‘ಹಸಿರು ಗ್ರಾಂತಿ’ ಎಂಥ ಮೋಹಕ ವಿದ್ಯಮಾನ.

ಭಾರತದಲ್ಲಿ ಆಹಾರ ಸ್ವಾವಲಂಬನೆಗಾಗಿ ಜಪಿಸಿದ್ದು ಈ ಬೀಜಮಂತ್ರವನ್ನೇ. ಅದು ಫಲಿಸಿತು.

ಮೂರು ದಶಕ ಕಳೆದಿದೆ. ಜನಸಂಖ್ಯೆಯೂ ಬೆಳೆದಿದೆ. ಸಾಧನೆಯ ಇನ್ನೊಂದು ಮಜಲನ್ನು ದೇಶ ತಲುಪಿದೆ. ಮುಂದೇನು? ಜನಸಂಖ್ಯೆ ನಿಯಂತ್ರಣ ಅಸಾಧ್ಯ ಎನಿಸಿದೆ. ಉಳಿದಿರುವುದು ಒಂದೆ ದಾರಿ-ಆಹಾರ ಉತ್ಪಾದನೆ ಏರಿಸಬೇಕು; ಇಲ್ಲವೇ ವಾಣಿಜ್ಯೋದ್ಯಮದ ಮೂಲಕ ಲಾಭ ಸಂಪಾದನೆ ಮಾಡಿ ಆಹಾರ ಧಾನ್ಯ ಮತ್ತು ಇತರ ಬಳಕೆ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು.

ಭಾರತ ಈ ಬಗೆಯ ತರದೂದಿನಲ್ಲಿ ಇರುವಾಗ ಗೋಚರಿಸಿದ್ದು ಹೈಬ್ರಿಡೀಕರಣದ ಹೊಸ ಸಾಧ್ಯತೆಗಳು. ವಾಸ್ತವವಾಗಿ ಗಿಡ ಕಸಿ ಮಾಡಿ ಹೊಸ ಬಗೆಯ ಬೀಜ ಪಡೆಯುವುದಾಗಲೀ, ಪಶು ಸಂಗೋಪನೆ ವೇಳೆ ಜಾನುವಾರುಗಳನ್ನು ಸಂಕರಣೆಗೊಳಿಸಿ ಮಿಶ್ರತಳಿ ಪಡೆಯುವುದಾಗಲೀ ಬೆಳೆಗಾರರ ಪಾಲಿಗೆ ಗೊತ್ತಿರದ ವಿದ್ಯಮಾನವೇನಲ್ಲ. ಸಂಕರಣ ತಳಿಗಳೂ, ಬಗೆ ಬಗೆಯ ರಸಗೊಬ್ಬರ ಮತ್ತು ಕೀಟ ನಾಶಕಗಳೂ, ಹೊಸ ಕೃಷಿ ವಿಧಾನಗಳೂ ಬಂದಾಗ ಅತ್ಯುತ್ಸಾಹ ತೋರಿಸಿದವರು ರೈತರೇ. ಆದರೆ ಮುಂದಿನ ಮಜಲಿನ ಸಂಕರಣೆಗೆ ಹೊರಟಾಗ ಎದಿರೇಟು ಬಿದ್ದಿದೆ.

ಆಧುನಿಕ ಕೃಷಿ ಎಂದರೆ ವೆಚ್ಚದ ಬಾಬೇ ಸರಿ. ಹಣ ತೊಡಗಿಸಬೇಕು. ಒಂದು ಕಂಪೆನಿಯ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಎಷ್ಟೊಂದು ನವಿರಾಗಿ ನಡೆದುಕೊಳ್ಳುವುದೋ, ಅಷ್ಟೇ ನಾಜೂಕಾಗಿ ಹೈಬ್ರಿಡ್ ಕೃಷಿ ತಂತ್ರಗಳನ್ನು ಅನುಸರಿಸಬೇಕು. ಆಗ ಫಲಿತ ಗ್ಯಾರಂಟಿ. ಇದೆಲ್ಲ ಕಷ್ಟವಾಗಲಿಲ್ಲ ರೈತರ ಪಾಲಿಗೆ. ಆಹಾರ ಸ್ವಾವಲಂಬನೆ ಸಾಧ್ಯವಾಗಿದ್ದೇ ಇದರಿಂದ. ಕೃಷಿಗೆ ಉದ್ಯಮದ ಸ್ಥಾನ ಬರತೊಡಗಿದ್ದು ಹೀಗೆಯೇ.

