ಉತ್ತರ ಕರ್ನಾಟಕದಲ್ಲಿ ‘ಬೆರಕಿ’ ಎಂಬ ಪದವನ್ನು ಬಳಸುತ್ತಾರೆ. ‘ಶಾಣ್ಯಾ’ ಎಂಬುದಕ್ಕೆ ಸಮಾನವಾಗಿ ಅದನ್ನು ಬಳಸುವುದರಿಂದ, ಅಂದರೆ ಜಾಣ ಎನ್ನುವ ಅರ್ಥದಲ್ಲಿ ಅದನ್ನು ಬಳಸುವುದರಿಂದ, ಅಪಾರ್ಥವೇನೂ ಆಗುವುದಿಲ್ಲ.

ವಾಸ್ತವವಾಗಿ ಅಲ್ಲಿ ಬೆರಕೆ ಎಂಬುವುದನ್ನು ಸಂಕರ ಎಂಬ ಅರ್ಥದಲ್ಲಿ ಬಳಸುವುದು. ವಾಸ್ತವವಾಗಿ ತಳಿಗಳ ಜೋಡಣೆ ಅಥವಾ ಸಂವಿಲನವೇ ಸಂಕರ. ತರಕಾರಿ, ಹಣ್ಣು ಅಥವಾ ಕುಕ್ಕಟ ಖರೀದಿಗೆ ಹೋದಾಗ ‘ನಾಟಿ ತಳಿ’ ಎನ್ನುವುದುಂಟು. ಅಂದರೆ ಸಂಕರಗೊಳ್ಳದ ತಳಿ. ಈಗ ಶುದ್ಧ ತಳಿಯ ಸರಕು ದುಲ್ಲಭ.

ಕೆಲವು ವರ್ಷಗಳ ಹಿಂದೆ ವಿದೇಶವೊಂದರ ಮಾಲ್‌ನ ಹೊರಗೆ ನಿಂತಿದ್ದ ಯುವತಿಯರ ಹೊರಗೆ ನಿಂತಿದ್ದ ಯುವತಿಯರ ಹರಟೆಯ ಮಾತುಗಳು ಅಲ್ಲೇ ನಿಂತಿದ್ದ ನನ್ನ ಕಿವಿಗೆ ಬೀಳುತ್ತಿತ್ತು. ಪರಸ್ಪರರ ಚೆಲುವನ್ನು ಮೆಚ್ಚುಕೊಳ್ಳುತ್ತಿದ್ದ ಒಬ್ಬಾಕೆ ಇನ್ನೊಬ್ಬಾಕೆಯನ್ನು ‘ನೀನು ಶುದ್ಧವೇ?’ ಎಂದು ಕೇಳಿದಳು. ಅಂದರೆ ಶುದ್ಧ ತಳಿಯೇ? ಎಂಬುದು ಪ್ರಶ್ನೆ. ಭಾರತೀಯನಾದ ನನಗೆ ಇದು ಬೆರಗುಗೊಳಿಸಿತು. ಆದರೆ ಆ ಪ್ರಶ್ನೆಯಿಂದ ಇನ್ನೊಬ್ಬಾಕೆ ಸಂತೋಷಗೊಂಡಿದ್ದಳು. ಆಕೆ ಮಂದಹಾಸ ಮಿನುಗಿಸಿ ‘ಇಲ್ಲ ನಾನು ಇಂಗ್ಲಿಷ್ ಮತ್ತು ಜರ್ಮನ್‌ಸಂಕರ’ ಎಂದಳು.

ಇದು ಇವತ್ತಿನ ವಾಸ್ತವ. ಯಾವುದೇ ಕೃಷಿ ಉತ್ಪನ್ನ ಈಗ ಹೈಬ್ರಿಡ್ ಮಾತ್ರವೇ. ನಂಜನಗೂಡು ರಸಬಾಳೆ ಆಗಲಿ; ವೀರನಗೆರೆ ಬದನೆಕಾಯಿ ಆಗಲಿ ಮೈಸೂರಿನಲ್ಲಿ ಅಲಭ್ಯ. ತಳಿಗಳು ಸಂಕರಗೊಂಡು ‘ಅಭಿವೃದ್ಧಿಗೊಂಡುಬಿಡು’ತ್ತವೆ!

