ಕಾಮಧೇನು ಕಲ್ಪವೃಕ್ಷ-ದೇವಲೋಕಕ್ಕೆ ಸಮೃದ್ಧಿಯನ್ನು ತಂದುಕೊಟ್ಟವು ಇವು. ಕರ್ನಾಟಕದ ಪಾಲಿಗೆ ಕಾಮಧೇನುವಿನ ಕೃಷಿಗೇನೂ ಕಡಿಮೆ ಇಲ್ಲ. ಇಲ್ಲಿ ಹಾಲಿನ ಹೊಳೆ ಹರಿಯುತ್ತಿದೆ. ಕುಡಿವ ನೀರಿಗೆ ಅಭಾವ ಇರಬಹುದು. ಹಾಲಿಗೆ ಮೋಸವಿಲ್ಲ.

ತೆಂಗನ್ನು ಕಲ್ಪವೃಕ್ಷ ಎನ್ನುತ್ತಾರೆ. ಅದಕ್ಕೆ ಶಾಪ ತಟ್ಟಿದೆ. ತೆಂಗಿನ ಜಿಲ್ಲೆಗಳಾದ ತುಮಕೂರು, ಹಾಸನ, ಮೈಸೂರು, ಮುಂತಾದ ಕಡೆ ತೆಂಗನ್ನೇ ನಂಬಿಕೊಂಡವರ ಜೀವನಾಧಾರಕ್ಕೆ ಧಕ್ಕೆ ಬಂದಿದೆ. ಐದು ವರ್ಷ ಕಾಲದಿಂದ ನುಸಿ ಪೀಡೆ ಬಾಧೆಗೆ ತುತ್ತಾದ ತೆಂಗು ಚೇತರಿಸಿಕೊಂಡೇ ಇಲ್ಲ. ಇದರಿಂದಾಗಿ ಈ ಜಿಲ್ಲೆಗಳ ಆರ್ಥಿಕತೆ ಚಿಂದಿ ಆಗಿದೆ. ನಷ್ಟ ಎಷ್ಟಾಗಿದೆ ಎಂದು ಖಚಿತವಾಗಿ ಲೆಕ್ಕ ಹಾಕಿದವರೇ ಇಲ್ಲ.

ಇದೀಗ ಯಾವ ಸ್ಥಿತಿಗೆ ಕರ್ನಾಟಕ ಮುಟ್ಟಿದೆ ಎಂದರೆ ನಿತ್ಯ ಸ್ವಯಂಪಾಕಕ್ಕೆ ಬೇಕಾದ ತೆಂಗನ್ನು ಪೂರೈಸಲು ದಕ್ಷಿಣದ ಇತರ ಎರಡು ತೆಂಗು ರಾಜ್ಯಗಳಾದ ಆಂಧ್ರ ತಮಿಳುನಾಡಿನಿಂದ ತೆಂಗಿನಕಾಯಿ ಆಮದು ಮಾಡಿಕೊಳ್ಳಬೇಕಾಗಿದೆ. ನುಸಿಪೀಡೆಯಿಂದಾಗಿ ರಾಜ್ಯದಲ್ಲಿ ತೆಂಗಿನಕಾಯಿ ಗಾತ್ರವೇ ಸಣ್ಣದಾಗಿದೆ. ದೇಶದಲ್ಲೇ ಪ್ರಖ್ಯಾತವಾದ ತಿಪಟೂರು ಕೊಬ್ಬರಿಯ ಗಾತ್ರ ಮುಷ್ಟಿ ಮಟ್ಟಕ್ಕೆ ಬಂದಿದೆ. ಇನ್ನು ಬೆಲೆ ಎಲ್ಲಿಂದ ಬರಬೇಕು? ಮೂರು ಮೂರುವರೆಗೆ ಸಿಗುತ್ತಿದ್ದ ತೆಂಗಿನಕಾಯಿ ಬೆಲೆ ಇದೀಗ ಆರು ಏಳಕ್ಕೆ ಬಂದಿದೆ. ಅನ್ಯ ರಾಜ್ಯದ ಕಳಪೆ ತೆಂಗಿನಕಾಯಿಗೂ ಈಗ ರಾಜಾ ಬೆಲೆ. ತೆಂಗಿನಕಾಯಿ ಬೆಲೆ ಏರಿದೆ ಎಂದು ಯಾರೂ ಬೀಗುವಂತಿಲ್ಲ. ಏಕೆಂದರೆ ಸಣ್ಣ ಕಾಯಿಯೇ ಆದರೂ ತೆಂಗಿನ ಮರಗಳಲ್ಲಿ ಬೆಳೆಯೇ. ಆದರೆ ಇಳುವರಿಯೇ ಕಡಿಮೆ. ಐದು ವರ್ಷದ ಹಿಂದೆ ಏನು ಫಸಲು ಇತ್ತೋ ಅದರ ಶೇ. ೪೦ ಮಾತ್ರ ಈಗ ಕೈಗೆ ದಕ್ಕುವುದು. ಬೆಲೆ ಏರಿದರೂ ಪ್ರಯೋಜನವೇನು?