ಆದರೆ ಸಂಕರಣ ತಂತ್ರದ ೪೮೦ ಮುಂದಿನ ಹಂತ ಕೈಗೂಡುತ್ತಿಲ್ಲ ಸುಲಭವಾಗಿ. ವಾಣಿಜ್ಯೋದ್ದೇಶ ಪ್ರಮಾಣದಲ್ಲಿ, ಅಂದರೆ ಬೆಳೆಸಿ ಲಾಭದಾಯಕವೆನ್ನುವಂತೆ ಮಾರುವುದಕ್ಕೆ ಅಗತ್ಯವೆನಿಸುವ ಪ್ರಮಾಣದಲ್ಲಿ, (ಅಂದರೆ ಜೀವನೋಪಾಯಕ್ಕೆ ಮಾತ್ರ ಎನ್ನುವ ಸಣ್ಣ ಪ್ರಮಾಣದಲ್ಲಿ ಅಲ್ಲ); ಬಿಟಿ ಹತ್ತಿಯನ್ನು ಬೆಳೆಯಲು ಹೊರಟಾಗ ಮುಗ್ಗಿರಸಿದಂತೆ ಆಗಿದೆ. ಮೊಟ್ಟಮೊದಲ ಬಾರಿಗೆ ಬಿಟಿ ಹತ್ತಿ ಬೆಳೆದ ರೈತರು ಕೈಸುಟ್ಟುಕೊಂಡಿದ್ದಾರೆ.

ಇದೀಗ ಭಾರತದಲ್ಲಿ ಈ ವರ್ಷದ ಹತ್ತಿ ಮಾರಾಟದ ಹಂಗಾಮು ಆರಂಭವಾಗಿದೆ. ಹೊಸ ಅರಳೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರತೊಡಿದೆ. ಆದರೆ ಬೆಲೆ ಸಿಗುತ್ತಿಲ್ಲ. ಕಾರಣ ಆಮದು ಹತ್ತಿ. ವಿಶ್ವ ವಾಣಿಜ್ಯ ಸಂಸ್ಥೆ ಸಹಭಾಗಿತ್ವವಿದೆ ನಮಗೆ. ಹತ್ತಿ ಹೊರಗಿನಿಂದ ಬರುವುದಕ್ಕೆ ತಡೆ ಒಡ್ಡುವಂತಿಲ್ಲ. ಆದ್ದರಿಂದ ಹತ್ತಿಯ ಆಮದಿನ ಮೇಲೆ ವಿಧಿಸುವ ತೆರಿಗೆ, ಸುಂಕಗಳನ್ನು ಕಡಿಮೆ ಮಾಡಲಾಗಿದೆ. ಪರಿಣಾಮವಾಗಿ ಹತ್ತಿ ಆಮದು ದ್ವಿಗುಣ ಆಗಿದೆ.

೧೯೯೯-೨೦೦೦ ಸಾಲಿನಲ್ಲಿ ಆಮದಾಗಿದ್ದ ಹತ್ತಿ ೨೧ ಸಹಸ್ರ ಟನ್‌. ಮುಂದಿನ ವರ್ಷ ೨೦೦೦-೨೦೦೧ ಸಾಲಿನಲ್ಲಿ ತರಿಸಿದ್ದು ೪೯ ಸಹಸ್ರ ಟನ್.

ಅಮೆರಿಕ, ಚೀನಾ, ಐರೋಪ್ಯ ಒಕ್ಕೂಟ ರಾಷ್ಟ್ರಗಳು ತಮ್ಮ ಬೆಳೆಗಾರರಿಗೆ ನೀಡುವ ಸಬ್ಸಿಡಿ ಅಂಶ ಇಳಿಸಲು ಮುಂದಾಗುತ್ತಿಲ್ಲ. ಅದೇ ವೇಳೆ ಭಾರತದಲ್ಲಿ ಬೆಳೆಗಾರನಿಗೆ ಸಬ್ಸಿಡಿ ರೂಪದಲ್ಲಿ ಒತ್ತಾಸೆ ನೀಡಲು ಸರ್ಕಾರದ ಪಾಲಿಗೆ ಸಂಪನ್ಮೂಲ ಲಭ್ಯವಿಲ್ಲ. ಆದ್ದರಿಂದ ರಫ್ತಾಗಲು ಸಾಧ್ಯವಿಲ್ಲ. ಸತ್ತು ಸುಣ್ಣವಾದವನು ರೈತನೇ.