ಮನುಷ್ಯ ಜೀವಿಗಳಲ್ಲೂ ಸಂಕರಣೆಗೆ ಪ್ರಾಧಾನ್ಯ. ಸೋದರಿಕೆ ಸಂಬಂಧ ಪೂರ್ತಿ ತಪ್ಪಿಲ್ಲವಾದರೂ ಹೊರಗೆ ಸಂಬಂಧ ಬೆಳೆಸುವುದೇ ಯುಕ್ತ ಎಂದು ಮದುವೆ ವೇಳೆ ಯೋಚಿಸುವವರು ಹೆಚ್ಚಿದ್ದಾರೆ.

ಹೊಸ ಪ್ರಶ್ನೆ ಈಗ ಎದ್ದಿರುವುದೆಂದರೆ ಯಾವುದೇ ಜೀವಿಯಲ್ಲಿ ಸಂಕರಣೆಗಿಂತ ಮಿಗಿಲಾಗಿ ಜೀನಿಗಳನ್ನೇ ಬದಲಾಯಿಸುವುದು ಯುಕ್ತವೇ? ಜೀವಿ ಸ್ವರೂಪಗಳನ್ನು ನಿಶ್ಚಯಿಸುವ ಜೀನಿಗಳನ್ನೇ ಜೈವಿಕ ಕೈವಾಡದಿಂದ ಬದಲಾಯಿಸಿ ಬಿಟ್ಟರೆ ಹೇಗೆ? ಅಧಿಕ ಇಳುವರಿಯೋ, ರೋಗ ನಿರೋಧಕ ಶಕ್ತಿಯೋ ಬೇಕಾದರೆ ನಿರಂತರ ಸಂಕರಣದಿಂದ ಪ್ರಕೃತಿ ಸಹಜವಾಗಿ ಹೊಸ ತಳಿಗಳನ್ನು ಸೃಷ್ಟಿಸಬೇಕು. ಆದರೆ ಜೀವಸ್ವರೂಪವನ್ನೇ ಬದಲಾಯಿಸಿದರೆ ಒಪ್ಪಬಹುದೇ?

ಮಹತ್ತರ ವಾಣಿಜ್ಯ ಉದ್ದೇಶಗಳಿಗಾಗಿ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ. ವಿಜ್ಞಾನಿಗಳು ಬೇಖು ಬೇಕಾದ ಬೆಳೆಗಳ ಸಂಬಂಧ ಜೈವಿಕ ಕೈವಾಡ ನಡೆಸಿ ಅನಾಹುತಗಳಿಗೆ ದಾರಿ ಮಾಡಿ ಕೊಡುವುದನ್ನು ತಡೆಯಲು ಜೈವಿಕ ಎಂಜಿನಿಯರಿಂಗ್ ಮಂಜೂರಾತಿ ಸಮಿತಿ (ಜಿಇಎಸಿ) ಎಂಬುದನ್ನು ಕೇಂದ್ರ ಪರಿಸರ ಸಂರಕ್ಷಣೆ ಇಲಾಖೆ ರಚಿಸಿದೆ. ಜೈವಿಕ ಎಂಜಿನಿಯರಿಂಗ್‌ನಿಂದ ಲಾಭಕ್ಕಿಂತ ಅಡ್ಡ ಪರಿಣಾಮಗಳ ಹಾಕಿ ಸಂಭವಿಸಿ ಪರಿಸರಕ್ಕೆ ಹಾನಿ ಆಗುತ್ತದೆ ಎಂಬುದು ಜನಜನಿತ ನಿಲುವು ವಿಶ್ವಾದ್ಯಂತ. ಯಾವುದೇ ಜೀವಿ ಕೈವಾಡದ ಬೆಳೆಯನ್ನು ವಾಣಿಜ್ಯ ಉದ್ದೇಶ ಪ್ರಮಾಣದಲ್ಲಿ ಇಡಲು ಇದರ ಅನುಮತಿ ಬೇಕು.

