ಹಾಲಿಗೆ ಹೆಪ್ಪು ಹಾಕಿ ಆಯಿತೆ?- ಸ್ವತಃ ಮೊಸರು ಸಿದ್ಧ ಮಾಡಿಕೊಳ್ಳುವ ಭಾರತದ ಕುಟುಂಬಗಳಲ್ಲಿ ಬಹುಪಾಲು ನಿತ್ಯ ಧ್ವನಿಸುವ ನುಡಿಗಟ್ಟು ಇದು.

ಹಾಲು ಮೊದರಾಗುವ ಪ್ರಕ್ರಿಯೆಯಲ್ಲಿ ಜೈವಿಕ ತಂತ್ರಜ್ಞಾನ (ಬಿಟಿ) ಕೆಲಸ ಮಾಡುತ್ತಿರುತ್ತದೆ ಎಂಬ ಅರಿವು ಮಾತ್ರ ಇರುವುದಿಲ್ಲ. ವಿಧವಿಧ ಮದ್ಯ ತಯಾರು ಮಾಡುವುದು ನಾಗರಿಕತೆಯ ಹಲವು ಮಜಲುಗಳ ಮೂಲಕ ಅಭಿವೃದ್ಧಿಗೊಳ್ಳುತ್ತಲೇ ಇದೆ. ಜಾನುವಾರು ಸಂಕರಣ, ಹೈಬ್ರಿಡ್ ಸಸ್ಯಗಳ ಅಭಿವೃದ್ಧಿ ಮುಂತಾದವೆಲ್ಲ ಸ್ಥೂಲ ರೂಪದ ಬಿ.ಟಿ. ಚಟುವಟಿಕೆಯೇ.

ಬಿ.ಟಿ. ಚಟುವಟಿಕೆ ಈಚೆಗೆ ಸುದ್ದಿಗೆ ಬಂದಿದ್ದು, ಬಿ.ಟಿ ಹತ್ತಿ ಮತ್ತು ಮುಸುಕಿನ ಜೋಳ ಬೆಳೆಗಳಿಂದ. ಪ್ರಯೋಗ ಬೆಳೆ ಯಶಸ್ವಿ ಆದರೂ ಬಳಕೆ ಪ್ರಮಾಣದ ಬೆಳೆ ತೆಗೆಯುವ ಯತ್ನ ವಿಫಲವಾಯಿತು. ಬಿ.ಟಿ. ಎನ್ನುವುದಕ್ಕೆ ಕೆಟ್ಟ ಹೆಸರು ಬರುತ್ತಿದೆ. ಆದರೆ ಜೈವಿಕ ತಂತ್ರಜ್ಞಾನವು ಭವಿಷ್ಯದ ದಾರಿದೀಪ ಎನ್ನುವುದು ಮಾತ್ರ ವಾಸ್ತವ.

ಜೀವಗುಣ ಲಕ್ಷಣಗಳನ್ನು ಪ್ರಾಣಿ ಅಥವಾ ಸಸ್ಯಗಳಲ್ಲಿ ತಲೆಮಾರಿನಿಂದ ತಲೆ ಮಾರಿಗೆ ದಾಟಿಸುವ ಜೀನ್‌ಗಳೆಂಬ ಅಣುಗಳೂ, ಜೀವಸತ್ತ್ವಾಧಾರ ಎನಿಸಿದ ಪ್ರೊಟಿನ್‌ಅಣುಗಳೂ ಯಾವುದೇ ಜೀವ ಪ್ರಕ್ರಿಯೆಯಲ್ಲಿ ಹೇಗೆ ಪ್ರಕ್ರಿಯೆಗೊಳ್ಳುತ್ತವೆ ಹಾಗೂ ಅವು ಪರಿಸರಕ್ಕೆ ಹೇಗೆ ಸ್ಪಂದಿಸುತ್ತವೆ ಎನ್ನುವ ವಿಜ್ಞಾನ ಭಾರೀ ರೋಚಕ.