ಬಿಟಿ ಹತ್ತಿಯ ಯಶೋಗಾಥೆ ಹಾಡುವ ಮೂಲಕ ಬೀಜೋತ್ಪಾದನೆ ಕಂಪೆನಿಗಳವರು ತಜ್ಞ ಭಾರತದ ರೈತರ ಮನಸ್ಸಿನಲ್ಲಿ ಹೊಸ ಬಗೆಯ ಹತ್ತಿಯ ಬಗೆಗೆ ರಂಗುರಂಗಿನ ಕನಸುಗಳನ್ನು ಬಿತ್ತಿದ್ದರು. ಪ್ರಾಯೋಗಿಕವಾಗಿ ಹೊಸ ಹೈಬ್ರಿಡ್‌ಹತ್ತಿಯನ್ನು ಬೆಳೆದಾಗ ಅದ್ಭುತವಾದ ಫಲಿಒತಗಳು ಬಂದುವೆಂದು ಬಿಂಬಿಸಿದರು. ವಾಣಿಜ್ಯೋದ್ಯಮ ಪ್ರಮಾಣದಲ್ಲಿ ಬೆಳೆಯಲು ಅವಕಾಶ ಕೊಡಬೇಕೆಂದು ಕೇಂದ್ರ ಸರ್ಕಾರದ ಬಳಿ ವರಾತ ಹಚ್ಚಿದರು. ಬಿಟಿ ಬೆಳೆಯನ್ನು ಕೃಷಿಕರು ಬೆಳೆಯಲು ಅವಕಾಶ ಸೃಷ್ಟಿಸಿದರು.

ಬಿಟಿ ಎಂದರೆ ಬಯೋಟೆಕ್‌. ಹೈಬ್ರಿಡ್‌ನಲ್ಲೇ ಸುಧಾರಿತ ಎನಿಸಿದ ತಳಿ. ಈವರೆಗಿನ ಹೈಬ್ರಿಡ್ ಎಂದರೆ ಸಹಜ ಸಂಕರಣೆ. ವಂಶಾಂತರಗಳಲ್ಲಿ ಬೇರೆ ಬೇರೆ ಗುಣಲಕ್ಷಣಗಳು ಬರುವಂತೆ ಮಾಡುವುದು. ಬಿಟಿ ಎಂದರೆ ಪ್ರಯೋಗಾಲಯದಲ್ಲೇ ನಿರ್ದಿಷ್ಟ ಗುಣಲಕ್ಷಣಗಳು ಬರುವಂತೆ ಮಾಡುವುದು.

ವಾಸ್ತವವಾಗಿ ಮನುಷ್ಯ, ಪ್ರಾಣಿ ಅಥವಾ ಸಸ್ಯಗಳಲ್ಲಿ ಜೀವಿ ಕಣಗಳು ನಿರ್ದಿಷ್ಟ ಕ್ರಮದಲ್ಲಿ ಜೋಡಣೆಗೊಂಡ ಅಣುಗಳಿಂದಾಗಿ ಮೂಡಿರುತ್ತವೆ. ಆ ಜೋಡಣೆಯನ್ನು, ಅಣುಗಳನ್ನು ಬದಲಾವಣೆ ಮಾಡಿದರೆ ಹೊಸ ಬಗೆಯ ಜೀವವೇ ಸೃಷ್ಟಿಯಾಗುತ್ತದೆ. ನಿರ್ದಿಷ್ಟವಾದ ಗುಣ ಲಕ್ಷಣಕ್ಕೆ ಇಂತಿಂಥ ಸ್ವರೂಪದ ಜೀವಕಣಗಳು ಇರುತ್ತವೆ ಎನ್ನಬಹುದಾದ ಜೀವಿ ಘಟಕಗಳು ಉಂಟು. ಅವೇ ಜೀನಿಗಳು. ನಿರ್ದಿಷ್ಟ ಗುಣಲಕ್ಷಣಕ್ಕೆ ನಿರ್ದಿಷ್ಟವಾದ ಜೀನಿ ಕಾರಣವಾಗುತ್ತದೆ. ಜೀನಿಯ ಒಂದು ವಂಶದ ಲಕ್ಷಣಕ್ಕೆ ಒಂದು ಜೀನಿ ಕಾರಣ. ಆ ಲಕ್ಷಣ ವಂಶಪಾರಂಪರ್ಯವಾಗಿ ವರ್ಗಾವಣೆ ಆಗುತ್ತಾ ಹೋಗುತ್ತದೆ. ಜೀನಿಗಳನ್ನೇ ಮಾರ್ಪಾಡು ಮಾಡಿ ನಿರ್ದಿಷ್ಟ ಗುಣಲಕ್ಷಣಗಳಿರುವ ಬೆಳೆಗಳನ್ನು ಬೆಳೆಯುತ್ತಾರೆ. ಈ ಜ್ಞಾನವೇ ತಳಿ ವಿಜ್ಞಾನದ ತಿರುಳು.

