ಕೇಂದ್ರ ಸರ್ಕಾರವು ತೊಗರಿ ಮಂಡಲಿ ರಚಿಸುವ ದಿಕ್ಕಿನಲ್ಲಿ ಉತ್ಸುಕತೆ ವಹಿಸಿಲ್ಲ ಎನ್ನುವ ಕಾರಣ ಅಂಥ ಮಂಡಲಿಯೊಂದನ್ನು ರಚಿಸಲು ರಾಜ್ಯ ಸರ್ಕಾರವೇ ಮುಂದಾಗಲಿದೆ. ಇದು ಸಚಿವರ ಅಂಬೋಣ.

ಉದ್ದೇಶ ಒಳ್ಳೆಯದೇ. ರೈತರ ಕಡೆಯಿಂದ ಸತತವಾಗಿ ಒತ್ತಾಯ ಬರುತ್ತಿರುವ ಅವರ ಪಾಲಿಗೆ ಪರಿಹಾರೋಪಾಯ ಒದಗಿಸುವ ತಾನಾಗಿ ರಾಜ್ಯ ಸರ್ಕಾರ ಮುಂದಾಗುವುದು ಅನಿವಾರ್ಯ. ಅದರಲ್ಲಿ ಎರಡು ಮಾಡಿಲ್ಲ. ಆದರೆ ರಾಜ್ಯ ಸರ್ಕಾರವೊಂದು ಏಕಮೇವ ಒಂದು ದಿನಸಿ ಮಂಡಲಿಯೊಂದನ್ನು ರಚಿಸಲು ಸಾಧ್ಯವೇ? ಕಾರ್ಯ ಸಾಧುವೆ?

ಸದ್ಯದ ಪರಿಸ್ಥಿತಿಯಲ್ಲಿ ಬೇಳೆಕಾಳು ಬೆಳೆ ಅಭಿವೃದ್ಧಿ ಅತ್ಯಗತ್ಯ. ಸಸ್ಯಾಹಾರಿ ರಾಷ್ಟ್ರದಲ್ಲಿ ಮಾಂಸಾಹಾರವು ಹೆಚ್ಚು ಹೆಚ್ಚು ಬಳಕೆಗೆ ಬರುವ ತನಕ ಆಹಾರಾಂಶಗಳ ಅಗತ್ಯ ಪೂರೈಸಲು ಬೇಳೆಕಾಳು ಹೊಂದಿಕೊಳ್ಳುವುದು ಅನಿವಾರ್ಯ. ನಮ್ಮಲ್ಲಿ ಫಸಲು ಕಡಿಮೆಯಾದರೆ ಆಮದು ಮಾಡಿಕೊಳ್ಳಲು ಅವಕಾಶಗಳು ಸೀಮಿತವೇ ಸರಿ. ಏಕೆಂದರೆ ಬೇಳೆಕಾಳನ್ನು ವ್ಯಾಪಕವಾಗಿ ಬೆಳೆಯುವ ದೇಶಗಳ ಸಂಖ್ಯೆಯೇ ಕಡಿಮೆ. ಕೃಷಿ ಉತ್ಪನ್ನಗಳನ್ನು ಜಾನುವಾರುಗಳಿಗಾಗಿಯೇ ಬೆಳೆದು, ಅವನ್ನು ಮೇವನ್ನಾಗಿ ಬಳಸಿಕೊಂಡು, ಮಾಂಸ ಉತ್ಪಾದನೆ ಮಾಡುವುದೇ ವಿಶ್ವಾದ್ಯಂತ ರಾಷ್ಟ್ರಗಳ ವಾಡಿಕೆ. ಆ ದೇಶಗಳಲ್ಲಿ ಸಂಪೂರ್ಣ ಸಸ್ಯಾಹಾರವನ್ನು ಜನರು ಅವಲಂಬಿಸುವುದು ಅಪರೂಪ. ಬೇಳೆಕಾಳು ಬೆಳೆಗೆ ಅಲ್ಲೆಲ್ಲ ಪ್ರಾಶಸ್ತ್ಯ ಸಿಗುವುದಿಲ್ಲ. ಹೀಗಾಗಿ ರಫ್ತು ಮಾಡುವಷ್ಟು ಬೇಳೆಕಾಳನ್ನು ಬೆಳೆಯುವುದಿಲ್ಲ. ಸಸ್ಯಾಹಾರ ಪ್ರಧಾನ ರಾಷ್ಟ್ರಗಳು ಬೇಳೆಕಾಳು ಬೆಳೆ ಸಂಬಂಧ ಸ್ವಾವಲಂಬನೆ ಸಾಧಿಸುವುದು ಅನಿವಾರ್ಯವಾಗುತ್ತದೆ.

