‘ಪುರಕ್ಕೆ ಬಂದವಳು ಪಾರ್ಕಿಗೆ ಬರದೇ ಇರುತ್ತಾಳೆಯೇ?!’

ಇದೊಂದು ನವೀನ ಗಾದೆ. ಪಾರ್ಕು ಎನ್ನುವಾಗ ಬಹುತೇಕ ಸ್ಫುರಿಸುವುದು ಮರ ಗಿಡಗಂಟೆ ಇರುವ ಉದ್ಯಾನ ಎಂದೇ ಅರ್ಥ. ಆದರೆ ನಗರ ಗ್ರಾಮಗಳಲ್ಲಿ ಬೇರೆಯೇ ಅರ್ಥದ ಪಾರ್ಕುಗಳು ತಲೆಯೆತ್ತುತ್ತಿವೆ.

ಮಾಹಿತಿ ತಂತ್ರಜ್ಞಾನ ಪಾರ್ಕ್, ಜೈವಿಕ ತಂತ್ರಜ್ಞಾನ ಪಾರ್ಕ್, ಉಡುಪು ತಂತ್ರಜ್ಞಾನ ಪಾರ್ಕ್…. ಹೀಗೆಯೇ ಪಟ್ಟಿ ಬೆಳೆಯುತ್ತದೆ. ಆದರೆ ಇವೆಲ್ಲ ನಗರಕ್ಕೆ ಸೀಮಿತ. ಗ್ರಾಮಗಳಿಗೂ ಪಾರ್ಕುಗಳು ಬರುತ್ತವೆ. ಅವು ಆಹಾರ ತಂತ್ರಜ್ಞಾನ ಪಾರ್ಕ್‌.

ಕೇಂದ್ರ, ರಾಜ್ಯ ಸರ್ಕಾರಗಳ ಅಂಗೀಕೃತ ನೀತಿ ಪ್ರಕಾರ ಇಷ್ಟು ಹೊತ್ತಿಗೆ ಆಹಾರ ಸಂಸ್ಕರಣೆ ಉದ್ಯಮ ಬಹಳ ಪುಷ್ಟಿಯಾಗಿ ಬೆಳೆಯಬೇಕಿತ್ತು. ಪಶ್ಚಿಮದ ಪರಿಕಲ್ಪನೆಯ ಪ್ರಕಾರ ಆಹಾರ ಸಂಸ್ಕರಣೆ ಉದ್ಯಮವೆಂದರೆ ಜನರು ಮನೆಯಲ್ಲಿ ಅಡಿಗೆ ಮಾಡುವುದನ್ನು ಕಡಿಮೆ ಮಾಡಿ, ಎಷ್ಟೋ ಆಹಾರ ಸಾಮಗ್ರಿಗಳನ್ನು ಸ್ವತಃ ಮನೆ ಮಟ್ಟದಲ್ಲಿ ತಯಾರು ಮಾಡಿಕೊಳ್ಳುವುದನ್ನು ನಿಲ್ಲಿಸಿ, ಅಂಗಡಿಗಳಿಂದ ಕೊಂಡು ಒಯ್ಯಬೇಕು. ಆದರೆ ಭಾರತದ ಪರಿಕಲ್ಪನೆ ಪ್ರಕಾರ ಆಹಾರ ಸಂಸ್ಕರಣೆ ಎಂದರೆ ಗೋಧಿ, ಮತ್ತಿತರ ಧಾನ್ಯಗಳಿಂದ ಹಿಟ್ಟು ಮತ್ತು ರವೆ ತಯಾರಿಸುವುದು; ಇಷ್ಟು ಮಾತ್ರ ಆಗಿತ್ತು. ಈಗ ಕಾಲ ಬದಲಾಗಿದೆ. ಹಣ್ಣಿನ ರಸ; ಬ್ರೆಡ್ಡು ಮತ್ತಿತರ ಬೇಕರಿ ಉತ್ಪನ್ನ; ಚಾಕೊಲೇಟು, ಪೆಪ್ಪರ್‌ಮೆಂಟು, ಬಿಸ್ಕತ್ತು; ಸೇವಿಗೆ, ಹಾಲು, ಮೊಸರು, ತುಪ್ಪ ಮುಂತಾದ ಡೇರಿ ಉತ್ಪನ್ನ ಮುಂತಾದವು ಸಂಸ್ಕರಿತ ಉದ್ಯಮದ ವ್ಯಾಪ್ತಿಗೆ ಬರುತ್ತವೆ. ಈಚೆಗಂತೂ ಆಹಾರ ವಸ್ತುಗಳ ಪಟ್ಟಿ ಬೆಳೆಯುತ್ತಿದೆ. ಕುರುಕಲು ತಿನಿಸು ತಯಾರಿಸುವುದೇ ಒಂದು ದೊಡ್ಡ ಉದ್ಯಮ. ಚಿಪ್ಸ್ ಫ್ರೈಯಮ್ಸ್ ಮುಂತಾದವು ಅತ್ಯಾಧುನಿಕ ಪ್ಯಾಕಿಂಗ್‌ನಲ್ಲಿ ರಾರಾಜಿಸುತ್ತಿವೆ.