ಜೀವಿಗಳನ್ನು ಬೇಕೆಂದ ರೀತಿ ಮಾರ್ಪಡಿಸಿದಾಗ ಬತ್ತ, ಗೋಧಿಯ ಸಸ್ಯದ ಎತ್ತರ ಮಾರ್ಪಾಡಿಸಬಹುದು; ತೆನೆಯಲ್ಲಿರುವ ಕಾಳಿನ ಸಂಖ್ಯೆ ಹೆಚ್ಚು ಕಡಿಮೆ ಮಾಡಬಹುದು. ಕಾಳು ಜಾಸ್ತಿ ಬೇಡ; ಮೇವಿಗಾಗಿ ಸಸ್ಯದ ಕಾಂಎ ಭಾಗ ಬೇಕೆಂದರೆ ಅಂಥ ತಳಿ ರೂಪಿಸಬಹುದು. ಗಿಡ್ಡಕ್ಕೆ ಸಸ್ಯಬೆಳೆದು ಬೇಗ ಕಟಾವಿಗೆ ಬರುವಂತೆ ಮಾಡಬಹುದು. ಕಾಳಿನ ಗಾತ್ರ. ನವುರು, ಗಟ್ಟಿಗುಣ, ಆಕಾರ, ಬಣ್ಣ ಏನುಬೇಕಾದರೂ ಮಾಡಬಹುದು. ಬತ್ತ ಗೋಧಿ ಮಾತ್ರವಲ್ಲ ಯಾವುದೇ ಸಸ್ಯದ ಸಂಬಂಧ ಜೀನಿಗಳ ಮೂಲಕ ಯಾವುದೇ ಬದಲಾವಣೆ ತರಬಹುದು. ಬಿಡಿ ಭಾಗ ರೂಪದಲ್ಲಿ ಕಬ್ಬಿಣವನ್ನು ಕೊಟ್ಟರೆ ಒಬ್ಬ ಎಂಜಿನಿಯರ್ ಹೇಗೆ ಬೇರೆ ಬೇರೆ ರೀತಿ ವಾಹನ ತಯಾರಿಸಬಲ್ಲನೋ ಹಾಗೆ ಜೀವ ವಿಜ್ಞಾನದ ಭಾಗವೆನಿಸಿದ ತಳಿ ವಿಜ್ಞಾನಿಗಳು ಜೀನಿ ಎಂಜಿನಿಯರ್‌ಗಳಾಗಿ ಬಿಡುತ್ತಾರೆ.

ಜೀನಿ ಎಂಜಿನಿಯರ್‌ಗಳು ಅತ್ಯಧಿಕ ಲಾಭಕಾರಿ ತಳಿಗಳನ್ನು ಸೃಷ್ಟಿಸಿಕೊಡುತ್ತಾರೆ. ಆ ತಂತ್ರಗಳನ್ನು ಬೀಜೋತ್ಪಾದನ ಕಂಪೆನಿಗಳು ಕೈವಶ ಮಾಡಿಕೊಂಡು ನಿರ್ದಿಷ್ಟ ಗುಣಲಕ್ಷಣಗಳ ತಳಿಯ (ಜೆನೆಟಿಕಲಿ ಮಾಡಿಫೈಡ್‌-ಜಿಎಂ) ಬೀಜಗಳನ್ನು ರೈತರಿಗೆ ಮಾರುವ ಉದ್ದೇಶದಿಂದ ಉತ್ಪಾದಿಸುತ್ತಾರೆ. ಇದು ಬಹಳ ದುಬಾರಿ. ಆದರೆ ಬೆಳೆ ವಿಪರೀತವಾಗಿ ಬೆಳೆಯಬಹುದು.