ಕರ್ನಾಟಕದ ಮಟ್ಟಿಗೆ ಅನುಭವಕ್ಕೆ ಬಂದಿರುವ ಇದುವರೆಗಿನ ಮಂಡಲಿಗಳೆಂದರೆ ರೇಷ್ಮೆ, ಕಾಫಿ, ತಂಬಾಕು, ತೆಂಗು ಮತ್ತು ಸಂಬಾರ ಕುರಿತ ಮಂಡಲಿಗಳು. ಸಮಸ್ಯೆ ಎದುರಾದಾಗಲೆಲ್ಲ ಮೊದಲು ಮೊರೆ ಇಡುವವರು ಬೆಳೆಗಾರರು. ಮಂಡಲಿಯು ತಮ್ಮ ನೆರವಿಗೆ ಬರಬೇಕೆಂದು ಆಗೆಲ್ಲ ಬೆಳೆಗಾರರು ನಿರೀಕ್ಷೆ ಮಾಡುತ್ತಾರೆ. ಹೋರಾಟ ಮಾಡುತ್ತಾರೆ. ಜನ ಸಾಮಾನ್ಯರಿಗೆ ಮಂಡಲಿಗಳೆಂದರೆ ಈ ಬೆಳೆಗಾರರ ಸಲುವಾಗಿ ರಚನೆ ಆಗಿದೆ ಎಂಬ ಭಾವನೆಯೇ ಅಧಿಕ.

ವಾಸ್ತವವಾಗಿ ಹಾಗಲ್ಲ. ಮಂಡಲಿ ಎಂದರೆ ಉದ್ಯಮಕ್ಕೆ ಸೇರಿದ ಸಮಸ್ತ ಹಿತಗಳನ್ನೂ ಒಟ್ಟು ಗೂಡಿಸಿದ ವ್ಯವಸ್ಥೆ. ಕೃಷಿ ಹುಟ್ಟುವಳಿ, ಅದರ ಸಂಸ್ಕರಣೆ, ಸಂಸ್ಕರಿತ ಉದ್ಯಮದ ಮಾರಾಟ, ಮಾರಾಟ ಮಾತ್ರವಲ್ಲದೆ ರಫ್ತು ಜೊತೆಗೆ ಸಂಶೋಧನೆ ಹೀಗೆ ಸಮಸ್ತ ಚಟುವಟಿಕೆಯನ್ನು ಒಳಗೊಂಡ ಅಭಿವೃದ್ಧಿಯು ಮಂಡಲಿಯ ಕಾರ್ಯವ್ಯಾಪ್ತಿ. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೆಲವೊಂದು ಹಿತಗಳು ಮೇಲುಗೈಯಾಗುತ್ತವೆ. ಇನ್ನು ಕೆಲವು ಹಾಗೆ ಆಗುವುದಿಲ್ಲ. ಎಲ್ಲ ಮಂಡಲಿಗಳ ಕಾರ್ಯ ವೈಖರಿ ಒಂದೇ ಆಗಿರುವುದಿಲ್ಲ. ಆದರೆ ಎಲ್ಲವೂ ಸ್ವಾಯತ್ತ ಸಂಸ್ಥೆಗಳೇ. ಎಲ್ಲಕ್ಕೂ ಸರ್ಕಾರದ ಒತ್ತಾಸೆಯ ಭರವಸೆ.

ಮಂಡಲಿಯ ಕಾರ್ಯವ್ಯಾಪ್ತಿ ಸಾಮಾನ್ಯವಾಗಿ ಒಂದು ರಾಜ್ಯಕ್ಕೆ ಸೀಮಿತವಾಗಿರುವುದಿಲ್ಲ. ಹಲವು ರಾಜ್ಯದಲ್ಲಿ ಹರಡಿಕೊಂಡಿರುತ್ತದೆ. ಪ್ರತಿ ಮಂಡಲಿಯಲ್ಲೂ ಹಲವು ರಾಜ್ಯಗಳ ವಿವಿಧ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಜನ ಇರುತ್ತಾರೆ. ಸಾಮಾನ್ಯವಾಗಿ ಹುಟ್ಟುವಳಿಯಲ್ಲಿ ಪ್ರಬಲರಾಗುತ್ತಾರೆ. ಹಾಗೆ ಆಗದೆಯೂ ಇರುವುದುಂಟು.

