ನಿಧೀ ಸಿಕ್ಕುವುದೆಂದರೆ ಯಾರೇ ಆದರೂ ಕಾಡು ಮೇಡು ಅಲೆಯಲು, ಪರ್ವತವನ್ನೇರಿ ಗುಹೆ ಗವಿಗಳನ್ನು ತಡಕಾಡಲು, ಸಮುದ್ರ ತಡಿಯನ್ನು ತಲುಪಿ ನೆಲ ಅಗೆದು ಹಾಕಲು ಸಿದ್ಧ. ನಿಧಿಯನ್ನೋ, ಬಂಗಾರವನ್ನೋ ಕೈವಶ ಮಾಡಿಕೊಳ್ಳಲು ಅಷ್ಟೊಂದು ತವಕ.

ಹತ್ತಿಯ ಕಣಜವೆಂದೇ ಪ್ರಸಿದ್ಧವಾದ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ರೈತರ ಪರಿಸ್ಥಿತಿ ಅದೇ ಆಗಿದೆ ಈಗ. ಎಷ್ಟೇ ಕಷ್ಟವಾದರೂ ಅವರಿಗೆ ಬೇಕು ಬಿಟಿ ಬಿತ್ತನೆ ಬೀಜ.

ಮಳೆ ಮೊದಲಿಡುತ್ತಿರುವ ಕಾರಣ ಮುಂಬರುವ ಹಂಗಾಮಿನಲ್ಲಿ ಬಿಟಿ ಬೀಜವನ್ನು ಬಿತ್ತನೆ ಮಾಡಿಬಿಡಬೇಕು. ಬೀಜಕ್ಕೆ ಎಷ್ಟೇ ಖರ್ಚಾದರೂ ಚಿಂತೆ ಇಲ್ಲ. ಬಹುರಾಷ್ಟ್ರೀಯ ಮಹಿಕೊ ಕಂಪೆನಿಯವರ ಬಳಿ ದಾಸ್ತಾನಿಲ್ಲ. ಆದರೆ ಬರುತ್ತದೆಯಲ್ಲ! ಹಣ ತುಂಬಿ ‘ಪಾವತಿ’ ಪಡೆದುಕೊಂಡುಬಿಟ್ಟರೆ, ಸಾಕು; ಅದಕ್ಕಾಗಿ ಪಾಳಿ ಹಚ್ಚಿ ನಿಲ್ಲುತ್ತಿದ್ದಾರೆ.

ಬಿಟಿ ಹತ್ತಿ ಬಿತ್ತನೆಗೆ ಬೀಜ ೪೫೦ ಗ್ರಾಂ ಪೊಟ್ಟಣಕ್ಕೆ ರೂ. ೧೬೦೦ ಆಗುತ್ತದೆ. ಮಾಮೂಲು ಬಿತ್ತನೆ ಬೀಜಕ್ಕೆ ಕೊಡುವುದಕ್ಕಿಂದ ಐದು ಪಟ್ಟು ಬೆಲೆ. ಆದರೂ ಅದೇ ಬೇಕು.

ಇದೇ ಹತ್ತಿ ಬೀಜ ಬಳಸಿ ಪ್ರಯೋಗಾರ್ಥ ಬೆಳೆಯನ್ನು ೯೮ರಲ್ಲಿ ಬೆಳೆದಿದ್ದಾಗ ಪ್ರತಿಭಟನಾರ್ಥ ಕರ್ನಾಟಕದ ರೈತರು ಫಸಲಿಗೇ ಬೆಂಕಿ ಇಟ್ಟಿದ್ದರು. ಈಗ ಅದೇ ಬೆಳೆ ಪರಮಾಯಿಷಿ.