ಎಣ್ಣೆ ತೆಗೆಯಲು ವ್ಯಾಪಕವಾಗಿ ಬಳಸಬಹುದಾದ ಜೀವಿ ಕೈವಾಡದ ಸಾಸುವೆ ಬೆಳೆ ತೆಗೆಯಲು ಫ್ರೋಗ್ರೊ ಎಂಬ ಕಂಪೆನಿಗೆ ಅನುಮತಿ ಕೊಡಲು ಸಮಿತಿ ನಿರಾಕರಿಸಿದ್ದೆ ಆ ಬಗೆಯ ಮೊಟ್ಟ ಮೊದಲು ಪ್ರಕರಣ.

ಮುಸುಕಿನ ಜೋಳ ಮತ್ತು ಸೋಯಾ ಅವರೆಗಳನ್ನು ಸಂಕರಣಗೊಳಿಸಿ ಜೀವಿ ಕೈವಾಡ ನಡೆಸಿ ಬೆಳೆಸಿದ, ಸುಪುಷ್ಟ ಆಹಾರ ಧಾನ್ಯವನ್ನು ಆಮದು ಮಾಡಬೇಕೆಂಬ ಯತ್ನವನ್ನು ಸಹಾ ಜಿಇಎಸಿ ಅದುಮಿ ಹಾಕಿತು. ಅಮೆರಿಕದ ಪ್ರಖ್ಯಾತ ಸ್ವಯಂ ಸೇವಾ ಸಂಸ್ಥೆಗಳಾದ ‘ಕೇರ್‌’ (ಕ್ಯಾಥೋಲಿಕ್‌ರಿಲೀಫ್ ಸರ್ವಿಸಸ್) ಮತ್ತು ಯು ಎಸ್ ಏಡ್ ಇವೆರಡೂ ಈ ಹೊಸ ಬಗೆ ಧಾನ್ಯಕ್ಕೆ ಅವಕಾಶ ಭಾರತದಲ್ಲಿ ಸಿಗಬೇಕೆಂದು ಬಯಸಿದ್ದುವು. ಸಮಿತಿ ತೀರ್ಮಾನದ ವಿರುದ್ಧ ಸ್ವತಃ ಪ್ರಧಾನಿ ಕಚೇರಿಯವರೇ ಮಧ್ಯ ಪ್ರವೇಶ ಮಾಡಬೇಕೆಂದು ಯು ಎಸ್‌ಏಡ್‌ಯತ್ನಿಸಿತ್ತು ಕೂಡಾ.

ಜೀವಿ ಕೈವಾಡದ ಹತ್ತಿಯನ್ನು ಭಾರತದಲ್ಲಿ ಬೆಳೆಯಬೇಕೆಂಬ ಯತ್ನ ಜೋರಾಗಿ ನಡೆಯಿತು. ಮಧ್ಯ ಭಾರತ ಮತ್ತು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಜೀವು ಕೈವಾಡದ ಹತ್ತಿಯನ್ನು ಮೊದಲಿಗೆ ಪ್ರಾಯೋಗಿಕವಾಗಿ ಬೆಳೆಯಲು ಕಳೆದ ವರ್ಷದ ಮಾರ್ಚ್‌ನಲ್ಲಿ ಜಿಇಎಸ್ ಅವಕಾಶ ನೀಡಿತು. ಈ ವರ್ಷ ಪಂಜಾಬ್‌ಮತ್ತು ಇತರ ಉತ್ತರದ ರಾಜ್ಯಗಳಲ್ಲಿ ಬೆಳೆಯಲು ಅವಕಾಶ ಕೊಡಬೇಕೆಂಬ ಒತ್ತಾಯ ಬಂತು. ಬಿತ್ತನೆ ಬೀಜ ಕ್ಷೇತ್ರದಲ್ಲಿ ಭಾರೀ ವಾಣಿಜ್ಯ ಹಿತಾಸಕ್ತಿ ಬೆಳೆಸಿಕೊಂಡಿರುವ ಮಾನ್ಸಾಂಟೊ ಕಂಪೆನಿಯು ಭಾರತದ ಮಹಿಕೊ ಕಂಪೆನಿ ಜೊತೆಗೂಡಿ ನಡೆಸಿದ ಪ್ರಯತ್ನಕ್ಕೆ ಜಿಇಎಸಿ ಇದೀಗ ತಣ್ಣೀರು ಎರಚಿದೆ. ಏಪ್ರಿಲ್ ೨೫ ರಂದು ಸಮಿತಿಯು ನಕಾರ ಸೂಚಿಸಿತು. ಇದನ್ನೂ ಸಹಾ ಪರಿಸರವಾದಿಗಳು ತಮಗೆ ಸಂದ ವಿಜಯ ಎಂದೇ ಭಾವಿಸಿದ್ದಾರೆ.