ಈ ಕ್ಷೇತ್ರದಲ್ಲಿ ನಡೆದ ಮಹತ್ತರ ಬೆಳವಣಿಗೆ ಎಂದರೆ, ಮಾನವ ಜೀವಿಯಲ್ಲಿ ಜೀನ್‌ಗಳು ಹೇಗೆ ಜೋಡಣೆಗೊಂಡಿವೆ ಎಂಬುದನ್ನು ದಶಕಗಳ ಪರ್ಯಂತ ಸಂಶೋಧನೆ ನಂತರ ಕಂಡುಕೊಂಡಿದ್ದು. ವಿಜ್ಞಾನಿಗಳು ಜೀವಧಾರಣೆ ಪ್ರಕ್ರಿಯೆಲ್ಲಿ ಜೀವಾಣುಗಳು ಹೇಗೆಲ್ಲ ಕೆಲಸ ಮಾಡುತ್ತವೆ ಎಂದು ಸಂಶೋಧನೆ ಮಾಡುತ್ತಲೇ ಇದ್ದಾರೆ. ರೋಗ ಬಂದಾಗ ಅವುಗಳ ನಡವಳಿಕೆ ಹೇಗೆ ವ್ಯತ್ಯಾಸಗೊಳ್ಳುತ್ತವೆ ಎಂದು ಅಧ್ಯಯನ ಮಾಡುವ ಆತುರ ಬಹಳವಾಗಿದೆ. ಏಕೆಂದರೆ ಜೀವಾಣುಗಳ ಯರ್ರಾಬರ್ರಿ ನಡವಳಿಕೆ ಸರಿಪಡಿಸಿದರೆ ರೋಗ ಮಾಯವಾದಂತೆಯೇ ಸರಿ. ಅದಕ್ಕೆ ಯಾವುದು ಔಷಧ ಎಂದು ಪತ್ತೆ ಹಚ್ಚಲು ಇದೇ ಮಾರ್ಗ.

ಬಿಟಿ ಕ್ಷೇತ್ರವು ಹೊಸ ಹೊಸ ಔಷಧಗಳನ್ನು ಕಂಡುಹಿಡಿಯಲು ದಾರಿ ಮಾಡಿ ಕೊಡುತ್ತಿದೆ. ಅಂದರೆ ಬೃಹತ್ ಮಾರುಕಟ್ಟೆಯನ್ನು ಸೃಷ್ಟಿಮಾಡಿಕೊಡುತ್ತಿದೆ.

ವಾಸ್ತವವಾಗಿ ಔಷಧ ತಯಾರಿಕಾ ಉದ್ಯಮವು ೧೯೭೦ರ ದಶಕದಿಂದಲೂ ಬಿಟಿ ಸಂಶೋಧನೆಯಲ್ಲಿ ಹಣವನ್ನೂ ಸತತವಾಗಿ ತೊಡಗಿಸುತ್ತಿದೆ. ಕಳೆದ ಹತ್ತು ವರ್ಷ ಅವಧಿಯಲ್ಲಿ ಸಂದ ಪ್ರಾರಂಭಿಕ ಯಶಸ್ಸಿನಿಂದಾಗಿ ಔಷಧ ತಯಾರಿಕಾ ಉದ್ಯಮದ ವರಮಾನವು ಒಂದಕ್ಕೆ ನಾಲ್ಕು ಪಟ್ಟು ಆಗಿದೆ.