ಭಾರೀ ವಿವಾದದ ನಂತರ ಕೇಂದ್ರ ಸರ್ಕಾರ ಕೇವಲ ೧೦೦ ಗ್ರಾಂ ಹತ್ತಿ ಬೀಜವನ್ನು ಆಮದು ಮಾಡಿಕೊಂಡು ಪರೀಕ್ಷಾರ್ಥವಾಗಿ ಬೆಳೆಯಲು ಅವಕಾಶ ನೀಡಿತ್ತು. ಕಾರ್ಗಿಲ್ ಕಂಪೆನಿ ಭಾರತ ಕಾರ್ಯಾಚರಣೆಗಳ ಉತ್ತರಾಧಿಕಾರಿ ಮಾನ್ಸಾಂಟೊ ಕಂಪೆನಿಯು ತಳಿಯ ಗುಣಲಕ್ಷಣಗಳನ್ನು ಬೇಕಾದ ರೀತಿಯಲ್ಲಿ ತಿರುಚಿಕೊಳ್ಳುವ ಸಂಶೋಧನೆ ನಡೆಸುವುದಕ್ಕೇ ಪ್ರತಿರೋಧ ಬಂದಿತ್ತು. ಜೀನಿ ಗುಣಗಳನ್ನೇ ಬದಲಾಯಿಸಿ ಹಾಕುವುದು ಪ್ರಕೃತಿ ವಿರೋಧ. ಆದರೆ ಬೆಳೆ ತೆಗೆಯಲು ಅನುಕೂಲ ಆಗುವಂತೆ ಏನೆಲ್ಲ ವೈಜ್ಞಾನಿಕ ಆವಿಷ್ಕಾರ ಮಾಡಲಿಕ್ಕೆ ಬೇಕು ಎಂಬುದು ಲಾಭಗಳಿಕೆಯನ್ನೇ ಮೂಲಮಂತ್ರ ಮಾಡಿಕೊಂಡಿರುವ ಬಹುರಾಷ್ಟ್ರೀಯ ಕಂಪೆನಿಗಳ ನಿಲುವು. ಜೈವಿಕವಾಗಿ ಕೈವಾಡ ನಡೆಸಿ ಅತ್ಯುತ್ತಮ ಎನಿಸುವಂಥ ಬಿತ್ತನೆ ಬೀಜವನ್ನು ಅಭಿವೃದ್ಧಿ ಪರಿಡುವುದಕ್ಕಾಗಿ ಆಯ್ದುಕೊಂಡ ಪ್ರಯೋಗ ಕ್ಷೇತ್ರಗಳಲ್ಲಿ ಭಾರತವೂ ಒಂದು. ಪ್ರಯೋಗ ಪರೀಕ್ಷೆ ಬಳಿಕ, ಮಾರಲು ಸಾಧ್ಯವಾಗುವ ವಾಣಿಜ್ಯೋದ್ಯಮ ಉದ್ದೇಶದ ಪ್ರಮಾಣದಲ್ಲಿ ಈ ನಮೂನೆಯ ಬೆಳೆ ತೆಗೆಯುವ ಬಗೆಗೆ, ವಿಜ್ಞಾನಿಗಳಿಗಳಿಂದ ಮತ್ತು ಪರಿಸರವಾದಿಗಳಿಂದ ಆಕ್ಷೇಪ ಮತ್ತು ಟೀಕೆ ಬಂದುದಕ್ಕೆ ಲೆಕ್ಕವೇ ಇಲ್ಲ. ಆ ಕಂಪೆನಿಗಳು ಅದನ್ನೆಲ್ಲ ಲೆಕ್ಕಸಲೂ ಇಲ್ಲ. ಲಾಭದ ಖಾತರಿ ಇದ್ದರೆ ಇವು ಎಷ್ಟು  ದೂರ ಬೇಕಾದರೂ ಹೋಗಿಯಾವು. ಕಡೆಗೂ ಈ ಹಂಗಾಮಿನಲ್ಲಿ ಪೂರ್ಣ ಪ್ರಮಾಣದ ಬೆಳೆ ತೆಗೆಯಲು ಕೇಂದ್ರ ಸರ್ಕಾರದ ಪರಿಸರ ಖಾತೆಯ ಸಮಿತಿಯು ಅನುಮತಿ ಕೊಟ್ಟಿದ್ದೇ ತಡ; ರೈತರು ಹುಚ್ಚೆದ್ದು ಮುಂದೆ ಸಾಗಿದ್ದಾರೆ. ಸುಮಾರು ಐದು ವರ್ಷಕಾಲ ಬಿಟಿ ಬಿತ್ತನೆ ವಿರುದ್ಧ ನಡೆದ ಭಾರೀ ಪ್ರತಿರೋಧ ಹಾಗೂ ಹೋರಾಟ ರೈತರಿಗೆ ನೆನಪಾಗುತ್ತಿಲ್ಲ. ಮಹಾರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳ ಪ್ರೊಫೆಸರರು ಬಿಟಿ ಹತ್ತಿಯು ಅನುಕೂಲಗಳ ಬಗೆಗೆ ಪತ್ರಿಕೆಗಳಲ್ಲಿ ಒಂದಾದ ಮೇಲೊಂದರಂತೆ ಲೇಖನಗಳನ್ನು ಬರೆದಿದ್ದಾರೆ. ರೈತರು ಉತ್ತೇಜಿತರಾಗಲು ಅಷ್ಟೇ ಸಾಕು.