ವಾಸ್ತವವಾಗಿ ಸಮಿತಿಯು ಐದಾರು ಕಂಪೆನಿಗಳಿಗೆ ಜೀವಿ ಕೈವಾಡದ ಬೀಜ ಬಳಸಿ ಹತ್ತಿ ಬೆಳೆ ತೆಗೆಯಲು ಕಳೆದ ಮೂರು ವರ್ಷಗಳಲ್ಲಿ ಅನುಮತಿ ಕೊಟ್ಟಿತು. ಮಹಿಕೊ (ಮಹಾರಾಷ್ಟ್ರ ಹೈಬ್ರಿಡ್‌ಸೀಡ್ಸ್ ಕಂಪೆನಿ)ಗೆ ಮೂರು ನಿರ್ದಿಷ್ಟ ಜೀವಿ ಕೈವಾಡ ಬೀಜದಿಂದ ಹತ್ತಿ ಬೆಳೆಯಲು ಮಾರ್ಚ್‌೨೦೦೫ ರವರೆಗಿನ ಅವಧಿವರೆಗೆ ಅನುಮತಿ ಕೊಟ್ಟಿತು.

ತಮಿಳುನಾಡಿನ ರಾಶಿ ಸೀಡ್ಸ್‌ಕಂಪೆನಿ ಹೈದರಾಬಾದಿನ ನುಜಿವೀಡು ಸೀಡ್ಸ್‌ಕಂಪೆನಿ ಸಹಾ ಇಂಥ ಬೆಳೆಗೆ ಯತ್ನಿಸಿತು.

೨೦೦೨ ಡಿಸೆಂಬರ್‌ನಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಟಿ.ಆರ್. ಬಾಲು ಅವರು ಸಂಸತ್ತಿನಲ್ಲಿ ಬಿಟಿ ಹತ್ತಿ (ಜೀವಿ ಕೈವಾಡ ಹತ್ತಿ) ಬೆಳೆಯುವ ಕಾರ್ಯಕ್ರಮ ತೃಪ್ತಿಕರ ಫಲಿತ ನೀಡಿದೆ ಎಂದೇ ಪ್ರಕಟಿಸಿದ್ದರು. ಆದರೆ ಇದೀಗ ಜಿಇಎಸಿ ಇದರ ವಿಸ್ತರಣೆಗೆ ನಕಾರ ಸೂಚಿಸಿದೆ.

ಮುಖ್ಯವಾಗಿ ಮಹಿಕೊ ಮಾನ್ಸಾಂಟೊ, ಹುಟ್ಟುಹಾಕಿದ ಪ್ರಾಯೋಗಿಕ ಬೆಳೆ ತೆಗೆಯುವ ಕಾರ್ಯಕ್ರಮವು ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಆಯ್ದ ತಾಲೂಕುಗಳಲ್ಲಿ ನಡೆದಿದೆ. ವಾಸ್ತವವಾಗಿ ಮಾನ್ಸಾಂಟೋದ ಸಂಶೋಧನಾ ಕಾರ್ಯ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದಲ್ಲಿ ಒದಗಿಸಿರುವ ನಿವೇಶನದಲ್ಲಿ ನಡೆಯುತ್ತಿದೆ. ಆಮದು ಮಾಡಿದ ಬಿ ಟಿ ಹತ್ತಿ ಬೀಜಗಳಿಂದ ಬೆಳೆ ಕಾರ್ಯ ನಡೆಯುತ್ತಿರುವುದು.

