ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರೈತರ ಪ್ರತಿನಿಧಿಗಳು ಎನಿಸಿಕೊಂಡವರು ಬಿತ್ತನೆ ಬೀಜ ಮಾಡುವ ಕಂಪೆನಿಯ ಒಂದು ಕಚೇರಿ ಮೇಲೆ ಎರಗಿ ದಾಂಧಲೆ ಮಾಡಿದರು. ಮಹಡಿಯ ಮೇಲಿಂದ ಕಚೇರಿಯ ಕಾಗದ ಪತ್ರಗಳನ್ನೆಲ್ಲ ಎಸೆದಾಗ ಕಾಣಿಸಿದ ‘ರಮಣೀಯ’ ದೃಶ್ಯ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರಾರಾಜಿಸಿತು. ಈಗ ಅದೇ ಕಂಪೆನಿಯು ಪೂರೈಸುವ ಬೀಜಕ್ಕಾಗಿ ನಿಜವಾದ ರೈತರು ಮುಗಿಬೀಳುತ್ತಿದ್ದಾರೆ. ನಾ ಮುಂದು ತಾ ಮುಂದು ಎಂದು ಖರೀದಿಸುತ್ತಿದ್ದಾರೆ. ಕಾರಣವೆಂದರೆ ಅದರ ಸುಧಾರಿತ ಬಿತ್ತನೆ ಬೀಜವು ಬೆಳೆಯ ಇಳುವರಿಯನ್ನು ವಿಪರೀತವಾಗಿ ಹೆಚ್ಚಿಸುತ್ತಿದೆ.

ಇಲ್ಲಿ ಕಂಪೆನಿಯಾಗಲೀ, ಅದರ ಉತ್ಪನ್ನವಾಗಲೀ ಏನೆಂಬುದು ಮುಖ್ಯವಲ್ಲ ಸುಧಾರಿತ ಬಿತ್ತನೆ ಬೀಜದ ಉಪಯುಕ್ತತೆ ಬಗೆಗೆ ಮನವರಿಕೆ ಆದಾಗ, ಬೆಳೆಗಾರ ಮಿಕ್ಕೆಲ್ಲವನ್ನೂ ಮರೆತು ಅದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗುತ್ತಾನೆ ಎಂಬುದೇ ಕಟು ಸತ್ಯ. ಮೊದಲು ವ್ಯಕ್ತವಾಗಿದ್ದ ವಿರೋಧ ಅನಂತರ ಕಾಲಘಟ್ಟದಲ್ಲಿ ಬಾಲಿಶವಾಗಿ ಕಾಣಿಸುತ್ತದೆ.

ಇಷ್ಟೆಲ್ಲ ಬರೆಯುವ ಪ್ರಮೇಯ ಒದಗಿದ್ದು ಏಕೆಂದರೆ ಬಿಟಿ ಹತ್ತಿಯ ತಳಿಗಳನ್ನು ವಾಣಿಜ್ಯೋದ್ಯಮ ಪ್ರಮಾಣದಲ್ಲಿ ಬೆಳೆಯಲು ಅವಕಾಶ ನೀಡಲು ಕಡೆಗೂ ತಜ್ಷರ ಸಮಿತಿಯು ತನ್ನ ಅಂಗೀಕಾರ ಮುದ್ರೆಯನ್ನು ಒತ್ತಿದೆ. ಆದರೆ ಇದಕ್ಕೆ ಮುನ್ನ ಜೈವಿಕ ಎಂಜಿನಿಯರಿಂಗ್ ಫಲ ಎನಿಸಿದಂಥ ಸುಧಾರಿತ ಬೀಜದ ವಿರುದ್ಧವಾದ ವಿವಾದಗಳು ಭಾರತೀಯರನ್ನು ಹೈರಾಣ ಮಾಡಿತು.

ಬಿತ್ತನೆ ಬೀಜವನ್ನು ಸಂಕರಣದ ಕಾರ್ಯದ ಮೂಲಕ ಇನ್ನಷ್ಟು ಮತ್ತಷ್ಟು ಉತ್ತಮಗೊಳಿಸುವ ಕಾರ್ಯ ಇವತ್ತು ನಿನ್ನೆಯದಲ್ಲ. ಸಸ್ಯಗಳಿಂದ ಕಲಿತ ಅಂಗಾಂಗ ಕಸಿಯನ್ನು ಜೀವಿ ಅಂಗಾಂಗಗಳಿಗೂ ವಿಸ್ತರಿಸಿ ಯಶಸ್ವಿಯಾಗುತ್ತಿರುವಾಗ ಬೀಜ ತಂತ್ರಜ್ಞಾನ ಅಭಿವೃದ್ಧಿ ಅಡ್ಡಗಾಲೆ?