ಬಿಟಿ ಎಂದರೆ ಬಯೋಟೆಕ್ನಾಲಜಿ, ಜೈವಿಕ ತಂತ್ರಜ್ಞಾನ ಸ್ಫುರಿಸುವುದೇ ಸಹಜ. ಸ್ಥೂಲವಾಗಿ ಅದೇ ಸರಿ. ಆದರೆ ವೈಜ್ಞಾನಿಕವಾಗಿ ಬಿ ಟಿ ಎಂದರೆ ಬ್ಯಾಸಿಲಸ್ ತುರಿಂಜೈನ್‌ಸಿಸ್ (BACILLUS THURINGIENSIS) ಇದರ ಹೃಸ್ವಾಕ್ಷರ ಸಂಕೇತ. ಇದು ವಾಸ್ತವವಾಗಿ ಒಂದು ಬ್ಯಾಕ್ಟೀರಿಯಾದ ಹೆಸರು. ಈ ಬಗೆಯ ಬ್ಯಾಕ್ಟೀರಿಯಾದ ರೋಗ ಪ್ರತಿರೋಧಕ ಗುಣವು ಬಿತ್ತನೆ ಬೀಜದೊಳಗೇ ಗರ್ಭಾಂಕುರಗೊಂಡಿರುತ್ತದೆ. ಅಂದರೆ ಬಳೆ ತೆಗೆಯುವಾಗ ರೋಗದ ವಿರುದ್ಧ ಕೀಟನಾಶಕಗಳ ಗೊಡವೆ ಅಷ್ಟಾ ಇರದು. ರೈತನಿಗೆ ಈ ಅಂಶ ಭಾರೀ ಆಕರ್ಷಕವಾಗಿ ಪರಿಣಮಿಸಿದೆ.

ಭಾರತದಲ್ಲಿ ರೈತನಿಗೆ ತಾಂತ್ರಿಕವಾಗಿ ವಿಶೇಷ ಒತ್ತಾಸೆಯೇನನ್ನೂ ಕೊಟ್ಟಿಲ್ಲ. ಅದೇ ವೇಳೆ ವಿದೇಶದಲ್ಲಿ ಇರುವಂತೆ ಭಾರೀ ನಿಯಂತ್ರಣವನ್ನೂ ಹೇರಿಲ್ಲ. ಆದ್ದರಿಂದ ತನಗೆ ಉಪಯುಕ್ತವಾದುದು ಎನಿಸಿದ್ದನ್ನು ಬಾಚಿಕೊಂಡು ಅಂಗೀಕರಿಸಲು ಮುಕ್ತನಿರುತ್ತಾನೆ. ಆತನಿಗೆ ನಷ್ಟವಾದರೆ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕೇ ಹೊರತು ವಿಮೆ ಪರಿಹಾರ ಕೂಡಾ ಸಾಕಷ್ಟು ಮತ್ತು ಸರಿಯಾಗಿ ದಕ್ಕುವುದಿಲ್ಲ. ಇಷ್ಟಿದ್ದರೂ ಆತ ಲಾಭಕಾರಿ ಕೃಷಿ ಖಚಿತ ಎಂದಾದರೆ ಅದನ್ನು ಹಿಡಿದುಕೊಳ್ಳುತ್ತಾನೆ. ಅದನ್ನು ಹಿಡಿದುಕೊಂಡು ಎಷ್ಟು ದೂರ ಬೇಕಾದರೂ ಮುಂದುವರೆಯಲು ಸಿದ್ಧನಾಗುತ್ತಾನೆ. ಹಸಿರುಕ್ರಾಂತಿ ಸಾಧ್ಯವಾಗಿದ್ದು ಕೂಡಾ ರೈತನ ಈ ಗುಣಲಕ್ಷಣವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದಲೇ ಸರಿ.