ಬಿ ಟಿ ಹತ್ತಿಯು ಉತ್ತಮ ಹೇಗೆ? ಮಾಮೂಲಾಗಿ ಹತ್ತಿಗೆ ಬೀಳುವ ಕಾಯಿಕೊರಕ ಕೀಟ ಭಾರೀ ಉಪದ್ರವಕಾರಿ. ಇದರ ಹತೋಟಿಗೆಂದು ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸಬೇಕಾಗುತ್ತದೆ. ಅಮೆರಿಕನ್ ಕಾಯಿಕೊರಕ ಎಂಬ ನಿರ್ದಿಷ್ಟ ಕೀಟವು ೯೦ ಬಗೆಯ ಬೆಳೆಗಳನ್ನು ಕಾಡಬಲ್ಲುದಾದರೂ ಹತ್ತಿಗೆ ಬೀಳುವುದೇ ಅಧಿಕ. ಬಿಟಿ ಹತ್ತಿ ತಳಿ ಬಳಸಿದರೆ ಕೀಟನಾಶಗಳನ್ನು ಬಳಸುವುದರ ಅಗತ್ಯ ಹೆಚ್ಚಾಗಿ ಬೀಳುವುದಿಲ್ಲ. ಖರ್ಚು ಕಡಿಮೆಯಾಗುತ್ತದೆ ಎಂಬುದು ಬೀಜ ಪೂರೈಕೆದಾರರ ಅಂಬೋಣ.

ಇದರ ಜೊತೆಗೆ ಅಧಿಕ ಇಳುವರಿ ಸಾಧಿಸಬಹುದು ಎಂಬುದೂ ಒಂದು ಪ್ರಮುಖ ಆಮಿಷ.

ಕಳೆದ ಒಂದು ವರ್ಷ ಅವಧಿಯಲ್ಲಿ ಈ ಎರಡೂ ಬಗೆಯ ಸೌಲಭ್ಯಗಳನ್ನು ರೈತನ ಪಾಲಿಗೆ ಲಭಿಸುವುದಿಲ್ಲ ಎಂಬುವುದು ಮನದಟ್ಟಾಗಿದೆ.

ವಾಸ್ತವವಾಗಿ ಮಹಿಕೊ ಮಾನ್ಸಾಂಟೊ ವತಿಯಿಂದ ಪ್ರಾಯೋಗಿಕ ಬೆಳೆ ಕುರಿತ ಅಧ್ಯಯನಗಳು ನಡೆದಿರುವಂತೆ; ನವದೆಹಲಿಯ ವಿಜ್ಞಾನ ತಂತ್ರಜ್ಞಾನ ಮತ್ತು ಪರಿಸರ ಕುರಿತ ಸಂಶೋಧನಾ ಪ್ರತಿಷ್ಠಾನ (ಆರ್ ಎಫ್ ಎಸ್ ಟಿ ಇ) ಸಹಾ ಬೆಳೆ ಫಲಿತಗಳನ್ನು ಸಂಗ್ರಹಿಸಿದೆ. ಅದರ ಪ್ರಕಾರ ಬಿಟಿ ಹತ್ತಿ ಬೆಳೆಯುವಾಗ ಕ್ರಿಮಿನಾಶಕದ ಬಳಕೆಯೇನೂ ಕಡಿಮೆ ಆಗಿಲ್ಲ. ಜೊತೆಗೆ ಇನ್ನಿತರ ಬಾಧೆ ಎನಿಸಿದ ಶಿಲೀಂಧ್ರ ಪೀಡೆ ಮುಂತಾದುವು ಮೂರು ಪಟ್ಟು ಆಗಿದೆ. ಅಷ್ಟೇ ಸಾಲದೆಂಬಂತೆ ಇಳುವರಿ ಸಹಾ ಹೆಚ್ಚಿಲ್ಲ. ಹಳೆಯ ಹೈಬ್ರಿಡ್ ಬೀಜದ ಬೆಳೆಯ ಇಳುವರಿಗಿಂತ ಇದು ಕಡಿಮೆಯೇ ಇದೆ. ಬಿಟಿ ಹತ್ತಿಯು ಮಿಕ್ಕ ಹತ್ತಿಗಿಂತ ಗಿಡ್ಡ ಎಳೆ ಹೊಂದಿರುವುದರಿಂದ ಬೆಲೆ ಬರುತ್ತಿರುವುದೂ ಕಡಿಮೆ. ಪ್ರತಿ ಕ್ವಿಂಟಲ್‌ಗೆ ರೂ. ೩೦೦-೪೦೦ ರಷ್ಟೂ ಕಡಿಮೆ ಧಾರಣೆ ಸಿಗುತ್ತದೆ.

