ಬದುಕಿನ ಬೆನ್ನೆಲುಬು ಬೇಸಾಯ-ಇದು ಹಳೆಯ ನುಡಿಗಟ್ಟು. ತೀರಾ ಸವಕಲಾಗಿ ಚಲಾವಣೆಯನ್ನು ಕಳೆದುಕೊಂಡಿದೆ. ವಾಸ್ತವವಾಗಿ ಕೃಷಿ ಮಾತ್ರವಲ್ಲ; ಯಾವುದೇ ಘೋಷ ವಾಕ್ಯಗಳಿಗೆ ಈಗ ಅಂಥ ಬೆಲೆಯಿಲ್ಲ.

ರೈತನಿಗಿದ್ದ ಅನ್ನದಾತ, ನೇಗಿಲಯೋಗಿ, ಮಣ್ಣಿನಮಗ ಮುಂತಾದ ಹೆಸರುಗಳೂ ಈಗ ಹೋಗಿವೆ. ಅವುಗಳ ದುರ್ಬಳಕೆ ಧಾರಾಳವಾಗಿ ನಡೆದಿವೆ. ರೈತನಾದವನು ಸಂಪತ್ತಿನ ಸೃಷ್ಟಿಕರ್ತ ಎನ್ನುವುದಕ್ಕಿಂತ ತನ್ನ ಹಕ್ಕಿಗಾಗಿ ತನ್ನ ಉಳಿವಿಗಾಗಿ, ಬದಕಲು ಅನಿವಾರ್ಯವೇ ಆಗಿ ಹೋಗಿರುವ ಕೃಪಾಕಟಾಕ್ಷ ಮಾದರಿಯ ಸವಲತ್ತುಗಳಿಗಾಗಿ, ಗೋಗರೆಯುವ, ರಚ್ಚೆ ಹಿಡಿಯುವ ಮತ್ತು ಹೋರಾಟದ ಹಾದಿ ತುಳಿಯುವ ತರದೂದಿನಲ್ಲಿ ಮುಳುಗಿ ಹೋಗಿದ್ದಾನೆ. ರಾಜಕಾರಣಿಗಳ ಪಾಲಿಗೆ ಚದುರಂಗದಾಟದ ಕಾಯಿ ಆಗಿದ್ದಾನೆ.

ಕರ್ನಾಟಕದ ವಿದ್ಯಮಾನವನ್ನೇ ತೆಗೆದುಕೊಂಡರೂ ರೈತನ ದಯನೀಯ ಸ್ಥಿತಿ ಮನದಟ್ಟಾಗುತ್ತದೆ. ರಾಜ್ಯವು ರೇಷ್ಮೆ ಕೃಷಿಯಲ್ಲಿ ಭಾರತದಲ್ಲೇ ಪ್ರಥಮ. ಪರಂಪರಾಗತವಾಗಿ ಮಾಡಿಕೊಂಡು ಬಂದಿದ್ದನ್ನು ಬಿಡಲಾಗದೆ ಹಿಪ್ಪನೇರಳೆ ಬೆಳಸಿ ರೇಷ್ಮೆ ಗೂಡು ಗುಡ್ಡೆ ಹಾಕುತ್ತಿದ್ದಾನೆಯೇ ಹೊರತು ಅದರಿಂದ ತನ್ನ ಜೀವನ ನಡೆಯುತ್ತದೆಂದೇನೂ ಅಲ್ಲ. ತೆಂಗು ಬೆಳೆಯುವ ನಾಲ್ಕೈದು ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ನುಸಿಪೀಡೆ ಬಾಧೆ. ಅದಕ್ಕೊಂದು ಔಷಧಿ ಕಂಡುಹಿಡಿಯಲಾಗದ ಕೃಷಿ ತಜ್ಞರು ಮತ್ತು ರಾಜ್ಯ ಸರ್ಕಾರದವರಿಗೆ ನಾಚಿಕೆ ಇಲ್ಲ. ಕಲ್ಪವೃಕ್ಷ ಎನ್ನುವ ಕಾರಣಕ್ಕೆ ತೆಂಗಿನ ಮರಗಳನ್ನು ಉರುಳಿಸದೆ ಹಾಗೆಯೇ ಬಿಟ್ಟುಕೊಳ್ಳುತ್ತಿದ್ದಾರೆ. ಅಡಿಕೆ ಬೆಳೆದು ಮಾನ ಹೋಗಿದ್ದರೂ ಆನೆಯೇನೂ ಕಾಣುತ್ತಿಲ್ಲ. ನೆಲ ಬಿದ್ದು ಹೋಗಿ ಮದುವೆ ಕಾಣದೆ ಅಡಿಕೆ ಬೆಳೆಯುವ ಮನೆಗಳ ಹೆಣ್ಣು ಮಕ್ಕಳು ವಯಸ್ಸು ಮೀರುತ್ತಿದೆಯೆಂದು ಬಿಸಿಯುಸಿರು ಬಿಡುತ್ತಿದ್ದಾರೆ. ಬತ್ತ, ರಾಗಿ ಬೆಳೆಯುವುದನ್ನು ಕೈಬಿಟ್ಟು ಸ್ಥಳೀಯ ರಾಜಕೀಯದ ಚಾವಡಿ ಎಂದೇ ಎನಿಸಿಕೊಂಡ ಸಕ್ಕರೆ ಕಾರ್ಖಾನೆಗಳ ಹಂಗಿಗೆ ಬಿದ್ದ ಕಬ್ಬು ಬೆಳೆಗಾರರು ಬೆಳೆ ಬದಲಾವಣೆಗೆ ಒಪ್ಪುತ್ತಲೇ ಇಲ್ಲ. ಸಕ್ಕರೆ ಮಾತ್ರವಲ್ಲ; ಬೆಲ್ಲವೂ ಅವನ ಪಾಲಿಗೆ ಕಹಿ.