ಕಾಫಿ ಮಂಡಲಿಯು ಮುಂವೆ ಸಂಗ್ರಹ ಮತ್ತು ಮಾರಾಟಕ್ಕೆ ಮಾತ್ರ ಹೆಸರಾಗಿತ್ತು. ರೇಷ್ಮೆ ಮಂಡಲಿಯು ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ಕೊಡುತ್ತದೆ. ಸಂಬಾರ ಮಂಡಲಿಯು ಹಲವು ಸಂಬಾರ ಬೆಳೆಗಳ ಉಸ್ತುವಾರಿ ನೋಡಿಕೊಳ್ಳುತ್ತಾ ಬೆಳೆ ಅಭಿವೃದ್ಧಿ ಮತ್ತು ಬೆಲೆ ನಿಗದಿಗೆ ಮಹತ್ವ ಕೊಡುತ್ತಿದೆ. ತಂಬಾಕು ಮಂಡಲಿಯು ಬೆಳೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದಕ್ಕೆ ಹೆಸರುವಾಸಿ. ಯಾವುದೇ ಮಂಡಲಿ ಸ್ವರೂಪ ಬದಲಾಗುತ್ತಾ ಹೋಗಬಹುದು ಕೂಡಾ. ಇತ್ತೀಚಿನ ಉದಾಹರಣೆ ಎಂದರೆ ಕಾಫಿ ಮಂಡಲಿಯದು.

ಕಾಫಿ ಮಂಡಲಿಯ ಪೂಲ್ ಸಂಗ್ರಹ ವ್ಯವಸ್ಥೆ ಪ್ರಖ್ಯಾತವಾಗಿತ್ತು. ಬೆಳೆಗಾರರೆಲ್ಲ ಕಡ್ಡಾಯವಾಗಿ ಬೆಳೆದಷ್ಟೂ ಕಾಫಿಯನ್ನು ಕದ್ದು ಮುಚ್ಚಿ ಮಾಡದೆ ಪೂರ್ತಿಯಾಗಿ ಮಂಡಲಿಗೆ ಪೂರೈಸಬೇಕಿತ್ತು. ಬೆಟ್ಟ ಪ್ರದೇಶದ ಪ್ಲಾಂಟರುಗಳು ಮಾತ್ರ ಕಾಫಿಯನ್ನು ಬೆಳೆಯುತ್ತಿದ್ದಷ್ಟು ಕಾಲ ಅವರು ಕಾಫಿ ಮಂಡಲಿಯ ಅಂಕೆಯಲ್ಲಿದ್ದರು. ಎಲ್ಲವೂ ಚೆನ್ನಾಗಿ ನಡೆದಿತ್ತು. ಮಿಕ್ಕ ಹಿತಾಸಕ್ತಿಗಳದು ಹೇಗೋ ಹಾಗೆ ಪ್ಲಾಂಟರುಗಳ ಲಾಬಿ ಸಹಾ ಮಂಡಲಿಯ ಕಾರ್ಯ ವ್ಯವಸ್ಥೆಯೊಳಗೆ ಪ್ರಬಲವಾಗಿ ಕಾರ್ಯ ನಿರ್ವಹಿಸುತ್ತಿತ್ತು. ವಾಸ್ತವವಾಗಿ ಪ್ಲಾಂಟರುಗಳು ಬ್ರಿಟಿಷರು ಬಿಟ್ಟು ಹೋದ ಬಳುವಳಿಯಾದ ಬೆಳೆ ಭೂಮಿಯ ಒಡೆಯರು ಮತ್ತು ಅವರ ಉತ್ತರಾಧಿಕಾರಿಗಳೇ ಆಗಿದ್ದರು. ಆದರೆ ಕಾಫಿಯನ್ನು ಬಿಟ್ಟ ಪ್ರದೇಶದ ಇಳಿಜಾರು ಭೂಮಿಯಲ್ಲಿ ಮಾತ್ರವಲ್ಲದೆ ಬಯಲು ಭೂಮಿಯಲ್ಲೂ ಬೆಳೆಯಲು ಆರಂಭಿಸಿದ ಮೇಲೆ ಪರಿಸ್ಥಿತಿ ಬದಲಾಯಿತು. ಸಣ್ಣ ಹಿಡುವಳಿಗಳಲ್ಲಿ, ಸಹಸ್ರಾರು ಸಂಖ್ಯೆಯಲ್ಲಿ ಬೆಳೆಗಾರರು ಕಾಫಿಯನ್ನು ಬೆಳೆಯತೊಡಗಿದಂತೆ ಒಂದು ರೀತಿಯಲ್ಲಿದ್ದ ಸಮತೋಲನ ತಪ್ಪಿದಂತಾಯಿತು. ಇದರ ಜೊತೆಗೆ ರಫ್ತು ವಲಯದ ಕಾರಣಗಳಿಂದಾಗಿ ಕುಸಿಯತೊಡಗಿತು. ಕಾಫಿ ಮಂಡಲಿಯನ್ನೇ ನಂಬಿಕೊಂಡಿದ್ದ ಬೆಳೆಗಾರರು ಅಲ್ಲಿಂದ ಮುಂದೆ ಏಕಸ್ವಾಮ್ಯ ಸಂಗ್ರಹ ಪದ್ಧತಿಯೇ ಬೇಡವೆಂದರು. ಕಾಫಿಯು ಮುಕ್ತ ಮಾರಾಟಕ್ಕೆ ಬಂತು. ಹೊಸದರಲ್ಲಿ ಈ ಬದಲಾವಣೆ ಚೆನ್ನಾಗಿಯೇ ಕಾಣಿಸಿತು. ಆದರೆ ಕಾಫಿಯ ಬೆಲೆ ಸತತವಾಗಿ ಕುಸಿಯತೊಡಗಿದಂತೆ ಬೆಲೆ ಸಿಗದಂತೆ ಆಗಿ ಕಣ್ಣು ಕಣ್ಣು ಬಿಡುವಂತಾಯಿತು. ಈಗ ಪೂಲ್ ಸಂಗ್ರಹ ವ್ಯವಸ್ಥೆಯೇ ಚೆನ್ನಾಗಿತ್ತೆಂದು ಭಾವಿಸುವಂತೆ ಆಗಿದೆ ಬೆಳೆಗಾರರಿಗೆ.