ಸಸ್ಯಗಳಲ್ಲಿ ಸಹಾ ಜೀವಿ ವ್ಯತ್ಯಾಸಗಳನ್ನು ಮಾಡುವುದರಿಂದ (ಅದನ್ನು ಜೆನೆಟಿಕ್‌ಎಂಜಿನಿಯರಿಂಗ್ ಎಂದೇ ಕರೆಯುತ್ತಾರೆ) ಕೃಷಿ ವರಮಾನ ಹಲವು ಪಟ್ಟು ಏರಲು ಸಾಧ್ಯವಾಗುತ್ತದೆ ಎಂಬುದೇ ನಿರೀಕ್ಷೆ. ಆದರೆ ಬಿ.ಟಿ. ಬೆಳೆಗಳು ತಕ್ಷಣದಲ್ಲೆ ಯಶಸ್ವಿ ಆಗುತ್ತಿಲ್ಲ. ಪ್ರಾಣಿಗಳಲ್ಲಿ ಹೇಗೋ ಹಾಗೆ ಸಸ್ಯಗಳಲ್ಲೂ ಬದಲಿ ಸೃಷ್ಟಿ ಸಾಧ್ಯವಾದರೆ ಒಂದೇ ಮಾದರಿ ಬೆಳೆಯನ್ನು ಸುಲಭವಾಗಿ ಹಲವುಪಟ್ಟು ಇಳುವರಿ ಸಹಿತ ಕೈವಶ ಮಾಡಿಕೊಳ್ಳಬಹುದು. ಆದರೆ ಸಂಶೋಧನೆ ಫಲಿತಗಳು ಇನ್ನೂ ಕೈಗೆ ಹತ್ತುತ್ತಿಲ್ಲ.

ಭಾರತದ ಪಾಲಿಗೆ ಬಿ.ಟಿ. ಕ್ಷೇತ್ರದ ಯಶಸ್ಸು ಜರೂರಾಗಿ ಬೇಕಾಗಿದೆ. ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರವು ತಂದುಕೊಟ್ಟ ಲಾಭ, ಉದ್ಯೋಗಾವಕಾಶ ಮತ್ತು ವಿಶ್ವಮಾನ್ಯತೆ ಇವನ್ನು ಬಿ.ಟಿ. ಕೂಡಾ ತಂದುಕೊಡಬಲ್ಲರು. ಐಟಿ ಯು ತತ್ಕಾಲಕ್ಕೆ ಸ್ವಲ್ಪ ಕಾಂತಿಹೀನ ಆಗಿದೆ. ಮುಂದಿನ ವರ್ಷಗಳಲ್ಲಿ ಸುಧಾರಿಸುತ್ತದೆ ಎಂಬ ಆಸೆ ಕಳಚಿಹೋಗಿಲ್ಲ. ಐ.ಟಿ. ಸಾಧನೆಯನ್ನು ಹೋಲುವ ಯಶಸ್ಸನ್ನು ಬಿ.ಟಿ. ತಂದುಕೊಡಬಲ್ಲದು ಎಂಬ ನಿರೀಕ್ಷೆ ಸಹಜವಾಗಿ ಉಂಟು.

ಅಭಿವೃದ್ಧಿ ಎನ್ನುವುದು ಒಂದು ಸತತ ಪ್ರಕ್ರಿಯೆ. ಭಾರತದ ಮಟ್ಟಿಗಂತೂ ಈ ಮಾತು ನಿಜ. ೧೯೫೧ ರಲ್ಲಿ ಮೊದಲ ಪಂಚವಾರ್ಷಿಕ ಯೋಜನೆ ಆರಂಭವಾದಾಗ ನೀರಾವರಿ ಸೌಲಭ್ಯ ಸೃಷ್ಟಿಸಿ ಕೃಷಿ ಸ್ವಾವಲಂಬನೆ ಸಾಧಿಸಬೇಕು. ಆ ಮೂಲಕ ಬಡತನ ನಿವಾರಣೆ ಗುರಿ ಮುಟ್ಟುವುದು ಸಾಧ್ಯ ಎಂಬ ಭಾವನೆ ದಟ್ಟವಾಗಿತ್ತು. ೨೦ ವರ್ಷದಲ್ಲಿ ಕೃಷಿ ಸ್ವಾವಲಂಬನೆ ಸಾಧ್ಯವಾಯಿತು. ಕೃಷಿ ಪದ್ಧತಿಗಳು ಆಧುನೀಕರಣಗೊಂಡು ಹಸಿರುಕ್ರಾಂತಿ ಯಶಸ್ವಿ ಆಯಿತು. ಬಡತನ ನಿವಾರಣೆ ಆಗಲಿಲ್ಲ. ಏಕೆಂದರೆ ಜನಸಂಖ್ಯೆ ಬೆಳೆಯುತ್ತಲೇ ಇದೆ.