ಈ ಬೀಜಗಳು ಏಕ ಬೆಳೆ ಬೀಜಗಳು. ಬೆಳೆ ತೆಗೆದಾಗ ಮಾಡುವ ಕಾಳನ್ನು ಮತ್ತೆ ಬೀಜವಾಗಿ ಬಳಸಲಾಗದು. ಈವರೆಗೆ ಹಾಗಿರಲಿಲ್ಲ; ಬೆಳೆದಿದ್ದರಲ್ಲಿ ಒಂದಷ್ಟು ಕಾಳನ್ನು ಮುಂದಿನ ಫಸಲಿಗೆ ಬಳಸಬಹುದಿತ್ತು.

ಕಂಪೆನಿ ಬೀಜವನ್ನೇ ಬಳಸಬೇಕೆಂದಾಗ ರೈತನಿಗೆ ತನ್ನ ಬೀಜ ಬೆಳೆದುಕೊಳ್ಳುವ ಸ್ವಾತಂತ್ರ್ಯ ಹೋಯಿತು. ಕೀಟಗಳು ಬೀಳದಂತೆ ಮಾಡುವ, ರೋಗ ಹತ್ತದಂತೆ ಮಾಡುವ, ನೀರು ಹೆಚ್ಚಾದಾಗ ಅಥವಾ ನೀರು ಕಡಿಮೆಯಾದಾಗ ಸಸ್ಯವು ತಡೆದುಕೊಳ್ಳುವಂತೆ ಮಾಡುವ, ಬೆಳೆ ಸುತ್ತ ಕಳೆ ಬದುಕುಳಿಯದಂತೆ ಮಾಡುವ ನಾನಾ ಬಗೆಯ ತಳಿಗಳು (ಜಿ.ಎಂ. ಬೀಜಗಳು) ಸೃಷ್ಟಿಯಾಗುತ್ತವೆ. ಜಿ.ಎಂ: ಎಂಬುದೇ ಅಸಹಜ ಸೇಷ್ಟಿಯ ಪರಿಣಾಮ, ಅದರಿಂದ ಮರುಸೃಷ್ಟಿ; ಇದು ಪ್ರಕೃತಿಗೇ ವಿರೋಧಿ; ಇದರಿಂದ ಬೆಳೆ ತೆಗೆಯುವಾಗ ಜೀವಿ ಸಮತೋಲನವೇ ತಪ್ಪುತ್ತದೆ; ಪರಿಸರಕ್ಕೆ ಹಾನಿ ಎಂದು ವಾದಿಸುವವರು ಹೆಚ್ಚಾಗಿದ್ದಾರೆ. ಜಿ.ಎಂ. ಉತ್ಪನ್ನಗಳನ್ನು ಬಳಸಿದ ಆಹಾರ ಪದಾರ್ಥವಿಟ್ಟರೆ ಅವನ್ನು ಮಾರುವಾಗ ಪೊಟ್ಟಣದ ಮೇಲೆ ನಮೂದಿಸುವಂತೆ ಮಾಡುವಲ್ಲಿ ಇಂಥವರು ಕೆಲವು ದೇಶಗಳಲ್ಲಿ ಯಶಸ್ವಿಯಾಗಿದ್ದಾರೆ.

ಹೀಗೆ ಗುರುತಿಸಬೇಕಾದ ಉತ್ಪನ್ನಗಳನ್ನು ಅಮೆರಿಕದಲ್ಲಿ ಪಟ್ಟಿ ಮಾಡಲಾಗಿದೆ. ಬ್ರಿಟನ್‌ನಲ್ಲಿ ಜಿ.ಎಂ. ವಿರೋಧ ಅಲೆ ಎಷ್ಟೊಂದು ಎದ್ದಿದೆಯೆಂದರೆ ವಿಜ್ಞಾನಿಗಳು ವಲಸೆ ಹೋಗುತ್ತಿದ್ದಾರೆ. ಇತರ ಐರೋಪ್ಯ ರಾಷ್ಟ್ರಗಳು, ಕೆನಡಾ, ನ್ಯೂಜಿಲೆಂಡ್ ಇಲ್ಲೆಲ್ಲ ಭಾರೀ ಚಳವಳಿ ನಡೆಯತೊಡಗಿದೆ.

