ಕೊಡುವುದಕ್ಕೆ ಮಾತ್ರ ಅವಕಾಶವಿಲ್ಲ.

ಸಂಶೋಧನೆ ಇತ್ಯಾದಿ ಬಾಬಿಗೆ ದೊಡ್ಡ ದೇಶಗಳು ಕೊಡುವ ಹಣ ಹೀಗಿರುತ್ತದೆ: ಅಮೆರಿಕದ ಕೃಷಿ ಜಿಡಿಪಿ (ಒಟ್ಟಾರೆ ಅಂತರಿ ಕೃಷಿ ಉತ್ಪನ್ನ) ಮೊತ್ತದ ಶೇ ೩೫ ಕೆನಡಾ ಮತ್ತು ಜಪಾನು ಅದರ ಶೇ. ೧೩.

ಭಾರತ ಕೊಡುವುದು ಕೃಷಿ ಜಿಡಿಪಿಯ ಶೇ ೩.

ಇವೆಲ್ಲ ಒಂದಿಲ್ಲೊಂದು ರೂಪದ ಸಬ್ಸಿಡಿ ಮಾತು ಆಯಿತು. ಹೊರದೇಶಗಳಿಂದ ತಮ್ಮ ಮಾರುಕಟ್ಟೆ ಮೇಲೆ ಆಗುವ ದಾಳಿ ವಿರುದ್ಧ ದೊಡ್ಡವರು ನಾನಾ ತೆರಿಗೆ ಸುಂಕದ

ಕೋಟೆ ಕಟ್ಟುತ್ತಾರೆ. ಅದೇ ವೇಳೆ ತಾವು ಹೊರಗಡೆಗೆ ಮಾರುವ ಸರಕು ಅಗ್ಗವಾಗಿರುವಂತೆ ಮಾಡಲು ಹಣ ಖರ್ಚು ಮಾಡುತ್ತಾರೆ. (ರಫ್ತು ಸಬ್ಸಿಡಿಯ ನೇರ ಸ್ವರೂಪ ಅಲ್ಲಿ ಇಲ್ಲದೆಯೂ ಇರಬಹುದು). ಈ ಉದ್ದೇಶಕ್ಕೆ ಖರ್ಚುಮಾಡುವ ಹಣ ಐರೋಪ್ಯ ರಾಷ್ಟ್ರಗಳು ಕೃಷಿ ಜಿಡಿಪಿಯ ಶೇ. ೪೦, ಕೆನಡಾ ಶೇ. ೩೫ ಅಮೆರಿಕ ಶೇ. ೨೫.

ಈ ಎರಡೂ ಬಾಬು, ಎಂದರೆ ಒತ್ತಾಸೆ ಕಾರ್ಯಕ್ರಮಗಳು ಮತ್ತು ತೆರಿಗೆ ಸುಂಕ ಕ್ರಮಗಳು ಸೇರಿ ಒಟ್ಟು ವೆಚ್ಚ ಮಾಡುವ ಹಣವು ಅರ್ಥವಿಲ್ಲದಷ್ಟು ವಿಪರೀತ: ಐರೋಪ್ಯ ರಾಷ್ಟ್ರಗಳು ಶೇ.೬೪, ಜಪಾನು ಶೇ. ೭೩, ಅಮೆರಿಕ ಶೇ. ೬೦ ಕ್ಕೂ ಹೆಚ್ಚು. ತೆರಿಗೆ ಸುಂಕ ಬಾಬಿನ ವೆಚ್ಚವನ್ನು ದೊಡ್ಡ ರಾಷ್ಟ್ರಗಳು ೨೦೦೦ ಹೊತ್ತಿಗೆ ಶೇ. ೩೭ ಕ್ಕೂ ಅಭಿವೃದ್ಧಿ ರಾಷ್ಟ್ರಗಳು ಶೇ. ೨೦೦೪ ಹೊತ್ತಿಗೆ ಶೇ. ೨೪ ಕ್ಕೂ ಇಳಿಸಬೇಕೆಂದು ಡಬ್ಲ್ಯುಟಿಓ ನಿಗದಿಪಡಿಸಿದೆ. ಆ ಸಂಬಂಧ ಖಚಿತ ವರದಿಗಳಿಲ್ಲ.