ಇವೆಲ್ಲ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ನಗರಗಳಲ್ಲಿ ತಯಾರಾಗುತ್ತವೆ. ಸಾಗಾಣಿಕೆ ಪ್ಯಾಕೇಜಿಂಗ್, ವಿತರಣೆ, ಮಾರಾಟ ಇವೆಲ್ಲ ಖರ್ಚುಗಳು ಸೇರಿ ಅದರ ಮೂಲ ದ್ರವ್ಯಗಳಾದ ಆಹಾರ ಧಾನ್ಯ ಮತ್ತಿತರ ವಸ್ತು ಎನಿಸಿದ ಕೃಷಿ ಉತ್ಪನ್ನ ಬಾಬಿಗೆ ಸಲ್ಲುವುದು ಬಹಳ ಕಡಿಮೆ. ಸಿದ್ಧ ವಸ್ತು ಬೆಲೆ ಒಂದು ರೂಪಾಯಿ ಇದ್ದರೆ ರೈತನಿಗೆ ದಕ್ಕುವುದು ಅದರಲ್ಲಿ ಹತ್ತಿಪ್ಪತ್ತು ಪೈಸೆ ಆದರೆ ಅದೇ ಹೆಚ್ಚು.

ಇಂಥ ಸನ್ನಿವೇಶದಲ್ಲಿ ಗ್ರಾಮಗಳಲ್ಲೇ ಇರುವ ರೈತರಿಗೆ ಏನು ಉಪಕಾರ ಆದಂತಾಯಿತು? ಬಹಳವೇನಿಲ್ಲ. ಇದು ತಪ್ಪಿ ಆಹಾರ ಧಾನ್ಯ ಬೆಳೆಯುವ ರೈತನಿಗೆ ಪ್ರಯೋಜನ ಆಗಬೇಕಾದರೆ ಉದ್ಯಮವು ಹಳ್ಳಿಗೇ ಹೋಗಬೇಕು. ಆಗ ಹಳ್ಳಿಯವರಿಗೆ ಲಾಭವಾಗುತ್ತದೆ. ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ.

ಕಳೆದ ವರ್ಷ ಕೇಂದ್ರದ ನೆರವಿನಿಂದ ರಾಜ್ಯಗಳು ಹಳ್ಳಿಗಳ ಮಧ್ಯೆ ಆಹಾರ ಉದ್ಯಮ ನೆಲೆಗೊಳಿಸುವ ಕಾರ್ಯಕರಮ ಜಾರಿ ಮಾಡುತ್ತವೆ ಎಂಬ ಅಂಶ ಪ್ರಕಟವಾದಾಗ ಈ ಹಿನ್ನೆಲೆಯಲ್ಲಿ ಭಾರೀ ಕುತೂಹಲ ಮೂಡಿತ್ತು.