ಅಲ್ಲೆಲ್ಲ ವಿರೋಧ ಬಂದ ಮೇಲೆ ಕೃಷಿಯನ್ನು ವ್ಯಾಪಾರ ಮಾಡಿಕೊಂಡಿರುವ ಕಂಪೆನಿಗಳು ಭಾರತ, ಚೀನಾ ಮುಂತಾದ ಕಡೆ ಜಿ.ಎಂ. ವಾಣಿಜ್ಯ ಬೆಳೆಗಳನ್ನು ಚಾಲೂ ಮಾಡಲು ಹೊರಟಿವೆ.

ಈ ಹಿನ್ನೆಲೆಯಲ್ಲಿ ಭಾರತದ ಕೃಷಿಕರು ಬಿಟಿ ಹತ್ತಿ (ಜಿಎಂ ಬೀಜದಿಂದ ಬೆಳೆದ ಹತ್ತಿ) ಬೆಳೆ ಇಟ್ಟಿದ್ದು. ವಿಜ್ಞಾನಿಗಳು, ಸರ್ಕಾರದ ಪ್ರತಿನಿಧಿಗಳು, ಬೀಜ ಕಂಪೆನಿಗಳು ಬಿಟಿ ಹತ್ತಿಯ ಅನುಕೂಲಗಳೇನೆಂದು ದೊಡ್ಡದಾಗಿ ಹೇಳಿದರು. ಮುಖ್ಯವಾಗಿ ಇಳುವರಿಯು ಶೇ. ೮೦ ಏರುತ್ತದೆಂದೂ ಕೀಟನಾಶಕದ ಬಳಕೆ ಕಡಿಮೆ ಆಗುವುದೆಂದೂ ಹೇಳಿದರು. ಮೊದಲು ಬೆಳೆ ತೆಗೆದಾಗಲೇ ಇದೆಲ್ಲ ಹುಸಿ ಎನಿಸಿಕೊಂಡಿತು. ಆಂಧ್ರದ ಉತ್ತರ ತೆಲಂಗಾಣ ಭಾಗದಲ್ಲಿ ಇಳುವರಿಯು ಬಿಟಿಯೇತರ ಹತ್ತಿ ಬೆಳೆದರೆ ಏನಿರುತ್ತಿತ್ತೋ ಅದರ ಐದನೇ ಒಂದು ಭಾಗ ಇತ್ತು. ದಕ್ಷಿಣ ತೆಲಂಗಾಣ ಭಾಗದಲ್ಲಿ ಇಳುವರಿ ಏಳನೇ ಒಂದು ಭಾಗಕ್ಕಿಳಿಯಿತು.

ಭಾರತದಲ್ಲಿ ಬಿಟಿ ಹತ್ತಿ ಬೆಳೆಗೆ ಮುಂದಾದ ಮಹಾರಾಷ್ಟ್ರ ಹೈಬ್ರಿಡ್‌ಬೀಜ ಕಂಪೆನಿ ಮತ್ತು ಮಾನ್ಸಾಂಟೊ ಮಹಿಕೊ ಕಂಪೆನಿ ಎರಡೂ ಕಣ್ಣು ಕಣ್ಣು ಬಿಡುವಂತಾಗಿದೆ. ಮಾನ್ಸಾಂಟೊ ಕಂಪೆನಿಯು ಭಾರತದಲ್ಲಿ ಬಿಟಿ ಮೆಕ್ಕೆ ಜೋಳ ಬೆಳೆಯಲು ಕೂಡಾ ಕಾರಣವಾಗಿದೆ. ರೌಂಡ್‌ರೆಡಿಕಾರ್ನ್‌ಎಂಬುದು ಇದರ ಬೀಜ. ಇದರ ಬೆಳೆ ತೆಗೆಯಲು ಬೇಕಾದರೆ ಕಾಂಡ್‌ಅಪ್ ಅನ್ನುವ ಕಳೆ ನಾಶಕವನ್ನು ಸಹಾ ಸಿಂಪಡಿಸಬೇಕು. ಅದಕ್ಕೂ ಕಂಪೆನಿಯು ಪೇಟೆಂಟ್‌ಪಡೆದಿದೆ. ರೈತ ಎರಡಕ್ಕೂ ಒಟ್ಟಿಗೆ ಖರೀದಿಸಿ ಬಳಸಬೇಕು. ಆದರೆ ಆ ಮೆಕ್ಕೆಜೋಳ ಬೆಳೆ ಸಹಾ ವಿಫುಲವಾಗಿದೆ ಎಂದು ವರದಿಗಳು ಬಂದಿವೆ.