ಬಿಟಿ ಹತ್ತಿ ಬೆಳೆಯುವುದಕ್ಕೆ ಎಷ್ಟೇ ಪ್ರಬಲ ವಿರೋಧ ಬಂದಿದ್ದರೂ ಅಂತಿಮವಾಗಿ ಕೇಂದ್ರ ಸರ್ಕಾರ ಅನುಮತಿ ಕೊಡಲೇಬೇಕಾಯಿತು. ಕಳೆದ ವರ್ಷ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಬಿಬಿಸಿ ಬಿಸಿನಸ್ ರಿಪೋರ್ಟ್‌ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ಅಜಿತ್‌ಸಿಂಗ್ ಹೇಳಿದರು: ನೀವು ಇದನ್ನು (ಬಿಟಿ ಬಿತ್ತನೆ ಬಳಸಿದ ಕೃಷಿಯನ್ನು) ತಡೆಯಲಾಗದು. ಸಂಪೂರ್ಣ ನಿಷೇಧವನ್ನು ಹೇರಲಾಗದು. ಯಾವುದೇ ದೇಶಕ್ಕೆ ಇದು ಸಾಧ್ಯವಾಗುವುದಿಲ್ಲ ಎನಿಸುತ್ತದೆ.

ಪರಿಸರವಾದಿಗಳು ಬಿಟಿ ಹತ್ತಿ ಕೃಷಿ ಹಾಗೂ ಬಿತ್ತನೆ ಬೀಜ ಅಭಿವೃದ್ಧಿ ವಿರುದ್ಧ ಭಾರೀ ಹುಯಿಲೆಬ್ಬಿಸಿದರು. ಇವರ ಆಕ್ಷೇಪಗಳು ಇವು;

ಜೈವಿಕ ತಂತ್ರಜ್ಞಾನ ಬಳಸಿ ತಳಿಯ ಜೀವಿಗಳನ್ನು ಬದಲಾಯಿಸುವುದು ಪ್ರಕೃತಿಗೆ ವಿರೋಧ.

ಬಿಟಿ ಕೃಷಿಯು ಪರಿಸರಕ್ಕೆ ಹಾನಿ ತರುತ್ತದೆ. ಸಮತೋಲನವನ್ನು ಕೆಡಿಸುತ್ತದೆ.

ಬಳಕೆದಾರ ಸಂಸ್ಥೆಗಳು ಸಹಾ ಸೇರಿದಂತೆ ಹಲವು ಮೂಲಗಳಿಂದ ಬಂದವರು ತಳಿ ಅಭಿವೃದ್ಧಿ ವೇಳೆ ಜೈವಿಕವಾಗಿ ಹಸ್ತಕ್ಷೇಪ ಮಾಡುವುದನ್ನು ಆಕ್ಷೇಪಿಸಿದ್ದಾರೆ. ವಿವಾದವನ್ನು ಸುಪ್ರೀಂಕೋರ್ಟ್‌ವರೆಗೆ ಒಯ್ದಿದ್ದಾರೆ. ತೀರ್ಪು ನೀಡಬೇಕಾದ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಕಂಪೆನಿಗಳ ಪರವಾಗಿ ಕೆಲಸ ಮಾಡುವವರ ಹಾಗೂ ಇತರ ತಜ್ಞರ ಸಮಿತಿಯೊಂದು ಸಹಾ ರಚನೆಯಾಗಿತ್ತು.

ಆಕ್ಷೇಪ ಮಾಡುವವರ ನಿಲುವು ಕೊನೆಗೂ ನಿಲ್ಲಲಿಲ್ಲ. ಪರೀಕ್ಷಾರ್ಥ ಪ್ರಯೋಗಗಳ ಫಲಿತ ಏನೆಂಬ ವಿವರಗಳನ್ನು ಕಂಪೆನಿಗಳವರು ಹೊರಗೆಡಹಲೇ ಇಲ್ಲ.

ಭಾರತ ಸರ್ಕಾರ ಒಂದೇ ಮಾತನ್ನು ಹೇಳುತ್ತದೆ; ಚೀನಾ ಈಗಾಗಲೇ ಬಿಟಿ ಹತ್ತಿ ಬೆಳೆ ತೆಗೆಯುವುವಲ್ಲಿ ದಾಪುಗಾಲು ಇಟ್ಟಿರುವುದರಿಂದ ನಾವು ಹಿಂದೆ ಬೀಳುವಂತೆ ಆಗಬಾರದು.