ಹೌದು ಹಾಗೆಯೇ ಆಗಿದ್ದು. ಬೀಜ ತಯಾರಿಕೆ ವೇಳೆ ಒಂದೇ ಬಗೆಯ ಜೀವ ಕೋಶಗಳ ಬದಲು ಬೇರೆಯವೇ ಎನಿಸಿದ ಕುಲಗಳ ಜೀವಕೋಶಗಳನ್ನು; ಜೀವದ ಮೂಲ ದ್ರವ್ಯವೆನಿಸಿದ ಡಿ.ಎನ್.ಎ.ಯನ್ನು ವರ್ಗಾವಣೆ ಮಾಡುವ ಮೂಲಕ ಹೊಸ ಸೃಷ್ಟಿಗೆ ಕಾರಣವಾಗುವ ವಿದ್ಯಮಾನಕ್ಕೆ ವಿರೋಧ ಬಂದಿದೆ.

ಮಣ್ಣು, ನೀರು ಕುರಿತ ಸಂಶೋಧನೆ; ನಾನಾ ಬಗೆಯ ಕೃಷಿ ಯಂತ್ರೋಪಕರಣಗಳು; ಜಾಗದ ಒತ್ತಡದಿಂದಾಗಿ ಕಡಿಮೆ ಜಮೀನಿನಲ್ಲಿ ಪರಮಾವಧಿ ಬೆಳೆ ತೆಗೆಯುವ ಕ್ರಮಗಳು; ಇವೆಲ್ಲ ಕೈಗೆ ಒದಗಿ ಬಂದಿದ್ದರೂ ಇಳುವಳಿ ಹೆಚ್ಚಿಸುವುದೇ ಸಮಸ್ಯೆ. ಜನಸಂಖ್ಯೆ ಬೆಳೆಯುತ್ತಲೇ ಇರುವುದರಿಂದ ಇದು ಗಂಭೀರವಾಗಲಿಕ್ಕೆ ಸಾಕು. ಬಿತ್ತನೆ ಬೀಜ ಸುಧಾರಿಸಿದರೆ ಗಂಭೀರಗೊಳ್ಳಬಹುದಾದ ಸಮಸ್ಯೆಯನ್ನು ಕನಿಷ್ಠ ಎದುರಿಸಿ ಆದರೂ ತೀರಬಹುದು. ಆದರೆ ಇರುವ ತೊಂದರೆ ಏನು? ಅದನ್ನು ಕೆದರಿದರೆ ಕುತೂಹಲಕಾರಿ ಅಂಶಗಳು ಗೋಚರಕ್ಕೆ ಬರುತ್ತವೆ.

ತಳಿ ಸಂಕರಣಕ್ಕೆ ಆಯ್ಕೆ ನಡೆಸುವಾಗ ಉಭಯ ತಳಿಗಳ ಒಳ್ಳಯ ಗುಣಗಳೆಲ್ಲ ಮೇಳವಿಸಬೇಕು; ಕೆಟ್ಟ ಅಂಶಗಳು ಕಾಣೆ ಆಗಬೇಕು ಎಂಬುದೇ ಗುರಿ ಆಗಿರುತ್ತದೆ. ಆಗ ಆದಷ್ಟೂ ನಂಟಸ್ತನ ಇರುವ ಒಂದೇ ಬಗೆಯ ತಳಿಗಳನ್ನು ಸಂಕರಣಕ್ಕೆ ಆಯ್ದು ಕೊಳ್ಳುವುದುಂಟು. ತಳಿ ವಿಜ್ಞಾನದ ‘ಎಂಜಿನಿಯರಿಂಗ್’ ಕೃತ್ಯ ಇನ್ನೂ ಮುಂದಕ್ಕೆ ನಮ್ಮನ್ನು ಒಯ್ಯುತ್ತದೆ. ಇಡೀ ತಳಿಗಳನ್ನು ಒಟ್ಟಾಗಿ ಪ್ರಕ್ರಿಯೆಯಲ್ಲಿ ತೊಡಗಿಸುವ ಬದಲು ನಿದಿಷ್ಟ ಜೀವಿಯ ಡಿ.ಎನ್.ಎ. (ತಳಿ ಮೂಲ ದ್ರವ್ಯ) ಬೇರ್ಪಡಿಸಿ ತೆಗೆದು ಧಾರಣ ಶಕ್ತಿಯು ತಳಿಯ ಜೀವಕೋಶಕ್ಕೆ ನೇರವಾಗಿ ತುಂಬುವುದೇ ಇಲ್ಲಿನ ತಂತ್ರ. ಇದು ಕೈಗೊಂಡಿರುವುದರಿಂದ ಯಾವ ಸಾಮ್ಯವೂ ಇಲ್ಲದ, ಸಂಬಂಧವೇ ಇಲ್ಲದ ಜೀವಕೋಶಗಳ ಜೈವಿಕ ಅಂಶಗಳು ಒಂದು ಗೂಡುತ್ತವೆ. ಪ್ರಯೋಗಾಲಯಗಳು ಒಳ್ಳೆಯ ಫಲಿತಗಳನ್ನು ಕೊಡುತ್ತಿವೆ.