ಹೀಗೆ ಆದರೆ ಭಾರತದಂಥ ರಾಷ್ಟ್ರ ಸಹಿಸಿಕೊಳ್ಳುತ್ತದೆ. ಅದಕ್ಕೊಂದು ನಿದರ್ಶನ; ಬಿಟಿ ಹತ್ತಿ ತಳಿಗೆ ಅಂಗೀಕಾರ ಮುದ್ರೆ ಒತ್ತಿದ ‘ಜೀನಿ ಎಂಜಿನಿಯರಿಂಗ್ ಅಂಗೀಕಾರ ಸಮಿತಿ’ ಕ್ರಮವನ್ನು ಪರಿಸರ ಸಂರಕ್ಷಣೆ ಕುರಿತ ‘ರಾಷ್ಟ್ರೀಯ ಮೇಲ್ಮನವಿ ಪ್ರಾಧಿಕಾರ’ ಎಂಬ ವೇದಿಕೆಯಲ್ಲಿ ಪ್ರಶ್ವಿಸಲಾಯಿತು. ವಿಜ್ಞಾನ ತಂತ್ರಜ್ಞಾನ ಮತ್ತು ಪರಿಸರ ಕುರಿತು ಸಂಶೋಧನಾ ಪ್ರತಿಷ್ಠಾನ ಎಂಬ ಸಂಸ್ಥೆ ಹೀಗೆ ಪ್ರಶ್ನಿಸಿದ್ದು, ಹಾಗೆ ಪ್ರಶ್ನಿಸಿದ ತಕರಾರು ಅರ್ಜಿ ವಜಾ ಆಯಿತು!

ಸುರಕ್ಷತೆ ಕುರಿತಂತೆ ವಿಧಿಸಿದ್ದ ನಿರ್ಬಂಧಗಳ ಉಲ್ಲಂಘನೆ ಆಗಿದೆ ಎಂದು ಅರ್ಜಿದಾರರು ರುಜುವಾತು ಮಾಡಿಲ್ಲ ಎಂಬುದು ಅದರ ವಿವರಣೆ. ಅಂದರೆ ಬಿಟಿ ಹತ್ತಿ ಬೆಳೆಯುವುದನ್ನು ನಿಷೇಧಿಸಲಿಲ್ಲ. ಮತ್ತೆ ಮತ್ತೆ ಬಿಟಿ ಬೆಳೆಯಲು ರೈತರನ್ನು ಪ್ರೇರೇಪಿಸಲು ಅವಕಾಶ ಉಳಿದೇ ಇದೆ.

ಕಳೆದ ವಾಡ ಲಂಡನ್‌ನಿಂದ ಬಂದ ಒಂದು ವರದಿ ಭಾರೀ ಕುತೂಹಲಕಾರಿ. ಅಮೆರಿಕದ ಕುಖ್ಯಾತ ಮುನ್ಸಾಂಟೊ ಕಂಪೆನಿಯು ಬ್ರಿಟನ್ ಮತ್ತು ಯೂರೋಪಿನಿಂದ ಕಾಲ್ತೆಗೆದಿದೆ. ಕೋಟ್ಯಂಟರ ಪೌಂಡ್‌ವಹಿವಾಟಿನ ತನ್ನ ಕೃಂಬ್ರಿಡ್ಸ್‌ಕೇಂದ್ರವನ್ನು ಮುಚ್ಚಿರುವುದಾಗಿ ಪ್ರಕಟಿಸಿದೆ.

ಆಗಿದ್ದು ಹೀಗೆ. ಜಿ.ಎಂ. ಬೆಳೆಗಳು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಬ್ರಿಟನ್ನಿನಾದ್ಯಂತ ರುಜುವಾಗಿದೆ; ಬಹುತೇಕ ಜನರು ಜಿ.ಎಂ. ಆಹಾರ ಸಾಮಗ್ರಿ ಬಳಕೆಗೆ ವಿರೋಧವಾಗಿದ್ದಾರೆ ಎಂದು ಬ್ರಿಟನ್ ಸರ್ಕಾರ ಕಳೆದ ಗುರುವಾರ ಪ್ರಕಟಿಸಿತು.