ವಿಶ್ವದಲ್ಲಿ ಅತಿ ಹೆಚ್ಚು ಹತ್ತಿ ಬೆಳೆ ತೆಗೆಯುವ ರಾಷ್ಟ್ರಗಳ ಸಾಲಿನಲ್ಲಿ ಭಾರತಕ್ಕೆ ಮೂರನೆಯ ಸ್ಥಾನ. ಇನ್ನು ಯಾವುದೇ ರಾಷ್ಟ್ರದಲ್ಲಿ ಇಲ್ಲದಷ್ಟು ಜಮೀನಿನಲ್ಲಿ ಭಾರತವು ಹತ್ತಿ ಬೆಳೆಯುತ್ತದೆ. ಆದರೆ ಉತ್ಪಾದನೆ ಕಡಿಮೆ ಏಕೆಂದರೆ ಇಳುವರಿ ಅಲ್ಪ. ಚೀನಾ ಆದರೋ ಕಳೆದ ಒಂದು ವರ್ಷದಲ್ಲಿ ಹತ್ತಿ ಉತ್ಪಾದನೆಯನ್ನು ಮೂರು ಪಟ್ಟು ಮಾಡಿಕೊಂಡಿದೆ.

ಬಿಟಿ ಹತ್ತಿತರ ಮತ್ತಿತರ  ಜೈವಿಕ ತಂತ್ರಜ್ಞಾನದ ಮೂಲ ಅಮೆರಿಕ. ಅಲ್ಲೇ ಬಿಟಿ ಹತ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಸರಕಿನ ತೀವ್ರ ಕೊರತೆ ಉಂಟಾದಾಗ ಮಾತ್ರ ಬಿಟಿ ಹತ್ತಿ ಬೆಳೆ. ಅಲ್ಲಿ ಕೃಷಿಕನು ಸಂಪೂರ್ಣವಾಗಿ ಕಂಪೆನಿಗಳ ವಶದಲ್ಲಿಯೇ ಇರುವುದರಿಂದ ಯಾವ ಬೆಳೆ ಎಷ್ಟು ಇಡಬೇಕು ಎಂಬ ವಿಷಯದಲ್ಲಿ ನಿಯಂತ್ರಣ ಸುಲಭ.

ಚೀನಾದಲ್ಲಿ ಸರ್ಕಾರವೇ ಸರ್ವೋಚ್ಚ. ನಿರ್ಧಾರ ಸುಲಭ.

ಭಾರತ, ಐರೋಪ್ಯ ರಾಷ್ಟ್ರಗಳಲ್ಲಿ ಚರ್ಚೆ ನಡೆಯಬಲ್ಲದು. ವಿಭಜನೆ ವೇಳೆ ಹತ್ತಿಯ ಜಮೀನನ್ನು ಸಾಕಷ್ಟು ಪಡೆದುಕೊಂಡ ಪಾಕಿಸ್ತಾನದಲ್ಲಿ ಸಹಾ ಬಿಟಿ ಹತ್ತಿ ಬೆಗೆಗೆ ಒಲವು ಕಡಿಮೆ. ವಿಜ್ಞಾನಿಗಳು ಸಾರಾಸಗಟವಾಗಿ ವಿರೋಧವಾಗಿದ್ದಾರೆ.

ಪರಿಸರ ಹೋರಾಟಗಾರರಾದ ವಂದಾನಾ ಶಿವ ಕೇಳುತ್ತಾರೆ, ತಮಗೆ ಬೇಡವಾದ ಬಿಟಿ ಹತ್ತಿ ಬೆಳೆಯುವುದನ್ನು ಅಮೆರಿಕ ಅನ್ಯ ರಾಷ್ಟ್ರಗಳ ಮೇಲೆ ಹೇರುವುದೇಕೆ? ಚೀನಾದಲ್ಲಿ ಆದರೋ ನಾನಾ ಬಗೆಯ ಹತ್ತಿಯನ್ನು ಬೆಳೆಯುವುದಿಲ್ಲ. ಭಾರತದ ಗುಜರಾತಿನಲ್ಲಿ ೬೦೦ ಬಗೆಯ ಹತ್ತಿಯನ್ನು ಬೆಳೆಯುತ್ತಾರೆ. ಬಿಟಿ ಹತ್ತಿ ಬೆಳೆಯುವುದರಿಂದ ತಳಿ ಸಂಕರಣ ಅಧಿಕವಾಗಿ ಬೇಕಾದಂಥ ವಿವಿಧ ಬಗೆಯ ಹತ್ತಿಯನ್ನು ಬೇಕು ಬೇಕಾದ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಕಷ್ಟವಾಗುತ್ತದೆ.