ಕೇಂದ್ರವು ರಾಜ್ಯಕ್ಕೆ ಆರು ಆಹಾರ ಸಂಸ್ಕರಣಾ ಪಾರ್ಕ್‌ಗಳನ್ನು ಮಂಜೂರು ಮಾಡಿತು. ರಾಜ್ಯವು ಆಯ್ಕೆ ಮಾಡಿದ್ದು ಮಾಲೂರು, ಜೇವರ್ಗಿ, ಬಾಗಲಕೋಟೆ, ಮದ್ದೂರು, ಬೆಳಗಾವಿ ಹಾಗೂ ಚಿತ್ರದುರ್ಗ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹ ಭಾಗಿತ್ವದ ಕಾರ್ಯಕ್ರಮ. ಕೇಂದ್ರ ಸರ್ಕಾರ ಈ ಪಾರ್ಕ್‌ಗಳ ಸ್ಥಾಪನೆಗಾಗಿ ತಲಾ ನಾಲ್ಕು ಕೋಟಿ ರೂಪಾಯಿ ಕೊಡುತ್ತದೆ. ರಾಜ್ಯ ಸರ್ಕಾರ ತಾನು ಸಹಾ ನಾಲ್ಕು ಕೋಟಿ ರೂಪಾಯಿನಂತೆ ಹಣ ಪೂರೈಸುತ್ತದೆ. ಜೊತೆಗೆ ಹಣಕಾಸು ಸಂಸ್ಥೆಗಳಿಂದ ತಲಾ ಇನ್ನು ಎರಡು ಕೋಟಿ ರೂಪಾಯಿನಂತೆ ಹಣ ಸಂಗ್ರಹಿಸುತ್ತದೆ. ಮೂಲ ಸೌಲಭ್ಯಗಳನ್ನು ವೃದ್ಧಿಪಡಿಸುತ್ತದೆ. ಬಹಳ ಚಲೋ ಎನಿಸುವಂಥ ಕಾರ್ಯಕ್ರಮವೇ ಸರಿ.

ಸಚಿವರು ಇದನ್ನು ಪ್ರಕಟಿಸಿದಾಗ ಗ್ರಾಮಾಭಿವೃದ್ಧಿಯಲ್ಲಿ ಆಸಕ್ತರಾದವರೆಲ್ಲರ ಬಾಯಲ್ಲಿ ನೀರೂರಿತು. ಇಂಥದೇ ಯೋಜನೆಯೊಂದರಲ್ಲಿ ಆಂದ್ರ ಪ್ರದೇಶ ದಾಪುಗಾಲು ಹಾಕಿ ಮುಂದುವರೆದಿದ್ದರಿಂದ ೨೦೦ ವಿದೇಶಿ ಮೂಲದ ಸಣ್ಣ ಉದ್ಯಮಿಗಳು ಧಾವಿಸಿ ಬರುವಂತಾಯಿತು. ಅಂಥದೇ ಯೋಜನೆಗೆ ದೊಡ್ಡ ಬಳ್ಳಾಪುರ ಪಾತ್ರವಾಯಿತಾದರೂ ಇನ್ನೂ ಕಾಗದದ ಮೇಲೇ ಉಳಿದಿದೆ. ಈಗ ಆಹಾರ ಸಂಸ್ಕರಣೆ ಕ್ಷೇತ್ರದ ಪಾರ್ಕುಗಳ ವಿಷಯದಲ್ಲೂ ಹೀಗೆಯೇ ಆಗುತ್ತದೆ.

೨೦೦೩ ರ ಮೇ ತಿಂಗಳಲ್ಲಿ ಪ್ರಕಟಿಸಿದ್ದ ಪ್ರಕಾರ ಆರು ಆಯ್ದ ತಾಣಗಳ ಪೈಕಿ ಒಂದಾದ ಜೇವರ್ಗಿಯಲ್ಲಿ ಸ್ಥಾಪಿಸಲಿರುವ ಆಹಾರ ತಂತ್ರಜ್ಞಾನ ಪಾರ್ಕ್‌ನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳೂ ಸೇರಿದಂತೆ ಉದ್ಯಮ ಪ್ರಮುಖರು ೭೫ ಘಟಕಗಳನ್ನು ಇದರಲ್ಲಿ ಸ್ಥಾಪಿಸುತ್ತಾರೆ. ಅವರು ಹೂಡುವ ಬಂಡವಾಳ ಒಂದು ನೂರು ಕೋಟಿ ರೂಪಾಯಿ ಆಗಬಹುದು. ಅದರಿಂದ ೩೦೦೦ ಜನ ಗ್ರಾಮಸ್ಥರಿಗೆ ಉದ್ಯೊಗ ಸಿಗುವಂತಾಗುತ್ತದೆ.

ಉದ್ಯಮಗಳಿಗೆ ಘಟಕವು ಕಾರ್ಯಾರಂಭ ಮಾಡುವಂತೆ ಏರ್ಪಾಟು ಮಾಡಲು ಎರಡು ವರ್ಷ ಕಾಲಾವಕಾಶ ನೀಡಲಾಗುವುದು.

