ಬದುಕಿನ ಬೆನ್ನೆಲುಬು ಬೇಸಾಯ. ಇದು ಒಂದು ಉಕ್ತಿ. ಬೇರೆ ಅರ್ಥದಲ್ಲಿ ಇನ್ನೂ ಒಂದು ಉಕ್ತಿಯುಂಟು: ಮಾರ್ಕೆಟ್‌ ಯಾರ್ಡು; ರೈತನಿಗೊಂದು ಬೋರ್ಡು.

ರೈತನಿಗೆಂದು ಸಿದ್ಧವಾದ ಕೃಷಿ ಉತ್ಪನ್ನ ಮಾರಾಟ ಸಮಿತಿ (ಎಪಿಎಂಸಿ) ಆಡಳಿತದ ರೆಗ್ಯುಲೇಟೆಡ್ ಮಾರ್ಕೆಟ್ ಯಾರ್ಡ್‌ ಜರ್ಝರಿತವಾಗಿ ಹೋದ ಒಂದು ವ್ಯವಸ್ಥೆ.

ಬೇಸಾಯ ಮಾಡಿ ಬೆಳೆದ ಉತ್ಪನ್ನವನ್ನು ರೈತನಾದವನು ಯಾರ್ಡಿಗೆ ತಂದರೆ, ನೆರಳು ನೀರು ಮಾತ್ರವಲ್ಲದೆ ಉತ್ಪನ್ನಕ್ಕೆ ಒಳ್ಳೆಯ ಬೆಲೆಯೂ ಬರುತ್ತದೆ. ಇದು ಒಂದು ಭರವಸೆ. ಅದರ ಆಧಾರದ ಮೇಲೆ ಯಾರ್ಡಿನ ಬೋರ್ಡಿಗೆ ಮಹತ್ವ.

ಪ್ರದೇಶದ ಪ್ರಮುಖ ಬೆಳೆ ಏನಿದೆಯೋ ಅದು ಆಯಾ ಯಾರ್ಡಿನ ವೈಶಿಷ್ಟ್ಯ. ಶೇಂಗಾಕ್ಕೆ ಚಳ್ಳಕೆರೆ, ಹತ್ತಿಗೆ ರಾಯಚೂರು, ಅಡಿಕೆಗೆ ಶಿವಮೊಗ್ಗ ಇತ್ಯಾದಿ…. ಇತ್ಯಾದಿ. ರಾಜ್ಯದಲ್ಲಿ ೧೧೪ ಮುಖ್ಯ ಯಾರ್ಡುಗಳು, ೩೪೩ ಉಪಯಾರ್ಡುಗಳು.

ಎಲ್ಲವೂ ಚೆನ್ನ. ಈ ವ್ಯವಸ್ಥೆ ಒಂದು ಒಳ್ಳೆಯ ರೂಪ ಪಡೆದು ೨೫ ವರ್ಷ ಕಳೆದಿದೆ. ಯಾರ್ಡುಗಳು ದೇಶಾದ್ಯಂತ ಇರುವುದಾದರೂ ಇತರ ಹಲವು ರಾಜ್ಯಗಳ ಹೋಲಿಕೆಗೆ ಬಂದಾಗ, ಒಳ್ಳೆಯ ವ್ಯವಸ್ಥೆ ಇರುವ ರಾಜ್ಯಗಳ ಪೈಕಿ ಒಂದು ಎಂಬ ಕೀರ್ತಿಗೆ ಪಾತ್ರವಾಗಿತ್ತು.

ಆದರೆ ಈಗ ಇಡೀ ವ್ಯವಸ್ಥೆ ಜರ್ಝರಿತ. ಈಚೆಗೆ ಇದರಡಿ ವ್ಯವಹಾರ ಮಾಡುವ ಜನ ಬಡಬಡಾಯಿಸಿದರು. ಕಾರಣ ವಿದೇಶಿ ಮೂಲಕ ‘ಮೆಟ್ರೊ’ ಮಾರಾಟ ಮಳಿಗೆ ಬೆಂಗಳೂರಿನಲ್ಲಿ ತಲೆ ಎತ್ತಿದ್ದು.