ಒತ್ತಾಸೆ ಕಾರ್ಯಕ್ರಮಗಳ ವಿಚಾರದಲ್ಲೂ ಇದೇ ಪ್ರಮಾಣದ ಮಿತಿ ಹೇರಲಾಗಿದೆ. ಇವು ಯಾವುವೂ ಭಾರತದಂಥ ಅಭಿವೃದ್ಧಿ ರಾಷ್ಟ್ರಗಳ ಪಾಲಿಗೆ ಸಿಲುಕುವುದಿಲ್ಲ. ಅದರ ವಹಿವಾಟಿನ ಗಾತ್ರ, ನೆರವಿನ ಪ್ರಮಾಣ ಮುಂತಾದ ಯಾವುವೂ ಸರಿ ಸಮ ಎನಿಸಿಕೊಳ್ಳುವುದಿಲ್ಲ.

ಭಾರತವು ಕೃಷಿ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯೇನೂ ಕಡಿಮೆ ಇಲ್ಲ. ಹಸಿರುಕ್ರಾಂತಿ ಅವಧಿ ಮತ್ತು ಅದಕ್ಕೆ ಮುಂಚಿನ ದಿನಗಳೂ ಸೇರಿದಂತೆ ಸಮೀಕ್ಷಿಸಿದಾಗ ಸಂತೋಷವೇ ಆಗುತ್ತದೆ. ೧೯೫೦ರಿಂದ ಮೊದಲ್ಗೊಂಡು ೨೦೦೧ರ ತನಕ ಪ್ರತಿ ಹೆಕ್ಟೇರಿನ ಇಳುವಳಿ ಕೆ.ಜಿ.ಗಳಲ್ಲಿ ಹೀಗೆ ಹೆಚ್ಚಾಗಿದೆ. ಅಕ್ಕಿ ೬೬೮ ರಿಂದ ೨೦೮೬, ಗೋಧಿ ೬೫೫ ರಿಂದ ೨೭೭೦, ಜೋಳ ೩೫೩ ರಿಂದ ೭೮೫, ಮೆಕ್ಕೆಜೋಳ ೫೪೭ ರಿಂದ ೨೦೧೮, ಬೇಳೆಕಾಳು ೪೪೧ ರಿಂದ ೬೦೯.

ಒಟ್ಟಾರೆ ಆಹಾರ ಧಾನ್ಯ ೫೫೨ ರಿಂದ ೧೭೩೯.

ಎಣ್ಣೆಕಾಳು ೪೮೧ ರಿಂದ ೮೫೬. ಹತ್ತಿ ೮೮ ರಿಂದ ೧೮೯.

(ಎಲ್ಲವೂ ಕೇಂದ್ರ ವಾರ್ಷಿಕ ಆರ್ಥಿಕ ಸಮೀಕ್ಷೆಗಳ ಅಂಕಿ ಸಂಖ್ಯೆ)

ಆದರೆ ಇವುಗಳ ಇಳುವರಿಯನ್ನು ಇದರ ಎರಡರಿಂದ ಮೂರುಪಟ್ಟು ಹೆಚ್ಚಿಸುವ ಮಾರ್ಗೋಪಾಯಗಳಿವೆ. ಅದಕ್ಕಾಗಿ ದೊಡ್ಡ ರಾಷ್ಟ್ರಗಳು ಕೈಗೊಂಡ ಕ್ರಮಗಳನ್ನು ಅದೇ ಪ್ರಮಾಣದಲ್ಲಿ ಕೈಗೊಳ್ಳಬೇಕು. ರೈತ ಕಲಿಯಲಾಗದ್ದು ಏನೂ ಅಲ್ಲ. ಆದರೆ ಏನೆಲ್ಲ ಅವನ ಕೈಗೆಟುಕಿಸಬೇಕೋ ಅದರ ವ್ಯವಸ್ಥೆ ಆಗುವುದಿಲ್ಲ. ಅದು ಆಗುವತನಕ ಭಾರತದಲ್ಲಿ ಉತ್ಪಾದಕತೆ ಏರುವುದಿಲ್ಲ.