ಈ ಬಗೆಯ ಪಾರ್ಕುಗಳು ವಿಶೇಷತಃ ಹಿಂದುಳಿದ ಜಿಲ್ಲೆಗಳವರಿಗೆ ವರದಾನ. ಏಕೆಂದರೆ ಎಲ್ಲ ಘಟಕಗಳು ಒಂದೊಂದೇ ಶೀತಲ, ಪ್ರಯೋಗಾಲಯ, ವಾಣಿಜ್ಯ ಕೇಂದ್ರಗಳನ್ನು ಹಂಚಿಕೊಳ್ಳುತ್ತವೆ. ಜೋಳ, ತೊಗರಿಯಂಥ ನಿರ್ಲಕ್ಷಿತ ಕೃಷಿ ಹುಟ್ಟುವಳಿಗಳ ಬಗೆಗೆ ಸಂಶೋಧನೆ ಸಹಾ ನಡೆಯುತ್ತದೆ.

ಎಂಥ ಅದ್ಭುತ ಚಿತ್ರಣ. ಆದರೆ ವಿವರಗಳೆಲ್ಲ ಪ್ರಕಟಣೆಗೆ ಬಂದು ಹತ್ತು ತಿಂಗಳಾದುವು. ಪ್ರಗತಿ ಮಾತ್ರ ಹರಾ-ಶಿವಾ! ಇದು ವಾಸ್ತವವಾಗಿ ಮೂಗಿಗೆ ತುಪ್ಪ ಸವರುವ ಕ್ರಿಯೆ.

ಗ್ರಾಮ ಪ್ರದೇಶಗಳ ಕಡೆ ದೃಷ್ಟಿ ಹರಿಸಿದ ಯಾರಿಯೇ ಆದರೂ ಗಾಬರಿ ಆಗುವಂಥ ಸನ್ನಿವೇಶವೇ ಕಾಣಿಸುತ್ತದೆ. ಬತ್ತ, ರಾಗಿ, ಜೋಳ ಮುಂತಾದವನ್ನು ಬೆಳೆದವರು ಸರಕನ್ನು ಹೇಗೋ ಮಾರಿಕೊಂಡು ದಿನ ದೂಡಬಹುದು. ಆದರೆ ಸಕ್ಕರೆ ಸಮೃದ್ಧಿಗೊಂಡು ಮಾರಲಾಗದ ಪರಿಸ್ಥಿತಿ ಬಂದಿತು; ಕಬ್ಬಿಗೆ ಬೆಲೆ ಇಲ್ಲ. ಅಡಿಕೆ ರಫ್ತಾಗುತ್ತಿಲ್ಲ; ಬೆಳೆಗಾರರು ಬವಣೆಯ ಬಾವಿಗೆ ಬೀಳುತ್ತಿದ್ದಾರೆ. ಆಮದು ರೇಷ್ಮೆ ನೂಲು ಬೇಕಾಬಿಟ್ಟಿ ಸಿಗುವಂತಾಗಿದೆ; ರೇಷ್ಮೆ ಹುಳು ಸಾಕುವವರಿಗೆ ಕಾಸು ಹುಟ್ಟುವುದಿಲ್ಲ. ಹತ್ತಿ ಬೆಳೆದರೆ ಬೇಡಿಕೆ ಕಡಿಮೆ; ಏಕೆಂದರೆ ಜವಳಿ ಉದ್ಯಮ ಸಂಕಷ್ಟದಲ್ಲಿದೆ. ಮುಸುಕಿನ ಜೋಳವನ್ನು ಎಷ್ಟು ಬೇಕಾದರೂ ಸುಲಭವಾಗಿ ಬೆಳೆಯಬಹುದು. ತಿನ್ನಲು ಮಾತ್ರ ಸ್ವಲ್ಪ ಬಳಕೆಯಾಗಬಹುದೇ ಹೊರತು ಕೈಗಾರಿಕಾ ಬೇಡಿಕೆ ಇಲ್ಲ. ಸೂರ್ಯಕಾಂತಿ, ಶೇಂಗಾ ಬೆಲೆ ತೆಗೆದರೆ ಖಾದ್ಯ ತೈಲದ ಬೆಲೆ ಲಾಭದಾಯಕವಾಗಿ ಪರಿಣಮಿಸುವುದಿಲ್ಲ; ಏಕೆಂದರೆ ಭಾರತದ ಖಾದ್ಯ ತೈಲ ವ್ಯಾಪಾರವನ್ನು ನಿಯಂತ್ರಿಸುತ್ತಿರುವುದು ಆಮದು ಎಣ್ಣೆ ಸರಕೇ!