ರಾಜ್ಯದ ಎಲ್ಲ  ಎಪಿಎಂಸಿಗಳ ಒಟ್ಟು ತೂಕ ಒಂದು ಆದರೆ, ಬೆಂಗಳೂರು ಯಾರ್ಡಿನದು ಇನ್ನೊಂದು ತೂಕ. ಏಕೆಂದರೆ ಬೆಂಗಳೂರು ನಗರವು ರಾಜ್ಯದ ಅತಿ ದೊಡ್ಡ ಬಳಕೆದಾರ ಕೇಂದ್ರ. ಕೆಲವು ದೊಡ್ಡ ಎಪಿಎಂಸಿಗಳಿಗೆ ಹೋಲಿಸಿದಾಗ ಬೆಂಗಳೂರಿನ ಎಪಿಎಂಸಿ ಬಹಳ ದೊಡ್ಡದು ಎಂದೇನೂ ಅನಿಸಿಕೊಳ್ಳುವುದಿಲ್ಲ. ಆದರೆ ರಾಜಧಾನಿಯಲ್ಲಿರುವ ಕಾರಣ ಅದರದೇ ಆದ ಮಹತ್ವ ಪಡೆದಿರುವಂಥದು. ಇಲ್ಲಿ ಮೂಡುವ ತಲ್ಲಣ ಗೌಣವಾಗಿ ಉಳಿಯುವುದಿಲ್ಲ.

ಜಾಗತೀಕರಣ ಜಾರಿಗೆ ಬರುತ್ತಿದ್ದಂತೆ ಸೂಪರ್ ಸ್ಟೋರ್‌ಗಳ ಸರಣಿಯೇ ಬೆಂಗಳೂರಿನಲ್ಲಿ ತಲೆ ಎತ್ತಿದೆ. ಕೆಲವು ಸ್ಟೋರ್‌ಗಳು ಶ್ರೀಮಂತ ಗ್ರಾಹಕರ ಪಾಲಿಗೆ ಪರಮಾಯಿಷಿ ಆದರೆ, ಇನ್ನು ಕೆಲವು ಶ್ರೀಮಂತರಲ್ಲದವರನ್ನೂ ಆಕರ್ಷಿಸಿವೆ. ಕಡಿಮೆ ಬೆಲೆಗಳನ್ನಿಟ್ಟ ಸರಕನ್ನು ತುಂಬಿದ ಕೆಳ ಮಧ್ಯಮ ವರ್ಗದವರನ್ನು ವಿಶೇಷವಾಗಿ ಆಕರ್ಷಿಸಿರುವ ಒಂದು ಸೂಪರ್‌ಸ್ಟೋರ್‌ ಕೂಡಾ ಉಂಟು. ಹಾಗೆ ಮೆಟ್ರೊ ಕೂಡಾ ಇನ್ನೊಂದು ರೀತಿಯಲ್ಲಿ ವಿಶಿಷ್ಟ.

ಮಿಕ್ಕವೆಲ್ಲ ಗ್ರಾಹಕರಿಗಾಗಿ ತಲೆ ಎತ್ತಿರುವಂಥ ಕೇಂದ್ರಗಳು. ಆದರೆ ಮೆಟ್ರೊ ವ್ಯಾಪಾರಸ್ಥರಿಗಾಗಿ, ಅಂದರೆ ಚಿಲ್ಲರೆ ಮಾರಾಟ ಮಾಡುವ ವರ್ತಕರಿಗಾಗಿ ನಿರ್ಮಿಸಿದ್ದು. ಇಲ್ಲಿ ಚಿಲ್ಲರೆ ಮಾರಾಟವಿಲ್ಲ. ಚಿಲ್ಲರೆ ಮಾರಾಟ ಮಾಡುವ ಸಲುವಾಗಿ ವರ್ತಕರು ಒಟ್ಟುಗಟ್ಟಲೆ ಖರೀದಿಸಬಹುದಾದುದು ಇಲ್ಲಿ.

ಈ ವ್ಯವಸ್ಥೆ ಬೆಂಗಳೂರಿನ ಎಪಿಎಂಸಿ ವರ್ತಕರ ಧೃತಿಗೆಡಿಸಿತು. ಮೆಟ್ರೊದವರು ಅನುಮತಿ ಪಡೆದು, ಭೂಮಿ ಖರೀದಿಸಿ ಬೃಹತ್ ಮಳಿಗೆ ಕಟ್ಟಡ ಎಬ್ಬಿಸಿ ಇನ್ನೇನು ವ್ಯಾಪಾರ ಆರಂಭಿಸುತ್ತಾರೆ ಎನ್ನುವ ತನಕ ವರ್ತಕರಿಗೆ ಅದರ ಸಾಧಕ ಬಾಧಕಗಳು ಅರ್ಥವಾಗಲಿಲ್ಲ. ಏನಾಶ್ಚರ್ಯ! ಅನಂತರ ಪ್ರತಿಭಟನೆ ಸೂಚಿಸಿದರು.