ತಂಬಾಕು ಬೆಳೆಗಾರರು ಸಹಾ ತಂಬಾಕು ಮಂಡಲಿಯ ಮೇಲೆ ಹಿಡಿತ ಸಾಧಿಸುತ್ತಾರೆ. ಆದರೆ ಅಲ್ಲಿಯೂ ಬೆಲೆ ಕುಸಿತ ತನ್ನ ಕರಿ ನೆರಳು ಚಾಚಿದೆ. ತಂಬಾಕು ಬೆಳೆ ವಿಷಯ ಬಂದಾಗ ಕರ್ನಾಟಕದ ಪಾಲು ಕಡಿಮೆ. ಆಂಧ್ರದ ಜನರದು ಸದಾ ಮೇಲುಗೈ. ಕರ್ನಾಟಕದ ಕಾಫಿ ಜಮೀನು ಮತ್ತು ಬೆಳೆಗಾರರ ಸಂಖ್ಯೆ ಕಡಿಮೆ ಇಲ್ಲದಿದ್ದರೂ ಕಾಫಿ ಮಂಡಲಿ ವ್ಯವಹಾರಗಳಲ್ಲಿ ತಮಿಳುನಾಡಿನವರ ಹಿಡಿತ ಬಿಗಿ. ರೇಷ್ಮೆ ವಿಚಾರ ಬಂದಾಗ ಭಾರತದ ಅತಿ ದೊಡ್ಡ ರೇಷ್ಮೆ ರಾಜ್ಯವೆಂದರೆ ಕರ್ನಾಟಕ. ಕಾಫಿಯ ಬೆಳೆ ಹಾಗೆ ರೇಷ್ಮೆಯದು ಒಂದು ಬಗೆಯ ಬೆಳೆಯಲ್ಲ. ರೇಷ್ಮೆಗೂಡು, ರೇಷ್ಮೆ ನೂಲು (ಕಚ್ಚಿ), ರೇಷ್ಮೆ ನೂಲು ಹುರಿ ಹೀಗೆ ಬೆಳೆಯು ಹರಡಿಕೊಳ್ಳುವುದರಿಂದ ರಾಜ್ಯ ಸರ್ಕಾರದ ವ್ಯಾಪ್ತಿಯ ಚಟುವಟಿಕೆಯೇ ಅಧಿಕ. ಆದ್ದರಿಂದ ಕೇಂದ್ರ ರೇಷ್ಮೆ ಮಂಡಲಿಯು ರೇಷ್ಮೆಬೆಳೆ ಮತ್ತು ಉದ್ಯಮ ಅಭಿವೃದ್ಧಿ ಹಾಗೂ ರೇಷ್ಮೆ ಜವಳಿ ಹಾಗೂ ನೂಲು ರಫ್ತು ಇವುಗಳ ಕಡೆ ಮಾತ್ರ ಗಮನ ಹರಿಸುತ್ತದೆ. ಕರ್ನಾಟಕವು ಹೆಸರಿಗೆ ಅಗ್ರಮಾನ್ಯ ರೇಷ್ಮೆ ರಾಜ್ಯ. ರೇಷ್ಮೆ ಮಂಡಲಿ ವ್ಯವಹಾರಗಳಲ್ಲಿ ಕರ್ನಾಟಕದವರ ಪ್ರಾಬಲ್ಯ ಏನೇನೂ ಇರದು.