ಆನಂತರದ ಇಪ್ಪತ್ತು ವರ್ಷದಲ್ಲಿ ಉತ್ಪಾದನಾ ರಂಗಸುಧಾರಿಸಿತು. ಆದರೆ ವಿಶ್ವವು ನಾಗಾಲೋಟ ಕಂಡಿರುವುದರಿಂದ ನಮ್ಮಲ್ಲಿ ಅಭಿವೃದ್ಧಿ ಕುಂಠಿತ ಎಂದೇ ಅನಿಸಿತು. ಹತ್ತು ವರ್ಷದ ಹಿಂದೆ ಆರ್ಥಿಕ ಸುಧಾರಣಾ ಕಾಯ್ಯಕ್ರಮ ಜಾರಿ ಆಗತೊಡಗಿತು. ಸರಿಸುಮಾರು ಅದೇ ವೇಳೆ ಐ.ಟಿ. ಕ್ಷೇತ್ರದಲ್ಲಿ ಭಾರತ ದಾಪುಗಾಲು ಇಟ್ಟಿದ್ದು, ಐ.ಟಿಯ ಮಹತ್ವ. ಉದ್ಯೋಗ ಅವಕಾಶ ವ್ಯಾಪಕವಾಗಿ ದೊರೆಯಿತು. ಅಷ್ಟು ಮಾತ್ರವಲ್ಲ, ಕಂಪ್ಯೂಟರ್‌ಗಳನ್ನು ನಡೆಸಲು ಬರುವ ಹೆಚ್ಚಿನ ಶಿಕ್ಷಣ ಇಲ್ಲದವರಿಗೂ ಉದ್ಯೋಗ ಸಿಗುವಂತಾಯಿತು. ಐ.ಟಿ. ಕ್ಷೇತ್ರದ ರಫ್ತು ಗಳಿಕೆ ನಿಬ್ಬೆರಗಾಗುವಂತಾಯಿತು. ಸದ್ಯಕ್ಕೆ ಐ.ಟಿ. ರಭಸ ಸ್ವಲ್ಪ ಕಡಿಮೆ ಆಗಿದೆ.

ಐ.ಟಿ. ನಂತರದ ಸ್ಥಾನದಲ್ಲಿ ಬೆಳಸಲಿರುವ ಇನ್ನೊಂದು ಕ್ಷೇತ್ರವೆಂದರೆ ಬಿ.ಟಿ. ಎಂಬುದು ನಿಚ್ಚಳ. ಆದರೆ ಅದರ ಟೇಕಾಫ್‌ನಿಧಾನವಾಗುತ್ತಿದೆ. ಸಾಧ್ಯತೆಗಳು ಮಾತ್ರ ವಿಫುಲವಾಗಿದೆ. ಜನರ ವೈಯಕ್ತಿಕ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯ ಎರಡೂ ಬಾಬುಗಳಲ್ಲಿ ವೆಚ್ಚ ಮಾಡಬೇಕಾದ ಹಣದ ಮೊತ್ತ ಏರುತ್ತಲೇ ಹೋಗುತ್ತದೆ. ಅಂದರೆ ಔಷಧ ಮತ್ತಿತರ ವೈದ್ಯ ಸೇವೆಗಳ ಕ್ಷೇತ್ರ ಉದ್ಯಮಿಗಳ ಪಾಲಿಗೆ ಲಾಭಕಾರಿ ಆಗಿ ಪರಿಣಮಿಸುವಂಥದು.