ಇತರ ತಯಾರಕಾ ಉತ್ಪನ್ನಗಳಂತೆ ಕೃಷಿ ಉತ್ಪನ್ನಗಳನ್ನು ಸಹ ಚಿಲ್ಲರೆ ವರ್ತಕರಿಗೆ ಮಾರಾಟ ಮಾಡಲು ಮೆಟ್ರೊ ಆರಂಭಿಸಿದರೆ ತಮಗೆ ಧಕ್ಕೆ ಉಂಟಾಗುತ್ತದೆ ಎಂಬುದು ದಿನಸಿ ನಗಟು ವರ್ತಕರ ಭಯ.

ಸಹಜವೇ. ಈಗ ಪೈಪೋಟಿ ಯುಗ. ಯಾರ್ಡ್‌‌ನ ವ್ಯವಹಾರ ಒಂದು ರೀತಿಯಲ್ಲಿ ರಕ್ಷಿತ ಮಾರುಕಟ್ಟೆ. ರೈತನ ಉಪಯೋಗಕ್ಕೆಂದು, ಅಂದರೆ ವರ್ತಕರ ಅನಿಯಂತ್ರಿತ ವ್ಯಾಪಾರ ಕ್ರಮಗಳ ವಿರುದ್ಧ ರೈತನಿಗೆ ರಕ್ಷಣೆ ನೀಡಲೆಂದು ಹುಟ್ಟಿಕೊಂಡಿದ್ದು ಎಪಿಎಂಸಿ. ರೈತ ಪ್ರತಿನಿಧಿಗಳೇ ಬಹುಪಾಲು ಇರುವ, ವರ್ತಕ ಪ್ರತಿನಿಧಿಗಳೂ ಪ್ರಬಲವಾಗಿ ಉಳಿದ ಸಮಿತಿಯ ನಿರ್ಧಾರಗಳನ್ನು ಜಾರಿಗೆ ತರುವ ಹೊಣೆಯು ಕಾರ್ಯದರ್ಶಿ ಹೆಸರಿನ ಸರ್ಕಾರಿ ಅಧಿಕಾರಿಯದು. ಈತನ ಕೈಗೆ ಅಪಾರ ಅಧಿಕಾರ. ಪರರನ್ನು ಪೀಡಿಸುವಂಥ ಪ್ರವೃತ್ತಿಯ ಮನುಷ್ಯನೇನಾದರೂ ಈ ಅಧಿಕಾರಕ್ಕೆ ಬಂದರೆ ಭಯಂಕರ ಎನಿಸಿಕೊಳ್ಳಬಲ್ಲ. ರೈತರಿಗೆ ಮತ್ತು ವರ್ತಕರಿಗೆ ಸೌಲಭ್ಯ ಒದಗಿಸಿಕೊಡುವುದೇ ಅಲ್ಲದೆ ಮಾರುಕಟ್ಟೆ ಶುಲ್ಕ ವಸೂಲು ಮಾಡಿ ಬೊಕ್ಕಸಕ್ಕೆ ಸುಗಮವಾಗಿ ತಲುಪುವಂತೆ ಮಾಡುವುದು ಈ ಅಧಿಕಾರಿ ಕೆಲಸ. ಬಹುತೇಕ ಸಂದರ್ಭಗಳಲ್ಲಿ ಯಾರ್ಡಿನ ಪಾತ್ರವು ರೈತರ ಹಿತದ ಪರ ಹಾಗೂ ವರ್ತಕರ ಹಿತದ ವಿರುದ್ಧ. ಆದರೂ ವರ್ತಕರು ಹಣದ ವ್ಯವಹಾರ ನಡೆಸುವ ಪ್ರಬಲರಾದುದರಿಂದ ಕೃಷಿ ಉತ್ಪನ್ನ ಖರೀದಿಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಾರೆ.