ಕರ್ನಾಟಕದಲ್ಲಿ ಸತತವಾಗಿ ಬರ. ಕಳೆದ ವರ್ಷಕ್ಕಿಂತ ಈ ವರ್ಷ ಬರ ತೀವ್ರ. ನೆಲದಲ್ಲಿ ನೀರಿನ ಪಸೆ ಇಲ್ಲ. ನುಸಿ ಹೋಗದೆ ಕಾಡುತ್ತಿರುವಾಗ ಎಷ್ಟು ಗೊಬ್ಬರ ಹಾಕಿದರೇನು ಫಲ? ಬಿಸಿಲಿನ ತಾಪ ಅಧಿಕ ಇದ್ದ ಕಡೆ ತೆಂಗಿನ ಮರಗಳು ಉರುಳಿ ಹೋದವು. ಕಲ್ಪವೃಕ್ಷ ಎನಿಸಿಕೊಂಡ ತೆಂಗಿನ ಮರಗಳ ಬೋಳಾಗಿ ನಿಂತಾಗ ನೆಲಕಚ್ಚಿದಾಗ ಜನ ನಿಟ್ಟುಸಿರು ಬಿಟ್ಟಿದ್ದು ಮಾತ್ರವಲ್ಲ, ಕಣ್ಣೀರಿಟ್ಟರು, ಏಕೆಂದರೆ ಅವರ ಪಾಲಿನ ವರಮಾನದ ಮೂಲವೇ ಬತ್ತಿ ಹೋಯಿತು.

ತೀವ್ರವಾಗಿ ನಷ್ಟಗೊಂಡವನ ‘ಕೈಗೆ ಸಿಗುವುದು ಚಿಕ್ಕನಾಯಕನ ಹಳ್ಳಿಯ ಚಿಪ್ಪು’ ಮಾತ್ರ ಎಂದು ಹೇಳುವುದು ರೂಢಿ. ಈಗ ಅದೂ ಸಿಗುವುದಿಲ್ಲ! ತುಮಕೂರು ಜಿಲ್ಲೆಯ ಈ ಊರಿನಲ್ಲಿ ಗೊಬ್ಬರ ಹಾಕಿದರೂ ಫಲವಿಲ್ಲ ಎನಿಸಿದಾಗ ತೆಂಗನ್ನು ನಿರ್ಲಕ್ಷಿಸಿ ಅಡಿಕೆ ನೆಟ್ಟರು. ಮಲೆನಾಡಿನ ಅಂಚಿನಲ್ಲಿರುವ ಎಲ್ಲ ತೆಂಗು ಭೂಮಿಯಲ್ಲಿ ಜನರು ತೆಂಗು ಬದಲು ಅಡಿಕೆಯ ಆಸರೆಯಾದರೂ ದಕ್ಕಬಹುದೆಂದು ಬಯಸಿದರು. ಏನಾಯಿತು? ಇವರ ಕೈಗೆ ಅಡಿಕೆಯ ಮೊದಲು ಫಸಲು ಕೈ ಸೇರುವ ವೇಳೆಗೆ ಅಡಿಕೆಯ ಬೆಳೆ ಕುಸಿಯಿತು. ತೆಂಗೂ ಇಲ್ಲ, ಅಡಿಕೆಯೂ ಇಲ್ಲ.