ಅಂದರೆ ಒಂದು ಅಂಶ ಸ್ಪಷ್ಟ: ವಾಣಿಜ್ಯ ಬೆಳೆಗಳನ್ನು ನೆಚ್ಚಿಕೊಂಡವರಿಗೆಲ್ಲ ಮೋಸ ಆಗಿದೆ. ಕುಕ್ಕುಟ ಉದ್ಯಮ, ಹೈನುಗಾರಿಕೆ, ಪಶು ಸಂಗೋಪನೆ ಎಷ್ಟೇ ವೃದ್ಧಿಗೊಂಡರೂ ಭಾರತ ಮುಖ್ಯವಾಗಿ ಸಸ್ಯಾಹಾರಿ ದೇಶವೇ ಸರಿ. ಕೋಳಿ ರೋಗದ ಭೀತಿಯು ಕುಕ್ಕುಟ ಉದ್ಯಮವನ್ನೂ ಈಗ ಕಂಗಾಲಾಗಿಸಿದೆ. ಇದರಿಂದ ಸಸ್ಯಾಹಾರಕ್ಕೆ ಬೇಡಿಕೆ ಸ್ವಲ್ಪ ಹೆಚ್ಚಾದಂತೆಯೇ ಸರಿ. ಬೇಳೆ ಕಾಳುಗಳಿಗೆ ಬೆಲೆ ಬರಬೇಕು. ಆದರೆ ಆಮದು ಸರಕೇ ಅಗ್ಗವಾಗಿ ಪರಿಣಮಿಸಿದೆ.

ಹೀಗೆ ಸುಗಮ, ಸುಲಭ ಆಮದು ವಾಸ್ತವ ಎನಿಸಿಕೊಂಡ ಮೇಲೆ ಕೃಷಿ ರಂಗದಲ್ಲಿ ಬಿಕ್ಕಟ್ಟು ಹೊರತು ಬೇರೇನಿಲ್ಲ. ಮುಕ್ತ ಮಾರುಕಟ್ಟೆ ಹಾಗೂ ಮಾರುಕಟ್ಟೆ ಪ್ರಧಾನ ಆರ್ಥಿಕತೆಗಳಿಗೆ ದಾರಿಯಾದ ಮೇಲೆ ರೈತರ ಮೇಲೆ ಪ್ರಹಾರವೇ ಆಗುತ್ತಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮೂಗಿಗೆ ತುಪ್ಪ ಸವರುವುದರಲ್ಲೇ ಸತತವಾಗಿ ನಿರತವಾಗಿವೆ.

ಆಮದಿನ ಕತೆ ಹೀಗಿದ್ದರೆ ರಫ್ತು ಆಧರಿಸಿದ ಲಾಭಕರ ಕ್ರಮಗಳಾದರೂ ಕಾಣಿಸಬಹುದೆ? ಇಲ್ಲವೇ ಇಲ್ಲ. ಕೃಷಿ ಉತ್ಪನ್ನಗಳ ರಫ್ತು ಸಾಧ್ಯವೇ ಆಗುತ್ತಿಲ್ಲ. ಪರಿತರಕ್ಕೆ ಲಾಯಕ್ಕಾದ ಧಾನ್ಯ ಖರ್ಚಾಗುತ್ತಿಲ್ಲ ಎನ್ನುವಂಥ ಸ್ಥಿತಿಯಲ್ಲಿ, ಆ ಧಾನ್ಯವನ್ನು ರಫ್ತು ಮಾಡಲೂ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮಲ್ಲಿ ದಾಸ್ತಾನಿರುವುದು ಕಳಪೆ ಗೋಧಿ. ಸದ್ದಾಂ ಹುಸೇನ್ ತನ್ನ ಆಡಳಿತ ಕಾಲದಲ್ಲಿ ಪೆಟ್ರೋಲಿಯಂ ತೈಲ ಮಾರಲು ಭಾರತದಿಂದ ಇಂಥ ಗೋಧಿಯನ್ನು ಕೊಳ್ಳುತ್ತಿದ್ದ ಮಾತ್ರ!