ರೈತನು ಮಾರುವ ಬೆಲೆ ಹಾಗೂ ಗ್ರಾಹಕರು ಕೊಳ್ಳುವ ಬೆಲೆ ಇವುಗಳ ನಡುವಣ ಅಂತರ ಏನಿದೆಯೋ ಅದು ವಿಪರೀತವಾಗುತ್ತದೆ. ಅದನ್ನು ಕಡಿಮೆ ಮಾಡುವುದು ಎಪಿಎಂಸಿ ಘನ ಉದ್ದೇಶ. ಇದು ಸಂಪೂರ್ಣವಾಗಿ ಕೈಗೂಡುತ್ತದೆಯೋ ಎಂಬುದು ಬೇರೆ ಪ್ರಶ್ನೆ. ಆದರೆ ಈ ವ್ಯವಸ್ಥೆ ಇಲ್ಲದೇ ಇದ್ದರೆ ರೈತರಿಗೆ ಇಲ್ಲಿ ಸಿಗುವ ಬೆಲೆಯೂ ಸಿಗುತ್ತಿರಲಿಲ್ಲ ಎಂಬುದು ವಾಸ್ತವಾಂಶ.

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಸರಕು ರೈತನ ಕೈಲಿ ಇರುವತನಕ ಅದಕ್ಕೆ ಬೆಲೆ ಇಲ್ಲ. ಅದು ರೈತನ ಕೈದಾಟಿ ಒಂದೆರಡು ಹಂತದ ಸಗಟು ವರ್ತಕ ಹಾಗೂ ಚಿಲ್ಲರೆ ಹಂತದ ವರ್ತಕ ಹೀಗೆ ದಾಟಿಕೊಂಡು, ಸಾಗಾಣಿಕೆ ಆಗಿ ಬಳಕೆದಾರನ ಕೈ ಸೇರುವ ವೇಳೆಗೆ ಒಂದಕ್ಕೆ ಎರಡಾಗಿರುತ್ತದೆ. ಮಧ್ಯದಲ್ಲಿ ಕೃಷಿ ಉತ್ಪನ್ನವು ಶುದ್ದೀಕರಣ, ಸಂಸ್ಕರಣ, ಪೊಟ್ಟಣೀಕರಣ ಈ ಚಟುವಟಿಕೆಗಳಿಗೆ ಒಳಪಟ್ಟರಂತೂ ಉತ್ಪನ್ನದ ಬೆಲೆ ಸರ‍್ರನೇ ಏರುತ್ತದೆ. ಎಲ್ಲ ಹಂತಗಳಲ್ಲೂ ಸರಕನ್ನು ವಶಪಡಿಸಿಕೊಂಡಿರುವ ಜನ ವರ್ತಕರೇ. ಪ್ರತಿ ಹಂತದಲ್ಲೂ ಮೌಲ್ಯವರ್ಧನೆ ಆಗುತ್ತದೆ. ಆದ್ದರಿಂದಲೇ ರೈತನಿಗೆ ದಕ್ಕುವುದು ತಲಸ್ತರ ಬೆಲೆ ಮಾತ್ರವೇ ಹೌದು.

ಇಷ್ಟೊಂದು ಪ್ರಬಲರಾದ ವರ್ತಕರು ಮೆಟ್ರೋದಂಥ ವಿತರಣಾ ವ್ಯವಸ್ಥೆ ಜಾರಿಗೆ ಬಂದರೆ ವಿಚಲಿತರಾಗುತ್ತಾರೆ ಏಕೆ? ಇಡೀ ವ್ಯವಸ್ಥೆ ಮೇಲೆ ತಮಗಿರುವ ಹಿಡಿತ ಕೈತಪ್ಪಿ ಹೋಗುತ್ತದೆ ಎಂಬ ಭೀತಿ ಅದಕ್ಕೆ ಕಾರಣ. ಯಾರ್ಡುಗಳು ಸರ್ಕಾರದ ಹಾಗೂ ರೈತ ಪ್ರತಿನಿಧಿಗಳ ‘ನಿಯಂತ್ರಣ’ದಲ್ಲಿ ಇದ್ದರೂ ಮಾತು ನಡೆಯುವುದು ವಾಸ್ತವವಾಗಿ ವರ್ತಕರದೇ. ಆದ್ದರಿಂದಲೇ ತಮಗಿರುವ ತೊಂದರೆ ತಾಮತ್ರಯಗಳು ಏನೇ ಇದ್ದರೂ ಅವರು ಸರಿತೂಗಿಸಿಕೊಂಡು ಹೋಗುವುದಕ್ಕೆ ಮೆಟ್ರೋದಂಥ ವ್ಯವಸ್ಥೆ ಜಾರಿಗೆ ಬಂದರೆ ಸಾಧ್ಯವಾಗುವುದಿಲ್ಲ ಎಂಬುದು ಅವರ ಭಾವನೆ. ವಾಸ್ತವಾಂಶವೆಂದರೆ ಸರ್ಕಾರ, ಜನನಾಯಕರು (ರಾಜಕಾರಣಿಗಳು) ಮತ್ತು ರೈತರು ತಂತಮ್ಮ ಹಿತಸಾಧನೆಗಾಗಿಯೇ ಏಕೀಭವಿಸಿ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯನ್ನು ಬಲಪಡಿಸಿದರೆ ಮೆಟ್ರೋದಂಥ ಬೃಹದ್ದೇಹಿ ವಿತರಣಾ ವ್ಯವಸ್ಥೆಯೂ ಏನೂ ಮಾರಲಾಗದು. ಎಪಿಎಂಸಿ ವ್ಯವಸ್ಥೆ ಬಹಳ ಸಡಿಲವಾದುದು. ಅದನ್ನು ಎಲ್ಲರೂ ಸೇರಿ ಬಲಪಡಿಸಿಕೊಂಡರೆ ಇದೊಂದು ಅತ್ಯಂತ ಪ್ರಬಲ ವ್ಯವಸ್ಥೆಯಾಗಿ ಪರಿಣಮಿಸಬಹುದು.