ಈ ನುಸಿ ಹಾವಳಿ ತಪ್ಪುವುದೆಂದು? ದೇವರೇ ಬಲ್ಲ. ಹಾಗೆಂದು ತಜ್ಞರು ಬಾಯಿ ಬಿಟ್ಟು ಹೇಳುವುದಿಲ್ಲ. ನುಸಿಯು ತನ್ನಷ್ಟಕ್ಕೆ ತಾನು ಮಾಯವಾಗುತ್ತದೆ ಬಿಟ್ಟು ಬಿಡಿ ಎನ್ನುವುದೆ ಪರಿಹಾರೋಪಾಯ! ಏನೇ ವೈದ್ಯ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎನ್ನುವಾಗ ಕೃಷಿ ತಜ್ಞರು ಮಾತ್ರ ಏನು ಮಾಡಿಯಾರು?! ಕಳೆದ ಒಂದೂವರೆ ವರ್ಷದಲ್ಲಿ ನುಸಿ ಕಡಿಮೆಯಾಗಿದೆ. ಕೀಟನಾಶಕವನ್ನು ಮದ್ದಾಗಿ ಬಳಸಿದ ಕಡೆ ಅದರ ತೀವ್ರತೆ ಕಡಿಮೆಯಾಗಿಲ್ಲ. ಹೊಂಗೆ ಹಿಂಡಿ, ಬೇವಿನ ಹಿಂಡಿ, ಇವನ್ನು ತೆಂಗಿನ ಮರಕ್ಕೆ ಕೊಟ್ಟ ಕಡೆ ನುಸಿ ಕಡಿಮೆಯಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲೂ ಇದೇ ಮಾತು. ಎಲ್ಲವೂ ಸೋತಾಗ ಈ ಸರಳ ಉಪಾಯ ಗೆದ್ದಿದೆ. ಆದರೆ ಆರೈಕೆ ಚೇತರಿಕೆ ಎರಡೂ ವಿಧಾನ.