ಬಿಟಿ ಹತ್ತಿಯು ಪ್ರತಿ ಹೆಕ್ಟೇರಿಗೆ ಕನಿಷ್ಠ ರೂ. ೧೦೦೦೦ ಅಧಿಕ ವರಮಾನ ತರುತ್ತದೆ ಎಂದು ರೈತರನ್ನು ನಂಬಿಸಲಾಗಿತ್ತು. ಇದೀಗ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ರತಿ ಹೆಕ್ಟೇರಿನಲ್ಲಿ ಕಳೆದುಕೊಳ್ಳುವಂತಾಗಿದೆ.

ಇದೆಲ್ಲದರ ಜೊತೆಗೆ, ಪತ್ರಕರ್ತರೊಬ್ಬರು ಬರೆದಿರುವ ಪ್ರಕಾರ, ಬಿಟಿ ಹತ್ತಿಯ ಅಧಿಕ ನೀರನ್ನು ಬೇಡುತ್ತದೆಂಬ ಅನುಮಾನವಿದೆ. ಆ ಬಗೆಗೆ ಅಧ್ಯಯನ ಫಲಿತ ಹೊರಬಿದ್ದಿಲ್ಲ. ಸಮಾನಾಂತರವಾಗಿ ಬೆಳೆ ಅಧ್ಯಯನ ನಡೆಸಿದ ಪ್ರತಿಷ್ಠಾನವು (ಆರ್ ಎಫ್ ಎಸ್ ಟಿ ಇ) ಮಹಿಕೊ ಮಾನ್ಸಾಂಟೊ ಬೆಳೆ ಕ್ರಮ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿತು. ಬಿಟಿ ಹತ್ತಿ ಬೆಳೆದರೆ ಅಮೆರಿಕನ್ ಕಾಯಿಕೊರಕದ ಹಾವಳಿ ತಪ್ಪುವುದಿಲ್ಲ ಎನ್ನುವ ಮಾತು ಹಾಗಿರಲಿ; ಅಧಿಕ ಸಸ್ಯರೋಗ ಬಾಧೆ ವಾಸ್ತವವಾಗಿ ಹೆಚ್ಚಿದೆ. ಇದರಿಂದ ಪರಿಸರ ಹಾನಿ ಹೆಚ್ಚಾಗಿದೆ ಎಂಬುದು ಅದರ ವಾದ.

ಈ ಎಲ್ಲ ವಿವಾದದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ.

ಅನ್ಯ ಅಧ್ಯಯನಗಳ ಪ್ರಕಾರ ಕಾಯಿಕೊರಕ ಕೀಟಬಾಧೆ ಮೊದಲಿಗೆ ಹತೋಟಿಯಲ್ಲಿರುತ್ತದೆ. ಆದರೆ ೯೦ ದಿನ ಕಳೆದಂತೆ ಅರಳೆ ಹೊತ್ತ ಕಾಯಿ ಉದುರಿ ಬೀಳುವುದು ವಿಪರೀತವಾಗುತ್ತದೆ.

ಮಾನ್ಸಾಂಟೊ ಮತ್ತು ಪ್ರತಿಷ್ಠಾನಗಳ ನಡುವಣ ಸಂಬಂಧ ಅಥವಾ ವಿರೋಧದ ಗೂಡಾರ್ಥ ಏನೇ ಇರಲಿ; ರೈತರಪಾಲಿಗೆ ಬಿಟಿ ಹತ್ತಿ ಲಾಭಕರ ಅಲ್ಲ ಎಂಬುದು ಪ್ರಥಮ ಹಂತದಲ್ಲೇ ಗೋಚರಸಿದೆ.