ಕೃಷಿಗೆ ಉದ್ಯಮ ಸ್ಥಾನಮಾನ ಕೊಡಬೇಕು ಎನ್ನುತ್ತಾರೆ. ದೊಡ್ಡ ಹಿಡುವಳಿದಾರರನ್ನು ಕಂಡಾಗ ಕೃಷಿ ವರಮಾನಕ್ಕೆ ತೆರಿಗೆ ವಿಧಿಸಿ ಕಟ್ಟುನಿಟ್ಟಾಗಿ ವಸೂಲು ಮಾಡಬೇಕೆನ್ನುತ್ತಾರೆ. ಆದರೆ ಕೃಷಿ ಭೂಮಿಯ ಮಾರುಕಟ್ಟೆ ಮೌಲ್ಯವನ್ನು ನಿಗದಿ ಮಾಡಿ, ಅದನ್ನೇ ತೊಡಗಿಸಿದ ಬಂಡವಾಳವಾಗಿ ಪರಿಗ್ರಹಿಸಿ ರೈತನ ದುಡಿಮೆಯನ್ನೇ ದುಡಿಮೆ ಬಂಡವಾಳವಾಗಿ ಲೆಕ್ಕಹಾಕಿ ತಜ್ಞರು ಲಾಭ ಇಷ್ಟೆಂದು ಲೆಕ್ಕಹಾಕಿ ತೋರಿಸಬಲ್ಲರೇನು? ಬೆಳೆ ಕೈಗೆ ಹತ್ತದೇ ಹೋದಾಗ ಇಳಿಸಿದ್ದ ವಿಮೆ ಬಾಬ್ತು ಪರಿಹಾರ ವರ್ಷಗಟ್ಟಲೆ ಕೈ ಸೇರುವುದಿಲ್ಲ. ಮುಂದಿನ ವರ್ಷದ ಬೆಳೆಯಿಡಲು ಬೇಕಾಗುವ ಬಿತ್ತನೆ ಬೀಜಕ್ಕೆಂದಾದರೂ ವಿಮೆ ಪರಿಹಾರ ಕೊಡಿಸಿರೆಂದು ಅಂಗಲಾಚುವ ಪರಿಸ್ಥಿತಿ. ಕೃಷಿ ಸಾಲದ ಬಡ್ಡಿ ಮನ್ನಾ ಮಾಡಲು ಕೇಳಿಕೊಳ್ಳಬೇಕು.