ಭಾರತದಲ್ಲಿ ಜೈವಿಕ ವಿಜ್ಞಾನ ಅಭ್ಯಾಸ ಮಾಡಿರುವ ಜನರಿಗೆ ಕೊರತೆ ಇಲ್ಲ. ಪ್ರತಿ ವರ್ಷ ಒಂದು ಸಾವಿರ ಬಿ.ಟಿ. ಪದವೀಧರರು ಕಣಕ್ಕೆ ಇಳಿಯುತ್ತಿದ್ದಾರೆ. ಸಂಶೋಧಕರನ್ನು ಹುಡುಕುವುದಕ್ಕೆ ಕಷ್ಟವಾಗದು. ಮಾನವ ಜೀವಿ ಸ್ವರೂಪ ಅಧ್ಯಯನಕ್ಕೆಂದೇ ದೇಶಾದ್ಯಂತ ೫೨ ಕೇಂದ್ರ ನಿಯುಕ್ತಗೊಳಿಸಲು ಸರ್ಕಾರ ಹಣ ವೆಚ್ಚ ಮಾಡಿದೆ. ಪ್ರಯೋಗಾಲಯಗಳು, ಸಂಶೋಧನಾ ಸಂಸ್ಥೆಗಳು ಸರ್ಕಾರಿ ಹಾಗೂ ಖಾಸಗಿ ರಂಗಗಳೆರಡರಲ್ಲೂ ಕೆಲಸ ಮಾಡುತ್ತಿವೆ. ಭಾರತ ಹೇಳಿ ಕೇಳಿ ಜೀವ ವೈವಿಧ್ಯಕ್ಕೆ ಹೆಸರಾದುದು. ಅದನ್ನು ಉದ್ಯಮಕ್ಕಾಗಿ ಬಳಸಿಕೊಳ್ಳುವುದು ಹೇಗೆಂಬ ತರದೂದು ಈಗಿನದು.

ಗಂಗಾನದಿಯಲ್ಲಿ ಕೆಲ ಬಗೆಯ ಸೂಕ್ಷ್ಮಾಣು ಜೀವಿಗಳು ತಮ್ಮ ವಂಶವಾಹಿಯನ್ನು ಇನ್ನಿತರ ನಿರ್ದಿಷ್ಟ ಸೂಕ್ಷ್ಮಾಣು ಜೀವಿಗಳಿಗೆ ವರ್ಗಾಯಿಸುವ ವಿದ್ಯಮಾನ ಬಹಳ ಹಿಂದೆಯೇ ಪತ್ತೆಯಾಗಿತ್ತು. ಇದು ಕಾಲರಾ ಮತ್ತು ನಿರ್ದಿಷ್ಟ ಬಗೆ ಪ್ಲೇಗ್‌ಗೆ ಮದ್ದಾಗಿ ಪರಿಣಮಿಸುತ್ತದೆ ಎಂಬುದೂ ಗೊತ್ತಾಗಿತ್ತು. ಇದೀಗ ಬೆಂಗಳೂರಿನ ಒಂದು ಹೊಸ ಕಂಪೆನಿಯು ಔಷಧಿ ತಯಾರಿಕೆ ಯತ್ನ ನಡೆಸಿದೆ.

ಈಚೆಗೆ ಕರಾವಳಿ ಪ್ರದೇಶದಲ್ಲಿ ಕೆಲವು ಕಂಪೆನಿಗಳು ಸಮುದ್ರ ಕಳೆಯನ್ನು ಬಿತ್ತಿ ಬೆಳೆಯುವ ಪದ್ಧತಿ ಆರಂಭಿಸಿದ್ದಾರೆ. ಐರೋಪ್ಯ ಮೂಲಕ ಕ್ಯರಾಗಿನಾನ್ ಎಂಬ ಹೆಸರಿನ ಕಳೆಯು ಖಾದ್ಯ ಸಸ್ಯ. ಆಹಾರ ಉತ್ಪನ್ನ ಮತ್ತು ಶೃಂಗಾರ ಸಾಧನಗಳಲ್ಲಿ ಇದನ್ನು ಬಳಸುತ್ತಾರೆ. ಇದೊಂದು ಕಳೆಯೇ ೫೦ ಸಹಸ್ರ ಉದ್ಯೋಗವನ್ನು, ಮುಖ್ಯವಾಗಿ ಮಹಿಳೆಯರಿಗೆ ಒದಗಿಸುತ್ತದೆ. ಈ ಕಳೆ ಮಾತ್ರವಲ್ಲ; ದೇಶದ ಏಳು ಸಾವಿರ ಕಿ.ಮೀ. ಉದ್ದದ ಕಡಲ ತೀರದಲ್ಲಿ ೭೭೦ ಬಗೆಯ ವಿವಿಧ ಸಮುದ್ರ ಕಳೆಗಳು ಉಪಯೋಗಕ್ಕೆ ಬರುತ್ತವೆ.