ಹೊಸತು ಏನಾದರೂ ಬಂದಾಗ ಸರ್ಕಾರದಲ್ಲಿರುವವರು ಮಾರು ಹೋಗುತ್ತಾರೆ ಎಂಬುದು ನಿಜ. ದೇಶದ ಸಂಶೋಧನಾ ಕೇಂದ್ರಗಳ ಸಂಬಂಧ ದೊಡ್ಡ ಹೊಣೆ ಹೊತ್ತಿರುವ ಕೃಷಿ ಸಂಶೋಧನೆ ಕುರಿತ ಭಾರತೀಯ ಪರಿಷತ್ತು (ಐ ಸಿ ಎ ಆರ್) ಹೇಳುವ ಪ್ರಕಾರ ಮೂರು ವರ್ಷಕಾಲ ಪ್ರಾಯೋಗಿಕ ಕೃಷಿ ನಡೆಯದ ಹೊರತು ರೈತರಿಗೆ ಬೆಳೆ ತೆಗೆಯಲು ಅವಕಾಶ ಕೊಡಬಾರದು. ಆದರೆ ಕೃಷಿ ಸಚಿವ ಅಜಿತ್‌ಸಿಂಗ್ ಅವರು ಒಂದು ವರ್ಷದ ಫಲಿತ ಸಾಕು ಎಂದು ತೀರ್ಪು ನೀಡಿದರು. ಅದನ್ನು ಅನುಸರಿಸಿ ಪಂಜಾಬ್‌ವಿಶ್ವವಿದ್ಯಾನಿಲಯ ಸಹಾ ಪ್ರಾಯೋಗಿಕ ಕೃಷಿ ನಡೆಸಿತು. ಮಾಮೂಲಿ ಹೈಬ್ರಿಡ್‌ಹತ್ತಿಯೇ ಬಿಟಿ ಹತ್ತಿಗಿಂತ ಲಾಭಕರ ಎಂದು ಅಲ್ಲಿ ಕೂಡಾ ಮನವರಿಕೆ ಆಯಿತು.

ಒಂದು ಮಾತು ನಿಜ; ರೈತರು ಲಾಭಕಾರಿ ಹಾಗೂ ಅನುಕೂಲಕಾರಿ ಎಂದು ಮನದಟ್ಟು ಆದರೆ ಮಾತ್ರವೇ ಯಾವುದೇ ಹೊಸ ಬಗೆಯ ಕೃಷಿ ಪದ್ಧತಿಗೆ ಒಲಿಯುತ್ತಾರೆ. ಇಲ್ಲದಿದ್ದರೆ ಇಲ್ಲ. ಹಸಿರು ಕ್ರಾಂತಿ ವೇಳೆ ಇದು ರುಜುವಾತು ಆಗಿದೆ. ಬಿಟಿ ಬೆಳೆ ಅಂಥ ಭರವಸೆಯನ್ನು ಮೂಡಿಸುತ್ತಿಲ್ಲ.

ಬಿಟಿ ಬೆಳೆ ಬಗೆಗೆ ಕುತೂಹಲ ಮೂಡಿ ಕ್ಷೇತ್ರ ಮಾಹಿತಿ ಲಭ್ಯವಾಗತೊಡಗಿ ೨೦ ತಿಂಗಳೇ ಆಗಿದ್ದರೂ ಕೃಷಿ ತಜ್ಞರು ಮಾತ್ರ ಏನೂ ಬಾಯಿ ಬಿಡುವುದಿಲ್ಲ. ಬಹುಶಃ ಅವರು ಕೂಡಾ ಗಾಳಿ ಬೀಸುವ ದಿಕ್ಕಿನ ಪತ್ತೆ ಹಚ್ಚುವಲ್ಲಿ ಮಗ್ನರಾಗಿರಲಿಕ್ಕೆ ಸಾಕು.

೧೪.೦೫.೨೦೦೩