ಮೊದಲನೆಯದಾಗಿ ವರ್ತಕರು ಹೆಚ್ಚು ಶಿಸ್ತಿನಿಂದ, ವೃತ್ತಿಪರತೆ ತೋರಿ ನಡೆದುಕೊಳ್ಳಬೇಕು. ತಮ್ಮ ಶಕ್ತಿ ತೋರಿಸುವುದಕ್ಕಾಗೇ ಬೇಕೆಂದಾಗ ಖರೀದಿ ಮಂದಗೊಳಿಸುವುದು ಅಥವಾ ನಿಲ್ಲಿಸುವುದು ಮಾಡಬಾರದು. ಹೆಚ್ಚುವರಿ ಆವಕ ಇದ್ದಾಗ ಎಲ್ಲಿಂದಲಾದರೂ ಬೇಡಿಕೆ ಕುದುರಿಸಲು, ಲಾಭಾಂಶ ಕಡಿಮೆ ಆದರೂ ರೈತನಿಗಾಗಿ ಬೇರೆಲ್ಲೋ ಬೇಡಿಕೆ ಸಿಗುವುದೇನೋ ಎಂಬುದಾಗಿ ಹುಡುಕಾಟ ನಡೆಸಲು ಈಗಿಗಿಂತ ಹೆಚ್ಚು ಶ್ರಮಿಸಬೇಕು. ಮೋಸಗಳು, ರೈತನಲ್ಲಿ ಇರುವುದನ್ನು ಕಸಿಯಲು ಯತ್ನ ಇವನ್ನು ಕೈಬಿಡಬೇಕು. ಆಗ ಎಲ್ಲವೂ ಸುಧಾರಿಸುತ್ತದೆ.

ರೈತರು ಕೃಷಿ ಉತ್ಪನ್ನವನ್ನು ಮಾರಾಟ ಮಾಡಬೇಕಾದರೆ ಎಪಿಎಂಸಿಗೇ ಬರಬೇಕು ಎಂದು ಅಲಿಖಿತ ನಿಯಮವಿದೆ. ಅದನ್ನು ಅವರು ಪಾಲಿಸಬೇಕು.