ಈ ಪರಿಸ್ಥಿತಿ ಏಕೆ ಗೊತ್ತೆ? ಭಾರತದಲ್ಲಿ ಅಗ್ಗವಾಗಿ ಕೃಷಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ನಮಗೆ ಬೇಕಾದ ಧಾನ್ಯವನ್ನು ಸ್ವಂತಕ್ಕೆ ಬಳಸುವುದು ಸಹಾ ದುಬಾರಿ ಎನಿಸುತ್ತಿದೆ. ಬೇರೆ ಕೃಷಿ ಉತ್ಪನ್ನ ರಫ್ತು ರಾಷ್ಟ್ರಗಳು ಅಗ್ಗಕ್ಕೆ ಸರಕನ್ನು ಭಾರತಕ್ಕೆ ಪೂರೈಸಬಲ್ಲವು!

ಅಮೆರಿಕದ ಕೃಷಿ ಇಲಾಖೆ ಪರಿಣತರೊಬ್ಬರು ಮುಂಬೈನಲ್ಲಿ ಭಾಷಣ ಮಾಡುತ್ತಾ ಮಲೇಷ್ಯ, ಥೈಲೆಂಡ್‌ಗಳನ್ನು ಹುಲಿಗೂ, ಚೀನಾವನ್ನು ಹೊಗೆ, ಬೆಂಕಿ ಉಗುಳುವ ಡ್ರೇಗನ್‌ಗೂ; ಭಾರತವನ್ನು ನಿಧಾನ ನಡಿಗೆಯ ಆನೆಗೂ ಹೋಲಿಸಿದ್ದರು. ಆಗ ಆ ಆನೆ ಕುಂಟುಕಾಲಿನ ಪ್ರಾಣಿ ಆಗಿದೆ?

ಇದು ಚಮತ್ಕಾರದ ಹೇಳಿಕೆ ಅಲ್ಲ ವಾಸ್ತವ ಚಿತ್ರಣ.

ಭಾರತದಲ್ಲಿ, ನೀರು, ವಿದ್ಯುತ್ತು, ಗೊಬ್ಬರ ಮುಂತಾದುವನ್ನೆಲ್ಲ ಸಬ್ಸಿಡಿ ಒತ್ತಾಸೆ ಸಹಿತ ಕೊಡುವುದುಂಟು. ಬೇರೆ ರಾಷ್ಟ್ರಗಳು ಒತ್ತಾಯಿಸುತ್ತಿರುವಂತೆ ಸಬ್ಸಿಡಿಗಳನ್ನು ನಿಲ್ಲಿಸಿದರೆ ಭಾರತದ ಕೃಷಿ ಉತ್ಪನ್ನ ಇನ್ನೂ ದುಬಾರಿ ಆಗುತ್ತದೆ. ದೇಶವೆಂಬ ಆನೆ ಕುಂಟುವುದು ಹೆಚ್ಚಾಗುತ್ತದೆ.

ಅಮೆರಿಕವೇ ಮುಂತಾದ ರಾಷ್ಟ್ರಗಳು ತಮ್ಮ ರೈತರಿಗೆ ಕೊಡುವ ಸಬ್ಸಿಡಿಯನ್ನು ಕೊಡುತ್ತಲೇ ಇರುತ್ತಾರೆ. ಸಬ್ಸಿಡಿ ವಿರುದ್ಧ ಭಾರತರಂಥ ರಾಷ್ಟ್ರಗಳ ಮೇಲೆ ಒತ್ತಡ ತರುತ್ತಾರೆ ಎಂದು ದೂರುವುದುಂಟು.