ಜೈವಿಕ ಮಸಲತ್ತು ಸರಿಯೇ ಎಂಬುದು ಈಗ ಜಿಜ್ಞಾಸೆಗೆ ಕಾರಣವಾಗಿದೆ. ಲಾಭದ ಪ್ರಶ್ನೆಗೆ ಬಂದಾಗ ಅಮೆರಿಕಕ್ಕೆ ಯಾವ ಎಗ್ಗೂ ಇರುವುದಿಲ್ಲ. ಕಳೆದ ಆರು ವರ್ಷದಲ್ಲಿ ಏಲಕ್ಕಿ, ಜೋಳಗಳ ಸಂಬಂಧ ಜೈವಿಕ ಮಸಲತ್ತನ್ನು ನಡೆಸಿ ಉತ್ಪನ್ನ ಹೆಚ್ಚಿಸಿಕೊಂಡಿದ್ದಾರೆ ಅಮೆರಿಕನ್ನರು. ಯೂರೋಪು ಇದಕ್ಕೆ ವಿರುದ್ಧವಾಗಿದೆ. ಭಾರತದ ಸ್ಥಿತಿ ಡೋಲಾಯಮಾನ.

ನೈತಿಕ ಹಿನ್ನೆಲೆಯಲ್ಲಿ ಭಾರತ ತನ್ನ ಚಿಪ್ಪಿನಿಂದ ಇನ್ನೂ ಹೊರಬರದೆ ಉಳಿದಿದೆ. ಆದರೆ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ತಾವಾಗೆ ಮೈಮೇಲೆ ಉಳಿದುಕೊಂಡಿರುವ ಮಡಿವಂತಿಕೆಯ ಬಂಡೆಯನ್ನು ಎಷ್ಟು ಕಾಲ ಹೊತ್ತಿಕೊಮಡಿರಲು ಸಾಧ್ಯ? ಅಂತಿಮವಾಗಿ ವಿಜ್ಞಾನ ತೆರೆದಿಟ್ಟ ಹೊಸ ಜಗತ್ತನ್ನು ಪ್ರವೇಶಿಸಲೇಬೇಕು. ದೂರ ಉಳಿಯಲು ಸಾಧ್ಯವೇ ಇಲ್ಲ.

ಕ್ಷಿಪ್ತವಾಗಿ ಮುಂದುವರೆಯಲು ಇರುವ ಅಡ್ಡಿ ಎಂದರೆ ಕೃಷಿಯನ್ನು ನಿಯಂತ್ರಿಸಬಲ್ಲ ಬೃಹತ್ ವಾಣಿಜ್ಯ ಸಂಸ್ಥೆಗಳ ನಡುವಣ ಪೈಪೋಟಿ. ಬಿತ್ತನೆ ಬೀಜ ಎಂದರೆ ದೊಡ್ಡ ರೀತಿಯ ಹಣ. ಅದರತ್ತ ಕಣ್ಣು ಹಾಯಿಸಲಾಗದೆ ಉಳಿಯುವ ಕಂಪೆನಿಗಳು ಕಡಿಮೆ. ಆದ್ದರಿಂದಲೇ ಪರ ವಿರುದ್ಧ ಲಾಬಿಗಳು ಏಕಕಾಲಕ್ಕೆ ಕೆಲಸ ಮಾಡುತ್ತವೆ. ಭಾರತವನ್ನು ಪ್ರವೇಶಿಸಲು ಕಾತರಗೊಂಡಿರುವ ಬಿಟಿ (ಬಯೋಟೆಕ್) ಹತ್ತಿ ಬೀಜಕ್ಕೆ ಎದುರಾಗಿರುವುದು ಈ ಲಾಬಿಗಳ ವಿದ್ಯಮಾನ.