ಬುಡಕಟ್ಟು ಜನರಲ್ಲಿ ಹಾಗೂ ಅಂತರ್ಜಾತಿ ಮದುವೆ ಮಾಡಿಕೊಂಡಿರುವ ಕೆಲವರಲ್ಲಿ ನಿರ್ದಿಷ್ಟ ಗುಂಪಿನ ಜೀನಿಗಳು ಪತ್ತೆಯಾಗಿವೆ. ಈ ಜೀನಿ ಸಮೂಹ ಮಧುಮೇಹ ರೋಗಕ್ಕೆ ಮದ್ದು ಒದಗಿಸುವ ಶಕ್ತಿ ಹೊಂದಿವೆ. ಸಂಶೋಧನೆ ನಡೆದಿದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಇಷ್ಟರಲ್ಲೇ ಎರಡು ಕೋಟಿಗೆ ಏರಲಿದೆ.

ಪ್ರಖ್ಯಾತ ಡಾ. ರೆಡ್ಡಿ ಲ್ಯಾಬ್ಸ್‌ಕಂಪೆನಿಯು ತನ್ನ ಮೊಟ್ಟ ಮೊದಲ ಬಿ.ಟಿ. ಆಧಾರಿತ ಕ್ಯಾನ್ಸರ್ ಔಷಧಿಯನ್ನು ಮಾರುಕಟ್ಟೆಗೆ ಬಿಡಲು ಈಚೆಗೆ ಅನುಮತಿ ಪಡೆಯಿತು.

ಎಷ್ಟೋ ಕಂಪೆನಿಗಳು ಬಿ.ಟಿ. ಕ್ಷೇತ್ರಕ್ಕೆ ಸಂಬಂದಿಸಿದಂತೆ ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ಹೊಂದಿರುತ್ತವೆ. ವಿವರಗಳು ಹೊರಬರುವುದೇ ಇಲ್ಲ. ವೈರಸ್, ಬ್ಯಾಕ್ಟೀರಿಯಾ, ಶೈವಲ, ಅಣಬೆ,  ಕೀಟ, ಮೀನು, ಸಸ್ತನಿ ಮುಂತಾದ ವಿವಿಧ ಬಗೆಯ ಜೀವಿಗಳನ್ನು ಕುರಿತ ಸಂಶೋಧನೆ ನಡೆಯುತ್ತಿರುವುದರಿಂದ ಭವಿಷ್ಯದ ಯಾವುದೋ ಒಂದು ಘಟ್ಟದಲ್ಲಿ ದಿಢೀರ್ ಒಟ್ಟಿಗೆ ಫಲಿತಗಳು ಹೊರಬೀಳಲಿಕ್ಕೂ ಸಾಕು.