ವಾಸ್ತವವಾಗಿ ನುಸಿಪೀಡೆ ಎನ್ನುವುದು ಒಂದು ರೈತನ ಸಹಜ ಸಮಸ್ಯೆಯಾಗಿ ಉಳಿಯದೆ ಗುಲ್ಲಾಗಿದ್ದು, ರಾಜಕೀಯ ಅಸ್ತ್ರವಾಗಿದ್ದು ಬೇರೆಯದೇ ವಿದ್ಯಮಾನ. ರಾಜ್ಯ ಸರ್ಕಾರ ನುಸಿಪೀಡೆ ನಿವಾರಣೆಗೆ ಏನೂ ಮಾಡಲಿಲ್ಲ ಎನ್ನುವುದು ರೈತನನ್ನು ಪ್ರತಿನಿಧಿಸುವವರು ತಾವೆಂದು ಹೇಳಿಕೊಳ್ಳುವವರ ದೂರು. ಸರ್ಕಾರವಾದರೋ ರಾಶಿ ರಾಶಿ ರಾಸಾಯನಿಕವನ್ನು ಮದ್ದೆಂದು ಖರೀದಿಸಿ ತೆಂಗಿನ ಮೇಲೆ ಪ್ರಯೋಗಿಸಿತು. ಹಾಗೆ ಬಳಸಿದ್ದು ಎಷ್ಟೋ, ಮಧ್ಯದಲ್ಲಿ ನುಂದಿಗವರೆಷ್ಟೋ, ಲೆಕ್ಕ ಸಿಗಲಿಲ್ಲ. ನುಸಿ ಪೀಡೆ ತಪ್ಪಲಿಲ್ಲ. ಆಡಳಿತ ಪಕ್ಷದವರು, ವಿರೋಧ ಪಕ್ಷಗಳವರು ತೆಂಗಿನ ಹಾಗೂ ತೆಂಗು ಕೃಷಿಕರ ಹೆಸರಿನಲ್ಲಿ ರಾಜಕೀಯ ಮಾಡಿದರು. ಮಾಧ್ಯಮಗಳನವರು ಅದನ್ನೆಲ್ಲ ಬಿಂಬಿಸಿಯೇ ಬಿಂಬಿಸಿದರು. ಅವರಿಗೂ ದಣಿವಾಗಲಿಲ್ಲ. ನುಸಿ ಪೀಡೆಯನ್ನು ಕುರಿತ ಇಡೀ ಹಗರಣದಲ್ಲಿ ಸೋತವರು, ಮುಖ ಕಪ್ಪು ಮಾಡಿಕೊಂಡವರೆಂದರೆ ಕೃಷಿ ತಜ್ಞರು ಮಾತ್ರವೇ…. ನುಸಿ ಹತೋಟಿಗೆ ತಾವು ಮಾಡಿದ ಸಂಶೋಧನೆಯಾಗಲಿ, ಎರವಲು ತಂದ ಪರಿಹಾರೋಪಾಯಗಳಾಗಲೀ ಏನೂ ಇಲ್ಲ. ಕೃಷಿ ಸಂಬಂಧ ಒಂದು ತುರ್ತು ಸನ್ನಿವೇಶದಲ್ಲಿ ಕೃಷಿ ಪಂಡಿತರು ಪ್ರಯೋಜನಕ್ಕೆ ಬಂದುದೇ ಇಲ್ಲ. ಇವರ ಪ್ರೌಢಿಮೆ, ಜ್ಞಾನ ಎಲ್ಲ ಬರಿದೆ ಕಾಗದದ ಮೇಲೆ ಮಾತ್ರವೇ ಉಳಿಯಿತು.

ಆದರೆ ಕೃಷಿ ತಜ್ಞರು ಹೀಗೆ ನಿರ್ವಿಣ್ಣರಾಗಿ ಉಳಿದಾಗ ವಿಜೃಂಭಿಸಿದವರೆಂದರೆ ರೈತ ಸಂಘವೋ, ಇನ್ನಾವುದೋ ಹೆಸರಿನಲ್ಲಿ ರಾಜಕೀಯ ಮಾಡಿದವರೋ ಆದ ರೈತ ಮುಖಂಡರು. ಯಾವುದೋ ಹಿತಾಸಕ್ತಿಗೆ ನೆರವಾಗುವ ನೆವದಲ್ಲಿ ಇವರು ನುಸಿಪೀಡೆಗೆ ಪರಿಹಾರ ಎಂಬಂತೆ ನೀರಾ ಇಳಿಸಬೇಕೆನ್ನುವುದಕ್ಕೆ ಜೋತು ಬಿದ್ದರು. ನೀರಾ ಸೇವನೆ ಒಳ್ಳೆಯದೆಂದು ಮಹಾತ್ಮಾ ಗಾಂಧಿ ಹೇಳಿದ್ದರೆಂಬ ಮಾತನ್ನು ಸಹಾ ಬಳಸಿಕೊಂಡರು. ನೀರಾ ಇಳಿಸಿ ತಮ್ಮ ವರ್ಚಸ್ಸು ಬೆಳೆಸಿಕೊಂಡರು. ನೀರಾ ಇಳಿಸುವ ಚಳವಳಿಯನ್ನು ಸ್ವಾತಂತ್ರ್ಯ ಹೋರಾಟ ಕಾಲದ ಚಳವಳಿಯೋಪಾದಿ ನಡೆಸಿದರು. ನೀರಾ ಇಳಿಸಲು ಅನುಮತಿ ಕೊಡುವುದಿಲ್ಲ ಎನ್ನುವ ಪಟ್ಟನ್ನು ಸರ್ಕಾರ ಬಿಗಿಯಾಗಿ ಹಿಡಿದುಕೊಳ್ಳಲು ಸಾಧ್ಯವೇ ಆಗಲಿಲ್ಲ. ಪಟ್ಟು ಸಡಿಲವಾಗಿ ಅನುಮತಿ ನೀಡಬೇಕಾಯಿತು. ಫಲಿತವೆಂದರೆ ಬೀದಿ ಬೀದಿಯಲ್ಲಿ ನೀರಾ ಮಾರಾಟ ಆಯಿತು. ನುಸಿ ಪೀಡೆ ಹತೋಟಿಗೆ ಅದರಿಂದ ಉಪಯೋಗವಾಯಿತೆ? ಚಳವಳಿ ಮುಗಿದಂತೆ ಯಾರಿಗಾದರೂ ಅನುಕೂಲ ಆಗಿದ್ದಿರಬಹುದು. ಆದರೆ, ತೆಂಗು ಕೃಷಿಕರಿಗಂತೂ ಏನೂ ಪ್ರಯೋಜನವಾಗಲಿಲ್ಲ. ಬರಿದೆ ರಾಜಕೀಯ ಮಾಡಿದಷ್ಟೇ ಬಂದಿತು. ಸಂಪನ್ಮೂಲ ಎಷ್ಟೊಂದು ಫೋಲಾಯಿತು ಎಂದು ಲೆಕ್ಕ ಹಾಕಿದವರಿಲ್ಲ. ಕೃಷಿಕನ ಹೆಸರಿನಲ್ಲಿ ಎಷ್ಟೊಂದು ಜನರ ಶ್ರಮ, ಸಮಯ ವ್ಯರ್ಥವಾಯಿತು.