ಉತ್ಪಾದಕತೆ ಏರದೆ ವಿಶ್ವ ಮಾರುಕಟ್ಟೆಯ ಬೆಲೆಗಳಲ್ಲಿ ಕೃಷಿ ಉತ್ಪನ್ನ ಪೂರೈಸಲು ಭಾರತಕ್ಕೆ ಸಾಧ್ಯವಾಗುವುದಿಲ್ಲ. ವಿದೇಶಗಳು ನಾನಾ ವಿಧದ ಸಬ್ಸಿಡಿಗಳನ್ನು ನಿಲ್ಲಿಸಿದರೂ, ಭಾರತದ ದುಬಾರಿ ವೆಚ್ಚಕ್ಕಿಂತ ಕಡಿಮೆ ಮಟ್ಟದ ವೆಚ್ಚದಲ್ಲಿ ಅಲ್ಲಿನವರು ಬೆಳೆ ತೆಗೆಯಬಲ್ಲರು. ಅದು ವಾಸ್ತವ.

ಜೊತೆಗೆ ಭಾರತಕ್ಕೆ ತನ್ನದೇ ಆದ ಸಮಸ್ಯೆಗಳಿವೆ. ದೊಡ್ಡ ಸಮಸ್ಯೆ ಎಂದರೆ ನೀರಿನದು. ನದಿ ಸಮುದ್ರಗಳಿಗೆ ಲಗತ್ತಾದ ಕಾರ್ಯಕ್ರಮಗಳೇ ನಮ್ಮಲ್ಲಿ ಇಲ್ಲ. ಅದಕ್ಕೆ ಮೀರಿದ ಸಮಸ್ಯೆ ಎಂದರೆ ಭೂಮಿಯ ಮೇಲೆ ಇರುವ ಒತ್ತಡ.

ದೇಶದ ಭೂಪ್ರದೇಶ ೩೦ ಕೋಟಿ ಹೆಕ್ಟೇರ್. ಸಸ್ಯ ಪೋಷಣೆಗೆ ಯೋಗ್ಯವಾದ ಭೂಮಿ ೨೬ ಕೋಟಿ ಹೆಕ್ಟೇರ್‌. ಅದರಲ್ಲಿ ಬಂಜರು ಎನಿಸಿಕೊಂಡಿದ್ದು ೮ ಕೋಟಿ ಹೆಕ್ಟೇರು. ಮಿಕ್ಕ ೧೮ ಕೋಟಿ ಹೆಕ್ಟೇರ್ ಮಾತ್ರವೇ ಕೃಷಿ ಯೋಗ್ಯ ಭೂಮಿ ಆಗಬೇಕು.

ಆದರೆ ಭೂ ಸವಳಿಕೆಯೇ ಮುಂತಾದ ಕಾರಣಗಳು ನಿರುಪಯುಕ್ತ ಆಗುವ ಭಾಗ ೯.೫ ಕೋಟಿ ಹೆಕ್ಟೆರ್. ಇದು ಒಂದು ಲೆಕ್ಕಾಚಾರ.

ಆದರೆ ಕೃಷಿ ನಡೆಯುತ್ತಿದೆ ಎನ್ನಲಾದ ಭೂಮಿಯ ಅಳತೆ ೧೪ ಕೋಟಿ ಹೆಕ್ಟೇರ್ ಎಂದಾಗಿದೆ.