ಭಾರತದ ಬಿ.ಟಿ. ಕಂಪೆನಿಗಳು ಬೇರೆ ದೇಶಗಳಿಂದ ತಂತ್ರಜ್ಞಾನ ಪಡೆಯುವುದೂ ಉಂಟು. ಕ್ಯೂಬಾದ ಸಂಶೋಧನಾ ಸಂಸ್ಥೆಗಳು ಹೆಪಾಟೈಟಿಸ್‌ಬಿ ಹಾಗೂ ಮೆನಿಂಜಿಟಿಸ್‌ಬಿ ಲಸಿಕೆಗಳನ್ನು ಭಾರತಕ್ಕೆ ಮಾರಲು ಉತ್ಸುಕವಾಘಿವೆ. ನಲವತ್ತು ರಾಷ್ಟ್ರಗಳಿಗೆ ವಿವಿಧ ಲಸಿಕೆ, ಹೃದ್ರೋಗ ಔಷಧ, ಏಡ್ಸ್ ಮುಂತಾದುವನ್ನು ಮಾರುವ ಮೂಲಕ ಹತ್ತು ಕೋಟಿ ಡಾಲರ್ ರಫ್ತು ಗಳಿಕೆ ಸಾಧಿಸಲು ಕ್ಯೂಬಾ ಗುರಿ ಹಾಕಿಕೊಂಡಿದೆ. ಲಸಿಕೆಗಳು ಮುಂತಾದವುಗಳ ಬಗೆಗೆ ಅಮೆರಿಕ ಹಾಗೂ ಐರೋಪ್ಯ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅಷ್ಟಾಗಿ ಆಸಕ್ತಿ ಇಲ್ಲ. ಏಕೆಂದರೆ ಲಾಭ ಕಡಿಮೆ. ಅವು ಒಲ್ಲದ ಎಷ್ಟೋ ಬಿ.ಟಿ. ಉತ್ಪನ್ನಗಳನ್ನು ಭಾರತದಂಥ ರಾಷ್ಟ್ರಗಳು ತಯಾರಿಸಬಲ್ಲವು.

ಬಿಟಿ ಉತ್ಪನ್ನಗಳ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. ೨ ಮಾತ್ರ ಇದೆ. ಆದರೂ ಇದು ಶೂನ್ಯವೇನಲ್ಲ. ಇದನ್ನು ಇನ್ನು ಐದು ವರ್ಷದಲ್ಲಿ ಶೇ. ೧೦ ಕ್ಕೆ ಏರಿಸಬಹುದು ಎಂದು ಕೇಂದ್ರ ಬಿ.ಟಿ. ಇಲಾಖೆ ಕಾರ್ಯದರ್ಶಿ ಡಾ. ಮಂಜು ಶರ್ಮ ಹೇಳುತ್ತಾರೆ. ದೇಶದಲ್ಲಿ ಸ್ವಂತ ಬಳಕೆಗೆಂದು ೧೫ ಕೋಟಿ ಡಾಲರ್‌ಮೌಲ್ಯದ ಬಿ.ಟಿ. ಉತ್ಪನ್ನಗಳನ್ನೂ, ಸೇವಾ ಸೌಲಭ್ಯಗಳನ್ನು ಉತ್ಪಾದಿಸುತ್ತಿದ್ದಾರೆ.

ಇದೇನೇ ಇದ್ದರೂ ದೇಶಾದ್ಯಂತ ಬಿ.ಟಿ. ಸಂಶೋಧನೆಗೆಂದು ಲಭ್ಯವಿರುವ ಪ್ರಯೋಗಾಲಯ, ಸೌಲಭ್ಯ ಹಾಗೂ ವಿಜ್ಞಾನಿಗಳ ಸಂಖ್ಯೆ ಬಹಳ ಕಡಿಮೆ. ಸರ್ಕಾರದ ಕಡೆಯಿಂದ ಇನ್ನೂ ಬಹಳ ಒತ್ತಾಸೆ ಸಿಗಬೇಕಿದೆ. ಈ ಬಾಬಿಗೆಂದು ಖರ್ಚು ಮಾಡುವ ಹಣ ಬಹಳಕಡಿಮೆ.

ಐ.ಟಿ. ಕ್ಷೇತ್ರದಂತೆ ಕ್ಷಿಪ್ರ ಸಾಧನೆ ಇಲ್ಲಿ ಸಾಧ್ಯವಿಲ್ಲ. ವಿಜ್ಞಾನಿಯೊಬ್ಬ ಇಡೀ ಜೀವಮಾನ ಕಾಲದಲ್ಲಿ ವಾಣಿಜ್ಯ ಸ್ವರೂಪದ ಸಂಶೋಧನೆ ನಡೆಸಿದ್ದರೆ ಅದು ಫಲ ಕೊಡುವುದು ಒಂದೆರಡು ತಲೆಮಾರಿನ ನಂತರ. ಆದರೆ ಯಾವುದಾದರೂ ಒಂದು ಉತ್ಪನ್ನ ಮಾರುಕಟ್ಟೆ ಪ್ರವೇಶಿಸುವಂತಾದರೆ ಸಾಕು; ಚಿನ್ನದ ಗಣಿ ಕೈಗೆಟುಕಿದಂತೆಯೇ ಸರಿ.