ಮುಂದುವರೆದ ರಾಷ್ಟ್ರಗಳು ೩೦ ಕೋಟಿ ಡಾಲರ್‌ಗಳಷ್ಟು ಹಣವನ್ನು ನಾನಾ ರೂಪದ ಸಬ್ಸಿಡಿಗಳಿಗಾಗಿ ಖರ್ಚು ಮಾಡುತ್ತಾರೆ ಎಂಬುದು ಒಂದು ಅಂದಾಜು. ಆದರೆ ಆ ಹಣದ ಶೇ. ೩೦ ರಷ್ಟು ಭಾಗವನ್ನು ತರಬೇತಿ, ಸಂಶೋಧನೆ, ಅಭಿವೃದ್ಧಿ, ಮಾರಾಟ, ಶಿಕ್ಷಣ, ಗುಣವೃದ್ಧಿ, ಮೂಲಸೌಲಭ್ಯ ಸೃಷ್ಟಿ ಹಾಗೂ ಬಗೆಯ ಇನ್ನಿತರ ಬಾಬುಗಳಲ್ಲಿ ತೊಡಗಿಸುತ್ತಾರೆ. ಸಬ್ಸಿಡಿ ರೂಪದಲ್ಲಿ ಒದಗಿಸಿದ ಹಣವು ರೈತನ ಉತ್ಪಾದಕತೆಯನ್ನು ಹೆಚ್ಚಿಸುವುದಕ್ಕೆ ಸಹಕಾರಿ ಆಗುವಂತೆ ನೋಡಿಕೊಳ್ಳುವುದು ಅಲ್ಲಿನ ವಿಶೇಷ. ಈ ಬಗೆಯ ಬಾಬುಗಳಿಗೆ ಭಾರತದಲ್ಲಿ ಹಣ ಖರ್ಚು ಮಾಡಿದರೆ ಅದನ್ನು ಚರಂಡಿಗೆ ಎಸೆದಂತೆ ಆಗುವುದೇ ಹೊರತು ಉತ್ಪಾದಕತೆಗೆ ನೆರವಾಗುವುದಿಲ್ಲ. ಯಾವ ಕಾರಣಕ್ಕೆ ಹಣ ನೀಡಿದರೂ ಮಧ್ಯದಲ್ಲೇ ಮಾಯವಾಗುವ ವ್ಯವಸ್ಥೆ ಇರುವ ದೇಶದಲ್ಲಿ ಈ ಬಗೆಯ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವೇ?

ವಾಣಿಜ್ಯ ಬೆಳೆಗಳಂತೆ ಆಹಾರಕ್ಕೆ ಅನಿವಾರ್ಯವಾಗಿ ಬಳಸುವ ಧಾನ್ಯಗಳನ್ನು ಸಹಾ ವಿಪರೀತ ರಸಗೊಬ್ಬರ ಹಾಕಿ ಬೆಳೆಯುವ ಹಸಿರುಕ್ರಾಂತಿ ವೈಭವ ಈಗ ಮುಗಿದಿದೆ. ಈ ಕ್ರಾಂತಿಗೆ ಹೆಸರಾದ ಪಂಜಾಬ್, ಹರಿಯಾಣಗಳಲ್ಲಿ ವಿಪರೀತ ರಸಗೊಬ್ಬರ ಕಾರಣ ಭೂಮಿ ಬಂಜರಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ವಿಪರೀತ ಹೈಬ್ರಿಡ್ ಹತ್ತಿ ಬೆಳೆದು ಬೆಳೆದು ಭೂಮಿ ಬಂಜರಾಯಿತು. ಈಗ ಅಲ್ಲಿ ಮೆಣಸಿನಕಾಯಿ, ಮುಸುಕಿನ ಜೋಳ ಹೀಗೆ ಏನೇನೋ ಬೆಳೆಯುವ ಪ್ರಯೋಜನಗಳನ್ನು ರೈತರು ಮಾಡುತ್ತಿದ್ದಾರೆ.

ಬತ್ತದ ಸುಧಾರಿತ ತಳಿಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಭಾರತದಲ್ಲಿ ದಶಕಗಳ ಪರ್ಯಂತ ನಡೆದುವು. ಎಷ್ಟೋ ಮಂದಿ ಸ್ವಾಮಿನಾಥನ್‌ಗಳು ಆಗಿಹೋಗದರು. ಆದರೆ ಅಗ್ಗವಾಗಿ ಬತ್ತ ಬೆಳೆಯುವುದಕ್ಕೆ ಇವತ್ತೂ ಆಗುತ್ತಿಲ್ಲ. ಬತ್ತದ ಸಂಶೋಧನಾ ಕ್ಷೇತ್ರದಲ್ಲಿ ನಮಗಿಂತ ನಿಧಾನವಾಗಿ ಅಭಿವೃದ್ಧಿ ಕಂಡ ಚೀನಾ ಮತ್ತು ಬ್ರೆಜಿಲ್‌ಗಳು ಸುಧಾರಿತ ತಳಿಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಭಾರತವನ್ನು ಹಿಂದೆ ಹಾಕಿವೆ ಎನ್ನುವ ವರದಿಗಳು ಬಂದಿವೆ. ಇನ್ನು ಯಾವ ಆಶೆ ಉಳಿಯುವುದಕ್ಕೆ ಸಾಕು?