ಎಪಿಎಂಸಿ ವ್ಯವಸ್ಥೆಯ ಅತಿ ದೊಡ್ಡ ದೋಷವೆಂದರೆ ರಾಜಕಾರಣಿಗಳ ಮಧ್ಯ ಪ್ರವೇಶ. ವ್ಯವಹಾರಗಳನ್ನು ವ್ಯವಹಾರವನ್ನಾಗಿ ಉಳಿಯಗೊಡದೆ ಅದರ ಮೇಲೆ ಅಧಿಪತ್ಯ ಸ್ಥಾಪಿಸಲು ಹೆಣಗುತ್ತಾರೆ. ಸಮಿತಿಗೆ ನಡೆಯುವ ಚುನಾವಣೆ ಅಥವಾ ಆಯ್ಕೆ ವೇಳೆ ರಾಜಕೀಯ ಪಕ್ಷಗಳು ಚುರುಕಾಗುತ್ತವೆ. ಸಾಮಾನ್ಯವಾಗಿ ಸ್ಥಳೀಯ ಶಾಸಕನಾದವನು ಎಪಿಎಂಸಿಯನ್ನು ತನ್ನ ಅಂಕೆಯಲ್ಲೇ ಉಳಿಸಿಕೊಳ್ಳಲು ಯತ್ನಿಸುತ್ತಾನೆ. ಆದರೆ ಆತನ ವಿರೋಧಿಗಳು ಇಲ್ಲಿಗೆ ಲಗ್ಗೆ ಹಾಕುತ್ತಾರೆ. ಸಮಿತಿಯಲ್ಲಿ ರೈತ ಪ್ರತಿನಿಧಿಗಳಾಗಿ ಬಂದು ಕೋಡುವವರು ತಮ್ಮ ಜನರೇ ಆಗಿರಬೇಕು ಎಂದು ಪ್ರತಿಯೊಬ್ಬ ಜನನಾಯಕನೂ ಯೋಚಿಸುತ್ತಾನೆ. ಹೀಗೆ ಬಂದು ಕೂತವರು ಸರ್ಕಾರದ ಪ್ರತಿನಿಧಿಯಾದ ಕಾರ್ಯದರ್ಶಿ ತಮ್ಮ ಮಾತನ್ನು ಕೇಳಬೇಕು ಎಂದು ಅಪೇಕ್ಷಿಸುತ್ತಾರೆ. ಅಲ್ಲಿಂದ ಯಾರ್ಡಿನ ಆಡಳಿತ ಶಿಥಿಲವಾಗುತ್ತದೆ. ರೈತನಿಗೆ ಸಿಗಬೇಕಾಗುವ ಸೌಲಭ್ಯಗಳು ಕಳಪೆ ಆಗುವುದಕ್ಕೆ ಆರಂಭವಾಗುತ್ತದೆ.

ಸರ್ಕಾರಕ್ಕೆ ಎಪಿಎಂಸಿಗಳಿಂದ ಒಳ್ಳೆಯ ಆದಾಯವಿದೆ. ಅದನ್ನು ಮಾರುಕಟ್ಟೆ ವೃದ್ಧಿಗಾಗಿ ವಿನಿಯೋಗಿಸಬೇಕು ಎಂಬುದು ನಿರೀಕ್ಷೆ. ರೈತರ ಉತ್ಪನ್ನದ ವಹಿವಾಟಿನಿಂದ ಸಂಗ್ರಹವಾಗಿದ್ದು ಅವರ ಹಿತರಕ್ಷಣೆಗೇ ವಿನಿಯೋಗವಾಗಬೇಕಾದ್ದು ಸಹಜವೇ. ರೈತನ ಪಾಲಿಗೆ ಅನುಕೂಲಕರ ಎನ್ನುವಂಥ ಎಲ್ಲ ಸೌಲಭ್ಯಗಳನ್ನೂ ಯಾರ್ಡಿನಲ್ಲಿ ಸೃಷ್ಟಿಸಿದ ಮೇಲೆ ಸಹ ಹಣ ಬಹಳ ಉಳಿಯುತ್ತದೆ. ಅದನನ್‌ಉ ಆವರ್ತ ನಿಧಿಯೊಂದಕ್ಕೆ ಹಾಕುತ್ತಾರೆ. ಬೆಲೆ ವಿಪರೀತ ಏರಿಳಿದಾಗ ಆ ನಿಧಿಯ ಹಣದ ಸದುಪಯೋಗ ಮಾಡಿಕೊಂಡು ಬೆಂಬಲ ಬೆಲೆ ಕಾರ್ಯಾಚರಣೆ ನಡೆಸುವುದು ಸರ್ಕಾರದ ಉದ್ದೇಶ. ಆದರೆ ಅದು ವಿಫಲವಾಗುವುದೇ ಹೆಚ್ಚು.