ಕಾಫಿ ಮಂಡಲಿಯ ವ್ಯವಹಾರಗಳ ಸಂಬಂಧ ಒಂದು ಅಂಶ ಗಮನಾರ್ಹ. ಅದೆಂದರೆ, ಸಂಸ್ಕರಣ ವಲಯದ ಪ್ರಾಬಲ್ಯ. ಜಮೀನಿನಲ್ಲಿ ಬೆಳೆದ ಕಾಫಿಯನ್ನು ಬಳಕೆ ಮಟ್ಟಕ್ಕೆ ತರುವಲ್ಲಿ ಸಂಸ್ಕರಣೆಯ ಪಾತ್ರ ಅಧಿಕ. ಈ ಕಾರಣದಿಂದ ಸಂಸ್ಕರಣಗಾರರು ಪ್ರಬಲರಾಗುತ್ತಾರೆ. ಕಾಫಿ ಮಂಡಲಿಯಲ್ಲಿ ಏಕಸ್ವಾಮ್ಯ ಸಂಗ್ರಹಣ ಪದ್ಧತಿ ಇದ್ದಾಗ ಕಾಫಿ ಕ್ಯೂರಿಂಗ್‌ವಲಯದವರು ಭಾರೀ ನಿರ್ಣಾಯಕ ಪಾತ್ರ ವಹಿಸಿದ್ದರು. ಅನಂತರವೂ ಅವರ ಪ್ರಭಾವ ಕುಸಿಯಲಿಲ್ಲ. ರಫ್ತುಗಾರರು ಮತ್ತು ಇವರು ಕೂಡ ಭಾರೀ ಪ್ರಬಲರಾಗಿ ಪರಿಣಮಿಸುತ್ತಾರೆ.

ವಾಸ್ತವವಾಗಿ ಸಂಸ್ಕರಣೆಯು ಅನಿವಾರ್ಯ ಎನ್ನುವ ಯಾವುದೇ ಉತ್ಪನ್ನದ ಮಟ್ಟಿಗೆ ಹೇಳುವುದಾದರೆ ಇಡೀ ವ್ಯವಸ್ಥೆಯನ್ನು ಸಂಸ್ಕರಣಾಗಾರರು ತಮ್ಮ ಮುಷ್ಟಿಗೆ ತೆಗೆದುಕೊಳ್ಳುತ್ತಾರೆ. ಬಹಳ ಸರಳ ನಿದರ್ಶನ ಎಂದರೆ ಲೆವಿ ಪದ್ಧತಿಯನ್ನೇ ಪೂರ್ತಿಯಾಗಿ ಕೈಗೆ ತೆಗೆದುಕೊಳ್ಳುವ ರೈಸ್‌ಮಿಲ್‌ಗಳವರು.