ಆದರೂ ಕೃಷಿಕ ತನ್ನ ಕಾಯಕವನ್ನು ಕೈಚೆಲ್ಲುವುದಿಲ್ಲವೇಕೆ? ಅದನ್ನು ಬಿಟ್ಟು ಬೇರೆ ತಾನೆ ಮಾಡುವುದಿನ್ನೇನು? ಇರುವ ತುಂಡು ಭೂಮಿಯನ್ನಾದರೂ ಹೇಗಾದರೂ ಜೋಪಾನ ಮಾಡಿಕೊಂಡರೆ  ಭವಿಷ್ಯದಲ್ಲಾದರೂ ಒಳ್ಳೆಯ ದಿನಗಳು ಬರುವುದೇನೋ ಎಂಬ ಆಶೆ.

ಅವು ಬರುತ್ತವೇನು?

ಇವತ್ತು ಬೆಲೆ ಇಲ್ಲದೆ ಆಹಾರ ಧಾನ್ಯಗಳ ವರ್ಚಸ್ಸು ಕುಸಿದಿದೆ. ಬೆಳೆಗಾರ ತತ್ತರಿಸಿರುವುದು ಅದರಿಂದಲೇ. ಶ್ರಮಕ್ಕೆ ಪ್ರತಿಫಲದ ಮಾತು ಹಾಗಿರಲಿ; ಹಾಕಿದ ಹಣವೇ ಏಳುವುದಿಲ್ಲ. ಕೃಷಿ ಸೋತರೂ ಅದರ ಜೊತೆಗಿನ ಉಪಕೃಷಿ ಮತ್ತಿತರ ಅನುಕೂಲಗಳು ಏನಿವೆಯೊ, ಅದರಿಂದ ಬದುಕಿದ್ದಾನೆ ಕೃಷಿಕ.

ಆದರೆ ೨೦೦೩ರ ಹೊತ್ತಿಗೆ ಆರ್ಥಿಕ ಹಿಂಜರಿತ ಮುಗಿದು ಆರ್ಥಿಕ ಪುನರುತ್ಥಾನ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲ, ವಿಶ್ವದ ಆಹಾರಧಾನ್ಯ ಮಾರುಕಟ್ಟೆ ಮೇಲೆ ಭಾರತದ ಧಾನ್ಯ ಸ್ಥಿತಿಗತಿ ಮತ್ತು ಏರುಪೇರು ಇವು ಭಾರೀ ಪರಿಣಾಮ ಬೀರುತ್ತವೆ.

ಈಗ ಮುಂದುವರೆದ ರಾಷ್ಟ್ರಗಳು ತಂತಮ್ಮ ಧಾನ್ಯ ಕೃಷಿಯನ್ನು ವಿಪರೀತ ಸಬ್ಸಿಡಿಯೇ ಮುಂತಾದುವನ್ನು ನೀಡಿ ಕಾಪಾಡುತ್ತಿದ್ದಾರೆ. ಯಾವುದಾದರೊಂದು ದಿನ ಕೃಷಿ ಉತ್ಪನ್ನ ಮಾರಿ ದುಡ್ಡು ಮಾಡಬಹುದು ಎಂಬುದೇ ಅವರ ಆಂತರ್ಯ. ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಸಬ್ಸಿಡಿಗಳ ಖೋತಾಕ್ಕೆ ಪಾಶ್ಚಿಮಾತ್ಯ ಹಿತಗಳು ಒತ್ತಡ ತರುತ್ತಿವೆ.