ಈಗ ಬಿಟಿ ಹತ್ತಿಯನ್ನು ಬೆಳೆಯುವಾಗಲೂ ಬಿಟಿ ಕ್ಷೇತ್ರದ ಸುತ್ತಲೂ ಬೆಳೆಗೆ ಮುತ್ತುವ ಕೀಟಗಳು ಮುಕ್ಕಿಕೊಳ್ಳಲೆಂದೇ ಒಂದಿಷ್ಟು ಬೇರೆ ಬಗೆಯ ಹತ್ತಿ ಬೆಳೆಯಬೇಕೆಂಬ ನಿರ್ಬಂಧ ವಿಧಿಸಲಾಗುತ್ತದೆ.

ಮಾನ್ಸಾಂಟೋ ಕಂಪೆನಿ ಅವರು ಮಹಿಕೊ ಸಹಯೋಗದಲ್ಲಿ ಭಾರತದಲ್ಲಿ ವಿತರಣೆ ಮಾಡುತ್ತಿರುವ ಬಿಟಿ ಹತ್ತಿ ಬೀಜವು ಚಿಗುರಿಸುವ ಗಿಡವು ಬೋಲ್‌ಗೋರ್ಡ್‌ಕೀಟಕ್ಕೆ ನಿರೋಧಕವೆನಿಸುವ ಗುಣವನ್ನು ಹೊಂದಿರುತ್ತದೆ. ಬಿಟಿ ಬ್ಯಾಕ್ಟೀರಿಯಾವು ಅದಕ್ಕೆ ಕಾರಣ. ಹತ್ತಿ ಮಾತ್ರವಲ್ಲದೆ ತಂಬಾಕು ಮುಂತಾದ ಬೆಳೆಗಳಿಗೆ ಹಾನಿ ತರುವ ಕಂಬಳಿ ಹುಳು ಮಾದರಿಯ ಕೀಟಕ್ಕೆ ಈ ಬ್ಯಾಕ್ಟೀರಿಯಾ ತುರಿಂಜೈನ್‌ಸಿಸ್‌ಮಾರಕ.

ಕೃಷಿ ತಜ್ಞರು ಹೇಳುವ ಪ್ರಕಾರ ಗಿಡದಲ್ಲಿ ಋತುಮಾನದ ಆರಂಭದಲ್ಲಿ ಕೀಟ ನಿರೋಧಕ ಶಕ್ತಿ ಜೋರಾಗಿರುತ್ತದೆ. ಆನಂತರ ಕಡಿಮೆಯಾಗುತ್ತಾ ಹೋಗುತ್ತದೆ.

ಯಾವುದೇ ಕಾಲದಲ್ಲಾದರೂ ರೋಗ ನಿರೋಧಕ ಶಕ್ತಿಯು ಗಿಡದ ಮೇಲ್ಭಾಗದಲ್ಲಿ ಹೆಚ್ಚಾಗಿರುತ್ತದೆ. ಕೆಳಭಾಗದಲ್ಲಿ ಕಡಿಮೆ. ಈ ಕಾರಣದಿಂದಾಗಿ ಹೊರಗಿನಿಂದ ಕೊಡುವ ಕೀಟನಾಶಕವನ್ನು ಅವಲಂಬಿಸುವ ಬಿಟಿಯೇತರ ಹತ್ತಿಯಲ್ಲಿ ಸಾಧಿಸುವಂಥ ಏಕರೂಪ ಗುಣಮಟ್ಟವನ್ನು ಇಲ್ಲಿ ಪಡೆಯಲಾಗುವುದಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಸಣ್ಣ ಸಣ್ಣ ತಾಕುಗಳಲ್ಲಿ ಭಾರತದಂಥ ಕಡೆ ವಿಶೇಷ ಸಮಸ್ಯೆ ಉಂಟು. ಅದೇನೆಂದರೆ ಒಬ್ಬರು ಬಿಟಿ ಹತ್ತಿ ಹಾಕಿ ಅದರ ಸುತ್ತ ಬೇರೆಯವರು ಬಿಟಿಯೇತರ ಹತ್ತಿ ಬೆಳೆದರೆ, ಬಿಟಿ ಹತ್ತಿಯನ್ನು ಮುತ್ತಲಾಗದ ಕೀಟಗಳೆಲ್ಲ ಬಿಟಿಯೇತರ ಹತ್ತಿ ಬೆಳೆಯುವ ರೈತರ ಜಮೀನಿಗೆ ಮುತ್ತಿಗೆ ಹಾಕುತ್ತವೆ.