ವಾಸ್ತವವಾಗಿ ಬಿಟಿ ಎನ್ನುವುದರ ವಿವರಣೆ ಎಂದರೆ ಬ್ಯಾಸಿಲಸ್ ತುರಿಂಜೈನ್ಸಿಸ್ ಎಂಬ ಹೆಸರಿನ ಬ್ಯಾಕ್ಟೀರಿಯದಜ ನಿಯನ್ನು ಅಳವಡಿಸಿಕೊಂಡ ತಳಿ ಎಂಬುದು ಆಗಿದೆ. ಆರು ವರ್ಷದ ಹಿಂದ ೧೦೦ ಗ್ರಾಂ ಬೀಜವನ್ನು ಆಮದು ಮಾಡಿಕೊಳ್ಳಲಾಯಿತು. ಜೈವಿಕ ಮಸಲತ್ತು ನಿಯಂತ್ರಿಸುವ ಉದ್ದೇಶದಿಂದ ಅಭಿವೃದ್ಧಿಗೊಂಡ ಮೂರು ಬಗೆಯ ಬಿಟಿ ತಳಿಗಳ ವ್ಯಾಪಕ ಕೃಷಿಗೆ ಇದೀಗ ಅನುಮತಿ ನೀಡಿದೆ.

ಅಭಿವೃದ್ಧಿ ಪಡಿಸುವ ಕಾರ್ಯವು ಸರ್ಕಾರದ ಮೂಗಿನಡಿಯೇ ನಡೆಯಿತು. ಪರೀಕ್ಷಾರ್ಥ ಕೃಷಿ ವೇಳೆಯೇ ಭಾರಿ ಗೊಂದಲ ಕೋಲಾಹಲ ನಡೆಯಿತು. ಜೈವಿಕ ಮಸಲತ್ತು ಕೂಡದು ಎಂಬುದೇ ವಿರೋಧಿ ನಿಲುವಿನ ಲಾಬಿಗಳ ನಿಲುವು.

ಕಳೆದ ಸಾಲಿನ ಬೆಲೆ ಅವಧಿಯಲ್ಲಿ ಕದ್ದು ಮುಚ್ಚಿ, ಅನುಮತಿಗೆ ಹೊರತಾಗಿ, ಕಾನೂನಿಗೆ ವಿರೋಧವಾಗಿ ಗುಜರಾತ್‌ನಲ್ಲಿ ವ್ಯಾಪಕವಾಗಿ ಜನರು ಇದನ್ನು ಬಿತ್ತಿ ಬಿಟ್ಟರು. ಆಶ್ಚರ್ಯವೆಂದರೆ ಬೆಳೆ ಚೆನ್ನಾಗಿ ಆಯಿತು. ತಂತ್ರಜ್ಞಾನ ಗೆದ್ದು ಬಿಟ್ಟಿತ್ತು. ಕಾನೂನು ಬಾಹಿರ ಬೆಳೆ ಎಂಬುದು ಪತ್ತೆಯಾಗುವ ಹೊತ್ತಿಗೆ ಕೊಯಿಲೇ ಮುಗಿದುಹೋಗಿತ್ತು. ಇಷ್ಟೂ ಆದ ಮೇಲೆ ಇನ್ನು ಹಿಂದುಳಿಯಲು ಸಾಧ್ಯವೇ? ಸರ್ಕಾರವು ವಾಣಿಜ್ಯೋದ್ದೇಶ ಪ್ರಮಾಣದ ಕೃಷಿಗೆ ಅನುಮತಿ ನೀಡಲೇಬೇಕಾಯಿತು.