ವ್ಯರ್ಥವಾಯಿತು. ಕೊನೆಗೂ ಸಮಸ್ಯೆ ಹಾಗೆಯೇ ಉಳಿದುಕೊಂಡಿತು. ತೆಂಗಿನ ಮಟ್ಟಿಗೆ ಸ್ವಾಲವಂಬಿ ಆಗಿದ್ದ ರಾಜ್ಯದ ಹಿತ ಪರಾಧೀನವಾಯಿತು. ಅಡಿಗೆಗೆ ಬೇಕಾದ ತೆಂಗಿನ ಕಾಯಿಗೂ ಪರರಾಜ್ಯಗಳತ್ತ ನೋಡುವಂತಾಯಿತು. ಹೊರ ರಾಜ್ಯಗಳಿಗೆ ಕೊಬ್ಬರಿ ಪೂರೈಸುವ ವಾಣಿಜ್ಯೋದ್ಯಮ ಕ್ಷೀಣಿಸಿತು. ಇದಕ್ಕೆ ಹೊಣೆ ಯಾರು? ಯಾರು ಯಾರನ್ನು ಪ್ರಶ್ನಿಸಬೇಕು? ಉತ್ತರ ಕೊಡುವ ಉಸಾಬರಿ ತಾನೇ ಯಾರಿಗಿದೆ?

ಇದೀಗ ನುಸಿ ಬಾಧೆ ಇನ್ನೂ ಪೂರ್ಣವಾಗಿ ನಿವಾರಣೆ ಆಗಿಲ್ಲ. ಆದರೆ ಅಷ್ಟರಲ್ಲಿ ತುಮಕೂರು ಜಿಲ್ಲೆಯ ಹಲವಾರು ಕಡೆ ತೆಂಗಿಗೆ ಬೆಂಕಿ ರೋಗ ತಗುಲಿಕೊಂಡಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ಹುಳಿಯಾರು, ಗುಬ್ಬಿ ಮುಂತಾದ ಕಡೆ ಪ್ರತಿ ಮಾರು ಸಾವಿರ ಮರದಲ್ಲಿ ಎರಡು ಸಾವಿರ ಮರಕ್ಕೆ ಇದು ತಗುಲಿದೆ. ತೆಂಗಿನ ಮರದ ಅಂದಕ್ಕೆ ಕಾರಣವಾಗುವ ಗರಿಗಳು ಹುಳುವಿನ ಬಾಧೆಗೆ ಗುರಿ ಆಗುತ್ತವೆ. ಕಪ್ಪಾಗುತ್ತವೆ. ಒಣಗಿ ಜೋತು ಬೀಳುತ್ತವೆ. ಅನಂತರ ಉದುರಿ ಬೀಳುತ್ತವೆ. ಇಡೀ ತೆಂಗಿನ ಮರ ಬೋಳಾಗಿ ಕಾಂಡ ಮಾತ್ರ ಒಣಗಿ ನಿಲ್ಲುತ್ತದೆ. ಅನಂತರ ಅದು ಸಹಾ ಬೀಳುವಂತಾಗುತ್ತದೆ; ಚಿಗುರುವುದಿಲ್ಲ.