ಬೇಡಿಕೆ ಕುಸಿದ ಕಾರಣ ಬೆಲೆ ನೆಲ ಕಚ್ಚಿದಾಗ ಬೆಂಬಲ ಬೆಲೆಯನ್ನು ಘೋಷಿಸಿ ಸರಕು ಖರೀದಿಸಿದರೆ ರೈತ ಬದುಕಿಕೊಳ್ಳುತ್ತಾನೆ. ಆದರೆ ಹಾಗೆ ಖರೀದಿಸಿದ ಸರಕನ್ನು ಹೇಗೆ ವಿಲೇವಾರಿ ಮಾಡಬೇಕೆಂಬ ವಿಚಾರ ಬಂದಾಗ ಸರ್ಕಾರ ಸೋಲುತ್ತದೆ. ಅಧಿಕಾರಿಗಳು ವೃತ್ತಿಪರರಾಗಿ ಮೆರೆಯುವುದಿಲ್ಲ. ವ್ಯಾಪಾರಗಾರರರಾದವರು ಎಂದೂ ಬಷ್ಟಕ್ಕೆ ಒಳಗಾಗಲು ಸಿದ್ಧರಿರುವುದಿಲ್ಲ. ಆದರೆ ಅಧಿಕಾರಿಗಳು ಖರೀದಿದಾರರಾಗಿ ಪರಿಣಮಿಸಿದಾಗ ಇಡೀ ವ್ಯವಹಾರದಲ್ಲಿ ಹಣ ಮಾಡಿಕೊಳ್ಳುವುದು ಹೇಗೆ ಎಂದು ನೋಡಿಕೊಳ್ಳುತ್ತಾರೆ. ಇಲ್ಲದಿದ್ದರೆ ಖರೀದಿಸಿದ ಸರಕು ಹಾಳಾದರೂ ಚಿಂತೆ ಇಲ್ಲ ಎಂದು ನಿಶ್ಚಿಂತರಾಗಿ ಉಳಿದು ಸರ್ಕಾರದ ಹಣ ಪೋಲಾಗುವಂತೆ ಮಾಡುತ್ತಾರೆ. ಇನ್ನೊಂದು ಪ್ರಮೇಯವೆಂದರೆ ವರ್ತಕರು ಮತ್ತು ಅಧಿಕಾರಿಗಳು ಪರಸ್ಪರ ಷಾಮೀಲಾಗುತ್ತಾರೆ. ಆರು ಕಾಸಿನ ಬೆಲೆಯ ಬೆಂಬಲ ಬೆಲೆ ಖರೀದಿಯನ್ನು ಮೂರು ಕಾಸಿಗೆ ಖರೀದಿಸುತ್ತಾರೆ. ಒಟ್ಟಿನಲ್ಲಿ ಸಾರ್ವಜನಿಕ ಆಸ್ತಿ ಮುಕ್ಕಾಲು ಎಲ್ಲರೂ ಮುಂದಾಗುತ್ತಾರೆ.

ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯನ್ನು ಮೆಟ್ರೋದಂಥ ರಾಕ್ಷಸ ಗಾತ್ರದ ಸಂಸ್ಥೆಗಳು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ಅಂಶ ಕುತೂಹಲಕಾರಿ. ಇವುಗಳ ಖರೀದಿ ಸಾಮರ್ಥ್ಯ ಬಹಳ ದೊಡ್ಡದು. ಚಿಲ್ಲರೆ ಮಾರಾಟಗಾರರನ್ನು ಇಡಿಯಾಗಿ ಮುಷ್ಟಿಗೆ ತೆಗೆದುಕೊಳ್ಳಬಲ್ಲ ಬಹುರಾಷ್ಟ್ರೀಯ ಕಂಪೆನಿ ಶೈಲಿಯ ಇಂಥ ಸಂಸ್ಥೆಗಳು ‘ಏನು ಬೇಕಾದರೂ ಮಾಡಲು ಶಕ್ತ’ ಎಂಬ ಭೀತಿಗೆ ಕಾರಣವಿಲ್ಲದೆ ಇಲ್ಲ. ಈವರೆಗೆ ಚಿಲ್ಲರೆ ಮಾರಾಟಗಾರ ಸಂಘಟಿತನಾದುದು ಇಲ್ಲ. ಸರಕನ್ನು ಮಾರುವಷ್ಟಕ್ಕೆ ಆತ ಸೀಮಿತನಾಗಿದ್ದಾನೆ. ಶಕ್ತಿವಂತನಾಗಲು ಯತ್ನಿಸಿಲ್ಲ. ಆದರೆ ಅವನ ಮುಖೇನ ಮೆಟ್ರೋಗಳು ಶಕ್ತಿ ಸಂಗ್ರಹಿಸುತ್ತವೆ. ಯಾರ್ಡುಗಳ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಆ ಶಕ್ತಿಯನ್ನು ಬಳಸಿಕೊಳ್ಳಬಲ್ಲವು. ಮುಖ್ಯವಾಗಿ ಬೆಲೆ ಏರಿಸಲು ಅಥವಾ ಇಳಿಸಲು ಇವು ಶಕ್ತವಾಗುತ್ತವೆ. ಒಂದು ಮೆಟ್ರೊ ಮುಂದೆ ಮಿಕ್ಕ ವರ್ತಕ ವೃಂದ ದುರ್ಬಲ ಪಾತ್ರಧಾರಿಯಾಗಿ, ‘ಚಿಲ್ಲರೆ’ಯಾಗಿ ಪರಿಣಮಿಸುತ್ತದೆ.