ಸೋಜಿಗವೆಂದರೆ ಹತ್ತಿಯು ಒಂದು ಪ್ರಮುಖ ವಾಣಿಜ್ಯ ಬೆಳೆ. ಆದರೆ ಇಳುವರಿ ಕಡಿಮೆ ಎಂಬುದೇ ಒಂದು ದೊಡ್ಡ ಅಡಚಣೆ. ವಾಸ್ತವವಾಗಿ ಮಾಮೂಲು ತಳಿ ಹತ್ತಿಯ ಇಳುವರಿ ಕಡಿಮೆಯಾಗಲು ಹುಳುಹುಪ್ಪಟೆ ಕಾಟವೇ ಕಾರಣ. ಬಿಟಿ ಹತ್ತಿಯ ಗುಣ ಎಂದರೆ ಹುಳಹುಪ್ಪಟೆ ಕಾಟ ಬಹಳ ಕಡಿಮೆ. ಹುಳು ಹಿಡಿಯುವುದಿಲ್ಲ ಎಂದೇನೂ ಹೇಳಲಾಗದು. ಆದರೆ ಕಡಿಮೆ. ಇಷ್ಟಾದರೂ ಎಷ್ಟೋ ವಾಸಿ. ಏಕೆಂದರೆ ಬೆಳೆಯು ತರುವ ಲಾಭದ ಬಹುಪಾಲನ್ನು ಕೀಟನಾಶಕಗಳ ಖರ್ಚೇ ತಿಂದು ಹಾಕುತ್ತದೆ.

ಈಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ನಿರ್ಬಂಧ ಕ್ರಮ ಜಾರಿಗೆ ತಂದಿದೆ. ಯಾವುದೇ ಜಮೀನಿನಲ್ಲಿ ಬಿಟಿ ಅರಳೆ ಬೆಳೆ ಇಟ್ಟರೆ ಅಂಚಿನಲ್ಲಿ ಸುತ್ತಲೂ ಶೇ.೨೦ ರಷ್ಟಾಗುವ ವಿಸ್ತೀರ್ಣದಲ್ಲಿ ಮಾಮೂಲು ತಳಿ ಬೆಳೆ ಇಡಬೇಕು. ಇವಕ್ಕೆ ಹುಳು ಬೀಳುವುದು ಹೆಚ್ಚಾದ್ದರಿಂದ ಮಧ್ಯ ಭಾಗದ ಬಿಟಿ ಬೆಳೆಯ ಸಸ್ಯ ಭಾಗಕ್ಕೆ ಬೀಳಬಹುದಾದ ಹುಳುಹಪ್ಪಟೆ ಪಕ್ಕದ ಜಮೀನಿಗೆ ವರ್ಗಾವಣೆ ಆಗದು; ಹರಡದು.

ಒಳ್ಳೆಯ ಕ್ರಮವೇ ಸರಿ. ಆದರೆ ಹೀಗೆ ಬೆಳೆ ಇಡಬೇಕೆಂಬ ನಿರ್ಬಂಧವನ್ನು ಜಾರಿಗೆ ತರುವ ಹೊಣೆ ಯಾರದು? ಬೀಜ ಮಾರುವ ಏಕಸ್ವಾಮ್ಯ ಕಂಪೆನಿ ಇದರ ಗೊಡವೆ ತನಗೆ ಸೇರಿದ್ದಲ್ಲ ಎಂದು ಹೇಳತೊಡಗಿದೆ. ಸರ್ಕಾರ ತಲೆ ತುರಿಸಿಕೊಳ್ಳುತ್ತಿದೆ.

ಲಾಭ ತರುವ ಕ್ರಮಗಳು ಹೇಗೋ ಜಾರಿಗೊಳ್ಳಬಲ್ಲದು. ಈ ಅಂಶವನ್ನು ಕೃಷಿ ರಂಗ ಪದೇ ಪದೇ ನಿರೂಪಿಸಿದೆ.

ವಿರೋಧ ಮತ್ತು ಪ್ರತಿರೋಧ ತಾನೆ ತಾನಾಗಿ ಮಾಯವಾಗುತ್ತದೆ, ಬಿಟಿ ಬೆಳೆಗೆ ಹೊಸ ಆತಂಕ ಎದುರಾಗದಿದ್ದರೆ.

ಸಾಮಾನ್ಯವಾಗಿ ಹೊಸ ಹೊಸ ಆವಿಷ್ಕಾರಗಳಿಗೆ ವಿರೋಧ ಬರುವುದು ಭಾರತದಲ್ಲಿ ಸಹಜ. ಕಂಪ್ಯೂಟರೀಕರಣ ಸಹಾ ಇದೇ ಬಗೆಯ ಪ್ರತಿರೋಧವನ್ನು ಎದುರಿಸಿತ್ತು. ಈಗ ಐಟಿ ಕ್ಷೇತ್ರ ಬೆಳೆಸಲು ತೀವ್ರ ಪೈಪೋಟಿ.

ಜೈವಿಕ ತಂತ್ರಜ್ಞಾನ ಅದೇ ರೀತಿ ನಾಳಿನ ಜಗತ್ತಿಗೆ ಸೇರಿದ್ದು.

೦೩.೦೪.೨೦೦೨