ನುಸಿ ಪೀಡೆ ಇಷ್ಟೆಲ್ಲ ದಾಂಧಲೆ ಎಬ್ಬಿಸಿದರೂ, ಅದರ ಹೆಸರಿನಲ್ಲಿ ಗಲಾಟೆ ಮಾಡುವವರು ತಣ್ಣಗಾದ ಮೇಲೆ ಮತ್ತೆ ಮರ ಚಿಗುರಲು ಅವಕಾಶ ಮಾಡಿಕೊಡುತ್ತದೆ. ಅಲ್ಲಲ್ಲಿ ಹೊಸ ಚಿಗುರು ಕಾಣಿಸುತ್ತಿರುವುದು ನಿಜ. ಆದರೆ ಬೆಂಕಿ ರೋಗದ ವಿಚಾರ ಹಾಗಲ್ಲ. ಇಡೀ ತೆಂಗಿನ ತೋಟವನ್ನೇ ಬೋಳು ಬೋಳು ಮಾಡುತ್ತದೆ.

ಬೆಂಕಿ ರೋಗದ ಅಪಾಯವೆಂದರೆ ನುಸಿ ಪೀಡೆ ರೀತಿಯಲ್ಲೇ ತೋಟದಿಂದ ತೋಟಕ್ಕೆ ನೂರಾರು ಸಾವಿರಾರು ಎಕರೆಗೆ ತಾನಾಗಿ ಹರಡಿಕೊಳ್ಳುತ್ತದೆ; ಅದು ವೇಗವಾಗಿ. ಬೆಂಕಿ ರೋಗದ ಹತೋಟಿಗೆ ಕೂಡಾ ಯಾರೂ ಗಮನ ಹರಿಸಿಲ್ಲ. ತಾನಾಗಿ ನಿಯಂತ್ರಣಕ್ಕೆ ಬರುವ ರೋಗವೂ ಇದಲ್ಲ.

ಯಾವುದಾದರೊಂದು ರೋಗ ಬಂದಾಗ ಸಮರೋಪಾಯದಲ್ಲಿ ಅದರ ಹತೋಟಿಗೆ ಯತ್ನಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ರೇಷ್ಮೆ ಕೃಷಿಕರನ್ನು ಊಜಿ ನೊಣಗಳು ಬಾಧಿಸತೊಡಗಿದಾಗ ಅಂಥ ಒಂದು ಸಮರೋಪಾದಿ ಕಾರ್ಯಾಚರಣೆ ನಡೆದಿತ್ತು. ನಂತರ ನಿಧಾನವಾಗಿ ರೈತರೇ ಸೊಳ್ಳೆಪರದೆ ಬಳಕೆಯೇ ಮುಂತಾದ ಸರಳ ವಿಧಾನಗಳನ್ನು ರೂಪಿಸಿಕೊಂಡರು. ತಜ್ಞರು ಅಂಥ ಸರಳ ವಿಧಾನಗಳನ್ನು ಪಾಲಿಸಲು ನೆರವಾದರು.