ಗ್ರಾಮಗಳಿಗೆ, ಗ್ರಾಮಗಳ ಹತ್ತಿರಕ್ಕೆ ಉದ್ಯಮ ಘಟಕಗಳು; ಮುಖ್ಯವಾಗಿ ಆಹಾರ ಸಂಸ್ಕರಣಾ ಘಟಕಗಳು; ಬಂದರೆ ಗ್ರಾಮ ಜನಸಮುದಾಯದ ಪಾಲಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ ಎನ್ನುವುದು ನಿಜ. ಅಲ್ಲಿಯೂ ಅಪಾಯ ಇಲ್ಲದಿಲ್ಲ. ಬಹು ರಾಷ್ಟ್ರೀಯ ಕಂಪೆನಿಗಳವರು ಮತ್ತು ಇತರ ಉದ್ಯಮಿಗಳು ನಿಧಾನವಾಗಿ ಯಾದರೂ ಕಣ್ಣು ಹಾಕುವುದು ರೈತರ ಕೃಷಿ ಭೂಮಿ ಮೇಲೇರಿಯೇ ಸರಿ. ಕೃಷಿ ಕಾರ್ಮಿಕರು ಮತ್ತು ಅತಿ ಸಣ್ಣ ರೈತರು ಕೂಲಿ ಕಾರ್ಮಿಕರಾಗುತ್ತಾರೆ. ದೊಡ್ಡ ರೈತರು ಉದ್ಯಮ ರಂಗದ ಅಜ್ಞಾನುವರ್ತಿಗಳಾಗುತ್ತಾರೆ. ಇದು ವಾಸ್ತವ ಭಯ.

ಕೋಲಾರ ಜಿಲ್ಲೆ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ಮಾವಿನ ಉತ್ಪಾದನೆ ಬಹಳವಿದೆ. ಬೆಳೆಯನ್ನು ಮಾವಿನ ಪೇಯಗಳ ಹಾಗೂ ಮಾವಿನ ರಸದ ವ್ಯಾಪಾರಗಾರರು ಫಸಲು ಪೂರ್ತಿ ಬರುವ ಮುನ್ನವೇ ಸಗಟಾಗಿ ಖರೀದಿಸಿ ಬಿಡುತ್ತಾರೆ. ಹಣ್ಣು ತಿನ್ನಲು ಬಯಸುವ ಬೆಂಗಳೂರು ಸುತ್ತಮುತ್ತಲ ಬಳಕೆದಾರರಿಗೆ ಮಾವಿನ ಹಣ್ಣು ಸಿಗುವುದು ಹಣ್ಣಿನ ಕಾಲದ ಕೊನೆ ಭಾಗದಲ್ಲಿ ಮಾತ್ರ. ತಪ್ಪಿದರೆ ಅನ್ಯ ರಾಜ್ಯಗಳ ಹೆಚ್ಚುವರಿ ಸರಕು ರಾಜ್ಯವನ್ನು ಪ್ರವೇಶಿಸಿದಾಗ ಮಾತ್ರ!

ಇಂಥ ವಿದ್ಯಮಾನಗಳು ಹಲವಾರು ಕೃಷಿ ಉತ್ಪನ್ನಗಳ ವಿಷಯದಲ್ಲಿ ಕಾಣಿಸಿಕೊಳ್ಳುತ್ತವೆ.

ಸಾರಾಂಶವಿಷ್ಟೆ; ಕೃಷಿ ರಂಗದಲ್ಲಿ ವಿಪ್ಲವ ಕಾದಿದೆ.

ಸದ್ಯ ಭಾರತದ ಜನಸಂಖ್ಯೆಯ ಅರ್ಧ ಭಾಗವು ೨೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಂದ ಆದುದು. ಇನ್ನೊಂದು ಒಂದೂವರೆ ದಶಕದ ನಂತರ ಹಳೆಯದನ್ನೆಲ್ಲ ಕಿತ್ತು ಬಿಸುಡಬೇಕೆನ್ನುವವರೇ ದೇಶ ತುಂಬಾ ತುಂಬಿರುತ್ತಾರೆ. ಅವರಿಗಾಗಿ ಭೂಮಿಕೆ ಸಿದ್ಧಪಡಿಸುವ ಕಾರ್ಯ ಈಗಿನಿಂತ ಆರಂಭವಾಗಬೇಕಿದೆ.

೧೮.೦೨.೨೦೦೪