ಇನ್ನೂ ಒಂದು ವಿದ್ಯಮಾನವುಂಟು. ಕೃಷಿ ಉತ್ಪನ್ನ ಎನ್ನುವಾಗ ಮನುಷ್ಯ ತಿನ್ನುವ ಧಾನ್ಯದ ಬದಲು ಹಂದಿ, ಕೋಳಿ ಮುಂತಾದವುಕ್ಕೆ ಆಹಾರವಾಗಿ ದೂಡಬಹುದಾದ ಐಟಂಗಳನ್ನು ಬೆಳೆಯುವುದು. ಆ ಮೂಲಕ ಕೃಷಿ ಮತ್ತು ಕುಕ್ಕಟ ಪಶುಸಂಗೋಪನೆ ಎರಡನ್ನೂ ಬೆಳೆಸಬಹುದು. ಒರಟು ಧಾನ್ಯ ತಿನ್ನುವ ಪ್ರಾಣಿಗಳು ಮಾಂಸ ಒದಗಿಸುತ್ತವೆ. ಭಾರತದಲ್ಲಿ ಮಾಂಸಾಹಾರ ಸೇವನೆ ಹೆಚ್ಚಾಗಿದೆ. ಮೆಕ್ಕೆ ಜೋಳದ ಪಾಲಿಗೆ ಬೇಡಿಕೆ ಕುದುರಿದ್ದೇ ಹೀಗೆ. ಪಂಜಾಬಿನಲ್ಲಿ ಜಾನುವಾರಿಗಾಗಿ ಹುಲ್ಲು ಬೆಳೆಸುವ ಬದಲು ತುಂಬಾ ಪುಷ್ಟಿ ಕೊಡುವ ಗೋರಿಕಾಯಿ ಬೆಳೆಸುತ್ತಾರೆ. ಇಡೀ ಗಿಡವನ್ನೇ ತುಂಡು ತುಂಡಾಗಿ ಕತ್ತರಿಸಿ ಜಾನುವಾರಿಗೆ ಆಹಾರವಾಗಿಸುತ್ತಾರೆ.

ಇದೇನಾದರೂ ಇರಲಿ; ಈ ವರ್ಷ ಮಳೆ ಸರಿಯಾಗಿ ಆಗಿಲ್ಲ. ಇನ್ನು ಅತ್ಯಗತ್ಯವಾದ ಆಹಾರಧಾನ್ಯ ಹೊಂಚಿಕೊಳ್ಳುವುದು ಹೇಗೆ?

ಚಿಂತೆ ಇಲ್ಲ. ಅಪಾರ ಕಾಪು ದಾಸ್ತಾನು ನಮ್ಮಲ್ಲಿದೆ. ಅದನ್ನು ಮಾರಲಾಗದೆ ಏನೂ ಮಾಡಲಾಗದೆ ಸುಮ್ಮನೇ ಸಂಗ್ರಹಿಸಿ ಇಟ್ಟಿದ್ದೇವೆ. ಬೇರೆ ರಾಷ್ಟ್ರಗಳವರಾದರೆ ಸಮುದ್ರಕ್ಕೆ ಸುರಿಯುತ್ತಿದ್ದರೇನೋ! ಬ್ರೆಜಿಲ್‌ನಲ್ಲಿ ಒಮ್ಮೆ ಹಾಗೆಯೇ ಆಯಿತು. ವಿಪರೀತ ಕಾಫಿ ಬೆಳೆ ಆಗಿಬಿಟ್ಟಿತು. ಹೆಚ್ಚು ಹೆಚ್ಚು ಮಾರುತ್ತಾ ಹೋದರೆ ವಿಶ್ವ ಕಾಫಿ ಬೆಲೆ ಕುಸಿಯುತ್ತಾ ಹೋಗುತ್ತದೆ. ಚೂರುಪಾರು ಬೆಲೆ ಅನುಕೂಲವೂ ಕೈ ತಪ್ಪುತ್ತದೆ. ಆಗ ಕಾಫಿ ಗಿಡಗಳನ್ನೇ ಕಡಿದು ಸಮುದ್ರಕ್ಕೆ ಎಸೆದರು!