ಇನ್ನೂ ರುಜುವಾತು ಆಗುವ ಇನ್ನೊಂದು ಅಪಾಯವೂ ಉಂಟು. ಒಮ್ಮೆ ಬಿಟಿ ಹತ್ತಿಯನ್ನು  ಬೆಳೆದ ಜಮೀನಿನಲ್ಲಿ ಮುಂದೆ ಬಿಟಿಯೇತರ ಬಳೆ ಹಾಕಿದರೆ ಬೆಳೆ ದುಸ್ಸಾಧ್ಯ! ಅಲ್ಲದೆ ಬಿಟಿ ಬೆಳೆ ಮೊದಲಿಟ್ಟರೆ ಮತ್ತೆ ಮತ್ತೆ ನಿರ್ದಿಷ್ಟ ಕಂಪೆನಿಯ ಬೀಜವನ್ನೇ ಕೊಳ್ಳುತ್ತಿರಬೇಕು. ಸ್ವಂತವಾಗಿ ಬಿತ್ತನೆ ಬೀಜ ಬೆಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ವಿಪತ್ತುಗಳ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ. ಬಿಟಿ ಹತ್ತಿಯ ಹೂವಿನ ಪರಾಗದಿಂದ ಹೊರ ಹೊಮ್ಮುವ ಕೆಲವು ಜೀನ್‌ಗಳು ಅಕ್ಕ ಪಕ್ಕದ ಇನ್ನಾವುದೇ ಬೆಳೆಗೆ ಹಾನಿಕಾರಕವಾಗುತ್ತದೆ! ಅಮೆರಿಕವು ಹತ್ತಿ ಮಾತ್ರ ವಲ್ಲದೆ ಮೆಕ್ಕೆಜೋಳ ಮತ್ತು ಆಲೂಗಡ್ಡೆ ಸಂಬಂಧ ಸಹ ಬಿಟಿ ತಲಿ ರೂಪಿಸಿತು. ಮೆಕ್ಕೆ ಜೋಳ ಒಳ್ಳೆಯ ಇಳುವರಿ ಕೊಟ್ಟಿತು. ಆದರೆ ಅದರಲ್ಲಿ ಅಲರ್ಜಿ ಉಂಟುಮಾಡುವ ಗುಣ ಕಂಡಿತು. ಆಗ ಅದನ್ನು ಮಾನವ ಬಳಕೆಗೆ ನಿಷಿದ್ಧಗೊಳಿಸಲಾಯಿತು. ರಫ್ತಿಗೆ ಅವಕಾಶ ಕೊಡಲಾಯಿತು!  ದೇಶದೊಳಗೆ ಅದರ ಹಿಟ್ಟು ಬಳಸಿ ಮಾಡಿದ ಆಹಾರ ಸಿದ್ಧ ವಸ್ತುಗಳನ್ನೆಲ್ಲ ಅಂಗಡಿಗಳಿಂದ ವಾಪಸು ಪಡೆದರು.

ಇದನ್ನೆಲ್ಲ ಅರಿತೋ, ಅರಿಯದೆಯೋ ಇಲ್ಲಿನ ರೈತರು ಈಗ ಹುಚ್ಚು ಹತ್ತಿಸಿಕೊಂಡಿದ್ದಾರೆ.

ಮೊದಮೊದಲು ಪರೀಕ್ಷಾರ್ಥ ಫಸಲಿಗೆ ಬೆಂಕಿ ಇಟ್ಟ ಚಳವಳಿಗಾರರು ಈಗ ಏನೆನ್ನಾತ್ತಾರೆ?

೨೯.೦೮.೨೦೦೨