ತಿಗರಿ ಮಂಡಲಿಯು ಅಸ್ತಿತ್ವಕ್ಕೆ ಬಂದರೆ ಪ್ರಬಲರಾಗುವವರು ಕಾಳನ್ನು ಒಡೆದು ಬೇಳೆಯನ್ನು ಮಾಡುವ ಮಿಲ್‌ಗಳವರೇ ಆಗುತ್ತಾರೆ. ಅವರ ಜೊತೆ ವ್ಯಾಪಾರಗಾರರು, ಅಂದರೆ ಕಾಳನ್ನು ಸಂಗ್ರಹಿಸುವ ಹಾಗೂ ಬೇಳೆಯನ್ನು ಮಾರುವ ವಹಿವಾಟುದಾರರು ಸೇರಿ ಕೊಂಡರೆ ಉದ್ದೇಶಿತ ತೊಗರಿ ಮಂಡಲಿಯ ಪಾತ್ರವೇ ಗೌಣವಾಗಿಬಿಡುತ್ತದೆ.

ಇನ್ನು ಉದ್ದೇಶಿತ ಮಂಡಲಿಯ ಕಾರ್ಯವ್ಯಾಪ್ತಿ ಪ್ರಶ್ನೆ. ವಾಸ್ತವವಾಗಿ ಉತ್ತರ ಕರ್ನಾಟಕದ ಗಡಿಭಾಗದ ಕೆಲವು ಜಿಲ್ಲೆಗಳಿಗೆ, ಮುಖ್ಯವಾಗಿ ಕಲ್ಬುರ್ಗಿ ಜಿಲ್ಲೆಗೆ ತೊಗರಿ ಬೆಳೆ ಸೀಮಿತ. ರಾಜ್ಯದೊಳಗೆ ತೊಗರಿ ಬೆಳೆಗೆ ಸಂಬಂಧಿಸಿದಂತೆ ಯಾವುದೇ ಕಟ್ಟುಪಾಡು ತಂದರೂ ಬೆಳೆದ ಫಸಲು ಗಡಿದಾಟಿ ನೆರೆರಾಜ್ಯ ಸೇರಿ ಮುಕ್ತ ವಹಿವಾಟನ್ನು ಕಂಡುಕೊಳ್ಳುತ್ತದೆ. ಇನ್ನು ವ್ಯವಹಾರದ ಶಿಸ್ತು ಎಲ್ಲಿಂದ ಬಂದು.

ತೊಗರಿ ಮತ್ತು ಹೆಸರು ಕಾಳುಗಳ ವ್ಯಾಪಾರ ಮತ್ತು ಬೆಳೆ ಮಿಲ್‌ಗಳ ವ್ಯಾಪಾರ ರಾಜ್ಯದೊಳಗೆ ಸಾಕಷ್ಟಿದ್ದರೂ ನೆರೆಯ ಮಹಾರಾಷ್ಟ್ರದ ವ್ಯಾಪಾರಗಾರರು ಮತ್ತು ಮಿಲ್‌ಗಳವರು ಮೇಲುಗೈ ಸಾಧಿಸಬಲ್ಲರು. ಅವರ ವ್ಯವಹಾರ ಪ್ರಮಾಣ ಅಷ್ಟೊಂದು ದೊಡ್ಡ ಪ್ರಮಾಣದ್ದಿರುತ್ತದೆ.

ಬೇಳೆಕಾಳುಗಳನ್ನು ರಫ್ತು ಮಾಡುವ ಸಾಧ್ಯತೆಗಳಂತೂ ಇಲ್ಲವೇ ಇಲ್ಲ. ಏಕೆಂದರೆ ದೇಶಿಯವಾಗಿ ಭಾರೀ ಬೇಡಿಕೆ ಇರುವ ಉತ್ಪನ್ನವಿದು. ಆದ್ದರಿಂದ ವ್ಯಾಪಾರಗಾರರ ಮತ್ತು ಸಂಸ್ಕರಣಗಾರರ ಹಿಡಿತ ಜೋರಾಗಿರುತ್ತದೆ.

ಆದ್ದರಿಂದ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಒಂದು ತೊಗಡಿ ಮಂಡಲಿ ಸ್ಥಾಪಿಸುವ ಬಗೆಗೆ ಮತ್ತೆ ಮತ್ತೆ ಯೋಚಿಸುವುದು ಯುಕ್ತ. ಬೆಳೆಗಾರರಿಗೆ ಈಗ ಇರುವ ಅಷ್ಟೋ ಇಷ್ಟೋ ನೆಮ್ಮದಿ ಕೂಡಾ ತಪ್ಪಿ ಹೋಗಬಾರದು.

೩೦.೦೧.೨೦೦೨