ನಮ್ಮಲ್ಲೂ ಈರುಳ್ಳಿಗೆ, ತರಕಾರಿಗೆ ಬೆಲೆ ಬರದಿದ್ದರೆ ಹೊಲದಲ್ಲೇ ಗೊಬ್ಬರಕ್ಕೆ ತುಳಿದು ಹಾಕುತ್ತಾರೆ. ಆದರೆ ಆಹಾರಧಾನ್ಯದ ವಿಷಯದಲ್ಲಿ ಹಾಗೆ ಮಾಡುವುದಿಲ್ಲ. ಅನ್ನ ಲಕ್ಷ್ಮಿ ಎಂದು ಜೋಪಾನ ಮಾಡುತ್ತಲೇ ಹೋಗುತ್ತಾರೆ. ಹೆಗ್ಗಣಗಳು, ಮನುಷ್ಯ ರೂಪಿ ಹೆಗ್ಗಣಗಳು ತಿಂದುಹಾಕುತ್ತವೆ. ಕಾವೇರಿ ನೀರು ಬಳಸಿ ತಮಿಳುನಾಡಿನ ತಂಜಾವೂರು ಮತ್ತು ಚಿದಂಬರಂ ಜಿಲ್ಲೆಗಳಲ್ಲಿ ರಸ್ತೆ ಪಕ್ಕ ಕಾಲಂಚಿನಲ್ಲಿ ರೈತರು ಮೂಟೆಗಳನ್ನು ಅರಕ್ಷಿತವಾಗಿ ತಿಂಗಳುಗಟ್ಟಲೆ ಪೇರಿಸಿ ಇಟ್ಟಿರುತ್ತಾರೆ. ಭಾರತ ಆಹಾರ ನಿಗಮದ ವಶದಲ್ಲಿರುವ ಮೂಟೆಗಳದೇ ಅದೃಷ್ಟ ಎನಿಸುತ್ತದೆ.

ಹೀಗೆ ಆಹಾರಧಾನ್ಯ ಸಂಗ್ರಹಿಸಿ ಇಡುವುದಕ್ಕೇ ನಮ್ಮಲ್ಲಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಕೇಂದ್ರ ಸರ್ಕಾರವು ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಈ ಬಾಬುಗಳಿಗಾಗಿ ವರ್ಷದಲ್ಲಿ ಮಾಡುವ ಒಟ್ಟು ಖರ್ಚಿನಷ್ಟು ಹಣವನ್ನು ಆಹಾರ ಧಾನ್ಯ ಸಂಗ್ರಹಿಸಿ ಜೋಪಾನ ಆಡಲು ವ್ಯಯ ಮಾಡುತ್ತದೆ ಎಂದು ಲೆಕ್ಕ ಹಾಕಿರುವುದುಂಟು.

ದುರದೃಷ್ಟವಶಾತ್ ಹೀಗೆ ಬಳಸದೆ ಬಿದ್ದಿರುವ ಧಾನ್ಯವನ್ನು ಹಸಿದ ಕೈಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಜನರ ಖರೀದಿ ಸಾಮರ್ಥ್ಯ ನೆಲಕಚ್ಚಿದೆ. ಅದರ ವೃದ್ಧಿಗಾಗಿ ಗ್ರಾಮ ಪ್ರದೇಶಗಳಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡಬೇಕು. ದುಡಿದ ಕೈಗಳಿಗೆ ನಗದಿನ ಬದಲು ಕಾಳನ್ನು ವಿಸ್ತರಿಸುವ ಯೋಜನೆಯೊಂದು ಉಂಟು. ಎಲ್ಲ ರಾಜ್ಯಗಳೂ ಕೂಲಿಗಾಗಿ ನೀಡಲೆಂದು ಅಗ್ಗದಲ್ಲಿ ಕಾಳನ್ನು ಕೇಂದ್ರ ಕಣಜದಿಂದ ಪಡೆಯಲು ಪೈಪೋಟಿ ಮಾಡುತ್ತವೆ. ಆದರೆ ಆ ಕಾಳು ಉದ್ಯೋಗ ಸೃಷ್ಟಿಗಾಗಿ, ಆ ಮೂಲಕ ಖರೀದಿ ಸಾಮರ್ಥ್ಯ ವೃದ್ಧಿಗಾಗಿ ಬಳಸಲು ಆಗುವುದೇ ಇಲ್ಲ. ರಾಜಕಾರಣಿಗಳು, ಅವರ ಚೇಲಾಗಳು, ವರ್ತಕರು ಹೀಗೆ ಯಾರು ಯಾರೋ ಮುಕ್ಕಿ ನೀರು ಕುಡಿಯುತ್ತಾರೆ. ಲೆಕ್ಕದಲ್ಲಿ ರಸ್ತೆ ನಿರ್ಮಿಸಿದ, ನೆಲ ಅಗೆದ ದಾಖಲೆ ಮೇಲೆ ಕಾಳು ವಿತರಣೆಯಾದಂತೆ ನಮೂದಾಗುತ್ತದೆ. ಇದು ನಮ್ಮ ದೇಶದ ವ್ಯವಸ್ಥೆ. ಈ ವ್ಯವಸ್ಥೆಯೇ ಬಹುದೊಡ್ಡ ಶೋಷಕ.