ಈವರೆಗೆ ಬಿ.ಟಿ. ಔಷಧಿ ತಯಾರಿಸಿ ಪೇಟೆಂಟ್‌ಗೆ ಅರ್ಜಿ ಹಾಕಿರುವುದು ೨೭ ಪ್ರಕರಣಗಳಲ್ಲಿ ಮಾತ್ರ. ಇನ್ನೈದು ಪ್ರಕರಣಗಳಲ್ಲಿ ಅಮೆರಿಕದಲ್ಲಿ ಪೇಟೆಂಟ್‌ಗೆ ಅರ್ಜಿ ಹಾಕಲಾಗಿದೆ.

ಒಂಬತ್ತನೇ ಯೋಜನೆಯ ಇಡೀ ಅವಧಿಯಲ್ಲಿ ತಂತ್ರಜ್ಞಾನ ವರ್ಗಾವಣೆಗೆಂದು ಅನುಮತಿ ಕೇಳಿರುವುದು ೨೭ ಬಿ.ಟಿ. ಕಂಪೆನಿಗಳು ಮಾತ್ರ. ಖಾಸಗಿ ಕಂಪೆನಿಗಳು, ವಿಶ್ವವಿದ್ಯಾನಿಲಯಗಳು, ವಿವಿಧ ಪ್ರಯೋಗಾಲಯಗಳು ಉಪಯುಕ್ತ ಯೋಜನೆಗಳನ್ನು ಕೈಗೊಳ್ಳಲು ಹಣಕ್ಕಾಗಿ ಕಾತರಿಸಿ ಕುಳಿತಿವೆ. ಐ.ಟಿ. ಪ್ರಗತಿಯ ರುಚಿ ಕಂಡ ಕರ್ನಾಟಕ, ಆಂಧ್ರದಂಥ ರಾಜ್ಯಗಳು ಬಿ.ಟಿ. ಕ್ಷೇತ್ರ ಬೆಳೆಸಲು ತುದಿಗಾಲಲ್ಲಿ ನಿಂತಿವೆ.

ಬಿ.ಟಿ. ಕಂಪೆನಿಗಳು ಇದೀಗ ತಾವು ಪರಿಸ್ಥಿತಿಯ ಲಾಭ ಹೇಗೆ ಪಡೆಯಬೇಕೆಂದು ಯೋಚಿಸುತ್ತಿವೆ. ಎಲ್ಲ ದೊಡ್ಡ ಐ.ಟಿ. ಕಂಪೆನಿಗಳೂ ಯೋಜನೆಗಳನ್ನು ರೂಪಿಸುತ್ತಿವೆ.

ಬಿ.ಟಿ. ಸಂಶೋಧನೆ ಎಂದರೆ ರಾಶಿ ರಾಶಿ ಮಾಹಿತಿಯನ್ನು ಕಂಪ್ಯೂಟರುಗಳ ಮೂಲಕ ವಿಶ್ಲೇಷಿಸಬೇಕಾಗುತ್ತದೆ. ಪ್ರಯೋಗಾಲಯಗಳಲ್ಲಿ ಯಾವ ಸರಣಿಯಲ್ಲಿ ಪ್ರಕ್ರಿಯೆ ನಡೆಯಬೇಕೆಂಬುದನ್ನು ನಿಗದಿಪಡಿಸಲು ಕಂಪ್ಯೂಟರ್‌ಬಳಸಬಹುದು. ವಿವಿಧ ಸಾಫ್ಟ್ ವೇರ್‌ಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಹೀಗೆ ಐ.ಟಿ.-ಬಿ.ಟಿ. ಪರಸ್ಪರ ಮೇಳವಿಸುವುದು ಒಂದು ವಿಶೇಷ.

೧೦.೧೨.೨೦೦೩