ದುರದೃಷ್ಟವಶಾತ್ ರಾಜ್ಯದಲ್ಲಿ ಕೃಷಿ ಕ್ಷೇತ್ರದ ವಿವಿಧ ಬೆಳೆಗಳು ಅತಂತ್ರಕ್ಕೆ ಒಳಗಾಗುತ್ತಿವೆ. ಅಡಿಕೆ ಬೆಳೆ ಕುಸಿಯದಿದ್ದರೂ ಬೆಲೆ ಕುಸಿದಿದೆ. ಅನ್ಯ ರಾಷ್ಟ್ರಗಳ ಸರಕು ಒಳಬರುತ್ತಿರುವುದು ಒಂದು ಕಾರಣ.

ಆಮದು ನೀತಿಯ ವಿಪರ್ಯಾಸದಿಂದಾಗಿ ತಾಳೆ ಎಣ್ಣೆ ಭಾರತಕ್ಕೆ ಬಂದಿಳಿಯುತ್ತಿರುವುದರಿಂದ ಮಲೇಷ್ಯಾ ಆರ್ಥಿಕತೆ ಕುದುರಲು ಮಾತ್ರ ಸಾಧ್ಯವಾಗಿದೆ. ನಮ್ಮ ತೈಲ ಬೀಜಗಳ ಬೆಳೆ ಲಾಭಕಾರಿ ಆಗುತ್ತಿಲ್ಲ.

ಕಬ್ಬು ಬೆಳೆಗಾರರು ಅತಂತ್ರವಾಗಿರುವಷ್ಟು ಇನ್ನೆಲ್ಲೂ ಆಗಿಲ್ಲ. ಸಕ್ಕರೆ ತಯಾರಿಕಾ ಉದ್ಯಮವು ಕಬ್ಬು ಬೆಳೆ ಬಗೆಗಗೆ ಬಹಳ ಚೆನ್ನಾಗಿ ಜೋಡಣೆಗೊಂಡಿದ್ದರೂ ಸರಕನ್ನು ರಫ್ತು ಮಾಡಲಾಗದೆ ಕಬ್ಬು ಪೂರೈಸಿದ ಬಾಬಿನ ಹಣವೇ ರೈತರಿಗೆ ಪೂರ್ತಿ ಸಂದಾಯವಾಗುತ್ತಿಲ್ಲ. ಈಚೆಗೆ ಭಾರತವು ವಿಮಾನಗಳನ್ನು ಖರೀದಿಸುವ ವೇಳೆ, ಅದನ್ನು ಮಾರುವ ರಾಷ್ಟ್ರಕ್ಕೆ ನಮ್ಮ ಸಕ್ಕರೆ ಕೊಳ್ಳಬೇಕೆಂಬ ಷರತ್ತು ವಿಧಿಸಿದರಂತೆ. ಆಮೇಲೆ ಅದರ ವಿವರ ಹೊರಬೀಳಲಿಲ್ಲ.

ಜಾಗತೀಕರಣದ ಅಂಗವಾಗಿ ಕೃಷಿ ಉತ್ಪನ್ನ ಸಂಸ್ಕರಣೆಗೆ ಭಾರೀ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಕೃಷಿ ಉತ್ಪನ್ನಕ್ಕೇ ಇಂಥ ಗತಿ ಬಂದರೆ ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವವರು ಕಚ್ಚಾ ಸಾಮಗ್ರಿಯನ್ನು ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಬಹುದು.

ರೇಷ್ಮೆ ಜವಳಿ ತಯಾರಕರಂತೂ ಕಚ್ಚಾ ರೇಷ್ಮೆಯನ್ನು ಆಮದು ಹಾಗೂ ಕಳ್ಳ ಸಾಗಾಣಿಕೆ ಮಾಡಿಕೊಳ್ಳುವುದನ್ನೇ ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲ ಯಾವ ದಿಕ್ಕಿನ ಗತಿಯತ್ತ ಬೊಟ್ಟು ಮಾಡಿ ತೋರಿಸುತ್ತಿದೆ?

೨೬.೦೩.೨೦೦೩