ರೈತರು ಈಗಲೂ ತಮ್ಮ ಎಲ್ಲ ಕೃಷಿ ಉತ್ಪನ್ನವನ್ನು ಯಾರ್ಡುಗಳಿಗೆ ತಂದು ಮಾರಾಟಕ್ಕೆ ಇಡುವುದಿಲ್ಲ. ಮೊದಲಿಗೆ ಸ್ವಂತ ಬಳಕೆಗೆ ಧಾನ್ಯವನ್ನು ಇರಿಸಿಕೊಂಡು ಮಿಕ್ಕಿದ್ದನ್ನೇ ಮಾರುವುದು. ಮಾರಾಟಕ್ಕೆ ತರಬೇಕಾದ್ದು ಸಹ ಸಾಕಷ್ಟು ಪ್ರಮಾಣದಲ್ಲಿ ಯಾರ್ಡಿಗೆ ಬರದೇ ಮಧ್ಯದಲ್ಲೇ ಮಾರಾಟವಾಗುತ್ತದೆ. ಇದು ವಾಸ್ತವಾಂಶ. ಈ ಮೂಲವನ್ನು ಮೆಟ್ರೋದಂಥ ಮಳಿಗೆಗಳವರು ಬಳಸಿಕೊಳ್ಳಬಲ್ಲರು.

ಯಾವುದೇ ಒಂದು ನಿರ್ದಿಷ್ಟ ಕೃಷಿ ಉತ್ಪನ್ನದ ವಿಷಯದಲ್ಲಿ ಯಾರ್ಡಿನ ವ್ಯಾಪಾರ ಏನಿದ್ದರೂ ಸುಗ್ಗಿ ಅನಂತರದ ಕೆಲವು ವಾರ ಮಾತ್ರ. ಆಗ ಆಹಾರಧಾನ್ಯ ಮುಂತಾದವು ಬಹಳ ಅಗ್ಗ. ತಕ್ಷಣ ಹಣ ಬೇಕು ಎನ್ನುವ ದರದು ಇರುವ ರೈತರು ಮಾತ್ರವೇ ತಕ್ಷಣ ಸರಕನ್ನು ಮಾರಾಟಕ್ಕೆ ಇಡುವುದು. ದಾರ್ಢ್ಯಇರುವ ರೈತರು ಮುಂದಿನ ತಿಂಗಳುಗಳಲ್ಲಿ ಬೆಲೆ ಏರುತ್ತದೆಂದು ಕಾಯಬಲ್ಲರು. ಸುಗ್ಗಿ ವೇಳೆ ಸರಕನ್ನು ಕೊಂಡು ದಾಸ್ತಾನು ಮಾಡುವ ವರ್ತಕರೂ ಕಡಿಮೆ ಇರುವುದಿಲ್ಲ. ಹೀಗೆ ದಾಸ್ತಾನಿಗೆ ಒಳಗಾದ ಸರಕಿಗೆ ಮೆಟ್ರೊ ಸುಲಭವಾಗಿ ಕೈಹಾಕುತ್ತದೆ. ಇದೇನೇ ಇದ್ದರೂ ಮೆಟ್ರೋದಂಥವರು ಸಹ ಯಾರ್ಡಿಗೇ, ಯಾರ್ಡಿನ ವ್ಯವಸ್ಥೆಗೆ ಮಾತ್ರವೇ ಬರುವಂತೆ ಮಾಡಿದರೆ ಯಾರೂ ಅವರಿಗೆ ಹೆದರಬೇಕಾಗುವುದಿಲ್ಲ.

ತಪ್ಪಿದರೆ ಯಾರ್ಡು ಬರಿದೆ ಬೋರ್ಡು ಆಗಿ ಪರಿಣಮಿಸುತ್ತದೆ.

೦೩.೧೨.೨೦೦೩