ಮಾನ್ಸಾಂಟೊ ವಕ್ತಾರರು ಮಾತ್ರ ಕೇಂಬ್ರಿಡ್ಜ್ ಕೇಂದ್ರ ಮುಚ್ಚಲು ಬ್ರಿಟನ್ನಿನ ಪ್ರಕಟಣೆ ಕಾರಣವಲ್ಲ ಎಂದೇ ವಾದಿಸಿದ್ದಾರೆ. ‘ಜಾಗತಿಕ ಮಟ್ಟದಲ್ಲಿ ಕಂಪೆನಿ ವ್ಯವಹಾರಗಳ ಹೊಂದಾಣಿಕೆ ಯತ್ನ ಇದು’ ಎಂದಿದ್ದಾರೆ!

ಬಿಟಿ ಬೆಳೆಗೆ ಪರವಾನಗಿ ಕೊಡುವ ಸಮಿತಿ ಭಾರತದಲ್ಲಿರುವಂತೆ ನೆದರ್ಲೆಂಡ್‌ನಲ್ಲೂ ಒಂದು ಉಂಟು. ಆ ಸಮಿತಿಯು ಬಿಟಿ  ಬೆಳೆಯ ದುಷ್ಪರಿಣಾಮ ಅಧ್ಯಯನ ಮಾಡಲು ಒಂಬತ್ತು ಮಂದಿ ಪರಿಸರಿ ತಜ್ಞರನ್ನು ನಿಯೋಜಿಸಿತು. ಅವರು ಒಕ್ಕೊರಲಿನ ಸಮೀಕ್ಷಾ ಫಲಿತವನ್ನು ಪ್ರಕಟಿಸಿದರು. ಬಿಟಿ ಬೆಳೆಯು ಇತರ ಬೆಳೆಗಳ ಜೀನಿ ಸ್ವರೂಪಕ್ಕೆ ಧಕ್ಕೆ ತರುವುದಲ್ಲದೆ, ಭೂಮಿಯ ಮಣ್ಣು ಗುಣವನ್ನೂ ಹಾಳುಗೆಡವಿದೆ. ಬಿಟಿ ಬೆಳೆಗಳು ಹೊಸ ಬಗೆಯ ಕೀಟಗಳ ಹಾವಳಿಗೆ ಕಾರಣವಾಗಿ, ಅದರ ವಿರುದ್ಧ ನಿರ್ದಿಷ್ಟ ರಾಸಾಯನಿಕ ಕೀಟನಾಶಕಗಳನ್ನು ಹೊಸದಾಗಿ ಬಳಸುವಂತಾಗಿದೆ.

ಚೀನಾದಲ್ಲಿ ೫೦ ಲಕ್ಷ ಹೆಕ್ಟೇರಿನಲ್ಲಿ ಬಿಟಿ ಹತ್ತಿ ಬೆಳೆದಿದ್ದಾರೆ. ಪ್ರತಿ ಬಾರಿ ಮುಂದಿನ ವರ್ಷಕ್ಕೆ ಕಾಲಿಟ್ಟಾಗಲೂ ಬಿಟಿ ಹತ್ತಿಗೆ ಬಾಧಕವಾಗುವ ಅಮೆರಿಕನ್ ಬೋಲ್‌ವರ್ಮ್‌ವಿರುದ್ಧ ದುಪ್ಪಟ್ಟು ಕ್ರಿಮಿನಾಶಕ ಬಳಸಬೇಕಾಗುತ್ತದೆ. ವಾಣಿಜ್ಯ ಬೆಳೆ ಸಂಬಂಧ ಬಯೋಟೆಕ್‌ಪರಿಣಾಮ ಮಾರಕವಾಗುತ್ತಿದೆ.

ಔಷಧ ತಯಾರಿಕೆ ಕುರಿತಂತೆ ಅದೇ ಬಯೋಟೆಕ್ ನೆರವಾಗುವಂತಿದೆ ಎಂಬುದು ನಿಜ.

೨೬.೧೧.೨೦೦೩