ಬೆಳೆದ ರೈತ ಕನಿಷ್ಠ ಬೆಲೆಯಲ್ಲೋ, ಬೆಂಬಲ ಬೆಲೆಯಲ್ಲೋ, ಇಲ್ಲವೇ ಸಂಗ್ರಹ ಬೆಲೆಯಲ್ಲೋ ಸರ್ಕಾರದ ಕಣಜಕ್ಕೆ ಮಾರುತ್ತಾನೆ. ಪುಡಿಗಾಸು ಅವನ ಕೈ ಸೇರುತ್ತದೆ. ವರ್ಷಪೂರ್ತಿ ಜೀವನಾಧಾರ ಈ ಪುಡಿಗಾಸು.

ಕಣಜಕ್ಕೆಂದು ಕಾಳು ನೀಡಿದಾಗ ತಾನು ಬೆಳೆದದ್ದು ಉತ್ತಮವೋ ಕಳಪೆಯೋ ಎಂದು ಪರೀಕ್ಷಿಸುವ ಗೋಜಿಗೆ ರೈತ ಹೋಗುತ್ತಾನೆ. ಆದರೆ ಕಣಜಕ್ಕೆ ಹೋಗಿ ಸೇರುವುದು ಅವನು ಕೊಟ್ಟ ಧಾನ್ಯದ ಮೂಟೆಗಳಲ್ಲ. ಉತ್ತಮ ಧಾನ್ಯ ಅದರ ನಿಜ ಮೌಲ್ಯದ ಬೆಲೆಗೆ ಮಾರಾಟವಾಗಿ, ಅದರ ಬದಲು ಅತ್ಯಂತ ಕಳಪೆ ಧಾನ್ಯ ಕಣಜ ಸೇರುವ ಸುವ್ಯವಸ್ಥೆ ಇದೆ. ಈ ವ್ಯವಹಾರದ ಮಧ್ಯದ ಹಣ ಬಹಳ ವ್ಯವಸ್ಥಿತವಾಗಿ ಸೋರಿ ಹೋಗುತ್ತದೆ.

ಪರಿಣಾಮವೇನು? ಪಡಿತರ ಅಂಗಡಿಗಳಲ್ಲಿ ಎಷ್ಟು ಬೇಕಾದರೂ ಅಕ್ಕಿ, ಗೋಧಿ ಸಿಗುತ್ತದೆ. ಕೊಳ್ಳಲೆಂದು ಬರಲು ಬಡವರೂ ಹಿಂಜರಿಯುತ್ತಾರೆ. ಏಕೆಂದರೆ ಪರಿತರ ಬೆಲೆಗಿಂತ ಸ್ವಲ್ಪ ಹೆಚ್ಚಿಗೆ ಬೆಲೆ ಕೊಟ್ಟರೆ ಮುಕ್ತ ಮಾರುಕಟ್ಟೆಯಲ್ಲೇ ಸಾಕಷ್ಟು ಒಳ್ಳೆಯ ಗುಣಮಟ್ಟದ ಸರಕು ಸಿಗುತ್ತದೆ.

ಭಾರತ ಕೃಷಿ ಪ್ರಧಾನ ದೇಶ. ವಿಶ್ವದ ಹಲವು ಏರಿಳಿತಗಳ ನಡುವೆ ಸಹಾ ಆರ್ಥಿಕತೆ ಕುಸಿಯದೆ ಉಳಿದಿದ್ದಕ್ಕೆ ಈ ಗುಣಲಕ್ಷಣವೇ ಕಾರಣ. ಇದಕ್ಕೆ ಕಾರಣನಾದ ರೈತ ಒಂದು ವರ್ಷ ಮಳೆ ಬೀಳದಿದ್ದರೆ ತತ್ತರಿಸುವಂತೆ ಆಗುತ್ತದೆ. ಅದೇ ವಿಪರ್ಯಾಸ.

೩೦.೧೦.೨೦೦೨