ಅಲ್ಲಿಗೆ ನಿರುಪಯುಕ್ತವಾದ ಭೂಮಿ ೯.೪ ಕೋಟಿ ಹೆಕ್ಟೇರ್ ಎಂಬುದು ಭೂಲಕ್ಷಣ ರೀತ್ಯ ಸಿದ್ಧವಾದರೆ ಅದರ ಅರ್ಥವೇನು? ಕೃಷಿ ನಡೆಯುತ್ತಿರುವ ಭೂಮಿಯಲ್ಲಿ ಮೂರನೇ ಎರಡು ಭಾಗ ನಿರುಪಯುಕ್ತ! ಅಂದರೆ ಫಲವತ್ತಾದ ಭೂಮಿ ಮೂರನೇ ಒಂದು ಭಾಗ ಮಾತ್ರ.

ಇಂಥ ದಾರುಣ ಪರಿಸ್ಥಿತಿಯಲ್ಲಿ ಯಾವ ಛಾಯೆಯ ಸರ್ಕಾರವೂ ರೈತರ ನೆರವಿಗೆ ಧಾವಿಸಲು ಸಿದ್ಧವಾಗುವುದಿಲ್ಲ. ಜಾಗತೀಕರಣದ ವೇಳೆ ಬಹುರಾಷ್ಟ್ರೀಯ ಕಂಪೆನಿಗಳು ಮನ್ನಣೆ ಗಳಿಸಿ ಕೃಷಿ ಕೈಗಾರಿಕೆ ಕಡೆ ಗಮನಕೊಟ್ಟ ತಕ್ಷಣ ಕೃಷಿ ಯೋಗ್ಯ ಜಮೀನಿನ ಮೇಲಿನ ಒತ್ತಡ, ಈಗ ಇರುವುದಕ್ಕಿಂತ ಹೆಚ್ಚಾಗುತ್ತದೆ.

ಕೃಷಿ ಯೋಗ್ಯ ಜಮೀನು ವಾಸ್ತವವಾಗಿ ಭಾರತದಲ್ಲಿ ತುಂಡು ತುಂಡು ವಿಸ್ತೀರ್ಣದಲ್ಲಿದೆ. ವಿದೇಶಗಳಲ್ಲಿ ಇರುವಂತೆ ಭಾರೀ ವಿಸ್ತಾರವಾಗಿ ಹರಡಿಕೊಂಡ ಕೃಷಿ ಯೋಗ್ಯ ಭೂಮಿ ಇಡಿಯಾಗಿ ಸಿಗುವುದು ಕಡಿಮೆ.

ಪಶ್ಚಿಮದ ಕಲ್ಪನೆ ಪ್ರಕಾರ ವಿಸ್ತಾರ ಪ್ರದೇಶದ ಕೃಷಿ ಅತ್ಯುತ್ತಮ. ಆ ಶೈಲಿಯ ಕೃಷಿಯನ್ನು ಎಲ್ಲೂ ಅನುಕರಿಸುವಂತಾದರೆ ಕೃಷಿ ಉದ್ಯಮಿಗಳು ಸಣ್ಣ ತಾಕುಗಳನ್ನೆಲ್ಲ ಗುಡ್ಡೆ ಹಾಕಿಕೊಳ್ಳಬೇಕಾಗುತ್ತದೆ. ತುಂಡು ಭೂಮಿ ಮಾರಬಲ್ಲವರ ಸಂಖ್ಯೆ ದೊಡ್ಡದಿರುವಾಗ ಪರಭಾರೆ ಕಟ್ಟಿಟ್ಟದ್ದು.

ತಜ್ಞರು ಹೇಳುವ ಪ್ರಕಾರ ತುಂಡು ಭೂಮಿ ಅನುಕೂಲಗಳೂ ಕಡಿಮೆಯೇನಿಲ್ಲ. ಇಂಥ ಕಡೆ ಸಹಾ ಉತ್ಪಾದಕತೆ ಹೆಚ್ಚಿಸಲು ವಿಪುಲ ಅವಕಾಶಗಳಿವೆ.

ರೈತರು ತಮ್ಮ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರೆ ಮಾತ್ರ ಉದ್ಧಾರವಾಗಬಲ್ಲರು. ಈ ವೇಳೆ ತುಮುಲ ಕಂಡಿತ.

೨೫.೦೨.೨೦೦೪